ಹೊಸಿಲ ಒಳಗೆ-ಹೊರಗೆ | ಗರ್ಭಕೋಶ ಇಲ್ಲದಿದ್ದರೆ ಹೆಣ್ಣು ಅನಿಸಿಕೊಳ್ಳುವುದು ಸಾಧ್ಯ ಇಲ್ಲವೇ?

ಹೆಣ್ಣು ಮದುವೆಯಾಗಿ ಗಂಡನ ಮನೆಗೆ ಹೋಗುವುದು ರೂಢಿ. ಗಂಡ, ಹೆಂಡತಿ ಮನೆಗೆ ಹೋಗಿ ವಾಸಿಸುವುದನ್ನು ಕಲ್ಪಿಸಿಕೊಳ್ಳುವುದಕ್ಕೆ ಕಷ್ಟವೆನಿಸುತ್ತದೆ. ಆದರೆ, ಕೆಲವು ಸಮುದಾಯಗಳಲ್ಲಿ ಗಂಡು, ಹೆಣ್ಣಿನ ಮನೆಗೆ ಹೋಗುವ ಪದ್ಧತಿ ಇದೆ ಎಂಬ ವಿವರಣೆ ನೀಡುತ್ತಾ, ಇವೆಲ್ಲ ನಾವೇ ಬೆಳೆಸಿಕೊಂಡ ರೀತಿನೀತಿಗಳು ಅಂತ ಗುರುತಿಸಿಕೊಳ್ಳಲು ಸಹಕರಿಸುತ್ತೇವೆ

ತರಬೇತಿ ಪ್ರಕ್ರಿಯೆಯಲ್ಲಿ ಲಿಂಗತ್ವ ಪರಿಕಲ್ಪನೆಯನ್ನು ಅರ್ಥ ಮಾಡಿಸುವ ವಿಭಿನ್ನ ಪ್ರಕ್ರಿಯೆಗಳು ನಡೆಯುತ್ತವೆ. ಒಂದು ರೀತಿ ಹೀಗೆ ಇರುತ್ತಿತ್ತು. ಸಹಭಾಗಿಗಳನ್ನು ಇಬ್ಬಿಬ್ಬರ ಒಂದು ತಂಡವಾಗಿ ಮಾಡುತ್ತೇವೆ. ಈ ಜೋಡಿ ಹೆಣ್ಣು ಮತ್ತು ಗಂಡಿನ ನಡುವಿನ ವ್ಯತ್ಯಾಸಗಳನ್ನು ಅಭಿನಯದ ಮೂಲಕ ತೋರಿಸಿಕೊಡಬೇಕು. ಮಾತಾಡಬಹುದು, ಆದರೆ ಯಾರೊಬ್ಬರೂ ಅವರ ಲಿಂಗ ಯಾವುದು ಅಂತ ನೇರವಾಗಿ ತಿಳಿಯುವಂತಹ ಪದಗಳನ್ನು ಬಳಸಬಾರದು. ಅವರ ಅಭಿನಯದ ಮೂಲಕವೇ ಹೆಣ್ಣು ಗಂಡು ಯಾರು ಅನ್ನುವುದನ್ನು ಇತರರು ಗುರುತಿಸಿ ಹೇಳಬೇಕು.

ಸಹಭಾಗಿಗಳಿಗೆ ಮೊದಮೊದಲಿಗೆ ಸ್ವಲ್ಪ ನಾಚಿಕೆ, ಸಂಕೋಚ ಆಗುತ್ತದೆ, ನಿಧಾನವಾಗಿ ಅಭಿನಯ ಶುರುಮಾಡುತ್ತಾರೆ. ಅತಿ ಹೆಚ್ಚಾಗಿ ಕಂಡು ಬರುವ ದೃಶ್ಯ, ಮನೆಯಲ್ಲಿ ಹೆಣ್ಣು ಮನೆಕೆಲಸ ಮಾಡುವುದು, ಗಂಡು ಅಧಿಕಾರ ಚಲಾಯಿಸುವುದು, ಬೀದಿಯಲ್ಲಿ ಹುಡುಗರು ಹುಡುಗಿಯರನ್ನು ಚುಡಾಯಿಸುವುದು, ಗಂಡ ಕುಡಿದು ಬಂದು ಹೆಂಡತಿಗೆ ಹೊಡೆಯುವುದು... ಇತ್ಯಾದಿ. ಕೆಲವು ಜೋಡಿಗಳು ಬಹಳ ಸಮಾನ ನೆಲೆಯ ಚಿತ್ರಣ ನೀಡಲು ಪ್ರಯತ್ನ ಮಾಡುತ್ತಾರೆ.

ಅಭಿನಯದಲ್ಲಿ ತೋರಿಸಿದ ಅಂಶಗಳನ್ನು ಬೋರ್ಡಿನ ಮೇಲೆ ಪಟ್ಟಿ ಮಾಡುತ್ತೇವೆ. ಹೆಣ್ಣಿನ ಗುಣ, ವರ್ತನೆಗಳು ಮತ್ತು ಗಂಡಿನ ಗುಣ, ವರ್ತನೆಗಳು. ಸಹಭಾಗಿಗಳು ಹೇಳುತ್ತಾ-ಹೇಳುತ್ತಾ ಬೋರ್ಡ್ ತುಂಬಿಕೊಳ್ಳುತ್ತದೆ. ಆ ಬಳಿಕ, “ಇಲ್ಲಿ ಹೇಳಿರುವ ವ್ಯತ್ಯಾಸಗಳಲ್ಲಿ, ಯಾವ ವ್ಯತ್ಯಾಸಗಳನ್ನು ನಾವು ತೊಡೆದು ಹಾಕಬಹುದು, ಯಾವುದನ್ನು ತೊಡೆದು ಹಾಕಲು ಸಾಧ್ಯವಿಲ್ಲ?," ಎಂಬ ಪ್ರಶ್ನೆ ಮುಂದಿಡುತ್ತೇವೆ. ಈ ಸಂದರ್ಭದಲ್ಲಿ ಬಹಳ ಚರ್ಚೆಗಳು ನಡೆಯುತ್ತವೆ. ಬದಲಾವಣೆ ಸುಲಭವಲ್ಲದೇ ಹೋದರೂ ಕೆಲವು ವಿಷಯಗಳನ್ನು ತೊಡೆದು ಹಾಕಲು ಸಾಧ್ಯ ಅಂತ ಸುಲಭವಾಗಿ ಒಪ್ಪಿಕೊಳ್ಳುತ್ತಾರೆ.

ಉದಾಹರಣೆಗೆ, ಶಿಕ್ಷಣದ ಅವಕಾಶದಲ್ಲಿ, ಮನೆ ಕೆಲಸದ ಹಂಚಿಕೆಯಲ್ಲಿ, ಹೊರಗಡೆ ಮಾಡುವ ಕೆಲಸಗಳಲ್ಲಿ, ಆಟ ಆಡುವಲ್ಲಿ ಇರುವ ವ್ಯತ್ಯಾಸ ಅಥವಾ ತಾರತಮ್ಯವನ್ನು ಕ್ರಮೇಣ ಹೋಗಲಾಡಿಸಬಹುದು. ಕೆಲವು ಅಂಶಗಳನ್ನು ಒಪ್ಪಿಕೊಳ್ಳಬೇಕಾದರೆ ಸ್ವಲ್ಪ ಮಾತುಕತೆ ಬೇಕಾಗುತ್ತದೆ. ಅಂದರೆ, ಉಡುಪಿನ ವ್ಯತ್ಯಾಸದ ಬಗ್ಗೆ ಮಾತಾಡುವಾಗ, “ಹುಡುಗಿಯರು ಪ್ಯಾಂಟ್ ಹಾಕುತ್ತಾರೆ, ಆದರೆ ಹುಡುಗರು ಸೀರೆ ಉಡುವುದಿಲ್ಲವಲ್ಲ,ʼʼ ಅಂತ ಅನುಮಾನ ಎತ್ತುತ್ತಾರೆ. “ಉಡುವುದು ರೂಢಿ ಇಲ್ಲ, ಅಂತಹ ರೂಢಿ ಬಂದರೆ, ಉಡಬಹುದಲ್ಲವೇ ಅಥವಾ ನಾಟಕಗಳಲ್ಲಿ ಗಂಡಸರು ಸೀರೆ ಉಡುತ್ತಾರಲ್ಲ, ಉಡುವುದು ಸಾಧ್ಯ ತಾನೇ?," ಎಂಬ ವಿವರಣೆ ಮುಂದಿಡುತ್ತೇವೆ.

Image
ಸಾಂದರ್ಭಿಕ ಚಿತ್ರ

“ಅಲಂಕಾರ ಮಾಡಿಕೊಳ್ಳುವುದು ಹುಡುಗಿಯರೇ, ಹುಡುಗರಿಗೆ ಡ್ರೆಸ್ ಮಾಡಲು ಹೊತ್ತೇ ಬೇಡ,” ಎಂದು ಸಹಭಾಗಿಗಳು ವಾದಕ್ಕೆ ಇಳಿಯುವುದಿದೆ. “ಇರಬಹುದು, ಆದರೆ ಅಲಂಕಾರ ಮಾಡಿಕೊಳ್ಳಲು ಆಸಕ್ತಿಯೇ ಇಲ್ಲದ ಹುಡುಗಿಯರೂ ಇದ್ದಾರೆ. ಅಲಂಕಾರಕ್ಕಾಗಿ ಬಹಳಷ್ಟು ಖರ್ಚು ಮಾಡುವ ಹುಡುಗರೂ ಇದ್ದಾರೆ,” ಅಂದಾಗ ಕೇಳಿಸಿಕೊಳ್ಳುತ್ತಾರೆ. ದೊಡ್ಡ ಕಷ್ಟ ಆಗುವುದು, ‘ತಾಳಿ’ ವಿಷಯದಲ್ಲಿ. ಮದುವೆ ಗುರುತಾಗಿ ಹೆಣ್ಣಿಗೆ ತಾಳಿ ಇರುತ್ತದೆ, ಗಂಡಿಗೆ ಸಾಧಾರಣವಾಗಿ ಏನೂ ಇರುವುದಿಲ್ಲ. “ಈ ವ್ಯತ್ಯಾಸವನ್ನು ತೊಡೆದು ಹಾಕಬಹುದೇ,” ಅಂತ ಕೇಳಿದಾಗ, ಹೆಚ್ಚಿನ ಗುಂಪುಗಳಲ್ಲಿ ತಕ್ಷಣಕ್ಕೆ “ಅದು ಸಾಧ್ಯವೇ ಇಲ್ಲ,ʼʼ ಎಂಬ ಉತ್ತರ ಬರುತ್ತದೆ. ತಾಳಿಯನ್ನೇ ತೆಗೆದು ಹಾಕಲು ಹೇಳಿದೆವೇನೋ, ಎಂಬಷ್ಟು ಗಾಬರಿ, ಆತಂಕ ವ್ಯಕ್ತವಾಗುತ್ತದೆ. ಬಹಳ ಸಮಾಧಾನದಿಂದ ತಾಳಿಯ ಪಾವಿತ್ರ್ಯಕ್ಕೆ ಧಕ್ಕೆ ಬರದ ಹಾಗೆ, ಅದು ಒಂದು ರೂಢಿ ಮತ್ತು ನಂಬಿಕೆ, ಎಂಬುದನ್ನು ಅರ್ಥ ಮಾಡಿಸಬೇಕಾಗುತ್ತದೆ.

ಮದುವೆ ಅನ್ನುವ ಕ್ರಿಯೆಯನ್ನು ತಾಳಿ ಕಟ್ಟುವ ಆಚರಣೆ ಇಲ್ಲದೇ ನಡೆಸುವ ಸಮುದಾಯಗಳಿವೆ, ಕುವೆಂಪು ಅವರ ಮಂತ್ರ ಮಾಂಗಲ್ಯದಲ್ಲಿ ತಾಳಿ ಕಡ್ಡಾಯವಲ್ಲ. ತಾಳಿ ಇಲ್ಲದಿದ್ದರೂ ಹೆಂಡತಿ ಗಂಡನ ಸಂಬಂಧ ಇರುವುದು ಸಾಧ್ಯ ತಾನೇ – ಎಂದು ಹೇಳುತ್ತಾ ಅದು ಮನುಷ್ಯರು ರೂಪಿಸಿದ ಕ್ರಿಯೆ, ಬೇಕೆನಿಸಿದರೆ ಇಟ್ಟುಕೊಳ್ಳಬಹುದು, ಬೇಡವೆನಿಸಿದರೆ ಬದಲಾಯಿಸಬಹುದು – ಎಂದು ಎಲ್ಲಿಯೂ ಅವರ ನಂಬಿಕೆಗೆ ಧಕ್ಕೆ ಬಾರದ ಹಾಗೆ ಅರ್ಥ ಮಾಡಿಸಬೇಕಾಗುತ್ತದೆ.

ಈ ಲೇಖನ ಓದಿದ್ದೀರಾ? ಹೊಸಿಲ ಒಳಗೆ-ಹೊರಗೆ | ಹೇಳಿ, ಈ ಕತೆಯಲ್ಲಿ ಹೆಣ್ಣು ಕಪ್ಪೆ ಯಾವುದು ಮತ್ತು ಗಂಡು ಕಪ್ಪೆ ಯಾವುದು?

ಹೀಗೆಯೇ, ಹೆಣ್ಣು ಮದುವೆಯಾಗಿ ಗಂಡನ ಮನೆಗೆ ಹೋಗುವುದು ಒಂದು ರೂಢಿ ಆಗಿದೆ. ಗಂಡ ಹೆಂಡತಿ ಮನೆಗೆ ಹೋಗಿ ವಾಸಿಸುವುದನ್ನು ನಮಗೆ ಕಲ್ಪಿಸಿಕೊಳ್ಳುವುದಕ್ಕೆ ಕಷ್ಟವೆನಿಸುತ್ತದೆ. ಆದರೆ, ಕೆಲವು ಸಮುದಾಯಗಳಲ್ಲಿ ಗಂಡು, ಹೆಣ್ಣಿನ ಮನೆಗೆ ಹೋಗುವ ಪದ್ಧತಿ ಇದೆ ಎಂಬ ವಿವರಣೆ ನೀಡುತ್ತಾ, ಇವೆಲ್ಲ ನಾವೇ ಬೆಳೆಸಿಕೊಂಡ ರೀತಿನೀತಿಗಳು ಅಂತ ಗುರುತಿಸಿಕೊಳ್ಳಲು ಸಹಕರಿಸುತ್ತೇವೆ. ‘ʼಗಂಡಿಗೆ ಹೆಣ್ಣಿಗಿಂತ ಹೆಚ್ಚು ಶಕ್ತಿ ಇರುವುದು,ʼ’ ಎಂಬ ನಂಬಿಕೆಯನ್ನು ಮರುಪರಿಶೀಲಿಸುವುದಕ್ಕೆ ಬಹಳ ಕಷ್ಟವಾಗುತ್ತದೆ.

ಗಂಡಸಿನ ದೇಹ, ಬಲ ಎದ್ದು ಕಾಣುವ ಒಂದು ವಿಷಯ. ಇದನ್ನು ಸ್ವಲ್ಪ ಬೇರೆ ರೀತಿಯಲ್ಲಿ ನೋಡಬೇಕಾಗುತ್ತದೆ. ಮೊತ್ತ ಮೊದಲಾಗಿ ನಮಗೆ ಶಕ್ತಿ ಎಂದರೆ ಭುಜ ಬಲ, ದೇಹ ಬಲ ಮಾತ್ರವೇ ಮನಸ್ಸಿಗೆ ಬರುತ್ತದೆ. ದೈಹಿಕ ಬಲ ಎಂದು ತೆಗೆದುಕೊಂಡರೂ, ಅದರಲ್ಲಿ ಒಂದು ವಿಚಾರವಿದೆ. ಒಬ್ಬ ದೈಹಿಕ ದುಡಿಮೆಯಲ್ಲಿ ನಿರತಳಾದ ಮಹಿಳೆ ಭಾರವನ್ನು ಎತ್ತಿ ತಲೆಮೇಲೆ ಇಟ್ಟುಕೊಂಡು ನಡೆವಷ್ಟು ಸುಲಭವಾಗಿ ನಡುಬಗ್ಗಿಸಿ ಕೆಲಸ ಮಾಡದ ಗಂಡಸು ಮಾಡಲಾರ. ಅಂದರೆ, ನಿರಂತರ ಅಭ್ಯಾಸ ಮಾಡುವ ಒಂದು ಅಂಶವೂ ಇಲ್ಲಿ ಇದೆ. ಎಷ್ಟೋ ಗಂಡು ಮಕ್ಕಳು ದೈಹಿಕವಾಗಿ ಬಹಳ ದುರ್ಬಲವಾಗಿ ಇರುತ್ತಾರೆ.

ಜೊತೆಗೆ ಇನ್ನೊಂದು ವಿಚಾರ ನಾವು ಗಮನಿಸಬೇಕು. ಹೆಣ್ಣು ಗಂಡು ಬೇರೆ-ಬೇರೆ ಜೀವಗಳು, ಅವರಲ್ಲಿ ವ್ಯತ್ಯಾಸ ಇದೆ. ದೇಹ ರಚನೆಯಲ್ಲೂ ವ್ಯತ್ಯಾಸವಿದೆ. ಅವರ ಶಕ್ತಿಯ ಸ್ವರೂಪಗಳೂ ಬೇರೆ ಬೇರೆಯಾಗಿದೆ. ಮಹಿಳೆಯರು ದಿನವಿಡೀ ಹೊಲಗದ್ದೆಗಳಲ್ಲಿ ನಡುಬಗ್ಗಿಸಿ ಕೆಲಸ ಮಾಡುವುದು ನೋಡುತ್ತೇವೆ. ಅದಕ್ಕೂ ಮಹಾಶಕ್ತಿ ಬೇಕು. ಗಂಡಸರು ಉಳುವ ಕೆಲಸ ದಿನದಲ್ಲಿ ಒಂದು ಹೊತ್ತಷ್ಟೇ ಮಾಡುತ್ತಾರೆ. ಮಹಿಳೆಯರು ಹೆರುವಾಗ ಅನುಭವಿಸುವ ನೋವು, ಬಹಳ ದೊಡ್ಡ ನೋವು. ಅದನ್ನು ಸಹಿಸಿಕೊಳ್ಳುವ ಶಕ್ತಿ ಹೆಣ್ಣು ಮಕ್ಕಳಲ್ಲಿದೆ. –ಇಷ್ಟೆಲ್ಲ ವಿವರಣೆ ಜೊತೆಗೆ ಹೆಣ್ಣು, ಗಂಡಿನ ಶಕ್ತಿಯ ಬಗ್ಗೆ ಮಾತಾಡುವಾಗ, ಶಕ್ತಿಯ ನಿರೂಪಣೆಯನ್ನು ಬೇರೆ ನೆಲೆಯಿಂದ ನೋಡಬೇಕಾಗುತ್ತದೆ. ತೀರಾ ಮೇಲ್‌ಸ್ತರದಲ್ಲಿ ಅದನ್ನು ವಿವರಿಸುವುದಕ್ಕೆ ಆಗುವುದಿಲ್ಲ ಎಂದು ಸಹಭಾಗಿಗಳಿಗೆ ಅರ್ಥಮಾಡಿಸುತ್ತೇವೆ. 

ಕೊನೆಯಲ್ಲಿ ನೋಡುವುದು, ಹೆಣ್ಣು-ಗಂಡಿನ ನಡುವೆ, ತೊಡೆದು ಹಾಕಲು ಸಾಧ್ಯವೇ ಇಲ್ಲದ ವ್ಯತ್ಯಾಸಗಳು. ಗರ್ಭಕೋಶದ ಇರುವಿಕೆ, ಋತುಮತಿ ಆಗುವುದು, ಗಂಡಿನಲ್ಲಿ ಶಿಷ್ಣ, ಹೆಣ್ಣಿನಲ್ಲಿ ಯೋನಿ ಇರುವುದು, ಎದೆ ಹಾಲು ಕೊಡುವುದು, ಧ್ವನಿಯಲ್ಲಿ ಇರುವ ವ್ಯತ್ಯಾಸ, ದೇಹ ರಚನೆಯಲ್ಲಿ ಇರುವ ವ್ಯತ್ಯಾಸ – ಇತ್ಯಾದಿ. ಒಟ್ಟಿನಲ್ಲಿ ಹೆಣ್ಣು-ಗಂಡಿನ ನಡುವೆ, ಎರಡು ರೀತಿಯ ವ್ಯತ್ಯಾಸಗಳಿವೆ. ಒಂದು ದೈಹಿಕವಾದದ್ದು, ಪ್ರಕೃತಿದತ್ತವಾಗಿ ಇರುವುದು. ಮತ್ತೊಂದು, ಸಾಮಾಜಿಕವಾಗಿ ರೂಪುಗೊಂಡಿರುವಂತಹುದು. ದೈಹಿಕವಾಗಿ ಇರುವ ವ್ಯತ್ಯಾಸಗಳಿಗೆ ಲಿಂಗ ವ್ಯತ್ಯಾಸ ಎಂದೂ ಸಾಮಾಜಿಕವಾಗಿ ಆರೋಪಿಸಿರುವ ವ್ಯತ್ಯಾಸಕ್ಕೆ ಲಿಂಗತ್ವ ಎಂದೂ ಹೇಳುತ್ತೇವೆ. 

Image

ಬಹಳ ಕಾಲ ಇದೇ ಸ್ವರೂಪದಲ್ಲಿ ಲಿಂಗತ್ವದ ಪರಿಕಲ್ಪನೆಯನ್ನು ಅರ್ಥಮಾಡಿಸಲಾಗುತ್ತಿತ್ತು. ಆದರೆ, ಆಮೇಲೆ ಇದರ ಬಗ್ಗೆ ಅನೇಕ ಪ್ರಶ್ನೆಗಳು ಹುಟ್ಟತೊಡಗಿದವು. ಮುಖ್ಯವಾಗಿ, ಈ ವಿವರಣೆಯಲ್ಲಿ ಟ್ರಾನ್ಸ್‌ಜೆಂಡರ್ ಸಮುದಾಯದವರು ಎಲ್ಲಿ ಬರುತ್ತಾರೆ? ಹೆಣ್ಣು-ಗಂಡು ಅನ್ನುವುದು ಬರೇ ದೈಹಿಕ ರಚನೆ ಮೇಲೆ ನಿಂತಿರುವುದೇ? ಗರ್ಭಕೋಶ ಇಲ್ಲದೇ ಹೋದರೆ ಹೆಣ್ಣು ಅನಿಸಿಕೊಳ್ಳುವುದು ಸಾಧ್ಯ ಇಲ್ಲವೇ? ಈ ಪ್ರಶ್ನೆಗಳು ತರಬೇತಿದಾರರನ್ನೇ ಹೆಚ್ಚಿನ ಚಿಂತನೆಗೆ ಹಚ್ಚಿದವು.

ಈ ವಿವರಣೆಯಲ್ಲಿ ಟ್ರಾನ್ಸ್‌ಜೆಂಡರ್ ಸಮುದಾಯದವರು ಸಂಪೂರ್ಣವಾಗಿ ಹೊರಗೆ ಉಳಿದುಬಿಡುವುದು ಗಮನಕ್ಕೆ ಬಂತು. ಆಮೇಲಿನಿಂದ ಲಿಂಗತ್ವ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳುವ ಪ್ರಕ್ರಿಯೆಯನ್ನು ವಿಸ್ತರಿಸಿಕೊಂಡೆವು. ದೈಹಿಕ ರಚನೆಗಳಲ್ಲಿ ಅನೇಕ ವ್ಯತ್ಯಾಸಗಳು ಇವೆ. ಹೆಣ್ಣು-ಗಂಡು ಅನ್ನುವುದು ಅದಕ್ಕೆ ಮೀರಿದ ವಿಚಾರ. ಯಾವುದೇ ಭಾವವನ್ನು, ಯಾವುದೇ ಜೀವದೊಳಗೆ ಬಂಧಿಸಿಡುವುದು ಅಸಹಜ ಎಂಬ ಹೊಸ ನೋಟದೊಂದಿಗೆ ನೋಡಲು ಶುರುಮಾಡಿದೆವು.

ನಿಮಗೆ ಏನು ಅನ್ನಿಸ್ತು?
3 ವೋಟ್