ಅನುದಿನ ಚರಿತೆ | ತರಗತಿಯಿಂದ ದೂರವೇ ಉಳಿಯುವ ಆದರ್ಶಗಳು

ಶಿಕ್ಷಣ ಎನ್ನುವ ಕಲ್ಪನೆ ಅನಾದಿ ಕಾಲದಿಂದ ಚಾಲ್ತಿಯಲ್ಲಿದ್ದರೂ, ಅದೊಂದು ಸಾರ್ವತ್ರಿಕ ವಿದ್ಯಮಾನವಾಗಿ ರೂಪುಗೊಂಡಿರಲಿಲ್ಲ. ಆದರೆ ಈಗ... ಸಾಮಾಜಿಕ ಪರಿವರ್ತನೆಗಾಗಿ ಚಿಂತಿಸಿದ ಮತ್ತು ಸಂಸ್ಕೃತಿ ನಿರ್ಮಾಣಕ್ಕಾಗಿ ಪರಿತಪಿಸಿದ ಚಿಂತಕರನ್ನು ಶೈಕ್ಷಣಿಕ ಆವರಣದಿಂದಲೇ ಹೊರಗಿಡುವ ಹುನ್ನಾರಗಳು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿವೆ!

ಸಮುದಾಯಗಳ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಬೆಳವಣಿಗೆಯಲ್ಲಿ ಶಿಕ್ಷಣದ ಪಾತ್ರ ಅಗಾಧವಾಗಿದೆ. ಈ ಮಾತನ್ನು ಹೇಳಿದ ಕೂಡಲೇ ನಮ್ಮಲ್ಲೊಂದು ಪ್ರಶ್ನೆ ಮೂಡಬಹುದು. ಅದೇನೆಂದರೆ, ಶಿಕ್ಷಣದ ಒತ್ತಾಸೆ ಇಲ್ಲದೆಯೂ ಎಷ್ಟೊಂದು ಸಂಸ್ಕೃತಿಗಳು ಮತ್ತು ನಾಗರಿಕತೆಗಳು ಕಾಲಕಾಲಕ್ಕೆ ವಿಕಾಸ ಹೊಂದಿಲ್ಲವೇ? ದಿಟ ಸಮುದಾಯಗಳು ತಮ್ಮ ಚೈತನ್ಯವನ್ನು ಕಾಪಾಡಿಕೊಳ್ಳಲು ಶಿಕ್ಷಣವನ್ನು ಇಡಿಯಾಗಿ ಆಶ್ರಯಿಸಿಕೊಂಡಿರಲಿಲ್ಲ. ಹಾಗಂತ, ಶಿಕ್ಷಣದ ಅವಶ್ಯಕತೆಯೇ ಇಲ್ಲವೆಂದು ಹೇಳಲು ಸಾಧ್ಯವಿಲ್ಲ. ಎಲ್ಲರನ್ನೂ ಗೌರವಿಸಬೇಕು, ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು, ಯಾವುದೇ ಬಗೆಯ ತಾರತಮ್ಯವನ್ನು ಆಚರಿಸಬಾರದು ಹಾಗೂ ಯಾರೂ ಮೇಲೂ ಅಲ್ಲ ಕೀಳೂ ಅಲ್ಲ ಅನ್ನುವಂತಹ ವೈಚಾರಿಕ ವಿವೇಕವನ್ನು ಮೂಡಿಸುವಂತಹ ಪ್ರಜ್ಞೆಗೆ ಇವತ್ತು ಸಾಕ್ಷಿಯಾಗಿರುವುದು ಸಂವಿಧಾನ.

Eedina App

ಇಂತಹ ಸಂವಿಧಾನದ ಪರಿಕಲ್ಪನೆ, ಪ್ರಜಾಸತ್ತಾತ್ಮಕ ಆಚರಣೆಗಳು ಹಾಗೂ ಸಾಮಾಜಿಕ ಅನುಸಂಧಾನದ ಬಗೆಗಳು ಸಾರ್ವತ್ರಿಕವಾಗಿ ಮೈದೋರಲು ಮುಖ್ಯ ಪ್ರೇರಣೆಯೇ ಶಿಕ್ಷಣ. ಸಮೂಹಗಳನ್ನು ಮುನ್ನಡೆಸುವುದಕ್ಕೆ ಬೇಕಾಗುವ ಕ್ರಿಯಾಯೋಜನೆಗಳ ನೀಲನಕ್ಷೆಯನ್ನು ಶಿಕ್ಷಣದ ಗುರಿ ಮತ್ತು ದಾರಿಯನ್ನಾಗಿ ನಂಬಿಕೊಂಡಿದ್ದನ್ನೂ ಆಧುನಿಕ ಸನ್ನಿವೇಶದಲ್ಲಿ ನೋಡುತ್ತೇವೆ. ಶಿಕ್ಷಣ ಸಾಮಾಜಿಕ ವ್ಯವಸ್ಥೆಯ ಬಹುಮುಖ್ಯ ವಿದ್ಯಮಾನವಾದ ಮೇಲೆ ಅದನ್ನು ಪರಿಭಾವಿಸುವ ವಿಧಾನದಲ್ಲಿಯೇ ಸಾಕಷ್ಟು ಬದಲಾವಣೆಗಳು ಏರ್ಪಟ್ಟವು. ಅಂದರೆ, ಸಾಮಾಜಿಕ ಕ್ರಾಂತಿಗೆ ಮತ್ತು ಸಾಂಸ್ಕೃತಿಕ ಮೇಲ್ಮೆಯನ್ನು ಸಾಧಿಸುವುದಕ್ಕೆ ಹಾಗೂ ಸಮೂಹಗಳನ್ನು ಸಂವೇದನಾಶೀಲಗೊಳಿಸುವ ಮಾಧ್ಯಮವನ್ನಾಗಿ ಶಿಕ್ಷಣವನ್ನು ಅರ್ಥೈಸಲಾಯಿತು. ಆದರೆ, ಈ ವೈಚಾರಿಕತೆಯನ್ನು ಎತ್ತಿ ಹಿಡಿಯುವ ಭರವಸೆಯಾಗಲೀ ಇಲ್ಲವೇ, ಪ್ರಯತ್ನಗಳಾಗಲೀ ಸಾಂಸ್ಥಿಕ ಸ್ವರೂಪದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ನೆಲೆಗೊಳ್ಳಲಿಲ್ಲ.

ಆಧುನಿಕ ಸಮಾಜಗಳ ನಿರ್ಮಾಣದಲ್ಲಿ ಶಿಕ್ಷಣದ ಪಾತ್ರ ಎಷ್ಟೊಂದು ಮಹತ್ತರವಾದದ್ದು ಎಂಬ ವಾಸ್ತವವನ್ನು ಅರಿಯಲು ಚರಿತ್ರೆ ಇವತ್ತು ನಮ್ಮ ಕಣ್ಣೆದುರಿಗಿದೆ. ಹಲವಾರು ಮಹನೀಯರು ಶಿಕ್ಷಣದ ಒತ್ತಾಸೆಯಿಂದ ಇಡೀ ಸಮೂಹಗಳನ್ನೇ ಪರಿವರ್ತಿಸುವ ದಾರ್ಶನಿಕರಾಗಿ ಹೊರಹೊಮ್ಮಿದ್ದಾರೆ. ಶಿಕ್ಷಣಕ್ಕೆ ತೆರೆದುಕೊಂಡ ಮೇಲೆಯೇ ಸಮೂಹಗಳ ಆಂತರ್ಯದಲ್ಲಿ ನೆಲೆಯೂರಿದ್ದ ಹಲವು ಅನಿಷ್ಟಗಳನ್ನು ಅನಿಷ್ಟಗಳನ್ನಾಗಿಯೇ ಗುರುತಿಸಲು ಸಾಧ್ಯವಾದದ್ದು ಶಿಕ್ಷಣವನ್ನು ಪಡೆದಂಥ ಆಧುನಿಕ ಪ್ರವರ್ತಕರಿಂದ ಎಂದು ಹೇಳಬಹುದು.

AV Eye Hospital ad
Ambedkar

ಗಾಂಧಿ, ಅಂಬೇಡ್ಕರ್, ಮಾರ್ಟಿನ್ ಲೂಥರ್ ಕಿಂಗ್, ಮಂಡೆಲಾ ಹಾಗೂ ಕುವೆಂಪು ಅವರಂತಹ ವಿರಳ ದಾರ್ಶನಿಕರು ಹೊರಹೊಮ್ಮಲು ಕೂಡ ಇದೇ ಶಿಕ್ಷಣವೇ ಕಾರಣ. ಒಟ್ಟಿನಲ್ಲಿ ಸಾಂಸ್ಕೃತಿಕ ವಿಕಾಸಕ್ಕೆ ಮತ್ತು ಸಾಮಾಜಿಕ ಕ್ರಾಂತಿಗೆ ಶಿಕ್ಷಣ ಎಂಬುದನ್ನು ಪ್ರಮಾಣವನ್ನಾಗಿ ನಿರ್ಣಯಿಸಲಾಗಿತ್ತು. ಈ ನಿರ್ಣಯಕ್ಕೆ ಪೂರಕವಾಗಿ ಹಲವಾರು ಮಹನೀಯರು ಜಗತ್ತಿನಾದ್ಯಂತ ಹೊರಹೊಮ್ಮಿದರು. ಇವರೆಲ್ಲರೂ ಬಹುತೇಕವಾಗಿ ಸಮುದಾಯಗಳ ಬಿಡುಗಡೆಗಾಗಿಯೇ ಹೋರಾಡಿದಂತಹ ವಿವೇಕಶೀಲರೂ ಮತ್ತು ಚಿಂತಕರು.

ಹತ್ತೊಂಬತ್ತನೇ ಶತಮಾನದ ಉತ್ತರಾರ್ಧ ಮತ್ತು ಇಪ್ಪತ್ತನೇ ಶತಮಾನದ ಪೂರ್ವಾರ್ಧದಲ್ಲಿ ಹೊರಹೊಮ್ಮಿದ ಬಹುತೇಕ ಚಿಂತಕರು, ಕವಿಗಳು, ರಾಜಕೀಯ ಧುರೀಣರು, ಸಾಮಾಜಿಕ ಹೋರಾಟಗಾರರು ಈ ಸಾಲಿಗೆ ಸೇರುತ್ತಾರೆ. ಇವರೆಲ್ಲರ ಬೆಳವಣಿಗೆಯ ಹಿಂದಿನ ಬಹುಮುಖ್ಯ ಪ್ರೇರಣೆಯೇ ಶಿಕ್ಷಣವಾಗಿದೆ. ಆಧುನಿಕ ಭಾರತಕ್ಕೆ ಸಂಬಂಧಿಸಿದ ಬೆಳವಣಿಗೆಯಲ್ಲಿ ಇಂಥವರ ಪಾಲುದಾರಿಕೆ ಅತ್ಯಂತ ಹೆಚ್ಚಿನ ಮಟ್ಟದ್ದಾಗಿದೆ. ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿಯಲ್ಲಿದ್ದಂತಹ ಹಲವರು, ಇದೇ ದಾರಿಯಲ್ಲಿ ಕ್ರಮಿಸಿದವರು. ಬದುಕಿನ ಉದ್ದೇಶವನ್ನೇ ವ್ಯಾಪಕಗೊಳಿಸಿದ ಶ್ರೇಯಸ್ಸು ಈ ಎಲ್ಲ ಮೇರು ವ್ಯಕ್ತಿಗಳಿಗೆ ಸಲ್ಲುತ್ತದೆ. ಏಕೆಂದರೆ, ಸಮೂಹಗಳ ಸಂಸ್ಕೃತಿ ನಿರ್ಮಾಣ ಪ್ರಕ್ರಿಯೆಯಲ್ಲಿ ಇವರು ಪಾಲ್ಗೊಂಡಿದ್ದಾರೆ. ಇವರ ಭಾಗವಹಿಸುವಿಕೆಗೆ ಸಿಕ್ಕಂತಹ ಪ್ರೇರಣೆ ಯಾವುದು ಎನ್ನುವ ಪ್ರಶ್ನೆ ನಮಗೆ ಇಲ್ಲಿ ಎದುರಾಗಬಹುದು.

ಈ ಪ್ರೇರಣೆ ಕೇವಲ ಶಿಕ್ಷಣದಿಂದ ಮಾತ್ರ ಒಡಮೂಡಿದ್ದು ಎಂದು ಸಾರಾಸಗಟಾಗಿ ಹೇಳಲು ಸಾಧ್ಯವಿಲ್ಲ. ಆದರೆ, ಶಿಕ್ಷಣದ ಒತ್ತಾಸೆ ಇಲ್ಲದೆಯೇ ದಾಸ್ಯದಿಂದ ಬಿಡುಗಡೆಯನ್ನು ಪಡೆಯಬೇಕು ಎನ್ನುವ ಹಂಬಲ ಉಂಟಾಗಲೂ ಸಾಧ್ಯವಿಲ್ಲ. ಅಂದರೆ, ವ್ಯಕ್ತಿಗಳಲ್ಲಿ ಒಡಮೂಡಿದ ಬಿಡುಗಡೆಯ ಪ್ರಜ್ಞೆಯು, ಸಾಮುದಾಯಿಕ ಪ್ರಜ್ಞೆಯ ಸ್ವರೂಪವನ್ನು ಪಡೆದುಕೊಳ್ಳುವುದಕ್ಕೆ ಅವಕಾಶಗಳು ಏರ್ಪಟ್ಟಿರುವುದು ಶಿಕ್ಷಣದಿಂದಲೇ ಎಂಬುದನ್ನು ವಾಸ್ತವದಲ್ಲಿ ಕಾಣುತ್ತೇವೆ.

Dalit Protest

ಹಾಗಾಗಿಯೇ, ಅಂಬೇಡ್ಕರ್ ಅವರು, 'ಶಿಕ್ಷಣ, ಹೋರಾಟ ಹಾಗೂ ಸಂಘಟನೆ' ಎಂಬಂತಹ ತ್ರಿವಳಿ ತತ್ವಗಳನ್ನು ರೂಪಿಸಿದರು ಹಾಗೂ ಅದನ್ನೊಂದು ಬಿಡುಗಡೆಯ ತಾತ್ವಿಕ ಚೌಕಟ್ಟನ್ನಾಗಿಯೂ ನಿರ್ಮಿಸಿದರು. ಈ ಚೌಕಟ್ಟನ್ನು ರೂಪಿಸಿದ ಕೂಡಲೇ ಎಲ್ಲ ದಲಿತ ಮತ್ತು ಹಿಂದುಳಿದ ಸಮೂಹಗಳು ವಿಮೋಚನೆಯನ್ನು ಪಡೆದುಕೊಳ್ಳಲು ಸಾಧ್ಯವಾಯಿತೇ ಎಂದು ಯಾರಾದರೂ ಪ್ರಶ್ನಿಸಬಹುದು. ಆದರೆ, ಈ ತಾತ್ವಿಕತೆಯನ್ನು ಸಾಕಾರಗೊಳಿಸುವ ಶೈಕ್ಷಣಿಕ ನೀತಿಗಳನ್ನು, ಇಲ್ಲವೇ ಯೋಜನೆಗಳನ್ನು ರೂಪಿಸಿ ಎಷ್ಟರಮಟ್ಟಿಗೆ ಅನುಷ್ಠಾನಗೊಳಿಸಲಾಗಿದೆ ಎನ್ನುವುದು ಅಷ್ಟೇ ಮುಖ್ಯವಾದ ಪ್ರಶ್ನೆ.

ಇದೇ ಮಾತು ಕುವೆಂಪು ಅವರ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ...' ಎನ್ನುವ ತಾತ್ವಿಕ ನೋಟಕ್ಕೂ ಹೇಳಬಹುದು. ಅಂಬೇಡ್ಕರ್ ಮತ್ತು ಕುವೆಂಪು ಅವರುಗಳ ಈ ತಾತ್ವಿಕ ನೋಟಕ್ರಮಗಳಲ್ಲಿ ಸಾಮ್ಯತೆಗಳು ಇರುವುದು ಗಮನಾರ್ಹ. ಶಿಕ್ಷಣದ ಮೂಲಕ ಏರ್ಪಡಬಹುದಾದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಣಾಮಗಳ ಬಗೆಗೆ ಇವರಿಬ್ಬರೂ ಹೆಚ್ಚು ಭರವಸೆಯನ್ನು ಉಳ್ಳವರಾಗಿರುವುದು ಇವರ ಈ ತಾತ್ವಿಕ ಚೌಕಟ್ಟುಗಳಿಂದಲೇ ಗೊತ್ತಾಗುತ್ತದೆ. ಶಿಕ್ಷಣವನ್ನು ಕೇವಲ ಸಾಕ್ಷರತೆಗೆ ಪೂರಕವಾದ ಚಟುವಟಿಕೆಗಳಿಗೆ ಮಾತ್ರ ಸೀಮಿತಗೊಳಿಸಿ, ಸಾಮಾಜಿಕ ವಿವೇಕವನ್ನು ರೂಪಿಸುವ ಹಾಗೂ ಸಾಂಸ್ಕೃತಿಕ ಎಚ್ಚರವನ್ನು ನೆಲೆಗೊಳಿಸುವ ಕೈಂಕರ್ಯವನ್ನು ಇಲ್ಲಿ ಕಡೆಗಣಿಸಲಾಗಿದೆ.

ಆದ್ದರಿಂದ, ಸಾಮಾಜಿಕ ಪರಿವರ್ತನೆಗಾಗಿ ಚಿಂತಿಸಿದ ಮತ್ತು ಸಂಸ್ಕೃತಿ ನಿರ್ಮಾಣಕ್ಕಾಗಿ ಪರಿತಪಿಸಿದ ಚಿಂತಕರನ್ನು ಶೈಕ್ಷಣಿಕ ಆವರಣದಿಂದಲೇ ಹೊರಗಿಡುವ ಹುನ್ನಾರಗಳು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿವೆ. ಶಿಕ್ಷಣ ಎನ್ನುವ ಕಲ್ಪನೆ ಅನಾದಿ ಕಾಲದಿಂದ ಚಾಲ್ತಿಯಲ್ಲಿದ್ದರೂ, ಅದೊಂದು ಸಾರ್ವತ್ರಿಕ ವಿದ್ಯಮಾನವಾಗಿ ರೂಪುಗೊಂಡಿರಲಿಲ್ಲ. ಕೆಲವೇ ವರ್ಗ, ಮತ ಹಾಗೂ ಧರ್ಮಗಳಿಗೆ ಮಾತ್ರ ಸೀಮಿತವಾಗಿದ್ದ ಕಾಲದಲ್ಲಿ, ಶಿಕ್ಷಣವನ್ನು ಲೋಕೋದ್ಧಾರದ ವಿನ್ಯಾಸವನ್ನಾಗಿ ಪರಿಭಾವಿಸಿರಲಿಲ್ಲ. ಏಕೆಂದರೆ, ಶಿಕ್ಷಣವನ್ನು ಕೇವಲ ಸಾಕ್ಷರತೆಯನ್ನು ಪಡೆಯುವ, ಆ ಮೂಲಕ ತಮ್ಮ  ಸ್ಮೃತಿಗಳನ್ನು ತಮ್ಮದೇ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಮಾತ್ರ ರವಾನಿಸುವ, ಈ ಮುಖೇನ ಬೇರೆ ಸಮೂಹಗಳನ್ನು ಇನ್ನಷ್ಟು ಕತ್ತಲೆಗೆ ದೂಡುವ ಹಾಗೂ ತಮ್ಮದೇ ಪ್ರತ್ಯೇಕತೆಯನ್ನು ಕಾಪಾಡುವ ವಿಧಾನವನ್ನಾಗಿ ರೂಪಿಸಿಕೊಳ್ಳಲಾಗಿತ್ತು.

ಈ ಲೇಖನ ಓದಿದ್ದೀರಾ?: ಅನುದಿನ ಚರಿತೆ | ಗೊತ್ತು-ಗುರಿ ಇಲ್ಲದ ಶಿಕ್ಷಣ ಮತ್ತು ಸ್ವಾತಂತ್ರ್ಯದ ಕಲ್ಪನೆ

ಶಿಕ್ಷಣವನ್ನು ಶೋಷಣೆಯನ್ನು ಉತ್ತೇಜಿಸುವ ಅಸ್ತ್ರವನ್ನಾಗಿ ಬಳಸಲಾಗುತ್ತಿತ್ತು. ವೇದ, ಉಪನಿಷತ್ತು ಹಾಗೂ ಸ್ಮೃತಿಗಳ ಓದಿನ ಪರಿಣಾಮದಿಂದ ಒಡಮೂಡಿದ ಅರಿವು ಎಷ್ಟಿದ್ದರೂ, ಶಿಕ್ಷಣದಿಂದ ಪ್ರಯೋಜನವನ್ನು ಪಡೆಯುತ್ತಿದ್ದ ಸಮೂಹಗಳು ತಮ್ಮ ಪೂರ್ವಗ್ರಹಗಳ ಹಿಡಿತವನ್ನು ಸಡಿಲಿಸಿರಲಿಲ್ಲ. ಹಾಗಾಗಿ, ಇವರಲ್ಲಿ ತಮ್ಮ ಸಂಸ್ಕೃತಿ ಮಾತ್ರ ಶ್ರೇಷ್ಠ ಎನ್ನುವ ಅಹಂ ನೆಲೆಗೊಂಡಿತ್ತು. ತತ್ಪರಿಣಾಮ ಬೇರೆಯವರ ಸಂಸ್ಕೃತಿ ಇವರಿಗೆ ಅಸಂಸ್ಕೃತಿಯಾಗಿ ಕಾಣುತ್ತಿದ್ದವು. ಇದಕ್ಕೆ ಮೂಲ ಕಾರಣವೇ, ಇವರು ತಮ್ಮ ಸಂಸ್ಕೃತಿ ಮತ್ತು ಧರ್ಮವನ್ನು ಮಾತ್ರ ಸ್ವಯಂಪೂರ್ಣವೆಂದು ಭಾವಿಸಿಕೊಂಡಿದ್ದರು. ಕೆಲವೇ ಧರ್ಮ ಮತ್ತು ಸಂಸ್ಕೃತಿಗಳು ಸ್ವಯಂಪೂರ್ಣವಾದಷ್ಟೂ ಬೇರೆ ಧರ್ಮ, ಸಂಸ್ಕೃತಿಗಳನ್ನು ಅಸಹನೀಯವಾಗಿ ಕಾಣುವುದಷ್ಟೇ ಅಲ್ಲ, ಅವುಗಳನ್ನು ಆಯಾ ಸಮೂಹದ ವೈಯಕ್ತಿಕ ಬದುಕಿನ ರೂಪಕಗಳನ್ನಾಗಿ ರೂಪಿಸಲಾಗುತ್ತದೆ.

ಸಂಸ್ಕೃತಿಯ ಮೂಲಕ ರೂಪಿಸಿದ ಮೇಲು-ಕೀಳು ಎಂಬಂತಹ ಸಾಮಾಜಿಕ ರಚನೆಗಳನ್ನು ಶಾಸ್ತ್ರೀಯವಾಗಿ ಮತ್ತು ಧಾರ್ಮಿಕವಾಗಿ ಸಮ್ಮತಿಸಲಾಗಿತ್ತು. ಇಂತಹ ಚಾರಿತ್ರಿಕ ಹುನ್ನಾರ ಮತ್ತು ಸಾಮಾಜಿಕ ಶೋಷಣೆಗಳಿಂದ ವಿಮೋಚನೆಯನ್ನು ಪಡೆಯಲು ಶಿಕ್ಷಣವನ್ನೇ ಮಾಧ್ಯಮವನ್ನಾಗಿ ಪರಿವರ್ತಿಸಿದ ಮೇಲೆ, ಶಿಕ್ಷಣದ ಸ್ವರೂಪ ಹಾಗೂ ಪರಿಕಲ್ಪನೆಯಲ್ಲಿ ಮಾದರಿ ಪಲ್ಲಟ (ಪ್ಯಾರಡೈಮ್ ಶಿಫ್ಟ್) ಉಂಟಾಯಿತು. ಸಮುದಾಯಗಳ ಏಳಿಗೆ ಮತ್ತು ವಿಮೋಚನೆಗೆ ಶಿಕ್ಷಣದಲ್ಲಿ ಪರಿಹಾರಗಳನ್ನು ಕಂಡುಕೊಳ್ಳುವ ತುಡಿತ ಹೆಚ್ಚಾಯಿತು.

ಆಧುನಿಕ ಕಾಲಘಟ್ಟದಲ್ಲಿ ಬಹುತೇಕವಾಗಿ ಶಿಕ್ಷಣದ ಗುರಿ ಮತ್ತು ದಾರಿಗಳನ್ನು ಗುರುತಿಸುವುದರ ಹಿಂದಿನ ತಾತ್ವಿಕತೆಯೇ ಇದಾಗಿತ್ತು. ಅಂದರೆ, ಶತಮಾನಗಳಿಂದ ಶೋಷಣೆ, ದೌರ್ಜನ್ಯ ಹಾಗೂ ಬದುಕಿನ ಅವಕಾಶಗಳಿಂದ ವಂಚಿತವಾಗಿದ್ದ ಸಮೂಹಗಳನ್ನು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಸಬಲೀಕರಿಸುವ ಇರಾದೆಯನ್ನು ಹೊಂದಲಾಗಿತ್ತು. ಹಾಗಾಗಿಯೇ, ಶಿಕ್ಷಣವನ್ನು ವ್ಯಾಖ್ಯಾನಿಸುವ ಮತ್ತು ಅದರ ನೀತಿಗಳನ್ನು ನಿರೂಪಿಸುವ ಕ್ರಮದಲ್ಲಿ ಈ ಎಲ್ಲ ಆಶೋತ್ತರಗಳನ್ನು ನೆಲೆಗೊಳಿಸುವ ಇರಾದೆಯನ್ನು ನೋಡುತ್ತೇವೆ. ಈ ನಿಲುವುಗಳನ್ನು ವಿಮರ್ಶಿಸುವ ಇಲ್ಲವೇ ಮರು ಮೌಲ್ಯಮಾಪನ ಮಾಡುವುದು ನನ್ನ ಉದ್ದೇಶವಲ್ಲ.

Education

ಬದಲಾಗಿ, ಶಿಕ್ಷಣದ ಮೂಲಕ ಸಾಧಿಸಬೇಕೆಂದು ನಾವು ರೂಪಿಸಿಕೊಂಡಂತಹ ನೀತಿಗಳು ಹಾಗೂ ಗುರಿಗಳು ಏನಾದವು ಹಾಗೂ ಅವುಗಳನ್ನು ಸಾಧಿಸುವಲ್ಲಿ ಉಂಟಾಗಿರುವ ಬಿಕ್ಕಟ್ಟುಗಳು ಯಾವುವು ಅನ್ನುವುದನ್ನು ನಿಗಾವಹಿಸಿ ನೋಡಿದರೆ, ಶಿಕ್ಷಣವನ್ನು ಹೇಗೆ ಶೋಷಣೆಯ ಪ್ರಬಲ ಅಸ್ತ್ರವನ್ನಾಗಿ ಬದಲಾಯಿಸಲಾಗಿದೆ ಎಂಬುದನ್ನು ಗಮನಿಸಬಹುದು. ಈ ಮಾತಿನ ತಾತ್ಪರ್ಯ ಏನೆಂದರೆ ಶಿಕ್ಷಣದ ಮೂಲ ಆಶಯಗಳನ್ನು, ಕಾರ್ಪೊರೇಟ್ ಹಾಗೂ ಬಂಡವಾಳಶಾಹಿ ಹಿತಾಸಕ್ತಿಗಳಿಗೆ ಈಡುಮಾಡಲಾಗಿದೆ. ಸಾಮಾಜಿಕ ಬದ್ಧತೆಯನ್ನೇ ಪ್ರಧಾನ ಗುರಿಯನ್ನಾಗಿಸಿಕೊಳ್ಳಬೇಕಿದ್ದ ಶಿಕ್ಷಣವು, ಇವತ್ತು ಬಹುತೇಕವಾಗಿ ಸಾಮಾಜಿಕ ವಿರೋಧಿ ನಿಲುವುಗಳನ್ನು ಉತ್ತೇಜಿಸುವ ವಿದ್ಯಮಾನವಾಗಿದೆ.

ಕೋಮುವಾದಿ ಮನೋಧರ್ಮವು ಶಿಕ್ಷಣದ ಆಶಯವಾಗಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಸಮಾಜ, ಸಂಸ್ಕೃತಿ, ಸಾಹಿತ್ಯ, ವಿಜ್ಞಾನ ಹಾಗೂ ದೈನಂದಿನ ಬದುಕಿನ ಆಶೋತ್ತರಗಳು, ಶೈಕ್ಷಣಿಕ ತತ್ವಗಳಾಗಿ ನೆಲೆಗೊಳ್ಳುವ ಬದಲಾಗಿ ಜಾತಿ, ಧರ್ಮ, ಲಿಂಗಗಳ ಮೂಲಕ ಸಾಮಾಜಿಕ ಪ್ರತ್ಯೇಕತೆ ಹಾಗೂ ಒಡಕನ್ನು ಸ್ಥಿರಿಕರಿಸಲಾಗುತ್ತಿದೆ. ಇದು ಕೇವಲ ಪ್ರತ್ಯೇಕತೆಯನ್ನು ಉಂಟುಮಾಡುವ ಬಗೆಯಲ್ಲ. ಬದಲಾಗಿ ಹಿಂಸೆಯನ್ನು ಕಾಯಂಗೊಳಿಸುವ ಪ್ರಮುಖ ವಿಧಾನವಾಗಿದೆ. ಅಂದರೆ, ಹಿಂಸೆಯನ್ನು ಬಲಪಡಿಸುವುದಕ್ಕೆ ಶಿಕ್ಷಣವನ್ನು ಆಯುಧವನ್ನಾಗಿ ಆಯ್ಕೆ ಮಾಡಲಾಗಿದೆ. ಏಕೆಂದರೆ, ಹಿಂಸಯೆನ್ನುವುದು ಸಾಮಾಜಿಕ ಪ್ರವೃತ್ತಿಯಾದಾಗ ಅದು ತೊಡುವ ವೇಷಗಳಿಗೆ ಲೆಕ್ಕವಿಲ್ಲ (ಕುರ್ತಕೋಟಿ: 2006). ಹಿಂಸೆಯನ್ನು ಪ್ರಚೋದಿಸುವುದಕ್ಕೆ ಶಿಕ್ಷಣದ ವೇಷವನ್ನು ಧರಿಸಲಾಗುತ್ತಿದೆ.

ಸಾಮಾಜಿಕ ಐಕ್ಯತೆ ಮತ್ತು ರಾಜಕೀಯ ಒಗ್ಗಟ್ಟನ್ನು ನೆಲೆಗೊಳಿಸುವ ಬದಲಾಗಿ ನಮ್ಮಲ್ಲಿ ಈಗಾಗಲೇ ಮಡುಗಟ್ಟಿದ ಹಿಂಸೆ, ಸಾಮಾಜಿಕ, ಧಾರ್ಮಿಕ ಪ್ರತ್ಯೇಕತೆಯನ್ನು ಶಿಕ್ಷಣದ ಮೂಲಕವೇ ಇನ್ನಷ್ಟು ಬಲಪಡಿಸಲಾಗುತ್ತಿದೆ. ಯಾವ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ನೆಲೆಯಿಂದ ನಾವು ಶಿಕ್ಷಣವನ್ನು ನಮ್ಮ ಬದುಕಿನ ಏಳಿಗೆಯ ಮಾಧ್ಯಮವೆಂದು ಭಾವಿಸಲಾಗಿತ್ತೋ, ಆಯಾ ನೆಲೆಗಳಿಂದಲೇ ನಮ್ಮೊಳಗಿನ ಒಡಕನ್ನು ಬಿಗಡಾಯಿಸಲಾಗುತ್ತಿದೆ. ಈ ಒಡಕು ಸಾಮಾಜಿಕ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ಗಟ್ಟಿ ಧ್ವನಿಯಲ್ಲಿ ಹೇಳುವ ಜ್ಞಾನಿಗಳನ್ನು ಅಪಹಾಸ್ಯಕ್ಕೆ ಈಡುಮಾಡಲಾಗುತ್ತಿದೆ. ಈ ಎಲ್ಲ ಬಿಕ್ಕಟ್ಟುಗಳಿಂದ ಸಮೂಹಗಳು ಬಿಡುಗಡೆಯನ್ನು ಪಡೆಯಲು ಶಿಕ್ಷಣವೊಂದೇ ಪ್ರಮುಖ ಮಾಧ್ಯಮವನ್ನಾಗಿ ಮರುರೂಪಿಸುವ ಜರೂರಿದೆ. ಶಿಕ್ಷಣ ಮತ್ತು ಆದರ್ಶಗಳು ಪ್ರತ್ಯೇಕವಾಗಿ ಇರುವುದಿಲ್ಲ. ಆದರ್ಶ ಎನ್ನುವುದು ವಾಸ್ತವದಲ್ಲಿ ಶಿಕ್ಷಣದ ಸಮನಾರ್ಥಕ ಪದವೇ ಆಗಿತ್ತು. ನಮ್ಮ ಸಾಮಾಜಿಕ ಮತ್ತು ಧಾರ್ಮಿಕ ಹಿತಾಸಕ್ತಿಗಳ ಪರಿಣಾಮದ ಫಲವಾಗಿ ಶಿಕ್ಷಣವು ಆದರ್ಶಹೀನ ವಿದ್ಯಮಾನವಾಗಿ ಮೈದೋರಿದೆ.

Indian Constitution

ಬದುಕಿನ ಸಫಲತೆಯನ್ನು ಕಾಯಂಗೊಳಿಸುವ ಮತ್ತು ಸಾಮಾಜಿಕ ಬಹುಳತೆಯನ್ನು ನಿರಂತರಗೊಳಿಸುವ ಹಾಗೂ ಸಮೂಹಗಳ ನಡುವಣ ಸಾಂಗತ್ಯವನ್ನು ಗಟ್ಟಿಗೊಳಿಸುವುದಕ್ಕೆ ಪೂರಕವಾದ ವಿಚಾರ ಮತ್ತು ಆಚಾರಗಳನ್ನು ಮಾತ್ರ ಆದರ್ಶವೆಂದು ಇಲ್ಲಿ ಗುರುತಿಸಲಾಗುತ್ತದೆ. ‘ಸ್ವ’ ಮತ್ತು ‘ಅನ್ಯ’ ಎಂಬಂತಹ ವೈರುಧ್ಯಗಳನ್ನು ಪ್ರೋತ್ಸಾಯಿಸುವ ನಿಲುವುಗಳು ಶಿಕ್ಷಣದಲ್ಲಿ ಇಮ್ಮಡಿಗೊಳ್ಳುತ್ತಿವೆ. ಯಾವುದು ಬದುಕಿನ ಚೈತನ್ಯವನ್ನು ಕಾಪಾಡುವುದಕ್ಕೆ ಒತ್ತಾಸೆ ಆಗುವುದಿಲ್ಲವೋ, ಅದು ನಮ್ಮ ಬದುಕಿನ ತಾತ್ವಿಕತೆಯನ್ನು ನಿರೂಪಿಸುವ ನೆಲೆಯಾಗಲಾರದು. ಸಂವಿಧಾನದ ಆಶಯಗಳಿಗೆ ವ್ಯತಿರಿಕ್ತವಾದ ತಿಳಿವಿನ ಬಗೆಗಳು, ನಮ್ಮ ಪಠ್ಯಪುಸ್ತಕದಲ್ಲಿ ಸೇರಬಾರದು ಅನ್ನುವುದು ಸಾಮಾಜಿಕ ವಿವೇಕವೂ ಹೌದು. ಸಾಂಸ್ಕೃತಿಕ ಎಚ್ಚರವೂ ಹೌದು. ಬದುಕಿನ ಇಂತಹ ತೀವ್ರತೆಯನ್ನು ಕಂಡರಿಯದ ಎಷ್ಟೊಂದು ಸಂಗತಿಗಳನ್ನು ಪಠ್ಯಪುಸ್ತಕದ ಮುಖ್ಯ ಚರ್ಚೆಗಳನ್ನಾಗಿ ಪ್ರೇರೇಪಿಸಲಾಗುತ್ತಿದೆ. ಹಾಗಾಗಿ, ಶಿಕ್ಷಣದ ತಾತ್ವಿಕತೆಗೂ ಮತ್ತು ಬದುಕಿನ ತಾತ್ವಿಕತೆಗೂ ನಡುವೆ ಅನುಸಂಧಾನದ ನಿಲುವುಗಳು ಏರ್ಪಡದಿದಿದ್ದರೆ, ಅದನ್ನು ಹೇಗೆ ತಾನೇ ಶಿಕ್ಷಣವೆಂದು ಗುರುತಿಸುವುದು?

ಸಂವಿಧಾನ ಮತ್ತು ಶಿಕ್ಷಣದ ಮೂಲಕವಾಗಿಯೇ ನಮ್ಮ ಸಮೂಹಗಳ ವೈಚಾರಿಕತೆ ಮತ್ತು ಸಾಂಸ್ಕೃತಿಕ ವಿವೇಕ ನೆಲೆಗೊಳ್ಳಲು ಅವಕಾಶವಿದೆ. ಶಿಕ್ಷಣ ಎನ್ನುವುದು ಆದರ್ಶಯುಕ್ತ ನೆಲೆಯಾಗಿದೆ ಎನ್ನುವುದು ನಮ್ಮ ನಂಬಿಕೆಯಾದರೆ, ಈ ಆದರ್ಶವನ್ನು ಮೈಗೂಡಿಸಿಕೊಳ್ಳಲು ಎರಡು ಬಗೆಯ ಆಯ್ಕೆಗಳು ನಮ್ಮು ಮುಂದಿವೆ. ಈ ಎರಡೂ ಆಯ್ಕೆಗಳು ಪರಸ್ಪರ ಪೂರಕವಾದ ವಿನ್ಯಾಸಗಳು. ಮೊದಲ ಆಯ್ಕೆ ನಮ್ಮ ಸಂವಿಧಾನ. ನಮ್ಮ ಸಾಮಾಜಿಕ ಐಕ್ಯತೆ ಮತ್ತು ಸಾಂಸ್ಕೃತಿಕ ವಿವೇಕವನ್ನು ಗಟ್ಟಿಗೊಳಿಸುವ ವಿನ್ಯಾಸಗಳು ಈ ನಮ್ಮ ಸಂವಿಧಾನದ ಮುಖ್ಯ ಆಶಯಗಳಾಗಿರುತ್ತವೆ.

ಪ್ರಜಾಸತ್ತಾತ್ಮಕ ಸನ್ನಿವೇಶದಲ್ಲಿ ಸಂವಿಧಾನವೇ ನಮ್ಮ ಗುರಿ ಮತ್ತು ದಾರಿಯಾಗಿರುತ್ತದೆ. ಈ ಗುರಿ ಮತ್ತು ದಾರಿಯನ್ನು ಎರಡನೇ ಆಯ್ಕೆಯ ಮೂಲಕ ಈಡೇರಿಸಿಕೊಳ್ಳಬಹುದು. ಅದೇನೆಂದರೆ, ನಮ್ಮ ಸಾಂಸ್ಕೃತಿಕ ವಿವೇಕ ಪರಂಪರೆಯನ್ನು ರೂಪಿಸಿದ ಚಿಂತಕರು, ದಾರ್ಶನಿಕರ ತಾತ್ವಿಕತೆಯನ್ನು ಅನುಸರಿಸುವುದು ಅಗತ್ಯವಾಗಿದೆ.

ಸಂವಿಧಾನದ ಆಶಯಗಳನ್ನು ಕ್ರೂಢೀಕರಿಸಿ ನಮಗೆ ಇಡಿಯಾಗಿ ನೋಡಲು ಸಾಧ್ಯವಾದದ್ದು ಕೂಡ ಈ ಎಲ್ಲ ದಾರ್ಶನಿಕರ ವಿಚಾರಗಳ ಪರಿಣಾಮದಿಂದ. ನಮ್ಮ ತರಗತಿಗಳು ಈ ವಿನ್ಯಾಸಗಳನ್ನು ಮೈಗೂಡಿಸಿಕೊಂಡು ಮುನ್ನಡೆದರೆ ಬದುಕಿನ ಸಾಫಲ್ಯವನ್ನು ಕಂಡುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಇದನ್ನು ಸಾಕಾರಗೊಳಿಸುವ ಹೊಣೆಗಾರಿಕೆ ನಮ್ಮೆಲ್ಲರದ್ದು ಅನ್ನುವುದನ್ನು ನಾವು ಮರೆಯುವಂತಿಲ್ಲ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app