ಪಾಟಿ ಚೀಲ | ಜೀವಪ್ರೀತಿಯ ಕೊಡೆಯೊಂದು ಸದಾ ನೆರಳಾಗಲಿ

Sayida

ಜನಸಾಮಾನ್ಯರ ಕಷ್ಟಕ್ಕೆ ಮಿಡಿಯುವವರಿಗೆ, ಇತರರ ಸ್ಥಾನದಲ್ಲಿ ತಮ್ಮನ್ನಿಟ್ಟು ಆಲೋಚಿಸುವ ಹೃದಯವಂತಿಕೆ ಇರುತ್ತದೆ. ಇದಕ್ಕೂ ವಯಸ್ಸಿಗೂ ಯಾವುದೇ ಸಂಬಂಧ ಇಲ್ಲ. ಈ ಮಾತು ಚಂದ ಅರ್ಥವಾಗಬೇಕೆಂದರೆ, ಈ ಮೂವರು ಪ್ರಚಂಡ ಹೃದಯವಂತರ ನೈಜ ಕತೆಯನ್ನು ನೀವು ಓದಲೇಬೇಕು. ಇವರಲ್ಲಿ ಇಬ್ಬರು ವಿದ್ಯಾರ್ಥಿಗಳು ಎಂಬುದು ಗಮನಾರ್ಹ

ಮೂರು ವರ್ಷಗಳ ಹಿಂದೆ, ಶಿಕ್ಷಣ ಇಲಾಖೆಯು ಭಾರತ ಜ್ಞಾನ ವಿಜ್ಞಾನ ಸಮಿತಿಯ ಜೊತೆಗೂಡಿ ನಡೆಸಿದ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ ನಡೆಯಿತು. ಅದಕ್ಕಾಗಿ ಶ್ರೀರಂಗಪಟ್ಟಣಕ್ಕೆ ಹೋದಾಗ ಸಯೀದಾ ಇಕ್ರಾ ಎಂಬ ಹುಡುಗಿಯನ್ನು ಭೇಟಿಯಾಗಿದ್ದೆ. ಆಗ ಆಕೆ ಇನ್ನೂ ಪಿಯುಸಿ ಓದುತ್ತಿದ್ದರು. ಹಿಂದಿನ ವರ್ಷ ಆಕೆ ಹತ್ತನೇ ತರಗತಿಯಲ್ಲಿರುವಾಗ ವಿನ್ಯಾಸಗೊಳಿಸಿದ 'ಆಲ್ ಇನ್ ಒನ್ ಕೊಡೆ'ಗೆ ಇನ್‌ಸ್ಪೈರ್ ರಾಷ್ಟ್ರೀಯ ಪ್ರಶಸ್ತಿ ಬಂದಿತ್ತು. ರಾಷ್ಟ್ರಪತಿಗಳ ವಿಶೇಷ ಪ್ರಶಸ್ತಿಯೂ ಆಕೆಗೆ ಒಲಿದಿತ್ತು. ಆಕೆಯ ಸಂಶೋಧನೆಯು ಮಿದುಳಿನಿಂದ ಕಾರ್ಯಗತವಾದದ್ದಕ್ಕಿಂತ ಹೆಚ್ಚಾಗಿ ಹೃದಯದಿಂದ ಪರಿಕಲ್ಪಿತವಾಗಿತ್ತು.

ತರಕಾರಿ ಕೊಳ್ಳಲು ಮಾರುಕಟ್ಟೆಗೆ ಹೋದಾಗ ರಸ್ತೆಯ ಎರಡೂ ಬದಿಯಲ್ಲಿ ವ್ಯಾಪಾರಕ್ಕೆ ಕುಳಿತಿರುತ್ತಿದ್ದ ಮಹಿಳೆಯರನ್ನು ಕಂಡು ಸಯೀದಾ ದುಃಖಿತರಾಗುತ್ತಿದ್ದರು. ಬಿಸಿಲು, ಮಳೆಯೆನ್ನದೆ ಹೊಟ್ಟೆಪಾಡಿಗಾಗಿ ರಸ್ತೆಯ ಬದಿಯಲ್ಲಿ ಹಾಗೆ ಕುಳಿತುಕೊಳ್ಳಬೇಕಾದದ್ದು ಬೀದಿ ವ್ಯಾಪಾರಿಗಳಿಗೆ ಅನಿವಾರ್ಯ. ಈ ಮಹಿಳೆಯರಿಗೆ ತಾನು ಹೇಗೆ ಸಹಾಯ ಮಾಡಬಹುದು ಎಂದು ಸಯೀದಾ ಸದಾ ಯೋಚಿಸತೊಡಗಿದರು. ಈ ಯೋಚನೆಯಿಂದಲೇ ಆಕೆಯ ಬಹುಪಯೋಗಿ ಕೊಡೆ ರೂಪುಗೊಂಡಿತು.

Image
Sayida 2
ಕೊಡೆಯ ಪ್ರಾತ್ಯಕ್ಷಿಕೆ ನೀಡುತ್ತಿರುವ ಸಯೀದಾ

ಎಲ್ಲರೂ ಮಳೆ, ಬಿಸಿಲಿಗೆ ಬಳಸುವ ಕೊಡೆಯನ್ನೇ ಸಯೀದಾ ಆಧುನಿಕ ತಂತ್ರಜ್ಞಾನ ಬಳಸಿ ನವೀಕರಿಸಿದರು. ಸೋಲಾರ್ ಪ್ಯಾನೆಲ್ ಸಿಕ್ಕಿಸಿ, ಅದೇ ಶಕ್ತಿಯಿಂದ ಕೊಡೆಗೆ ಒಳಗೊಂದು ಫ್ಯಾನ್ ತಿರುಗುವಂತೆ ಮಾಡಿದರು. ಸಂಜೆಯಾಗುತ್ತಲೇ ಎಲ್‌ಇಡಿ ದೀಪ ಉರಿಯಿವಂತೆ ಸಜ್ಜುಗೊಳಿಸಿದರು. ಮೊಬೈಲ್ ಚಾರ್ಜರ್ ಜೋಡಿಸಿದರು. ವ್ಯಾಪಾರ ಮಾಡುತ್ತಿರುವವರಿಗೆ ಪದೇಪದೆ ಮೊಬೈಲ್ ಫೋನನ್ನು ಕೈಯಲ್ಲಿ ಹಿಡಿಯುವುದು ಕಷ್ಟ. ಅದಕ್ಕಾಗಿ ಸಯಿದಾ ಬ್ಲೂಟೂತ್ ತಂತ್ರಜ್ಞಾನ ಬಳಸಿ ಕೈಗಳಲ್ಲಿ ಮೊಬೈಲ್ ಎತ್ತಿಕೊಳ್ಳದೆ ಕರೆಗಳನ್ನು ಸ್ವೀಕರಿಸಲು ಸಾಧ್ಯವಾಗುವಂತೆ ಕೊಡೆಯನ್ನು ಬಳಕೆದಾರ ಸ್ನೇಹಿಯಾಗಿಸಿದರು. ಹೀಗೆ, ಮಾಮೂಲಿ ಕೊಡೆಯು ಅತ್ಯಾಧುನಿಕ ಅಂಗಡಿಯಾಗಿ ರೂಪುಗೊಂಡಿತು.

ಈ ಕೊಡೆಯನ್ನು ಯಾವುದಾದರೂ ನವೋದ್ಯಮಿಗಳು ತಯಾರಿಸಲಿ ಮತ್ತು ಸರ್ಕಾರಗಳು, ಸಂಘ-ಸಂಸ್ಥೆಗಳು ಖರೀದಿಸಿ ರಸ್ತೆ ಬದಿಯ ವ್ಯಾಪಾರಿಗಳಿಗೆ ಒದಗಿಸುವಂತಾಗಲಿ ಎಂಬ ಆಶಯ ಸಯೀದಾ ಅವರದಾಗಿತ್ತು. ಆ ಆಶಯಕ್ಕಾಗಿಯೇ ಆಕೆಗೆ ಇನ್‌ಸ್ಪೈರ್ ಪ್ರಶಸ್ತಿ ಬಂದಿತು. ಈ ಮೂರು ವರ್ಷಗಳಲ್ಲಿ ಅವರ ಆಶಯ ಕೈಗೂಡಲಿಲ್ಲ ಎನ್ನುವುದು ಬೇರೆ ವಿಷಯ. ಆದರೆ, ಹೃದಯದಿಂದ ಯೋಚಿಸಿದ ಸಯೀದಾ, ವಿಜ್ಞಾನವನ್ನು ಮಾನವೀಯಗೊಳಿಸಿದರು.

Image
Sharadhi
ಇನ್‌ಸ್ಪೈರ್ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸುತ್ತಿರುವ ಶರಧಿ

ಶರಧಿ ಎಂಬ ಕುಂದಾಪುರದ ಹುಡುಗಿ ಕೂಡ ಸಯೀದಾರಂತೆ ಇನ್‌ಸ್ಪೈರ್ ರಾಷ್ಟ್ರೀಯ ಪ್ರಶಸ್ತಿ ಪಡೆದವರು. ಹಾಸ್ಟೆಲ್ ವಿದ್ಯಾರ್ಥಿಗಳು ಮಳೆಗಾಲದಲ್ಲಿ ಬಟ್ಟೆ ಒಣಗಿಸಲು ಪಡುತ್ತಿದ್ದ ಪಾಡು ಶರಧಿಯ ಸಂಶೋಧನೆಗೆ ಪ್ರೇರಣೆಯಾಯಿತು. ಬಟ್ಟೆಯನ್ನು ಹಾಸ್ಟೆಲ್‌ನಲ್ಲಿ ಒಣಗಿಸಲು ಬಿಟ್ಟು ಶಾಲೆಗೆ ಹೋದರೆ, ಹಿಂತಿರುಗಿ ಬರುವಷ್ಟರಲ್ಲಿ ಮಳೆಗೆ ಸಿಕ್ಕಿ ತೊಯ್ದಿರುತಿತ್ತು. ಬಿಸಿಲು ಬಂದಾಗ ಬಟ್ಟೆ ಹೊರಬರುವ ಮತ್ತು ಮಳೆಯ ಸೂಚನೆ ಬರುತ್ತಲೇ ಮಾಡಿನಡಿ ಸೇರಿಕೊಳ್ಳುವಂತಹ ವ್ಯವಸ್ಥೆ ಇದ್ದರೆ ಎಷ್ಟು ಚೆನ್ನಾಗಿತ್ತು ಎಂದೆನಿಸಿತು ಶರಧಿಗೆ. ವಿಜ್ಞಾನ ಶಿಕ್ಷಕರ ಸಹಾಯ ಪಡೆದು ಅಂಥದ್ದೊಂದು ಸೌಕರ್ಯವನ್ನು ಆಕೆ ತಯಾರಿಸಿದರು. ಬೆಳಕಿನ ತೀವ್ರತೆಗೆ ಸೂಕ್ಷ್ಮಗ್ರಾಹಿಯಾದ ಮೋಟಾರ್ ಜೋಡಿಸಿದ ಬಟ್ಟೆ ಒಣಗಿಸುವ ತಂತಿಯು ಬಿಸಿಲು ಬಂದಾಗ ಬಟ್ಟೆಯನ್ನು ಹೊರಗೊಯ್ದರೆ, ಮೋಡ ಕವಿದಾಗ ಒಳಸೇರಿಸುತಿತ್ತು. ಈ ಉಪಕರಣ ಬಳಕೆಗೆ ದೊರೆಯದೆ ಹೋದರೂ, ಇಂತಹ ಐಡಿಯಾ ಶರಧಿಗೆ ಬಂದಿರುವುದಕ್ಕಾಗೇ ಆಕೆಯ ಹಾಸ್ಟೆಲ್ ಗೆಳತಿಯರ ಕಣ್ಣಾಲಿ ತುಂಬಿಕೊಂಡಿತ್ತು.

ಈ ಲೇಖನ ಓದಿದ್ದೀರಾ?: ಪಾಟಿ ಚೀಲ | ಕಲಿಯುವುದೆಂದರೆ ಪ್ರಶ್ನೆಗಳ ಬೆನ್ನ ಮೇಲಿನ ಸವಾರಿ

ಎಳವೆಯಲ್ಲೇ ಒದಗಿಬಂದ ಈ ಅಂತಃಕರಣವನ್ನು ದೊಡ್ಡವರಾಗುವವರೆಗೂ ಕಾಪಿಟ್ಟುಕೊಂಡರೆ ಜಗತ್ತು ಇನ್ನಷ್ಟು ಸುಂದರವಾಗಬಲ್ಲದು ಎಂಬುದಕ್ಕೆ ಶರದ್ ಅಶಾನಿ ಎಂಬ ಎಲೆಕ್ಟ್ರಿಕಲ್ ಎಂಜಿನಿಯರ್ ಕೂಡ ನಿದರ್ಶನ. ಶರದರಿಗೆ ಕೂಡ ಜಗತ್ತಿನ ನೋವು, ಸಂಕಟ, ಹಸಿವುಗಳು ಸಯೀದಾ ಅಥವಾ ಶರಧಿಯಂತೆ ತೀವ್ರವಾಗಿ ಕಾಡುತಿದ್ದವು. 2004ರಲ್ಲಿ ಮುಂಬೈನ ರೂಪದರ್ಶಿ ನಫೀಸಾ ಜೋಸೆಫ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸುದ್ದಿಯನ್ನು ಸುದ್ದಿವಾಹಿನಿಯೊಂದರಲ್ಲಿ ನೋಡಿದ ಶರದ್, ದುಃಖದಲ್ಲಿ ತಲೆ ಎತ್ತಿ ಫ್ಯಾನಿನ ಕಡೆಯೇ ನೋಡಿದರು. ಆಕೆ ನೇಣಿಗೆ ಕೊರಳೊಡ್ಡಿ ತನ್ನ ಭಾರವನ್ನು ಫ್ಯಾನಿಗೆ ವರ್ಗಾಯಿಸಿದಾಗ ಸೀಲಿಂಗಿಗೆ ಜೋಡಿಸಿದ ಫ್ಯಾನ್ ರಾಡ್ ತುಂಡಾಗಬಾರದಿತ್ತೇ ಎನಿಸಿತು ಅವರಿಗೆ. ಹೀಗೆ ಅನ್ನಿಸಿದ್ದೇ ತಡ, ಆತ್ಮಹತ್ಯೆಯನ್ನು ತಪ್ಪಿಸಬಹುದಾದಂತಹ ಫ್ಯಾನ್ ರಾಡನ್ನು ಏಕೆ ತಯಾರಿಸಬಾರದು ಎಂದು ಕಾರ್ಯಪ್ರವೃತ್ತರಾದರು.

Image
sharad ashani 2
ಪ್ರಾತ್ಯಕ್ಷಿಕೆ ತೋರಿಸುತ್ತಿರುವ ಶರದ್ ಅಶಾನಿ

ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ವರದಿಯ ಪ್ರಕಾರ, ಆ ಹಿಂದಿನ ವರ್ಷ ಒಂದು ಲಕ್ಷದ ಹದಿಮೂರು ಸಾವಿರ ಆತ್ಮಹತ್ಯೆಗಳು ವರದಿಯಾಗಿದ್ದವು. ಅವುಗಳಲ್ಲಿ ಮೂವತ್ತು ಸಾವಿರಕ್ಕೂ ಹೆಚ್ಚು ಆತ್ಮಹತ್ಯೆಗಳು ನೇಣು ಹಾಕಿಕೊಂಡು ನಡೆದಿರುವುದಾಗಿತ್ತು. ಈ ಸಂಖ್ಯೆ ಮತ್ತು ಪ್ರಮಾಣ ಪ್ರತೀ ವರ್ಷವೂ ಹೆಚ್ಚುತ್ತಲೇ ಇದೆ. ಈಗೆರಡು ವರ್ಷಗಳಿಂದ ಅರ್ಧಕ್ಕಿಂತ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ನೇಣಿಗೆ ಸಂಬಂಧಿಸಿದವು. ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚುತ್ತಿದೆ. ಕೋವಿಡ್ ಪೂರ್ವದ ಐದು ವರ್ಷಗಳಲ್ಲಿ ಐವತ್ತು ಸಾವಿರ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಶರದ್ ಈ ಆತ್ಮಹತ್ಯೆಗಳನ್ನು ತಡೆಯಲು ಮುಂದಾದರು. ಸಾಮಾನ್ಯವಾಗಿ ಫ್ಯಾನು ನೆಲದಿಂದ ಎಂಟು ಅಡಿ ಎತ್ತರದಲ್ಲಿರುತ್ತದೆ. ಹತ್ತು ಅಡಿಯ ಮೇಲ್ಚಾವಣಿಗೆ ರಾಡ್ ಮೂಲಕ ಜೋಡಿಸಿಕೊಂಡಿರುತ್ತದೆ. ಒಂದು ನಿರ್ದಿಷ್ಟ ತೂಕಕ್ಕಿಂತ ಹೆಚ್ಚಿನ ಭಾರವನ್ನು ಅನುಭವಿಸಿದಾಗ ವಿಸ್ತರಿಸಿಕೊಂಡು ಉದ್ದವಾಗುವ ಫ್ಯಾನ್ ರಾಡನ್ನು ಶರದ್ ರೂಪಿಸುವ ಮೊದಲು ಸಾಕಷ್ಟು ಅಧ್ಯಯನಗಳನ್ನು ನಡೆಸಿದ್ದರು. ಅವರು ವಿನ್ಯಾಸಗೊಳಿಸಿದ ಫ್ಯಾನ್ ರಾಡ್‌ಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿವೆ. ಅವರೀಗ ಜೀವ ಉಳಿಸಬಲ್ಲ ವಸ್ತುಗಳನ್ನು ತಯಾರಿಸುವ 'ಗೋಲ್ಡ್ ಲೈಫ್' ಎಂಬ ಉದ್ಯಮವನ್ನೇ ಆರಂಭಿಸಿದ್ದಾರೆ.

ಹಿಡಿ ಪ್ರೀತಿ ಇದ್ದರೆ ಇಡೀ ಭೂಮಿಯನ್ನೇ ಬೆಳದಿಂಗಳಾಗಿಸಬಹುದು.

ಮುಖ್ಯ ಚಿತ್ರ: ಸಯೀದಾ ಇಕ್ರಾ
ನಿಮಗೆ ಏನು ಅನ್ನಿಸ್ತು?
3 ವೋಟ್