ಜಾಗರ | ತುಕ್ಕೋಜಿಯ ನೈಪುಣ್ಯ ತುಕ್ಕು ಹಿಡಿಯುವುದನ್ನು ತೇಜಸ್ವಿ ಕಾಣಿಸುವ ಬಗೆ

ಪೂರ್ಣಚಂದ್ರ ತೇಜಸ್ವಿಯರ ಕತೆ ಹೇಳುವ ಶೈಲಿ ಮತ್ತು ತಂತ್ರಗಾರಿಕೆ ಅತ್ಯಂತ ಪ್ರಸಿದ್ಧ. ಅವರ ಪ್ರತೀ ಕತೆ ಅಥವಾ ಕಾದಂಬರಿಯಲ್ಲೂ ಈ ವಿಷಯ ಪದೇಪದೆ ಸಾಬೀತಾಗಿದೆ. ‘ಅಬಚೂರಿನ ಪೋಸ್ಟಾಫೀಸು’ ಕಥಾಸಂಕಲನದಲ್ಲಿ ಕಾಣಿಸಿಕೊಳ್ಳುವ ತುಕ್ಕೋಜಿ ಎಂಬ ಪಾತ್ರಧಾರಿ ತನ್ನ ದರ್ಜಿ ಕಸುಬಿನ ನೈಪುಣ್ಯವನ್ನು ಹೇಗೆ ಕಳೆದುಕೊಳ್ಳುತ್ತಾನೆ ಎಂಬ ಸೂಕ್ಷ್ಮ ಈ ಲೇಖನದಲ್ಲಿದೆ

ತುಕ್ಕೋಜಿ, ಹಾಸನದ ಹೆಸರಾಂತ ಬಟ್ಟೆ ವ್ಯಾಪಾರಿಯೊಬ್ಬರ ಮಗ. ಅವನ ಮನೆತನವೇ ದರ್ಜಿಯದು. ‘ತಂದೆಗೆ ಅವಿಧೇಯನಾಗಿ ವರದಕ್ಷಿಣೆ ಸಹಿತವಾಗಿ ಬಂದ ಅನೇಕ ಹೆಣ್ಣುಗಳನ್ನು ತಿರಸ್ಕರಿಸಿ, ಕೃಷ್ಣಾಬಾಯಿ ಎಂಬ ವಿಧವೆಯೊಬ್ಬರ ಮಗಳಾದ ಸರೋಜಳನ್ನು ಹಠದಿಂದ ಮದುವೆಯಾಗಿದ್ದನು. ಈ ಕಾರಣಕ್ಕಾಗಿ ರಾದ್ಧಾಂತವಾಗಿ ತುಕ್ಕೋಜಿ ತಂದೆಯ ಆಸ್ತಿಪಾಸ್ತಿಯನ್ನೆಲ್ಲ ತಿರಸ್ಕರಿಸಿ, ಹೊಸದಾಗಿ ಪೇಟೆಯಾಗಿ ರೂಪುಗೊಳ್ಳುತ್ತಿದ್ದ ಗುರಗಳ್ಳಿಗೆ ಹೆಂಡತಿಯೊಂದಿಗೆ ಬಂದಿದ್ದನು. ತುಕ್ಕೋಜಿ ಕೈಯಲ್ಲಿ ಕಾಸಿಲ್ಲದ ಬಡವನಾಗಿದ್ದರೂ ಅವನೇನೂ ಅದಕ್ಕೆ ಹೆದರುತ್ತಿರಲಿಲ್ಲ. ಏಕೆಂದರೆ, ಆನುವಂಶಿಕವಾಗಿ ಬಂದ ಹೊಲಿಗೆ ವಿದ್ಯೆ ಅವನಿಗೆ ಅಭಯಹಸ್ತದಂತೆ ಇತ್ತು.’

Eedina App

ಅಪ್ಪನಿಗೆ ಅವಿಧೇಯನಾಗಿ ಸೆಡ್ಡು ಹೊಡೆದು ತುಕ್ಕೋಜಿಯು ಸೇರಿಕೊಂಡ ಗುರಗಳ್ಳಿಯು ಆಗ ತಾನೇ ಹಳ್ಳಿಯಿಂದ ಇಡೀ ಅಖಂಡ ಭಾರತದ ವಿಕಾಸದೊಂದಿಗೇ ನಿಧಾನಕ್ಕೆ ಸಣ್ಣ ಪೇಟೆಯಾಗಿ ರೂಪುಗೊಂಡಿತ್ತು. ಹಾಸನ-ಮಂಗಳೂರಿನ ರೈಲುಮಾರ್ಗ ಗುರಗಳ್ಳಿಯ ಮುಖಾಂತರವೇ ಹೋಗುವುದೆಂದು ನಿರ್ಣಯವಾದ ನಂತರ, ಹೊಸ ರೈಲು ಸೇತುವೆ, ರೈಲು ನಿಲ್ದಾಣಗಳು ಆಗಬೇಕಿದ್ದರಿಂದ ನಾಗರೀಕತೆಯ ವಿಕಾಸಕ್ಕೆ ಹಲವರು ಸದ್ದಿಲ್ಲದೆ ತೊಡಗಿಕೊಂಡರು. ‘ವಿದ್ಯಾರ್ಥಿ ಭವನದ ಹೋಟೆಲು ತಿಮ್ಮಪ್ಪಯ್ಯ ಊರಿನವರ ಮತ್ತು ಆಸುಪಾಸಿನವರ ಜಿಹ್ವಾಶಕ್ತಿಯನ್ನೂ ರುಚಿ ವಿವೇಕವನ್ನೂ ತಿದ್ದುತ್ತಿದ್ದನು. ಸ್ಟೂಡೆಂಟ್ ಹೇರ್‍ಕಟಿಂಗ್ ಸೆಲೂನಿನ ಭಂಡಾರಿ ಕೃಷ್ಣ ಫಿಲಂಫೇರ್, ವೀಕ್ಲಿ, ಟೈಂಮ್ಸ್ ಆಫ್ ಇಂಡಿಯಾ ಮುಂತಾದವನ್ನೆಲ್ಲ ತರಿಸಿ ಕ್ಷೌರಕ್ಕೆ ಕುಳಿತು ಕಾಯುವವರಿಗೆ ಒದಗಿಸುತ್ತಿದ್ದನು. ಹಳ್ಳಿಗರ ಕಾಡು ಕೂದಲನ್ನು ಅತ್ಯಾಧುನಿಕ ಶೈಲಿಗೆ ತೀಡಿ ತಿದ್ದಿ, ಬಾಚಣಿಗೆಯ ಹಿಂಬದಿಯಿಂದ ಒತ್ತಿ ಒತ್ತಿ ಒಂದು ತಾತ್ಕಾಲಿಕ ವಂಕಿಯನ್ನಾದರೂ ಕೇಶಶೈಲಿಯಲ್ಲಿ ರೂಪಿಸಿ ಹೊರಕ್ಕೆ ಬಿಡುತ್ತಿದ್ದನು.’

ಕಲಾಕೃತಿ ಕೃಪೆ: 'ಫೈನ್ ಆರ್ಟ್ ಅಮೆರಿಕ' ಜಾಲತಾಣ

ಗುರಗಳ್ಳಿಯ ಆಧುನಿಕತೆಗೆ ಹೋಟೆಲು ತಿಮ್ಮಪ್ಪಯ್ಯ ಮತ್ತು ಭಂಡಾರಿ ಕೃಷ್ಣರ ಕೊಡುಗೆಗಳ ಜೊತೆಗೆ ಹಾಸನದಿಂದ ವಲಸೆ ಬಂದ ತುಕ್ಕೋಜಿಯ ಕೊಡುಗೆಯೇನೂ ಕಡಿಮೆಯದ್ದಲ್ಲ: ‘ಆದರೆ ಇವರಿಬ್ಬರಿಗಿಂತ ಮಿಗಿಲಾದ ಜವಾಬ್ದಾರಿ ಟೈಲರ್ ತುಕ್ಕೋಜಿಯದಾಗಿತ್ತೆಂಬುದನ್ನು ಯಾರೂ ನಿರ್ವಿವಾದವಾಗಿ ಒಪ್ಪಬೇಕಾದುದೇ. ಸಂತೆಯಲ್ಲಿ ವರ್ಷಕ್ಕೊಂದಾವರ್ತಿ ಚೀಟಿ ಬಟ್ಟೆಯ ರೆಡಿಮೇಡು ಉಡುಪುಗಳನ್ನು ಕೊಂಡು ಹಾಕಿಕೊಂಡು ಹೋಗುತ್ತಿದ್ದ ಹಳ್ಳಿಗರು ಉತ್ತಮವಾದ ಕಚ್ಚಾ ಬಟ್ಟೆಗಳನ್ನು ಅಂಗಡಿಗಳಲ್ಲಿ ಕೊಂಡು, ಅದನ್ನು ತಮ್ಮ ಅಳತೆ ಅಭಿರುಚಿಗಳಿಗೆ ತಕ್ಕಂತೆ ಹೊಲಿಸಿಕೊಂಡು ಓಡಾಡುವ ಅಭಿರುಚಿಯನ್ನೂ ಶಿಸ್ತನ್ನೂ ಕಲಿಸಬೇಕಾದರೆ ಅದೇನೂ ಸಾಮಾನ್ಯ ಕೆಲಸವಲ್ಲ.’ ಎನ್ನುತ್ತಾರೆ ಕತೆಗಾರರು. ಈ ವಿಷಯದಲ್ಲಿ ತುಕ್ಕೋಜಿಗೆ ಅವನ ಕೆಲಸಗಾರಿಕೆಯೇ ಹೆಚ್ಚು ಸಹಾಯ ಮಾಡಿತ್ತು.

AV Eye Hospital ad

‘ತುಕ್ಕೋಜಿ ಸುಮ್ಮನೆ ಕಣ್ಣಿನಿಂದ ನೋಡಿದರೆ ಸಾಕು ಆ ಹುಡುಗ ಹುಡುಗಿಯರ ಮೈಯ ಓರೆಕೋರೆಗಳ ಉದ್ದಗಲ ಅಳತೆಗಳೆಲ್ಲ ಹೊಳೆದುಬಿಡುತ್ತಿದ್ದವು. ತುಕ್ಕೋಜಿ ಹೊಲಿದುಕೊಟ್ಟ ಬಟ್ಟೆಗಳನ್ನು ಹಾಕಿಕೊಂಡರೆಂದರೆ ದೇವರು ಕೊಟ್ಟ ಚರ್ಮದಂತೆ ಅವು ಸ್ವಾಭಾವಿಕವಾಗಿ ಹೊಂದಿಕೊಂಡುಬಿಡುತ್ತಿದ್ದವು.’ ದಿನದಿಂದ ದಿನಕ್ಕೆ ಗಿರಾಕಿಗಳು ಹೆಚ್ಚಾದಂತೆ ಸರೋಜಳೂ ಕಾಜಾ ಗುಂಡಿ ಹೊಲಿಯುವುದು, ಬಟ್ಟೆ ಕತ್ತರಿಸುವುದು ಕಲಿತು, ಇಬ್ಬರೇ ಕುಳಿತು ಕೆಲಸ ಮಾಡುತ್ತಿದ್ದರು. ‘ಗಂಡಹೆಂಡಿರ ಕೆಲಸ ಏಕಾಗ್ರತೆಯಿಂದ ನಡೆಯುತ್ತಿತ್ತು. ಸರೋಜಳ ಏಕಾಗ್ರತೆ ತುಕ್ಕೋಜಿಗೆ ಆತ್ಮವಿಶ್ವಾಸವನ್ನೂ ಶ್ರದ್ಧೆಯನ್ನೂ ಪ್ರೇರೇಪಿಸುತ್ತಿತ್ತು. ತುಕ್ಕೋಜಿ ಸರೋಜಳನ್ನು ಅದೃಷ್ಟ ದೇವತೆ ಎಂದು ತಿಳಿದನು... ದೂರದೂರುಗಳಿಗೆಲ್ಲ ತುಕ್ಕೋಜಿಯ ಖ್ಯಾತಿ ಹಬ್ಬಿತು... ಅಂತೂ ತುಕ್ಕೋಜಿ-ಸರೋಜರು ಆಶಿಸಿ ಅಪೇಕ್ಷಿಸಿದ್ದ ಹಣವೂ ಕೀರ್ತಿಯೂ ಕೈಯಳತೆಯೊಳಗೆ ಬಂದಿತು. ಇದರಿಂದಾಗಿ ತುಕ್ಕೋಜಿಯ ತಂದೆ ಮನೆಯವರೂ ಕೂಡ ಈಗೀಗ ತುಕ್ಕೋಜಿಯ ಬಗ್ಗೆ ಅಷ್ಟೊಂದು ಕಟುಧೋರಣೆಯನ್ನು ಅನುಸರಿಸುತ್ತಿರಲಿಲ್ಲ.’

ನೆಂಟರಿಷ್ಟರ ಮಾನ್ಯತೆ ಮುಂದುವರಿದು, ಇನ್ನೂ ಮಕ್ಕಳಾಗಲಿಲ್ಲವಲ್ಲ ಎಂದು ಮೂಗು ಮುರಿಯುವುದರಿಂದ ಆರಂಭಗೊಂಡು, “ನೀನು ಈ ತಿಂಗಳೂ ನೀರು ಹಾಕಿಕೊಂಡೆಯಾ?” ಎಂಬ ಕೊಂಕುಮಾತುಗಳ ಮೂಲಕ ಸರೋಜಳನ್ನು ಹಂಗಿಸುತ್ತಿದ್ದುದು ತುಕ್ಕೋಜಿಯನ್ನು ಅಪ್ಪ ಎನ್ನಿಸುಕೊಳ್ಳುವುದರ ಕಡೆಗೆ ಗಮನ ಹರಿಸುವಂತೆ ಮಾಡುತ್ತವೆ. ‘ತುಕ್ಕೋಜಿಗೆ ಒಂದು ಮಗುವಾದಾಗ ಗುರಗಳ್ಳಿಯ ಜನಸಂಖ್ಯೆ ಅವನ ಮಗ ಕೃಷ್ಣೋಜಿಯನ್ನೂ ಸೇರಿಕೊಂಡು ಸಾವಿರದ ಮೇರೆ ಮೀರಿತು.’

ಈ ಲೇಖನ ಓದಿದ್ದೀರಾ?: ಜಾಗರ | ಶೇಕ್ಸ್‌ಪಿಯರ್‌ನ ‘ಟೈಟಸ್ ಆ್ಯಂಡ್ರೋನಿಕಸ್’ ಮತ್ತು ಬೋರ್‌ಲಿನ್‌ ಚಟರ್ಜಿಯ ‘ಹಂಗ್ರಿ’

ಮಗ ಕೃಷ್ಣೋಜಿಯ ಬೆಳವಣಿಗೆ ತುಕ್ಕೋಜಿ ಮತ್ತು ಸರೋಜರ ದಾಂಪತ್ಯದಲ್ಲಿ ವಿರಸ ತಂದು, ಕ್ರಮೇಣ ತುಕ್ಕೋಜಿಯ ಪ್ರತಿಭೆಗೆ ತುಕ್ಕು ಹಿಡಿಸುತ್ತದೆ. ಅದು ಹೇಗೆಂದರೆ: ‘ಒಂದು ದಿನ ತುಕ್ಕೋಜಿ ಬಂದಾಗ ಒಂದು ಮೂಲೆಯಲ್ಲಿ ಹೊಲಿಗೆ ದಾರ ಪೂರ್ತಿ ಉಂಡೆಯಿಂದ ಬಿಚ್ಚಿಕೊಂಡು ಸಂಪೂರ್ಣ ಗೋಜಲು ಗೋಜಲಾಗಿ ಮೂಲೆಯಲ್ಲಿ ಬಿದ್ದಿತ್ತು. ತುಕ್ಕೋಜಿ ಅದನ್ನು ಗೋಜಲು ಬಿಡಿಸಿ ಸುತ್ತೋಣೆಂದು ಬಹಳಷ್ಟು ಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ದಾರದ ಉಂಡೆ ಹಾಳಾದುದರಿಂದ ತುಕ್ಕೋಜಿಗೆ ಅಷ್ಟೊಂದೇನೂ ಬೇಸರವಾಗಿರಲಿಲ್ಲ.’

ತುಕ್ಕೋಜಿಯ ಮಗ ಕೃಷ್ಣೋಜಿ ಅಂಬೆಗಾಲಿಡುವಂತಾದ ಮೇಲೆ, ‘ಒಂದು ದಿನ ಮಾತ್ರ ತುಕ್ಕೋಜಿಗೆ ನಿಜಕ್ಕೂ ಕೋಪ ಬಂದಿತ್ತು. ಏಕೆಂದರೆ ತುಕ್ಕೋಜಿಯ ಬಳಿ ಒಂದು ಅತ್ಯಂತ ನಾಜೂಕಾದ ತೆಳ್ಳನೆಯ ಗಜಕಡ್ಡಿ ಇತ್ತು... ಯಾವ ಮಾಯದಲ್ಲಿ ಕಿಟ್ಟುವಿನ ಕೈಗೆ ಸಿಕ್ಕಿತೋ ಏನೋ ಅಂತೂ ತುಕ್ಕೋಜಿ ಮನೆಗೆ ಬಂದಾಗ ಅದು ಳ ಆಕಾರದಲ್ಲಿ ಬಗ್ಗಿಕೊಂಡು ಬಿದ್ದಿತ್ತು.’ ತುಕ್ಕೋಜಿ ಅದನ್ನು ಸರಿಪಡಿಸುವ ಪ್ರಯತ್ನದಲ್ಲಿ ಅದು ಮುರಿದುಹೋಗುತ್ತದೆ. ಬಹಳ ಸಂಕಟದಿಂದ ಹೆಂಡತಿಯ ಬಳಿ, ‘ನಿನ್ನ ಮಗ ನೋಡು ಇಂಥ ಕೆಲಸ ಮಾಡಿದ್ದಾನೆ’ ಎಂದು ರೇಗಾಡುತ್ತಾನೆ. ಅದಕ್ಕವಳು, 'ಗಜಕಡ್ಡಿ ಹಾಳಾದರೆ ಹಾಳಾಗಲಿ. ಸೂಜಿ ಬ್ಲೇಡುಗಳನ್ನೇನಾದರೂ ನುಂಗಿದರೆ ಏನು ಗತಿ?' ಎಂದು ತಿರುಗಿ ತುಕ್ಕೋಜಿಯನ್ನೇ ದಬಾಯಿಸುತ್ತಾಳೆ. ಗಂಡ-ಹೆಂಡತಿಯರ ನಡುವಿನ ಸಾಮರಸ್ಯ ತುಕ್ಕು ಹಿಡಿಯುತ್ತ ಸಾಗುತ್ತದೆ. ಇವರಿಬ್ಬರ ಹಮ್ಮುಬಿಮ್ಮುಗಳು ಕ್ರಮೇಣ ಇವರ ದಾಂಪತ್ಯ ಸಾಮರಸ್ಯವನ್ನು ಹಾಳುಮಾಡುತ್ತವೆ. ಇದರಿಂದ ಇಬ್ಬರೂ ಕೃಷ್ಣೋಜಿಯ ಜವಾಬ್ದಾರಿ ಇನ್ನೊಬ್ಬರು ವಹಿಸಲಿ ಎಂಬ ಧೋರಣೆಯಿಂದ ಮಗುವನ್ನು ಕಡೆಗಣಿಸುತ್ತಾರೆ. ಇವೆಲ್ಲ ತುಕ್ಕೋಜಿಯ ಕೌಶಲವನ್ನು ಹಾಳುಗೆಡವಿ ಅವನನ್ನು ಸುಳ್ಳ್ಳುಕೋರನನ್ನಾಗಿಸುತ್ತದೆ. ಅವನಲ್ಲಿದ್ದ ದರ್ಜಿತನಕ್ಕೆ ಬಳಕೆಯಾಗುತ್ತಿದ್ದ ಪ್ರತಿಭೆಯು ಹೊಸ-ಹೊಸ ಸುಳ್ಳುಗಳ ಸೃಷ್ಟಿ ಮತ್ತು ಆ ಮೂಲಕ ಗಿರಾಕಿಗಳನ್ನು ಮಂಗ ಮಾಡಿಸುವಲ್ಲಿ  ತೊಡಗಿಕೊಳ್ಳುತ್ತದೆ:

‘ಮೊದಮೊದಲು ತುಕ್ಕೋಜಿಗೆ ಕಾಲಕ್ಕೆ ಸರಿಯಾಗಿ ಬಟ್ಟೆಗಳನ್ನು ಕೊಡುವುದು ಕಷ್ಟವಾಗತೊಡಗಿತು. ಸುಳ್ಳು ಹೇಳದೆ ಗತ್ಯಂತರವೇ ಇಲ್ಲವೆನ್ನುವಂತಾಯ್ತು.’ ಮೊದಲೆಲ್ಲ ಹೊಲೆಸಿಕೊಂಡು ಮೆಚ್ಚಿನಿಂದ ಧರಿಸುತ್ತಿದ್ದ ಗಿರಾಕಿಗಳು ಈಗ ಒಂದೊಂದೇ ದೂರುಗಳನ್ನು ತರಲಾರಂಭಿಸುತ್ತಾರೆ. ತೋಳು ಸರಿಯಿಲ್ಲ, ಭುಜದ ಅಳತೆ ತೆಗೆದುಕೊಂಡಂತೆ ಹೊಲಿದಿಲ್ಲ, ಇತ್ಯಾದಿ ಇತ್ಯಾದಿ. ಕೊನೆಕೊನೆಗೆ ತುಕ್ಕೋಜಿ ಹೊಲೆದ ಬಟ್ಟೆಗಳಲ್ಲಿ ಯಾವ ರೀತಿಯ ಊನವೆಂದು ಪತ್ತೆ ಮಾಡುವುದೇ ಕಷ್ಟವಾಗುತ್ತದೆ.

ಕಲಾಕೃತಿ: ವಿನ್ಸೆಂಟ್ ವಾನ್ ಗೋ

ದೂರು ತಂದವರಿಗೆ ತಾನು ಹೊಲೆದ ಬಟ್ಟೆಯನ್ನು ಹಾಕಿಸಿ, “ಸರಿಯಾಗೇ ಇದೆಯಲ್ಲ ಸ್ವಾಮಿ! ನೀವು ಹೇಳಿದುದು ಈ ನೆರಿಗೆ ತಾನೇ, ಬಟ್ಟೆ ಇನ್ನೂ ಹೊಸದು ನೋಡಿ. ಎರಡು ಒಗೆತಕ್ಕೆ ಎಲ್ಲ ಸರಿಬರುತ್ತೆ' ಎಂತಲೋ ಇನ್ನೂ ಏನೇನೋ ಸುಳ್ಳುಗಳನ್ನು ಆ ಕ್ಷಣಕ್ಕೆ ತಕ್ಕಂತೆ ಸೃಷ್ಟಿಸಿ ಕಳಿಸಿಬಿಡಲು ಆರಂಭಿಸುತ್ತಾನೆ. ಕ್ರಮೇಣ ಅವರ ನಡಿಗೆಯ ರೀತಿಗಳನ್ನು ಸರಿಪಡಿಸಿಕೊಂಡರೆ, ತೊಡೆಸಂದಿಯಲ್ಲಿ ಪ್ಯಾಂಟಿನ ಹೊಲಿಗೆ ಹಿಡಿಯುವುದು ತಪ್ಪುತ್ತದೆಂದೂ ಹೊಟ್ಟೆಯನ್ನು ಡೀಲ ಬಿಟ್ಟುಕೊಂಡು ಬೆಲ್ಟನ್ನು ಕೆಳಗೆ ಕಟ್ಟಿಕೊಳ್ಳಿ ಎಂದೂ ಸಲಹೆಗಳನ್ನು ಕೊಡಲಾರಂಭಿಸುತ್ತಾನೆ. ತನ್ನ ಕೆಲಸದಲ್ಲಿನ ಲೋಪಗಳು ಅವನಿಗೇ ಅರಿವಾಗುತ್ತಿದ್ದರೂ ಗಿರಾಕಿಗಳ ಶರೀರ ರಚನೆ, ನಡಿಗೆ ಕ್ರಮಗಳ ಬಗ್ಗೆ ತಪ್ಪು ಹೊರಿಸಿಬಿಡುತ್ತಿದ್ದ.

ತನ್ನ ಹೊಲಿಗೆ ಕೆಲಸದಲ್ಲಿ ಏನೋ ಊನವಿದೆಯೆಂದು ತುಕ್ಕೋಜಿಗೆ ಅನಿಸಿದರೂ ಅದೇನೆಂದು ಅವನಿಗೆ ಸರಿಯಾಗಿ ಅರ್ಥವಾಗುತ್ತಿರಲಿಲ್ಲ. ಮೊದಲೆಲ್ಲ ‘ಗಿರಾಕಿಗಳನ್ನು ನೋಡಿದ ಕೂಡಲೇ ಅವರ ಅಭಿರುಚಿ, ಶರೀರ ಸೌಷ್ಠವ, ನಡಿಗೆಯ ಠೀವಿ ಎಲ್ಲವೂ ಸಾಕ್ಷಾತ್ಕಾರ’ ಆಗಿಬಿಡುತ್ತಿದ್ದ ತುಕ್ಕೋಜಿಯ ದರ್ಜಿಪ್ರತಿಭೆ ಸೋತು, ಈಗವನು ಜನಗಳಲ್ಲೇ ನ್ಯೂನತೆಗಳು ತುಂಬಿವೆ ಎಂದುಕೊಳ್ಳುತ್ತ ಅವರುಗಳು ತನ್ನ ಉಡುಪುಗಳಿಗೆ ಒಗ್ಗಿಕೊಳ್ಳುತ್ತಿಲ್ಲ ಎಂಬ ನಿಲುವು ತಾಳುತ್ತಾನೆ. ಮಗ ಹುಟ್ಟಿದ ಸ್ವಲ್ಪ ದಿನಗಳಲ್ಲೇ ಬದಲಾದ ಅವನ ಕೌಟುಂಬಿಕ ವಾತಾವರಣವು ಅವನ ನೈಪುಣ್ಯ ಮತ್ತು ಪ್ರತಿಭೆಯ ಮೇಲೆ ದುಷ್ಪರಿಣಾಮ ಬೀರಿ ಇಡೀ ಊರಿಗೆ ವ್ಯಾಪಿಸಿ, ‘ಅತ್ಯಂತ ವಿನೋದಪೂರ್ಣ ದುರಂತ’ವಾಗುತ್ತದೆ. ಕೆಟ್ಟಿರುವ ತನ್ನ ಚಿತ್ತಸ್ವಾಸ್ಥ್ಯದಿಂದಾಗಿ ಇಡೀ ಗುರಗಳ್ಳಿಯ ಠೀವಿಯನ್ನೇ ಅಗೋಚರವಾಗಿ ಕೆಡಿಸಿಬಿಡುತ್ತಾನೆ. ಹೇಗೆಂದರೆ:

‘ತುಕ್ಕೋಜಿಯ ಉಡುಪುಗಳಿಗೆ ತಮ್ಮನ್ನು ತಾವು ಒಗ್ಗಿಸಿಕೊಳ್ಳುವ ಭರದಲ್ಲಿ ಅನೇಕರು ಅನೇಕ ತರದ ಅಂಗ ಚೇಷ್ಟೆಗಳನ್ನು ರೂಢಿ ಮಾಡಿಕೊಂಡರು.’ ಕೆಟ್ಟದಾಗಿ ಹೊಲೆದಿರುವ ಕಾಲರ್‌ಗೆ ಹೊಂದಿಕೊಳ್ಳುವುದಕ್ಕಾಗಿ ಮತ್ತು ಕಂಕುಳ ಹಿಡಿತದಿಂದಾಗಿ ಭುಜ ಕುಣಿಸುವುದನ್ನು ಕೆಲವರು ಅಭ್ಯಾಸ ಮಾಡಿಕೊಂಡರೆ, ಪ್ಯಾಂಟುಗಳಲ್ಲಿನ ಅದೃಶ್ಯ ನ್ಯೂನತೆಯಿಂದಾಗಿ ಕೆಲವರ ನಡೆಯುವ ಶೈಲಿ ವ್ಯತ್ಯಾಸವಾಗುತ್ತದೆ. ‘ಒಟ್ಟಿನಲ್ಲಿ ಕವಾಯಿತಿನಂತೆ ನಡೆಯುತ್ತಿದ್ದ ನಾಗರಿಕತೆಯ ನಡಿಗೆಯ ಛಂದಸ್ಸನ್ನು ಹಾಳು ಮಾಡತೊಡಗಿದ ತುಕ್ಕೋಜಿ.’

‘ಅಬಚೂರಿನ ಪೋಸ್ಟಾಫೀಸು’ ಕಥಾಸಂಕಲನದ ‘ಅವನತಿ’ ಕತೆಯಲ್ಲಿ ಸೂರಾಚಾರಿ, ತನ್ನ ಸುತ್ತಲ ಕ್ಷುದ್ರತೆಯು ತಾನೇ ಆಗಿಬಿಡುತ್ತಾನೆ. ಸದರಿ ‘ತುಕ್ಕೋಜಿ’ ಕತೆಯಲ್ಲಿ ತುಕ್ಕೋಜಿಯ ನೈಪುಣ್ಯಕ್ಕೆ ಅವನ ಮಗನೇ ಗ್ರಹಣವಾಗಿಬಿಡುತ್ತಾನೆ.

ನಿಮಗೆ ಏನು ಅನ್ನಿಸ್ತು?
4 ವೋಟ್
eedina app