ಹೊಸಿಲ ಒಳಗೆ-ಹೊರಗೆ | ಹೃದಯವಂತಿಕೆಯ ಚಂದದ ಮುಂದೆ ಕಪ್ಪು ಬಣ್ಣ, ಮೊಂಡು ಮೂಗು ಯಾವ ಲೆಕ್ಕ?

Inner Beauty 2

ಕಾಲಿಲ್ಲದ ಹೆಣ್ಣುಮಗಳು ಹೆಲ್ಮೆಟ್ ಹಾಕಿ ದಿಟ್ಟವಾಗಿ ಸ್ಕೂಟರ್ ಓಡಿಸುವಾಗ, ಯಾರಾದರೂ ಅನ್ಯಾಯದ ವಿರುದ್ಧ ಸೆಟೆದು ನಿಂತಾಗ, ಟ್ರಾನ್ಸ್ ಮಹಿಳೆಯೊಬ್ಬಳು ಸಾರ್ವಜನಿಕರ ಎದುರು ಅಭಿಮಾನದಿಂದ ಮಾತಾಡುವಾಗ, ಹುಡುಗನೊಬ್ಬ ಅಳುಕಿಲ್ಲದೆ ಮನೆಮಂದಿಯ ಬಟ್ಟೆ ಒಗೆದು ಒಣಹಾಕುವಾಗ ಕಾಣುವ ಸೌಂದರ್ಯದ ನೋಟಗಳು ಭರವಸೆಯ ಹಾಡು ಹಾಡುತ್ತವೆ

ಚಂದ ಅಥವಾ ಸೌಂದರ್ಯದ ಬಗ್ಗೆ ತರಬೇತಿಯಲ್ಲಿ ಹೀಗೊಂದು ಚಿಂತನೆ ನಡೆಯುತ್ತದೆ.

ಚಾರ್ಟ್ ಪೇಪರ್ ಮೇಲೆ ಹುಡುಗಿಯ ರೇಖಾಚಿತ್ರವೊಂದನ್ನು ಬರೆದಿದ್ದು, ಅದನ್ನು ಕೇಂದ್ರವಾಗಿ ಇರಿಸಿಕೊಂಡು ಸಹಭಾಗಿಗಳೊಂದಿಗೆ ಮಾತುಕತೆ ಸಾಗುತ್ತದೆ. “ಇಲ್ಲೊಬ್ಬ ಹುಡುಗಿ ಇದ್ದಾಳೆ. ಇವಳು ಇನ್ನೂ ಚಂದ ಕಾಣಬೇಕಾದರೆ ಏನು ಮಾಡಬೇಕು?” ಅಂತ ಕೇಳಿದರೆ ಏನಾಶ್ಚರ್ಯ... ಪಟಪಟನೆ ಉತ್ತರ ಬರುತ್ತದೆ! ಬಿಂದಿ ಹಾಕಿ, ಕಿವಿಗೆ ರಿಂಗ್ ಹಾಕಿ, ಕಾಲಿಗೆ ಗೆಜ್ಜೆ, ತಲೆಗೆ ಹೂವು, ಕೈಗೆ ಬಳೆ, ಹೆಗಲಲ್ಲಿ ಒಂದು ಬ್ಯಾಗು, ಲಿಪ್‍ಸ್ಟಿಕ್ಕು, ಕಣ್ಣು ಕಪ್ಪು ಹಾಕಿ... ಇತ್ಯಾದಿ-ಇತ್ಯಾದಿ. ಸಹಭಾಗಿಗಳು ಹೇಳಿದಂತೆಲ್ಲ ಚಿತ್ರಕ್ಕೆ ಸೇರಿಸುತ್ತ ಹೋಗುತ್ತೇವೆ. ನಡುನಡುವೆ, "ಈ ಹುಡುಗಿ ನಿಜವಾಗಿಯೂ ಚಂದ ಕಾಣಿಸಬೇಕೆಂದರೆ ಏನು ಬೇಕು?" ಅಂತ ಸ್ವಲ್ಪ ಒತ್ತಿ ಕೇಳುತ್ತಿರುತ್ತೇವೆ. ಸ್ವಲ್ಪ ಸಾವಧಾನ ಆಗುತ್ತಿದ್ದಂತೆಯೇ ಹೊಸ ಬಗೆಯ ಉತ್ತರಗಳು ಸಿಗತೊಡಗುತ್ತವೆ. ಮುಖದಲ್ಲಿ ನಗು ಇರಬೇಕು ಅಂತ ಶುರುವಾಗಿ, ಧೈರ್ಯ, ಶಿಕ್ಷಣ, ಅರಿವು, ಆತ್ಮವಿಶ್ವಾಸ, ಪ್ರತಿಭೆ, ಆರೋಗ್ಯ, ಒಳ್ಳೆಯ ಮನಸ್ಸು, ಪ್ರೀತಿ, ವಿಶ್ವಾಸ, ಸ್ನೇಹ ಭಾವ... ಹೀಗೆ ಮುಂದುವರಿಯುತ್ತದೆ.

ಈ ಪ್ರಕ್ರಿಯೆ ಬಹಳ ಹಗುರವಾಗಿ ಸಾಗುತ್ತಿದ್ದಂತೆಯೇ, "ಚಂದ ಅಂದರೆ ಏನು?" ಎಂಬ ಜಿಜ್ಞಾಸೆ ಶುರುವಾಗುತ್ತದೆ. ಎಲ್ಲರ ವ್ಯಕ್ತಿತ್ವದಲ್ಲೂ ಬಾಹ್ಯ ಸೌಂದರ್ಯ ಮತ್ತು ಆಂತರಿಕ ಸೌಂದರ್ಯ ಇರುತ್ತದೆ. ಬಾಹ್ಯ ಸೌಂದರ್ಯ ಒಂದು ರೀತಿಯಲ್ಲಿ ಖುಷಿ ಕೊಡುತ್ತದೆ, ಚಂದ ಕಾಣಿಸಿಕೊಳ್ಳಲು ನಾವೆಲ್ಲ ಏನೇನೋ ಮಾಡಿಕೊಳ್ಳುತ್ತೇವೆ. ಚಂದ ಕಾಣಿಸಿಕೊಳ್ಳುವುದು ಒಮ್ಮೊಮ್ಮೆ ಆತ್ಮವಿಶ್ವಾಸವನ್ನೂ ಕೊಡಬಹುದು. ಆದರೂ, ಬಾಹ್ಯ ಸೌಂದರ್ಯ ಅನ್ನುವುದು ಬಹಳ ಮಟ್ಟಿಗೆ ಹುಟ್ಟಿನಿಂದ ಬಂದಿರುವುದು. ಬಣ್ಣ, ಗಾತ್ರ, ಆಕಾರ ಎಲ್ಲವೂ ಅದರ ಪಾಡಿಗೆ ಸಿಕ್ಕಿದ್ದು. 'ಫೇರ್ ಅಂಡ್ ಲವ್ಲೀ' ಹಾಕಿ ಎಷ್ಟು ತೀಡಿದರೂ ಬಣ್ಣ ಬದಲಾಗದು. ಇನ್ನು, ಪ್ಲಾಸ್ಟಿಕ್ ಸರ್ಜರಿಯಂತಹವು ಎಲ್ಲರ ಕೈಗೆ ಎಟಕುವಂತಹುದೂ ಅಲ್ಲ. ಇರಲಿ, ಇವೆಲ್ಲ ಅವರವರ ಆಯ್ಕೆಗೆ ಬಿಟ್ಟುಬಿಡಬಹುದು. ಅಂತೆಯೇ, ದೈಹಿಕ ಸೌಂದರ್ಯವನ್ನು ಸಂಭ್ರಮಿಸುವುದನ್ನು, ಅಲಂಕಾರ ಮಾಡಿಕೊಳ್ಳುವ ಆಸಕ್ತಿಯನ್ನು ಕೀಳಾಗಿ ನೋಡಬೇಕಾಗಿಲ್ಲ. ಅದೂ ಬದುಕಿನ ಒಂದು ಭಾಗವೇ. ಬಹಳಷ್ಟು ಹೆಣ್ಣು, ಗಂಡು ಟ್ರಾನ್ಸ್‌ಜೆಂಡರ್ ಮಂದಿ ಅವರವರದ್ದೇ ರೀತಿಯಲ್ಲಿ ಅಲಂಕಾರ ಮಾಡಿಕೊಳ್ಳುವುದಕ್ಕೆ, ಚಂದ ಕಾಣುವುದಕ್ಕೆ ಇಷ್ಟಪಡುತ್ತಾರೆ. ಹಾಗೆ ಇಷ್ಟಪಡದೆ ಇರುವವರೂ ಬಹಳ ಮಂದಿ ಇದ್ದಾರೆ.

Image
Inner Beauty 3

ಆದರೆ, ಇಲ್ಲಿ ಒಂದು ಸೂಕ್ಷ್ಮ ಅಂಶ ಇದೆ. ‘ಸೌಂದರ್ಯ’ ಅಂದರೆ ಹೀಗೆಯೇ ಅನ್ನುವ ಒಂದು ಸಿದ್ಧ ಮಾದರಿಯನ್ನು ನೀಡಲಾಗಿದೆಯಲ್ಲ - ತೆಳ್ಳಗೆ, ಬೆಳ್ಳಗೆ, ದಟ್ಟ ಕೂದಲು, ಸೊಂಟ ಸಪೂರ, ಚೂಪು ಮೂಗು, ರೋಮರಹಿತ ಕೈ-ಕಾಲು, ಎತ್ತರದ ಸ್ತನಗಳು, ನೀಳ ಕಾಲುಗಳು, ಸಣ್ಣ ನಿತಂಬಗಳು -  ಹೀಗೇ ಒಂದಷ್ಟು - ಈ ಮಾದರಿಯನ್ನೇ ಒಪ್ಪಿಕೊಂಡು, ತಾವು ಹೀಗೆ ಇಲ್ಲವಲ್ಲ ಎಂದು ಅದೆಷ್ಟೋ ಹೆಣ್ಣುಮಕ್ಕಳು ಬಹಳ ಬಾಧೆಪಡುತ್ತಾರೆ. ಮೊಂಡು ಮೂಗು, ಅಗಲ ಹಣೆ, ಕಪ್ಪು ಬಣ್ಣ ಅಂತ ಅದೆಷ್ಟು ಹೆಣ್ಣುಮಕ್ಕಳು ಯಾತನೆ ಅನುಭವಿಸುತ್ತಾರೆ. ಈ ಕೀಳರಿಮೆಯಿಂದ ಆತ್ಮವಿಶ್ವಾಸ ಕಳೆದುಕೊಂಡು, ಬದುಕಿನಲ್ಲಿ ಇತರ ಸಾಧ್ಯತೆಗಳನ್ನು ಕಂಡುಕೊಳ್ಳಲಾರದೆ ಹೋಗುತ್ತಾರೆ, ಪೇಚಾಡುತ್ತಾರೆ. ಬಹಳ ಹಿಂದಿನಿಂದ ತೆಗೆದುಕೊಂಡರೆ ಮಹಿಳೆಯರ ಸೌಂದರ್ಯದ ವರ್ಣನೆ ಮಾಡಿದವರು ಹೆಚ್ಚಾಗಿ ಪುರುಷರೇ. ಈ ಸೌಂದರ್ಯ ಮೀಮಾಂಸೆಯಲ್ಲಿ ನಾವು ನಮ್ಮನ್ನು ಕಳೆದುಕೊಂಡಿದ್ದೇವೆ ಎಂಬುದನ್ನು ತಿಳಿಯಲಾರದೆ ಹೋಗುತ್ತಾರೆ!

ಈ ವಿವರಣೆಯಲ್ಲಿ ಹುಡುಗಿಯ ಚಿತ್ರ ತೆಗೆದುಕೊಂಡು ಮಾತುಕತೆ ನಡೆಸಿದ ಉದಾಹರಣೆ ಇದೆ. ಆದರೆ, ತರಬೇತಿಯಲ್ಲಿ ಹೆಣ್ಣು-ಗಂಡು ಇಬ್ಬರೂ ಇರುವ ಸಂದರ್ಭಗಳಲ್ಲಿ ಇಬ್ಬರ ಉದಾಹರಣೆಯನ್ನೂ ತೆಗೆದುಕೊಳ್ಳುತ್ತೇವೆ. ಹುಡುಗರಿಗೂ ಅಲಂಕಾರ ಮಾಡಿಕೊಳ್ಳುವ, ಚಂದ ಕಾಣಿಸಿಕೊಳ್ಳುವ, ತರತರಹದ ದಾಡಿ-ಮೀಸೆ ಬೆಳೆಸಿಕೊಳ್ಳುವ, ಕೇಶಾಲಂಕಾರ ಮಾಡಿಕೊಳ್ಳುವ ತುಡಿತ ಸಾಕಷ್ಟು ಇದ್ದೇ ಇದೆ. ಒಂದು ವ್ಯತ್ಯಾಸವೆಂದರೆ, ಅವರ ಮೇಲೆ ‘ಚಂದ ಕಾಣಿಸಿಕೊಳ್ಳಬೇಕು’ ಎಂಬ ನಿರೀಕ್ಷೆಯ ಹೊರೆ ಹೆಣ್ಣುಮಕ್ಕಳ ಮೇಲೆ ಇದ್ದಷ್ಟು ಇಲ್ಲ. ಆದರೂ, ಅವರ ಮೇಲೆಯೂ ಒಬ್ಬ ಗಂಡಿನ ಗಟ್ಟಿಮುಟ್ಟುತನ ಇರಬೇಕು ಎಂಬ ನಿರೀಕ್ಷೆಯ ಹೊರೆ ಇದೆ. ಸ್ವಲ್ಪ ಕುಳ್ಳಕ್ಕೆ ಇರುವ, ಪೀಚಲು ಇರುವ, ಬೆಳೆವ ವಯಸ್ಸಿನಲ್ಲಿ ಮೀಸೆ ಬಾರದಿರುವ ಗಂಡುಮಕ್ಕಳು ಬಹಳ ಕೀಳರಿಮೆ ಅನುಭವಿಸುತ್ತಾರೆ. ಅವರ ಮಟ್ಟಿಗೂ ಈ ಎಲ್ಲ ಚಿಂತನೆಗಳು ಅನ್ವಯವಾಗುತ್ತವೆ.

ಈ ಲೇಖನ ಓದಿದ್ದೀರಾ?: ಹೊಸಿಲ ಒಳಗೆ-ಹೊರಗೆ | ಹೆಣ್ಣಿಗೂ ಗಂಡಿಗೂ ಇರಬಹುದಾದ ಕಟ್ಟುಪಾಡಿನ ರಗಳೆಗಳು

ಈಗ ಆಂತರಿಕ ಸೌಂದರ್ಯದ ಕುರಿತು ಮಾತಾಡುವುದಾದರೆ, ಇದನ್ನು ಬೆಳೆಸಿಕೊಳ್ಳುವುದು ಬಹಳಷ್ಟು ಮಟ್ಟಿಗೆ ನಮ್ಮ ಕೈಯಲ್ಲೇ ಇದೆ. ಇದು ಒಳ-ಹೊರಗಿನ ವ್ಯಕ್ತಿತ್ವದ ಒಟ್ಟು ಸಮ್ಮಿಲನ. ನಮ್ಮ ಮೌಲ್ಯಗಳು, ಚೈತನ್ಯ, ಅರಿವು, ನಿಲುವುಗಳೆಲ್ಲವೂ ನಮ್ಮ ಆಂತರಿಕ ಸೌಂದರ್ಯವನ್ನು ರೂಪಿಸುತ್ತವೆ. ಉದಾಹರಣೆಗೆ, ಪಿ ಟಿ ಉಷಾ ಅವರಂಥವರು ಸೌಂದರ್ಯದ ಯಾವುದೇ ಮಾದರಿಯ ಅಡಿಯಲ್ಲಿ ಬರುವದಿಲ್ಲ. ಆದರೆ, ಅವರು ಜನಸಮೂಹದ ನಡುವೆ ಬಂದರೆಂದರೆ ಮತ್ತೆ-ಮತ್ತೆ ತಿರುತಿರುಗಿ ನೋಡುವ ಹಾಗೆ ಅನಿಸುತ್ತದೆ. ಪ್ರತಿಭೆ ಮತ್ತು ಪ್ರಖ್ಯಾತಿ ಅವರ ವ್ಯಕ್ತಿತ್ವಕ್ಕೆ ಕೊಟ್ಟ ಮೆರುಗು ಇದಕ್ಕೆ ಕಾರಣ. ಕಮಲಾ ಭಾಸಿನ್ ಅವರನ್ನು ಯಾರೋ ಕೇಳಿದರಂತೆ, "ನೀವು ಮೇಕ್‌-ಅಪ್ ಮಾಡಿಕೊಳ್ಳುತ್ತೀರಾ?" ಅಂತ. ಅದಕ್ಕೆ ಅವರು, "ಹೌದು, ನಾನು ನನ್ನ ಮನಸ್ಸನ್ನು ಮೇಕ್ ಅಪ್ ಮಾಡಿಕೊಳ್ಳುತ್ತೇನೆ. ನನ್ನ ಕನಸುಗಳನ್ನು ಅಲಂಕರಿಸುತ್ತೇನೆ. ನನ್ನ ಆಶಯಗಳನ್ನು, ನನ್ನ ವಾದಗಳನ್ನು ಮೇಕ್ ಅಪ್ ಮಾಡುತ್ತೇನೆ,” ಎಂದರಂತೆ. ಮತ್ತೆ ಬಂತು ಪ್ರಶ್ನೆ, "ನೀವು ನಿಮ್ಮ ಮುಖವನ್ನು, ಶರೀರವನ್ನು ಮೇಕ್-ಅಪ್ ಮಾಡಿಕೊಳ್ಳುತ್ತೀರಾ?” “ಹೌದು... ನನಗೆ ನನ್ನ ಶರೀರದ ಜೊತೆಗೆ ಆಪ್ತವಾದ ಸಂಬಂಧವಿದೆ. ನನ್ನ ಶರೀರವನ್ನು ನಾನು ಗೌರವಿಸುತ್ತೇನೆ. ಹೊರಗೆ ಸುತ್ತಾಡಿಸುತ್ತೇನೆ. ಯೋಗ ಮಾಡುತ್ತೇನೆ," ಎಂದು ಉತ್ತರಿಸಿದರು. ಇದು ವ್ಯಕ್ತಿತ್ವದ ಮೇಕ್-ಅಪ್. ನಮ್ಮ ತರಬೇತಿಯ ಮಹದಾಶಯವೂ ಕೂಡ ಪ್ರತಿಯೊಬ್ಬರೂ ತಮ್ಮ ಆಂತರಿಕ ಸೊಗಸನ್ನು ಹೆಚ್ಚಿಸಿಕೊಳ್ಳುವ ದಾರಿಗಳನ್ನು ಕಂಡುಕೊಳ್ಳುವುದೇ ಆಗಿದೆ.

Image
Inner Beauty agata lindquist 1
ಕಲಾಕೃತಿ ಕೃಪೆ: ಅಗಾತಾ ಲಿಂಡ್‌ಕ್ವಿಸ್ಟ್

ಆಂತರಿಕ ಸೊಗಸಿನ ಅರಿವು ಸಿಕ್ಕಾಗ ಬಾಹ್ಯ ಸೌಂದರ್ಯದ ಭ್ರಮೆ ಕಾಡುವುದಿಲ್ಲ. ಹಾಗೆ ನೋಡಹೋದರೆ, ಕಪ್ಪು ಬಣ್ಣ, ಮೊಂಡು ಮೂಗು ಇರುವುದರಿಂದ ಬದುಕಿಗೆ ಏನೇನೂ ತೊಂದರೆ ಇಲ್ಲ. ಅಂಗವಿಕಲತೆ ಇರುವ ಮಂದಿಗೆ ದಿನನಿತ್ಯದ ವ್ಯವಹಾರ ಮಾಡುವುದಕ್ಕೆ ತೊಂದರೆ ಆಗುತ್ತದೆ, ನಿಜ. ಆದರೆ, ಚರ್ಮದ ಬಣ್ಣ ಕಪ್ಪಾದರೆ, ಮೂಗು ಮೊಂಡಾದರೆ ಏನೂ ಸಮಸ್ಯೆ ಇಲ್ಲವಲ್ಲ? ಆದರೂ, ಸಮಾಜ ಹೇರುವ ಸೌಂದರ್ಯದ ಮೀಮಾಂಸೆಯನ್ನು ಮುಂದಿಟ್ಟುಕೊಂಡು ನರಳುತ್ತೇವಲ್ಲ, ಅಂಗವಿಕಲತೆ ಉಳ್ಳವರು ಯಾವ ಮೀಮಾಂಸೆಯನ್ನು ನೆಚ್ಚಿಕೊಳ್ಳಬೇಕು?

ಮುಕ್ತ ಮನಸ್ಸಿನಿಂದ ನೋಡಿದರೆ, ಸೌಂದರ್ಯ ಅನ್ನುವುದು ಅಲ್ಲಿ ಇಲ್ಲಿ ಮಿಂಚಿನಂತೆ ಒಂದು ಅನುಭಾವವಾಗಿ ಕಾಣಸಿಗುತ್ತದೆ. ಕಾಲು ಕಳೆದುಕೊಂಡಿರುವ ಹೆಣ್ಣುಮಗಳು ತಲೆ ಮೇಲೆ ಹೆಲ್ಮೆಟ್ ಹಾಕಿ ದಿಟ್ಟವಾಗಿ ಸ್ಕೂಟರ್ ಓಡಿಸುವಾಗ, ಹೊಲ-ಗದ್ದೆಗಳಲ್ಲಿ ತಮ್ಮ ಪಾಡಿಗೆ ಸೆರಗು ಸೊಂಟಕ್ಕೆ ಸಿಗಿಸಿಕೊಂಡು ದುಡಿಮೆ ಮಾಡುವಾಗ, ಕ್ರೀಡಾರಂಗದಲ್ಲಿ ಕುಣಿದು ಕುಪ್ಪಳಿಸುವಾಗ, ಅನ್ಯಾಯದ ವಿರುದ್ಧ ಸೆಟೆದು ನಿಂತಾಗ, ಟ್ರಾನ್ಸ್ ಮಹಿಳೆಯೊಬ್ಬಳು ಸಾರ್ವಜನಿಕರ ಎದುರು ಅಭಿಮಾನದಿಂದ ಮಾತಾಡುವಾಗ, ಗಂಡುಮಗನೊಬ್ಬ ಯಾವುದೇ ಅಳುಕಿಲ್ಲದೆ ಮನೆಮಂದಿಯ ಬಟ್ಟೆ ಒಗೆದು ಒಣಹಾಕುವಾಗ, ಹಠ ಮಾಡುತ್ತಿರುವ ಮಗುವಿಗೆ ತಾಳ್ಮೆ ಮತ್ತು ಮಮತೆಯಿಂದ ಉಣಿಸುತ್ತಿರುವಾಗ, ಯಾರೋ ಯಾರಿಗೋ ಒಳ್ಳೆಯತನ ತೋರಿಸುವಾಗ ಕಾಣುವ ಸೌಂದರ್ಯದ ನೋಟಗಳು ಎದೆಯಲ್ಲಿ ಭರವಸೆಯ ಹಾಡು ಹಾಡುತ್ತವೆ.

ಈ ಲೇಖನ ಓದಿದ್ದೀರಾ?: ಹೊಸಿಲ ಒಳಗೆ-ಹೊರಗೆ | ಹೇಳಿ, ಈ ಕತೆಯಲ್ಲಿ ಹೆಣ್ಣು ಕಪ್ಪೆ ಯಾವುದು ಮತ್ತು ಗಂಡು ಕಪ್ಪೆ ಯಾವುದು?

ತರಬೇತಿಯಲ್ಲಿ ಇಷ್ಟೆಲ್ಲ ಆಯಾಮಗಳೊಂದಿಗೆ ಚಿಂತನೆ ನಡೆದಾಗ, ಈಗಾಗಲೇ 'ಚಂದ ಅಲ್ಲ’ ಅಂತ ಅನಿಸಿಕೊಂಡವರ ಕಣ್ಣುಗಳಲ್ಲಿ ಚಕ್ಕಂತ ಒಂದು ಆನಂದ ಮಿಂಚುತ್ತದೆ. ತರಬೇತಿಯ ಕೊನೆಯಲ್ಲಿ ಕೂಡ ಅನೇಕ ಮಂದಿ ಈ ಚಿಂತನೆಯ ಕುರಿತು ಹೇಳುತ್ತಾರೆ. ಈಗಾಗಲೇ ಸುಂದರಿ ಅಂತ ಅನಿಸಿಕೊಂಡವರಿಗೆ, 'ಇದುವೇ ಎಲ್ಲ ಅಲ್ಲ. ಸೌಂದರ್ಯವನ್ನು ಪ್ರತಿಷ್ಠೆಯಾಗಿ ದುರುಪಯೋಗ ಮಾಡುವುದು ಒಳಿತಲ್ಲ' ಅನ್ನುವ ಅರಿವು ಸಿಗುತ್ತದೆ.

ಒಟ್ಟಿನಲ್ಲಿ, ಸೌಂದರ್ಯದ ನಿಜ ಅರಿವು ಮೂಡಿದಾಗ, "ನನಗೆ ನಾನೇ ಚಂದ. ನಾನು ಹೇಗಿದ್ದೇನೋ ಹಾಗೆಯೇ ಚಂದ," ಅನ್ನುವ ನಿರಾಳ ಭಾವ ಮೂಡುವುದೂ ಸಾಧ್ಯವಾಗುತ್ತದೆ ಅಥವಾ ಚಂದದ ಉಸಾಬರಿಯೇ ಇರುವುದಿಲ್ಲ. ನಮ್ಮೊಂದಿಗೆ ನಮಗೇ ಆರಾಮ ಅನ್ನಿಸುತ್ತದೆ. ಸಮಾನತೆ, ಹೃದಯವಂತಿಕೆ, ಮೈತ್ರಿ ಭಾವದಲ್ಲೇ ನಿಜವಾದ ಸೌಂದರ್ಯ ಅಡಗಿದೆ ಎಂಬುದು ಎಷ್ಟು ಚಂದದ ಭಾವ, ಅನುಭಾವ ಅಲ್ಲವೇ?

ನಿಮಗೆ ಏನು ಅನ್ನಿಸ್ತು?
10 ವೋಟ್