ಊರ್ಬದಿ | ಗರುಡಪಕ್ಷಿಯ ಕೊಂದ ಬಳಿಕ ಬೇಟೆಯನ್ನೇ ಬಿಟ್ಟ ನಾರಾಯಣ

Greath Indian Hornbill 2

ಕೊಕ್ಕು, ರೆಕ್ಕೆ, ಪುಕ್ಕ, ಬಣ್ಣದ ವೈವಿಧ್ಯತೆಗೆ ಮಾತ್ರವಲ್ಲದೆ, ಜೀವನಕ್ರಮ, ಆಹಾರದ ಆಯ್ಕೆ, ಸಂತಾನಾಭಿವೃದ್ಧಿಯ ವ್ರತನಿಷ್ಠೆಯಂತಹ ಸಂಗತಿಗಳ ಕಾರಣಕ್ಕೂ ಸ್ವಾರಸ್ಯಕರ ಸಂಗತಿಗಳ ಗೂಡು ಈ ಹಾರ್ನ್‌ಬಿಲ್.‌ ಪಕ್ಷಿ ಅಧ್ಯಯನಕಾರರಿಗೆ ಪ್ರತೀ ಬಾರಿಯೂ ಹೊಸ ಸಂಗತಿಗಳನ್ನು ಕಾಣಿಸುತ್ತಿರುವ ಈ ಹಕ್ಕಿಯ ಜೀವನಕ್ರಮವೇ ಒಂದು ಮುಗಿಯದ ಕುತೂಹಲಗಳ ಗಣಿ

'ಒಂದು ಫೋಟೊ ಸಾವಿರ ಪದಗಳಿಗೆ ಸಮ' ಎಂಬ ಮಾತಿದೆ. ಆ ಒಂದು ಫೋಟೊವನ್ನು ಸೆರೆಹಿಡಿದ ಫೋಟೊಗ್ರಾಫರನ್ನು ಮಾತಿಗೆಳೆದರೆ, ಸಾವಿರ ಪದಗಳಿಗೆ ಸಮನಾದ ಫೋಟೊದ ಹಿಂದಿನ ಸ್ವಾರಸ್ಯಕರ ಸಂಗತಿಗಳೂ ಸಾವಿರಾರು ಮಾತುಗಳಲ್ಲಿ ಬಿಚ್ಚಿಕೊಳ್ಳದೆ ಇರವು.

ಅದರಲ್ಲೂ, ವನ್ಯಜೀವಿ ಛಾಯಾಗ್ರಾಹಕರ ಅನುಭವಗಳಂತೂ ರೋಚಕ. ಪ್ರಾಣಿ, ಪಕ್ಷಿಗಳ ಚಲನವಲನದ ಮೇಲೆ ಕಣ್ಣಿಟ್ಟು ದಿನಗಟ್ಟಲೆ ಕಾಯುವುದರಿಂದ ಹಿಡಿದು, ಛಾಯಾಗ್ರಾಹಕನ ಕಣ್ಣಿಗೆ ಕಂಡರೂ ಕ್ಯಾಮರಾ ಕಣ್ಣಿಗೆ ಯಾಮಾರಿಸುವ ಅವುಗಳ ನಡವಳಿಕೆ, ಬೆಳಕು, ಗಿಡ-ಮರಗಳ ನೆರಳು, ಮಳೆ-ಗಾಳಿಯ ಹುನ್ನಾರಗಳವರೆಗೆ ಹಲವು ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ಒಂದೊಳ್ಳೆ ʼನೋಟʼ ದಕ್ಕಿಸಿಕೊಳ್ಳುವ ಹರಸಾಹಸದ ಪ್ರತಿ ಕ್ಲಿಕ್ಕಿನದೂ ಒಂದೊಂದು ಕತೆಯೇ.

ಇನ್ನು, ಒಂದು ಹಕ್ಕಿ, ಒಂದು ಪ್ರಾಣಿಯ ಕುರಿತ ಮಾಹಿತಿ, ನಂಬಿಕೆ, ಐತಿಹ್ಯ, ಅನುಭವಗಳನ್ನು ಆಯಾ ಪಕ್ಷಿ-ಪ್ರಾಣಿಗಳ ಆವಾಸದ ವ್ಯಾಪ್ತಿಯ ಜನರಿಂದಲೇ ಕೇಳಲು ಹೊರಟರೆ ಒಂದೊಂದು ಪುಸ್ತಕ ಬರೆಯುವಷ್ಟು ಸಂಗತಿಗಳು ಅನಾಯಾಸವಾಗಿ ಹರಿದುಬರುತ್ತವೆ.

ದಾಸ ಮಂಗಟ್ಟೆಯನ್ನು ಈ ಬಾರಿಯಾದರೂ ನೋಡಲೇಬೇಕು ಎಂದು ಕಳೆದ ಜನವರಿಯಲ್ಲಿ ಶರಾವತಿ ಕಣಿವೆಯ ಕಾಡು ಹೊಕ್ಕವನಿಗೆ, ಕಾಡೇ ಆ ಹಕ್ಕಿಯ ಕತೆಗಳನ್ನು ಉಸುರಿತು. ಭೂಮಿ ಮೇಲಿನ ಮೋಹಕ ಹಕ್ಕಿಗಳಲ್ಲಿ ಒಂದಾದ 'ಗ್ರೇಟ್‌ ಇಂಡಿಯನ್‌ ಹಾರ್ನ್‌ಬಿಲ್‌ʼ ಎಂಬ ಹಕ್ಕಿಯ ಕತೆಯನ್ನು ಕಾಡಿನೊಡಲ ದನಿಗಳೇ ಪಿಸುಗುಟ್ಟಿದವು.

Image
Greath Indian Hornbill 1
ಚಿತ್ರ ಕೃಪೆ: ನಿಶಾ ಪುರುಷೋತ್ತಮನ್

ತನ್ನ ಕೊಕ್ಕು, ರೆಕ್ಕೆ, ಪುಕ್ಕ, ಬಣ್ಣದ ವೈವಿಧ್ಯತೆಗೆ ಮಾತ್ರವಲ್ಲದೆ, ತನ್ನ ಜೀವನಕ್ರಮ, ಆಹಾರದ ಆಯ್ಕೆ, ಸಂತಾನಾಭಿವೃದ್ಧಿಯ ವ್ರತನಿಷ್ಠೆಯಂತಹ ಸಂಗತಿಗಳ ಕಾರಣಕ್ಕೂ ಪಕ್ಷಿಪ್ರೇಮಿಗಳ ಪಾಲಿಗೆ ಕೆದಕಿದಷ್ಟೂ ಸ್ವಾರಸ್ಯಕರ ಸಂಗತಿಗಳ ಗೂಡು ಈ ಹಾರ್ನ್‌ಬಿಲ್.‌ ಪಕ್ಷಿ ಅಧ್ಯಯನಕಾರರಿಗೆ ಪ್ರತಿ ಅಧ್ಯಯನದಲ್ಲೂ ಹೊಸ-ಹೊಸ ಸಂಗತಿಗಳನ್ನು ಕಾಣಿಸುತ್ತಿರುವ ಈ ಹಕ್ಕಿಯ ಜೀವನಕ್ರಮವೇ ಒಂದು ಮುಗಿಯದ ಕುತೂಹಲಗಳ ಗಣಿ.

ಇಂತಹ ಹಕ್ಕಿಯ ಕಾಣುವ ಹುಕಿಗೆ ಬಿದ್ದು ಹೋದವನಿಗೆ ಅವತ್ತು, ಗಗನಚುಂಬಿ ಮರಗಳ ದಟ್ಟ ಕಾಡಿನ ನಡುವಿನ ಕಡಿದಾದ ಕಾಲುದಾರಿಯಲ್ಲಿ ಹೋಗುತ್ತಿರುವಾಗ ಅಚಾನಕ್ಕಾಗಿ ಅದರ ದರುಶನ ಸಿಕ್ಕಿತು. ಬೆಳಗಿನ ಎಂಟರ ಹೊತ್ತಿಗೆ, ಕಾಡದಾರಿಯಲ್ಲಿ ಹೋಗುವಾಗ ಕಣ್ಣು ಹಕ್ಕಿಯ ಹುಡುಕುತ್ತಿದ್ದವು. ಆದರೆ, ಕ್ಯಾಮರಾ ಕಣ್ಣು ಇನ್ನೂ ತೆರೆದಿರಲೇ ಇಲ್ಲ! ಹಾಗಾಗಿ, ಕಾಡು ಹೊಕ್ಕ ಎರಡನೇ ದಿನವೇ, ಸಮೀಪದಲ್ಲೇ ಸಿಕ್ಕ ದಾಸ ಮಂಗಟ್ಟೆ ಕ್ಯಾಮರಾದಲ್ಲಿ ಸೆರೆಯಾಗಲೇ ಇಲ್ಲ. ಮೊದಲೇ ಗುರುತಿಸಿದ್ದ ಹಣ್ಣಿನ ಮರದವರೆಗೆ ಸಾಗಿದ ಸುಮಾರು ಐದು ಕಿಲೋಮೀಟರ್ ಕಾಲುದಾರಿಯ ಉದ್ದಕ್ಕೂ ಕಣ್ಣು ಮರದ ನೆತ್ತಿಯನ್ನೇ ಸವರುತ್ತಿದ್ದರೂ, ಮತ್ತೆ ಅಂತಹದ್ದೊಂದು ಅಪೂರ್ವ ಕ್ಷಣ ದಕ್ಕಲೇ ಇಲ್ಲ!

ಆದರೆ, ಹಣ್ಣಿನ ಮರದಡಿ ಮೂರು ಹಗಲು ಕಾದದ್ದಕ್ಕೆ ಸಿಕ್ಕಿದ್ದು ಒಂದೇ ಒಂದು ಕ್ಲಿಕ್‌ನಲ್ಲಿ ಮಂಗಟ್ಟೆಯ ಚಂದದ ಕೊಕ್ಕು ಮತ್ತು ಕಣ್ಣಿನ ನೋಟ. ಹಾಗಂತ, ಆ ಮರಕ್ಕೆ ಮಂಗಟ್ಟೆಗಳು ಬಂದದ್ದೇ ಒಮ್ಮೆ ಎಂದೇನಲ್ಲ. ಮೂರು ದಿನದಲ್ಲಿ ಕನಿಷ್ಠ ಏಳೆಂಟು ಜೋಡಿಗಳು ದಿನಕ್ಕೆ ಹತ್ತಾರು ಬಾರಿ ಹಣ್ಣಿಗೆ ಮುತ್ತುತ್ತಿದ್ದವು. ಆದರೆ, ದಟ್ಟ ಎಲೆಗಳಿಂದ ಕೂಡಿದ್ದ ಎತ್ತರದ ಮರದ ನೆತ್ತಿಯ ಮೇಲೆ ಕೂತು ಹಣ್ಣು ಆರಿಸುತ್ತಿದ್ದ ಅವು, ಕ್ಯಾಮರಾ ತಿರುಗಿಸಿ ಕ್ಲಿಕ್‌ ಮಾಡುತ್ತಲೇ ಬೆದರುತ್ತಿದ್ದವು. ಅಷ್ಟರಮಟ್ಟಿಗೆ ಅತಿ ಸೂಕ್ಷ್ಮ!

Image
Dasa Mangatte
ಲೇಖಕರಿಗೆ ಕಂಡ ದಾಸ ಮಂಗಟ್ಟೆ

ಅವುಗಳ ಈ ಸೂಕ್ಷ್ಮತೆಯ ರಹಸ್ಯವೇನು? ಅದರಲ್ಲೂ, ದಾಂಡೇಲಿಯಂತೆ ಫೋಟೊಗ್ರಾಫರುಗಳ ದಟ್ಟಣೆ ಇರದ, ಪ್ರವಾಸಿಗಳ ಕಾಟವೂ ಇರದ, ಕನಿಷ್ಠ ಸುತ್ತಮುತ್ತ ಐದಾರು ಕಿಲೋಮೀಟರ್ ಸುತ್ತಳತೆಯಲ್ಲಿ ಜನವಸತಿಯೂ ಇರದ ಆ ಕಣಿವೆಯಲ್ಲಿ ಅವು ಅಷ್ಟು ಬೆಚ್ಚುವುದು ಯಾಕೆ? ಎಂಬ ಪ್ರಶ್ನೆ ಮುಂದಿಟ್ಟು, ಅಲ್ಲಿನ ವನ್ಯಜೀವಿ ವಲಯದ ಸಿಬ್ಬಂದಿಯನ್ನು ಮಾತಿಗೆಳೆದಾಗ, ಆವರೆಗೆ ಹಕ್ಕಿಯ ಬಗ್ಗೆ ತಿಳಿದೇ ಇರದ ಸಂಗತಿಗಳು ಬೆಳಕಿಗೆ ಬಂದವು.

ವನ್ಯಜೀವಿ ಸಿಬ್ಬಂದಿ ವಿನಾಯಕ ನಾಯ್ಕ ಮತ್ತು ಗಣಪತಿ ಜೊತೆ ಮಧ್ಯಾಹ್ನ ಕೂತು, ಹುರುಳಿಕಾಳು ಸಾರು, ಕೆಂಪಕ್ಕಿ ಅನ್ನದ ರುಚಿ ನೋಡುತ್ತ, ಮಾತಿಗೆಳೆದಾಗ ಮಂಗಟ್ಟೆಯ ವಿವರಗಳು ಬಿಚ್ಚಿಕೊಂಡವು: “ಬೆಳಗಿನ ಕುಡಿಬಿಸಿಲು ಏರುವ ಹೊತ್ತಿಗೆ ಹಣ್ಣಿನ ಮರ ಹುಡುಕಿ ಬರುವ ಇವುಗಳ ಸದ್ದು ಅರ್ಧ ಕಿಲೋಮೀಟರ್ ದೂರದಿಂದಲೇ ಕಿವಿಗೆ ಬೀಳುತ್ತದೆ. ಹೀಗೆ ಹಾರುವಾಗ ನೋಡಬಹುದೇ ಹೊರತು ಹಣ್ಣಿನ ಮರದಲ್ಲಿರುವಾಗ ಹತ್ತಿರದಿಂದ ನೋಡುವುದು ಬಹಳ ಕಷ್ಟ. ಏಕೆಂದರೆ, ಕಾಡಿನ ಒಂದು ಸಣ್ಣ ಕಡ್ಡಿ ತುಂಡಾದ ಸದ್ದನ್ನೂ ಈ ಮಂಗಟ್ಟೆಗಳು ಗ್ರಹಿಸುತ್ತವೆ. ಸಣ್ಣ ಸದ್ದಾದರೂ ಕ್ಷಣಮಾತ್ರದಲ್ಲಿ ಮರದಿಂದ ಹಾರುತ್ತವೆ. ನಮ್ಮ ಕ್ಯಾಂಪಿನ ಬಳಿ ಚೂರು ಬಯಲಿರುವುದರಿಂದ ಇವು ಹಾರುವಾಗ ಕಾಣಿಸುತ್ತವೆ. ಆದರೆ, ಹಾರುತ್ತ ಬರುವಾಗ ಮೊಬೈಲ್‌ ತೆಗೆದು ಫೋಟೊ ತೆಗೆಯೋಣ ಎಂದರೆ; ದೂರದಿಂದಲೇ ಅದನ್ನು ಗ್ರಹಿಸಿ ದಿಢೀರನೆ ಪಥ ಬದಲಿಸಿಬಿಡುತ್ತವೆ. ಹಾಗಾಗಿ, ಬೇಸಿಗೆ ಮತ್ತು ಚಳಿಗಾಲದಲ್ಲಿ - ಕಾಡಿನ ಮರಗಳ ಹಣ್ಣು ಸಿಗುವ ಹಂಗಾಮಿನಲ್ಲಿ - ಪ್ರತಿನಿತ್ಯ ಮೂರ್ನಾಲ್ಕು ಬಾರಿ ಜೋಡಿ ಹಕ್ಕಿಗಳು ಕ್ಯಾಂಪಿನ ಮೇಲೇ ಹಾರಿಹೋದರೂ, ಒಂದೇ ಒಂದು ಫೋಟೊ ತೆಗೆಯಲಾಗಿಲ್ಲ!”

ಈ ಲೇಖನ ಓದಿದ್ದೀರಾ?: ಹೆಗ್ಗೋಡಿನ ಬಳಿ ಅರಳಿದ 'ಉಷಾಕಿರಣʼ ಎಂಬ ಸಹ್ಯಾದ್ರಿಯ ತುಣುಕು

ಈ ಮಾತುಗಳನ್ನು ಕೇಳಿ ದಂಗಾಗಿ, "ನಿಜವಾಗಿಯೂ ಅವು ದೂರದಿಂದಲೇ ಮೊಬೈಲ್‌ನಿಂದ ಫೋಟೊ ಕ್ಲಿಕ್ಕಿಸುವುದನ್ನು ಗ್ರಹಿಸುತ್ತವೆಯೇ?" ಎಂದು ಕೇಳಿದೆ. ಅದಕ್ಕವರು, "ನಿಜವಾಗಲೂ ಸರ್.‌.. ಬೇಕಾದರೆ ನೀವೇ ನೋಡಿ ಗೊತ್ತಾಗುತ್ತೆ...” ಎಂದು ಸುಮ್ಮನಾದರು. ಆದರೆ, ಮಧ್ಯಾಹ್ನದ ಊಟ ಮುಗಿಸಿ ಹಣ್ಣಿನ ಮರದ ಬಳಿ ಹೋಗಿ ಕ್ಯಾಮರಾ ಸಜ್ಜುಗೊಳಿಸಿ ನಿಂತ ಮೇಲೆ, ಸುಮಾರು ಎರಡು ತಾಸು ಬಿಟ್ಟು ಒಂದು ಜೋಡಿ ಮರಕ್ಕೆ ಬಂದಾಗಲೇ, ಅವರು 'ನೀವೇ ನೋಡಿ ಬೇಕಾದರೆ' ಎಂದ ಮಾತಿನ ಅರ್ಥವಾದದ್ದು!

ಇನ್ನು, ಅದೇ ಕಾಡಿನ ಭಾಗವಾಗಿರುವ ಅಲ್ಲಿನ ಕಣಿವೆಯ ವಾಸಿಗಳನ್ನು ಕೇಳೋಣ ಎಂದುಕೊಂಡು, ಅಂದು ರಾತ್ರಿ ಸ್ಥಳೀಯ ನಾಗರಾಜ್‌ ಅವರ ಮನೆಗೆ ಹೋದೆ. ಅಕ್ಕಿ ರೊಟ್ಟಿ, ಕೋಳಿ ಸಾರು ಊಟ ಮಾಡಿ, ಎಲೆಯಡಿಕೆ ಮೆಲ್ಲುತ್ತ ನಾಗರಾಜ್‌ ಅವರ ಅಪ್ಪ, 70 ವರ್ಷ ವಯೋಮಾನದ ನಾರಾಯಣ ಅವರನ್ನು ದಾಸ ಮಂಗಟ್ಟೆ ಹಕ್ಕಿಯ ಕುರಿತು ಮಾತಿಗೆಳೆದೆ.

Image
Greath Indian Hornbill 4
ಚಿತ್ರ ಕೃಪೆ: ಹರ್ಮಿಸ್ ಹರಿದಾಸ್

ನಾರಾಯಣ ಅವರೂ ಸೇರಿದಂತೆ ಅಲ್ಲಿನ ಸ್ಥಳೀಯರಿಗೆ ಮಂಗಟ್ಟೆ ಎಂಬುದಾಗಲೀ, ಹಾರ್ನ್‌ಬಿಲ್‌ ಎಂಬ ಹೆಸರಾಗಲೀ ಗೊತ್ತಿಲ್ಲ. ಬದಲಾಗಿ ಅವರು ಅದಕ್ಕೆ ಕರೆಯುವುದು ಗರುಡಪಕ್ಷಿ ಎಂದು! ಸಾಕ್ಷಾತ್‌ ವಿಷ್ಣುವಿನ ವಾಹನವೇ ಈ ಹಾರ್ನ್‌ಬಿಲ್‌ ಎಂದು ನಂಬುವ ಅವರಿಗೆ, ಆ ಹಕ್ಕಿ ಮುಗಿಲಲ್ಲಿ ಹಾರಿಹೋದರೂ ಕೈ ಎತ್ತಿ ಮುಗಿಯುವಷ್ಟು ಭಕ್ತಿಭಾವ.

ಇನ್ನೂ ಯುವಕರಾಗಿದ್ದಾಗ, ಬೇಟೆಗೆ ಹೋಗುವುದು ನಾರಾಯಣ ಅವರಿಗೆ ಅಭ್ಯಾಸವಾಗಿತ್ತು. ಹಾಗೆ ಹೋದಾಗೊಮ್ಮೆ ಅವರು, ಗರುಡಪಕ್ಷಿಯೊಂದಕ್ಕೆ ಗುರಿ ಇಟ್ಟು ಹೊಡೆದುರುಳಿಸಿದ್ದರು! ಹುಡುಗಾಟಿಕೆಯ ವಯಸ್ಸಿನಲ್ಲಿ ಮಾಡಿದ ಆ ಕಿತಾಪತಿ, ಅವರ ಅಪ್ಪನಿಗೆ ಗೊತ್ತಾಗುತ್ತಲೇ ಮನೆಯಲ್ಲಿ ದೊಡ್ಡ ರಾದ್ಧಾಂತವೇ ನಡೆದುಹೋಗಿತ್ತು. ತಿರುಪತಿ ತಿಮ್ಮಪ್ಪ ಮನೆದೇವರಾದ ಅವರಿಗೆ ವಿಷ್ಣು ಎಂದರೆ ಪರಮ ದೈವ. "ಮನೆದೇವರ ವಾಹನವಾದ ಗರುಡಪಕ್ಷಿಯನ್ನು ತಾವು ದೇವರ ಪ್ರತಿರೂಪವೆಂದೇ ಆರಾಧಿಸುವಾಗ, ನೀನು ಅದನ್ನು ಬೇಟೆಯಾಡಿ ಮನೆತನವನ್ನೇ ತೊಳೆಯುವ ಕೆಲಸ ಮಾಡಿದ್ದೀಯಾ!" ಎಂದು ಬೈದು ಗಲಾಟೆ ಮಾಡಿದ ಅವರು, "ನೀನು ಈ ಮನೆಯಲ್ಲೇ ಇರಬೇಡ," ಎಂದು ತಾಕೀತು ಮಾಡಿದ್ದರು!

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಮಾಲೂರು ಪ್ರಾಂತ್ಯ | ಗಾಂಧೀ ತಾತುನು ಕಟ್ಟೆ ಪುರಾಣಮು

ಆಮೇಲೆ ಮನೆಯ ಇತರರು ಸಮಾಧಾನ ಮಾಡಿ, ಅಪ್ಪ-ಮಗನ ಜಗಳಕ್ಕೆ ಅಂತ್ಯ ಹಾಡಿದ್ದರು. ಆಗ ಅವರಪ್ಪ, ಜೀವಮಾನದಲ್ಲಿ ಇನ್ನೆಂದೂ ಗರುಡಪಕ್ಷಿಯ ಮೇಲೆ ಬಂದೂಕು ಎತ್ತುವುದಿಲ್ಲ ಎಂದು ನಾರಾಯಣ ಅವರಿಂದ ಮಾತು ತೆಗೆದುಕೊಂಡಿದ್ದರು.

ಆ ಘಟನೆ ನಾರಾಯಣ ಅವರ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಿತು ಎಂದರೆ, ಆ ಘಟನೆಯ ಬಳಿಕ ನಾರಾಯಣ ಬೇಟೆಯನ್ನೇ ಕೈಬಿಟ್ಟರು. ಅಷ್ಟೇ ಅಲ್ಲ, ಇವತ್ತಿಗೂ ಗರುಡಪಕ್ಷಿ ಕಂಡರೆ ಕೈ ಎತ್ತಿ ಮುಗಿಯುತ್ತಾರೆ. "ಗರುಡಪಕ್ಷಿ ಹಾರಾಟದ ಸದ್ದು ದೂರದಿಂದಲೇ ಕೇಳಿಸುತ್ತದೆ. ಅದು ಎಷ್ಟು ಸೂಕ್ಷ್ಮ ಹಕ್ಕಿ ಎಂದರೆ, ಕನ್ನಡಿಯಂತಹ ಹೊಳೆಯುವ ಯಾವುದೇ ವಸ್ತು ಭೂಮಿಯ ಮೇಲೆ ಇದ್ದರೂ ಅದರ ನೇರಕ್ಕೆ ಅದು ಹಾರುವುದಿಲ್ಲ. ಹಾದಿ ಬದಲಾಯಿಸಿಬಿಡುತ್ತದೆ. ಅದು ಹಾರುವಾಗ ಅದರ ನೆರಳು ಸೋಕಿದರೂ ಹಾವುಗಳು ಬೆಚ್ಚಿ ಬಿಲ ಸೇರುತ್ತವೆ. ನಾನೇ ನಾಗರಹಾವು ಬೆದರಿ ಹುತ್ತ ಸೇರಿದ್ದನ್ನು ಕಂಡಿದ್ದೇನೆ,” ಎಂದು ನಾರಾಯಣ ಗರುಡಪಕ್ಷಿಯ ಪ್ರಭಾವ ಹೇಳುವಾಗ, ಅವರ ಕಣ್ಣಲ್ಲಿ ಅವರಿಗೇ ಗೊತ್ತಿಲ್ಲದೆ ಆ ಹಕ್ಕಿಯ ಮೇಲಿನ ಅಭಿಮಾನ ಹೊಳೆಯುತ್ತಿತ್ತು!

Image
Greath Indian Hornbill 3
ಚಿತ್ರ ಕೃಪೆ: ಧನು ಪರಾನ್

ಶರಾವತಿ ಕಣಿವೆಯ ದೀವರು, ಗೊಂಡರು, ಮರಾಠಿ ಕುಣಬಿ, ಹಸಲರು ಮುಂತಾದ ಕಾಡಿನ ಮಕ್ಕಳ ನಡುವೆ ದಾಸ ಮಂಗಟ್ಟೆಯ ಕುರಿತ ಅಭಿಮಾನ ಮತ್ತು ಭಕ್ತಿಭಾವ ಎಷ್ಟಿದೆ ಎಂದರೆ; ಕಾಡಿನಲ್ಲಿ ಸತ್ತ ಹಕ್ಕಿಯ ತಲೆಬುರುಡು ಸಿಕ್ಕರೆ (ತೀರಾ ವಿರಳ) ಅದನ್ನು ದೇವರೇ ಕರುಣಿಸಿದ ಅದೃಷ್ಟ ಎಂದೇ ಅವರು ಭಾವಿಸುತ್ತಾರೆ. ಆ ತಲೆಬುರುಡೆಯನ್ನು ತಂದು ಮನೆಯ ದೇವರ ಫೋಟೊದೊಂದಿಗೆ ಇಟ್ಟು ನಿತ್ಯ ಪೂಜೆ ಸಲ್ಲಿಸುತ್ತಾರೆ! ನಾರಾಯಣ ಅವರು ಈ ವಿಷಯ ಹೇಳಿದಾಗ ಅವರ ಅಪ್ಪ ಅವರ ಬೇಟೆಯ ದುಃಸ್ಸಾಹಸಕ್ಕೆ ವ್ಯಗ್ರರಾಗಿದ್ದರ ಹಿಂದಿನ ಹಕೀಕತ್ತು ಹೊಳೆಯದೆ ಇರಲಿಲ್ಲ.

ಮೊನ್ನೆ ಮೊನ್ನೆ... ದಾಸ ಮಂಗಟ್ಟೆಗಳ ತವರು ಎಂದೇ ಹೇಳಲಾಗುವ ಈಶಾನ್ಯ ರಾಜ್ಯಗಳ ನಾಗಾಲ್ಯಾಂಡ್‌ನಲ್ಲಿ ವಿಕೃತರಿಬ್ಬರು ಹಕ್ಕಿಯೊಂದನ್ನು ಹಿಡಿದು ಅದಕ್ಕೆ ಚಿತ್ರವಿಚಿತ್ರ ಹಿಂಸೆ ನೀಡಿ ಸಾಯಿಸಿದ ವೀಡಿಯೊ ಹರಿದಾಡುತ್ತಿದೆ. ಹಾಗೆ ಮಾಡಿದವರನ್ನು ಬಂಧಿಸಿ, ಕ್ರಮ ಜರುಗಿಸಲಾಗಿದೆ. ಆದರೆ, ದೈವಿಕ ನಂಬಿಕೆ, ಜಾನಪದ ಆರಾಧನೆಯ ಭಾವಗಳ ಆಚೆಗೂ ತನ್ನ ಸೌಮ್ಯ ಮತ್ತು ಸೂಕ್ಷ್ಮ ಸ್ವಭಾವ ಹಾಗೂ ಅದ್ಭುತ ಸೌಂದರ್ಯದಿಂದ ಎಂಥವರನ್ನೂ ಚಕಿತಗೊಳಿಸುವ ದಾಸ ಮಂಗಟ್ಟೆಯನ್ನು ಹಾಗೆ ಹೊಡೆದು, ಕತ್ತು ತುಳಿದು ಹಿಂಸಿಸುವ ನಾಡಿನ ಕೌರ್ಯದ ಮುಂದೆ ಕಾಡಿನ ಜೀವಪ್ರೇಮ ಅಗಾಧ. ದೇಶದಲ್ಲಿ ಹೆಚ್ಚುತ್ತಿರುವ ಹಿಂಸಾ ವ್ಯಸನಿ ಪ್ರವೃತ್ತಿಗೆ ನಾಗಾಲ್ಯಾಂಡ್‌ ಘಟನೆ ಕನ್ನಡಿ ಹಿಡಿದಿದ್ದರೆ, ಕಾಡಿನ ಮಕ್ಕಳ ಜೀವ ಕಾರುಣ್ಯ ಮತ್ತು ಸುತ್ತಲ ಪರಿಸರದೊಂದಿಗಿನ ಕಳ್ಳುಬಳ್ಳಿಯ ಸಂಬಂಧಕ್ಕೆ ನಾರಾಯಣ ಅವರ ಬದುಕಿನ ಅನುಭವ ಸಾಕ್ಷಿಯಾಗಿದೆ.

ಮುಖ್ಯ ಚಿತ್ರ ಕೃಪೆ: ವಿಘ್ನೇಶ್ ತಂಗರಾಜ್
ನಿಮಗೆ ಏನು ಅನ್ನಿಸ್ತು?
13 ವೋಟ್