ಅನುದಿನ ಚರಿತೆ | ಕನ್ನಡದ ಅಸ್ಮಿತೆಯ ಸಾರ್ವಭೌಮತ್ವವನ್ನು ಕಾಪಾಡುವುದು ಹೇಗೆ?

Kannada Entity 1

ನಾವು ದೇಶಿ ನುಡಿಗಳನ್ನು ಗುರುತಿಸುವ ತಾತ್ವಿಕ ಚೌಕಟ್ಟಿನೊಳಗೆಯೇ ದೋಷವಿದೆ. ನುಡಿ ಬಗೆಗಿನ ನಿಲುವುಗಳಿಗೂ ಮತ್ತು ಧರ್ಮ, ಜಾತಿಗಳ ಬಗೆಗಿರುವ ನಿಲುವುಗಳಿಗೂ ವ್ಯತ್ಯಾಸ ಗುರುತಿಸಲು ಸಾಧ್ಯವಾಗದ ಮಟ್ಟಕ್ಕೆ ನಾವು ಬಂದು ತಲುಪಿದ್ದೇವೆ. ಇದರ ಪರಿಣಾಮಗಳು ಇವತ್ತಿನ ನಮ್ಮ ಪಠ್ಯಪುಸ್ತಕ ಪರಿಷ್ಕರಣೆಯ ನಿಲುವುಗಳಲ್ಲಿ ನಿಚ್ಚಳವಾಗಿ ಕಾಣುತ್ತಿವೆ

ನಾಡು ಮತ್ತು ನಾಡಿಗರು ಪ್ರಗತಿಯಲ್ಲಿದ್ದೇವೆ ಎನ್ನುವ ಉಮೇದಿನ ಆಚೆಗೂ, ಇವತ್ತು ನಮ್ಮ ನಾಡು-ನುಡಿಗಳ ಮುನ್ನೋಟದ ಬಗೆಗೆ ಯೋಚಿಸುವ ಜರೂರಿದೆ. ಈಗಾಗಲೇ ಸಾಕಷ್ಟು ಶಿಕ್ಷಣ ಆಯೋಗಗಳು ವರದಿ ನೀಡಿವೆ. ಅದರಲ್ಲಿ ಕೆಲವು ವರದಿಗಳು ಜಾರಿಯಾಗಿವೆ. ಇಷ್ಟೆಲ್ಲ ಆದರೂ, ಯಾವುದೇ ಬಗೆಯಲ್ಲಿ ಇಂಗ್ಲಿಷಿನ ಹೆಚ್ಚುಗಾರಿಕೆ ಕಡಿಮೆಗೊಳಿಸಿದ್ದನ್ನು ಕಾಣಲಾರೆವು ಎನ್ನುವುದು ಗಮನಾರ್ಹ. ಈ ನಿಲುವಿಗೆ ಕೊಠಾರಿ ಆಯೋಗವೂ ಹೊರತಾಗಿಲ್ಲ. ಈ ಆಯೋಗವನ್ನು ವಿಶೇಷವಾಗಿ ಏಕೆ ಉಲ್ಲೇಖಿಸುತ್ತೇನೆಂದರೆ, ಶಿಕ್ಷಣವನ್ನು ಕುರಿತು ಇದುವರೆಗೂ ಬಂದಿರುವ ಎಲ್ಲ ಆಯೋಗಗಳ ವರದಿಗಿಂತ ಈ ಆಯೋಗದ ವರದಿಯು ಭಿನ್ನವೂ ಮತ್ತು ವಿಶಿಷ್ಟವೂ ಆಗಿದೆ. ಒಟ್ಟಿನಲ್ಲಿ ಇದೊಂದು ಕ್ರಾಂತಿಕಾರಿ ಆಯೋಗ ಎಂದು ಬಣ್ಣಿಸಲಾಗಿದೆ. ಇಷ್ಟಾದರೂ, ಈ ಆಯೋಗ ಕೂಡ ಇಂಗ್ಲಿಷ್ ನುಡಿಯ ಮಹತ್ವವನ್ನೇನೂ ಕಡಿಮೆಗೊಳಿಸಿಲ್ಲ. ಹಾಗಿದ್ದಲ್ಲಿ ನಾವು ದೇಶಿ ನುಡಿಗಳನ್ನು ಕುರಿತು ಯೋಚಿಸಬೇಕಾದ ದಾರಿ ಯಾವುದು? ದೇಶಿ ನುಡಿಗಳು ಎಂದರೆ, ಕೇವಲ ಸಂವಿಧಾನದ ಎಂಟನೇ ಶೆಡ್ಯೂಲಿನಲ್ಲಿ ಮಾನ್ಯತೆ ಪಡೆದಿರುವ ನುಡಿಗಳೇ? ಇಲ್ಲವೇ, ಭಾರತದ ವಿವಿಧ ಪ್ರದೇಶಗಳಲ್ಲಿ ಜನ ಸಮೂಹಗಳ ದೈನಂದಿನ ಬದುಕಿನಲ್ಲಿ ಬಳಕೆಯಲ್ಲಿರುವ ಎಲ್ಲ ಬಗೆಯ ನುಡಿಗಳೇ? ಅಥವಾ ಇನ್ನೂ ಖಚಿತವಾಗಿ ಹೇಳಬೇಕೆಂದರೆ, ಕೇವಲ ರಾಜ್ಯಭಾಷೆಗಳು ಮಾತ್ರವೇ? ನಾವು ಇವತ್ತು ಚರ್ಚಿಸುತ್ತಿರುವ ಕನ್ನಡ, ತಮಿಳು, ಆಸ್ಸಾಮಿ ಮೊದಲಾದ ನುಡಿಗಳ ಪರವಾಗಿ ಮಾತ್ರ ಈ ಪ್ರಶ್ನೆಗಳು ಯೋಚಿಸುತ್ತಿಲ್ಲ ಅನ್ನುವುದು ಮೇಲ್ನೋಟಕ್ಕೇ ಗೋಚರಿಸುತ್ತದೆ. ಹಾಗಾದರೆ, ಈ ಎಲ್ಲ ಪ್ರಶ್ನೆಗಳ ಪ್ರಸ್ತುತತೆಯಾದರೂ ಏನು? ಏನೆಂದರೆ, ನಾವು ದೇಶಿ ನುಡಿಗಳು ಎಂದು ಗುರುತಿಸುವ ತಾತ್ವಿಕ ಚೌಕಟ್ಟಿನೊಳಗೆಯೇ ಏನೋ ದೋಷವಿದೆ ಎನ್ನುವುದನ್ನು ಅರಿತುಕೊಳ್ಳುವ ಜರೂರಿದೆ. ನುಡಿ ಬಗೆಗಿನ ನಿಲುವುಗಳಿಗೂ ಮತ್ತು ಧರ್ಮ, ಜಾತಿಗಳ ಬಗೆಗಿರುವ ನಿಲುವುಗಳಿಗೂ ಯಾವುದೇ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗದ ಮಟ್ಟಕ್ಕೆ ಇವತ್ತು ನಾವು ಬಂದು ತಲುಪಿದ್ದೇವೆ. ಇದರ ಪರಿಣಾಮಗಳು ಇವತ್ತಿನ ನಮ್ಮ ಪಠ್ಯಪುಸ್ತಕ ಪರಿಷ್ಕರಣೆಯ ನಿಲುವುಗಳಲ್ಲಿ ಅತ್ಯಂತ ನಿಚ್ಚಳವಾಗಿ ಕಾಣುತ್ತಿವೆ.

ಈ ಲೇಖನ ಓದಿದ್ದೀರಾ?: ಅನುದಿನ ಚರಿತೆ | ಪಠ್ಯಪುಸ್ತಕ ಎನ್ನುವುದು ರಾಜಕೀಯ ಪಕ್ಷದ ಪ್ರಣಾಳಿಕೆಯೇ?

ಸ್ವತಂತ್ರ ಭಾರತದ ಆರಂಭ ಕಾಲದಲ್ಲಿ ಮತ್ತು ನಂತರದಲ್ಲಿ ಭಾಷೆಗಳನ್ನು ಕುರಿತು ತಾಳಿದ ನಿಲುವುಗಳು, ಕೈಗೊಂಡ ತೀರ್ಮಾನಗಳ ಪರಿಣಾಮಗಳು ಇವತ್ತು ನಮ್ಮ ಮೇಲೆ ಸವಾರಿ ಮಾಡುತ್ತಿವೆ. ಈ ಸವಾರಿಯನ್ನು ಇನ್ನಷ್ಟು ತೀವ್ರವಾಗಿ ಇವತ್ತಿಗೂ ಮುಂದುವರಿಸಲು ಆ ನಿಲುವುಗಳು ಪೂರಕವಾಗಿವೆ. ಭಾಷಾ ರಾಜಕಾರಣ, ಆಡಳಿತ ಭಾಷೆ, ತ್ರಿಭಾಷಾ ಸೂತ್ರಗಳು, ಭಾಷೆ ಮತ್ತು ಶೈಕ್ಷಣಿಕ ತೀರ್ಮಾನಗಳನ್ನು ಕೈಗೊಳ್ಳುವಲ್ಲಿ ಏರ್ಪಟ್ಟ ವಿದ್ಯಮಾನಗಳು ಈ ನೆಲೆಗೆ ನಮ್ಮನ್ನು ತಲುಪಿಸಿವೆ. ಭಾಷಾ ನೀತಿ, ಯೋಜನೆಗೆ ಸಂಬಂಧಿಸಿದ ನಿಲುವುಗಳು, ಸವಾಲುಗಳು ಹಾಗೂ ಸಮಸ್ಯೆಗಳು ಸ್ವಾತಂತ್ರ್ಯ ಪೂರ್ವಕಾಲದ ವಸಾಹತು ಭಾರತದ ಸನ್ನಿವೇಶದಿಂದಲೇ ಶುರುವಾಗಿವೆ. ಹಿಂದಿ ನುಡಿಯನ್ನು ಹಿಂದಿಯೇತರ ರಾಜ್ಯಗಳ ಮೇಲೆ ಹೇರುವ ಧೋರಣೆಗಳ ಚರಿತ್ರೆ ದೊಡ್ಡದಿದೆ. ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯ ಹಿಂದಿನ ಪ್ರೇರಣೆಗೂ ವಸಾಹತು ಕಾಲದ ಕಾಂಗ್ರೆಸ್ ಚಳವಳಿಯ ತೀರ್ಮಾನಗಳೇ ಕಾರಣ. ನನ್ನ ಪ್ರಕಾರ, ಯಾವುದೇ ಆಯೋಗ ಅಥವಾ ಕಮಿಶನ್ ಕೂಡ ತಾಯ್ನುಡಿ ಮೂಲಕ ಇಲ್ಲವೇ ದೇಶಿ ನುಡಿಗಳ ಮೂಲಕ ಶಿಕ್ಷಣ ಕೊಡುವ ಬಗೆಗೆ ವೈಜ್ಞಾನಿಕವಾಗಿ ಚಿಂತಿಸಿದ ನಿದರ್ಶನಗಳು ಸಿಗುವುದಿಲ್ಲ ಎನ್ನುವಷ್ಟು ವಿರಳ. ಭಾರತದಲ್ಲಿ ನುಡಿ ಕುರಿತಾದ ಯಾವುದೇ ತೀರ್ಮಾನವು ಸಾಮಾಜಿಕ, ರಾಜಕೀಯ ಇಲ್ಲವೇ ಧಾರ್ಮಿಕ ಪ್ರೇರಣೆ ಮತ್ತು ಒತ್ತಾಯದಿಂದ ಕೂಡಿರುತ್ತವೆಯೇ ಹೊರತು ಶೈಕ್ಷಣಿಕ ತಾತ್ವಿಕತೆಯನ್ನು ಮಾತ್ರ ಆಧರಿಸಿರುವುದಿಲ್ಲ. ಶಿಕ್ಷಣವನ್ನು ಒಂದು ಸ್ವಾಯತ್ತ ವಲಯವನ್ನಾಗಿ ಪರಿಗಣಿಸದೆ ಅದನ್ನೊಂದು ಕೇವಲ ರಾಜಕೀಯ, ಧಾರ್ಮಿಕ ಇಲ್ಲವೇ ಸಾಮಾಜಿಕ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳುವುದಕ್ಕೆ ಇರುವ ಅಸ್ತ್ರವೆಂದು ಭಾವಿಸಲಾಗಿದೆ. ಪರಿಣಾಮವಾಗಿ, ಶೈಕ್ಷಣಿಕ ಗುರಿ ಮತ್ತು ಉದ್ದೇಶಗಳನ್ನು ರೂಪಿಸುವಲ್ಲಿ, ಶಿಕ್ಷಣ ಮತ್ತು ನುಡಿಗಳ ನಡುವಣ ನಂಟಸ್ತಿಕೆಯನ್ನು ಅರಿಯುವಲ್ಲಿ ನಾವು ಎಡವುತ್ತಿದ್ದೇವೆ. ಶಿಕ್ಷಣದ ಆಶಯಗಳನ್ನು ಈಡೇರಿಸಿಕೊಳ್ಳಲು ಸಾಮಾಜಿಕ, ರಾಜಕೀಯ ದೃಷ್ಟಿಕೋನಗಳನ್ನು ಅನುಸರಿಸಬೇಕಾಗಿರುವುದೇನೋ ಸರಿ. ಆದರೆ, ರಾಜಕೀಯ ಮತ್ತು ನಮ್ಮ-ನಮ್ಮ ಧಾರ್ಮಿಕ, ಸಾಮಾಜಿಕ ಒಳ ಉದ್ದೇಶಗಳನ್ನು ಪೂರೈಸಿಕೊಳ್ಳಲು ಶಿಕ್ಷಣವನ್ನು ಒಂದು ಆಯುಧವನ್ನಾಗಿ ಬಳಸಿಕೊಳ್ಳಲು ಮುಂದಾದಾಗ, ನಮ್ಮ ಶೈಕ್ಷಣಿಕ ಉದ್ದೇಶಗಳ ಸ್ವರೂಪವೇ ಬದಲಾಗುತ್ತವೆ. ಶೈಕ್ಷಣಿಕ ನೀತಿಗಳನ್ನು ರೂಪಿಸುವಲ್ಲಿ, ನುಡಿ ಬಗೆಗಿನ ಮಾನಸಿಕ, ಸಾಮಾಜಿಕ ಹಾಗೂ ವೈಜ್ಞಾನಿಕ ವಿದ್ಯಮಾನಗಳನ್ನು ಪರಿಗಣಿಸುವುದಿಲ್ಲ. ಕಾರಣ, ಸಮುದಾಯಗಳ ಬೌದ್ಧಿಕ ಸಂಪನ್ಮೂಲ ಮತ್ತು ಬಹುಸಂಖ್ಯಾತ ಸಮೂಹಗಳಲ್ಲಿ ತಲೆತಲೆಮಾರುಗಳಿಂದ ವಿಕಾಸಗೊಂಡಿರುವ ಜ್ಞಾನವನ್ನು ಪರಿಗಣಿಸುವುದು ಎಂದರೆ, ಅಂತಹ ಜ್ಞಾನ ಮೀಮಾಂಸೆ ಮತ್ತು ಜಿಜ್ಞಾಸೆಗಳನ್ನೂ ಅನುಮೋದಿಸುವುದೇ ಆಗಿರುತ್ತದೆ ಹಾಗೂ ಅದನ್ನು ನಿರಂತರವಾಗಿ ಕಾಪಾಡಿಕೊಳ್ಳುವ ಹೊಣೆಗಾರಿಕೆಯನ್ನೂ ನಾವು ಹೊರಬೇಕಾಗುತ್ತದೆ.

Image
Kannada Entity 2

ನುಡಿಗಳ ಮೂಲಕ ತಿಳಿವನ್ನು ಹರಡುವುದು ಬಹುತೇಕ ಸನ್ನಿವೇಶದಲ್ಲಿ ಅತ್ಯಂತ ಸುಲಭದ ಕೆಲಸವಾಗಿರುತ್ತದೆ. ಆದರೆ, ನುಡಿಯೊಳಗೆಯೇ ಕ್ರೂಢೀಕರಣಗೊಂಡಿರುವ ತಿಳಿವಿನ ಮೂಲಕ ಶಿಕ್ಷಣವನ್ನು ಕೊಡುವುದು ಕಷ್ಟವೂ ಮತ್ತು ದುಸ್ತರವೂ ಆಗಿರುತ್ತದೆ. ಏಕೆಂದರೆ, ನುಡಿಯೊಂದನ್ನು ಕೇವಲ ಸಾಧನವನ್ನಾಗಿ ಬಳಸುವಾಗ ನಮ್ಮ ಒಳ ಉದ್ದೇಶಗಳನ್ನು ನೆಲೆಗೊಳಿಸುವುದಕ್ಕೆ ಸಹಜವಾಗಿಯೇ ಅವಕಾಶಗಳು ದೊರೆಯುತ್ತವೆ. ನುಡಿಗಳ ಮೂಲಕ ತಿಳಿವನ್ನು ಹರಡುವುದೆಂದರೆ, ಅಲ್ಲಿ ನುಡಿ ಕೇವಲ ಅಸ್ತ್ರ ಇಲ್ಲವೇ ಸಾಧನವಾಗಿರುತ್ತದೆ. ಆದ್ದರಿಂದ ನಮ್ಮ ಶಿಕ್ಷಣ ನೀತಿಗಳು ಬಹುತೇಕವಾಗಿ ಎಲ್ಲ ಕಾಲದಲ್ಲಿಯೂ ಈ ಹಾದಿಯನ್ನೇ ತುಳಿದಿರುವುದನ್ನು ನಾವು ನೋಡುತ್ತೇವೆ. ನಮ್ಮ-ನಮ್ಮ ನುಡಿಗಳ ಮೂಲಕ ಮತ್ತು ನಮ್ಮದೇ ಜ್ಞಾನ ಮೀಮಾಂಸೆಗಳನ್ನು ಒಳಗೊಂಡಿರುವ ನುಡಿಗಳ ಮೂಲಕ ಶಿಕ್ಷಣವನ್ನು ಒದಗಿಸುವುದೆಂದರೆ, ನಾವು ಈಡಾಗಿರುವ ಸಾಮಾಜಿಕ, ಧಾರ್ಮಿಕ, ರಾಜಕೀಯ ಬಿಕ್ಕಟ್ಟುಗಳಿಂದ ನಮ್ಮ ವಿಮೋಚನೆಯ ದಾರಿಗಳನ್ನು ಕಂಡುಕೊಳ್ಳುವುದಕ್ಕೆ ಪೂರಕವಾಗಿರುವ ಚಿಂತನೆಗಳನ್ನು ಬಿತ್ತರಿಸುವ ಬಗೆಯೇ ಆಗಿರುತ್ತದೆ. ಉದಾಹರಣೆಗೆ, ಪಂಪನನ್ನು, ವಚನಕಾರರನ್ನು, ಕನಕದಾಸ, ಪುರಂದರದಾಸ, ತತ್ವಪದಕಾರರು, ನಾರಾಯಣ ಗುರು, ಟಿಪ್ಪು ಸುಲ್ತಾನ್, ಶಿಶುನಾಳ ಷರೀಫ, ಕುವೆಂಪು, ದೇವನೂರು, ಸಿದ್ದಲಿಂಗಯ್ಯ, ಲಂಕೇಶ್, ತೇಜಸ್ವಿ, ಶಿವಪ್ರಕಾಶ್, ಚಿನ್ನಸ್ವಾಮಿ ಮೂಡ್ನಾಕೂಡು, ಮೊಗಳ್ಳಿ, ಅಮರೇಶ ನುಗಡೋಣಿ, ಕೆ ವೈ ನಾರಾಯಣಸ್ವಾಮಿ, ಗೀತಾ ನಾಗಭೂಷಣ, ಸಾರಾ ಅಬುಬೂಕರ್, ದು ಸರಸ್ವತಿ ಮೊದಲಾದವರನ್ನು ನಮ್ಮ ನುಡಿಯ ಮೂಲಕವೇ ಕಲಿಸುವಾಗ, ನಮ್ಮ ಶೈಕ್ಷಣಿಕ ನಿಲುವುಗಳು ನಮ್ಮ ಬಿಡುಗಡೆಯ ನೆಲೆಗಳೇ ಆಗಿ ಒದಗಿಬರುತ್ತವೆ. ಹಾಗಾಗಿ, ದೇಶಿ ನುಡಿಗಳನ್ನು ಶೈಕ್ಷಣಿಕ ಮಾಧ್ಯಮಗಳನ್ನಾಗಿಯೂ ಮತ್ತು ಶೈಕ್ಷಣಿಕ ಗುರಿಗಳನ್ನು ಸಾಧಿಸುವ ಮಾನದಂಡಗಳನ್ನಾಗಿಯೂ ರೂಪಿಸಿದರೆ, ಈಗ ಅಸ್ತಿತ್ವದಲ್ಲಿರುವ ಎಲ್ಲ ಬಗೆಯ ಸಾಂಸ್ಕೃತಿಕ, ರಾಜಕೀಯ ಹಾಗೂ ಭಾಷಿಕ ಯಜಮಾನಿಕೆಗಳಿಗೆ ಪ್ರತಿರೋಧದ ಮಾದರಿಗಳನ್ನು ರೂಪಿಸುವುದೇ ಆಗಿರುತ್ತದೆ. ಯಾವ ಸಾಮಾಜಿಕ, ರಾಜಕೀಯ, ಧಾರ್ಮಿಕ ವ್ಯವಸ್ಥೆ ತನ್ನ ಅಧಿಕಾರ ನೆಲೆಗಳನ್ನು ಮತ್ತು ಅನಾದಿ ಕಾಲದಿಂದ ಅನುಭವಿಸಿಕೊಂಡು ಬಂದಿರುವ ಎಲ್ಲ ಬಗೆಯ ಪ್ರಾಬಲ್ಯವನ್ನು ಹೇಗೆ ತಾನೇ/ತಾವೇ ಕೊನೆಗೊಳಿಸುವ ಇರಾದೆಯನ್ನು ಹೊಂದಲು ಸಾಧ್ಯ? ಅದನ್ನು ನಿರಂತರವಾಗಿ ಮುಂದುವರಿಸುವ ಹಠಮಾರಿತನವನ್ನು ಮಾತ್ರ ನೋಡಲು ಸಾಧ್ಯ.

ಈ ಲೇಖನ ಓದಿದ್ದೀರಾ?: ಅನುದಿನ ಚರಿತೆ | ಸಾಮರಸ್ಯ... ಹಾಗೆಂದರೇನು?

ಧರ್ಮ, ಜಾತಿ ಹಾಗೂ ಲೈಂಗಿಕತೆಯ ಕುರಿತಾದ ಗ್ರಹಿಕೆಗಳನ್ನು ಪರಿಶೀಲಿಸಿ ನೋಡಿದರೆ, ನಮಗೆ ಒಂದು ಸಂಗತಿ ಇಲ್ಲಿ ಮನವರಿಕೆಯಾಗುತ್ತದೆ. ಅದೇನೆಂದರೆ, ನಮ್ಮ ಸಮೂಹಗಳನ್ನು ನಿಯಂತ್ರಿಸಲು ಮತ್ತು ಧರ್ಮ, ಜಾತಿಗಳ ಮೂಲಕ ನಮ್ಮ ಮೇಲೆ ಪ್ರಾಬಲ್ಯವನ್ನು ಮೆರೆಯುವುದಾಗಿದೆ. ಆದರೆ, ನಮ್ಮ ಬಹುತೇಕ ದೇಶಿ ನುಡಿಗಳು ಇಂತಹ ಯಜಮಾನ್ಯ ರಚನೆಗಳನ್ನು ಮುರಿದು ಕಟ್ಟುವ ವಿನ್ಯಾಸಗಳಾಗಿಯೇ ಮೈದಾಳಿರುತ್ತವೆ. ಹಾಗಾಗಿ ದೇಶಿ ನುಡಿಗಳ ಮಹತ್ವ ಹಾಗೂ ಅವುಗಳ ಯಾವುದೇ ಅಸ್ತಿತ್ವವು ಶಿಕ್ಷಣದಲ್ಲಿ ನಿರಂತರವಾಗಿ ನೆಲೆಗೊಳ್ಳಬಾರದು ಅನ್ನುವ ಪಟ್ಟಭದ್ರ ಹಿತಾಸಕ್ತಿಗಳ ಉದ್ದೇಶವಾಗಿರುತ್ತದೆ. ಎಷ್ಟೋ ಸನ್ನಿವೇಶದಲ್ಲಿ ಭಾರತದ ನುಡಿಗಳಲ್ಲಿ ಮೈದಾಳಿದ ಸಾಹಿತ್ಯಕ ಸಂವೇದನೆಯನ್ನು ಇಂಗ್ಲಿಷ್‌ಗೆ ಅನುವಾದಿಸಿ, ಇಂಗ್ಲಿಷ್‌ನ ಮೂಲಕ ಈ ಅನುಭವವನ್ನು ಹರಡುವುದಕ್ಕೂ ಸಾಕಷ್ಟು ಪ್ರತಿರೋಧಗಳನ್ನು ಒಡ್ಡಿರುವುದನ್ನು ನೋಡುತ್ತೇವೆ. ಆದರೆ, ಆಫ್ರಿಕನ್ ಮತ್ತು ಲ್ಯಾಟಿನ್ ಅಮೆರಿಕನ್ ಸಾಹಿತ್ಯವನ್ನು ಬೋಧಿಸುವಾಗ (ಕೆಲವಾರು ಸನ್ನಿವೇಶದಲ್ಲಿ) ಇಷ್ಟೊಂದು ಪ್ರತಿರೋಧಗಳು ಎದುರಾಗುವುದಿಲ್ಲ. ಇಲ್ಲಿ ಈ ಪ್ರತಿರೋಧದ ಮಾದರಿಗಳನ್ನು ಒಂದು ರಮ್ಯ ಕಲ್ಪನೆಯ ವಿನ್ಯಾಸಗಳನ್ನಾಗಿಯೇ ಕಲಿಸಲಾಗುತ್ತದೆ ಮತ್ತು ಈ ಎಲ್ಲ ಸಾಮಾಜಿಕ ಪ್ರತಿರೋಧದ ವಿನ್ಯಾಸಗಳು ಕೇವಲ ಜನಾಂಗೀಯ ಮತ್ತು ವರ್ಗ ಪರಿಕಲ್ಪನೆಗೆ ಸಂಬಂಧಿಸಿದವು ಎಂದೂ ಬೋಧಿಸಲಾಗುತ್ತದೆ. ಅಂದರೆ ನಮ್ಮ ಜಾತಿಕೇಂದ್ರಿತ ಸಮೂಹಗಳಿಗೂ ಈ ವರ್ಗ ಮತ್ತು ಜನಾಂಗೀಯ ಕೇಂದ್ರಿತ ಸಮೂಹಗಳ ನಡುವೆ ಯಾವುದೇ ಬಗೆಯ ಕೊಡುಕೊಳ್ಳುವಿಕೆ ಇಲ್ಲವೇ ಅನುಸಂಧಾನಗಳು ಇರುತ್ತವೆ ಎನ್ನುವ ಆಯಾಮವನ್ನೇ ಇಲ್ಲಿ ಮರೆಮಾಚಲಾಗುತ್ತದೆ. ಹಾಗಾಗಿ ಇಂತಹ ಅನ್ಯ ನುಡಿಗಳ ಮೂಲಕ ಹೊರಹೊಮ್ಮುವ ಪ್ರತಿರೋಧದ ಮಾದರಿಗಳನ್ನು ಕಲಿಸುವ ಇರಾದೆ, ನಮ್ಮದೇ ನುಡಿಗಳ ಮೂಲಕ ಹೊಮ್ಮಿದ ಪ್ರತಿರೋಧದ ಮಾದರಿಗಳನ್ನು ನಮ್ಮದೇ ಶಿಕ್ಷಣದ ಭಾಗವಾಗಿ ನಾವು ಆಚರಿಸುವುದಿಲ್ಲ ಅನ್ನುವುದು ಕಹಿ ಸತ್ಯವಾದರೂ ಇದನ್ನು ಒಪ್ಪದೆ ಬೇರೆ ದಾರಿಯಿಲ್ಲ.

Image
Kannada Entity 3

ನಮ್ಮ ನುಡಿಗಳ ಮೂಲಕವೇ ನಾವು ಶಿಕ್ಷಣವನ್ನು ನೀಡುತ್ತಿದ್ದರೂ, ಅಲ್ಲಿ ಹರಡುವ ತಿಳಿವು ಬಹುತೇಕವಾಗಿ ನಮಗೆ ಹೊರತಾದ ತಿಳಿವೇ ಆಗಿರುತ್ತದೆ. ಇದು ಶಿಕ್ಷಣ ಮಾಧ್ಯಮಕ್ಕೂ ಮತ್ತು ಭಾಷಾ ವಿಷಯವನ್ನಾಗಿ ಕಲಿಸುವ ಸನ್ನಿವೇಶಕ್ಕೂ ಸಂಬಂಧಿಸಿದ ವಾಸ್ತವ ಆಗಿರುತ್ತದೆ. ನಮ್ಮ ಬಹುತೇಕ ಚಿಂತಕರು ಮತ್ತು ಶಿಕ್ಷಣ ತಜ್ಞರ ಪ್ರಕಾರ, ಶಿಕ್ಷಣ ಮಾಧ್ಯಮ ಅನ್ನುವುದು ಕೇವಲ ನುಡಿ ಬಳಕೆ ಮತ್ತು ಮಾಹಿತಿಗೆ ಸಂಬಂಧಿಸಿದ ವಿದ್ಯಮಾನವಾಗಿದೆ. ಆದರೆ, ನುಡಿ ಮೂಲಕ ಕಲಿಸುವ ಹಾಗೂ ನುಡಿಯೊಂದನ್ನು ಕಲಿಸುವುದೆಂದರೆ, ಅದು ಮಾಹಿತಿ ಮತ್ತು ನುಡಿ ಬಳಕೆಗೆ ಸಂಬಂಧಿಸಿದ ಸಂಗತಿಯಲ್ಲ ಬದಲಾಗಿ ತಿಳಿವಿನ ಆಂದೋಲನವನ್ನು ಪ್ರೇರೇಪಿಸುವ ಬಗೆಯಾಗಿದೆ. ದಿಟ ನುಡಿ ಎನ್ನುವುದು ವಿಮೋಚನೆಯ ಅಸ್ತ್ರವೇ ಸರಿ. ಆದರೆ, ಯಾವುದೇ ಅನ್ಯ ತಿಳಿವು ಮತ್ತು ಅನ್ಯ ನುಡಿಯನ್ನು ಬಳಸಿದರೆ ನಮ್ಮ ಬಿಡುಗಡೆ ಹೇಗೆ ಸಾಧ್ಯ? ನಮ್ಮ ನುಡಿಗಳನ್ನೇ ನಮ್ಮ ಬಿಡುಗಡೆಯ ಮಾಧ್ಯಮಗಳನ್ನಾಗಿ ರೂಪಿಸುವ ಹೊಣೆಗಾರಿಕೆಯನ್ನು ನಾವು ಹೊರದೇ ಹೋದರೆ, ಎಂತಹದೇ ಕ್ರಾಂತಿಕಾರಿ ಶಿಕ್ಷಣನೀತಿಯನ್ನು ರೂಪಿಸಿದರೂ, ಅದರಿಂದ ಯಾವುದೇ ಬಗೆಯ ಪ್ರಯೋಜನವು ನಮ್ಮ ಸಮುದಾಯಗಳಿಗೆ ದಕ್ಕುವುದಿಲ್ಲ. ಇಂಗ್ಲಿಶು ನುಡಿಯನ್ನು ಹೀಗೆ ವಿಮೋಚನೆಯ ವಾಹಕವನ್ನಾಗಿ ಪರಿಗಣಿಸಿ, ಅದರಿಂದ ನಾವು ಯಾಮಾರಿ ಹೋಗಿರುವುದನ್ನೂ ಈಗ ನೋಡುತ್ತಿದ್ದೇವೆ. ಇಂತಹ ಟ್ರ್ಯಾಪ್ಗಳಿಗೆ ನಾವು ಬಲಿಯಾಗುತ್ತಲೆ ಬಂದಿದ್ದೇವೆ. ಆದಾಗ್ಯೂ, ದೇಶಿ ನುಡಿಗಳ ಮೂಲಕ ನಮ್ಮ ಜ್ಞಾನಮೀಮಾಂಸೆಗಳನ್ನು ಹೇಗೆ ರೂಪಿಸಿಕೊಳ್ಳಬೇಕು ಮತ್ತು ಅವುಗಳನ್ನು ಶಿಕ್ಷಣ ಹಾಗೂ ಬದುಕಿನ ಇತರ ಬಹುಮುಖ್ಯ ವಲಯಗಳಲ್ಲಿ ಹೇಗೆ ಆಚರಣೆಗೆ ತರಬೇಕು ಅನ್ನುವುದನ್ನು ಇವತ್ತಿಗೂ ನಾವು ಮನಗಂಡಿಲ್ಲ. ಇಂತಹ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ, ಬೌದ್ಧಿಕ, ರಾಜಕೀಯ ಹಾಗೂ ಭಾಷಿಕ ವ್ಯಂಗ್ಯವನ್ನು ನಮ್ಮ ಚರಿತ್ರೆ ಉದ್ದಕ್ಕೂ ಕಾಣುತ್ತೇವೆ. ಇಂತಹ ಬಿಕ್ಕಟ್ಟಿನಲ್ಲಿ ಕನ್ನಡದ ಅಸ್ಮಿತೆಯನ್ನು ಕಾಪಾಡುವ ತಾತ್ವಿಕತೆಯನ್ನು ರೂಪಿಸುವುದಾದರೂ ಹೇಗೆ ಎನ್ನುವ ಪ್ರಶ್ನೆ ನಮಗಿಲ್ಲಿ ಎದುರಾಗುತ್ತದೆ.

ಈ ಲೇಖನ ಓದಿದ್ದೀರಾ?: ಅನುದಿನ ಚರಿತೆ | ಶಿಕ್ಷಣ ಮತ್ತು ಸತ್ಯದ ಅನುಸಂಧಾನ; ಗಮನಿಸಬೇಕಾದ ಕೆಲವು ಸಂಗತಿಗಳು

ಕನ್ನಡದ ಅಸ್ಮಿತೆಯನ್ನು ನೆಲೆಗೊಳಿಸುವ ಹಂಬಲದಿಂದ ರೂಪಿಸಿದ ಪಠ್ಯಪುಸ್ತಕಗಳಲ್ಲಿಯೇ ಇಂತಹ ತಾತ್ವಿಕ ಬಿಕ್ಕಟ್ಟುಗಳು ಇರಬೇಕಾದರೆ, ಕನ್ನಡದ ಅಸ್ಮಿತೆಯನ್ನು ಕಲ್ಪಿಸಿಕೊಳ್ಳುವಲ್ಲಿ ತಳಹದಿಯಾಗಿದ್ದ ಎಲ್ಲ ಬಗೆಯ ವೈಚಾರಿಕ, ಚಾರಿತ್ರಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಪಠ್ಯವಸ್ತು - ವಿಚಾರಗಳನ್ನು ಗಾಳಿಗೆ ತೂರಿ, ಕೇವಲ ಯಾವುದೇ ಒಂದು ಧರ್ಮ ಮತ್ತು ಕೋಮಿನ ಹಿತಾಸಕ್ತಿಗೆ ಪೂರಕವಾದ ಪಠ್ಯವಸ್ತುವನ್ನು ಮಾತ್ರ ಪಠ್ಯಪುಸ್ತಕದ ಮೂಲಕ ಪ್ರಚುರಗೊಳಿಸುವ ಹುನ್ನಾರದಿಂದ ನಮ್ಮ ಕನ್ನಡತನವನ್ನು ಕಾಪಾಡುವುದಾದರೂ ಹೇಗೆ? ಕನ್ನಡವನ್ನೇ ಉಸಿರಾಡುವ, ಕನ್ನಡವನ್ನೇ ನೆಮ್ಮಿರುವ ಸಮೂಹಗಳ ಮಕ್ಕಳನ್ನು ಸನಾತನ ಧರ್ಮದ ಸೋಂಕಿಗೆ ಈಡುಮಾಡುವ ಕೆಲಸ ಇವತ್ತಿನ ಪಠ್ಯಪುಸ್ತಕ ಪರಿಷ್ಕರಣೆಯ ಹೆಸರಲ್ಲಿ ನಡೆಯುತ್ತಿದೆ ಎಂದಾದರೆ, ಅಂತಹದೊಂದು ಅಪಚಾರವನ್ನು ಕನ್ನಡದ ಅಸ್ಮಿತೆ ಎಂದು ಹೇಗೆ ಗುರುತಿಸಲು ಸಾಧ್ಯ? ಕನ್ನಡದ ಅಸ್ಮಿತೆ ಎನ್ನುವುದು ಬಹು ಭಾಷಿಕ, ಬಹು ಸಾಂಸ್ಕೃತಿಕ, ಬಹು ಧಾರ್ಮಿಕ ಹಾಗೂ ಬಹು ವೈಚಾರಿಕ ನೆಲೆಗಳಿಂದ ಗ್ರಹಿಸಬೇಕಾದ ವಿದ್ಯಮಾನವಾಗಿದೆ. ಅದು ಏಕಶೀಲಾಕೃತಿಯಲ್ಲ ಬದಲಾಗಿ ಹಲವು ವಿಚಾರಧಾರೆ, ಬಹುಸಾಂಸ್ಕೃತಿಕ ಕುರುಹುಗಳು ಹಾಗೂ ಹಲವು ಬಗೆಯ ಆಧ್ಯಾತ್ಮಿಕ ಸ್ಮೃತಿಗಳಿಂದ ಮೈದೋರಿದ ಕನ್ನಡದ ಅಸ್ಮಿತೆಯನ್ನು, ಯಕಶ್ಚಿತ ಯಾವುದೇ ಒಂದು ಕೋಮಿನ ಹುನ್ನಾರದಿಂದ ಅಳಿಸಲು ಸಾಧ್ಯವಿಲ್ಲ. ಈ ವಾಸ್ತವವನ್ನು ಈಗಲಾದರೂ ಮನಗಂಡು, ಕನ್ನಡದ ಅಸ್ಮಿತೆ ಮತ್ತು ಸಾರ್ವಭೌಮತ್ವವನ್ನು ಕಾಪಾಡುವ ಹೊಣೆ ನಮ್ಮದಾಗಬೇಕಾಗಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್