ಅಪ್ರಮೇಯ | ʼಮಾಯೀ, ಮೇರ ಗರ್ವಾಲ ದಿಕತ್ ನಾಹಿ, ಮಾಯಿ ಕುಚು ಕರ್ʼ

Women

ಸರ್ಕಾರ ಲಾಕ್‌ಡೌನ್‌ ಗೋಶಿಸಿದಾಗ ಬೀದಿಯ ಮೇಲೆ ಬದುಕುಗಳನ್ನು ಕಟ್ಟಿಕೊಂಡ ಜನರಿಗೆ ಬೂಮಿ ಆಕಾಶ ಎಲ್ಲಾ ಅವರ ತಲೆಯ ಮೇಲೆ ಬಿದ್ದಂತಾಗಿದ್ದರು. ಸೌಮ್ಯ ಮನೇಲೂ ಅದೇ ಆತಂಕ. ಆ ಸಮಯಕ್ಕೆ ಸರಿಯಾಗಿ ಸಪ್ನಗೆ ಒಂಬತ್ತು ತಿಂಗಳು. ಅದೆಲ್ಲೋ ಇದ್ದವಳ ಗಂಡ ಮನೆಗೆ ಬಂದ. ಅವ್ನದೆಲ್ ಕೆಲ್ಸ ಮಾಡ್ತಾನೋ, ಏನ್ ಕೆಲ್ಸ ಮಾಡ್ತಾನೋ ಯಾರಿಗೂ ಗೊತ್ತಿಲ್ಲ

ದಾಸ್ರಳ್ಳಿಯಲ್ಲಿ ಒಂದು ಗ್ರಾಮದ್ ತರ ಇರೋ ಒಂದು ಏರಿಯ. ಬೆಂಗ್ಳೂರಲ್ಲಿ ತುಂಬಾ ದಾಸ್ರಳ್ಳಿಗಳಿವೆ. ಅದರಲ್ಲಿ ಒಂದೂಂತ ಇಟ್ಕಳೊಣ. ಅಲ್ಲಿ ಒಂದು ಹಮಾಮ್ ಇದೆ. ಹಮಾಮ್ ಅಂದ್ರೆ ಹಿಜ್ರಾ ಸಮುದಾಯದವರು ಒಟ್ಟಿಗೆ ಬದುಕುವ ಮನೆಗಳು. ಹಿಜ್ರಾ ಸಮುದಾಯದಲ್ಲಿ ಅವರ ಸಂಬಂದಗಳು ತಾಯಿ ಮಕ್ಕಳಂತೆ ಶುರುವಾಗಿ ಒಂದು ಇಡೀ ಮೇಟ್ರಿಲೀನಿಯಲ್ ಸಂಬಂದದ ಗೋಪುರವಾಗಿರುತ್ತದೆ. ದಾಸ್ರಳ್ಳಿಯ ಒಂದು ಬಾಗದಲ್ಲಿ ಆ ಅಮ್ಮ ತನ್ನ ಚೇಲಾಗಳ ಜೊತೆ ಇರ್ತಿದ್ಲು. ಅವರ ಹೆಸರು ಸೌಮ್ಯ, ರಮ್ಯ, ಹೇಮ, ಸರಳ ಏನು ಬೇಕಾದರೂ ಆಗಬಹುದು. ಓಕೆ. ಸದ್ಯಕ್ಕೆ ಸೌಮ್ಯ ಅಂತ ಇಟ್ಕೊಳೊಣ.

Eedina App

ಸೌಮ್ಯ ತನ್ನ ಚೇಲಗಳು ಮತ್ತು ಅವರ ಪಾರ್ಟನರ್ ಜೊತೆ ಸೇರಿ ಆ ಮನೇಲಿ ಸುಮಾರು 15 ಜನ ಬದುಕುತ್ತಿದ್ದರು. ಆ ಸಮಯ ಕೋವಿಡ್ ಶುರುವಾಗುವ ದಿನಗಳು. ಅವರ ಮನೆಯಲ್ಲಿ ಸುಮಾರು ಜನ ಚೇಲಗಳು ಸೆಕ್ಸ್ ವರ್ಕ್ ಮಾಡೋರು, ಕೆಲವರು ಮಂಕ್ತಿ ಕೇಳಕ್ಕೆ ಹೋಗೋರು. ಮಂಕ್ತಿ ಅಂದ್ರೆ ಏನು ಅಂತನಾ... ಮಂಕ್ತಿ ಜನರಿಗೆ ಆಶಿರ್ವಾದ ಮಾಡಿ ಅದಕ್ಕೆ ಹಣ ತೆಗೆದುಕೊಳ್ಳೋದು. ಸೌಮ್ಯಗೆ ಆ ಏರಿಯಾದಲ್ಲಿ ತುಂಬಾ ಒಳ್ಳೆ ಹೆಸ್ರು. ಸುಮಾರು ಜನ ಅವ್ಳನ ಸಹಾಯಕ್ಕಾಗಿ ಅರಸುತಿದ್ರು.

ಅವರ ಪಕ್ಕದ ಮನೇಲಿ ಒಂದು ಬಹಳಾ ಮುಗ್ದ ಹುಡುಗಿ, ಅದ್ಯಾವ್ದೋ ಉತ್ತರ ಬಾರತದ ರಾಜ್ಯದಿಂದ ವಲಸೆ ಬಂದು ಇಲ್ಲಿ, ಸೌಮ್ಯ ಮನೆ ಪಕ್ಕನೆ ಮನೆ ಮಾಡಿದ್ರು. ಆ ಹುಡ್ಗಿ ಒಬ್ಬನ್ ಜೊತೆ ಬಂದಿದ್ಲು ಐದರಿಂದ ಆರು ವರ್ಶದ್ ಮುಂದೆ. ಮದ್ಯಮದ್ಯ ಬರೋದು ಇವಳ ಜೊತೆ ಮಜಾ ಮಾಡೋದು ಆಮೇಲೆ ತಿಂಗುಗಟ್ಳೆ ಬರಲ್ಲ. ಇವಳು ಪ್ರಗ್ನೆಂಟಾಗಿ, ಮಗು ಆಗಿ, ಆಮೇಲೆ ಅವನಿಗೆ ಯಾವಾಗ ಬೇಕೋ ಮತ್ತೆ ಬರ್ತಾನೆ. ಇವಳು ಯಾರೂ ಇಲ್ದೇ ಒಬ್ಳೇ ಕಶ್ಟಪಡೋದನ್ನ ನೋಡಿ, ಸೌಮ್ಯಾನೇ ಅವಳಿಗೆ ತನ್ನ ಮನೇಲಿ ಕೆಲಸ ಕೊಟ್ಟು ನೋಡ್ಕೊಳ್ಳೋಕ್ಕೆ ಶುರು ಮಾಡಿದಳು. ಆ ಹುಡ್ಗಿ ಹೆಸ್ರು ಸಪ್ನ ಅಂತ.

AV Eye Hospital ad
Girls

ಮೊದಮೊದಲು ಅವಳಿಗೆ ಹಿಂದಿ ಬಿಟ್ಟು ಬೇರೆ ಬಾಶೇನೇ ಬರ್ತಿರ್ಲಿಲ್ಲ. ಅವಳು ಮಾತಾಡೋದು ಹಿಂದಿನೂ ಅಲ್ಲ. ದೇಹಾತಿ ಮಾತಾಡ್ತಾಳೆ. ಆದ್ರೆ, ಸೌಮ್ಯ ಮನೆಯವರು ಮತ್ತು ಸೌಮ್ಯ ಇವಳ ಜೊತೆ ಕನ್ನಡನೇ ಮಾತಾಡೋದು. ಅವಳೂ ಇವರ ಜೊತೆ ಅವಳ ಬಾಶೆ ಮಾತಾಡೋದು. ಆದ್ರೆ, ಅವರ ಮಾತುಗಳು ಒಬ್ಬರಿಗೊಬ್ಬರು ಅರ್ತವಾಗುತ್ತೆ. ಸೌಮ್ಯ ಮನೆಯವರು ಇವಳಿಗೆ ಅದೆಶ್ಟು ಸಾರಿ ಬುದ್ದಿ ಹೇಳಿದ್ದಾರೆ, ಅವನು ಬಂದ್ರೆ ಸೇರಿಸ್ ಬೇಡಾ ಅಂತ ಆದ್ರೂ ಇವರಿಗೆ ಅವ್ನು ಬಂದ್ಹೋಗೋದೇ ಗೊತ್ತಾಗಲ್ಲ. ಆದ್ರೆ, ಅವಳು ಮಾತ್ರ ಪ್ರೆಗ್ನೆಂಟಾಗಿರ್ತಾಳೆ. ಮಕ್ಕಳಿಲ್ಲದ ಸೌಮ್ಯ ಇವಳ ಮಕ್ಕಳನ್ನು ತನ್ನ ಮಕ್ಕಳು ಅಂತ ನೋಡ್ತಾಳೆ ಅಂತ ಹೇಳಿದ್ರೆ ತುಂಬಾ ಸ್ಟೀರಿಯೊಟೈಪ್ ಆಗುತ್ತೆ. ಹಾಗೆ ನೋಡದ್ರೆ ಸೌಮ್ಯಗೆ ಸಮುದಾಯದಲ್ಲಿ ತುಂಬಾ ಮಕ್ಕಳಿದ್ದಾರೆ. ಈ ಜಗತ್ತು ಹೇಳುವ ವೈಬವೀಕರಿಸುವಂತ ತಾಯ್ತನ ಸಪ್ನಾಗೂ ಇಲ್ಲ, ಸೌಮ್ಯಗೂ ಇಲ್ಲ. ಸೌಮ್ಯಾ ಮನೇಲಿ ಊಟ ತಯಾರಿಸಿದ್ರೆ ಅವರ ಮನೆಯವರಿಗೆ ಮಾತ್ರ ಅಲ್ಲ. ಇನ್ನೊಂದ್ ಹತ್ ಜನಕ್ಕೆ ಸೇರಿಸಿ ಮಾಡಿರ್ತಾತೆ. ಅದ್ರಲ್ಲೇ ಸಪ್ನ ಮತ್ತು ಅವಳ ಮಕ್ಳೂ ಉಣ್ತಾರೆ. ಕೋವಿಡ್ ಸಮಯದಲ್ಲೂ ಹೀಗೆ ತನ್ನ ಮನೆಯನ್ನು ತೆರೆದಿಟ್ಟಿದ್ಲೂ.

ಯಾವ ಯೋಚನೆ ಕಾಳಜಿ ಇಲ್ಲದೇ ಸರ್ಕಾರ ಲಾಕ್‌ಡೌನ್‌ ಗೋಶಿಸಿದಾಗ ಬೀದಿಯ ಮೇಲೆ ಬದುಕುಗಳನ್ನು ಕಟ್ಟಿಕೊಂಡಂತಾ ಜನರಿಗೆ ಬೂಮಿ ಆಕಾಶ ಎಲ್ಲಾ ಅವರ ತಲೆಯ ಮೇಲೆ ಬಿದ್ದಂತಾಗಿ ಕಂಗಾಲಾದರು. ಸೌಮ್ಯ ಮನೇಲೂ ಅದೇ ಆತಂಕ. ಆ ಸಮಯಕ್ಕೆ ಸರಿಯಾಗಿ ಸಪ್ನಗೆ ಒಂಬತ್ತು ತಿಂಗಳು. ಅದೆಲ್ಲೋ ಇದ್ದಂತ ಅವಳ ಗಂಡ ಮನೆಗೆ ಬಂದ. ಅವ್ನದೆಲ್ ಕೆಲ್ಸ ಮಾಡ್ತಾನೋ, ಏನ್ ಕೆಲ್ಸ ಮಾಡ್ತಾನೋ ಯಾರಿಗೂ ಗೊತ್ತಿಲ್ಲ, ಅವ್ನು ಹೇಳೋದೂ ಇಲ್ಲ. ಸೌಮ್ಯ ಹೇಳೋ ಹಾಗೆ ಅವ್ನು ʼಒಟ್ನಲ್ ಒಂದು ಗಡಿಬಿಡಿ ಗಂಡ ಗೂಂಡ.ʼ

ಈ ಲೇಖನ ಓದಿದ್ದೀರಾ?: ಅಪ್ರಮೇಯ | 'ಲೈಲಾ ನನ್ನ ಸಂಗಾತಿ, ಬಾಳಲ್ಲಿ ನನ್ನ ಜೊತೆಯೇ ಬದುಕುವ ಪ್ರೇಮಿ'

ಲಾಕ್‌ಡೌನ್‌ ಆಗಿ ಒಂದು ಹತ್ ದಿನ ಆಗಿರ್ಬೇಕು, ಒಂದು ಸಂಜೆ ಸಪ್ನ, ಸೌಮ್ಯನ ಹತ್ರ ಅತ್ಕೊಂಡು ಓಡ್ ಬಂದ್ಲು. “ಮಾಯೀ, ಮೇರ ಗರ್ವಾಲ ದಿಕತ್ ನಾಹಿ, ಮಾಯಿ ಕಚು ಕರ್ ಮಾಯಿ, ಕುಚು ಕರ್.” ನನ್ ಗಂಡ ಕಾಣಿಸ್ತಿಲ್ಲ ಏನಾರ ಮಾಡು ಅಂತ ಅಳ್ತಿದ್ಲು. ಸೌಮ್ಯ ಅವಳಿಗೆ ಸಮಾದಾನ ಮಾಡಿ ಕೇಳಿದ್ಲು, ಮತ್ತೆ ಬಿಟ್ಟೋಗಿರ್ಬೋದು ಅಂತ. ಅವ್ಳು ಹೇಳಿದ್ಲು ಎರಡು ದಿವ್ಸದ್ ಹಿಂದೆ ಮನೆಗೆ ಯಾರೋ ಒಂದ್ ಮೂರ್ನಾಕ್ ಜನ ನುಗ್ಗಿ ಅವ್ಳ ಗಂಡಂಗೆ ಯೇನೋ ದಮ್ಕಿ ಹಾಕಿದರಂತೆ. ಅವ್ನೂ ಊರ್ ಬಿಟ್ಟೋಗಕ್ಕೆ ಆಗಲ್ಲ ಅಂತ ಅಳ್ತಿದ್ಲು. ಅಶ್ಟೊತ್‌ಗೆ ಆ ಏರಿಯಾದಲ್ಲಿ ಇದ್ ಜನ ಸೌಮ್ಯ ಹತ್ರ ಕೂಗ್ತಾ ಒಡ್ಬಂದ್ರು. ಸಪ್ನ ಗಂಡನನ್ನು ಯಾರೋ ಬಂಡೆ ತಲೆಗೆ ಒಡೆದು ಚಚ್ಚಿ ಕೊಂದಿದ್ದಾರೆ ಅಂತ ಹೇಳಿದ್ರು. ಇವ್ರೆಲ್ಲಾ ಸೇರಿ ಆ ಕೆರೆ ಹತ್ರ ಬಿದ್ದಿದ್ದ ಶವವನ್ನು ನೋಡಿ ಹಾಗೇ ಶಾಕ್ ಆದ್ರು. ಇದರ ಬಗ್ಗೆ ಪೊಲೀಸರಿಗೆ ಸೌಮ್ಯಾನೇ ಕರೆ ಮಾಡಿ ಹೇಳಿದ್ರು.

ಆಹೊತ್ಗೆ ಅದ್ಯಾರೋ ಸಪ್ನನ ಅಲ್ಲಿಗೆ ಕರ್ಕೊಂಡ್ ಬಂದ್ಬಿಟ್ರು. ಸೌಮ್ಯಾ ಹಾಗೇ ಕೂಗಕ್ಕೆ ಶುರು ಮಾಡಿದ್ರು “ಅಯ್ಯೋ ಅವ್ಳನ ಕರ್ಕೊಂಡ್ ಹೋಗಿ, ಅವ್ಳಿಗ್ ತೋರಿಸ್ಬೇಡಿ, ಸಪ್ನ ಹೋಗು, ನೋಡ್ಬೇಡ. ನಾನ್ ಬರ್ತೀನಿ,” ಅಂತ ಚೀರ್ತಾ ಜೋರಾಗಿ ಅಳ್ತಿದ್ಲು. ಅವ್‌ಳ ಚೇಲಾಗಳು, ಅವ್‌ಳ ಪಾರ್ಟ್‌ನರ್‌ ಎಲ್ಲರೂ ಅವ್ಳನ ಗಟ್ಟಿಯಾಗಿ ಹಿಡ್ಕೊಂಡಿದ್ರು. ಸೌಮ್ಯ ಕೂಗಿದ್ದಕ್ಕೆ ಸಪ್ನಾಳನ್ನ ಅಲ್ಲೆ ಹಿಡ್ದಿಟ್ಕೊಂಡ್ರು. ಅವ್ಳು ದೇಹಾತಿಯಲ್ಲಿ ಏನೋ ಜೋರಾಗಿ ಕಿರಲ ದನಿಯಲ್ಲಿ ಕೂಗಿ ಕೂಗಿ ಅಳ್ತಿದ್ಲು. ಸೌಮ್ಯ ಚೇಲಾಗಳು ಕೆಲವರು ಸಪ್ನಾನ ಗಟ್ಟಿಯಾಗಿ ಅಪ್ಕೊಂಡು, ಅವ್ಳು ಆ ಬೀಕರ ದ್ರುಶ್ಯನ ನೋಡಲು ಬಿಡ್ಲಿಲ್ಲ. ಎರ್ಡು ನಿಮ್ಶದಲ್ಲಿ ಸಪ್ನ ಜ್ಯಾನ ತಪ್ಪಿ ಬಿದ್ಲು. ಮೊದ್ಲೇ ತುಂಬು ಗರ್ಬಿಣಿ, ಈ ಶಾಕು, ತನಗೆ ಈ ಊರಲ್ಲಿ ಯಾರಿಲ್ಲ ಸೌಮ್ಯಾನ ಬಿಟ್ರೆ, ಅವ್ಳು ದಾಸ್ರಳ್ಳಿಯಲ್ಲಿ ಅವಳ ಮನೆಯ 2 ರೋಡನ್ನು ಬಿಟ್ಟು ಬೇರೆಲ್ಲೂ ಹೋಗಿಲ್ಲ.

Mother
ಗುಸ್ಟಾವ್‌ ಕ್ಲಿಮ್ಟ್‌ ಕಲಾಕೃತಿ

ಜ್ಯಾನ ಬಂದ್ಕೂಡ್ಲೆ ಸಪ್ನಾಗೆ ಹೆರಿಗೆ ನೋವ್ ಶುರು ಆಯ್ತು. ಆಶ್ಟೊತ್ತಾದ್ರು ಪೊಲೀಸರು ಅಲ್ಲಿಗೆ ಬರ್ಲೇ ಇಲ್ಲ. ಸೌಮ್ಯ ಕೈಕಾಲು ನಡುಗ್ತಾ ಇತ್ತು. ಅವಳಿಗೆ ಎಲ್ಲಿತ್ತೋ ಕಣ್ಣೀರು ಜೋರಾಗಿ ಅತ್ಬಿಟ್ಲು. ಆಗ, ಅವರ ಚೇಲಾಗಳು "ಅಮ್ಮಾ, ಸಪ್ನಗೆ ಹೆರಿಗೆ ನೋವ್ ಶುರು ಆಯ್ತು,” ಅಂತ ಕೂಗಿದ್ರು. ಸೌಮ್ಯ ಒಂದು ಗಾಡವಾದ ಉಸಿರು ತೆಗೆದುಕೊಂಡು, “ಏ ಮಗಾ ಬನ್ರೆ ಎಲ್ಲಾ, ಆ ಆಟೋ ಪಕ್ರುನ ಕರೀರಿ, ಸಪ್ನನ ಕರ್ಕೊಂಡ್ ಹೋಗೋಣ” ಅಂತ ಕೂಗಿದ್ಲು. ಆಟೋಲಿ ಸಪ್ನನ ಕೂರಸ್ಕೊಂಡು ಎಂಟತ್ ಕಡೆ ಆಸ್ಪತ್ರೆ ಹುಡುಕ್ಕೊಂಡು ಹೋದ್ರು. ಕರೋನಾ ಟೈಮಾದ್ರಿಂದ ಎಲ್ಲೂ ಸೇರಿಸ್ಕೊಳ್ದೆ ಹಾಗೇ ವಾಪಸ್ ಕಳಿಸದ್ರು. ಅಶ್ಟೊತ್ಗೆ ಸಪ್ನಳ ನೀರಿನ ಚೀಲ ಒಡೆದು ಅವಳು ಜೋರಾಗೀ ಕೂಗ್ತಿದ್ಲು. ಅದೆಲ್ಲಿಂದ ಬಂತೋ ಆ ದೈರ್ಯ ಸೌಮ್ಯ ಅವರಿಗೆ ಆಟೋ ಪಕ್ರುಗೆ “ಏ ಮಗಾ ಮನೇಗ್ ನಡಿ, ಏನಾದ್ರೂ ನಾನಲ್ಲೆ ನೋಡ್ತೀನಿ, ನನ್ ಹೊಣೆ, ಹೆಂಗಿದ್ರೂ ಆ ನಾಲಾಯಕ್ ಗಂಡ ನೋಡ್ಕೊತಿರ್ಲಿಲ್ಲ, ಈಗ ಸತ್ತ. ಇನ್ಮುಂದೆ ಇವ್ಳು ನಮ್ಮನೇಲೇ ಇರ್ಲಿ” ಅಂತ ಹೇಳಿದ್ಲು.

ಮನೇಲಿ ಅವರ ಎಲ್ಲಾ ಚೇಲಾಗಳು ಸೇರಿ ಬಿಸಿ ನೀರ್ ತಗೋಂಡು ಸಪ್ನಗೆ ಹೆರಿಗೆ ಮಾಡ್ಸಿದ್ರು. ಹೆಣ್ ಮಗು. ಮದಲಸಾರಿ ಆಚೆ ಬಂದು ಅತ್ತಾಗ ಆ ಮಗು ಸೌಮ್ಯಾ ಕೈಲಿತ್ತು. ಸೌಮ್ಯ ಮಗುನ ಕೈಲಿಟ್ಕೊಂಡು ತನ್ನ ಗುರುನ ನೆನಪಿಸಿಕೊಂಡಾಗ, ಅವರ ಕಣ್ಣಲ್ಲಿ ತಾನರಿಯದಂತೇ ನೀರು ಬಂತು. ಹಾಗೇ ಕೈಲಿದ್ದ ಮಗೂನ ಕ್ಲೀನ್ ಮಾಡಿ ಬೆಚ್ಚಗೆ ಒಂದು ಟವಲ್ ಸುತ್ತಿ ಅಪ್ಕೊಂಡ್ಲು. ‘ನಮ್ಮವರು ಯಾರ್ಯಾರಾಗ್ತಾರೆ ಯಾರಿಗ್ ಗೊತ್ತು? ಇದ್ರಲ್ಲಿ ಹೆಣ್ಣೇನು ಹಿಜ್ರಾ ಏನು, ಮನುಶ್ಯರು ಅಶ್ಟೆ, ಈಗಿರ್ತೀವಿ, ನಾಳೆ ಎಲ್ಲೋ’ ಅಂತ ಒಂದು ಯೋಚ್ನೆ ಕಣ್ಮುಂದೆ ಹಾದು ಹೋಯ್ತು. ಒಂದು ನಿಟ್ಟುಸಿರು ಬಿಟ್ಟು ಸಪ್ನ ಕೈನ ಗಟ್ಟಿ ಹಿಡಿದರು ಸೌಮ್ಯ.

'ಎಲ್ಲರ ಕನ್ನಡ' ಎಂದು ಹೇಳಿಕೊಳ್ಳಲಾಗುವ, ಮಹಾಪ್ರಾಣ ಬಳಕೆ ಇಲ್ಲದ ಆಡುಮಾತಿನ ಬರಹ ರೂಪವಿದು
ನಿಮಗೆ ಏನು ಅನ್ನಿಸ್ತು?
2 ವೋಟ್
eedina app