ಕರುಣೆಯ ಕೃಷಿ | ಜಸಿಂತಾ ಕೆರಕೆಟ್ಟಾ ಕವಿತೆ 'ನದಿ, ಗುಡ್ಡ ಹಾಗೂ ಮಾರುಕಟ್ಟೆ'

Jacinta Kerketta Poem

ಊರಿನಲ್ಲಿ ಆ ದಿನ ರವಿವಾರ

ಪುಟ್ಟ ಮಕ್ಕಳ ಕೈ ಹಿಡಿದು

ಹೊರಟೆ ಮಾರುಕಟ್ಟೆಗೆ.

ಒಣಗಿನಿಂತ ಮರಗಳ ನಡುವೆ ನೋಡಿ

ಒಂದು ಸಣಕಲ ಕಾಲುಹಾದಿ;

ನಾನೆಂದೆ ಪುಟ್ಟ ಮಕ್ಕಳಿಗೆ,

ನೋಡಿ, ಇದುವೇ ಹಿಂದೊಮ್ಮೆ ಊರ ನದಿಯಾಗಿತ್ತು.

ನೋಡಿ ಮುಂದಿದೆ ನೆಲದಲ್ಲಿ ದೊಡ್ಡದೊಂದು ಕೊರಕಲು

ಇದರಲ್ಲಿಯೇ ಮುಳುಗಿಹೋಗಿವೆ ಎಲ್ಲ ಗುಡ್ಡಗಳು...

ಇದ್ದಕ್ಕಿದ್ದಂತೆ ಅವರು ಅಪ್ಪಿಕೊಂಡರು ನನ್ನನ್ನು

ಎದುರಿಗೆ ದೂರದೂರದವರೆಗೆ ಹಬ್ಬಿತ್ತು ಭಯಾನಕ ಸ್ಮಶಾನ.

ನಾನೆಂದೆ, ನೋಡುತ್ತಿದ್ದೀರಿ ತಾನೇ ಇದನ್ನು?

ಇವುಗಳೇ ಹಿಂದೊಮ್ಮೆ ನಿಮ್ಮ ಪೂರ್ವಜರ ಕಣಜಗಳಾಗಿದ್ದವು.

 

ಪುಟ್ಟ ಮಕ್ಕಳು ಓಡಿದರು:

ನಾವು ಮುಟ್ಟಿದ್ದೆವು ಮಾರುಕಟ್ಟೆಯನ್ನು.

 

ಏನೇನು ಬೇಕು? ಕೇಳತೊಡಗಿದ ಅಂಗಡಿಯವ

ಅಣ್ಣಾ, ಕೊಂಚ ಮಳೆ, ಕೊಂಚ ಒದ್ದೆ ಮಣ್ಣು,

ಒಂದು ಬಾಟಲ್ ನದಿ, ಒಂದು ಡಬ್ಬಿ ತುಂಬ ಗುಡ್ಡ

ಆ ಗೋಡೆ ಮೇಲೆ ನೇತುಹಾಕಿರುವ ಒಂದು ನಿಸರ್ಗವನ್ನೂ ಕೊಡಣ್ಣ

ಮತ್ತೆ, ಈ ಮಳೆ ಇಷ್ಟು ದುಬಾರಿ ಯಾಕಣ್ಣೋ?

 

ಅಂಗಡಿಯಾತ ಹೇಳಿದ: ಈ ತೇವ ಇಲ್ಲಿಯದಲ್ಲ

ಇನ್ನೊಂದು ಗ್ರಹದಿಂದ ತಂದದ್ದು,

ಆರ್ಥಿಕ ಸಂಕಷ್ಟವಿದೆ, ಬೆಲೆಯೇರಿಕೆ ಗಗನ ಮುಟ್ಟಿದೆ

 

ದುಡ್ಡಿಗಾಗಿ ಸೀರೆಯಂಚು ತಡಕಾಡಿದಾಗ ಹೌಹಾರಿದೆ:

ಸೆರಗಿನ ಗಂಟಿನ ರೂಪಾಯಿಯ ಜಾಗದಲ್ಲಿ

ಇಡೀ ಅಸ್ತಿತ್ವ ಮಡಚಿಕೊಂಡು ಬಿದ್ದಿತ್ತು.

* * * * *

“Every beautiful poem is an act of resistance” - Mahmoud Darwish

Image
Jacinta Kerketta 2

ಭಾರತದ ಸಮಕಾಲೀನ ಕವಿಗಳಲ್ಲಿ ನಾವೆಲ್ಲ ಓದಲೇಬೇಕಾದಂತಹ ಕವಿಯೆಂದರೆ, ಜಸಿಂತಾ ಕೆರಕೆಟ್ಟಾ. ಝಾರ್ಖಂಡಿನ ಪಶ್ಚಿಮ ಸಿಂಗಭೂಮ್ ಜಿಲ್ಲೆಯ ಒರಾವೊಂ ಆದಿವಾಸಿ ಸಮುದಾಯದಲ್ಲಿ 1983ರಲ್ಲಿ ಹುಟ್ಟಿದ ಜಸಿಂತಾ, ಸ್ವತಂತ್ರ ಪತ್ರಕರ್ತೆಯಾಗಿ ಕೆಲಸ ಮಾಡುತ್ತಾರೆ.

ಹಿಂದಿಯಲ್ಲಿ ಬರೆಯುವ ಅವರು, ತಮ್ಮ ಬರಹಗಳಲ್ಲಿ ಆದಿವಾಸಿ ಸಮುದಾಯಗಳ ದಾರುಣ ಬದುಕು ಮತ್ತು ಅನ್ಯಾಯ-ದಬ್ಬಾಳಿಕೆಗಳ ವಿರುದ್ಧ ಆ ಸಮುದಾಯಗಳು ನಡೆಸುತ್ತಿರುವ ಹೋರಾಟಗಳನ್ನು ಎಲ್ಲರೆದುರು ಪ್ರಸ್ತುತಪಡಿಸುತ್ತಾರೆ.

ಅವರ ಕವನಗಳು ಕೂಡ, ಆದಿವಾಸಿ ಬದುಕು-ಸಂಸ್ಕೃತಿಗಳನ್ನು ಚಿತ್ರಿಸುವ, ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಸ್ಪಷ್ಟವಾಗಿ ಬಿಂಬಿಸುವ, ಅವರ ದೃಷ್ಟಿಕೋನವನ್ನು ಪ್ರತಿಫಲಿಸುವ ಜವಾಬ್ದಾರಿಯನ್ನೇ ನಿಭಾಯಿಸುತ್ತವೆ. ಅವರ ಕವನಗಳನ್ನು ಬೆಂಕಿಯಲ್ಲಿ ಅರಳಿದ ಹೂವುಗಳು ಎಂದರೆ ತಪ್ಪಾಗಲಾರದು.

ಓದುಗರನ್ನು ಪ್ರತಿಮೆ-ಸಂಕೇತಗಳಲ್ಲಿ ಸಿಲುಕಿಸಿ ಮಾತನ್ನು ಮುಚ್ಚುವ ಕವಿತೆಗಳಲ್ಲ ಜಸಿಂತಾ ಅವರದ್ದು. ಇರಿವ ಚೂರಿಯನ್ನು ನೆಟ್ಟನೋಟದಲ್ಲಿ ಎದುರಿಸುತ್ತಿರುವ ಕಣ್ಣುಗಳಂತಹ ಕವನಗಳು ಅವರದ್ದು, ಅಂತಹ ದಿಟ್ಟ ದನಿ ಜಸಿಂತಾ. ಈವರೆಗೆ ಅವರು ಅಂಗೋರ್ (ಕೆಂಡಗಳು), ಜೋಡೋಂಕೀ ಜಮೀನ್ (ಬೇರುಗಳ ನೆಲ) ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಕವನಗಳ ಜರ್ಮನ್ ಭಾಷಾಂತರ ಪ್ರಕಟವಾಗಿದೆ. ಅನೇಕ ಭಾರತೀಯ ಭಾಷೆಗಳಿಗೆ ಮತ್ತು ಇಂಗ್ಲಿಶ್, ಇಟಾಲಿಯನ್ ಹಾಗೂ ಫ್ರೆಂಚ್ ಭಾಷೆಗಳಿಗೂ ಅವರ ಕವನಗಳು ಅನುವಾದಗೊಂಡಿವೆ.

ಆದಿವಾಸಿಗಳನ್ನು ಸುಳ್ಳು ಆರೋಪಗಳಡಿ ಜೈಲಿಗಟ್ಟುವುದು, ಅವರ ಮೇಲೆ ಆದಿವಾಸಿಯೇತರರು ಹಲ್ಲೆ ಮಾಡುವುದು, ಹಳ್ಳಿಗಳು ಪೊಲೀಸರ ಭಯದಲ್ಲಿ ಕದ್ದುಮುಚ್ಚಿ ಬದುಕುವುದು ಮುಂತಾದ ಅನೇಕ ಅಮಾನವೀಯ ಘಟನೆಗಳನ್ನು ಕಣ್ಣಾರೆ ಕಾಣುತ್ತ ಬೆಳೆದ ಜಸಿಂತಾ ಹೇಳುತ್ತಾರೆ: ಆದಿವಾಸಿಗಳಿಗೆ ಸ್ವಂತದ ದನಿಯಿಲ್ಲದ ಪರಿಸ್ಥಿತಿಯಲ್ಲಿ, ಇತರರು ಹೇಳಿದ್ದೇ ಸಾರ್ವಜನಿಕ ಸತ್ಯವಾಗುತ್ತ ಸಾಗುವುದನ್ನು ತಪ್ಪಿಸುವ ಹಠ ಅವರಲ್ಲಿ ಶಾಲಾ ದಿನಗಳಲ್ಲಿಯೇ ಮೊದಲಾಗಿತ್ತು ಎಂದು. ತಮ್ಮ ಈ ಕಳಕಳಿ, ಮುಖವಾಡಗಳಿಲ್ಲದ ಕಾಳಜಿಯಿಂದಾಗಿಯೇ ಜಸಿಂತಾ ಝಾರ್ಖಂಡ್‌ನ ಆದಿವಾಸಿ ಸಮುದಾಯಗಳ ಅಪ್ಪಟ ದನಿಯಾಗಿ ಗುರುತಿಸಲ್ಪಡುತ್ತಿದ್ದಾರೆ. ಅವರ ಕವನಗಳನ್ನು ಓದುವುದೆಂದರೆ, ಹೊದ್ದು ಮಲಗಿದವರನ್ನು ಎಬ್ಬಿಸಿದಂತೆ.

ಈ ಕವಿತೆ ಓದಿದ್ದೀರಾ?: ಕರುಣೆಯ ಕೃಷಿ | ಲ್ಯಾಂಗ್‌ಸ್ಟನ್ ಹ್ಯೂಸ್ ಕವಿತೆ 'ನಾನು ಕಾಣುವ ಜಗತ್ತು'

ಅಭಿವೃದ್ಧಿಯ ಹೆಸರಲ್ಲಿ ಆದಿವಾಸಿಗಳ ಮೇಲಾಗುತ್ತಿರುವ ಹಿಂಸೆ, ಅನ್ಯಾಯಗಳ ಕುರಿತಾಗಿ ಬರೆಯಲು ತಮಗೆ ಯಾವುದೇ ಭೀತಿ ಇಲ್ಲವೆನ್ನುವ ಜಸಿಂತಾ, ತಮ್ಮ ಪತ್ರಿಕಾ ಬರಹಗಳ ರೀತಿಯಲ್ಲಿಯೇ ಕಾವ್ಯ ರಚನೆ ಮಾಡುವುದಿಲ್ಲ. ಆದುದರಿಂದಲೇ, ಅವರ ಕವನಗಳಲ್ಲಿ ದೈನಂದಿನ ವಿವರಗಳು ರೂಪಕಾತ್ಮಕವಾಗಿ ಮಾರ್ಪಾಡಾಗುತ್ತವೆ. ಅಧಿಕಾರಶಾಹಿಯ ಸುಳ್ಳುಗಳನ್ನು ಬಿಚ್ಚಿಡುವ ತೀವ್ರತೆಯನ್ನು ಪಡೆಯುತ್ತವೆ. 'ನದಿ, ಗುಡ್ಡ ಹಾಗೂ ಮಾರುಕಟ್ಟೆ' ಕವನ ಎತ್ತಿ ತೋರುವ ಹಾಗೆ, ಇಡೀ ಸಮುದಾಯದ ದನಿಯಾಗುತ್ತವೆ.

'ದುಡ್ಡೇ ದೊಡ್ಡಪ್ಪ' ಎನ್ನುವ ಕನ್ನಡದ ನಾಣ್ಣುಡಿ, 'ಸಬ್ ಸೇ ಬಡಾ ರುಪಯ್ಯಾ' ಎನ್ನುವ ಹಿಂದಿ ಚಿತ್ರಗೀತೆಯೊಂದರ ಸಾಲುಗಳನ್ನು ನೆನಪಿಸುವ ಈ ಕವನದ ಕೊನೆಯ ಸಾಲು ಗಮನಾರ್ಹ. ಆರ್ಥಿಕ ಅಭಿವೃದ್ಧಿ ಎಂಬ ಮರೀಚಿಕೆಯನ್ನು ಮುಂದು ಮಾಡಿ ಜನಸಮುದಾಯಗಳ ಪರಿಸರವನ್ನು ದೋಚಿ, ಕೊನೆಯಲ್ಲಿ ಇಡೀ ಜನಾಂಗಗಳೇ ಹೇಗೆ ಕೇವಲ ರೂಪಾಯಿ ನೋಟುಗಳಾಗಿಬಿಡುತ್ತಿವೆ ಎಂಬ ದುರಂತವನ್ನು ಈ ಕವನ ಕಟ್ಟಿಕೊಡುತ್ತದೆ.

ನಿಮಗೆ ಏನು ಅನ್ನಿಸ್ತು?
4 ವೋಟ್