ಹೊಸಿಲ ಒಳಗೆ-ಹೊರಗೆ | "ನಾನು ಹುಡುಗ ಆಗಬೇಕಾಗಿತ್ತು...”

ಅದೊಂದಿನ ಮನೆಯೊಳಕ್ಕೆ ಚೇರಂಟೆ (ಶತಪದಿ) ಬಂತು. ಪುಟ್ಟ ಹುಡುಗಿ ಕೋಲಿನಿಂದ ಅದನ್ನು ಆಚೆ ಹಾಕಲು ಮುಂದಾದಳು. ಶತಪದಿಗಳು ಮುಟ್ಟಿದ ತಕ್ಷಣ ಮುದುರಿಕೊಳ್ಳುತ್ತವೆ. ಆದರೆ, ಇದು ಎಗರಾಡುತ್ತಿತ್ತು. “ಓಹೋ, ಇದು ಗಂಡು, ಇದರ ಗರ್ವ ನೋಡು, ಹೆಣ್ಣಾಗಿದ್ದರೆ ಈಗ ಮುದುಡಿಕೊಳ್ಳುತ್ತಿತ್ತು...” ಅಂತ ಹುಡುಗಿ ತನ್ನ ಪಾಡಿಗೆ ತಾನು ಹೇಳಿಕೊಳ್ಳುತ್ತಿದ್ದಳು!

ಬಾಲ್ಯದಲ್ಲಿ, ಅಂದರೆ, ಸುಮಾರು ಮೂರರಿಂದ ಎಂಟು ವರುಷದವರೆಗಿನ ಮಕ್ಕಳಲ್ಲಿ, ಲಿಂಗತ್ವದ ಪ್ರಭಾವ ಹೇಗೆ ಇರುತ್ತದೆ, ಇದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು, ಹೇಗೆ ಆ ವಯಸ್ಸಿನಲ್ಲಿ ಮಕ್ಕಳ ಜೊತೆ ಸ್ಪಂದಿಸಬೇಕು ಎಂಬುದರ ಕುರಿತು ಇತ್ತೀಚೆಗೆ ಒಂದು ತರಬೇತಿ ಮಾಡಬೇಕಾಗಿತ್ತು.

“ಈಗೇನೂ ತಾರತಮ್ಯಗಳು ಇಲ್ಲ ಮೇಡಮ್. ಅವೆಲ್ಲ ಹಿಂದಿನ ಕಾಲದ ಕತೆಗಳು. ಈಗ ಮಹಿಳೆಯರೇ ಎಲ್ಲದರಲ್ಲೂ ಮುಂದು,” ಎನ್ನುವವರು ಒಂದಷ್ಟು ಮಂದಿ ಇದ್ದರು. ಹಾಗೆಯೇ, “ಮಹಿಳೆಯರೇ ದಬ್ಬಾಳಿಕೆ ಮಾಡುತ್ತಾರೆ,” ಅಂತ ಹೇಳುವವರು ಕೂಡ ಒಂದಷ್ಟು ಮಂದಿ ಇದ್ದರು. ಲಿಂಗ ತಾರತಮ್ಯದ ಬಗ್ಗೆ ತರಬೇತಿ ಮಾಡುವಾಗಲೆಲ್ಲ ಸರ್ವೇಸಾಧಾರಣವಾಗಿ ಇಂತಹ ಮಾತುಗಳು ಬರುತ್ತವೆ. ಅದರಲ್ಲೂ, ಪುರುಷರು ಇದನ್ನು ಒಂದು ತಮಾಷೆಯ ಸಂಗತಿ ಎಂಬಂತೆ ಹೇಳುತ್ತಾರೆ. ಇದರ ಬಗ್ಗೆ ಮಾತಾಡುವುದಕ್ಕೆ ಏನೂ ಇಲ್ಲ ಎಂಬ ಧೋರಣೆಯೂ ಇರುತ್ತದೆ.

ಈ ಹಿನ್ನೆಲೆಯಲ್ಲಿ ಲಿಂಗ ಅಸಮಾನತೆಯ ಕುರಿತು ಮಾತುಕತೆ ಶುರು ಮಾಡಲು, “ಎಳವೆಯಲ್ಲಿ ಹೆಣ್ಣಾಗಿರುವ ಕಾರಣಕ್ಕೆ, ಗಂಡಾಗಿರುವ ಕಾರಣಕ್ಕೆ ಯಾವ ಆಟ ಅಥವಾ ಚಟುವಟಿಕೆ ಮಾಡಲು ಬಿಟ್ಟಿಲ್ಲ,” ಎಂಬ ಅನುಭವವನ್ನು ಪ್ರತಿಯೊಬ್ಬರೂ ತಮ್ಮ ಬಾಲ್ಯವನ್ನು ನೆನೆಸಿಕೊಂಡು ಹೇಳಬೇಕಾಗಿತ್ತು. ಎಲ್ಲರೂ ಹೇಳಿಕೊಂಡಾಗ ಬಹಳಷ್ಟು ವಿಚಾರಗಳು ವ್ಯಕ್ತವಾದವು. ಹೆಣ್ಣುಮಕ್ಕಳನ್ನು - ಸೈಕಲ್ ಓಡಿಸಲು, ಮರ ಹತ್ತಲು, ಗಂಡು ಹುಡುಗರ ಡ್ರೆಸ್ ಹಾಕಲು, ಕೆರೆಗೆ ಈಜು ಕಲಿಯಲು ಹೋಗಲು ಬಿಡಲಿಲ್ಲ; ಗಂಡುಮಕ್ಕಳನ್ನು – ರಂಗೋಲಿ ಹಾಕಲು, ಕಣ್ಣಾಮುಚ್ಚಾಲೆ-ಕುಂಟಬಿಲ್ಲೆ ಆಟಗಳನ್ನು ಆಡಲು, ಯಕ್ಷಗಾನ ಆಡುವಾಗ ಸ್ತ್ರೀ ವೇಷ ಹಾಕಲು, ಮಸಾಲೆ ಅರೆಯಲು ಬಿಡಲಿಲ್ಲ. ಹೀಗೆ ಕಟ್ಟುಪಾಡು ಹಾಕಿದ್ದರಿಂದಾಗಿ ಎಷ್ಟೋ ಅವಕಾಶಗಳನ್ನು, ಸಾಧ್ಯತೆಗಳನ್ನು ಹೆಣ್ಣು-ಗಂಡು ಇಬ್ಬರೂ ಕಳೆದುಕೊಳ್ಳವ ಚಿತ್ರಣ ಈ ಅನುಭವಗಳಲ್ಲಿ ಕಂಡುಬಂತು. ಆದರೂ, ಇವೆಲ್ಲ ಈ ಗುಂಪಿನವರ ಬಾಲ್ಯದ ಅನುಭವ; ಅಂದರೆ, ಇವು ಬಹಳ ಹಳೆಯ ವಿಚಾರ ಅನ್ನುವ ಪ್ರತಿಕ್ರಿಯೆಯೂ ಬಂತು.

Image
ಸಾಂದರ್ಭಿಕ ಚಿತ್ರ

ಲಿಂಗ ಸಮಾನತೆಗೆ ಸಂಬಂಧಿಸಿದಂತೆ ಒಂದಷ್ಟು ಬದಲಾವಣೆ ಆಗಿದೆ ಅನ್ನುವುದು ಖಂಡಿತ. ಆದರೆ, ಕ್ರಮಿಸಬೇಕಾದ ದಾರಿ ಇನ್ನೂ ಬಹಳ ಬಹಳ ದೂರ ಇದೆ ಎಂಬುದು ಕೂಡ ಅಷ್ಟೇ ಸತ್ಯ. ಅದಕ್ಕಾಗಿ ಸ್ನೇಹಿತರ ಜೊತೆಗೆ ಒಂದಷ್ಟು ಮಾತಾಡಿಕೊಂಡಾಗ, ಮಕ್ಕಳ ಜೊತೆಗಿನ ನನ್ನ ಇತ್ತೀಚೆಗಿನ ಒಡನಾಟವನ್ನು ಮೆಲುಕು ಹಾಕಿದಾಗ ಕೆಲವು ಕತೆಗಳು ಸಿಕ್ಕವು. ಈ ಕತೆಗಳನ್ನು ಮುಂದಿಡುವುದರೊಂದಿಗೆ ಸಂವಾದ ಮುಂದುವರಿಯಿತು.

"ನಾನು ಹುಡುಗ ಆಗಬೇಕಾಗಿತ್ತು ಅಮ್ಮಾ. ನೀನು ನನ್ನನ್ನು ಹುಡುಗ ಆಗಿ ಯಾಕೆ ಹುಟ್ಟಿಸಿಲ್ಲ?” - ಐದು ವರುಷದ ಪೂರ್ವಿ ಹೀಗೆ ಹೇಳುತ್ತಾಳೆ. ಅವಳ ಮನೆಯಲ್ಲಿ ಲಿಂಗ ತಾರತಮ್ಯದ ವಾತಾವರಣ ಇಲ್ಲ. ಅವಳ ಅಪ್ಪ, ಅವಳ ಅಮ್ಮನನ್ನು ಬಹಳ ಪ್ರೀತಿ, ಗೌರವದಿಂದ ನಡೆಸಿಕೊಳ್ಳುತ್ತಾನೆ. ಮನೆಗೆಲಸಗಳನ್ನೂ ಅಮ್ಮ-ಅಪ್ಪ ಹಂಚಿಕೊಂಡು ಮಾಡುತ್ತಾರೆ. ಆದರೂ ಪೂರ್ವಿ ಹೀಗೆ ಕೇಳುತ್ತಿರುತ್ತಾಳೆ. “ಯಾಕೆ ಮಗಳೇ?” ಅಂತ ಕೇಳಿದರೆ, “ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ ಸುತ್ತಾಡಬಹುದು...” ಅಂತ ಉತ್ತರ ಕೊಟ್ಟಿದ್ದಳು.

"ದೊಡ್ಡವಳಾದ ಮೇಲೆ ನಾನು ಕಾರು ಓಡಿಸುವುದಿಲ್ಲ, ಅಣ್ಣ ಓಡಿಸಲಿ, ಅವನು ಹುಡುಗ ಅಲ್ಲವೇ?” ಮತ್ತೊಂದು ದಿನ ಪೂರ್ವಿಯ ಹೇಳಿಕೆ.

ಮನೆಯೊಳಗೆ ಒಂದು ಚೇರಂಟೆ (ಶತಪದಿ) ಬಂತು. ಪುಟ್ಟ ಹುಡುಗಿ ಕೋಲಿನಿಂದ ಅದನ್ನು ಆಚೆ ಹಾಕುವ ಪ್ರಯತ್ನ ಪಡುತ್ತಿದ್ದಳು. ಹೆಚ್ಚಾಗಿ ಶತಪದಿಗಳು ಮುಟ್ಟಿದ ತಕ್ಷಣ ಚಕ್ಕುಲಿಯಂತೆ ಮುದುರಿಕೊಳ್ಳುತ್ತವೆ. ಆದರೆ, ಇದು ಮಾತ್ರ ರೊಚ್ಚಿಗೆದ್ದು ಎಗರಾಡುವಂತೆ ಮಾಡುತ್ತಿತ್ತು. “ಓಹೋ, ಇದು ಗಂಡು, ಇದರ ಗರ್ವ ನೋಡು, ಹೆಣ್ಣಾಗಿದ್ದರೆ ಈಗ ಮುದುಡಿಕೊಳ್ಳುತ್ತಿತ್ತು...” ಅಂತ ಹುಡುಗಿ ತನ್ನ ಪಾಡಿಗೆ ತಾನು ಹೇಳಿಕೊಳ್ಳುತ್ತಿದ್ದಳು.

"ನಾನು ಯಾಕೆ ಕಸ ಗುಡಿಸಬೇಕು, ಬಟ್ಟೆ ಒಗೆಯಬೇಕು, ಅದು ಅಕ್ಕನ ಕೆಲಸ,” ಅನ್ನುತ್ತಾನೆ ಗಿರೀಶ. ಇಂಥ ಮಾತು ಎಷ್ಟೋ ಜನ ಗಂಡುಮಕ್ಕಳ ಬಾಯಿಂದ ಕೇಳಿಬರುತ್ತದೆ.  

ಮನೆಯಲ್ಲಿ ನೆಲ ಒರೆಸುತ್ತಿದ್ದ ಹುಡುಗ ಅತಿಥಿಗಳು ಬಂದ ಕೂಡಲೇ ಅಡಗಿ ಕುಳಿತ. "ಅವನು ನೆಲ ಒರೆಸುತ್ತಿದ್ದನಲ್ಲ, ಅದಕ್ಕೇ ನಾಚಿಕೆ,” ಎಂದರು ಅವನ ಅಮ್ಮ.

“ಅದು ಯಾಕೆ ಟೀಚರ್ಸ್ ಹುಡುಗರಿಗೇ ಕೆಲಸ ಕೊಡುತ್ತಾರೆ? ನನ್ನನ್ನು ಬೆಂಚ್ ಎತ್ತಲು ಕರೆಯುವುದೇ ಇಲ್ಲ. ಕೇಳಿದರೆ, ಅದು ಹುಡುಗರ ಕೆಲಸ ಅಂತ ಹೇಳುತ್ತಾರೆ,” -ವಿನ್ಯಾ ಕೇಳುತ್ತಾಳೆ.

"ಹುಡುಗಿಯರು ಪೈಲಟ್ ಆಗಬಾರದೇನಮ್ಮ? ನಾನು ಇವತ್ತು ಶಾಲೆಯಲ್ಲಿ ಟೀಚರ್, ‘ದೊಡ್ಡವರಾದಾಗ ಏನು ಆಗುತ್ತೀರಿ’ ಅಂತ ಕೇಳಿದಾಗ, ‘ಪೈಲಟ್’ ಅಂತ ಹೇಳಿದೆ. ಹುಡುಗರೆಲ್ಲ ಜೋರಾಗಿ ನಕ್ಕುಬಿಟ್ಟರು.” ಎರಡನೆ ತರಗತಿಯ ಸಿಂಚನಾ ವಿವರಿಸಿದಳು.

ಈ ಲೇಖನ ಓದಿದ್ದೀರಾ?: ಹೊಸಿಲ ಒಳಗೆ-ಹೊರಗೆ | ಹೆಣ್ಣಿಗೂ ಗಂಡಿಗೂ ಇರಬಹುದಾದ ಕಟ್ಟುಪಾಡಿನ ರಗಳೆಗಳು

"ಹುಡುಗರು ಯಾಕೆ ಶರಟು ಹಾಕದೆ ಹೊರಗೆ ಹೋಗಬಹುದು, ಹುಡುಗಿಯರಿಗೆ ಯಾಕೆ ಬಿಡುವುದಿಲ್ಲ?” ವೈಷ್ಣವಿಗೆ ಭಾರೀ ಚಿಂತೆ.

"ವಿಮಾನ ನಿಲ್ದಾಣದಲ್ಲಿ, ಮಾಲ್‍ಗಳಲ್ಲಿ ಸೆಕ್ಯೂರಿಟಿ ಚೆಕ್ ಮಾಡುವಾಗ, ಹುಡುಗರಿಗೆ ಎಲ್ಲರ ಎದುರಿಗೇ ಮಾಡುತ್ತಾರೆ, ಹುಡುಗಿಯರಿಗೆ ಯಾಕೆ ಮರೆಯಲ್ಲಿ ಮಾಡುತ್ತಾರೆ?”

"ಆ ಕೋಣೆಯೊಳಗೆ ಅವನು (ತಮ್ಮ) ಹೋಗಬಹುದು, ನಾನು ಯಾಕೆ ಹೋಗಬಾರದು?” ಚೈತ್ರಾ ಪ್ರಶ್ನಿಸುತ್ತ ಇರುತ್ತಾಳೆ. (ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಕೆಲವು ಮನೆಗಳಲ್ಲಿ ಒಂದು ಪುಟ್ಟ ಕೋಣೆ ದೈವ(ಭೂತ)ಕ್ಕಾಗಿಯೇ ಇರುತ್ತದೆ. ಅದರೊಳಗೆ ಹುಡುಗಿಯರಿಗೆ ಪ್ರವೇಶ ಇರುವುದಿಲ್ಲ.)

"ನನ್ನ ಅಂಗಿಗೆ ಯಾಕೆ ಜೇಬು ಇಲ್ಲ? ಅಣ್ಣನ ಅಂಗಿ, ಪ್ಯಾಂಟ್ ಎಲ್ಲ ಕಡೆ ಜೇಬಿದೆ,” - ನಮಿತಳಿಗೆ ತಲೆಬಿಸಿ.

"ನಾನು ಕಪ್ಪು ಬಣ್ಣದವಳಂತೆ... ಚಂದ ಕಾಣುವುದಿಲ್ಲವಂತೆ... ಅದಕ್ಕೇ ನನ್ನನ್ನು ಡ್ಯಾನ್ಸ್‌ನಲ್ಲಿ ಹಿಂದೆ ನಿಲ್ಲಿಸಿದರು,” - ಸಿರಿ ಹೇಳುತ್ತಾಳೆ.

ಈ ಮೇಲೆ ಹೇಳಿದ ವಿಚಾರಗಳಲ್ಲಿ ಅನೇಕ ಅಂಶಗಳು ನೇರವಾಗಿ ಲಿಂಗ ತಾರತಮ್ಯದ ಚಿತ್ರಣಗಳು. ಇಂತಹ ಸಾಕಷ್ಟು ವಿಚಾರಗಳನ್ನು ಗಮನಿಸಬಹುದು. ಇವೆಲ್ಲವೂ ಎಷ್ಟು ಸಹಜವಾಗಿಬಿಟ್ಟಿವೆ ಅಂದರೆ, ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರವೇ ಕಂಡುಬರುತ್ತವೆ. ಇಲ್ಲವಾದರೆ ಇವು ಎಲ್ಲವೂ ಸಾಮಾನ್ಯ ಅನ್ನುವ ಹಾಗೆ ಇರುತ್ತವೆ. ಇಷ್ಟು ಚಿಕ್ಕ ಮಕ್ಕಳ ಮನಸ್ಸಿನಲ್ಲಿ ಈಗಾಗಲೇ ಲಿಂಗ ಪೂರ್ವಗ್ರಹಗಳು ಬೇರು ಬಿಟ್ಟಿರುವುದನ್ನು ಈ ಕಥನಗಳಲ್ಲಿ ಸ್ಪಷ್ಟವಾಗಿ ಕಾಣಬಹುದು. ಮಕ್ಕಳು ಇವನ್ನು ಕಲ್ಪಿಸಿಕೊಂಡು ಹೇಳಿರುವುದಲ್ಲ. ತಮ್ಮ ಸುತ್ತಮುತ್ತ ಕಂಡುದನ್ನು ಗ್ರಹಿಸಿಕೊಂಡು ಹೇಳಿದ್ದಾರೆ. ಅಂದರೆ, ಅವರ ಕಣ್ಣೆದುರಿನ ಸಮಾಜದಲ್ಲಿ ಸಹಜವಾಗಿಯೇ ಲಿಂಗ ತಾರತಮ್ಯ ಅನ್ನುವುದು ಇನ್ನೂ ಹಾಸುಹೊಕ್ಕಾಗಿದೆ. ಇದರ ಮಧ್ಯೆ ಬೆಳೆಯುತ್ತಿರುವ ಈ ‘ಹೊಸ ಪೀಳಿಗೆ’ ಕೂಡ ಲಿಂಗ ತಾರತಮ್ಯವನ್ನು ಮುಂದುವರಿಸಿಕೊಂಡು ಹೋಗಬಹುದಾದ ಅಪಾಯ ಇಲ್ಲಿ ಅವಿತುಕೊಂಡಿರುವುದು ಕಾಣುವುದಿಲ್ಲವೇ?

Image
ಸಾಂದರ್ಭಿಕ ಚಿತ್ರ

ಇನ್ನೊಂದು ಅಂಶವನ್ನು ಈ ಹೊತ್ತಲ್ಲಿ ನೆನಪಿಟ್ಟುಕೊಳ್ಳಲೇಬೇಕು. ಮೂರರಿಂದ ಎಂಟು ವರುಷದ ವಯಸ್ಸಿನಲ್ಲಿ, ಮಕ್ಕಳು ತಮ್ಮ-ತಮ್ಮ ‘ಲಿಂಗ ಅಸ್ಮಿತೆ’ ಬಗ್ಗೆ ಕೂಡ ಸೂಕ್ಷ್ಮವಾಗಿ ಗೊಂದಲ ಅನುಭವಿಸತೊಡಗಿರುತ್ತಾರೆ. ಪುಟ್ಟ ಹುಡುಗನೊಬ್ಬನಿಗೆ, ತಾನು ಹುಡುಗಿ ತರಹ ಲಂಗ ಹಾಕಿಕೊಳ್ಳಬೇಕು ಎಂಬ ಹಂಬಲ ತೀವ್ರವಾಗಿ ಕಾಡಬಹುದು. ಈ ಮಕ್ಕಳಿಗೆ ತಮ್ಮನ್ನು ಅರ್ಥ ಮಾಡಿಕೊಂಡು ಸಹಕರಿಸುವ ಹಿರಿಯರ ನೆರವು ಬೇಕಿರುತ್ತದೆ.

ಈ ಎಲ್ಲ ಅಂಶಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು - ಶಿಕ್ಷಕರಾಗಿ, ಪೋಷಕರಾಗಿ, ನಾಗರಿಕರಾಗಿ ನಾವು ಏನು ಮಾಡಬಹುದು ಮತ್ತು ಲಿಂಗ ಸಮಾನತೆಯ ಬೀಜ ಬಿತ್ತುವ ದಾರಿಗಳು ಯಾವುವು ಎಂಬುದನ್ನು ಗಾಢವಾಗಿ ಚಿಂತಿಸಬೇಕಾದ ಅಗತ್ಯವಿದೆ. ಎಲ್ಲಕ್ಕೂ ಮೊದಲು, ನಮ್ಮಲ್ಲಿ ‘ಲಿಂಗ ಸಮಾನತೆಯ’ ಮೌಲ್ಯದ ಬಗ್ಗೆ ಅಪಾರ ನಂಬಿಕೆ, ಗೌರವ, ಸ್ಪಷ್ಟತೆ ಇರಬೇಕು. ಎಲ್ಲರಿಗೂ ಎಲ್ಲ ಅವಕಾಶಗಳು ತೆರೆದಿರಬೇಕು ಎಂಬ ಆಶಯ ಗಟ್ಟಿಯಾಗಿ ಇರಬೇಕು. ಹೀಗಿದ್ದಾಗ, ಮಕ್ಕಳೊಂದಿಗೆ ಆಪ್ತ ಮತ್ತು ಅರ್ಥಪೂರ್ಣ ಒಡನಾಟ ಸಾಧ್ಯವಾಗುತ್ತದೆ. ಅನೇಕ ಮಕ್ಕಳು ಈ ವಿಚಾರಗಳನ್ನು ದಿಟ್ಟವಾಗಿ ಪ್ರಶ್ನಿಸುವುದನ್ನೂ ಕಾಣಬಹುದು. ಈ ಪ್ರಶ್ನೆಗಳನ್ನು ಅವಕಾಶಗಳಾಗಿ ಬಳಸಿಕೊಂಡು ಹೊಸ ನೋಟಗಳನ್ನು ಮಕ್ಕಳ ಮುಂದೆ ಇಡಬಹುದು. ತಮ್ಮ ಕಣ್ಣೆದುರು ಇರುವ ಸಮಾಜಕ್ಕಿಂತ ಭಿನ್ನವಾದ ಸಮಾಜದ ಕನಸನ್ನು ಅವರಲ್ಲಿ ಅರಳಿಸಬಹುದು.

ನಿಮಗೆ ಏನು ಅನ್ನಿಸ್ತು?
2 ವೋಟ್