ಬದುಕಿನಂಚಿನ ಬೆಳಕು | ಅನಾರೋಗ್ಯಕ್ಕೆ ಸಿಲುಕಿ ಒಬ್ಬಂಟಿಯಾಗಿದ್ದ ಯಲ್ಲಪ್ಪ ಈಗ ಯುವಜನರಿಗೂ ಸ್ಫೂರ್ತಿ

ಪತ್ನಿ, ಇಬ್ಬರು ಪುತ್ರರಿದ್ದ ಸುಖವಾದ ಸಂಸಾರ ಯಲ್ಲಪ್ಪ ಅವರದು. ಪುಟ್ಟ ಜಮೀನಿನಲ್ಲಿ ಸಂತೃಪ್ತಿಯಿಂದ ದುಡಿಯುತ್ತಿದ್ದ ಅವರ ಸಂತೋಷ ಉಳಿದದ್ದು ಕೆಲವು ವರ್ಷ ಮಾತ್ರ. ಕುಷ್ಠರೋಗಕ್ಕೆ ತುತ್ತಾದರು. ಆಸ್ಪತ್ರೆಗಳಿಗೆ ಅಲೆದರೂ ಗುಣವಾಗಲಿಲ್ಲ. ಬದುಕು ನರಕವಾಯಿತು. ಆದರೆ, ಈಗ ತನ್ನ ಖರ್ಚಿನ ಹಣ ತಾನೇ ದುಡಿಯುತ್ತಿದ್ದು, ಸ್ಫೂರ್ತಿಯ ಚಿಲುಮೆಯಾಗಿದ್ದಾರೆ

ನರೆತ ಕೂದಲು, ಮಂಜಾದ ಕಣ್ಣು, ಬಾಗಿದ ಬೆನ್ನು, ಮುರುಟಿದ ಕೈ-ಕಾಲು, ಮುಖದಲ್ಲಿ ಇನ್ನಷ್ಟು ಹುರುಪು... - ಇವರು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇನಂದಿಹಾಳ ಗ್ರಾಮದ ಯಲ್ಲಪ್ಪ ಕರಡಿ. ತಮ್ಮ ಎಪ್ಪತ್ತನೇ ವರ್ಷದಲ್ಲಿ ಮತ್ತೆ ದುಡಿಮೆಯ ಹುರುಪು ಹೊತ್ತಿದ್ದಾರೆ.

ತಲೆಗೆ ಸುತ್ತಿದ್ದ ರುಮಾಲನ್ನು ಸರಿಪಡಿಸಿಕೊಳ್ಳುತ್ತ ಬಂದು ತಮ್ಮ ಮನೆಯ ಜಗಲಿಯಲ್ಲಿ ಕೂತ ಯಲ್ಲಪ್ಪನವರಿಗೆ, ತಮ್ಮನ್ನೂ ಮಾತನಾಡಿಸಲು ಈಗ ಜನರು ಬರುತ್ತಾರೆಂಬ ಸಂತೋಷ. "ಇಷ್ಟು ವರ್ಷ ಕೋಣೇಲಿ ಒಬ್ಬನೇ ಕೂತು-ಕೂತು ಸಾಕಾಗಿತ್ತು ನೋಡ್ರಿ. ಈಗ ನನ್ನ ಮಾತಾಡಿಸೋಕೂ, ಕೆಲಸ ಕೊಡೋಕೂ ಮಂದಿ ಬರ್ತಾರ್ರೀ...” ಎಂದು ನಕ್ಕರು.

ಪತ್ನಿ, ಇಬ್ಬರು ಪುತ್ರರಿದ್ದ ಸುಖವಾದ ಸಂಸಾರ ಯಲ್ಲಪ್ಪ ಅವರದು. ತಮ್ಮ ಪುಟ್ಟ ಜಮೀನಿನಲ್ಲಿ ಸಂತೃಪ್ತಿಯಿಂದ ದುಡಿಯುತ್ತಿದ್ದ ಅವರ ಸಂತೋಷ ಉಳಿದದ್ದು ಕೆಲವು ವರ್ಷ ಮಾತ್ರ. ಮದುವೆಯಾದ ಕೆಲವು ವರ್ಷಗಳಲ್ಲಿ ಕುಷ್ಠರೋಗಕ್ಕೆ ತುತ್ತಾದರು. ಆಸ್ಪತ್ರೆಗಳಿಗೆ ಅಲೆದರೂ ಗುಣವಾಗದೆ, ಕೈ-ಕಾಲು ಮುರುಟಲಾರಂಭಿಸಿದಾಗ ಕಂಗಾಲಾದರು. ಅಲ್ಲಿಂದ ಬದುಕು ನಿತ್ಯ ನರಕವಾಯಿತು.

ಈ ಲೇಖನ ಓದಿದ್ದೀರಾ?: ಬದುಕು | ಬೆಟ್ಟ ಹತ್ತಕ್ ಆಗಿಲ್ಲಾಂದ್ರು ಪರ್ವಾಗಿಲ್ಲ, ಅಟ್ಟ ಹತ್ತುತೀವಿ ಅನ್ನೋ ಧೈರ್ಯ ಐತೆ

ಬದುಕಿನ ದಿಕ್ಕು ಕೆಲವೊಮ್ಮೆ ಅರಿವೇ ಇಲ್ಲದಂತೆ ಬದಲಾಗುತ್ತ ಹೋಗುತ್ತದೆ. ಕೆಲವೊಂದು ಆರೋಗ್ಯ ಸಮಸ್ಯೆಗಳು ಎದುರಾದರಂತೂ ಬದುಕಿನ ಕಸುವನ್ನೇ ಕಿತ್ತುಕೊಂಡುಬಿಡುತ್ತವೆ. ಬಾಲ್ಯ ನೆಮ್ಮದಿಯಾಗಿದ್ದರೂ ಬೆಳೆಯುತ್ತ ಎತ್ತ ಸಾಗುತ್ತಿದ್ದೇವೆ ಎಂದೇ ಅರಿಯದ ಸ್ಥಿತಿಗಳು ಮನುಷ್ಯನನ್ನು ಖಿನ್ನತೆಗೆ ದೂಡಿಬಿಡುತ್ತವೆ.

ದುಡಿಯುವ ಕಸುವನ್ನು ನಿಧಾನಕ್ಕೆ ಕಳೆದುಕೊಂಡ ಯಲ್ಲಪ್ಪನವರು, ತಮ್ಮ ಜಮೀನಿನಲ್ಲಿ ಸಣ್ಣ-ಪುಟ್ಟ ಕೆಲಸದ ಹೊರತಾಗಿ ಬೇರೆಲ್ಲೂ ದುಡಿಯದಾದರು. ಎರಡು ಮಕ್ಕಳ ಹೊಣೆ ಹೊತ್ತ ಪತ್ನಿ, ಮಕ್ಕಳಿಗೂ ಆರೋಗ್ಯ ಸಮಸ್ಯೆಯಾದೀತು ಎಂಬ ಭಯದಿಂದ ತಮ್ಮ ಮನೆಯಲ್ಲೇ ಪ್ರತ್ಯೇಕವಾಗಿ ವಾಸ ಮಾಡಲಾರಂಭಿಸಿದರು. ತನ್ನದೇ ಹೊಲ-ಮನೆಯಿದ್ದರೂ ದುಡಿಯಲಾಗುತ್ತಿರಲಿಲ್ಲ, ತನ್ನ ಕುಟುಂಬವೇ ಇದ್ದರೂ ಹತ್ತಿರ ಇರಲಾಗುತ್ತಿರಲಿಲ್ಲ. ಪತ್ನಿ ಪ್ರತೀ ನಿತ್ಯ ಊಟ ತಂದಿಟ್ಟು ಹೋಗುವುದು ನಡೆಯುತ್ತಿತ್ತು ಮುಪ್ಪು ಆವರಿಸಿದಂತೆ, ಔಷಧಿಯ ಖರ್ಚಿಗೆ ಮಕ್ಕಳನ್ನು ಕೇಳಬೇಕಾದ ಅನಿವಾರ್ಯತೆ ಅವರನ್ನು ಇನ್ನಷ್ಟು ಕುಗ್ಗುವಂತೆ ಮಾಡಿತು.

Image

ಜೀವನದ ಬಹುಪಾಲು ಖಿನ್ನತೆಯಿಂದಲೇ ಕಳೆದ ಯಲ್ಲಪ್ಪನವರಿಗೆ ಮತ್ತೆ ದುಡಿಯುವ ಹುರುಪು ತಂದಿದ್ದು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ). 'ದುಡಿಯೋಣ ಬಾ' ಅಭಿಯಾನದಡಿ ತಮ್ಮ ನೆರೆಹೊರೆಯವರೆಲ್ಲ ಭಾಗವಹಿಸಿ ಕೆಲಸಕ್ಕೆ ಹೋಗುವುದನ್ನು ನೋಡಿದ ಯಲ್ಲಪ್ಪ, ತಾವೂ ದುಡಿಯುವ ಸಾಧ್ಯತೆ ಇದೆಯೇ ಎಂದು ವಿಚಾರಿಸಿದರು. ಯೋಜನೆಯಡಿ ಹಿರಿಯ ನಾಗರಿಕರಿಗೆ ಅರ್ಧ ಕೆಲಸಕ್ಕೆ ಪೂರ್ತಿ ಕೂಲಿ ದೊರೆಯುವುದನ್ನು ತಿಳಿದು, ಹೊಸ ಭರವಸೆ ಮೂಡಿಸಿಕೊಂಡರು. ಅಲ್ಲಿಂದ ಯಲ್ಲಪ್ಪನವರ ಬದುಕಿನ ಇನ್ನೊಂದು ಅಧ್ಯಾಯ ಆರಂಭವಾಯಿತು.

ತನ್ನ ಔಷಧಿಯ ದುಡ್ಡನ್ನು ತಾನೇ ದುಡಿಯಬೇಕು ಎನ್ನುವ ಛಲದಿಂದ ಹೊರಟ ಯಲ್ಲಪ್ಪ, ಇದೀಗ ತಮ್ಮ ವೈಯಕ್ತಿಕ ಖರ್ಚಿಗಾಗುವಷ್ಟು ಹಣ ಸಂಪಾದಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಯಲ್ಲಪ್ಪನವರಲ್ಲಿ ಹೊಸ ಉತ್ಸಾಹ, ಶಕ್ತಿ ಮೂಡಿದೆ.

“ನಾ ಹೋಗ್ದೇ ಇರೋ ಆಸ್ಪತ್ರಿ ಇಲ್ಲ, ಹರಕೆ ಹೊರದೇ ಇರೋ ಗುಡಿ ಇಲ್ಲ ನೋಡ್ರಿ. ಕಾಯಿಲೆ ಬಂದದ ಅಂತ ಕುಟುಂಬನೂ ದೂರ ಆಗ್ಯೇದ. ಈ ಸ್ಥಿತಿಯಾಗ ಬೇರೆ ಎಲ್ಲೂ ಕೆಲಸ ಸಿಗವಲ್ದು, ಉದ್ಯೋಗ ಖಾತ್ರಿಯಾಗ ಕೆಲಸ ಕೊಟ್ಟಾರ್ರೀ. ಕೈಲಾದ ಕೆಲಸ ಮಾಡ್ತೀನ್ರಿ. ಕೂಲಿ ಪೂರ್ತಿ ಕೊಡ್ತಾರ, ನನ್ ದವಾಖಾನಿ ವೆಚ್ಚಕ್ಕೆ ಆಗ್ತೈತ್ರೀ,” ಎನ್ನುತ್ತಾರೆ ಯಲ್ಲಪ್ಪ.

ಈ ಲೇಖನ ಓದಿದ್ದೀರಾ?: ಬದುಕು | ಬಂಬು ನಂಬ್ಕಂಡಿರನು ನಾನು... ಬಂಬು ಬಿಟ್ರೆ ನಾನಿರಲ್ಲ, ನನ್ನನ್ ಬಿಟ್ಟು ಬಂಬಿರಲ್ಲ

"ನೂರು ದಿನ ಕೊಡತಾರ್ರೀ, ನಾ ನಾಕು ವರ್ಷದಿಂದ ಮಾಡ್ತಿದೀನಿ. ನೂರು ದಿನನೂ ಮಾಡೇನ್ರೀ. ಇಲ್ಲಿವರೆಗೆ ಸುಮಾರು ಎಪ್ಪತ್ತು ಸಾವಿರ ಆಗೇತ್ರೀ. ಔಷಧಿ ಜೊತಿಗೆ ಮನೆ ಖರ್ಚಿಗೂ ಕೊಡ್ತೀನ್ರೀ. ಒಮ್ಮೊಮ್ಮೆ. ಸ್ವಾಭಿಮಾನ ಮುಖ್ಯರೀ ಮನಷ್ಯಗ. ದುಡಿದು ತಿನ್ನಬೇಕ್ರಿ, ಬೇಡಿ ತಿನ್ನಬಾರ್ದು ನೋಡ್ರಿ. ನಾಕು ದಿನ ಬದುಕಿದ್ರೂ ಸಾಕು ನಾನು... ಈಗ ಸಂತೋಷ ಅದ ರೀ. ಬೇಕಾದಷ್ಟು ಕೆಲಸ ಮಾಡೀನ್ರಿ. ಕೆರೆ ಅಭಿವೃದ್ಧಿ ಕೆಲಸ ಮಾಡೀನಿ, ನಾಲಾ ಹೂಳೆತ್ತಿದೀನಿ, ನಿಮ್ಮಂಥ ಹುಡುಗ್ರ ಸಮಕ್ಕೂ ಮಾಡೋ ಶಕ್ತಿ ಬಂದೈತ್ರಿ," ಎಂದು ನಗುತ್ತಾರೆ.

ಸ್ವಾಭಿಮಾನ ಮನುಷ್ಯನಿಗೆ ಶಕ್ತಿ ತಂದುಕೊಡುತ್ತದೆ, ಬದುಕುವ ಆಸೆ, ಭರವಸೆ ಮೂಡಿಸುತ್ತದೆ. ಕೆಲಸದ ಸಲುವಾಗಿ ಈಗ ಜನಗಳ ಜೊತೆ ಬೆರೆಯುತ್ತಿರುವುದರಿಂದ ಅವರ ಖಿನ್ನತೆ ದೂರವಾಗಿದೆ. ಮನೆಯವರು ಸಹ ನೋಡಿಕೊಳ್ಳಲಾರಂಭಿಸಿದ್ದಾರೆ. ಮನೆಯ ಜಗಲಿಗೆ ಒರಗಿ ಕೂತ ಯಲ್ಲಪ್ಪನವರ ಮೊಗದಲ್ಲಿ ನೆಮ್ಮದಿ ಕಾಣುತ್ತಿದೆ. ಒಂಟಿಯಾಗಿ ತಮ್ಮ ಕೋಣೆಯಲ್ಲೇ ಇದ್ದು ಕುಷ್ಟರೋಗಕ್ಕೆ ಬಲಿಯಾಗುವ ಭಯ ಮರೆಯಾಗಿ, ಇನ್ನೂ ಹತ್ತು ವರ್ಷ ಹೆಚ್ಚೇ ಬದುಕುತ್ತೇನೆಂಬ ಆತ್ಮವಿಶ್ವಾಸ ಹೆಚ್ಚುತ್ತಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್