ಗ್ರಾಹಕಾಯಣ | ಇನ್ಮುಂದೆ ಹೋಟೆಲ್‍ಗಳು ಸೇವಾ ಶುಲ್ಕ ವಿಧಿಸಿದರೆ ಧಾರಾಳವಾಗಿ ದೂರು ಕೊಡಬಹುದು

Hotel

ಯಾವುದಾದರೂ ದೊಡ್ಡ ಹೋಟೆಲ್ ಅಥವಾ ರೆಸ್ಟೋರೆಂಟ್‌ಗಳಲ್ಲಿ ತಿಂಡಿ-ಊಟ ಮಾಡಿದರೆ ಕೊಡಲಾಗುವ ಬಿಲ್‌ನಲ್ಲಿ 'ಸರ್ವಿಸ್ ಚಾರ್ಜ್' ಎಂಬ ಹೆಚ್ಚುವರಿ ಸಾಲು ಕೂಡ ಇರುತ್ತಿದ್ದನ್ನು ನೀವು ಗಮನಿಸಿರಬಹುದು. ಇದು ಹಗಲು ದರೋಡೆ ಎಂದು ಪರಿಗಣಿಸಿರುವ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು ಹೊಸ ನಿಯಮ ರೂಪಿಸಿದೆ. ಈ ನಿಯಮದ ಕುರಿತ ವಿವರ ಇಲ್ಲಿದೆ

ತಿಂಡಿ, ಉಪಾಹಾರ, ಊಟಕ್ಕಾಗಿ ಹೋಟೆಲ್‍ಗಳಿಗೆ ಹೋಗುವುದು ಈಗ ಬದುಕಿನ ಒಂದು ಅವಿಭಾಜ್ಯ ಅಂಗ. ನಗರ ಪ್ರದೇಶಗಳಲ್ಲಿ ಮಾತ್ರವಲ್ಲ, ಗ್ರಾಮಾಂತರ ಪ್ರದೇಶಗಳಲ್ಲೂ ಹೋಟೆಲ್ ನಡೆಸುವುದು ಲಾಭ ಗಳಿಸುವ ಉದ್ಯಮ. ಯಾವುದಾದರೂ ಹೋಟೆಲ್‍ಗೆ ಹೋಗಿ, ಅಲ್ಲಿ ದೊರೆಯುವ ತಿಂಡಿ-ಊಟ ಇತ್ಯಾದಿಗೆ ಯುಟ್ಯೂಬ್ ಮತ್ತಿತರೆ ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ರೇಟಿಂಗ್ ನೀಡುವುದು ಕೂಡ ಜನಪ್ರಿಯ. ಯಾವ ಹೋಟೆಲ್‍ನಲ್ಲಿ ಯಾವ ಖಾದ್ಯ ರುಚಿಕರ ಎಂದು ಹೇಳುವುದಕ್ಕೆಂದೇ ಪ್ರತ್ಯೇಕ ಯೂಟ್ಯೂಬ್ ಚಾನೆಲ್‍ಗಳಿವೆ. ಈ ಕಾರ್ಯಕ್ರಮ ಎಷ್ಟು ಜನಪ್ರಿಯವಾಗಿದೆ ಎಂದರೆ, ಅದನ್ನು ನೋಡಿದ ಮರುದಿನ ಅದರಲ್ಲಿ ತೋರಿಸಿದ ಹೋಟೆಲ್ ಮುಂದೆ ನೂಕುನುಗ್ಗಲು ಇರುತ್ತದೆ. ಇಂಥ ಸಂದರ್ಭಗಳಲ್ಲಿ, ಎಷ್ಟೋ ಹೋಟೆಲ್‍ಗಳು ತಿಂಡಿ ಪೂರೈಸಲಾರದೆ ಬಾಗಿಲು ಹಾಕಿದ ಪ್ರಸಂಗಗಳೂ ಇವೆ. ಇದೆಲ್ಲದರ ಜೊತೆ, ತಿಂಡಿ ಸವಿಯಲೆಂದೇ ಮೋಟಾರ್ ಬೈಕ್‍ನಲ್ಲಿ ಯುವಕ-ಯುವತಿಯರ ದಂಡು ಪ್ರತಿ ಶನಿವಾರ ಮತ್ತು ಭಾನುವಾರ ರಾಜ್ಯ/ರಾಷ್ಟ್ರೀಯ ಹೆದ್ದಾರಿಗಳಿಗೆ ಹೋಗುವ ಪದ್ಧತಿ ಆರಂಭವಾಗಿದೆ. ಇಷ್ಟೆಲ್ಲ ಪೀಠಿಕೆಗೆ ಕಾರಣ - ಈ ಹೋಟೆಲ್‍ಗಳಲ್ಲಿ ವಿಧಿಸುವ ಸೇವಾ ಶುಲ್ಕಕ್ಕೆ (ಸರ್ವೀಸ್ ಚಾರ್ಜ್) ಕೇಂದ್ರ ಸರ್ಕಾರ ಕಡಿವಾಣ ಹಾಕಿರುವುದು.

ಸಣ್ಣ-ಪುಟ್ಟ ಹೋಟೆಲ್‍ಗಳಲ್ಲಿ ಸೇವಾ ಶುಲ್ಕ ಇರುವುದಿಲ್ಲ. ಆದರೆ, ಗ್ರಾಹಕರೇ ತಮ್ಮ ಇಷ್ಟಾನುಸಾರ ತಿಂಡಿ/ಊಟ ಸರಬರಾಜು ಮಾಡುವವರಿಗೆ, ತಟ್ಟೆ, ಲೋಟ, ಟೇಬಲ್ ಇತ್ಯಾದಿ ಸ್ವಚ್ಛಗೊಳಿಸುವವರಿಗೆ ಒಂದಿಷ್ಟು ಟಿಪ್ಸ್ ನೀಡುವುದು ವಾಡಿಕೆ. ಅದೇ ರೀತಿ, ಪಾರ್ಕಿಂಗ್ ನೋಡಿಕೊಳ್ಳುವ ಸೆಕ್ಯುರಿಟಿ ಗಾರ್ಡ್,  ರೆಸ್ಟ್ ರೂಮ್/ಟಾಯ್ಲೆಟ್ ಸ್ವಚ್ಛಗೊಳಿಸುವ ವ್ಯಕ್ತಿಗಳಿಗೆ ಐದು-ಹತ್ತು ರೂಪಾಯಿ ಟಿಪ್ಸ್ ನೀಡುವುದು ಕೂಡ ಉಂಟು. ಇದು ಕಡ್ಡಾಯ ಅಲ್ಲದಿದ್ದರೂ ಸೇವೆಯನ್ನು ಮೆಚ್ಚಿ ಗ್ರಾಹಕರು ತೋರುವ ಸಣ್ಣ ಔದಾರ್ಯ. ಆದರೆ, ಕೆಲವು ಪ್ರತಿಷ್ಠಿತ ಪಂಚತಾರ ಹೋಟೆಲ್‍ಗಳು ಮತ್ತು ರೆಸಾರ್ಟ್‍ಗಳಲ್ಲಿ ಸೇವಾ ಶುಲ್ಕವನ್ನು ಬಿಲ್‍ಗೆ ಸೇರಿಸಿ, ಅದನ್ನು ಕಡ್ಡಾಯ ಮಾಡಲಾಗುತ್ತದೆ. ಕೆಲವೆಡೆ, ಸೇವಾ ಶುಲ್ಕವು ನಿಮ್ಮ ಬಿಲ್ ಮೊತ್ತವನ್ನು ಆಧರಿಸಿರುತ್ತದೆ. ಸೇವಾ ಶುಲ್ಕ ವಿಧಿಸಲಾಗಿದೆ ಎಂಬ ಮಾಹಿತಿಯನ್ನು ಸಹ ಗ್ರಾಹಕರಿಂದ ಮುಚ್ಚಿಡುವ ಪ್ರಕರಣಗಳು ಬೆಳಕಿಗೆ ಬಂದಿವೆ.

Image
Hotel 3
ಸಾಂದರ್ಭಿಕ ಚಿತ್ರ

ಹೋಟೆಲ್‍ಗಳಲ್ಲಿ ಸೇವಾ ಶುಲ್ಕವನ್ನು ಕಡ್ಡಾಯಗೊಳಿಸಿದ ಬಗ್ಗೆ ಅನೇಕ ಗ್ರಾಹಕರು ಸರ್ಕಾರದ ಗಮನ ಸೆಳೆದಿದ್ದರು. ಕೆಲವರು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಮೂಲಕ ದೂರು ಸಹ ಸಲ್ಲಿಸಿದ್ದರು. ಇದೆಲ್ಲವನ್ನು ಪರಿಗಣಿಸಿದ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ), ಸೇವಾ ಶುಲ್ಕ ಕಡ್ಡಾಯವಲ್ಲ ಎಂದು ಆದೇಶ ಹೊರಡಿಸಿದೆ (ಜುಲೈ 4). ಗ್ರಾಹಕ ಸಂರಕ್ಷಣಾ ಅಧಿನಿಯಮ 2019ರ ಅಡಿಯಲ್ಲಿ ಸಿಸಿಪಿಎ ಸ್ಥಾಪಿಸಲಾಗಿದ್ದು, ಇದೊಂದು ಶಾಸನಬದ್ಧ ಪ್ರಾಧಿಕಾರ. ಗ್ರಾಹಕರ ಹಿತರಕ್ಷಣೆಯೇ ಈ ಪ್ರಾಧಿಕಾರದ ಉದ್ದೇಶ. ಗ್ರಾಹಕ ಸಂರಕ್ಷಣಾ ಅಧಿನಿಯಮದ ಅನುಸಾರ, ಸಿಸಿಪಿಎ ನೀಡುವ ಆದೇಶವನ್ನು ಪಾಲನೆ ಮಾಡದವರ ವಿರುದ್ಧ ದೂರು ದಾಖಲಿಸುವುದಲ್ಲದೆ, ದಂಡ ವಿಧಿಸುವ ಅಧಿಕಾರ ಹೊಂದಿದೆ.

ಸಿಸಿಪಿಎ ಆದೇಶದ ಪ್ರಕಾರ, ಹೋಟೆಲ್‍ಗಳಲ್ಲಿ ಮಾರಾಟ ಮಾಡುವ ಆಹಾರ, ಪಾನೀಯ ಇತ್ಯಾದಿಗಳ ದರವನ್ನು ಹೋಟೆಲ್‍ಗಳೇ ನಿರ್ಧರಿಸುತ್ತವೆ. ಈ ದರವು ಎಲ್ಲ ಖರ್ಚು-ವೆಚ್ಚ ಮತ್ತು ಲಾಭಾಂಶವನ್ನು ಒಳಗೊಂಡಿರುತ್ತದೆ. ಆಹಾರ ಪದಾರ್ಥಗಳಿಗೆ ದರ ನಿರ್ಧರಿಸುವ ಸ್ವಾತಂತ್ರ್ಯ ಹೋಟೆಲ್‍ಗಳಿಗೆ ಇರುತ್ತದೆ. ಅಂದ ಮೇಲೆ, ಒಮ್ಮೆ ದರ ನಿರ್ಧರಿಸಿದ ನಂತರ ಅದರ ಮೇಲೆ ಸೇವಾ ಶುಲ್ಕ ವಿಧಿಸುವುದು ಕಾನೂನುಬಾಹಿರ ಎಂಬುದು ಸಿಸಿಪಿಎ ಸ್ಪಷ್ಟ ಅಭಿಮತ. ಮೊದಲೇ ಹೇಳಿದಂತೆ, "ಟಿಪ್ಸ್ ನೀಡುವುದು ಅಥವಾ ನೀಡದಿರುವುದು ಗ್ರಾಹಕರಿಗೆ ಬಿಟ್ಟಿದ್ದು. ಆಹಾರದ ರುಚಿ, ಹೋಟೆಲ್ ಶುಚಿತ್ವ, ಸೇವಾ ವೈಖರಿ ಇತ್ಯಾದಿಯನ್ನು ಆಧರಿಸಿ ಗ್ರಾಹಕರು ಟಿಪ್ಸ್ ನೀಡುತ್ತಾರೆ. ಆದ್ದರಿಂದ ಬಿಲ್ ಮೊತ್ತಕ್ಕೆ ಸೇವಾ ಶುಲ್ಕ ಸೇರಿಸುವುದು ಸರಿಯಲ್ಲ," ಎಂದು ಸಿಸಿಪಿಎ ತನ್ನ ಆದೇಶದಲ್ಲಿ ಹೇಳಿದೆ.

Image
Hotel 2
ಸಾಂದರ್ಭಿಕ ಚಿತ್ರ

ತಿಂಡಿ, ತಿನಿಸಿನ ಬೆಲೆ ನಿಗದಿಪಡಿಸಿದ ನಂತರ ಅದರೊಟ್ಟಿಗೆ ಸೇವಾ ಶುಲ್ಕ ವಿಧಿಸುವುದಷ್ಟೇ ಅಲ್ಲದೆ, ಅದನ್ನು ಗ್ರಾಹಕರಿಗೆ ತಿಳಿಸದಿರುವುದು ಗ್ರಾಹಕ ಸಂರಕ್ಷಣಾ ಅಧಿನಿಯಮದ ಸೆಕ್ಷನ್ 2(41) ಪ್ರಕಾರ ನಿರ್ಬಂಧಿತ ವ್ಯಾಪಾರ ಪದ್ಧತಿ ಆಗುತ್ತದೆ ಎಂದು ಸಿಸಿಪಿಎ ಹೇಳಿದೆ. ಅನುಚಿತ ವ್ಯಾಪಾರ ಪದ್ಧತಿಯಿಂದ ಗ್ರಾಹಕರನ್ನು ರಕ್ಷಿಸಲು ಸಿಸಿಪಿಐ ಹೋಟೆಲ್‍ಗಳಿಗೆ ಮತ್ತು ಗ್ರಾಹಕರಿಗೆ ಕೆಲವೊಂದು ಸೂಚನೆಗಳನ್ನು ನೀಡಿದೆ. ಇದರ ಪ್ರಕಾರ, ಯಾವುದೇ ಹೋಟೆಲ್ ಅಥವಾ ರೆಸ್ಟೋರೆಂಟ್ ಸ್ವಯಂಪ್ರೇರಿತವಾಗಿ ಬಿಲ್‍ನಲ್ಲಿ ಸೇವಾ ಶುಲ್ಕ ಸೇರಿಸುವಂತಿಲ್ಲ. ಇನ್ಯಾವುದೇ ಹೆಸರಿನಲ್ಲಿಯೂ ಗ್ರಾಹಕರಿಂದ ಸೇವಾ ಶುಲ್ಕ ವಸೂಲು ಮಾಡುವಂತಿಲ್ಲ. ಯಾವುದೇ ಹೋಟೆಲ್ ಅಥವಾ ರೆಸ್ಟೋರೆಂಟ್ ಸೇವಾ ಶುಲ್ಕ ನೀಡುವಂತೆ ಗ್ರಾಹಕರನ್ನು ಒತ್ತಾಯ ಮಾಡುವಂತೆಯೂ ಇಲ್ಲ. ಹಾಗೊಮ್ಮೆ ಸೇವಾ ಶುಲ್ಕ ವಿಧಿಸಿದರೂ ಅದು ಕಡ್ಡಾಯವಲ್ಲ ಮತ್ತು ಇಚ್ಛಿಸಿದರೆ ಮಾತ್ರ ಪಾವತಿಸಬಹುದು ಎಂದು ಗ್ರಾಹಕರಿಗೆ ತಿಳಿಸಬೇಕು. ಸೇವಾ ಶುಲ್ಕ ನೀಡದ ಗ್ರಾಹಕರಿಗೆ ಹೋಟೆಲ್ ಅಥವಾ ರೆಸ್ಟೋರೆಂಟ್ ಒಳಗೆ ಪ್ರವೇಶವಿಲ್ಲ ಎಂದು ಹೇಳುವುದು ಕಾನೂನುಬಾಹಿರ.

ಈ ಲೇಖನ ಓದಿದ್ದೀರಾ?: ಗ್ರಾಹಕಾಯಣ | ಬ್ಯಾಂಕ್ ಸಾಲ ವಸೂಲಿ ಏಜೆಂಟರು ಕಿರುಕುಳ ಕೊಟ್ಟರೆ ಮಾಡಬೇಕಾದ್ದೇನು?

ಒಂದು ವೇಳೆ, ಯಾವುದೇ ಹೋಟೆಲ್ ಅಥವಾ ರೆಸ್ಟೋರೆಂಟ್ ಸೇವಾ ಶುಲ್ಕ ವಿಧಿಸಿದಲ್ಲಿ ಗ್ರಾಹಕರು ಕೈಗೊಳ್ಳಬಹುದಾದ ಕ್ರಮವನ್ನು ಸಹ ಸಿಸಿಪಿಎ ಆದೇಶದಲ್ಲಿ ಪಟ್ಟಿ ಮಾಡಿದೆ. ಅದರ ಪ್ರಕಾರ, ಗ್ರಾಹಕರು ಐದು ಕ್ರಮ ಕೈಗೊಳ್ಳಬಹುದು:

1. ಸೇವಾ ಶುಲ್ಕ ವಿಧಿಸಬಾರದೆಂದು ಹೋಟೆಲ್ ಅಥವಾ ರೆಸ್ಟೋರೆಂಟ್‍ಗೆ ಮನವಿ ಸಲ್ಲಿಸಬಹುದು.

2. ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ (1915) ಕರೆ ಮಾಡಿ, ಹೋಟೆಲ್ ಅಥವಾ ರೆಸ್ಟೋರೆಂಟ್ ವಿರುದ್ಧ ದೂರು ದಾಖಲಿಸಬಹುದು.

3. ಹೋಟೆಲ್ ಅನುಚಿತ ವ್ಯಾಪಾರ ಪದ್ಧತಿ ಅನುಸರಿಸುತ್ತಿದೆ ಎಂಬ ಕಾರಣ ನೀಡಿ, ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದಲ್ಲಿ ದೂರು ಸಲ್ಲಿಸಬಹುದು. ಅಗತ್ಯವಿದ್ದಲ್ಲಿ ದೂರನ್ನು www.edaakhil.nic.in ವೆಬ್‌ಸೈಟ್‌ನಲ್ಲೂ ದಾಖಲಿಸಬಹುದು.

4. ಜಿಲ್ಲಾಧಿಕಾರಿಗಳಿಗೆ ದೂರು ನೀಡಬಹುದು.

5. ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರಕ್ಕೂ ದೂರು ಸಲ್ಲಿಸಬಹುದು.

ನಿಮಗೆ ಏನು ಅನ್ನಿಸ್ತು?
0 ವೋಟ್