ಬದುಕಿನಂಚಿನ ಬೆಳಕು | 'ನನ್ನ ಹಾಂಗ ಯಾವ ಮಗುವೂ, ಯಾವ ಮನುಷ್ಯನೂ ಚಿಕಿತ್ಸೆ ಇಲ್ಲದೆ ನರಳಬಾರ್ದು'

ಹೃದಯಾಘಾತದಿಂದ ತಾಯಿಯನ್ನು ಕಳೆದುಕೊಂಡ ಜಗದೇವನಿಗೆ ಮುಂದಿನ ಬದುಕು ಸವಾಲಾಗಿ ನಿಲ್ಲುತ್ತದೆ. ಒಂದೇ ಕೈಯಿಂದಾಗಿ ಕೆಲಸದ ಅವಕಾಶಗಳು ಕಡಿಮೆ ಕೂಡ. ಹಾಗೋ ಹೀಗೋ ಕೆಲಸ ಹುಡುಕಿ, ಒಂದು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಜಗದೇವನನ್ನು, ಸಂಬಂಧಿಕರ ಮದುವೆಯಲ್ಲಿ ಮನಸ್ಸು ನೀಡಿ ಮದುವೆಯಾಗಲು ಬಯಸಿದವರು ಕಾಂಚನಾ

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ಮೊಗಲಾ ಎಂಬುದೊಂದು ಸಣ್ಣ ಗ್ರಾಮ. ಅಲ್ಲಿನ ಪುಟ್ಟ ನೆಮ್ಮದಿಯ ಕುಟುಂಬ ನಾಗಣ್ಣ ಮತ್ತು ಗೌರಮ್ಮನವರದ್ದು. ತಮ್ಮ ಒಂದಿಷ್ಟು ಜಮೀನಿನಲ್ಲಿ ತೊಗರಿ, ಉದ್ದು, ಹೆಸರುಕಾಳು ಬೆಳೆಯುತ್ತ, ಕೂಲಿ ಮಾಡುತ್ತ ಬದುಕು ಕಟ್ಟಿಕೊಂಡಿದ್ದರು. ಅವರ ನಾಲ್ಕು ಮಕ್ಕಳಲ್ಲಿ ಕೊನೆಯ ಮಗ ಜಗದೇವ. ಸಣ್ಣ ಹುಡುಗನಾದ ಜಗದೇವ ಒಮ್ಮೆ ಸೈಕಲ್ ತುಳಿಯಲು ಹೋಗಿ ಬಿದ್ದು ಕೈ ಮುರಿದುಕೊಂಡ. ಹಳ್ಳಿಯಲ್ಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಇದ್ದುದರಿಂದ ನಂತರದಲ್ಲಿ ಮಗುವಿನ ಎಡಗೈಯನ್ನು ಸಂಪೂರ್ಣವಾಗಿ ಕತ್ತರಿಸಬೇಕಾಗಿ ಬಂದಿತು.  ಹಾಲುಗಲ್ಲದ ಕಂದ ಒಂದೇ ಕೈಯಲ್ಲಿ ತನ್ನ ಕೆಲಸಗಳನ್ನು ಮಾಡುವುದನ್ನು ಕಲಿತುಕೊಳ್ಳಲಾರಂಭಿಸಿದ.

Eedina App

ಕೈ ಕಳೆದುಕೊಂಡ ಮಗನ ನೋಡುತ್ತ ತಂದೆ ತನಗೆ ಪದೇಪದೆ ಬರುತ್ತಿದ್ದ ಹೊಟ್ಟೆನೋವನ್ನು ಸಂಪೂರ್ಣ ನಿರ್ಲಕ್ಷಿಸಿದರು. ಬಡವರಿಗೆ ಚಿಕಿತ್ಸೆ ಮತ್ತು ವಿಶ್ರಾಂತಿಗಿಂತ ಅಷ್ಟು ದಿನದ ಕೂಲಿ ಕಳೆದುಕೊಳ್ಳುವುದೇ ಹೆಚ್ಚು ಚಿಂತೆಯ ಸಂಗತಿ. ಆಗಾಗ ನೋವಿನ ಗುಳಿಗೆ ನುಂಗುವುದು. ಕೆಲಸ ಮುಂದುವರಿಸುವುದು ದಿನಚರಿಯ ಭಾಗವೇ ಆಗಿಹೋಗಿತ್ತು.

ಜಗದೇವನಿಗೆ ಏಳು ವರ್ಷ ತುಂಬುವುದರಲ್ಲಿ ನಾಗಣ್ಣನವರ ಹೊಟ್ಟೆನೋವು ತೀವ್ರ ಸ್ವರೂಪಕ್ಕೆ ತಲುಪಿ ಕೊನೆಯುಸಿರೆಳೆದರು. ಸಂಸಾರದ ಭಾರ ಸಂಪೂರ್ಣವಾಗಿ ಗೌರಮ್ಮನವರ ಮೇಲೆ ಬಿದ್ದಿತ್ತು. ನಾಲ್ಕು ಮಕ್ಕಳ ಭವಿಷ್ಯಕ್ಕಾಗಿ ಗೌರಮ್ಮ ಕೂಲಿ ಮಾಡುವುದು ಅನಿವಾರ್ಯವಾಗಿತ್ತು. ಗ್ರಾಮೀಣ ಭಾಗದ ತಂದೆ-ತಾಯಂದಿರ ಗುಣವೇ ಹೀಗೆ; ತಾವು ಅನುಭವಿಸಿದ ಕಷ್ಟವನ್ನು ಮಕ್ಕಳು ಅನುಭವಿಸಬಾರದು, ಅವರಿಗೆ ವಿದ್ಯೆಯೊಂದು ದೊರೆತರೆ ಹೇಗೋ ಚೆನ್ನಾಗಿರುತ್ತಾರೆ ಎಂದು ಕೂಲಿ ಮಾಡಿಯಾದರೂ ಮಕ್ಕಳನ್ನು ಓದಿಸುತ್ತಾರೆ. ಮಗನಿಗೆ ಕೈಯಿಲ್ಲವಾದರೇನಂತೆ, ವಿದ್ಯೆ ದೊರೆತರೆ ಹೇಗೋ ಬದುಕು ಕಟ್ಟಿಕೊಳ್ಳುತ್ತಾನೆ ಎಂದ ಗೌರಮ್ಮ, ಮಗನನ್ನು ಪಿಯುಸಿವರೆಗೆ ಓದಿಸುತ್ತಾರೆ. ಜಗದೇವ ಮುಂದಿನ ಭವಿಷ್ಯದ ಯೋಚನೆ ಮಾಡುವ ಮೊದಲೇ ಅಷ್ಟು ವರ್ಷಗಳವರೆಗೆ ಸಂಸಾರದ ಬಂಡಿ ಎಳೆದ ಗೌರಮ್ಮನ ಹೃದಯ ದಣಿದುಬಿಡುತ್ತದೆ.

AV Eye Hospital ad

ಹೃದಯಾಘಾತದಿಂದ ತಾಯಿಯನ್ನು ಕಳೆದುಕೊಂಡ ಜಗದೇವನಿಗೆ ಮುಂದಿನ ಬದುಕು ಸವಾಲಾಗಿ ನಿಲ್ಲುತ್ತದೆ. ಒಂದೇ ಕೈಯಿಂದಾಗಿ ಕೆಲಸದ ಅವಕಾಶಗಳು ಕಡಿಮೆ ಕೂಡ. ಹಾಗೋ ಹೀಗೋ ಕೆಲಸ ಹುಡುಕಿ, ಒಂದು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಜಗದೇವನನ್ನು, ಸಂಬಂಧಿಕರ ಮದುವೆಯಲ್ಲಿ ಮನಸ್ಸು ನೀಡಿ ಮದುವೆಯಾಗಲು ಬಯಸಿದವರು ಕಾಂಚನಾ. ನೆರೆಹೊರೆಯವರ ಮೂದಲಿಕೆ ಕೇಳಿ ಮದುವೆಯ ಕನಸನ್ನೇ ತೊರೆದಿದ್ದ ಜಗದೇವನನ್ನು ಕಾಂಚನಾ ಮದುವೆಯಾಗುತ್ತಾಳೆ.

ಈ ಲೇಖನ ಓದಿದ್ದೀರಾ?: ಬದುಕಿನಂಚಿನ ಬೆಳಕು | ಅನಾರೋಗ್ಯಕ್ಕೆ ಸಿಲುಕಿ ಒಬ್ಬಂಟಿಯಾಗಿದ್ದ ಯಲ್ಲಪ್ಪ ಈಗ ಯುವಜನರಿಗೂ ಸ್ಫೂರ್ತಿ

ಬಾಲ್ಯದಲ್ಲಿ ಕಳೆದುಕೊಂಡ ಬದುಕಿನ ರೆಕ್ಕೆ ಮದುವೆಯ ನಂತರ ಗರಿಗೆದರುತ್ತದೆ. ಗ್ರಾಮದಲ್ಲಿ ಒಮ್ಮೆ ನರೇಗಾ ಯೋಜನೆಯ ಕುರಿತು ಮಾಹಿತಿ ನೀಡಲು ಬಂದ ಗ್ರಾಮ ಪಂಚಾಯಿತಿ ಸಿಬ್ಬಂದಿ, ಅಂಗವಿಕಲರಿಗೆ ನರೇಗಾ ಯೋಜನೆಯಡಿ ಕೆಲಸ ಸಿಗುತ್ತದೆ ಎಂದು ಮಾಹಿತಿ ನೀಡಿದರು. ಬಟ್ಟೆ ಅಂಗಡಿಯ ಕೆಲಸ ತೊರೆದು ನರೇಗಾ ಯೋಜನೆಯಡಿ ನೋಂದಾಯಿಸಿಕೊಳ್ಳುತ್ತಾರೆ ಜಗದೇವ-ಕಾಂಚನಾ ದಂಪತಿ. ಅಂಗವಿಕಲರಿಗೆ ಅರ್ಧ ಕೆಲಸಕ್ಕೆ ಪೂರ್ತಿ ಕೂಲಿ ದೊರೆಯುವುದೆಂದು ತಿಳಿದು, ಯೋಜನೆಯಡಿ ಜಾಬ್ ಕಾರ್ಡ್ ಪಡೆದು ಕೆಲಸ ಮಾಡಲು ಆರಂಭಿಸುತ್ತಾರೆ. ಸ್ವಂತ ಗ್ರಾಮದಲ್ಲಿಯೇ ಕೆಲಸ ಮಾಡುವುದು ಅನುಕೂಲ ಆದುದರಿಂದ, ಸ್ವಲ್ಪ ಸಮಯದಲ್ಲಿಯೇ ಜಗದೇವ ಕೂಲಿಕಾರರ ಗುಂಪಿನ ಮೇಲ್ವಿಚಾರಣೆ ವಹಿಸುವ 'ಕಾಯಕಬಂಧು'ವಾಗಿ ಕೆಲಸ ನಿರ್ವಹಿಸಲು ಆರಂಭಿಸುತ್ತಾರೆ.

ನರೇಗಾ ಯೋಜನೆಯಡಿ ದುಡಿದ ಕೂಲಿ ಮೊತ್ತ, ಕಾಯಕಬಂಧುವಿನ ಗೌರವಧನ, ತಮ್ಮ ಒಂದೂಕಾಲು ಎಕರೆ ಜಮೀನಿನಲ್ಲಿನ ಕೃಷಿ ಜಗದೇವರ ಕೈಹಿಡಿಯುತ್ತದೆ. ಕೆಲವು ದಿನಗಳ ನಂತರ ಅವರು ಸಣ್ಣದೊಂದು ಕಂಪ್ಯೂಟರ್ ಅಂಗಡಿ ತೆರೆಯುತ್ತಾರೆ. ಒಂದು ಕಾಲದಲ್ಲಿ 'ಒಂಟಿ ಕೈಯ ಜಗದೇವ' ಎಂದು ಕರೆಯುತ್ತಿದ್ದ ಊರವರು, ಈಗ 'ಕಾಯಕಬಂಧು ಜಗದೇವಪ್ಪ' ಎಂದು ಗೌರವ ನೀಡಲಾರಂಭಿಸಿದ್ದಾರೆ.

"ಮೊದಲೆಲ್ಲ ಮುಂಜಾನಿಂದ ಸಂಜೀದಾಕ ಕೆಲಸ ಮಾಡಬೇಕಿತ್ರೀ. ಈಗ ಉದ್ಯೋಗ ಖಾತ್ರಿ ಒಳಗ ಅರ್ಧ ಕೆಲಸಕ್ಕ ಪೂರ್ತಿ ಕೂಲಿ ಕೊಡ್ತಾರ್ರೀ. ನಂಗೆ ಅನುಕೂಲ ಆಗೋ ಕೆಲಸನ ಕೊಟ್ಟಾರ. ಈಗ ನಾ ಕಾಯಕಬಂಧು ಆಗೀನಿ. ನನ್ನಂಥ ಬ್ಯಾರೆ ವಿಕಲಚೇತನರಿಗೂ ಉದ್ಯೋಗ ಕೊಡಿಸೀನ್ರೀ. ಊರಾಗ ಹಲವಾರು ಮಂದಿಗ ಉದ್ಯೋಗ ಕೊಡಿಸೀನಿ. ಅವರೆಲ್ಲ ಕಾಯಕಬಂಧು ಜಗದೇವಪ್ಪ ಅನ್ನಬೇಕಾದ್ರ ಭಾಳ ಖುಷಿ ಆಗ್ತದ ನೋಡ್ರಿ," ಎನ್ನುತ್ತಾರವರು.

"ಚಿಕ್ಕೋನಿದ್ದಾಗಲೇ ನಾ ಕನಸನ್ನೆಲ್ಲ ಕಳ್ಕೊಂಡುಬಿಟ್ಟಿದ್ದೆರಿ. ಅಪ್ಪ-ಅವ್ವನ ಕಳ್ಕೊಂಡು ಬದುಕು ಇನ್ನಷ್ಟು ತ್ರಾಸು ಕೊಟ್ಟದ ನಂಗ. ಈಕಿ ನನ್ನ ಮದಿವಿ ಆಗಿ ಹೊಸ ಬಾಳು ಕೊಟ್ಟಾಳ. ಈಗ ಮತ್ತ ಬದುಕು ಕಟ್ಟಿಕೊಂಡೀನಿ. ಮುಂದಿನ ಬದುಕು ಛಲೋ ಆಗಬೇಕ್ರಿ. ನನ್ನ ಹಾಂಗ ಚಿಕಿತ್ಸೆ ಇಲ್ಲದೆ ಯಾವ ಮಗುನೂ, ಯಾವ ಮನಷನೂ ನರಳಬಾರದು, ಅದಕ್ಕ ನನ್ನ ಮಗನನ್ನ ಡಾಕ್ಟರ್ ಮಾಡಬೇಕು ಅಂತ ಕನಸೈತ್ರಿ. ಅವನಿಗಾಗಿ ಇನ್ನಷ್ಟು ದುಡಿದು ಓದಿಸ್ತೀವ್ರೀ..." ಎನ್ನುತ್ತಾರೆ ಮೂರು ವರ್ಷದ ಮಗ ಅಂಕುಶನ ಕಡೆ ಬೆರಳು ತೋರುತ್ತ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app