ಮೈಕ್ರೋಸ್ಕೋಪು | ಕುಹಕದ ಪ್ರಶಸ್ತಿಗಳು ಮತ್ತು ಕುತರ್ಕದ ಸಂಶೋಧನೆಗಳು

Improbable Research

ಬಾಟಲಿ ಮುಚ್ಚಳ ತೆರೆದಿದ್ದೀರಾ? ಆಗ ನೀವು ಎಷ್ಟು ಬೆರಳುಗಳನ್ನು ಉಪಯೋಗಿಸುತ್ತೀರಿ? ಇದೇನು ಪ್ರಶ್ನೆ ಎಂದಿರಾ? ಬಾಟಲಿ ದಪ್ಪವಾಗಿದ್ದರೆ ಅದನ್ನು ತೆರೆಯಲು ಎಷ್ಟು ಬೆರಳುಗಳನ್ನು ಉಪಯೋಗಿಸುತ್ತೇವೆ? ಸಿಲಿಂಡರ್‌ ಹೊರಳಾಡಿಸಲು ಎಷ್ಟು ಬೆರಳು ಬಳಕೆಯಾಗುತ್ತವೆ ಎಂಬುದಕ್ಕೆ ಜಪಾನಿನ ವಿಜ್ಞಾನಿಗಳು ಸೂತ್ರ ಕಂಡುಹಿಡಿದ್ದಾರೆ

ಅಕ್ಟೋಬರ್ ಎಂದರೆ ನೋಬೆಲ್ ಪಾರಿತೋಷಕಗಳ ಮಾಸ. ಪ್ರಪಂಚದ ಎಲ್ಲ ವಿಜ್ಞಾನಿಗಳೂ ಕಾತರದಿಂದ ಎದುರು ನೋಡುವ ಪ್ರಶಸ್ತಿಗಳ ಪ್ರಕಟಣೆ ಈ ಮಾಸದಲ್ಲಿ ನಡೆಯುತ್ತದೆ. ಪ್ರಶಸ್ತಿ ಗೆದ್ದವರ ಹಿಂದೆ ಪತ್ರಕರ್ತರ ಹಿಂಡೇ ಅಲೆಯುತ್ತದೆ. ಅವರ ಸಂದರ್ಶನಕ್ಕೆ, ಅವರಿಂದ ಒಂದೆರಡು ಮಾತನ್ನು ಕೇಳುವುದಕ್ಕೆ ವಿಜ್ಞಾನಿಗಳೂ, ವಿದ್ಯಾರ್ಥಿಗಳೂ ಹಾತೊರೆಯುವುದುಂಟು. ಪ್ರಶಸ್ತಿ ವಿಜೇತರೂ ಅಷ್ಟೆ. ತಮ್ಮ ಸಂಶೋಧನೆಗಳ ಬಗ್ಗೆ ಹೆಮ್ಮೆಯಿಂದ ಬೀಗುವ ಸಂದರ್ಭವದು. ಆದರೆ, ಅದಕ್ಕೂ ಮುನ್ನವೇ ಪ್ರಕಟವಾಗುವ ಇನ್ನೊಂದು ಸುಪ್ರಸಿದ್ಧ, ಅಲ್ಲಲ್ಲ ಕುಪ್ರಸಿದ್ಧ ಎನ್ನಿಸುವ, ಪ್ರಶಸ್ತಿಯನ್ನು ಗೆದ್ದರೂ, ಹೆಮ್ಮೆಯಿಂದ ಬೀಗದ ಇನ್ನೊಂದು ಪ್ರಶಸ್ತಿ ವಿಜೇತರ ತಂಡವೂ ಇದೆ.

Eedina App

'ಇಗ್ನೋಬಲ್' ಎನ್ನುವ ಈ ಪ್ರಶಸ್ತಿ ಪ್ರದಾನ ಸಮಾರಂಭ ನೋಬೆಲ್ ಪಾರಿತೋಷಕಗಳ ಪ್ರಕಟಣೆಗೂ ಮುನ್ನವೇ, ಅಂದರೆ, ಸೆಪ್ಟೆಂಬರ್ ಎರಡನೆಯ ವಾರ ನಡೆಯುತ್ತದೆ. ಈ ವರ್ಷ ನಾವು ಸಂಭ್ರಮದಿಂದ ಆಚರಿಸುವ ಇಂಜಿನಿಯರುಗಳ ದಿವಸದಂದೆ ಅಮೆರಿಕೆಯಲ್ಲಿ ಈ ಸಮಾರಂಭ ನಡೆಯಿತು. ಇದರಲ್ಲಿ ಪ್ರಶಸ್ತಿ ಪಡೆದವರಲ್ಲಿ ಹೆಚ್ಚಿನವರು ತಮ್ಮ ಸಂಶೋಧನೆಗಳ ಬಗ್ಗೆ ಹೆಮ್ಮೆಯಿಂದ ಬೀಗುವುದು ಕಡಿಮೆ. ಹೆಚ್ಚು ಎಂದರೆ ಸಮಾರಂಭದಲ್ಲಿ ಭಾಗವಹಿಸಿ, ನಕ್ಕು ಹೊರನಡೆಯುವವರೇ ಹೆಚ್ಚು. ಏಕೆಂದರೆ ಈ ಪ್ರಶಸ್ತಿಗಳು ಮಾಡಬಾರದಂಥಹ ಸಂಶೋಧನೆಗಳಿಗೆ ದೊರೆಯುವ ಕುಚೋದ್ಯದ ಪ್ರಶಸ್ತಿಗಳು.

ಮಾಡಬಾರದಂಥಹ ಸಂಶೋಧನೆಗಳೇ ಎಂದಿರಾ? ಇದರಿಂದ ಯಾರಿಗೆ ಹಾನಿ? ಏಕೆ ಮಾಡಬಾರದು? ಎಂತೆಲ್ಲ ನಿಮ್ಮ ಮನಸ್ಸಿನಲ್ಲಿ ಪ್ರಶ್ನೆಗಳು ಮೂಡಿದ್ದರೆ ಅದು ಸಹಜವೆ. ಇಗ್ನೋಬಲ್ ಪ್ರಶಸ್ತಿಗಳನ್ನು ಜರ್ನಲ್ ಆಫ್ ಇಂಪ್ರಾಬಬಲ್ ರೀಸರ್ಚ್ ಎನ್ನುವ ಪತ್ರಿಕೆ ನೀಡುತ್ತದೆ. ʼಇಂಪ್ರಾಬಬಲ್ʼ ಎಂದರೆ ಅಸಂಭವ ಎಂದರ್ಥವಷ್ಟೆ. ವಿಜ್ಞಾನದಲ್ಲಿ ಹಾಸ್ಯವನ್ನು ಕಂಡುಕೊಳ್ಳುವುದಕ್ಕಾಗಿ ಈ ಪತ್ರಿಕೆ ಹುಟ್ಟಿತ್ತು. ಕ್ರಮೇಣ ವಾಸ್ತವವಾಗಿ ನಡೆಯುವ ಹಲವಾರು ಸಂಶೋಧನೆಗಳು ಹಾಸ್ಯಾಸ್ಪದವಾಗಿರುತ್ತವೆ ಎಂಬುದನ್ನು ಕಂಡು, ಅವಕ್ಕೆ ಪ್ರಶಸ್ತಿಯನ್ನು ನೀಡುವ ಸಂಪ್ರದಾಯವನ್ನು ಹಾಕಿಕೊಂಡಿತು. ಪ್ರತಿವರ್ಷವೂ ಹೀಗೆ ವಿವಿಧ ವಿಜ್ಞಾನ ವಿಷಯಗಳಲ್ಲಿ ನಡೆದ ಹಾಸ್ಯಾಸ್ಪದ ಸಂಶೋಧನೆಗಳಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ.

AV Eye Hospital ad
science innovation

ಇವೆಷ್ಟು ಹಾಸ್ಯಾಸ್ಪದ ಎನ್ನುವುದು ಈ ವರ್ಷ ಪ್ರಶಸ್ತಿ ಪಡೆದ ಸಂಶೋಧನೆಗಳನ್ನು ಗಮನಿಸಿದರೆ ಅರ್ಥವಾಗಬಹುದು. ಇದೋ ಇಲ್ಲಿವೆ ಕೆಲವು ಉದಾಹರಣೆಗಳು. ಅನ್ವಯಿಕ ಹೃದಯ ವಿಜ್ಞಾನದಲ್ಲಿ ಇಗ್ನೋಬಲ್‌ಗಳಿಸಿದ ಶೋಧ ಪ್ರಣಯಿಗಳ ಹೃದಯಬಡಿತವನ್ನು ಅಳೆದಿದೆ. ಪ್ರಣಯಿಗಳು ಮೊತ್ತ ಮೊದಲ ಬಾರಿಗೆ ಭೇಟಿಯಾಗಿ, ಒಬ್ಬರಿನ್ನೊಬ್ಬರಿಂದ ಆಕರ್ಷಿತರಾದಾಗ ಅವರ ಹೃದಯದ ಬಡಿತಗಳು ಜೊತೆ, ಜೊತೆಯಾಗಿ ಮಿಡಿಯುತ್ತವೆ ಎಂದು ಈ ಶೋಧ ಪತ್ತೆ ಮಾಡಿದೆ. ಬಹುಶಃ ʼಮೊದಲ ದಿನ ರಾತ್ರಿ…ʼ ಕವನವನ್ನು ಮೈಸೂರು ಮಲ್ಲಿಗೆಯ ಕವಿ ಹೃದಯ ಬರೆಯುವಾಗ ಈ ವಿಷಯ ಗೊತ್ತಿದ್ದರೆ ʼಹೃದಯ ಬಡಿತ ಮಿಳಿತವಾದಾಗ,ʼ ಎಂದು ಇನ್ನೊಂದು ಸಾಲನ್ನು ಹೊಸೆಯುತ್ತಿದ್ದರೇನೋ?

ಆದರೆ, ಈ ಸಂಶೋಧನೆಯನ್ನು ಕೈಗೊಂಡ ಡಚ್, ಇಂಗ್ಲಿಷ್, ಸ್ವೀಡನ್ ಹಾಗೂ ಅರುಬಾದ ವಿಜ್ಞಾನಿಗಳಿಗೆ ಮೈಸೂರು ಮಲ್ಲಿಗೆಯ ಕವನ ಗೊತ್ತಿರಲಿಕ್ಕಿಲ್ಲವೆನ್ನಿ. ಹಾಗಂತ, ಇವರು ಪ್ರಣಯಿಗಳ ನಡವಳಿಕೆಯನ್ನು ಅಧ್ಯಯನ ಮಾಡುತ್ತಿರಲಿಲ್ಲ. ಒಬ್ಬರು ಇನ್ನೊಬ್ಬರ ಸಹಕಾರದಿಂದಲೇ ಬದುಕಬೇಕಾದಂತಹ ಮನುಷ್ಯನಂತಹ ಸಮಾಜ ಜೀವಿಗಳಲ್ಲಿ, ಒಬ್ಬರಿನ್ನೊಬ್ಬರನ್ನು ಆಕರ್ಷಿಸಬೇಕಾದ ಅವಶ್ಯಕತೆ ಇರುತ್ತದಷ್ಟೆ. ಹಾಗಿದ್ದರಷ್ಟೆ ಮಿತ್ರತ್ವ ಸಾಧ್ಯ ಎನ್ನುವುದು ವಿಜ್ಞಾನಿಗಳ ನಂಬಿಕೆ. ಕೇವಲ ದೈಹಿಕ ಚರ್ಯೆಗಳಷ್ಟೆ ಅಲ್ಲದೆ ಅರಿವಿಗೇ ಬಾರದಂತಹ ಇತರೆ ಬದಲಾವಣೆಗಳೂ ಈ ಬಗೆಯ ಆಕರ್ಷಣೆಯನ್ನು ಬಲಗೊಳಿಸುತ್ತಿರಬೇಕು ಎನ್ನುವ ತರ್ಕದಿಂದ ಈ ವಿಜ್ಞಾನಿಗಳು ಸಂಶೋಧನೆ ಮಾಡಿದ್ದರು. ಪಾಶ್ಚಾತ್ಯರಲ್ಲಿ ಸಾಮಾನ್ಯವಾದ ಹಾಗೂ ಇತ್ತೀಚೆಗೆ ನಮ್ಮಲ್ಲೂ ಪಸರಿಸುತ್ತಿರುವ ಬ್ಲೈಂಡ್ ಡೇಟ್ ಪದ್ಧತಿಯಲ್ಲಿ ತಮಗೆ ಅಪರಿಚಿತರಾದರವರ ಜೊತೆ ಸಮಯ ಕಳೆಯಲು ಹೋದವರ ಹೃದಯ ಬಡಿತವನ್ನು ಅಳೆದರು. ಬ್ಲೈಂಡ್ ಡೇಟ್‌ಗೆ ತೆರಳಿದ ಗಂಡು-ಹೆಣ್ಣುಗಳು ದೂರಿದಂದಲೇ ಹೃದಯ ಬಡಿತವನ್ನು ತಿಳಿಸುವ ಸಾಧನಗಳನ್ನು ಧರಿಸಿದ್ದರೆನ್ನಿ.

ಅಪರಿಚಿತರಲ್ಲಿ ತಮಗೆ ಬಹಳ ಪ್ರಿಯವೆನ್ನಿಸಿದವರನ್ನು ಭೇಟಿಯಾದಾಗ, ಅವರ ಹೃದಯ ಬಡಿತದ ವೇಗ ಎರಡೂ ಒಂದೇ ಆಗಿಬಿಟ್ಟಿತ್ತಂತೆ. ಆದರೆ, ಎದ್ದು ತೋರುವಂತಹ ನಗುವಾಗಲಿ, ನೋಟವಾಗಲಿ ಆಕರ್ಷಿತರಾದ ಜೋಡಿಯಲ್ಲಿಯಷ್ಟೆ ಇರಲಿಲ್ಲ ಎಂದರೆ, ಆಕರ್ಷಣೆಗೆ ಸುಪ್ತವಾದ ಸಂಕೇತ ಈ ಹೃದಯ ಬಡಿತ ಎಂದು ಈ ವಿಜ್ಞಾನಿಗಳು ತರ್ಕಿಸಿದ್ದಾರೆ. ಇದರಿಂದ ನಮಗೆಷ್ಟು ಪ್ರಯೋಜನ ಎಂದು ಕೇಳಬೇಡಿ. ವಿಜ್ಞಾನದ ಎಲ್ಲ ಶೋಧಗಳೂ ಲಾಭ ತರುವಂತದ್ದೇ ಆಗಿರಬೇಕಿಲ್ಲ ಎಂಬ ಉತ್ತರ ಬಂದೀತು. ಅಂದ ಹಾಗೆ ಈ ಸಂಶೋಧನೆ ಪ್ರತಿಷ್ಠಿತ ಎನ್ನುವ ನೇಚರ್ ಪತ್ರಿಕೆಯ ಸಹಪ್ರಕಾಶನ ʼನೇಚರ್ ಹ್ಯೂಮನ್ ಬಿಹೇವಿಯರ್ʼ ಪತ್ರಿಕೆಯಲ್ಲಿ ಕಳೆದ ನವಂಬರಿನಲ್ಲಿ ಪ್ರಕಟವಾಗಿತ್ತು.

ಈ ಲೇಖನ ಓದಿದ್ದೀರಾ?: ಮೈಕ್ರೋಸ್ಕೋಪು | ಬೆಂಗಳೂರಿನ ಸಂಜೆಮಳೆಗೆ ಪಶ್ಚಿಮ ಘಟ್ಟದಲ್ಲಿರುವ ಒಂದು ಸಣ್ಣ ಬಿರುಕೇ ಕಾರಣ!

ಇದಕ್ಕಿಂತಲೂ ಸ್ವಾರಸ್ಯಕರವಾಗಿದ್ದು ಸಾಹಿತ್ಯಕ್ಕೆಂದು ನೀಡಲಾದ ಇಗ್ನೋಬಲ್. ಈ ಪ್ರಶಸ್ತಿ ದೊರಕಿದ್ದು ಕಾನೂನು ಸಾಹಿತ್ಯಕ್ಕೆ. ಕಾನೂನಿನ ದಸ್ತಾವೇಜುಗಳಲ್ಲಿ ಅರ್ಥವಾಗದ ಭಾಷೆಯನ್ನು ಬಳಸುತ್ತಾರೆಂಬ ದೂರು ಇದೆಯಷ್ಟೆ. ಇದು ತಪ್ಪಂತೆ. ಅಲ್ಲಿರುವ ಭಾಷೆ ಅರ್ಥವಾಗದಿರುವುದಕ್ಕೆ ಕಾರಣ ಅರ್ಥವಾಗದ ಕಾನೂನಿನ ಸಂಗತಿಗಳಲ್ಲ, ಕೆಟ್ಟ ಬರವಣಿಗೆಯಷ್ಟೆ ಕಾನೂನು ದಸ್ತಾವೇಜುಗಳಲ್ಲಿ ಬಳಸುವ ಕಠಿಣ ವ್ಯಾಕರಣ, ತಾಂತ್ರಿಕ ಪದಗಳು ಹಾಗೂ ಅಪರೂಪದ ಪದಗಳ ಬಳಕೆ ಅವನ್ನು ಅರ್ಥಮಾಡಿಕೊಳ್ಳಲು ಅಡ್ಡಿಯಾಗುತ್ತವೆಯೇ ಹೊರತು ಕಾನೂನಿನ ವಿಷಯಗಳು ಜಟಿಲವಾದ ಪರಿಕಲ್ಪನೆಗಳಾಗಿದ್ದರಿಂದ ಅಲ್ಲ ಎಂದು ಹತ್ತು ಲಕ್ಷ ಪದಗಳನ್ನೂ, ವಾಕ್ಯಗಳನ್ನೂ ವಿಶ್ಲೇಷಿಸಿ, ಅವುಗಳಿಂದ ಹೆಕ್ಕಿದ ಪದಗಳನ್ನು ಬಳಸಿ ರಚಿಸಿದ ವಾಕ್ಯಗಳನ್ನು ಓದಲು ನೀಡಿ ನಡೆಸಿದ ಪರೀಕ್ಷೆಯ ಫಲವಾಗಿ ಅಮೆರಿಕೆಯ ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಮನಶಾಸ್ತ್ರಜ್ಞ ಎರಿಕ್ ಮಾರ್ಟಿನೆಜ್ ಮತ್ತು ಸಂಗಡಿಗರು ವರದಿ ಮಾಡಿ ತೀರ್ಮಾನಿಸಿದ್ದರು. ಹಾಂ ವಿಜ್ಞಾನ ಪ್ರಬಂಧಗಳ ಕಥೆಯೂ ಹೀಗೆ ಎಂದು ಸಂಶೋಧನೆ ಮಾಡಿದರೆ ಬಹುಮಾನ ದೊರಕುವುದೇ ನೋಡಬೇಕು.

ಬಾಲ ಕತ್ತರಿಸಿದರೆ ಚೇಳುಗಳಿಗೆ ಏನು ನಷ್ಟವಾಗುತ್ತದೆ? ಈ ಪ್ರಶ್ನೆಯ ಶೋಧಕ್ಕೆ ಹೊರಟಿದ್ದ ಬ್ರೆಜಿಲ್ಲಿನ ಸೋಲಿಮಾರ್ ಹರ್ನಾಂಡೆಜ್ ಮತ್ತು ಸಂಗಡಿಗರಿಗೆ ಜೀವಿವಿಜ್ಞಾನಕ್ಕಾಗಿ ಕೊಡುವ ಇಗ್ನೋಬಲ್ ಪ್ರಶಸ್ತಿಯನ್ನು ಕೊಟ್ಟಿದ್ದಾರೆ. ಚೇಳಿನ ಬಾಲ ಕತ್ತಿರಿಸಿದರೆ ಏನಂತೆ, ಕತ್ತೆ ಬಾಲ ಹೋಯಿತು ಎಂದಿರಾ? ಹಾಗಲ್ಲ. ಅಪಾಯ ಎದುರಾದಾಗ ಬಾಲವನ್ನು ಕಳಚಿ ಓಡುವ ಹಲ್ಲಿಯಂತೆಯೇ ಚೇಳು ಕೂಡ ಅಪಾಯ ಎದುರಾದಾಗ ಕೊಂಡಿ ಇರುವ ಬಾಲವನ್ನು ಕಳಚಿಕೊಂಡು ಬಿಡುತ್ತದೆ. ಬಾಲದ ಜೊತೆಗೇ ಅದರ ಗುದವೂ ಕಳಚಿ ಬೀಳುತ್ತದೆ. ಇದು ತಾವು ವೇಗವಾಗಿ ಓಡುವುದಕ್ಕೆಂದು ಚೇಳುಗಳು ಬೆಳೆಸಿಕೊಂಡ ನಡವಳಿಕೆ ಎನ್ನುವುದು ವಿಜ್ಞಾನಿಗಳ ಊಹೆ. ಏಕೆಂದರೆ, ಚೇಳುಗಳು ಬಾಲ ಕಳಚಿಕೊಂಡಾಗ ಹೆಚ್ಚೂ ಕಡಿಮೆ ಕಾಲು ಭಾಗ ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳುತ್ತವೆ. ಆದರೆ, ಹರ್ನಾಂಡೆಜ್ ಶೋಧದ ಪ್ರಕಾರ ಇದು ಸರಿಯಲ್ಲವಂತೆ.

ಬಾಲ ಕಳೆದುಕೊಂಡ ಚೇಳುಗಳು ತಕ್ಷಣದಲ್ಲಿ ವೇಗವಾಗಿ ಓಡುತ್ತವೆಯೇ ಎಂದು ಪರೀಕ್ಷಿಸಿದರೆ ಅದಿಲ್ಲ. ದೀರ್ಘಾವಧಿಯ ನಂತರ ನೋಡಿದಾಗ ಅವು ವೇಗವಾಗಿ ಓಡುವುದರ ಬದಲಿಗೆ ಇನ್ನಷ್ಟು ನಿಧಾನವಾಗಿದ್ದುವು. ಇದೇಕೆ ಎಂದರೆ, ಬಾಲದ ಜೊತೆಗೆ ಗುದವೂ ಕಳಚಿ ಬಿದ್ದ ಕಾರಣ, ಹೇತುಕೊಳ್ಳಲು ಆಗದ್ದರಿಂದ, ಶೌಚಕಟ್ಟಿಕೊಂಡು ನಡೆದಾಟ ನಿಧಾನವಾಗಿದೆ ಎಂದು ಇವರು ತೀರ್ಮಾನಿಸಿದ್ದಾರೆ. ವಿಶೇಷ ಎಂದರೆ ಇದು ಗಂಡುಗಳಿಗೆ ಮಾತ್ರ ಬರುವ ಸಂಕಟ ಹೆಣ್ಣುಗಳಲ್ಲಿ ಈ ರೀತಿಯ ಬದಲಾವಣೆ ಅರ್ಥಾತ್ ಮಲಕಟ್ಟಿಕೊಳ್ಳುವ ಸಮಸ್ಯೆ ಇಲ್ಲವಂತೆ. ಇದು ಏಕೆ ಎನ್ನುವುದಕ್ಕೆ ಇನ್ನೊಂದು ಸಂಶೋಧನೆ ಎನ್ನುತ್ತಾರೆ ಹರ್ನಾಂಡೆಜ್. ಖಂಡಿತ ಅದಕ್ಕೂ ಇನ್ನೊಂದು ಇಗ್ನೋಬಲ್ ದೊರಕಬಹುದು. ಇಂತಹ ಸಣ್ಣ-ಪುಟ್ಟ ಬದಲಾವಣೆಗಳೂ ಜೀವಿಗಳ ಅಳಿವು-ಉಳಿವನ್ನು ಬಾಧಿಸಬಹುದು ಎನ್ನುವ ಲೆಕ್ಕಾಚಾರವಿದೆ. ಅದಕ್ಕಾಗಿ ಇಂತಹ ಸಂಶೋಧನೆಗಳನ್ನು ನಡೆಸಲಾಗುತ್ತದೆ.

IG Nobel Prize

ಬಾಟಲಿ ಮುಚ್ಚಳ ತೆರೆದಿದ್ದೀರಾ? ಆಗ ನೀವು ಎಷ್ಟು ಬೆರಳುಗಳನ್ನು ಉಪಯೋಗಿಸುತ್ತೀರಿ? ಇದೇನು ಪ್ರಶ್ನೆ ಎಂದಿರಾ? ಇಂತಹ ಪ್ರಶ್ನೆಯನ್ನು ಕೇಳಿ, ಬಾಟಲಿ ದಪ್ಪವಾಗಿದ್ದರೆ ಅದನ್ನು ತೆರೆಯಲು ಎಷ್ಟು ಬೆರಳುಗಳನ್ನು ಉಪಯೋಗಿಸುತ್ತೇವೆ ಎಂಬುದಕ್ಕೆ ಒಂದು ಸೂತ್ರವನ್ನು ಪತ್ತೆ ಮಾಡಿದ ಜಪಾನಿ ವಿಜ್ಞಾನಿಗಳಿಗೆ ಈ ವರ್ಷದ ಇಂಜಿನಿಯರಿಂಗ್ ವಿಭಾಗದ ಇಗ್ನೋಬಲ್ ಪ್ರಶಸ್ತಿ ಸಿಕ್ಕಿದೆ. ಮೂವತ್ತೆರಡು ಮಂದಿಯನ್ನು ವಿವಿಧ ರೀತಿ ದಪ್ಪವಿರುವ ಸಿಲಿಂಡರುಗಳನ್ನು ತಿರುಗಿಸಲು ಹೇಳಿ, ವಿಡಿಯೋ ತೆಗೆದು, ಆರಂಭದಲ್ಲಿ ಇದ್ದ ಬೆರಳುಗಳ ಸಂಖ್ಯೆಗೂ, ಸಿಲಿಂಡರು ತಿರುಗುವಾಗ ಬಳಸಿದ ಬೆರಳುಗಳ ಸಂಖ್ಯೆಯನ್ನೂ ಗಮನಿಸಿ, ಯಾವಾಗ ಎಷ್ಟು ಬೆರಳುಗಳನ್ನು ಬಳಸುತ್ತಾರೆ ಎಂದು ಗಣಿತ ಸೂತ್ರದ ಮೂಲಕ ಇವರು ಲೆಕ್ಕ ಹಾಕಿದರಂತೆ.

ದಪ್ಪ ಸಿಲಿಂಡರನ್ನು ತಿರುಗಿಸಲು ಹೆಚ್ಚು ಬೆರಳುಗಳು ಬೇಕು ಎಂಬುದು ತೀರ್ಮಾನ. ಅಯ್ಯೋ ಇದು ಗೊತ್ತಿರುವ ವಿಷಯವೇ ಎಂದಿರಾ? ನಿಜ. ಆದರೆ, ರೋಬಾಟುಗಳು ಅದೇ ಸಿಲಿಂಡರುಗಳನ್ನು ತಿರುಗಿಸಬೇಕಾದರೆ ಎಷ್ಟು ಬೆರಳುಗಳನ್ನು ಹೇಗೆ, ಯಾವಾಗ ಬಳಸಬೇಕು ಎಂದು ನಿರ್ದೇಶಿಸಬೇಕಾದರೆ ಈ ಲೆಕ್ಕ ಬೇಕಲ್ಲ? ಅದಿಲ್ಲದಿದ್ದರೂ ಇಂತಹ ತಿರುಪುಗಳನ್ನು ತೆಗೆಯಲು ಸುಲಭವಾಗಿರುವಂತೆ ವಿನ್ಯಾಸ ಮಾಡಲು ಇದು ನೆರವಾಗುತ್ತದೆ ಎನ್ನುತ್ತಾರೆ ಸಂಶೋಧನೆ ಮಾಡಿದ ತಂಡದ ನೇತಾರ ನೋರಿ ಇಮುರಾ. ನೀವೇನಂತೀರಿ?

ಇಗ್ನೋಬಲ್ ಪ್ರಶಸ್ತಿಗಳು ಅವಹೇಳನ ಮಾಡಲೆಂದು ಕೊಡುವಂತದ್ದಲ್ಲ. ಸಾರ್ವಜನಿಕರ ಹಣವನ್ನು ಉಪಯೋಗಿಸಿ ನಡೆಸುವ ಇಂತಹ ಸಂಶೋಧನೆಗಳಲ್ಲಿ ಎಷ್ಟೊಂದು ಅನಗತ್ಯವಾದಂಥವು, ಯಾವುವು ಕುರುಡು ತರ್ಕದಿಂದ ಮಾಡಿದಂತವು, ಯಾವುವು ಅವೈಜ್ಞಾನಿಕ ಹಾಗೂ ಯಾವುವು ಉಪಯುಕ್ತವಾಗಿದ್ದರೂ, ಅರಿವನ್ನು ದಕ್ಕಿಸಿದರೂ, ನಗೆಯನ್ನುಕ್ಕಿಸುವಂಥವು ಎಂದು ಇವು ಸೂಚಿಸುತ್ತವೆ. ವಿಜ್ಞಾನಿಗಳು ಎಲ್ಲವನ್ನೂ ತರ್ಕಬದ್ಧವಾಗಿ ಮಾಡಿದ್ದರೂ, ಸಾಮಾನ್ಯ ತಿಳುವಳಿಕೆಯ ಹಿನ್ನೆಲೆಯಲ್ಲಿ ಹಾಗೂ ಸಂದರ್ಭಾನುಸಾರ ಹಾಸ್ಯಾಸ್ಪದವೆನ್ನಿಸುವಂಥ ಸಂಶೋಧನೆಗಳೂ ಇರುತ್ತವೆ. ಇಂತಹವನ್ನು ಗುರುತಿಸಿ ವಿಜ್ಞಾನಿಗಳಿಗೆ ಎಚ್ಚರಿಸುತ್ತವೆ ಈ ಕೀಟಲೆ ಪ್ರಶಸ್ತಿಗಳು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app