ಕಾಲದಾರಿ | ನ್ಯಾಯ ಕೊಡುವವರು ಇದನ್ನೆಲ್ಲ ಸರಿ ಮಾಡಬೇಕಲ್ಲವೇ?

indian women 3

ದೇವಮ್ಮ ಎಂಬ ಹೆಂಗಸು ಘಟವಾಣಿ ಎಂಬುದರಲ್ಲಿ ಎರಡು ಮಾತಿಲ್ಲ. ಬಂದ ನಾಲ್ಕೇ ದಿನಕ್ಕೆ, “ನೀವು ತಾಯ್ಮಗಳು ಹಿಂಗೆ ಕರಕರ ಮಾಡ್ಕಂತಿದ್ರೆ ನಾ ಹೇಳಲಾರದಾಂಗೆ ಬಸ್ ಹತ್ತತೀ..." ಅಂತ ಜಬರಿಸಿದರೆ, ನಾವು ಮುಖ-ಮುಖ ನೋಡಿಕೊಂಡು ಬಾಯ್ಮುಚ್ಚಿಕೊಂಡೆವು. ನಮ್ಮಿಬ್ಬರದೀಗೀಗ ರಾಜಕೀಯ ಸಲ್ಲಾಪ; ದಿನಕ್ಕೊಂದರಂತೆ ಬಿಡುಗಡೆ ಆಗುತ್ತಿರುವ ದ್ವೇಷದ ಪ್ಯಾಕೇಜೇ ವಿಷಯ

ಇವಳು ಬಂದಲಾಗಾಯ್ತು, ಜನ್ಮಾಂತರದ ಋಣವೊಂದರ ಉಳಿಕೆಯನ್ನು ಸಲ್ಲಿಸಿಕೊಳ್ಳುವವರ ಹಾಗೆ ಪರಸ್ಪರ ಆತುಕೊಂಡೆವು. ಎಳೆಯ ಜೀವದ ಕಳಲು ಅವಳ ಒರಟು ಹಸ್ತಗಳಲ್ಲಿ ಅರಳುವುದೇ ಒಂದು ಸೋಜಿಗ ಎಂಬಂತೆ, ಅವಳ ಕಂಠದಿಂದ ಸುರುಳಿ ಸುರುಳಿಯಾಗಿ ಸಸಿನಟ್ಟಿಯ ಹಾಡು ತೂಗುವುದೇ ಹಿತ ಎಂಬಂತೆ, ನನ್ನ ಅನುತನುವಿನ ಪಾಲುಗಾರ್ತಿಯೊಬ್ಬಳು ಒದಗಿದಳು ಎಂಬಂತೆ ಆಳದ ಭದ್ರತೆಯ ಭಾವ. ಸಂಬಂಧಗಳಿಗೆ ಕಾಲಮಿತಿ ಇದ್ದಷ್ಟೂ ಹೆಚ್ಚು ಮುತುವರ್ಜಿಯಿಂದ ಜೋಪಾಸನೆ ಮಾಡುತ್ತೇವೆಯೇ? ಗೊತ್ತಿಲ್ಲ. ಆದರೆ, ಬಾಳಿನ ಸೊಬಗು ಇಂತಹ ಸಂಬಂಧಗಳಲ್ಲೇ ಚಿಗಿಯುತ್ತದೆ. ಈ ಇಂಥ ದೇವಮ್ಮ ಎಂಬ ಹೆಂಗಸು ಘಟವಾಣಿ ಎಂಬುದರಲ್ಲಿ ಎರಡು ಮಾತಿಲ್ಲ.

“ನನ್ನ ಗಂಡ ಅಂಬೋನು ಕುಡ್ದು ಕುಡ್ದು ಸತ್ತಪಟಿಗೆ (ಆಗ ನನ್ನ ಮೊಗ ಐದೊರ್ಸದೋನು) ಬೆಟ್ಟ ಬ್ಯಾಣ ನೋಡ್ದಂತೆ, ಕಟ್ಟಗಿ ಕಬ್ಬಣ ನೋಡ್ದಂತೆ ದುಡ್ದು ಹೆಣ್ಮಗಿನ ಮೊದಿ ಮಾಡಿ, ಬಾಣೆಂತನ ಮಾಡಿ ಪಾಲಟಿನ ಮನಿ ಕಟ್ಕಂಡು... ಹಾಳಾದ್ ಕರೋನಾ ಕಾಲ್ದಾಗೆ ಸೇಂಗಾ ಮಾಯನಹಣ್ಣು ಯಾಪಾರ ಎಂಬದು ನಿಂತಹೋಗಿ, ಸಾಲದ ಬಡ್ಡಿ ಬೆಳ್ದು ಈಗೆ ಸಾಲ ತೀರ್ಸುಕಂತಾ ಕಣ್‌ಕಾಣದ ಊರಿಗ್ ಬಂದಿ,” ಎಂದು ಪರಿಚಯ ಪತ್ರ ಕೊಟ್ಟಿದ್ದಳು; ನಯ-ನಾಜೂಕು, ಮುಚ್ಚು-ಮರೆಗಳ ಗರಜಿಲ್ಲದ ಹಳ್ಳಿಯೂರಿನ ಛಾತಿಯಲ್ಲಿ. ಬಂದ ನಾಲ್ಕೇ ದಿನಕ್ಕೆ, “ನೀವು ತಾಯ್ಮಗಳು ಹಿಂಗೆ ಕರಕರ ಮಾಡ್ಕಂತಿದ್ರೆ ನಾ ಸುಮ್ಮಗುಳಕಂತಿ. ಹೇಳಲಾರದಾಂಗೆ ಬಸ್ ಹತ್ತತೀ. ಇದ್ಕೇನ್ ಗುತ್ತೀತು ಮೂದೇವಿಗೆ ಅನ್ಬೇಡಿ. ಈ ಉಂದ ಆಯುಸ್‌ದಾಗೆ ಏನ್ಕಂಡಿ ಏನ್‌ಬಿಟ್ಟಿ ಹಾಂ...” ಅಂತ ಜಬರಿಸಿದರೆ, ನಾವು ತಾಯ್ಮಗಳು ಮುಖ-ಮುಖ ನೋಡಿಕೊಂಡು ಬಾಯ್ಮುಚ್ಚಿಕೊಂಡಿದ್ದೆವು.

Image
Rural Indian Women 2
ಚಿತ್ರ ಕೃಪೆ: ಬಿ ನಾಗೇಶ್ ಗೌಡ್

ಇಂತಹ ದೇವಮ್ಮ ಒಂದಿನ, “ಇಕಾ ಇಲ್ರಾ, ನನ್ನ ಮಗಗೆ ಯಾವ ಉಸಾಬರಿಗೂ ಹೋಗ್ಬೇಡ ಅಂತ ಉಂದ್ ಫೋನ್ ಮಾಡಕೊಡಿ,” ಅಂತ ಮಗನ ನಂಬರ್ ಕೊಟ್ಟಳು. ಅವಳ ಮಗ (ಮೂರು ವರ್ಷ ಅಮ್ಮಿ ಕುಡಿದವನು) ಈಗ ನರ್ಸಿಂಗ್ ಟ್ರೇನಿಂಗ್‌ನಲ್ಲಿದ್ದಾನೆ. ಈ ದೇವಮ್ಮ ಟಿ.ವಿ.ಯಲ್ಲಿ ಹಿಜಾಬ್ ಕುರಿತ ಗದ್ದಲ ನೋಡಿದ್ದಾಳೆ. 90ರ ಆಸುಪಾಸಿನ ನನ್ನ ಅಪ್ಪನಿಗೆ ಲೋಕಚರಿತವನ್ನೆಲ್ಲ ತನ್ನ ಮುಂದೆ ತಂದಿಳುಹಲಿಕ್ಕೇ ಟಿ.ವಿ ಎಂಬ ಮಾಯೆಯಿದೆ ಎಂಬ ಮಮಕಾರ. ನಿದ್ದೆ-ಎಚ್ಚರಗಳಲ್ಲೂ ಅದು ಬೇಕು. ಈ ದೇವಮ್ಮ ಅತ್ತ ಹಣಕಿಕ್ಕಿ ಅಪ್ಪನಿಗೆ ಸಾಥ್ ಕೊಡುತ್ತಾಳೆ. ಅಪ್ಪ ಆ್ಯಂಕರ್‌ನ ನುಡಿಗಳನ್ನೇ ಹೃಸ್ವ-ದೀರ್ಘವೂ ಬದಲದೆ ಇವಳ ಮುಂದಿಳುಹುತ್ತಾನೆ. ಈ ಜುಗಲ್‌ಬಂದಿ ಘನಘೋರವಾಗಿ ನಡೆದರೂ, ಹುಡುಗಿಯರ ತಲೆಮೇಲಿನ ತುಂಡುಬಟ್ಟೆ ಇಷ್ಟೆಲ್ಲ ರಂಪಾಟಕ್ಕೆ ಕಾರಣವಾಗಿದ್ದುದರ ಮರ್ಮವೇ ಇವಳಿಗೆ ತಿಳಿಯಲಿಲ್ಲ. "ಅಲ್ರಾ... ತಲಿಮ್ಯಾಲ್ ಸೆರಗು ಎಟ್ಟೆಲ್ಲ ಜಾತ್ಯಸ್ತ್ರು ಹಾಕ್ತ್ರು," ಅಂತ ಗೊಣಗಿಕೊಂಡಿದ್ದಾಳೆ. ತನ್ನ ಮಗನದ್ದೇ ವಯಸ್ಸಿನ ಹುಡುಗರು ಕೈಲಿ ಕಲ್ಲು ಹಿಡ್ದು ತಮತಮದೇ ಕಾಲೇಜುಗಳತ್ತ ತೂರಿದ್ದು ಇವಳಿಗೆ ಹೊಟ್ಟೆ ರುಂ ಅನ್ನಿಸಿದೆ. ತಾನು ನೆತ್ತರು ತೇದು ಬೆಳೆಸಿದ ಮಗನೂ ಇಂತಹ ಉಪದ್ವ್ಯಾಪಿತನಕ್ಕೆ ಬಿದ್ದರೆ ಎಂದು ದೇವಮ್ಮ ಗಂಟಲ ಸೆರೆಯುಬ್ಬಿ ಕಣ್ಣೀರ ಹತ್ತಿಕ್ಕಿ ಮಗನೊಂದಿಗೆ ಮಾತನಾಡುತ್ತಿದ್ದರೆ, ಆ ಹೊಳೆವ ಕಣ್ಣಾಲಿಗಳಲ್ಲಿ ಜಗದ ತಾಯಂದಿರ ಜೋತಮುಖ ಪ್ರತಿಫಲಿಸುತ್ತಿತ್ತು. "ಅಲ್ರಾ... ಈ ಗೋಲೆಗೆ ಹೇಳೂರು ಕೇಳೂರು ಯಾರೂ ಇಲ್ಲೆನ್ರಾ? ನೀಮೆಲ್ಲ ಸಾಲೀಲಿ ಎಂಥದ ಕಲಸ್ತಿರ‍್ರಾ?” ಅಂತ ತರಾಟೆಗೆ ತಗೊಂಡಳು. ನಾನು ಮಾತು ಸತ್ತವಳ ಹಾಗೆ ಥಂಡು ಹೊಡೆದಿದ್ದೆ. ಮರುಚಣವೇ, "ಆ ವಸ್ತ್ರ ಬಿಸಾಕಂಡ ಹೊಗಿಕೊಂಡರೂ ಕಲೂಕ್ ಏನ್ ಕಡ್ರಾ?" ಎಂದಳು. "ದ್ರಾವ್ರು ಹಿಂಗಿಂಗೆ ಹಾಕಣಿ ಇಲ್ಲಂದ್ರೆ ತಾ ನಿಗ್ದಬೀಳ್ತೀ ಅಂದಿನೇ," ಎಂದಳು. ಅವಳ ದನಿಯಲ್ಲಿದ್ದ ಹತಾಶೆ ಕೈ-ಮೈಗೆ ತಾಕುವಂತಿತ್ತು.

ಇದನ್ನು ಓದಿದ್ದೀರಾ?: ಜಾತ್ರೆ, ಉತ್ಸವ, ಸಂತೆಗಳೆಲ್ಲ ನಮಗಾಗಿ ಆ ದೇವರೇ ಸೃಷ್ಟಿಸಿದ ಬೆಳಕಿಂಡಿಗಳು

ನಮ್ಮಿಬ್ಬರದೀಗೀಗ ರಾಜಕೀಯ ಸಲ್ಲಾಪ. ದಿನಕ್ಕೊಂದು ವೆರೈಟಿಯ ದ್ವೇಷದ ಪ್ಯಾಕೇಜ್ ಬಿಡುಗಡೆಯಾಗುತ್ತಿರುವುದೂ ಕಾರಣ. ‘ಹಲಾಲ್ ಕಟ್’ ಬಗ್ಗೆ ಹೇಳಿದರೆ, “ಸಿಸೀ... ಇವಕ್ಕೇನ್ ಗೇಯೂಕ್ ಗದ್ದಿಲ್ಲ. ಮಾಡೂಕ್ ಕೇಮಿಲ್ಲ. ತಿಂಬೋರು ತಿಂತೀರು ಬಿಡೋರು ಬಿಡ್ತೀರು ಇದೆಂಥದ್ರಾ? ಅಲ್ಲೇ ಹೋಗ್ ತಕಣಿ ಇಲ್ಲೇ ಹೋಗ್ ತಕಣಿ... ಥೋ... ನನ್ ಬಾಯ್ಲೆ ಏನ್ ಬತ್ತೀದ ಏನ್ ಬರೂಕಲಾ. ಅಲ್ಲಾ, ಮಸಾಲಿ ಏನ್ ಹಾಕ್ಬೇಕ... ಸೈಬರ ರಂಪಣಿ ಮೀನ್ ತಿಂಬೂಕಲಾ ಅಂದ್ರೂ ಅಂದ್ರೇ. ಅಯ್ಯ... ತಿಂಬೋರು ನಾಮು ತಿಂತ್ಯಾ ಏನೀಗ?” ಅಂತ ಧ್ವನಿಯೇರಿಸಿದ ಹೊಡೆತಕ್ಕೆ ಸುತ್ತಲ ಮನೆಗಳಿಗೆಲ್ಲ ನನ್ನ ಗರಮ್ ಮಸಾಲೆಯ ಘಮಲಿಗೆ ಮುಂಚೇ, ತಿಂಬೋರು ತಿಂತೀವಿ ಅನ್ನೋ ಘಮಲು ಮುಟ್ಟಿದಂತಿತ್ತು. ಇಷ್ಟೊರ್ಷ ಇಲ್ಲದ್ದೆಲ್ಲ ಈಗ ಸರಪಳಿ ಕೊಂಡಿಯ ಹಾಗೆ ಜಗ್ಗಿ ಜಗ್ಗಿ ಕೂಡುಬಾಳನ್ನು ಗೀರಿ ಬಿಸಾಕುತ್ತಿರುವುದು ಬರಲಿರುವ ಚುನಾವಣೆಯ ಸಿದ್ಧತೆ ಅಂತ ದೇವಮ್ಮಗೆ ಯಾರೂ ಕಲಿಸಬೇಕಿರಲಿಲ್ಲ. ತಲೆಯಲ್ಲಿ ಹುಳ ಹೊಕ್ಕವಳಂತೆ, ಒದ್ದೆ ಕೈ ಒರೆಸಿಕೊಳ್ಳುತ್ತ “ಅಲ್ರಾ ಉಂದ್ ಕೆಲ್ಸಾ ಹೇಳ್ಬೇಕ್ರಾ. ನಿಮ್ಮ ಇಲೆಕ್ಸನ್ನೂ ಬ್ಯಾಡ ಪಿಲೆಕ್ಸನ್ನೂ ಬ್ಯಾಡ. ನಮಗೆ ಎಂಥಾ ಸುಧಾರಣಿನೂ ಬ್ಯಾಡ. ನಾಮ್ ಬಡಾ ಜನಾ. ನಮ್ ಕೈಲೆ ದುಡ್ದ ನಮ್ ಬಾಯ್ಲೆ ಉಂಡ್ ಸಾಯೂಕಾರೂ ಬಿಡಿ. ಹೌದ್ರಾ”

“ಉಂದ್ ಹೇಳ್ತಿ. ಹೌದಾರೆ ಹೌದನ್ನಿ. ಈಗೊಂದ್ ಮೂರೊರ್ಸದಾಚೀಕೆ ನಾಮು ಉಂದ್ ಯಕ್ಸಗಾನ ನೋಡೂಕಂತೆ ಹೋಗಾಯ್ತು. ಅಯ್ಯ ದ್ಯಾವ್ರೆ... ನಮ್ ಯಕ್ಸಗಾನ ಮುದಲಿನ ಹಾಗಿಲ್ರಾ. ಅಲ್ಲೊಂದ್ ಮುಸಲರ ಪಾರ್ಟು. ಆ ಪಾರ್ಟ ಎಂತಕ ಅಂತೀರಿ. ಅರ‍್ನ ಪಾರ್ಸ ಮಾಡೂಕೆ. ಥೊ... ಬೇಜಾರ ಹತ್ತಿ... ನನಗೆ ಚಂಡೆ-ಮದ್ದಳೆಯ ಸದ್ದಿಗೇ ಮನಸ್ಸು ಜುಂ ಎನ್ನುತ್ತಿದ್ದ ಆ ಎಳೆತದ ದಿನಗಳು ನೆನಪಾಗುತ್ತಿದ್ದವು. "ನಾ ಎಂತೆಂಥ ಪಾರ್ಟ ಮಾಡಿ ಗುತ್ತಿದೇ?" ಎಂದು ಒತ್ತುತ್ತಿದ್ದ ನಾಲಿಗೆಯ ತುದಿ ಮಾತನ್ನು ನುಂಗಿದೆ. ತವರುಮನೆ ಕೋಳುಗಂಭ ಕುಸಿದ ಸುದ್ದಿ ಕೇಳಿದಂಥ ಚಡಪಡಿಕೆ.

Image
Rural Indian Women 1

ನಾನು "ಛೆ..." ಅಂದಿದ್ದೇ, "ಮತ್ತೆಂತದ್ರಾ?" ಅಂದಳು ದೇವಮ್ಮ. "ಮಾರಾಯ್ತಿ... ಉಡುಪಿ ಬದೀಗೆ ಜಾತ್ರೀಲಿ ಮುಸ್ಲಿಮರಿಗೆ ಅಂಗಡಿ ಹಾಕೂಕ ಕೂಡುದಿಲ್ಲಾಗರ ಕಡಾ," ಅಂದಿದ್ದೇ ಮೆಟ್ಟಿಬಿದ್ದಳು. “ಎಂಥದ್ರಾ ಇದು? ಕಾಣಲರ‍್ದು ಕೇಳಲರ‍್ದು. ಅಲ್ರಾ... ಗುಡಿ ಕಟ್ಟೂ ಕೆಲ್ಸದಲೂ ಮುಸ್ಲಿಮರಿರುಕಲೇನ್ರಾ? ನಾ ಗಾರೆ ಕೆಲ್ಸಕೂ ಹ್ವಾದವಳೇ. ಊರ ಜಾತ್ರೀಲಿ ವಾಲಗಾ ಅರ‍್ದೇ. ಬೆಂಡ ಬತ್ತಾಸಿಂದ ಹಿಡ್ದ ಬಳಿ-ಸರದ ಅಂಗಡಿ ತನಾ ಅರ‍್ದೇ. ಇದ್ ಸರೀರದಿಂದ ನರ ಬ್ಯಾರೆ, ರಗ್ತ ಬ್ಯಾರೆ ಮಡೂ ಯಾಪಾರಾಯ್ತಲ್ರೇ ಸಿ ಸಿ...” ಆ ಹಿಜಾಬ್‌ಗೂ ಭಯೋತ್ಪಾದಕರಿಗೂ ಇರುವುದೆಂಬ ಸಂಬಂಧದ ಬಗ್ಗೆ ಟಿ.ವಿ ಒದರುತ್ತಿದ್ದರೆ, ಕೂಸಿಗೆ ಆನಿ ಆಡಿಸುತ್ತ ಕೂತವಳು, "ಇನ್ ಬಾಂಬ್ ಹಾಕೂದುಂದೇ ಉಳದೀತ್ರಾ. ಬಂದ್ ಮಾಡ್ ಹಾಕಿ ಅತ್ತಾಗೆ. ಎಲ್ಲಾ ಸುಟ್ಟ ಬೂದಿ ಆದ್ಮೇಲೆ ಹಾಕದೋರ ಯಾರ್ ಯಾರಿಗುತ್ತ...” ಅಂದಳು. ಈ ಇವಳಿಗೆ ದೇವನೂರರ 'ಗಂಡಭೇರುಂಡದ ಕಥೆ' ಕೇಳಿಸಬೇಕು ಅನ್ನಿಸಿತು. "ಅದೇನೋ ಮನಮನಿಗೆ ಪತ್ರ ಹಂಚ್ತರ ಕಡಾ. ಹಿಂದೂಗಳೆಲ್ಲಾ ಹಿಂದೂಗಳ ಅಂಗಡೀಲ್ ಮಾತ್ರ ಖರೀದಿ ಮಾಡ್ಬೇಕ್...” “ಆಯ್ತ್ರಾ ಹಾಲ್‌ ಕುಡ್ದ ಮಕ್ಳೇ ಬದ್ಕೂದಲಾ, ಇಸ ಕುಡ್ದ ಬದ್ಕೂದೀತೆ?” ಅಂದಳು ದೇವಮ್ಮ. ಅವಳ ದನಿಯೂ ಸೋತಿತ್ತು. ಎಂಥದೋ ದಿಗಿಲು.

ಆಜಾನ್ ಸುದ್ದಿ ಹೇಳಿದರೆ, ನನ್ನನ್ನೇ ತಿರುವ್ಯಾಡಿಬಿಟ್ಟಳು. “ನಿಮದಿದೆಂಥಾ ರ‍್ರಾ ನಮ್ಮೂರಲ್ ಇಂಥದೆಲ್ಲ ನಡೂಕಲ್ರಾ. ಆಜಾ ಕೇಳ್‌ದ್ರೆ ಕಿಮಿ ತ್ವಾಟಿ ಆತೀತ್ ಕಡ್ರಾ? ನಮ್ಮೂರ ಅಮ್ನೋರ ಗುಡೀಲ ದಿನಾ ಪಾರ್ಥನಿ ಹಚ್ಚುದಲೇನ್ರಾ? ನಾಮು ರಾತ್ರಿ ಬೆಳತನಾ ಗುಮಟಿಪಾಂಗ್ ಕೇಳಕಂತ ಬಂದೋರಪಾ. ಮಕ್ಳ ಕೈಲೆ ಮೊಬೈಲ್ ಹಿಡ್ಸ ಹಾಳಗೆಡವಿ ಹಾಕರ. ಬೇಕಾದ್ದು ಬ್ಯಾಡಾದ್ದು ಕಣ್ಣ್ ನಿಕ್ಕರಸ್ಕಂಡ್ ನೋಡ್ತೆ ಬೀಳ್ತರ. ಇದ್ಯಾಕೋ ಗನಾದ್ಕ ಅಲ್ಲ ಮಡೀರಾ... ನಮ್ಮೂರ ಬದೀಗ್ ಈ ಹಗರಣ ಎಲ್ಲಾ ಕೇಳೂಕಲಾ ನಡ್ಯೂಕಲಾ. ಎಂತಕ್ರಾ ಅವರ ಉಪಾಸದ ತಿಂಗಳಲ್ಲೇ ಇಂಥದ್ದೆಲ್ಲ ಹಗರಣ. ನಾಮು ಹೊನ್ನಾವರ ಬದಿಗೆ ಸೇಂಗಾ ಮಾರೂಕೆಲ್ಲ ಹೋದಪಟಿಗೆ ರಾತ್ರಿಕಪ್ಪಾದ್ರೆ ಮುಸಲರ್ ಮನಿ ತೆಣಿಮ್ಯಾನೆ ಮನೀಕಂಡ, ಅವ್ರ ಕುಟ್ಟ ಚಾ ಕುಡ್ದ ಬಂದವರೇ. ಸುಳ್ಳು ಹೇಳುಕಾಗ್ರ. ಮನ್ಸರು ಜಾತಿ-ಪಾತಿ ಮ್ಯಾನೇ ಗನಾವ್ರು ಕೆಟ್ಟವ್ರು ಅಂತಿರತೀರೆ? ಅಲ್ರಾ... ಅಲ್ಲಿ ಮ್ಯಾನ ಕುಂತವರು ಅದೇರಾ ಕೋರ್ಟು ನ್ಯಾಯ ಕೊಡೋರು ಇದ್ನೆಲ್ಲ ಸರಿ ಮಾಡೂಕಲೇನ್ರಾ?..." ದೇವಮ್ಮ ಮಾತಾಡುತ್ತಲೇ ಇದ್ದಳು. ನನಗೋ ಕಣ್ಣಾಲಿಗಳಲ್ಲಿ ಹರಳು ಸಿಕ್ಕಿಕೊಂಡಂಥ ಉರಿ. ನಮ್ಮಿಬ್ಬರ ಮಧ್ಯೆ ಎಳೆಬೋಟೆಯಂಥ ಕೂಸು ಬೆಳಕಿನಲ್ಲಲೇ ಮಿಕಿಮಿಕಿ ನೋಡುತ್ತಿತ್ತು. ಅಚಾನಕ್ಕಾಗಿ, ನನ್ನ ಬಾಲ್ಯದ ಕತೆಯ ಕಾಣಿ ಬೊಮ್ಮಕ್ಕ ಈ ದೇವಮ್ಮನಲ್ಲಿ ಹೊಕ್ಕಾಡಿದಂತಾಯಿತು. ಕೈಯಲ್ಲಿ ಕಸಬರಿಗೆ ಹಿಡಿದು ಇಂಗ್ಲಿಷ್ ಅಧಿಕಾರಿಯನ್ನು ಹೊಳೆಯಂಚಿನವರೆಗೂ, "Go back... Go back..." ಎಂದು ಬೆನ್ನಟ್ಟಿ ಓಡಿಸಿದ್ದ ನಿರಕ್ಷರಿ ಕಾಣಿ ಬೊಮ್ಮಕ್ಕ.

ಕತ್ತಲಾಚೆ ಆಚೆಯಿಂದಲಾದರೂ ಬೆಳಕು ಜಿನುಗಲೇಬೇಕಲ್ಲ...

(ಮುಖ್ಯ ಚಿತ್ರ ಕೃಪೆ: ಉಷಾ ಮಿಶ್ರಾ)

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180