ಕರುಣೆಯ ಕೃಷಿ | ಇರಾನ್ ಕವಿ ಸಬೀರ್ ಹಕಾ ಅವರ 'ಕಾರ್ಮಿಕರ ಕಾವ್ಯ'

Sabeer Haka Poem

ಹಿಪ್ಪುನೇರಳೆ

ನೀವು ಎಂದಾದರೂ ನೋಡಿದ್ದೀರಾ? - ಹಿಪ್ಪುನೇರಳೆ ಹಣ್ಣು

ಎಲ್ಲಿ ಬೀಳುತ್ತದೆಯೋ ಆ ಜಾಗದಲ್ಲಿ

ಅದರ ಕೆಂಪು ರಸದ ಕಲೆ ಉಂಟಾಗಿಬಿಡುತ್ತದೆ.

ಬೀಳುವುದಕ್ಕಿಂತ ಹೆಚ್ಚು ನೋವಿನ ಸಂಗತಿ ಬೇರಿಲ್ಲ.

ನಾನು ಕಟ್ಟಡಗಳಿಂದ ಬೀಳುತ್ತಿರುವ ಅದೆಷ್ಟು

ಕಾರ್ಮಿಕರನ್ನು ನೋಡಿದ್ದೇನೆ,

ಬಿದ್ದು ಹಿಪ್ಪುನೇರಳೆ ಆಗಿಬಿಡುತ್ತಾರೆ!

* * *

ದೇವರು

ದೇವರು ಸಹ ಕಾರ್ಮಿಕನೇ

ಖಂಡಿತ ಅವನು ವೆಲ್ಡರಗಳ ವೆಲ್ಡರ್ ಇರಬೇಕು.

ಸಂಜೆಯ ಬೆಳಕಲ್ಲಿ

ಅವನ ಕಣ್ಣು ಕೆಂಡದಂತೆ ಕೆಂಪಾಗಿರುತ್ತವೆ

ರಾತ್ರಿ ಅವನ ಬಟ್ಟೆಯಲ್ಲಿ ತೂತುಗಳೋ ತೂತುಗಳು.

* * *

ಬಂದೂಕು

ಅವರು ಬಂದೂಕನ್ನು ಕಂಡುಹಿಡಿದಿರದಿದ್ದರೆ

ಎಷ್ಟೋ ಜನ ದೂರದಿಂದಲೇ

ಗುಂಡಿಗೆ ಬಲಿಯಾಗುವುದರಿಂದ ಪಾರಾಗುತ್ತಿದ್ದರು.

ಅವರಿಗೆ ಕಾರ್ಮಿಕರ ಶಕ್ತಿಯ ಅರಿವು ಮೂಡಿಸುವುದು

ಕೂಡ ಹೆಚ್ಚು ಸುಲಭವಾಗುತ್ತಿತ್ತು.

* * *

ಏಕೈಕ ಭೀತಿ

ನಾನು ಸತ್ತ ನಂತರ...

ನನ್ನ ಜೊತೆ ನನ್ನ ನೆಚ್ಚಿನ ಎಲ್ಲ ಪುಸ್ತಕಗಳನ್ನು ಒಯ್ಯುವೆ

ನಾನು ಪ್ರೀತಿಸಿದವರೆಲ್ಲರ ಫೋಟೊಗಳಿಂದ

ನನ್ನ ಸಮಾಧಿಯನ್ನು ತುಂಬಿಬಿಡುವೆ

ಭವಿಷ್ಯದ ಬಗೆಗಿನ ಭೀತಿಗೆ

ಇರುವುದಿಲ್ಲ ಜಾಗ ನನ್ನ ಹೊಸ ನೆಲೆಯಲ್ಲಿ

 

ಮಲಗುವೆ, ಸಿಗರೇಟು ಸೇದುವೆ,

ಯಾವೆಲ್ಲ ಹುಡುಗಿಯರನ್ನು ಅಪ್ಪಿಕೊಳ್ಳಬಯಸಿದ್ದೇನೋ

ಅವರೆಲ್ಲರನ್ನೂ ನೆನೆಸಿಕೊಂಡು ಅತ್ತುಬಿಡುವೆ.

 

ಈ ಎಲ್ಲ ಆನಂದಗಳ ನಡುವೆಯೂ

ಒಂದು ಭೀತಿ ಇದ್ದೇ ಇರುತ್ತದೆ

ಒಂದಲ್ಲ ಒಂದು ದಿನ, ಬೆಳಬೆಳಗ್ಗೆ

ಹೆಗಲ ತಟ್ಟಿ-ತಟ್ಟಿ ಎಬ್ಬಿಸುತ್ತ ಯಾರೋ ಹೇಳುತ್ತಾರೆ,

"ಲೋ ಸಬೀರ್... ಏಳು, ಏಳು, ಕೆಲಸಕ್ಕೆ ಹೋಗಬೇಕು."

* * * * *

“Every beautiful poem is an act of resistance” - Mahmoud Darwish

Image
Sabeer Haka

ಇರಾನ್ ದೇಶದ ಸಬೀರ್ ಹಕಾ ಓರ್ವ ಕಾರ್ಮಿಕ ಕವಿ. ಕಟ್ಟಡದ ಕೆಲಸಗಾರನಾಗಿ ದುಡಿಯುವ ಸಬೀರ್, ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. "ಹುಟ್ಟಿಗೂ ಮುಂಚಿನಿಂದಲೇ ನಾನು ದಣಿದುಬಿಟ್ಟಿದ್ದೇನೆ. ನನ್ನನ್ನು ಗರ್ಭದಲ್ಲಿ ಹೊತ್ತುಕೊಂಡು ದುಡಿಯುತ್ತಿದ್ದ ನನ್ನವ್ವನ ದಣಿವು ನನ್ನ ಅರಿವಿನಲ್ಲಿದೆ. ಅವಳ ದಣಿವು ಈಗಲೂ ನನ್ನಲ್ಲಿದೆ," ಎನ್ನುತ್ತಾರವರು. ಬರವಣಿಗೆಯಿಂದ ಆರ್ಥಿಕ ಸುಸ್ಥಿತಿಯನ್ನೇನೂ ಕಾಣದ ಸಬೀರ್, ಕಡುಬಡತನದ ನಡುವೆ ಕಾವ್ಯ, ಕಾದಂಬರಿಯ ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ.

ಕಾರ್ಮಿಕನೊಬ್ಬ ಬರೆಯುವುದಕ್ಕೂ, ಕಾರ್ಮಿಕರನ್ನು ಪ್ರತಿನಿಧಿಸುತ್ತ ಕವಿಯೊಬ್ಬ ಬರೆಯುವುದಕ್ಕೂ ಇರುವ ವ್ಯತ್ಯಾಸವನ್ನು ಸಬೀರ್ ಹಕಾ ಅವರ ಕಾವ್ಯ ಎತ್ತಿ ತೋರಿಸುತ್ತದೆ. ಪ್ರತಿನಿಧೀಕರಣದ ಸಮಸ್ಯೆ ಎಂದರೆ, ಪ್ರತಿನಿಧಿತ್ವದಿಂದ ಪ್ರತಿನಿಧಿಗಳಿಗೆ ಲಾಭವೇ ವಿನಾ ಅವರು ಯಾರನ್ನು ಪ್ರತಿನಿಧಿಸುತ್ತಾರೋ ಅವರಿಗಲ್ಲ.

ಈ ಕವಿತೆ ಓದಿದ್ದೀರಾ?: ಕರುಣೆಯ ಕೃಷಿ | ಬರ್ಟೋಲ್ಟ್ ಬ್ರೆಕ್ಟ್ ಕವಿತೆ 'ಓದು ಬಲ್ಲ ಕಾರ್ಮಿಕನ ಪ್ರಶ್ನೆಗಳು'

ಅಲ್ಲದೆ, ಪ್ರತಿನಿಧಿಗಳಾಗಿ ತಾವು ಯಾರ ಧ್ವನಿಯಾಗುತ್ತಿದ್ದೇವೆಯೋ ಅವರ ಧ್ವನಿಯನ್ನು ತಮ್ಮ ದನಿ ಹತ್ತಿಕ್ಕಿಬಿಡಬಾರದು ಎಂಬ ಎಚ್ಚರವೂ ಪ್ರತಿನಿಧಿಗಳಲ್ಲಿ ಇರಬೇಕು; ದುರದೃಷ್ಟವಶಾತ್ ಆ ಎಚ್ಚರ ಬಹುತೇಕರಲ್ಲಿ ಇರುವುದಿಲ್ಲ. ಹಾಗಾಗಿಯೇ, ಸಾಹಿತ್ಯದಲ್ಲಿ ಹೇಗೋ ಸಮಾಜದಲ್ಲಿಯೂ ಇನ್ನೂ ನಾವು ಹಲವು ವರ್ಗದ ಜನರ ದನಿಯನ್ನು ಕೇಳಿಸಿಕೊಳ್ಳುತ್ತಲೇ ಇಲ್ಲ. ಅಷ್ಟೇ ಅಲ್ಲ, ಹಾಗೆ ಕೇಳಿಸಿಕೊಳ್ಳುವ ಬದಲು, ಅವರ ದನಿಯಲ್ಲಿ ನಾವೇ ಇನ್ನೂ ಬಡಬಡಿಸುತ್ತಿದ್ದೇವೆ, ಬೆನ್ನು ಚಪ್ಪರಿಸಿಕೊಳ್ಳುತ್ತಿದ್ದೇವೆ.

ಪ್ರತಿನಿಧಿತ್ವವಿಲ್ಲದೆ ಬರವಣಿಗೆಯೂ ಇಲ್ಲವೆನ್ನುವುದು ಸಹ ನಿಜ. ಆದರೂ, ಕಾವ್ಯದಲ್ಲಿಯಾದರೂ ಅನ್ಯರ ದನಿಯಾಗುವ ಜವಾಬ್ದಾರಿಯ ಕುರಿತು ನಮ್ಮಲ್ಲಿ ಹೆಚ್ಚಿನ ಎಚ್ಚರ, ನೈತಿಕ ಸೂಕ್ಷ್ಮ ಅತ್ಯವಶ್ಯ.

ನಿಮಗೆ ಏನು ಅನ್ನಿಸ್ತು?
4 ವೋಟ್