ಕರುಣೆಯ ಕೃಷಿ | ಸುದಾಮ ಪಾಂಡೆ ಧೂಮಿಲ್ ಕವಿತೆ 'ಇಪ್ಪತ್ತು ವರುಶಗಳ ತರುವಾಯ'

ಇಪ್ಪತ್ತು ವರುಶಗಳ ನಂತರ
ಕಾಡನ್ನು ಮೊಟ್ಟಮೊದಲು ಕಂಡ ಕಂಗಳು
ಮರಳಿವೆ ನನ್ನ ಮುಖಕ್ಕೆ:
ಹಸಿರ ಪೂರದಲ್ಲಿ ಮರಗಳೆಲ್ಲ ಮುಳುಗಿಹೋಗಿವೆ.

ವಿಪತ್ತು ತಪ್ಪಿದ ಮೇಲೆ
ಪ್ರತಿಯೊಂದು ಎಚ್ಚರಿಕೆಯೂ
ಅದರಲ್ಲಿ ಹಸಿರು ಕಣ್ಣಾಗಿ ಉಳಿದುಬಿಟ್ಟಿವೆ.

ಇಪ್ಪತ್ತು ವರುಶಗಳ ನಂತರ
ನನ್ನ ನಾನೇ ಪ್ರಶ್ನಿಸಿಕೊಳ್ಳುತ್ತಿದ್ದೇನೆ:  
ಪ್ರಾಣಿಯಂತಾಗಲು ಎಷ್ಟು ತಾಳ್ಮೆಯ ಜರೂರತ್ತಿದೆ?
ಏನೂ ಉತ್ತರ ತೋಚದೆ
ಮುಂದೆ ಸಾಗುತ್ತೇನೆ.
ಯಾಕೆಂದರೆ, ಇತ್ತೀಚೆಗೆ ಋತುಮಾನದ ಮನಃಸ್ಥಿತಿ ಹೇಗಿದೆಯೆಂದರೆ
ರಕ್ತದಲ್ಲಿ ತೇಲುತ್ತಿರುವ ಎಲೆಗಳನ್ನು
ಪರೀಕ್ಷಿಸಹೊರಡುವುದು ಕೂಡ
ಹೆಚ್ಚೂಕಡಿಮೆ ದಗಾಬಾಜಿಯಾಗಿದೆ.

ಮಧ್ಯಾಹ್ನವಾಗಿದೆ
ಸುತ್ತಮುತ್ತ ಮನೆಗಳಿಗೆ ಬೀಗ ಜಡಿಯಲಾಗಿದೆ;
ಗೋಡೆಗಳಲ್ಲಿ ಹೂತಿರುವ ಗುಂಡುಗಳ,
ರಸ್ತೆಯ ಮೇಲೆ ಚೆದುರಿಬಿದ್ದಿರುವ ಚಪ್ಪಲಿಗಳ ಭಾಷೆಯಲ್ಲಿ
ದುರ್ಘಟನೆಯ ವರದಿ ಇದೆ.
ಗಾಳಿಯಲ್ಲಿ ಪಟಪಟವೆನ್ನುತ್ತಿರುವ
ಹಿಂದೂಸ್ತಾನದ ನಕಾಶೆಯ ಮೇಲೆ
ಆಕಳೊಂದು ಸಗಣಿ ಹಾಕಿದೆ.

ಆದರಿದು ವೇಳೆಯಲ್ಲ
ಗಾಬರಿಯಲ್ಲಿರುವ ಜನರ ನಾಚಿಕೆಯನ್ನು ಅಳೆಯಲು  
ಅಥವಾ ಪೋಲೀಸರು ಮತ್ತು ಸಂತರುಗಳ
ನಡುವೆ ದೇಶದ ದೊಡ್ಡ ದುರ್ಭಾಗ್ಯ ಯಾರೆಂದು ಕೇಳಲು.

ಓ...! ಇದು ಮರಳಿ ಹೋಗಿ ರಸ್ತೆಯ ಮೇಲೆ ಬಿಟ್ಟುಹೋದ
ಮೆಟ್ಟನ್ನು ಮೆಟ್ಟಿಕೊಳ್ಳುವ ವೇಳೆಯೂ ಅಲ್ಲ;
ಇಪ್ಪತ್ತು ವರುಶಗಳ ನಂತರದ ಈ ಮಧ್ಯಾಹ್ನದ ಹೊತ್ತು
ನಿರ್ಜನ ದಾರಿಗಳಲ್ಲಿ ಕಳ್ಳನಂತೆ ನಡೆದು
ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುತ್ತೇನೆ:
ಸ್ವಾತಂತ್ರ್ಯವೆನ್ನುವುದು ಕೇವಲ
ಚಕ್ರವೊಂದು ಎಳೆಯುತ್ತಿರುವ
ಬಳಲಿರುವ ಮೂರು ಬಣ್ಣಗಳ ಹೆಸರೇನು?
ಅಥವಾ ಹೆಚ್ಚಿನ ಅರ್ಥವೇನಾದರೂ ಅದಕ್ಕಿದೆಯಾ?

ಯಾವುದೇ ಉತ್ತರ ತೋಚದೆ
ಮುನ್ನಡೆಯುತ್ತೇನೆ.

* * * * *

"Every beautiful poem is an act of resistance" - Mahmoud Darwish

Image

ಕಾಲೇಜಲ್ಲಿ ಓದುತ್ತಿರುವಾಗ ಮೊದಲ ಬಾರಿ ಸಿದ್ದಲಿಂಗಯ್ಯನವರ 'ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ' ಎಂಬ ಹಾಡನ್ನು ಕೇಳುತ್ತ, ಮೊತ್ತಮೊದಲ ಬಾರಿಗೆ ನಮ್ಮ ದೇಶದಲ್ಲಿ ಸವಲತ್ತುಳ್ಳವರ ಮತ್ತು ಸವಲತ್ತು ಇರದವರ ದೃಷ್ಟಿಕೋನದಲ್ಲಿ ಹೇಗೆ ಪ್ರತಿಯೊಂದು ಸಂಗತಿಗೂ ವಿಭಿನ್ನ ಅರ್ಥವಿದೆಯೆಂದು ಅರಿವಿಗೆ ಬರತೊಡಗಿತು. ಸ್ವಾತಂತ್ರ್ಯವೆಂದರೆ ಮೈನವಿರೇಳುವ ಅನುಭವ ಕೂಡ ನನ್ನ ಸವಲತ್ತುಳ್ಳ ಸಾಮಾಜಿಕ ಹಿನ್ನೆಲೆಯದು. ಆದರೆ, ನನ್ನದೇ ಸಮಾಜ, ನನ್ನದೇ ದೇಶ ಮುನ್ನಡೆಯುತ್ತಿರಲು ಯಾರ ಶ್ರಮದ ಪಾಲೂ ಇದೆಯೋ ಅವರೆಲ್ಲರಿಗೆ ನನ್ನ ಹಾಗೆ ಅನ್ನಿಸದೆ ಇರುವ ಸಾಧ್ಯತೆ ಇದೆ ಮತ್ತು ಆ ಸಾಧ್ಯತೆಯ ಜವಾಬುದಾರಿ ನನ್ನಂಥವರ ಮೇಲಿದೆ ಎಂದು ನಿಧಾನವಾಗಿ ಅನ್ನಿಸತೊಡಗಿತು.

ಎಲ್ಲಿಯವರೆಗೆ ದೇಶದ ಕಡುಬಡವರ ಮೈಮೇಲೆ ತೊಡಲು ವಸ್ತ್ರವಿರುವುದಿಲ್ಲವೋ ಅಲ್ಲಿಯವರೆಗೆ ತಾವೂ ಅಲ್ಪವಸ್ತ್ರವನ್ನೇ ತೊಡುವ ವ್ರತ ತೊಟ್ಟಿದ್ದರು ಗಾಂಧಿ ಎಂದು ಶಾಲೆಯಲ್ಲಿ ನಮಗೆ ಮಾಸ್ತರ್ ಹೇಳಿದ್ದರು. (ಗಾಂಧಿಯವರನ್ನು ಬತ್ತಲ ಸಂತನಾಗಿರಿಸಲು ವಿಪರೀತ ಖರ್ಚಾಗುತ್ತಿತ್ತು ಎಂಬ ಕೊಂಕುಮಾತನ್ನು ಆಮೇಲೆ ನಾನು ಕೇಳಿಸಿಕೊಂಡಿದ್ದೆ). ಇಂತಹ ಸುಸ್ಪಷ್ಟ ನೈತಿಕ ನಿಲುವುಗಳನ್ನು ಕಳೆದುಕೊಂಡ ಸಮಾಜದಲ್ಲಿ ಸ್ವಾತಂತ್ರ್ಯದ ’ಅಮೃತ' ಮಹೋತ್ಸವವನ್ನು ಆಚರಿಸುವಲ್ಲಿ ನಾವು ತೋರುವ ಆಡಂಬರ ಎಷ್ಟು ವ್ಯಂಗ್ಯಾತ್ಮಕವಾದದ್ದು?

ಈ ಕವಿತೆ ಓದಿದ್ದೀರಾ?: ಕರುಣೆಯ ಕೃಷಿ | ಜಸಿಂತಾ ಕೆರಕೆಟ್ಟಾ ಕವಿತೆ 'ನದಿ, ಗುಡ್ಡ ಹಾಗೂ ಮಾರುಕಟ್ಟೆ'

'ಧೂಮಿಲ್' ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದ ಹಿಂದಿ ಕವಿ ಸುದಾಮ ಪಾಂಡೆ 'ಧೂಮಿಲ್' 1975ರಲ್ಲಿ ನಿಧನರಾದಾಗ ಭಾರತವಿನ್ನೂ ತುರ್ತು ಪರಿಸ್ಥಿತಿಯೆಂಬ ಕರಾಳ ಕಾಲವನ್ನೂ ಕಂಡಿರಲಿಲ್ಲ. ಆಗಲೇ, ದೇಶ ಎತ್ತ ಸಾಗಿದೆಯೆಂಬ ಕುರಿತು ಆತಂಕ ತುಂಬಿದ ಅನೇಕ ತೀಕ್ಷ್ಣ ಕವನಗಳನ್ನು ಅವರು ಬರೆದಿದ್ದರು. ವಿಶೇಷವೆಂದರೆ, ಈ ಕವನಗಳಲ್ಲಿ ಧೂಮಿಲ್ ಕೇವಲ ರಾಜಕಾರಣಿಗಳ ಮೇಲೆ ತಪ್ಪು ಹೊರಿಸಿ ಕೈತೊಳೆದುಕೊಳ್ಳುತ್ತಿರಲಿಲ್ಲ. ಮೇಲಿನ ಕವನ ಸೂಚಿಸುವಂತೆ ಅಪಾರ ಸ್ವವಿಮರ್ಶೆಯುಳ್ಳ ಕವನಗಳು ಅವರದ್ದು. ನಮ್ಮ ದೇಶದಲ್ಲಿ ಪ್ರಸ್ತುತ ನಾವು ಕಾಣುತ್ತಿರುವ ಕರಾಳತೆ ನಮ್ಮ-ನಮ್ಮ ಅಂತರಂಗದೊಳಗಿನ ಕರಾಳತೆಯ ಒಟ್ಟಂದವೇ ಅಲ್ಲವೇ? ನೈತಿಕತೆಯನ್ನು ಬಿಟ್ಟಾಯಿತು, ನಾಚಿಕೆಯನ್ನು ಬಿಟ್ಟಾಯಿತು, ಸಮಾನತೆಯ ಕನಸನ್ನು ಬಿಟ್ಟಾಯಿತು, ಜಾತಿ-ಮತಭೇಧಗಳನ್ನು ಮೆಟ್ಟಿ ನಿಲ್ಲುವ ಸಂಕಲ್ಪವನ್ನು ತೊರೆದದ್ದಾಯಿತು, ಲಾಭವೇ ಮುಖ್ಯ - ಎಲ್ಲವನ್ನೂ ದುಡ್ಡಾಗಿಸುವ (monetise) ಪ್ರತಿಭೆ ಮುಖ್ಯವೆಂದುಕೊಳ್ಳುತ್ತ ದೊಡ್ಡಣ್ಣ ಅಮೆರಿಕ ಹಾಕಿಕೊಟ್ಟ ರಸ್ತೆಯಲ್ಲಿ ಆರ್ಥಿಕ ಉದಾರೀಕರಣ ಮಾಡಿ ಉಳ್ಳವರಿಗೆ ಉದಾರತೆ ತೋರಿಸಿದ್ದಾಯಿತು.

ಅದೇ ಕಾಲದಲ್ಲಿ ನಮ್ಮ ದೇಶದಲ್ಲಿ ಮನೆ-ಮಾರು ಕಳೆದುಕೊಡವರು, ನೆಲ-ಜಲ ಕಳೆದುಕೊಂಡವರು, ರೋಗ-ರುಜಿನಕ್ಕೀಡಾಗಿ ದಿಕ್ಕಿಲ್ಲದವರಾದವರು, ಪಡೆದ ಶಿಕ್ಷಣಕ್ಕೆ ಕಿಮ್ಮತ್ತಿಲ್ಲದಂತಾದವರು, ದೇಶದ ಅಭಿವೃದ್ಧಿಗೆ ಕೈಬಿಟ್ಟ ಜಮೀನಿನ ಪರಿಹಾರಕ್ಕಾಗಿ ಕಂಬದಿಂದ ಕಂಬಕ್ಕೆ ಲಾಳಿ ಹೊಡೆಯುತ್ತಿರುವವರು, ಹಳ್ಳಿಗಳ ಹೊಂಡಗಳಿಂದೆದ್ದು ಬಂದು ಶಹರಗಳ ಬಾವಿಗಳಲ್ಲಿ ಬಿದ್ದವರು ಎಲ್ಲ, ಎಲ್ಲೆಂದರಲ್ಲಿ ಹೆಚ್ಚಾದರು. ಆದರೂ ನಮಗೆ ಪರದೆಯ ಮೇಲೆ ಕಾಣುವ ನಕಾಶೆಯಲ್ಲಿನ ಭಾರತ ಮಾತೆ ಮತ್ತು ಮಾಧ್ಯಮಗಳ ಪದ-ಪ್ರತಿಮೆಗಳಲ್ಲಿ ಚಿತ್ರಿತವಾಗುವ ದೇಶದ ಘನತೆಯೇ ಹೆಚ್ಚು ಮುಖ್ಯವಾಯಿತು. ಸ್ವಾತಂತ್ರ್ಯವೆಂಬ ಪರಿಕಲ್ಪನೆಯ ಸಾಂಕೇತಿಕ ಚಪ್ಪರದಡಿಯಲ್ಲಿ ಯಾರು ತಂತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎನ್ನುವುದು ಕ್ಷುಲ್ಲಕವಾಗುವಷ್ಟು ಸ್ವಾರ್ಥ-ಕೇಡು ನಮ್ಮನ್ನು ತುಂಬಿಬಿಟ್ಟಿದೆಯೇನೋ!

ಸುದಾಮ ಪಾಂಡೆ 'ಧೂಮಿಲ್' ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ವಿಶಿಷ್ಟ ಹೊತ್ತಿನಲ್ಲಿ ಇದ್ದಿದ್ದರೆ, ಬಾಯಿಯಲ್ಲಿ ಬೆಣ್ಣೆ, ’ಡಿಪಿಯಲ್ಲಿ ತಿರಂಗ’ ಮೆತ್ತಿಕೊಂಡು ಬಾಲ ಅಲ್ಲಾಡಿಸುವವರ ಕುರಿತಾಗಿ ಏನು ಬರೆಯುತ್ತಿದ್ದರು? ಮತ್ತೇನಿಲ್ಲ, ಸ್ವಾತಂತ್ರ್ಯವೆನ್ನುವುದು ನಮ್ಮ ಸ್ವಾರ್ಥವೃದ್ಧಿಯ ಸಲಕರಣೆಯಲ್ಲ, ಪರಸ್ಪರರ ಕುರಿತಾದ, ಒಟ್ಟು ಸಮಾಜದ, ದೇಶದ ಕುರಿತಾದ ಜಾಗ್ರತೆ, ಜವಾಬುದಾರಿತ್ವ ಎನ್ನುವುದನ್ನು ನೆನಪಿಸುವಂಥ ಚುಚ್ಚುಮದ್ದು ಕೊಡುತ್ತಿದ್ದರೇನೋ ತಮ್ಮ ಹರಿತ ಲೇಖನಿಯ ಮೂಲಕ.

ನಿಮಗೆ ಏನು ಅನ್ನಿಸ್ತು?
2 ವೋಟ್