ಪಕ್ಷಿನೋಟ | ಬೀಸಣಿಗೆ ಬಾಲದ ನೊಣ ಹಿಡುಕ ಕಟ್ಟುವ ಕಲಾತ್ಮಕ ಗೂಡು

Fantail Flycatcher

ಕತ್ತಲು ಕವಿದ ಹುಣಸೇ ಮರಗಳ ಓಣಿ ತಲುಪಿದರೆ ಅಲ್ಲಿ, ಅಪರೂಪಕ್ಕೆ ಹುಟ್ಟಿ ಬೆಳೆದಿದ್ದ ಹಲಸಿನ ಮರದ ಕೆಳಗೆ ಅನೇಕ ರೆಕ್ಕೆಗಳು ಬಿದ್ದಿರುವುದು, ಈಗ ತಾನೇ ಬೇಟೆಯೊಂದು ನಡೆದಿರುವುದಕ್ಕೆ ಸಾಕ್ಷಿ ಹೇಳುತ್ತಿತ್ತು. ಬಣ್ಣ ಬಣ್ಣದ ಗಿಳಿಯೊಂದು ಅಂದು ಹದ್ದಿನ ಊಟವಾಗಿರುವ ಎಲ್ಲ ಪುರಾವೆಗಳು ಸಿಕ್ಕ ನಂತರ, ಪರಿಸ್ಥಿತಿ ಇನ್ನೂ ಬಿಗಿಯಾಗುತ್ತ ಬಂತು

ಅಂದೇಕೊ ನಮ್ಮ ತಿಪಟೂರಿನ ತೋಟದ ಮನೆಯಲ್ಲಿ ಅಸಾಧ್ಯ ಮೌನ ಆವರಿಸಿತ್ತು. ಇನ್ನು ಹೆಚ್ಚು ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದೆ ಕ್ಯಾಮೆರಾ ಹಿಡಿದು ತೋಟದ ಸಾಲಿನಲ್ಲಿ ನಡೆಯುತ್ತಾ ಹೊರಟೆ. ಸದಾ ಚಟುವಟಿಕೆಯಿಂದ ಕೂಡಿರುತ್ತಿದ್ದ ತೋಟದಲ್ಲೂ ಮನೆಯಲ್ಲಿ ಕಂಡ ಮೌನ ಮತ್ತೆ ಗೋಚರಿಸಿತ್ತು. ತೋಟದಲ್ಲಿ ಮೌನ ಆವರಿಸಿದೆ ಎಂದರೆ, ಅಲ್ಲಿ ಮತ್ತೇನೋ ನಡೆಯಲಿದೆ ಎಂದೇ ಅರ್ಥ. ಇಲ್ಲವಾದಲ್ಲಿ ಈ ಸುತ್ತಲಿನ ತೋಟಗಳಲ್ಲಿ ಕೆಂಪು ಕೊರಳಿನ ನೊಣ ಹಿಡುಕನ ಸುಶ್ರಾವ್ಯ ಹಾಡೋ, ಹರಟೆ ಮಲ್ಲರ ಗಲಾಟೆಯೋ, ನವಿಲಿನ ಸೈರನ್ನಿನಂತಹ ಕೂಗು ಆಗಾಗ ಕೇಳಿಸುತ್ತಾ ತೋಟದಲ್ಲಿ ಸದಾ ನಮ್ಮೊಂದಿಗೆ ಇವರು ಇದ್ದರೆ ಎಂಬುದನ್ನು ನೆನೆಯುತ್ತಲೆ ಹೆಜ್ಜೆ ಹಾಕುತ್ತಿದ್ದೆ. ಆದರೆ, ಇಂದಿನ ಮೌನ ವಾತಾವರಣ ನನ್ನನ್ನು ಗಾಬರಿಗೊಳಿಸಿದ್ದರಿಂದ ಸುತ್ತಲೂ ನೋಡುತ್ತಾ ಎಚ್ಚರಿಕೆಯಿಂದ ಹೆಜ್ಜೆ ಇಡತೊಡಗಿದೆ. 

ನಡೆಯುತ್ತಾ ಕತ್ತಲು ಕವಿದ ಹುಣಸೇ ಮರಗಳ ಓಣಿ ತಲುಪಿದರೆ ಅಲ್ಲಿ, ಅಪರೂಪಕ್ಕೆ ಹುಟ್ಟಿ ಬೆಳೆದಿದ್ದ ಹಲಸಿನ ಮರದ ಕೆಳಗೆ ಅನೇಕ ರೆಕ್ಕೆಗಳು ಬಿದ್ದಿರುವುದು ಕಂಡು ಈಗ ತಾನೇ ಬೇಟೆಯೊಂದು ನಡೆದಿರುವುದಕ್ಕೆ ಸಾಕ್ಷಿ ಹೇಳುತ್ತಿತ್ತು. ಬಣ್ಣ ಬಣ್ಣದ ಗಿಳಿಯೊಂದು ಅಂದು ಹದ್ದಿನ ಊಟವಾಗಿರುವ ಎಲ್ಲ ಪುರಾವೆಗಳು ಸಿಕ್ಕ ನಂತರ ನಾನು ಅಲ್ಲಿಯೇ ನಿಂತು ಗಮನಿಸತೊಡಗಿದೆ. ಪರಿಸ್ಥಿತಿ ಇನ್ನೂ ಬಿಗಿಯಾಗುತ್ತ ಬಂತು ಮೂರ್ನಾಲ್ಕು ನಿಮಿಷವಾದರೂ ಎಂತದೂ ಸದ್ದು ಬರದೆ ಮನಸ್ಸನ್ನು ಬಿಗಿ ಹಿಡಿದೆ. ಸಾಮಾನ್ಯವಾಗಿ ಕಾಡಿನಲ್ಲಿ ಹುಲಿಯೋ ಚಿರತೆಯೋ ಬಂದರೆ ಇಂತಹ ಮೌನವಿರುವುದಿಲ್ಲ. ಮುಸಿಯನೂ, ಜಿಂಕೆಗಳು ಅಲಾರಂ ನೀಡುತ್ತಾ ಇಡೀ ಕಾಡನ್ನೇ ಎಚ್ಚರಗೊಳಿಸಿಬಿಡುತ್ತವೆ. ಚಿರತೆ ಇಲ್ಲಿ ಸಾಮಾನ್ಯ ಓಡಾಡುವ ಪ್ರಾಣಿಯೇ ಆದರೂ ಆಕಸ್ಮಾತ್ ಚಿರತೆ ಏನಾದರೂ ಇರಬಹುದೇ ಎನ್ನಿಸಿದರೂ ಇಲ್ಲ ಎನ್ನುವುದು ಆ ಮೌನವೇ ಹೇಳುತ್ತಿತ್ತು. 

Image
Shikra

ಓಣಿಯ ಕಡೆ ತಿರುಗಿ ಏನೂ ಕಾಣದೆ ಒಮ್ಮೆ ಪಕ್ಕದ ತೋಟದ ತೇಗದ ಸಾಲಿನತ್ತ ತಿರುಗಿದೆ. ಹಠಾತ್ತನೆ ಬಿಜ್ಜುವೊಂದು ಮರೆಯಿಂದ ನುಗ್ಗಿತು, ಅದೇ ಸಾಲಿನಲ್ಲಿ ಸುವರ್ಣ ಬೆನ್ನಿನ ಮರಕುಟಿಗ ಜೋರಾಗಿ ಕೂಗುತ್ತಾ ಹಾರಿತು. ಅದರ ಜೊತೆ ಅವಿತು ಕುಳಿತಿದ್ದ ಮಿಕ್ಕೆಲ್ಲ ಹಕ್ಕಿಗಳು ಜೋರಾಗಿ ಸದ್ದು ಮಾಡುತ್ತಾ ಅಲ್ಲೊಂದು ಪರಿಸರ ಗಲಭೆ ಉಂಟಾಯಿತು. ಬಿಜ್ಜು, ಅಪ್ರತಿಮ ಬೇಟೆಗಾರ ಆದರೆ, ಈ ಬಾರಿ ತನ್ನ ಬಲಿಯನ್ನು ಹಿಡಿಯಲು ಸಾಧ್ಯವಾಗಿರಲಿಲ್ಲ. ಇತ್ತ ಇನ್ನರ್ಧ ಗಂಟೆಯಲ್ಲಿ ಈ ಬಿಜ್ಜೂ ಮತ್ತೊಂದು ವಿಶಿಷ್ಟ ಬೇಟೆಯಲ್ಲಿ ತನ್ನ ತಂತ್ರ ಬದಲಿಸಿ ಬೇಲಿಯಲ್ಲಿದ್ದ ಒಂಟಿ ಉಲಿಯಕ್ಕಿಯನ್ನು ಹಿಡಿದು ತಿಂದಿದ್ದು ಕಂಡು ಮತ್ತೆ ಹುಣಸೇ ಮರದ ಓಣಿಯಲ್ಲಿ ನಡೆದು ಹೋದೆ. 

ಈ ಲೇಖನ ಓದಿದ್ದೀರಾ?: ಪಕ್ಷಿನೋಟ | ಕೆಂಜಿಗ ಎಂಬ ಸೋಜಿಗದ ಜೊತೆಗೊಂದು ದಿನ

ಹುಣಸೇ ಮರದ ಓಣಿಯಲ್ಲಿ ಹಲವು ಬಾರಿ ಕೆಂಪು ಕೊರಳಿನ ನೊಣ ಹಿಡುಕ, ಬೀಸಣಿಗೆ ಬಾಲದ ನೊಣ ಹಿಡುಕಗಳನ್ನು ಕಂಡಿದ್ದೆ. ಜೊತೆಗೆ ಕೆಂಪು ಕೊರಳಿನ ವಿಶೇಷ ಗುಣವಾದ ಗಂಡಿನ ಇಂಪಾದ ಹಾಡು ಕೇಳಿದ್ದೆ. ಆದರೆ, ಬೀಸಣಿಗೆ ಬಾಲದ ನೊಣ ಹಿಡುಕನ ಗುಣವಾದ ಬೀಸಣಿಗೆ ಬಾಲವನ್ನು ಸೆರೆ ಹಿಡಿಯಲು ಸಾಧ್ಯವಾಗಿರಲಿಲ್ಲ. ಆಗ ತಟ್ಟನೆ ಅಲ್ಲೊಂದು ಬೀಸಣಿಗೆ ಬಾಲದ ನೊಣ ಹಿಡುಕ ಹಾರಿ ಬಂದು ನೆಲದಲ್ಲಿ ಕೂತು ತನ್ನ ಬಾಲವನ್ನು ಬೀಸಣಿಗೆ ರೀತಿಯಲ್ಲಿ ನೆಲಕ್ಕೆ ಹೊಡೆಯತೊಡಗಿತು. ನೋಡಿ, ಈ ದೊಡ್ಡ ಭಕ್ಷಕ ಹಕ್ಕಿಗಳು ತಮ್ಮ ಶಕ್ತಿಯಿಂದ ಯುಕ್ತಿಯಿಂದ ಅನೇಕ ತಂತ್ರಗಳನ್ನು ಹೆಣೆದು ಬೇಟೆಯಾಡಿ ದೊಡ್ಡ ಬಲಿ ಹಿಡಿದರೆ, ಈ ಬೀಸಣಿಗೆ ಬಾಲದ ನೊಣ ಹಿಡುಕ ನೆಲದ ಮೇಲೆ ಅಲ್ಲಿಂದ ಇಲ್ಲಿಗೆ ಹಾರುತ್ತಾ ತನ್ನ ಬಾಲವನ್ನು ಬೀಸಣಿಗೆ ರೀತಿ ಅರಳಿಸಿ ನೆಲಕ್ಕೆ ಬೀಸಣಿಗೆ ಹೊಡೆಯುತ್ತಾ,  ನೆಲದಿಂದ ಕೀಟಗಳು ಹಾರಿದಾಗ ರಪ್ಪೆಂದು ಹಿಡಿದು ಬಾಯಿಗೆ ಹಾಕಿ ಕೊಳ್ಳುತ್ತವೆ. ಈ ಹಕ್ಕಿಗಳಿಗೆ ಇದೆಂತಹ ವಿಶಿಷ್ಟ ಪ್ರಾಕೃತಿಕ ಕೊಡುಗೆ ಲಭ್ಯವಾಗಿದೆ ಎಂದನಿಸುವುದಿಲ್ಲವೆ. 

Image
Fantail Flycatcher nest

ಇನ್ನು ಈ ಬೀಸಣಿಗೆ ಬಾಲದ ನೊಣ ಹಿಡುಕನ ಗೂಡು ಕಟ್ಟುವಿಕೆಯಂತು ಇನ್ನೂ ವಿಶಿಷ್ಟ. ಬೇಲಿ ಪೊದೆಗಳಲ್ಲಿ, ಮರಗಳ ರೆಂಬೆಗಳಲ್ಲಿ ಗೂಡು ಕಟ್ಟುವ ಈ ಹಕ್ಕಿಗಳು ಸುಂದರ ಗೂಡನ್ನು ಹೆಣೆಯುತ್ತವೆ. ಇವುಗಳ ಗೂಡಿನ ವಿಚಾರವಾಗಿ ಒಂದು ವಿಷಯ ಗಮನಿಸಿದ್ದೇನೆ. ಆದರೆ, ಅದು ನಿಖರ ಎಂದು ಅರಿಯಲು ಮತ್ತಷ್ಟು ವರ್ಷಗಳು ಬೇಕಾಗಬಹುದು. ಈ ಬಾರಿ ಈ ಬೀಸಣಿಗೆ ಬಾಲದ ಮೂರು ಗೂಡುಗಳನ್ನು ಕಂಡಿದ್ದೇವೆ. ಈ ಎಲ್ಲ ಗೂಡುಗಳು ದನ ಕರುಗಳ ಕೊಟ್ಟಿಗೆಯ ಹಿಂದಿನ ಮರಗಳಲ್ಲಿ, ಬೇಲಿಗಳಲ್ಲಿ ಕಟ್ಟಿರುವುದು ಒಂದು ವಿಶೇಷ. 

ಇದನ್ನು ಹೀಗೆ ಗ್ರಹಿಸಬಹುದು ಎಂದು ಕೊಂಡಿದ್ದೇನೆ. ದನ-ಕರುಗಳು ಎಲ್ಲಿರುತ್ತವೆಯೋ ಅಲ್ಲಿ ನೊಣಗಳು ಸರ್ವೆ ಸಾಮಾನ್ಯ. ನೊಣಗಳು ಇದ್ದರೆ ಅಲ್ಲಿಗೆ ನೊಣ ಹಿಡುಕಗಳು ಬಂದೇ ಬರುತ್ತವೆ. ಅದರಲ್ಲೂ, ಗೂಡು ಕಟ್ಟಿ ಮರಿ ಮಾಡಿದ ಮೇಲೆ ಮರಿಗಳಿಗೆ ಅತಿಯಾಗಿ ಆಹಾರದ ಅವಶ್ಯಕತೆ ಇರುತ್ತದೆ. ಈ ದನ-ಕರುಗಳ ಬಳಿಯಾದರೆ ಸುಲಭವಾಗಿ ನೊಣಗಳು ಸಿಕ್ಕು ತಮ್ಮ ಮರಿಗಳಿಗೆ ಸುಲಭವಾಗಿ ಆಹಾರ ಒದಗಿಸಿಕೊಳ್ಳಬಹುದು ಎಂದಿರಬಹುದು. ಈ ನಿಟ್ಟಿನಲ್ಲಿ ನೋಡಿದರೆ ಪಕ್ಷಿಗಳು ಕೂಡ ಬಹಳ ಬುದ್ಧಿವಂತ ಜೀವಿಗಳೆ. ಆದರೆ, ತಮ್ಮ ಬುದ್ಧಿವಂತಿಕೆಯನ್ನು ಎಲ್ಲಿ ಅಗತ್ಯವಿದೆಯೋ ಅಲ್ಲಿ ಮಾತ್ರ ಪ್ರದರ್ಶಿಸುತ್ತವೆ ಎಂದಿರಬಹುದು.

ನಿಮಗೆ ಏನು ಅನ್ನಿಸ್ತು?
2 ವೋಟ್