ಮುಳ್ಳುಹಾದಿಗೆ ಮಣ್ಣು ಹೊತ್ತವರು | ಮಹಿಳಾ ಶಕ್ತಿ, ಮಾನವ ಮುಕ್ತಿ: ಇಂದುಮತಿ ನಿಕಮ್ ಪಾಟಣಕರ್

ಏಳು ದಶಕದ ಸಾರ್ವಜನಿಕ ಬದುಕಿನಿಂದ ರೂಪುಗೊಂಡ ಮಾಗಿದ ಒಡನಾಡಿ ಇಂದೂತಾಯಿ. ತಾವು ಕೆಲಸ ಮಾಡಿದ ಕಡೆಗಳಲ್ಲೆಲ್ಲ ಯುವ ಪೀಳಿಗೆಗೆ ನಾಯಕತ್ವದ ಗುಣ ಬೆಳೆಸುವ ಯೋಜನೆ ಹಾಕಿಕೊಳ್ಳುತ್ತಿದ್ದದ್ದು ವಿಶೇಷ. ಇಂಥದ್ದೇ ಉತ್ಸಾಹ ಮತ್ತು ಬದ್ಧತೆಯನ್ನು ತಮ್ಮ ಕುಟುಂಬದ ನಾಲ್ಕನೇ ತಲೆಮಾರಿಗೂ ದಾಟಿಸಿದ ಹೆಗ್ಗಳಿಕೆ ಇವರದು

1942; ಮಹಾರಾಷ್ಟ್ರದ ಬರಪೀಡಿತ ಕರಾಡ್ ಜಿಲ್ಲೆಯ ಒಂದು ಊರು. ಆ ಬೇಸಗೆಯಂತೂ ಬಲು ಬಿರುಸಾಗಿತ್ತು. ಉಗಾದಿ ಹಬ್ಬ ಬರುವುದರೊಳಗೆ ಕೆರೆ-ಕುಂಟೆಗಳೆಲ್ಲ ಒಣಗಿಹೋಗಿದ್ದವು. ಊರಿನ ಬಹುತೇಕ ಹೆಣ್ಣುಗಳು ದೂರದೂರದ ಬಾವಿ, ಕೆರೆ, ನದಿಗಳಿಂದ ಒಟ್ಟೊಟ್ಟಿಗೆ ಮೂರು, ನಾಲ್ಕು ದೊಡ್ಡ-ದೊಡ್ಡ ಬಿಂದಿಗೆಗಳನ್ನು ತಲೆ ಮೇಲೆ ಏರಿಸಿ ನೀರು ತರುತ್ತಿದ್ದರು. ಎಲ್ಲರೂ ಬೆನ್ನು, ಸೊಂಟ, ತಲೆ, ಕಾಲುನೋವಿನ ಮಾತನಾಡುತ್ತಿದ್ದರೆ, ಒಬ್ಬಳು ಸಾಮ್ರಾಜ್ಯಶಾಹಿ ಬ್ರಿಟಿಷರ ವಿರುದ್ಧ ಹೋರಾಡಬೇಕೆನ್ನುತ್ತಿದ್ದಳು! ಆ ಹುಡುಗಿ 'ವಿಚಿತ್ರ’ ಎಂದೇ ಎಲ್ಲ ಹೇಳುತ್ತಿದ್ದರು. ಅವಳ ಓರಗೆಯ ಹುಡುಗಿಯರು ಒಬ್ಬರಾದ ಮೇಲೊಬ್ಬರು ವಿವಾಹ ಬಂಧನಕ್ಕೊಳಗಾಗಿದ್ದರು. ಮೈನೆರೆದ ಕೂಡಲೇ ಸಿಂಗರಿಸಿಕೊಂಡು ಗಂಡನ ಮನೆ ಸೇರುತ್ತಿದ್ದರು. ಕೆಲವರಾಗಲೇ ಬಸುರಾಗಿದ್ದರು. ಆದರೆ, ತಳಮಳಿಸುವ ಈ ಹದಿನಾರರ ಪೋರಿಗೆ ಅತ್ತ ದ್ಯಾಸವೇ ಇಲ್ಲ. ಕಣ್ಣ ತುಂಬ ಕನಸು. ಏನೇನೋ ಗುರಿಸಾಧನೆಯ ಛಲ.

...ಅವಳು ಇಂದುಮತಿ.

1943ರ ವೇಳೆಗೆ ಸತಾರಾ ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ 'ಪ್ರತಿ ಸರ್ಕಾರ’ ಎಂಬ, ಬ್ರಿಟಿಷ್ ಆಡಳಿತಕ್ಕೆ ಪರ್ಯಾಯ ಸರ್ಕಾರ ನಡೆಸುವ ಯುವ ಮನಸ್ಸುಗಳ ಹುಮ್ಮಸ್ಸಿನ ಚಳವಳಿ ಭರದಿಂದ ನಡೆಯುತ್ತಿತ್ತು. ಸಮಸಮಾಜದ ಕನಸಿನ ಸಂಗಾತಿಗಳು ಕ್ರಾಂತಿಯನ್ನು ಮೈಮಸ್ಸುಗಳಲ್ಲಿ ತುಂಬಿಕೊಂಡು ತಮ್ಮ ಮನೆ ತೊರೆದು ಬಂದಿದ್ದರು. ಬದುಕನ್ನು ಕ್ರಾಂತಿಗಾಗಿ ಮುಡಿಪಾಗಿಟ್ಟುಕೊಂಡಿದ್ದರು. ಹಳ್ಳಿಹಳ್ಳಿಯಲ್ಲೂ ಕ್ರಿಯಾಶೀಲವಾಗಿದ್ದ ಕ್ರಾಂತಿಕಾರಿಗಳು ಕಾಲಕಾಲಕ್ಕೆ ಗುಟ್ಟಾಗಿ ಸಭೆ ಸೇರಿ ಮುಂದಿನ ನಡೆ ನಿರ್ಧರಿಸುತ್ತಿದ್ದರು. ಪೊಲೀಸರನ್ನು ಎದುರಿಸಲು ಪಿಸ್ತೂಲು, ರಿವಾಲ್ವರುಗಳನ್ನು ಚಲಾಯಿಸಲು ಕಲಿತಿದ್ದರು. ಸಾಮಾಜಿಕ ಬದಲಾವಣೆಗಾಗಿ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಕನಸಿನ ಅವರಿಗೆ ಭಗತ್ ಸಿಂಗ್ ಮತ್ತು ಅವನಂಥ ಕ್ರಾಂತಿಕಾರಿಗಳು ಆದರ್ಶವಾಗಿದ್ದರು.

ಈ ಲೇಖನ ಓದಿದ್ದೀರಾ?: ಮುಳ್ಳುಹಾದಿಗೆ ಮಣ್ಣು ಹೊತ್ತವರು | ಪದವಿ ಪಡೆದ ಭಾರತದ ಮೊದಲ ದಲಿತ ಮಹಿಳೆ ದಾಕ್ಷಾಯಿಣಿ ವೇಲಾಯುಧನ್

'ಪ್ರತಿ ಸರ್ಕಾರ’ ತಂಡದಲ್ಲಿ ಬೆರಳೆಣಿಕೆಯಷ್ಟು ತರುಣಿಯರಿದ್ದರು. ಅವರಲ್ಲಿ ಅತ್ಯುತ್ಸಾಹಿ, ಅತಿ ಧೈರ್ಯಶಾಲಿ ಯುವತಿ ಇಂದುಮತಿ ನಿಕಮ್. ರಾಷ್ಟ್ರ ಸೇವಾದಳ ಸೇರಿ, ಅದರ ಸಂದೇಶವನ್ನು ಮನೆಮನೆಗೂ ಸಾರುತ್ತ, ಹೆಚ್ಚೆಚ್ಚು ಮಹಿಳೆಯರು ದೇಶವನ್ನು ದಾಸ್ಯದಿಂದ ಬಿಡಿಸಲು ಚಳವಳಿಯಲ್ಲಿ ಕೈಜೋಡಿಸಬೇಕೆಂದು ಕರೆಕೊಡುತ್ತ ಚುರುಕಾಗಿ ಓಡಾಡಿದ ಅವಳು, ದೇಶವಾಸಿಗಳ ಬದುಕು ಹಸನಾಗಲು ಜೀವ ಮುಡಿಪಾಗಿಡುವೆ ಎಂದು ನಿಶ್ಚಯಿಸಿ ಮನೆ ಬಿಟ್ಟು ಬಂದಿದ್ದಳು.

* * * * *

ಮಹಾರಾಷ್ಟ್ರದ ಕರಾಡ್ ಜಿಲ್ಲೆಯ ಇಂಡೋಳಿ ಎಂಬ ಹಳ್ಳಿಯಲ್ಲಿ 1921ರಲ್ಲಿ, ದಿನಕರರಾವ್ ನಿಕಮ್ ಮತ್ತು ಸರಸ್ವತಿ ನಿಕಮ್ ಅವರ ಮಗಳಾಗಿ ಹುಟ್ಟಿದವಳು ಇಂದುಮತಿ. ದಿನಕರ ರಾವ್ ಮೊದಲು ಕಾಂಗ್ರೆಸ್ಸಿನ ರಾಷ್ಟ್ರೀಯ ಹೋರಾಟದಲ್ಲಿ ತೊಡಗಿಕೊಂಡಿದ್ದವರು. ಬಳಿಕ, ಆಗಷ್ಟೇ ಜನಪ್ರಿಯವಾಗತೊಡಗಿದ್ದ ಕಮ್ಯುನಿಸ್ಟ್ ಸಿದ್ಧಾಂತದಲ್ಲಿ ದಮನಿತರ ವಿಮೋಚನೆಯಿದೆ ಎಂದು ನಂಬಿ, ಅದರ ಆಳಗಲ ಅರಿಯತೊಡಗಿದ್ದರು. ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷದ ಹೋರಾಟಗಾರರ ನಿಕಟ ಸಂಪರ್ಕ ಹೊಂದಿದ್ದರು.

1934ರ ವೇಳೆಗೆ ಮಾರ್ಕ್ಸ್‌ ಮತ್ತು ಲೆನಿನ್ ಚಿಂತನೆಗಳನ್ನು ಅನುಸರಿಸುವ ಸಮಾಜವಾದಿಗಳ ಒಂದು ಗುಂಪು ಐಕ್ಯ ಹೋರಾಟ ಕಟ್ಟುವ ಚಿಂತನೆಯಿಂದ ಕಾಂಗ್ರೆಸ್ ಪಕ್ಷದೊಂದಿಗೆ ಕೈಜೋಡಿಸಲು ಮುಂದಾಯಿತು. ಹಲವು ಗೊಂದಲ, ವಿರೋಧಗಳ ನಡುವೆಯೇ ಜಯಪ್ರಕಾಶ ನಾರಾಯಣರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದೊಳಗೆ ಕಾಂಗ್ರೆಸ್ ಸೋಷಲಿಸ್ಟ್ ಪಕ್ಷ ರೂಪುಗೊಂಡಿತು. ವರ್ಗ ಐಕ್ಯತೆಯ ಮೂಲಕ ಕೋಮು ಧ್ರುವೀಕರಣ, ಕೋಮು ವೈಷಮ್ಯ ಅಳಿಸಬಹುದೆಂದು ಅವರು ನಂಬಿದ್ದರು. 1934ರ ಮುಂಬೈ ಕಾಂಗ್ರೆಸ್ ಅಧಿವೇಶನದಲ್ಲಿ ಅಖಿಲ ಭಾರತ ಮಟ್ಟದ ಕಾಂಗ್ರೆಸ್ ಸೋಷಲಿಸ್ಟ್ ಪಕ್ಷ ಉದಯವಾಯಿತು. ಕಾಂಗ್ರೆಸ್ ಧ್ವಜದ ಜೊತೆಗೆ ಸಮಾವೇಶದಲ್ಲಿ ಕಾರ್ಲ್ ಮಾರ್ಕ್ಸ್ ಚಿತ್ರಪಟವೂ ಕಾಣಿಸಿಕೊಂಡಿತು. ತಮ್ಮ ಬಳಗದವರನ್ನು 'ಕಾಮ್ರೇಡ್' ಎಂಬ ಹೆಸರಿನಿಂದ ಕರೆಯುವುದು ಮೊತ್ತಮೊದಲು ಅಲ್ಲಿಂದ ಆರಂಭವಾಯಿತು. ಮುಂಬೈ ಪ್ರಾಂತ್ಯದಲ್ಲಿ ಮಿನೂ ಮಸಾನಿ ಪಕ್ಷ ಕಟ್ಟಲು ಶ್ರಮಿಸಿದರೆ, ಮಹಾರಾಷ್ಟ್ರದ ಇತರೆಡೆಗಳಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯ ಮತ್ತು ಪುರುಷೋತ್ತಮ್ ತ್ರಿಕಮದಾಸ್ ಸಂಘಟನೆ ಮಾಡತೊಡಗಿದರು. 1936ರ ವೇಳೆಗೆ ಕಮ್ಯುನಿಸ್ಟರೂ ಕಾಂಗ್ರೆಸ್ ಸೋಷಲಿಸ್ಟ್ ಪಕ್ಷದೊಳಗೆ ಬರತೊಡಗಿದರು.

Image

ಆಗ ದಿನಕರ ರಾವ್ ನಿಕಮ್ ರಾಷ್ಟ್ರನಾಯಕರ ಸಂಪರ್ಕಕ್ಕೆ ಬಂದರು. ಕಾಂಗ್ರೆಸ್, ಸೋಷಲಿಸ್ಟ್ ಪಕ್ಷದ ಏಳುಬೀಳುಗಳೊಡನೆ ಒಮ್ಮೊಮ್ಮೆ ಭೂಗತರಾಗಿ, ಒಮ್ಮೊಮ್ಮೆ ಜೈಲುವಾಸಿಯಾಗುತ್ತಿದ್ದರು. ಅವರ ನಡೆ, ನುಡಿ, ಚಟುವಟಿಕೆಗಳನ್ನು ಮಗಳು ಇಂದುಮತಿ ಸೂಕ್ಷ್ಮವಾಗಿ ಗ್ರಹಿಸುತ್ತಿದ್ದಳು. ಮನೆಯಲ್ಲಿ ಅವಳ ಕಣ್ಣಿಗೆ ಅಪ್ಪ ಕಾಣಿಸುತ್ತಿದ್ದುದು ಕಡಿಮೆ. ಅವರ ಬಗೆಗೆ ಅಮ್ಮ, ಮನೆಯವರು, ನೆರೆಹೊರೆಯವರು ಹೇಳುತ್ತಿದ್ದ ಸುದ್ದಿಗಳು ಆಕರ್ಷಿಸುತ್ತಿದ್ದವು. ಎಳವೆಯಲ್ಲೇ ರಾಹುಲ ಸಾಂಕೃತ್ಯಾಯನ ಬರೆದ 'ವೋಲ್ಗಾದಿಂದ ಗಂಗಾವರೆಗೆ' ಎಂಬ ಹೊತ್ತಗೆ ಕೈಗೆ ಸಿಕ್ಕಿತು. ಓದುಗಿತ್ತಿಯಾಗಿ ಮನೆಯ ಸಂದಿಮೂಲೆಯಲ್ಲಿದ್ದ ಪುಸ್ತಕಗಳನ್ನು ಹೊರತೆಗೆದಳು. ದಿನಚರಿ ಬರೆಯತೊಡಗಿದಳು. ಪ್ರತಿದಿನ ಬೆಳಿಗ್ಗೆ ಪ್ರಭಾತಫೇರಿಯಲ್ಲಿ ಕಾಂಗ್ರೆಸ್ ರಾಷ್ಟ್ರ ಸೇವಾದಳದ ಯುವ ಕಾರ್ಯಕರ್ತರನ್ನು ಸೇರಿಕೊಳ್ಳುತ್ತಿದ್ದಳು. ಅಲ್ಲಿ ಬರುತ್ತಿದ್ದವರ ಮಾತು, ಸಮಾಜಸೇವೆಯ ಉತ್ಸಾಹ ತುಂಬ ಇಷ್ಟವಾಗುತ್ತಿತ್ತು. ತಾನೂ ಸೇವಾದಳ ಸೇರಿದಳು. ಹಾಡು ಕಟ್ಟಿ ಹಾಡತೊಡಗಿದಳು.

ಸದಾ ಸಮಾಜಕ್ಕಾಗಿ ಕೆಲಸ ಮಾಡಬೇಕು, ಸಮಾಜ ಸೇವೆ ಮಾಡಬೇಕು ಎಂಬ ಗುಂಗು. ಅಪ್ಪನೇ ಆದರ್ಶ. ತಂದೆ ಮನೆಯಲ್ಲಿರದ ಕಾರಣ ಕೃಷಿಕ ಕುಟುಂಬದ ಅಲ್ಪಸ್ವಲ್ಪ ಜಮೀನಿನಲ್ಲಿ ಹೆಂಗಸರು, ಮಕ್ಕಳೇ ಕೆಲಸ ಮಾಡಬೇಕು. ಯಾಕೋ ಮನೆಯಲ್ಲಿದ್ದರೆ ಸಂಪೂರ್ಣ ಸಮಾಜ ಸೇವೆಯಲ್ಲಿ ಅಪ್ಪನಂತೆ ತೊಡಗಿಕೊಳ್ಳಲು ಸಾಧ್ಯವಾಗುವುದಿಲ್ಲ ಎನಿಸಿತು. ಮನೆಗೆಲಸದಲ್ಲಿ ತನ್ನ ಸಮಯ ವ್ಯರ್ಥವಾಗುತ್ತಿದೆ ಎನಿಸಿದ್ದೇ ಮನೆ ಬಿಟ್ಟಳು.

ದಿನಚರಿ ಬರೆಯುವುದನ್ನು ರೂಢಿಸಿಕೊಂಡಿದ್ದ ಇಂದುಮತಿ ಬಳಿಕ ಹೀಗೆ ಬರೆದಳು: "16 ವರ್ಷ ವಯಸ್ಸಿನ ನನ್ನ ದೇಹದ ರಕ್ತದ ಪ್ರತಿ ಹನಿಯೂ ಹೋರಾಟದ ಸ್ಫೂರ್ತಿಯಿಂದ ಕುದಿಯುತ್ತಿತ್ತು. ನನ್ನ ದೇಶಕ್ಕಾಗಿ, ನನ್ನ ಕಮ್ಯುನಿಸಂಗಾಗಿ ಸ್ವಾತಂತ್ರ್ಯ ಬೇಕು ಎನ್ನುತ್ತಿತ್ತು. ದೇಶದ ಪ್ರತಿ ಯುವಪ್ರಜೆಯೂ ಈ ಗುರಿ ಈಡೇರಿಕೆಗೆ ತನ್ನನ್ನು ತೆತ್ತುಕೊಳ್ಳಬೇಕು ಅನಿಸುತ್ತಿತ್ತು. ಪ್ರಬಲವಾಗಿ ಹೀಗೆನಿಸಿದ್ದೇ ಮನೆ ಬಿಟ್ಟೆ."

ಕ್ವಿಟ್ ಇಂಡಿಯಾ ವೇಳೆಗೆ ಯುವ ಹೋರಾಟಗಾರರು ಸಮಾನಾಂತರ ಸರ್ಕಾರ ನಡೆಸುವ 'ಪ್ರತಿ ಸರ್ಕಾರ’ ಪ್ರಯತ್ನವನ್ನು ತೀವ್ರಗೊಳಿಸಿದರು. ಭೂಮಿ ವ್ಯಾಜ್ಯಗಳನ್ನು ನ್ಯಾಯಯುತವಾಗಿ ಪರಿಹರಿಸುವ ನ್ಯಾಯದಾನ ಮಂಡಲ ಜಾರಿಗೆ ತಂದರು. 'ಪ್ರತಿ ಸರ್ಕಾರ' ವಸಾಹತುಶಾಹಿಗಳ ವಿರುದ್ಧವಷ್ಟೇ ಆಗಿರಲಿಲ್ಲ, ಜಾತಿ ವ್ಯವಸ್ಥೆ, ಶೋಷಣೆಯ ವಿರುದ್ಧವೂ ಇತ್ತು. ದಲಿತರು, ಶೋಷಿತ ಬಹುಜನರು, ಆದಿವಾಸಿಗಳು, ಮಹಿಳೆಯರು ತಮ್ಮ ಹಕ್ಕುಗಳನ್ನು ಮರಳಿ ಪಡೆದು ಸ್ವತಂತ್ರರಾದರಷ್ಟೇ ಭಾರತ ಸ್ವತಂತ್ರವಾಗುವುದೆಂದು ಭಾವಿಸಿದರು. ಆಡಳಿತ, ನ್ಯಾಯ, ರಕ್ಷಣೆ ಎಲ್ಲದರಲ್ಲೂ 'ಪ್ರತಿ ಸರ್ಕಾರ' ತೊಡಗಿಕೊಳ್ಳುವುದಕ್ಕಾಗಿ ಸ್ವಯಂಸೇವಕ, ಸೇವಕಿಯರು ಸಿದ್ಧರಾಗಿದ್ದರು.

ಈ ಲೇಖನ ಓದಿದ್ದೀರಾ?: ಮುಳ್ಳುಹಾದಿಗೆ ಮಣ್ಣು ಹೊತ್ತವರು | ಹಳ್ಳಿಯತ್ತ ಚಿತ್ತ ನೆಟ್ಟ ಡಾಕ್ಟರ್ ಕಾವೇರಿ ನಂಬೀಶನ್

ರಾಜಕೀಯ ಜ್ಞಾನ, ತಂತ್ರಗಾರಿಕೆ, ಚಾಕಚಕ್ಯತೆ, ಸ್ನೇಹಮಯ ನಡತೆಗಳಿಂದ ಎದ್ದುಕಾಣುತ್ತಿದ್ದ ಯುವಮುಂದಾಳು ಇಂದುಮತಿ ತಾನು ನಂಬಿದ್ದನ್ನು ಸಂಪೂರ್ಣ ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ಆಚರಣೆಗೆ ಇಳಿಸುತ್ತಿದ್ದಳು. ಬಾಲ್ಯದಲ್ಲೇ ಕ್ರಾಂತಿಕಾರಿಗಳ ಕುಟುಂಬದವರಿಗೆ ಸಹಾಯ ಮಾಡುವುದನ್ನು ರೂಢಿಸಿಕೊಂಡಿದ್ದ ಅವಳು, ಈಗ ಸಂಕೇತ ಭಾಷೆಯಲ್ಲಿ ಸಂದೇಶ ರವಾನಿಸತೊಡಗಿದಳು. ಶಸ್ತ್ರಾಸ್ತ್ರಗಳನ್ನು ಸಾಗಿಸುವುದು, ತಲುಪಿಸುವುದು, ಆಹಾರ ಸಂಗ್ರಹಣೆ, ಧನಸಂಗ್ರಹ ಮೊದಲಾದ ಹೊಣೆಗಳು ಅವಳ ಹೆಗಲೇರಿದವು.

ಅವಳಂತೆಯೇ ಬಾಬೂಜಿ ಪಾಟಣಕರ್ ಎಂಬ ಕ್ರಾಂತಿಕಾರಿ ತರುಣನೂ ತಂಡದಲ್ಲಿದ್ದ. ಬಾಬೂಜಿ ಭೂಹೀನ ಕೃಷಿಕಾರ್ಮಿಕರ ಕುಟುಂಬದವ. ನಾಯಕತ್ವದ ಗುಣಗಳನ್ನು ಹೊಂದಿದ್ದ. ಬಂಧನದ ಸಾಧ್ಯತೆಗಳಿದ್ದ ಕಾರಣ ಭೂಗತನಾಗಿಯೇ ಕೆಲಸ ಮಾಡುತ್ತಿದ್ದ. ಇಂದುಮತಿ ಮತ್ತು ಬಾಬೂಜಿ ಸಂಘಟನಾತ್ಮಕವಾಗಿ ಸಾಕಷ್ಟು ಯೋಜನೆಗಳಲ್ಲಿ ಪಾಲ್ಗೊಂಡರು. ಸ್ನೇಹ ಗಾಢವಾದಂತೆ 1946ರಲ್ಲಿ ಬಾಳಸಂಗಾತಿಗಳಾದರು.

ಆ ವೇಳೆಗೆ ಭಾರತ ರಾಜಕೀಯ ಸ್ವಾತಂತ್ರ್ಯ ಪಡೆಯಿತು. ಅವರ ಭೂಗತ ಬದುಕು ಮುಗಿಯುವ ಕಾಲ ಬಂದಿತು. ಸ್ವತಂತ್ರ ಭಾರತದ ರಾಷ್ಟ್ರನಾಯಕರು ತಾವೆಲ್ಲ ಕಂಡ ಕನಸುಗಳನ್ನು ನನಸು ಮಾಡಿಯಾರೆಂದು ಭಾವಿಸಿದ ತರುಣ ಪಡೆ ತಂತಮ್ಮ ಊರುಗಳಿಗೆ ಮರಳಿದವು. ಸತಾರಾ ಜಿಲ್ಲೆಯ ಕಾಸೇಗಾಂವ್ ಎಂಬ ಬಾಬೂಜಿಯ ಹಳ್ಳಿಗೆ ಯುವಜೋಡಿ ಹೋದರು. ಎಲ್ಲರಿಗೂ ಶಿಕ್ಷಣದ ಅವಶ್ಯಕತೆಯಿದೆ ಎನ್ನುವುದನ್ನು ಕಂಡುಕೊಂಡರು. 'ಕಾಸೇಗಾಂವ್ ಎಜುಕೇಷನ್ ಸೊಸೈಟಿ' ಆರಂಭಿಸಿ, ಆಜಾದ್ ವಿದ್ಯಾಲಯ ಎಂಬ ಪ್ರೌಢಶಾಲೆ ತೆರೆದರು. ಅದೇ ವಿದ್ಯಾಲಯದಲ್ಲಿ ಇಂದುಮತಿ ಶಿಕ್ಷಣ ಮುಂದುವರಿಸಿ ಪ್ರಾಥಮಿಕ ಶಾಲಾ ಶಿಕ್ಷಕಿಯಾದಳು. 1949ರಲ್ಲಿ ಮಗ ಭರತ ಹುಟ್ಟಿದ. ಅದುವರೆಗೆ ಇಬ್ಬರೂ ಸೋಷಲಿಸ್ಟ್ ಪಕ್ಷದಲ್ಲಿದ್ದರೂ, 1949ರಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಕಾರಣವಾಗಿ ಅರುಣಾ ಅಸಫ್ ಅಲಿಯವರ ಜೊತೆಗೆ ಮಾರ್ಕ್ಸ್‌ವಾದಿ ಲೆನಿನ್‍ವಾದಿ ಸೋಷಲಿಸ್ಟ್ ಪಕ್ಷವನ್ನು ಸೇರಿದರು.

ಅದೊಂದು ದಿನ...

ಹೊಲ ಉಳುಮೆ ಮಾಡುತ್ತಿರುವ ಬಾಬೂಜಿಯನ್ನು ಯಾರೋ ಶಸ್ತ್ರಧಾರಿಗಳು ಎತ್ತೊಯ್ದರು. ಅವರು ಮತ್ತೆಂದೂ ಮನೆಗೆ ಮರಳಲಿಲ್ಲ. ಸಮಾನತೆಯ ಸಮಾಜದ ವಿರೋಧಿಗಳು ಅವರನ್ನು ಸಹಿಸಿಕೊಳ್ಳಲಾರದೆ ಹತ್ಯೆ ಮಾಡಿದ್ದರು. ಮಗನಿಗೆ ಐದು ತಿಂಗಳಿರುವಾಗ ಆದ ಸಂಗಾತಿಯ ಕೊಲೆ ಇಂದುಮತಿಗೆ ದೊಡ್ಡ ಆಘಾತದಂತೆ ಬಂದೆರಗಿತು. ಬದುಕು ಸಿಡಿದು ಚೂರಾದಂತೆನಿಸಿತು. ಏನು ಮಾಡುವುದು? 23 ವರ್ಷದ ವಿಧವೆ ತನ್ನ ಎಳೆಯ ಮಗುವನ್ನೂ, ವೃದ್ಧ ಅತ್ತೆ, ಮಾವಂದಿರನ್ನೂ ನೋಡಿಕೊಳ್ಳುತ್ತ ದಿನಚರಿ ಪುಸ್ತಕದಲ್ಲಿ ಹೀಗೆ ಬರೆದಿಟ್ಟಳು:

"ಬಾಬೂಜಿ, ನಿಮ್ಮ ಫೋಟೊ ನೋಡುತ್ತಿದ್ದರೆ ಇಲ್ಲೇ ಎದುರಿಗೇ ಇದೀರೇನೋ ಅನಿಸುತ್ತೆ. ನಿಮ್ಮೊಡನೆ ನಾನು ಮಾತನಾಡುತ್ತೇನೆ, ನಗುತ್ತೇನೆ. ನಮ್ಮ ಎಷ್ಟೋ ಕನಸುಗಳು ಅರ್ಧಂಬರ್ಧವಾಗಿವೆ. ಆಟದ ನಡುವಿನಲ್ಲೇ ಎಲ್ಲ ಹೊಣೆಯನ್ನು ನನ್ನ ಹೆಗಲಿಗೆ ಹಾಕಿ ನೀವು ಹೊರಟುಹೋದಿರಿ. ಆದರೆ, ನಮ್ಮ ಕನಸುಗಳನ್ನು ಪೂರ್ಣಗೊಳಿಸುವ ನಿರ್ಧಾರ ಮಾಡಿದ್ದೇನೆ. ಶೋಷಣೆಯ ವಿರುದ್ಧ ಹೋರಾಡುತ್ತೇನೆ. ನಿಮ್ಮ ನೆನಪಾದಾಗ ಮಾತ್ರ ಎಷ್ಟೋ ಸಲ ನನಗೆ ಬದುಕುವುದೇ ಬೇಡ ಎನಿಸಿಬಿಡುತ್ತದೆ."

ತಂದೆಯ ಸಾವಿನ ನೆರಳು ಕರಿಛಾಯೆಯಾಗಿ ಆವರಿಸದಂತೆ ಭರತ್ ಬೆಳೆದ. ಚಳವಳಿಯ ಮಾಮಾ, ಮಾಮಿ, ಕಾಕಾ, ಅಣ್ಣ, ಅಕ್ಕಂದಿರು ಅವನ ಲೋಕವನ್ನು ವಿಸ್ತಾರಗೊಳಿಸಿದರು. ಎಳೆಯ ಮಗುವನ್ನು ಬೆಳೆಸುವ ಜವಾಬ್ದಾರಿ, ಅಸುರಕ್ಷತೆ, ಬದುಕಿನ ಅಭದ್ರತೆಗಳು ಸಾಮಾನ್ಯ ಜೀವರನ್ನು ಅಲುಗಾಡಿಸುತ್ತಿದ್ದವು. ಆದರೆ, ಇಂದುಮತಿ ವೈಯಕ್ತಿಕ ದುಃಖ ಮರೆಯಲು ಪಕ್ಷ, ಸಂಘಟನೆಯ ಕೆಲಸದಲ್ಲಿ ಹೆಚ್ಚೆಚ್ಚು ತೊಡಗಿಕೊಂಡಳು. ಸತಾರಾದ ಕಾಸೇಗಾಂವಿನ ಮನೆ ಹೋರಾಟಗಾರರ ನೆಲೆಯಾಯಿತು. ಗ್ರಾಮೀಣ ಮಹಿಳೆಯರು ಎದುರಿಸುತ್ತಿದ್ದ ಹಿಂಸೆ, ಅನ್ಯಾಯ, ನಾನಾ ತರಹದ ತಾರತಮ್ಯಗಳ ವಿರುದ್ಧ ದನಿಯೆತ್ತಿದಳು. ಪರಿತ್ಯಕ್ತ ಮಹಿಳೆಯರ ಬದುಕು ಸುಧಾರಿಸುವಂತಹ ಹತ್ತು ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಳು. ಒಂಟಿ ಮಹಿಳೆಯರಿಗೆ ರೇಷನ್ ಕಾರ್ಡ್, ಪರಿಹಾರ, ಮನೆ, ಭೂಮಿ, ಜೀವನಾಂಶ ಕೊಡಿಸುವುದೇ ಮೊದಲಾದ ಕೆಲಸಗಳಿಗೆ ಕಚೇರಿ, ಕೇರಿ, ಮನೆ-ಮನೆ ತಿರುಗಿದಳು. ತನಗಾರೂ ಇಲ್ಲವೆಂಬ ಸಂಕಟದಲ್ಲಿ ಅಸಹಾಯಕರಾಗಿದ್ದ ಪರಿತ್ಯಕ್ತೆಯರ ವಿಮುಕ್ತಿಗಾಗಿ ಕಾಳಜಿಯಿಂದ ದುಡಿಯುತ್ತ ಸ್ವಂತ ನೋವನ್ನು ಮೀರಿದ ಅಕ್ಕನಾದಳು.

...ಇಂದುಮತಿ ಇಂದೂತಾಯಿಯಾದದ್ದು ಹೀಗೆ.

ಜಾತಿ-ವರ್ಗ-ಲಿಂಗತ್ವ: ಮೂರು ಮುಖದ ಮುಳ್ಳು

Image
Ambedkar

ಸ್ವಾತಂತ್ರ್ಯ ಕಾಲದಿಂದಲೂ ಹೋರಾಟದ ವಿವಿಧ ಧಾರೆಗಳನ್ನು ಕಂಡಿದ್ದ ಇಂದೂತಾಯಿ ಅವುಗಳಲ್ಲಿ ಭಿನ್ನಮತವೇ ಒಡಕಾಗುವುದನ್ನು ವಿಷಾದದಿಂದ ಗಮನಿಸಿದ್ದರು. ಜಾತಿ-ವರ್ಗ-ಲಿಂಗತ್ವ ಇವು ಮೂರೂ ತಾರತಮ್ಯ, ಶೋಷಣೆಯ ಕಾರಣವಾಗಿರುವುದರಿಂದ ಯಾವುದೇ ಒಂದನ್ನು ಕೇಂದ್ರವಾಗಿಟ್ಟುಕೊಂಡರೂ ಹೋರಾಟ ಸಮಗ್ರವಾಗುವುದಿಲ್ಲ; ಮೂರೂ ಸಂಧಿಸುವ ಬಿಂದುಗಳಲ್ಲಿ ಸಾಮಾಜಿಕ ಸಂಘಟನೆಯಾಗಬೇಕೆಂದು ಭಾವಿಸಿದರು. ಸಮಸ್ಯೆಗಳ ಮೂಲವಾದ ಜಾತಿ ದೌರ್ಜನ್ಯವನ್ನು ಎದುರಿಸದಿದ್ದರೆ ಯಾವುದೇ ಹೋರಾಟ ಸಫಲವಾಗುವುದಿಲ್ಲ ಎಂದು ಗ್ರಾಮೀಣ ಹಿನ್ನೆಲೆಯಿಂದ ಬಂದ ಇಂದೂತಾಯಿಗೆ ತಿಳಿದಿತ್ತು. ಅಂಬೇಡ್ಕರರ ಚಳವಳಿಯಲ್ಲಿ ಭಾಗಿಯಾಗದಿದ್ದರೂ, ಅವರ ಚಿಂತನೆಗಳ ಪ್ರಾಮುಖ್ಯತೆ ತಿಳಿದುಕೊಂಡಿದ್ದರು. ಪಕ್ಷದ ಮಟ್ಟದಲ್ಲೂ ಇದೇ ಚರ್ಚೆ ಎತ್ತುತ್ತಿದ್ದರು.

ಮಗ ಭರತ್ ವೈದ್ಯ ಪದವಿ ಪಡೆದು ಸ್ತ್ರೀರೋಗ ತಜ್ಞನಾದರು. 1972ರಲ್ಲಿ ಯುವಜನರಿಂದ ಆರಂಭವಾದ 'ದಲಿತ್ ಪ್ಯಾಂಥರ್ಸ್‍'ನಲ್ಲಿ ತೊಡಗಿಕೊಳ್ಳುತ್ತಲೇ ತಾಯಿಯ ಕೆಲಸಗಳಲ್ಲೂ ಕೈಜೋಡಿಸಿದರು. 1976ರಲ್ಲಿ ಭರತ್‍ಗಿಂತ ಎಂಟು ವರ್ಷ ಹಿರಿಯಳಾದ ಅಮೆರಿಕನ್ ಭಾರತೀಯ ಪ್ರಜೆ ಗೇಲ್ ಓಂವೆಡ್ ಇಂದುಮತಿಯವರ ಸೊಸೆಯಾಗಿ ಕಾಸೇಗಾಂವಿಗೆ ಬಂದರು. ಅಮೆರಿಕದ ಮಿನಿಯಾಪೊಲೀಸ್‍ನ ಗೇಲ್, ವಿದ್ಯಾರ್ಥಿ ದಿನಗಳಿಂದಲೇ ಹೋರಾಟ, ಸೇವೆಯಲ್ಲಿ ತೊಡಗಿಕೊಂಡವರು. ಏಷ್ಯಾ, ಅದರಲ್ಲೂ ಭಾರತ ತೀವ್ರವಾಗಿ ಸೆಳೆದ ಕಾರಣ ಎಂಫಿಲ್, ಪಿಎಚ್‍ಡಿಗಳಿಗಾಗಿ ಭಾರತದ ಸಾಮಾಜಿಕ ಚಳವಳಿಗಳ ಕುರಿತು ಅಧ್ಯಯನ ನಡೆಸಿದರು. ಪಶ್ಚಿಮ ಮಹಾರಾಷ್ಟ್ರದ ಅಬ್ರಾಹ್ಮಣ ಚಳವಳಿಗಳ ಬಗೆಗೆ ಸಂಶೋಧನೆ, ಕ್ಷೇತ್ರಕಾರ್ಯ ಮಾಡುವಾಗ ಸಂಪರ್ಕಕ್ಕೆ ಬಂದ ಇಂದೂತಾಯಿ ಮತ್ತು ಭರತ್‍ರ ಪರಿಚಯ, ಗೇಲ್-ಭರತ್ ಬಾಳಸಂಗಾತಿಗಳಾಗುವವರೆಗೆ ಮುಂದುವರಿಯಿತು. ದಲಿತ ಚಳವಳಿ, ಹೋರಾಟ, ಅಂಬೇಡ್ಕರ್‌ವಾದಿಗಳೊಡನೆ ಸೊಸೆ ಗೇಲ್‍ಗಿದ್ದ ಒಡನಾಟ ಇಂದೂತಾಯಿಯ ಚಿಂತನೆಗಳನ್ನು ಪ್ರಭಾವಿಸಿದವು. ಮುಂದಿನ ನಾಲ್ಕು ದಶಕ ಕಾಲ ಅತ್ತೆ, ಸೊಸೆ, ಮಗ ಮೂವರೂ ತಮ್ಮದೇ ದಾರಿಯಲ್ಲಿ ಒಂದೇ ಗುರಿಯೆಡೆಗೆ ನಡೆದರು. ಸಂಘಟನೆಗಳನ್ನು ಕಟ್ಟಿ ಬೆಳೆಸಿದರು.

Image
ಗೇಲ್ ಓಂವೆಡ್-ಭರತ್ ಜೋಡಿ

ಜೋತಿಬಾ-ಸಾವಿತ್ರಿಬಾಯಿ ಫುಲೆ-ಕಾರ್ಲ್ ಮಾರ್ಕ್ಸ್‌-ಅಂಬೇಡ್ಕರ್ ಚಿಂತನೆಗಳನ್ನು ಆಧರಿಸಿ ದಲಿತ, ಬಹುಜನ, ಆದಿವಾಸಿ, ಮಹಿಳೆಯರಿಗಾಗಿ 'ಶ್ರಮಿಕ ಮುಕ್ತಿ ದಳ,' 'ಸ್ತ್ರೀ ಮುಕ್ತಿ ಚಳವಳ್' ಮೊದಲಾದ ಸಂಘಟನೆಗಳನ್ನು ಕಟ್ಟಿದರು. ನೆಲ, ಜಲ, ಗಾಳಿ ಹಾಗೂ ಪ್ರಾಕೃತಿಕ ಸಂಪನ್ಮೂಲಗಳ ಮೇಲೆ ಪ್ರತಿಯೊಬ್ಬ ವ್ಯಕ್ತಿಯ ಹಕ್ಕುಗಳಿಗಾಗಿ ಹೋರಾಡುವ ಸಂಘಟನೆ 'ಶ್ರಮಿಕ ಮುಕ್ತಿ ದಳ.' ಅದು ಸ್ತ್ರೀವಾದಿ, ಜಾತಿ ವಿರೋಧಿ, ಅಬ್ರಾಹ್ಮಣ ಚಳವಳಿಗಳಿಂದಲೂ ಪ್ರೇರೇಪಣೆ ಪಡೆದು 1980ರ ಆಸುಪಾಸು ರೂಪುಗೊಂಡಿತು. ಭರತ್ ಅದರ ಪೂರ್ಣಾವಧಿ ಕಾರ್ಯಕರ್ತರಾದರು. "ಕ್ರಾಂತಿ ಎನ್ನುವುದು ಯಾವುದೋ ಒಂದು ದಿನ ಸಂಭವಿಸಿ ಮುಗಿಯುವ ಘಟನೆಯಲ್ಲ. ಅದು ನಿರಂತರ ನಡೆಯುತ್ತಲೇ ಇರಬೇಕಾದ ಪ್ರಕ್ರಿಯೆ. ಬದಲಾವಣೆಯ ಪ್ರಕ್ರಿಯೆಯನ್ನು ಇಂದೇ ಆರಂಭಿಸಬೇಕು. ಸ್ಥಾಪಿತವಾಗಿರುವ, ಆಳಬೇರುಗಳನ್ನಿಳಿಸಿ ಭದ್ರವಾಗಿರುವ ಬಂಡವಾಳಶಾಹಿ, ಜಾತಿಗ್ರಸ್ತ, ಪಿತೃಪ್ರಧಾನ ಸಮಾಜದ ರಚನೆಗಳನ್ನು ಒಂದೊಂದೇ ಪೆಟ್ಟು ಕೊಟ್ಟು, ಅಲುಗಾಡಿಸಿ, ಕಿತ್ತುಹಾಕಿ, ಹೊಸ ಬೇರುಗಳನ್ನಿಳಿಸಲು ಆಗ ಮಾತ್ರ ಸಾಧ್ಯವಾಗುತ್ತದೆ. ಇದೇ ಕ್ರಾಂತಿ. ಹೊಸದನ್ನು ಸೃಷ್ಟಿಸುವ ಪ್ರಕ್ರಿಯೆ," ಎಂಬ ವಿಚಾರ ಶ್ರಮಿಕ ಮುಕ್ತಿ ದಳದ ಪ್ರಣಾಳಿಕೆಯಾಗುವುದರಲ್ಲಿ ಇಂದೂತಾಯಿ ಮುಖ್ಯ ಪಾತ್ರ ವಹಿಸಿದರು.

ಬರ, ನೆರೆ, ಅಣೆಕಟ್ಟು ಯೋಜನೆ, ಜಾತಿ ದೌರ್ಜನ್ಯ ಮೊದಲಾದ ಸಮಸ್ಯೆಗಳ ವಿರುದ್ಧ ರೈತರು, ಕೂಲಿಕಾರ್ಮಿಕರನ್ನು ಶ್ರಮಿಕ ಮುಕ್ತಿ ದಳ ಸಂಘಟಿಸಿತು. ಮಹಾರಾಷ್ಟ್ರದ 89 ಖಾಯಂ ಬರಪೀಡಿತ ತಾಲೂಕುಗಳಲ್ಲಿ ಸಾಂಗ್ಲಿ ಜಿಲ್ಲೆಯ ಖಾನಾಪುರ ತಾಲೂಕಿನ ಒಣಪ್ರದೇಶವೂ ಒಂದು. ಅದಕ್ಕೆ ಖಾಯಂ ಪರಿಹಾರ ರೂಪಿಸಲು ಬಲಿರಾಜ ಅಣೆಕಟ್ಟನ್ನು ಜನರೇ ನಿರ್ಮಿಸುವ ಯೋಜನೆಯನ್ನು ಹಾಕಿತು. ಯೆರಾಲ ನದಿಯ ಎರಡೂ ದಂಡೆಯ ಗ್ರಾಮಸ್ಥರೊಂದಿಗೆ ವಿಸ್ತೃತ ಚರ್ಚೆ ನಡೆದು, ಬಹುಜನರ ರಾಜ 'ಬಲಿರಾಜ’ನ ಹೆಸರಿನಲ್ಲಿ ಅಣೆಕಟ್ಟು ಕಟ್ಟುವುದೆಂದು ನಿರ್ಧಾರವಾಯಿತು. ನದಿದಂಡೆಯಲ್ಲಿ ನಡೆಯುತ್ತಿದ್ದ ಅವೈಜ್ಞಾನಿಕ ಕಾನೂನುಬಾಹಿರ ಮರಳು ಗಣಿಗಾರಿಕೆಯ ವಿರುದ್ಧ ಮೊದಲ ಹೋರಾಟ ನಡೆಯಿತು. ಸೀಮಿತ ಮರಳು ಗಣಿಗಾರಿಕೆ ನಡೆಸಬೇಕು; ಅದರ ಮೊದಲ ಹಕ್ಕು ಅಣೆಕಟ್ಟೆಯಿಂದ ಮುಳುಗಡೆಗೊಳಗಾಗಲಿರುವ ಗ್ರಾಮಸ್ಥರಿಗೇ ಕೊಡಬೇಕು; ಮರಳು ಗಣಿಗಾರಿಕೆಯ ರಾಯಧನದಿಂದ ಬರುವ ಹಣವನ್ನು ಅಣೆಕಟ್ಟೆ ಕಟ್ಟಲು ಬಳಸಬೇಕು ಎಂಬ ನೀತಿ ಅಳವಡಿಸುವಲ್ಲಿ ಯಶಸ್ವಿಯಾಯಿತು. ತಮ್ಮೂರಿನ ನೀರಿನ ಮೇಲೆ, ಮರಳಿನ ಮೇಲೆ ಎಲ್ಲ ಗ್ರಾಮಸ್ಥರಿಗೂ ಹಕ್ಕಿದೆ ಎಂದು ಎಲ್ಲರಿಗೂ ಮರಳಿನ ಹಣ ಕೈಸೇರುವಂತೆ ನೋಡಿಕೊಂಡಿತು. ಯಶಸ್ವಿಯಾಗಿ ಸಣ್ಣ ಅಣೆಕಟ್ಟೆ ನಿರ್ಮಾಣವಾಗಿ, ಜನರೇ ರೂಪಿಸಿ ನಿರ್ವಹಿಸುತ್ತಿರುವ ಏಕೈಕ ಅಣೆಕಟ್ಟೆ ಎಂಬ ಹೆಗ್ಗಳಿಕೆಗೆ ಅದೀಗ ಪಾತ್ರವಾಗಿದೆ.

Image
ಬಲಿರಾಜ ಅಣೆಕಟ್ಟು

ಶ್ರಮಿಕ ಮುಕ್ತಿ ದಳವು ಬಲಿಜನ ಸಾಂಸ್ಕೃತಿಕ ಸಂಘಟನೆಯನ್ನೂ ಆರಂಭಿಸಿತು. ಅದರ ಒಂದು ಪ್ರಮುಖ ಹೋರಾಟ 'ವಿಠ್ಠಲ ರುಕ್ಮಾಯಿ ಮುಕ್ತಿ ಆಂದೋಲನ.' ಪಂಢರಾಪುರದ ವಿಠ್ಠಲ ದೇವಾಲಯದ ನಿರ್ವಹಣಾ ಸಮಿತಿಯಿಂದ ಹಲವು ವಿಚಿತ್ರ, ಅನ್ಯಾಯದ ರೂಢಿಗಳು ಜಾರಿಯಾಗಿದ್ದವು. ದೇವಾಲಯದ ನಿರ್ವಹಣಾ ಸಮಿತಿಯಲ್ಲಿ ಹಿಂದೂಗಳಷ್ಟೇ ಇರಬೇಕು; ಪುರುಷಸೂಕ್ತವನ್ನು ಪೂಜೆಯ ವೇಳೆಗೆ ಪಠಿಸಬೇಕು; ಅರ್ಚಕರು ರೇಶಿಮೆ ವಸ್ತ್ರ ಧರಿಸಬೇಕು ಇತ್ಯಾದಿ ಅಸಾಂವಿಧಾನಿಕ ನೀತಿಗಳು ನುಸುಳಿಕೊಂಡಿದ್ದವು. ಶ್ರಮಿಕ ಮುಕ್ತಿ ದಳವು ವಿಠ್ಠಲ ರುಕುಮಾಯಿಯರನ್ನು ಈ ನೀತಿಗಳಿಂದ ಮುಕ್ತಗೊಳಿಸಲು ಹೋರಾಟ ಆರಂಭಿಸಿತು. ಆಡಳಿತ ಸಮಿತಿಯಲ್ಲಿ ಎಲ್ಲ ಸಮುದಾಯಗಳ ವಾರ್ಕರಿಗಳಿರಬೇಕು; ವರ್ಣಶ್ರೇಣಿಯನ್ನು ಪ್ರತಿಪಾದಿಸಿದ ಮೊದಲ ಶ್ಲೋಕ ಪುರುಷಸೂಕ್ತವಾಗಿರುವುದರಿಂದ ಅದರ ಪಠಣ ಕೈಬಿಡಬೇಕು ಮುಂತಾದ ಬೇಡಿಕೆಗಳಿಗಾಗಿ ದೀರ್ಘ ಹೋರಾಟ ನಡೆಸಿತು. ನ್ಯಾಯಸಮರವಿನ್ನೂ ನಡೆಯುತ್ತಲೇ ಇದೆ.

ರಾಯಗಢ ಜಿಲ್ಲೆಯ ಅಲಿಬಾಗದಲ್ಲಿ ಟಾಟಾ ಮತ್ತು ರಿಲಯನ್ಸ್‌ನವರ ಉಷ್ಣವಿದ್ಯುತ್ ಸ್ಥಾವರ ಸ್ಥಾಪನೆಯ ವಿರುದ್ಧವೂ ದಳವು ಹೋರಾಟ ರೂಪಿಸಿತು. ಕೊಂಕಣದವರಿಗೆ ಪರ್ಯಾಯ ಶಕ್ತಿ ಮೂಲಗಳು ಯಾವುದಾಗಿರಬೇಕು ಎಂಬ ಬಗೆಗೆ ಜನಮತ ಸಂಗ್ರಹ ನಡೆಸಿತು. ಗಾಳಿ ಗಿರಣಿ ಸ್ಥಾಪನೆಯ ಸಮಯದಲ್ಲಿ 'ನಮ್ಮ ಹೊಲಗಳ ಮೇಲಿನ ಗಾಳಿ ನಮ್ಮದು' ಎಂಬ ಘೋಷಣೆಯೊಂದಿಗೆ ಸಾಂಗ್ಲಿ ಮತ್ತು ಸತಾರಾದ ರೈತರನ್ನು ಸಂಘಟಿಸಿತು. "ಗಾಳಿ ಗಿರಣಿ ಸ್ಥಾಪನೆ ಮಾಡಲು ತಮ್ಮ ಹೊಲ ಮಾರಾಟ ಮಾಡಲಾರೆವು; ಆದರೆ, ಭೋಗ್ಯಕ್ಕೆ ಕೊಡುವೆವು," ಎಂದು ರೈತರು ಹೇಳಿದರು. ಬಳಕೆಯಾದ ಪ್ರತಿ ಎಕರೆ ಭೂಮಿಗೆ ಎರಡು ಲಕ್ಷ ಭೋಗ್ಯ, ಉತ್ಪಾದನೆಯಾದ ಪ್ರತಿ ಮೆಗಾವ್ಯಾಟ್ ವಿದ್ಯುತ್‍ಗೆ ಆಯಾ ಗ್ರಾಮ ಪಂಚಾಯ್ತಿಗೆ ವಾರ್ಷಿಕ 15,000 ರೂಪಾಯಿ ಶುಲ್ಕ ಕೊಡುವಂತೆ ನೀತಿ ರೂಪಿಸುವಲ್ಲಿ ಸಫಲವಾಯಿತು.

ಈ ಲೇಖನ ಓದಿದ್ದೀರಾ?: ಮುಳ್ಳುಹಾದಿಗೆ ಮಣ್ಣು ಹೊತ್ತವರು | ಮರೆವಿಗೆ ಸಲ್ಲಬಾರದ ಚೇತನ - ಉಮಾಬಾಯಿ ಕುಂದಾಪುರ

ಅಣೆಕಟ್ಟೆ ಕಟ್ಟುವ ಪ್ರದೇಶಗಳಲ್ಲಿ ಮುಳುಗಡೆ/ ಪುನರ್ವಸತಿ ದೊಡ್ಡ ಸಮಸ್ಯೆಯಾಗಿದೆ. ಅದಕ್ಕೆ ದಳವು ರೂಪಿಸಿದ ಚಿಂತನೆಗಳು ಗಮನಾರ್ಹವಾಗಿವೆ. ಅಣೆಕಟ್ಟೆ ಕಟ್ಟುವಾಗ ಎಷ್ಟು ಸಾಧ್ಯವೋ ಅಷ್ಟು ಕಡಿಮೆ ನೆಲ ಮುಳುಗುವಂತೆ ಯೋಜನೆ ರೂಪಿಸಬೇಕು; ಪುನರ್ವಸತಿ ಮೊದಲು ವ್ಯವಸ್ಥೆಯಾಗಬೇಕು, ಬಳಿಕ ಅಣೆಕಟ್ಟು ನಿರ್ಮಾಣವಾಗಬೇಕು; ಅದೇ ಅಣೆಕಟ್ಟೆಯ ನೀರಾವರಿ ಪ್ರದೇಶದಲ್ಲಿಯೇ ಪುನರ್ವಸತಿ ಭೂಮಿ ಮಂಜೂರಾಗಬೇಕು; ನೀರಾವರಿ ಸಂಪೂರ್ಣ ದೊರೆಯುವವರೆಗೆ ಪುನರ್ವಸತಿ ಮಾಡಿಕೊಂಡವರಿಗೆ ನೀರಿನ ಭತ್ಯೆ ಕೊಡಬೇಕು ಮುಂತಾದ ನೀತಿಗಳನ್ನು ಮಹಾರಾಷ್ಟ್ರ ರಾಜ್ಯದ ಎಂಟು ಜಿಲ್ಲೆಗಳ ಅಣೆಕಟ್ಟೆ ಯೋಜನೆಗಳಲ್ಲಿ ಅಡಕಗೊಳಿಸಲು ಶ್ರಮಿಕ ಮುಕ್ತಿ ದಳ ಯಶಸ್ವಿಯಾಗಿದೆ.

'ಸ್ತ್ರೀ ಮುಕ್ತಿ ಸಂಘರ್ಷ ಚಳವಳ್' 1985ರ ಮಾರ್ಚ್‌ನಲ್ಲಿ ಆರಂಭವಾಯಿತು. 'ಹೀರ್ವಿ ಧರ್ತಿ, ಸ್ತ್ರೀ ಶಕ್ತಿ, ಮಾನವ ಮುಕ್ತಿ’ (ಹಚ್ಚನೆ ಭೂಮಿ, ಮಹಿಳಾ ಶಕ್ತಿ, ಮಾನವ ಮುಕ್ತಿ) ಅದರ ಘೋಷವಾಕ್ಯವಾಯಿತು. ಸಾರಾಯಿ ವಿರೋಧ, ವರದಕ್ಷಿಣೆ ವಿರೋಧ, ಕುಡಿಯುವ ನೀರಿನ ವ್ಯವಸ್ಥೆ, ಉದ್ಯೋಗ ಖಾತ್ರಿ, ತಾರತಮ್ಯ ಮತ್ತು ದೌರ್ಜನ್ಯದ ವಿರೋಧ, ಪರಿತ್ಯಕ್ತ ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕಾಗಿ ವಿವಿಧ ನೆಲೆಯ ದೀರ್ಘ ಹೋರಾಟಗಳನ್ನು ಅದು ಸಂಘಟಿಸಿತು. ಗಂಡ ಬಿಟ್ಟ, ಗಂಡನಿಂದ ದೂರವಿರುವ, ಗಂಡ ಇಲ್ಲದಿರುವ ಸಾವಿರಾರು ಒಂಟಿ ಮಹಿಳೆಯರನ್ನು ಸಂಘಟಿಸಿ ಅವರಿಗೆ ಭೂಮಿ ಕೊಡಿಸುವ, ಸ್ವಾಯತ್ತ ಬದುಕಿಗೊಂದು ನೆಲೆ ಒದಗಿಸುವ ಕಾರ್ಯಕ್ರಮ ಹಾಕಿಕೊಂಡಿತು. ಅದೊಂದು ದೀರ್ಘ ನಿರಂತರ ಹೋರಾಟ. ಭೂಮಿಕನ್ಯಾ (ನೆಲದ ಮಗಳು) ಆಂದೋಲನ, ಕಬ್ಜಾ (ವಶಗೊಳಿಸಿಕೋ) ಆಂದೋಲನಗಳು ಆಳುವವರ ಜಡತನವನ್ನು ಬಡಿದೆಬ್ಬಿಸಲು ಭೂಹೀನ ಮಹಿಳೆಯರಿಂದ ಆರಂಭವಾದವು.

ಇದೆಲ್ಲ ಕಾರ್ಯಕ್ರಮ, ಯೋಜನೆಗಳಿಗೆ ಸಂಘಟನೆಯ ಕಾರ್ಯಕರ್ತರು, ಮಗ, ಸೊಸೆಯ ಜೊತೆಗೆ ಇಂದುಮತಿ ಸಂಪೂರ್ಣ ತೊಡಗಿಕೊಂಡರು.

* * * * *

Image
ಬಲಿರಾಜ ಅಣೆಕಟ್ಟೆ ಸಂದರ್ಭ ಒಂದುಗೂಡಿದ ಸಾರ್ವಜನಿಕರು

ಬದಲಾಗುತ್ತಿರುವ ಕಾಲಕ್ಕೆ ಇಂದೂತಾಯಿ ಸಾಕ್ಷಿಯಾಗಿದ್ದರು. ಸಂಘಟನೆ, ಪಕ್ಷ, ಸಂಸ್ಥೆಗೆ ಸೇರದೆ ಎಷ್ಟೋ ಚಿಂತನಶೀಲ ಮಹಿಳೆಯರು ಸ್ವಾಯತ್ತ ಗುಂಪುಗಳಾಗಿ ಕೆಲಸ ಮಾಡುತ್ತಿದ್ದದ್ದನ್ನು ಗಮನಿಸಿದ್ದರು. ತಂತಮ್ಮ ಸಮುದಾಯದ ಏಳ್ಗೆಗಾಗಿ ಬದುಕು ತೆತ್ತುಕೊಂಡು ಎಲೆಮರೆಯಾಗಿ ಉಳಿದ ಹಲವರಿದ್ದರು. ಮತ್ತೆ ಕೆಲವು ಮಹಿಳೆಯರು ಸಾಂಸ್ಥಿಕ ಕಟ್ಟುವಿಕೆಯಲ್ಲಿ ಆಸಕ್ತರಾಗಿ ಮಹಿಳಾ ಅಧ್ಯಯನ ಕೇಂದ್ರಗಳು, ಕಾನೂನು ನೆರವು ಕೇಂದ್ರಗಳು, ಸರ್ಕಾರೇತರ ಸಂಸ್ಥೆಗಳನ್ನು ಆರಂಭಿಸಿದ್ದರು. ಕೆಲವರು ಸಂಪಾದನೆಗಾಗಿ ಎನ್‍ಜಿಒಗಳತ್ತ ನಡೆಯತೊಡಗಿದ್ದರು. ಮಹಿಳೆಯರ ಚಳವಳಿಗಳು ರಾಜಕೀಯ ಪಕ್ಷದ ವತಿಯಿಂದಲೂ ನಡೆಯತೊಡಗಿದವು. ಆದರೆ, ಇಷ್ಟೆಲ್ಲ ಮಹಿಳಾ ಭಾಗವಹಿಸುವಿಕೆಯ ನಡುವೆಯೂ ಎಷ್ಟೋ ಮಹಿಳಾ ಪ್ರಶ್ನೆಗಳು ಹಾಗೆಯೇ ಉಳಿದುಕೊಳ್ಳುತ್ತಿದ್ದವು. ಜಾತಿ, ವರ್ಗಗಳ ಚರ್ಚೆಗಳಲ್ಲಿ ಪಿತೃಪ್ರಾಧಾನ್ಯ ಮತ್ತು ಲಿಂಗತ್ವ ಆಯಾಮ ತಪ್ಪಿಹೋಗುವುದು ಸಾಮಾನ್ಯವಾಗಿತ್ತು. ಹಾಗಾಗದಂತೆ ಎಚ್ಚರ ವಹಿಸುವ ಅಗತ್ಯವನ್ನು ಇಂದೂತಾಯಿ ಪದೇಪದೆ ನೆನಪಿಸುತ್ತಿದ್ದರು. ಅವರ ಚಿಂತನೆಗಳಿಗೆ ನೀರೆರೆಯುತ್ತ ಸೊಸೆ ಗೇಲ್ ಬೆಂಬಲವಾಗಿದ್ದರು.

ಏಳು ದಶಕಗಳ ಅವಧಿಯ ಸಾರ್ವಜನಿಕ ಬದುಕು ರೂಪಿಸಿದ ಒಬ್ಬ ಮಾಗಿದ ಒಡನಾಡಿಯಾಗಿ 2010ರವರೆಗೂ ಇಂದೂತಾಯಿ ಕ್ರಿಯಾಶೀಲವಾಗಿದ್ದರು. ತಾವು ಕೆಲಸ ಮಾಡಿದ ಕಡೆಗಳಲ್ಲೆಲ್ಲ ಯುವ ಪೀಳಿಗೆಗೆ ನಾಯಕತ್ವದ ಗುಣ ಬೆಳೆಸುವ ಯೋಜನೆ ಹಾಕಿಕೊಳ್ಳುತ್ತಿದ್ದರು. ಸಾರ್ವಜನಿಕ ತೊಡಗಿಕೊಳ್ಳುವಿಕೆಯ ಉತ್ಸಾಹ, ಬದ್ಧತೆಯನ್ನು ತಮ್ಮ ಕುಟುಂಬದ ನಾಲ್ಕನೆಯ ತಲೆಮಾರಿಗೂ ಯಶಸ್ವಿಯಾಗಿ ದಾಟಿಸಿದರು. ತಂದೆ ಮತ್ತು ಸಂಗಾತಿಯೊಡನೆ ಇಂದೂತಾಯಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದರೆ, ಸ್ವಾತಂತ್ರ್ಯಾನಂತರ ಪತಿ, ಮಗ, ಸೊಸೆಯೊಡನೆ ಅದೇ ಬದ್ಧತೆಯೊಂದಿಗೆ ಹೋರಾಟ ಮುಂದುವರಿಸಿದರು. ಸಾಮಾಜಿಕ ಹೋರಾಟದ ಕಣಕ್ಕೆ ನೂರಾರು ಜನರನ್ನು ಸೆಳೆದ ಹಾಗೆಯೇ ತನ್ನ ಮಗ, ಸೊಸೆ, ಮತ್ತೀಗ ಮೊಮ್ಮಗಳೂ ತೊಡಗಿಕೊಳ್ಳುವಂತೆ ಪ್ರಭಾವಿಸಿರುವುದು ವಿಶೇಷವಾಗಿದೆ. ತನಗೆ ತಕ್ಕ ಸಂಗಾತಿಯನ್ನು ಆಯ್ದುಕೊಂಡದ್ದು, ಮಗನನ್ನು ತಾನು ನಂಬಿದ ಜೀವನಕ್ರಮಕ್ಕೆ ಪರಿಚಯಿಸಿ ಮುಕ್ತವಾಗಿ ಬೆಳೆಸಿದ್ದು, ವಿದೇಶದ ಸೊಸೆಯನ್ನು ತೆರೆದ ಬಾಹುಗಳಿಂದ ಸ್ವೀಕರಿಸಿ ಅವರೊಡನೆ ಪೂರಕವಾಗಿ ಕೆಲಸ ಮಾಡಿದ್ದು, ಕುಟುಂಬದ ಪರಂಪರೆಯ ದಾರಿಯಲ್ಲೇ ಮೊಮ್ಮಗಳು ಪ್ರಾಚಿ ಪಾಟಣಕರ್ ಅಮೆರಿಕದಲ್ಲಿ ಮುಂದುವರಿಯುತ್ತಿರುವುದು ಹೋರಾಟಗಾರ್ತಿಯೊಬ್ಬಳ ಹಿರಿಯ ಸಾಧನೆಗಳೆನ್ನಬಹುದು. 2017ರಲ್ಲಿ 91ನೆಯ ವಯಸ್ಸಿನಲ್ಲಿ ಇಂದೂತಾಯಿ ನಿಧನರಾದರು. ಅವರ ಬಳಿಕವೂ ಸಂಘಟನೆಗಳು ಭರತ್ ಪಾಟಣಕರ್, ವಹರು ಸೋನಾವಣೆ, ರಾಹುಲ್ ಸವಿತಾ, ಸಂಪತ್ ದೇಸಾಯಿ, ಮುಕ್ತಿ ಸಾಧನಾ ಮೊದಲಾದವರಿಂದ ಯಶಸ್ವಿಯಾಗಿ ಮುಂದುವರಿಯುತ್ತಿದ್ದರೆ ಅದಕ್ಕೆ ಇಂದೂತಾಯಿಯ ದೂರದರ್ಶಿತ್ವ ಕಾರಣವಾಗಿದೆ.

ಸದುದ್ದೇಶದ ಸಾರ್ವಜನಿಕ ಕೆಲಸಗಳಲ್ಲಿ ತೊಡಗಿಕೊಂಡೇ ಹೆಣ್ಣಿಗೆ ವಹಿಸಲ್ಪಟ್ಟ ಸತಿತ್ವ, ಸೊಸೆತನ, ತಾಯ್ತನ, ಅಕ್ಕತನ, ಅತ್ತೆತನ ಮುಂತಾದ 'ತನ’ಗಳನ್ನು ತಳಮಳವಿಲ್ಲದೆ ಪ್ರೀತಿಯಿಂದ ನಿಭಾಯಿಸುವುದು ಸಾಧ್ಯ ಎಂದು ಇಂದೂತಾಯಿ ತೋರಿಸಿಕೊಟ್ಟಿದ್ದಾರೆ. ಕುಟುಂಬ, ಸಮಾಜ, ಪಕ್ಷ, ಸಂಘಟನೆಗಳ ಬದುಕೆಂಬ ಕೊಂಡ ಹಾಯ್ದು ಎದ್ದುಬಂದ ಇಂದೂತಾಯಿ, ಹಲವು ನೆಲೆಗಳಿಂದ ಅನುಕರಣೀಯ ಮಾದರಿ.

ನಿಮಗೆ ಏನು ಅನ್ನಿಸ್ತು?
5 ವೋಟ್