ಊರ್ಬದಿ | ಅಡಿಕೆ ಶ್ರೀಮಂತರ ಬೆಳೆ ಎಂಬ ಅರ್ಧ ಸತ್ಯ ಮತ್ತು ಎಲೆಚುಕ್ಕೆ ರೋಗವೆಂಬ ತುದಿಗಾಲ

ಇದೀಗ ಊರ್ಬದಿ ಎಲ್ಲರ ಮುಖದ ಮೇಲೆ ಚಿಂತೆಯ ಗೆರೆ. ಕೊಪ್ಪ, ಶೃಂಗೇರಿ, ತೀರ್ಥಹಳ್ಳಿ, ಹೊಸನಗರ, ಸಾಗರ, ಸಿದ್ದಾಪುರ, ಶಿರಸಿಯಂತಹ ಭಾರೀ ಮಳೆಯಾಗುವ ಕಡೆಯಂತೂ, ಊರಿಗೆ ಊರೇ ಮಂಕುಬಡಿದ ಸ್ಥಿತಿ. ಅಡಿಕೆ ಅಂಗಳಗಳಲ್ಲಿ ಸಡಗರದ ಹಂಗಾಮಿನ ಬದಲು ಆತಂಕದ ನಿಟ್ಟುಸಿರು. ಮಲೆಸೀಮೆಯ ಬದುಕ ಬಲ್ಲವರಿಗಷ್ಟೇ ಈ ಆತಂಕ ಅರ್ಥವಾದೀತು

ಮೊನ್ನೆ ಶಿವಮೊಗ್ಗ ಜಿಲ್ಲೆಯ ಹೊಸನಗರದ ರೈತಾಪಿ ಮಹಿಳೆಯೊಬ್ಬರು, ಗಿಡಗಳು ಎಲೆ ಒಣಗಿ ಸಾಯುತ್ತಿರುವ ತಮ್ಮ ಅಡಿಕೆ ತೋಟದ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡು, ಬದುಕಿನ ಭರವಸೆಯೇ ಮುಗಿದುಹೋದಂತೆ ಎನಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಸುಮಾರು ನಾಲ್ಕೈದು ವರ್ಷದ ಅಡಿಕೆ ಸಸಿಗಳು, ಎಲೆಚುಕ್ಕೆ ಎಂಬ ಔಷಧವೇ ಇಲ್ಲದ ಮಾರಕ ರೋಗಕ್ಕೆ ತುತ್ತಾಗಿ ಬದುಕುಳಿಯುವ ಸಾಧ್ಯತೆಯೇ ಇರಲಿಲ್ಲ. ಹೊಸ ಕನಸಿನೊಂದಿಗೆ ತೋಟ ಕಟ್ಟಿದ ಆ ರೈತಾಪಿ ಕುಟುಂಬದ ಕನಸು ಕೈಗೂಡುವ ಮೊದಲೇ ಗಿಡಗಳು ಕಣ್ಣೆದುರಿಗೇ ಸತ್ತು ನೆಲಕ್ಕೊರಗುತ್ತಿರುವುದು ಆಕೆಯ ಬದುಕಿನ ಭರವಸೆಯನ್ನೇ ಕಳೆದಿತ್ತು.

Eedina App

ಆದರೆ, ಆಕೆಯ ಆ ಪೋಸ್ಟಿಗೆ ಕಮೆಂಟ್‌ ಮಾಡಿದ ಕೆಲವರು, "ಅತಿಯಾಸೆಪಟ್ಟರೆ ಹೀಗೇ ಆಗುವುದು," "ಪ್ರಕೃತಿಗೆ ವಿರುದ್ಧವಾಗಿ ಹೋದರೆ ಇದೇ ಗತಿ," "ಅನ್ನದ ಬೆಳೆ ಬಿಟ್ಟು ದುಡ್ಡಿನ ಬೆಳೆ ಹಿಂದೆ ಬಿದ್ದರೆ ಇನ್ನೇನಾಗುತ್ತೆ..." ಇತ್ಯಾದಿ ಕುಹಕವಾಡಿದ್ದರು. ಮತ್ತೆ ಕೆಲವರು ಆಕೆಯ ನೋವನ್ನು ಅಪಹಾಸ್ಯ ಮಾಡಿದ್ದರು. ಇಂತಹ ಕುಹಕ ಮತ್ತು ಅಪಹಾಸ್ಯ ಮಾಡಿದವರು ಕೂಡ ರೈತಾಪಿ ಹಿನ್ನೆಲೆಯವರೇ. ಆದರೆ, ಅವರಿಗೆ ನಮ್ಮ ಊರ್ಬದಿಯ ಬದುಕು ಗೊತ್ತಿರಲಿಲ್ಲ.

ಬಯಲುಸೀಮೆಯಂತೆ ಅಡಿಕೆ ಬೆಳೆ ಎಂಬುದು ಕೇವಲ ಶ್ರೀಮಂತರ ಬೆಳೆ; ಭತ್ತ, ರಾಗಿ, ಜೋಳದಂತಹ ಅನ್ನದ ಬೆಳೆ ಬಿಟ್ಟು ಹಣದ ಬೆಳೆಯಾದ ಅಡಿಕೆಯ ಹಿಂದೆ ಬಿದ್ದಿರುವುದು ಹಣದಾಹ; ಅಂತಹ ದಾರಿ ಪ್ರಕೃತಿಗೆ ವಿರುದ್ಧ ಎಂಬಂತಹ ಧೋರಣೆ ಈ ಕುಹಕಕ್ಕೆ ಕಾರಣ.

AV Eye Hospital ad

ಮಲೆನಾಡಿನ ಬದುಕನ್ನು ಹತ್ತಿರದಿಂದ ಬಲ್ಲವರಿಗೆ ಅಡಿಕೆ ಮತ್ತು ಅಲ್ಲಿನ ಜನಜೀವನದ ಅವಿನಾಭಾವ ನಂಟು ಗೊತ್ತಿದೆ. ಆದರೆ, ಮಲೆನಾಡನ್ನು ದೂರದಿಂದ ನೋಡುವವರಿಗೆ ಆ ಬಗ್ಗೆ ಬೇರೆಯದೇ ಕಲ್ಪನೆಗಳಿವೆ. "ಅಡಿಕೆ ಎಂಬುದು ಶ್ರೀಮಂತರ ಬೆಳೆ, ಹಣದ ಬೆಳೆ; ಭತ್ತ, ರಾಗಿ, ಜೋಳದ ಬದಲು ಶ್ರೀಮಂತ ಜಮೀನ್ದಾರರು ಹಣದ ಬೆಳೆಯ ಹಿಂದೆ ಬಿದ್ದು ಅಡಿಕೆ ಬೆಳೆಯುತ್ತಿದ್ದಾರೆ; ಇದರಿಂದ ಜನರಿಗೆ ಯಾವ ಪ್ರಯೋಜನ?" ಎಂಬುದು, ಮಲೆನಾಡಿನ ಅಡಿಕೆಯ ಬಗ್ಗೆ ಕನಿಷ್ಠ ಮಾಹಿತಿಯೂ ಇಲ್ಲದವರ ಅಭಿಪ್ರಾಯ. ಅಂತಹದ್ದೇ ಮನಸ್ಥಿತಿಯಲ್ಲಿ ವಾದ ಮಂಡಿಸುವವರು ಬಹಳಷ್ಟು ಮಂದಿ ಇದ್ದಾರೆ.

ಆದರೆ, ಅಂತಹ ಮಾತುಗಳು ಬಯಲುಸೀಮೆಯ ಅಡಿಕೆಗೆ ಅನ್ವಯವಾಗಬಹುದಾದರೂ, ಮಲೆನಾಡಿನ ವಾಸ್ತವ ಬೇರೆಯೇ. ಕನಿಷ್ಠ ಐದು ದಶಕಗಳಿಂದ ಅಡಿಕೆ ಎಂಬುದು ಮಲೆನಾಡಿನ ಎಲ್ಲರ ಬದುಕನ್ನು ಪ್ರಭಾವಿಸಿದೆ, ಬದಲಿಸಿದೆ. ಅದಕ್ಕೂ ಹಿಂದೆ ಅದು ಮೇಲ್ಜಾತಿ, ಮೇಲ್ವರ್ಗದ ಬೆಳೆಯಷ್ಟೇ ಆಗಿದ್ದಿದು ನಿಜ. ಆಗ ಮಲೆನಾಡಿನಲ್ಲಿ ತೋಟದ ಮಾಲೀಕ ಮತ್ತು ತೋಟದ ಆಳು ಎಂಬ ಎರಡೇ ವರ್ಗ ಇದ್ದುದೂ ನಿಜ. ಆದರೆ, ಸರಿಸುಮಾರು 1970ರ ದಶಕದಿಂದೀಚೆಗೆ ಪರಿಸ್ಥಿತಿ ಬದಲಾಗಿದೆ. ಆ ಬದಲಾವಣೆಗೆ ನಾನೇ ಸಾಕ್ಷಿಯಾಗಿದ್ದೇನೆ.

ಆಗ ನಾನಿನ್ನೂ ಹೈಸ್ಕೂಲಿನಲ್ಲಿದ್ದೆ. ಬಹುಶಃ ಎಂಟನೇ ತರಗತಿಯಲ್ಲಿ ಇರಬೇಕು. ಇನ್ನೂ ಪ್ಯಾಂಟ್‌ ಕಂಡಿರಲಿಲ್ಲ. ನಿಕ್ಕರ್‌ನಲ್ಲಿಯೇ ಶಾಲೆಗೆ ಹೋಗುತ್ತಿದ್ದ ದಿನಗಳವು. ಹಳ್ಳಿಯ ಶಾಲೆಯಾದ್ದರಿಂದ ತೀರಾ ಎತ್ತರದ, ದೊಡ್ಡ ಹುಡುಗರು ಒಬ್ಬಿಬ್ಬರನ್ನು ಬಿಟ್ಟು ಉಳಿದವರಿಗೆಲ್ಲ ನಿಕ್ಕರ್‌ ದೈನಂದಿನ ಉಡುಗೆಯಾಗಿತ್ತು.

ದೀಪಾವಳಿಯ ಬಳಿಕ ಕೊಯ್ಲು ಮಾಡಿ ಭತ್ತ ಮಾರುವವರೆಗೆ ರೈತಾಪಿ ಜನರ ಕೈ ಬರಿದಾಗಿರುತ್ತದೆ. ಹಾಗಾಗಿಯೇ ಅದನ್ನು 'ತುದಿಗಾಲ' ಎನ್ನುತ್ತಾರೆ. 1988-89ರ ಅಂತಹ ಒಂದು ತುದಿಗಾಲದಲ್ಲಿ, ಆಗ ಇನ್ನೂ ಬರೀ ಅನ್ನದ ಬೆಳೆ ಬೆಳೆಯುವ ಸಣ್ಣ ರೈತನಾದ ಅಪ್ಪನ ಕೈಯಲ್ಲೂ ಕಾಸಿರಲಿಲ್ಲ. ಆದರೆ, ನನ್ನ ಶಾಲೆಯ ಯೂನಿಫಾರಂನ ಎರಡು ನಿಕ್ಕರ್‌ನಲ್ಲಿ ಒಂದು ಹರಿದಿತ್ತು. ಶಾಲೆಯ ಮರದ ಬೆಂಚಿನ ಮೇಲೆ ಕೂತು ಕುಂಡಿ ಮೇಲೇ ಚಡ್ಡಿ ಹರಿಯುವುದು ಸಾಮಾನ್ಯವಾಗಿತ್ತು. ಆದರೆ, ಆ ಸಾರಿ ಹೊಸ ಚಡ್ಡಿ ಹೊಲಿಸಲು ಅಪ್ಪನ ಬಳಿ ಕಾಸಿರಲಿಲ್ಲ. ಎಲ್ಲವೂ ಸಣ್ಣಪುಟ್ಟ ರೈತಾಪಿ, ಕೂಲಿ ಕುಟುಂಬಗಳೇ ಇರುವ ಊರು, ಅಕ್ಕಪಕ್ಕದ ಊರಲ್ಲಿ ಅಪ್ಪನ ವಿಶ್ವಾಸಿಗಳ ಕೈ ಕೂಡ ಖಾಲಿಯಾಗಿದ್ದ ದಿನಗಳವು. ಹಾಗಾಗಿ, ಸುಮಾರು ಒಂದು ತಿಂಗಳ ಕಾಲ ಒಂದೇ ಚಡ್ಡಿಯನ್ನೇ ಎರಡು-ಮೂರು ದಿನಕ್ಕೊಮ್ಮೆ, ಶಾಲೆ ಮುಗಿದು ಮನೆಗೆ ಹೋದ ಮೇಲೆ ಸಂಜೆ ಒಗೆದು (ಬಟ್ಟೆ ಸೆಳೆದು), ಕಟ್ಟಿಗೆ ಒಲೆಯ ಬೆಂಕಿಯಲ್ಲಿ ಬಿಸಿ ಮಾಡಿ ಒಣಗಿಸಿಕೊಂಡು, ಮಾರನೇ ದಿನ ಮತ್ತೆ ಅದನ್ನೇ ತೊಟ್ಟು ಶಾಲೆಗೆ ಹೋಗಿಬರುತ್ತಿದ್ದೆ. ಐದು ಕಿಲೋಮೀಟರ್ ದೂರದ ಶಾಲೆಗೆ ಧೂಳು ಮಣ್ಣಿನ ರಸ್ತೆಯಲ್ಲಿ ಹೋಗಿ ಬರುತ್ತಿದುದರಿಂದ ಎಷ್ಟೇ ಜತನ ಮಾಡಿದರೂ ಒಂದೇ ದಿನದಲ್ಲಿ ನೀಲಿ ನಿಕ್ಕರ್‌ ಕೆಂಬಣ್ಣಕ್ಕೆ ತಿರುಗಿರುತ್ತಿತ್ತು! ಆಮೇಲೆ, ಇರುವುದರಲ್ಲೇ ಒಂದು ತಿಂಗಳು ಮುಂಚಿತವಾಗಿ ಕೊಯ್ಲಿಗೆ ಬರುವ ಮಕ್ಕಿ ಗದ್ದೆಯ ಜಡ್ಡುಭತ್ತದ ಕೊಯ್ಲು ಮಾಡಿದ ಅಪ್ಪನ ವಿಶ್ವಾಸದವರೊಬ್ಬರ ಬಳಿ ಕೈಗಡ ತಂದು, ಹೊಸ ನಿಕ್ಕರ್‌ ಹೊಲಿಸಿದ್ದರಿಂದ ಹಾಕಿದ ನಿಕ್ಕರನ್ನೇ ಹಾಕುವ ಮುಜುಗರದಿಂದ ಪಾರಾಗಿದ್ದೆ.

ಇದು ಬರೀ ಅನ್ನದ ಬೆಳೆ ಬೆಳೆಯುತ್ತಿದ್ದಾಗಿನ ನನ್ನ ಮನೆಯ ಪರಿಸ್ಥಿತಿಯಾಗಿತ್ತು. ಅದಾಗಿ ಮೂರ್ನಾಲ್ಕು ವರ್ಷದಲ್ಲೇ, ನಾನು ಪಿಯುಸಿಗೆ ಬರುವ ಹೊತ್ತಿಗೆ ನಮ್ಮ ಅರ್ಧ ಎಕರೆ ಅಡಿಕೆ ತೋಟದಲ್ಲಿ ಗೊನೆ ಬರಲು ತೊಡಗಿದ್ದವು. ಸಂಪಳ್ಳಿ, ಕೋಟೆಕೊಪ್ಪ, ಸಾಡಗಳಲೆ, ಕುಡಿಗೇರಿ, ಹೊಸಂತೆ, ತ್ಯಾಗರ್ತಿ ಸೇರಿದಂತೆ ಸುತ್ತಮುತ್ತಲ ನಾಲ್ಕಾರು ಊರುಗಳಲ್ಲಿ ನಮ್ಮದೇ ಆಗ ಮೊದಲ ತೋಟ. ನೀಚಡಿಯ ಬ್ರಾಹ್ಮಣರು, ಬಿಲಗುಂಜಿಯ ಲಿಂಗಾಯತರನ್ನು ಬಿಟ್ಟರೆ ನಮ್ಮಪ್ಪನೇ - ಬಹುತೇಕ - ಅಡಿಕೆ ನೆಟ್ಟ ಮೊದಲಿಗ. 

ಅಡಿಕೆ ಫಸಲು ಬರತೊಡಗಿದ ಮೇಲೆ ನಮ್ಮ ಮನೆಯ ಪರಿಸ್ಥಿತಿ ಬದಲಾಯಿತು. ಆರೇಳು ಎಕರೆ ಭತ್ತದ ಜಮೀನಿದ್ದೂ ತುದಿಗಾಲದಲ್ಲಿ ನೂರೈವತ್ತು-ಇನ್ನೂರು ರೂಪಾಯಿಯ ಒಂದು ನಿಕ್ಕರ್‌ ಹೊಲಿಸಲಾಗದೆ ಮಗನನ್ನು ಹರಿದ ನಿಕ್ಕರಿನಲ್ಲಿ ಕಳಿಸುವ ಅಸಹಾಯಕತೆಯಲ್ಲಿದ್ದ ಅಪ್ಪ, ಅರ್ಧ ಎಕರೆ ಅಡಿಕೆ ತೋಟದ ಫಸಲು ಕೈಸೇರತೊಡಗಿದ ಮೇಲೆ ಎರಡೇ ವರ್ಷದಲ್ಲಿ ಹಳೆಯ ಮನೆ ರಿಪೇರಿ ಮಾಡಿಸಿ, ಒಂದು ಮೊಪೆಡ್‌ ಕೊಂಡು, ಅನಿವಾರ್ಯ ಖರ್ಚು-ವೆಚ್ಚಕ್ಕೆ ಮತ್ತೊಬ್ಬರ ಮುಂದೆ ಕೈಗಡಕ್ಕೆ ಕೈಚಾಚದೆ ಇರುವ ಮಟ್ಟಿಗೆ ಸ್ವಾವಲಂಬಿಯಾದ. ಇದು ಅಡಿಕೆಯ ತಾಕತ್ತು.

ಈ ಲೇಖನ ಓದಿದ್ದೀರಾ?: ನಮ್ಮ ಅಡಿಕೆಗೆ ಅವಮಾನ | ಸರ್ಕಾರಗಳಿಗೆ ಚೆಲ್ಲಾಟ, ರೈತರಿಗೆ ಪ್ರಾಣಸಂಕಟ

ಆ ಬಳಿಕ, 1993-94ರ ಹೊತ್ತಿಗೆ ಅಡಿಕೆ ಬೆಲೆ ಐತಿಹಾಸಿಕ ಮಟ್ಟಕ್ಕೆ ತಲುಪಿದ ಬಳಿಕ ಮಲೆನಾಡಿನ ಸಣ್ಣಪುಟ್ಟ ರೈತರೂ ಇರುವ ತುಂಡು ಭೂಮಿಯಲ್ಲೇ ಅಡಿಕೆ ತೋಟ ಕಟ್ಟತೊಡಗಿದರು.

ಅಡಿಕೆ ತೋಟ ಕಟ್ಟುವುದು ಎಂದರೆ, ಕೇವಲ ಖರ್ಚು-ವೆಚ್ಚದ ವಿಷಯ ಮಾತ್ರವಲ್ಲ; ಮಲೆನಾಡಿನ ಸಣ್ಣ ರೈತಾಪಿ ಕುಟುಂಬಗಳ ಪಾಲಿಗೆ ಅದು ಅನ್ನದ ಪ್ರಶ್ನೆ ಕೂಡ. ಏಕೆಂದರೆ, ಇರುವ ಎರಡು ಎಕರೆಯಲ್ಲಿ ಒಂದು ಎಕರೆಗೆ ತೋಟ ಕಟ್ಟಿದರೆ, ತೋಟ ಫಸಲು ಬರುವವರೆಗೆ ಅಷ್ಟು ಜಾಗದ ಭತ್ತದ ಬೆಳೆಯ ನಷ್ಟ ಭರಿಸಬೇಕು. ಜೊತೆಗೆ, ಊಟದ ಭತ್ತದ ಕೊರತೆ ನಿಭಾಯಿಸಬೇಕು. ಅಲ್ಲದೆ, ಐದಾರು ವರ್ಷ ಕಾಲ, ಅಡಿಕೆ ಫಸಲು ಬರುವವರೆಗೆ ತೋಟ ನಿರ್ವಹಣೆಯ ಖರ್ಚು-ವೆಚ್ಚ ನಿಭಾಯಿಸಬೇಕು. ಹಾಗಾಗಿ, ಅದು ಎಲ್ಲರಿಗೂ ಸುಲಭದ ದಾರಿಯಲ್ಲ. ಅಷ್ಟಾಗಿಯೂ ಈಗ ಮಲೆನಾಡಿನಲ್ಲಿ ಬಹುತೇಕ ತಳವರ್ಗಗಳೂ ಸೇರಿದಂತೆ ಬಹುತೇಕ ಸಣ್ಣ-ಅತಿ ಸಣ್ಣ ರೈತರು ಕನಿಷ್ಠ ಅರ್ಧ ಎಕರೆಯಷ್ಟಾದರೂ ಅಡಿಕೆ ತೋಟ ಕಟ್ಟಿದ್ದಾರೆ. 

ಅಡಿಕೆಯ ಜೊತೆಗೆ ಶುಂಠಿ ಮತ್ತು ರಬ್ಬರ್‌ ಮಲೆನಾಡಿನ ತಳ ಸಮುದಾಯಗಳ ಸಣ್ಣ ರೈತರ ಬದುಕಿಗೆ ಆಸರೆಯಾಗಿವೆ. ಬರ, ಮಳೆ ವೈಪರೀತ್ಯಗಳ ಹೊರತಾಗಿಯೂ ಇಂದು ಮಲೆನಾಡಿನಲ್ಲಿ ರೈತಾಪಿ ವರ್ಗ ಮೂರು ಹೊತ್ತು ನೆಮ್ಮದಿಯ ಅನ್ನ ತಿನ್ನುತ್ತಿದ್ದರೆ ಅದಕ್ಕೆ ಕಾರಣ ಈ ಬೆಳೆಗಳೇ. ಇವತ್ತು ಮಲೆನಾಡಿನ ರೈತರ ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು, ಎಂಜಿನಿಯರಿಂಗ್‌, ಮೆಡಿಕಲ್‌, ಎಂಬಿಎಯಂತಹ ಕೋರ್ಸು ಕಲಿತು, ಉತ್ತಮ ಉದ್ಯೋಗ ಹಿಡಿದು ನಾಲ್ಕು ಕಾಸು ದುಡಿಯುತ್ತಿದ್ದಾರೆ ಎಂದರೆ, ಅದಕ್ಕೂ ಈ ಅಡಿಕೆ, ಶುಂಠಿಯಂತಹ ಬೆಳೆಗಳು ತಂದ ಮಾನವೇ ಕಾರಣ. ಅಡಿಕೆ ಬೆಳೆದವರು ಮಾತ್ರವಲ್ಲ; ಅಡಿಕೆ ಸುಲಿಯುವ, ಗೊನೆ ಕೊಯ್ಯುವ, ಕೊಳೆ ಔಷಧಿ ಹೊಡೆಯುವ ಕುಟುಂಬಗಳೂ ನಾಲ್ಕು ಕಾಸು ಕಂಡಿರುವುದು ಅಡಿಕೆ ಬೆಳೆ ಮತ್ತು ಬೆಲೆ ಹೆಚ್ಚಳದ ಬಳಿಕವೇ. ಇದು ವಾಸ್ತವ.

ಹೀಗೆ, ಒಂದು ಪ್ರದೇಶದ ಬದುಕನ್ನು ವಿಸ್ತರಿಸಿದ, ಎತ್ತರಿಸಿದ ಅಡಿಕೆಯೇ ಈಗ ಕುಸಿಯತೊಡಗಿದೆ. ಬಯಲುಸೀಮೆಯ ನೀರಾವರಿ ಪ್ರದೇಶಗಳ ವಾಣಿಜ್ಯೀಕರಣಗೊಂಡ ಅಡಿಕೆ ತೋಟಗಳ ಪೈಪೋಟಿಯ ನಡುವೆ, ಮಲೆನಾಡಿನ ಸಾಂಪ್ರದಾಯಿಕ ಅಡಿಕೆ ತನ್ನದೇ ವೈಶಿಷ್ಟ್ಯದ ಕಾರಣಕ್ಕೆ ಮಾರುಕಟ್ಟೆಯಲ್ಲಿ ಬೆಲೆಯನ್ನೂ ಉಳಿಸಿಕೊಂಡು ಬಂದಿತ್ತು. ಆದರೆ, ಇದೀಗ ಎಲೆಚುಕ್ಕೆ ರೋಗ ಎಂಬ ಮಹಾಮಾರಿಗೆ ಅಕ್ಷರಶಃ ಸರ್ವನಾಶದ ಹಾದಿ ಹಿಡಿದಿದೆ. ರೋಗದ ಅಧ್ಯಯನಕ್ಕೆ ಬಂದ ಕೊಯಿಕ್ಕೋಡ್‌ನ ಅಡಿಕೆ ಮತ್ತು ಸಾಂಬಾರು ಮಂಡಳಿ ಕೇಂದ್ರ ಕಚೇರಿಯ ವಿಜ್ಞಾನಿಗಳೇ, "ಈ ರೋಗಕ್ಕೆ ಔಷಧಿ ಇಲ್ಲ; ನಿಯಂತ್ರಣವೂ ಸಾಧ್ಯವಿಲ್ಲ. ಮಲೆನಾಡಿನ ರೈತರು ಬದುಕಿಗೆ ಪರ್ಯಾಯ ದಾರಿ ಕಂಡುಕೊಳ್ಳುವುದೊಂದೇ ಈಗ ಉಳಿದಿರುವ ದಾರಿ," ಎಂದು ಹೇಳಿಹೋಗಿದ್ದಾರೆ. 

ಈ ಸುದ್ದಿ ಓದಿದ್ದೀರಾ?: ಅಡಿಕೆ ಆತಂಕ | ಎಲೆಚುಕ್ಕೆ ರೋಗಕ್ಕೆ ತೋಟ ನಾಶ: ರೈತರ ಮೂಗಿಗೆ ಅನುದಾನದ ತುಪ್ಪ ಸವರಿತೇ ಸರ್ಕಾರ?

ಮಲೆನಾಡಿನ ಬದುಕು ಮಗ್ಗುಲು ಬದಲಾಯಿಸುವ ಸಂಕ್ರಮಣ ಘಟ್ಟ ಬಂದಂತಾಗಿದೆ. ಊರ್ಬದಿ ಎಲ್ಲರ ಮುಖದ ಮೇಲೆ ಚಿಂತೆಯ ಗೆರೆಗಳು ಮೂಡಿವೆ. ನಾಳೆಯ ದಿನಗಳು ಹೇಗೋ ಎಂತೋ ಎಂಬ ಚಿಂತೆ ಕಾಡತೊಡಗಿದೆ. ಕೊಪ್ಪ, ಶೃಂಗೇರಿ, ತೀರ್ಥಹಳ್ಳಿ, ಹೊಸನಗರ, ಸಾಗರ, ಸಿದ್ದಾಪುರ, ಶಿರಸಿಯಂತಹ ಭಾರೀ ಮಳೆಯಾಗುವ ಕಡೆಯಂತೂ, ಊರಿಗೆ ಊರೇ ಮಂಕುಬಡಿದ ಸ್ಥಿತಿಗೆ ತಲುಪಿವೆ.

ಅಡಿಕೆ ತೋಟ, ಸುಲಿಗೆ ಕಣ, ಬೇಯಿಸುವ ಅಂಗಳ, ಒಣಗಿಸುವ ಚಪ್ಪರಗಳಲ್ಲಿ ಸಂಭ್ರಮ, ಸಡಗರದ ಹಂಗಾಮಿನ ಬದಲು, ಆತಂಕದ ನಿಟ್ಟುಸಿರು ಕಣಿವೆ-ದಿಬ್ಬಗಳ ತಬ್ಬುತ್ತಿದೆ. ಮಲೆಸೀಮೆಯ ಬದುಕ ಬಲ್ಲವರು ಮಾತ್ರ ಈ ದುಃಖ, ಆತಂಕ ಅರಿಯಬಲ್ಲರು. ದೂರದಲ್ಲಿ ನಿಂತು ಮಾತು ಕುಟ್ಟುವವರಿಗೆ ಈ ನಿಟ್ಟುಸಿರು ಅರ್ಥವಾಗದು.

ಮುಖ್ಯ ಚಿತ್ರ ಕೃಪೆ: ಸೂಸನ್
ನಿಮಗೆ ಏನು ಅನ್ನಿಸ್ತು?
4 ವೋಟ್
eedina app