ಪಕ್ಷಿನೋಟ | ಚಿರತೆಯ ಬೆನ್ನತ್ತಿ ಹಿಮಾಲಯ ಹತ್ತಿದ ಗಟ್ಟಿಗಿತ್ತಿ ಮತ್ತು ಅದೇ ಪರ್ವತ ದಾಟಿ ಮೈಸೂರಿಗೆ ಬಂದ ವಲಸೆ ಹಕ್ಕಿ

ಮಧ್ಯ ಏಷ್ಯಾದಿಂದ ಹಿಮಾಲಯ ಪರ್ವತ ದಾಟಿ ದಕ್ಷಿಣ ಭಾರತದ ಸಿಹಿನೀರಿನ ನೆಲೆಗಳಿಗೆ ಹಾರಿಬರುವ ಪಕ್ಷಿಗಳ ಪಯಣ ಸಾಹಸವೇ ಸರಿ. ಹಿಮಾಲಯದ ಚಳಿಯನ್ನು ಹಾಗೆಲ್ಲ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ, ಇವನ್ನೆಲ್ಲ ಮೀರಿ ಹಕ್ಕಿಗಳು ಪಯಣಿಸುವುದು ವಿಜ್ಞಾನ ಲೋಕದ ಅಚ್ಚರಿ. ಕಿಟ್ಟಿಯ ಪಾವ್ಲೋಸ್ಕಿ ಎಂಬಾಕೆಯದೂ ಇದೇ ಥರದ ರೋಚಕ ಕತೆ

ಹದಿನಾರು ಕೆರೆ, ಮೈಸೂರು
ನವೆಂಬರ್ 2020

ಚಳಿಗಾಲ ಶುರುವಾಗಲು ಇನ್ನೇನು ಕೆಲ ದಿನಗಳಿರಬೇಕು. ಮೈಸೂರಿನ ಹದಿನಾರು ಕೆರೆಯ ಹಿಂಭಾಗದ ಗದ್ದೆಗಳ ಬಳಿ ನಿಂತಾಗ ಸಂಜೆಯ ಬಾನು ರಂಗೇರಿತ್ತು. ಅನತಿ ದೂರದಲ್ಲಿ ಒಬ್ಬರು ನಮ್ಮತ್ತ ನಡೆದು ಬರುತ್ತಿರುವುದು ಕಾಣಿಸಿತು. ಹತ್ತಿರ ಬಂದ ಮೇಲೆ ನಮ್ಮ ಬಳಿ ನಿಂತು ಕೇಳಿದರು, "ಬಪ್ಪಾ ಇಲ್ಲಿ... ಇಲ್ಲೇನ್ ಮಾಡ್ತಿದೀರಾ?" "ನಾವು ಪಟ್ಟೆ ತಲೆ ಹೆಬ್ಬಾತು ಬಂದಿವೆಯೇನೋ ಅಂತ ನೋಡಕ್ ಬಂದಿದೀವಿ," ಅಂತ ಹೇಳಿದಾಗ, "ಅದ್ಯಾವ್ ಪಕ್ಷಿ?" ಅಂತ ಒಮ್ಮೆ ತಲೆ ಕೆರೆದುಕೊಂಡು  ನಿಂತರು. ನಾವು ಆ ಪಕ್ಷಿಯನ್ನು ವಿವರಿಸಲು ಪರದಾಡುತ್ತಿರುವಾಗ ಅವರೇ ಹೇಳಿದರು, "ಏನ್ ಪರ್ವತ ಹಕ್ಕಿ ನೋಡಕ್ ಬಂದಿದಿರಾ? ಅವು ಇನ್ನ ಬಂದಿಲ್ಲ ಬಿಡ್ರಿ...." ಒಮ್ಮೆಲೇ ನನ್ನ ನೆನಪು ಕೆಲವು ದಿನಗಳ ಹಿಂದೆಯೇ ಓದಿದ್ದ ಒಂದು ಪ್ಯಾರಾದತ್ತ ಜಾರಿತು:

"On one cold and still night in early April, I stood beside the Barun glacier [near Mount Makalu, the fifth highest mountain in the world at 8,463 m above sea level... Coming from the south, the distant hum became a call. Then, as if from the stars above me, I heard the honking of bar-headed geese..." - writes Lawrence Swan, a naturalist who had joined Edmund Hillary for a expedition in Himalaya.

Image

ಮತ್ತೆ ಹದಿನಾರು ಕೆರೆ ಗದ್ದೆಗಳಿಗೆ ವಾಪಸಾದೆ. ಇಲ್ಲಿ ನಾವು ನಿಂತಿರುವಾಗ ಈ ಹೆಬ್ಬಾತುಗಳು ಯಾವುದೋ ಹಿಮಾಲಯದ ಪರ್ವತ ಶ್ರೇಣಿಯನ್ನು ದಾಟುತ್ತಿರಬಹುದು ಎಂದು ನೆನೆದು ದೂರದ ಆಕಾಶದತ್ತ ನೋಡಿದೆವು. ಮಧ್ಯ ಏಷ್ಯಾದ ಈ ಹಕ್ಕಿಗಳು ತಮ್ಮ ತವರಾದ ಟಿಬೆಟ್, ಮಂಗೋಲಿಯಾ, ರಷ್ಯಾದ ಭಾಗಗಳಿಂದ ಚಳಿಗಾಲವನ್ನು ಕಳೆಯಲು ದಕ್ಷಿಣ ಭಾರತಕ್ಕೆ ಹಾರಿ ಬರುತ್ತವೆ. ಅಂದರೆ, ದೂರ-ದೂರದಿಂದ ಬರುವ ಈ ಹಕ್ಕಿಗಳ ವಲಸೆ ನಾವು ಅಂದುಕೊಂಡಷ್ಟು ಸಾಮಾನ್ಯ ಅಲ್ಲ. ಹಾಗಾಗಿಯೇ, ಇವುಗಳನ್ನು ಪಕ್ಷಿಲೋಕದ ವಿಶೇಷ ಹಕ್ಕಿಗಳಾಗಿ ಪರಿಗಣಿಸಲಾಗುತ್ತದೆ. ಮಧ್ಯ ಏಷ್ಯಾದಿಂದ ದಕ್ಷಿಣ ಭಾರತದ ಸಿಹಿನೀರಿನ ನೆಲೆಗಳಿಗೆ ಹಾರಿಬರುವ ಇವುಗಳ ಪಯಣ ಸಾಹಸವೇ ಸರಿ. ಅವುಗಳು ಹಾರುವ ಹಿಮಾಲಯದ ಪರ್ವತ ಶ್ರೇಣಿಯ ಎತ್ತರದ ಚಳಿಗೆ ಬರಿ ಮೈ ಒಡ್ಡಿದರೆ ಸಾಕು, ಹೆಪ್ಪುಗಟ್ಟಿ ಬೆಂಡಾಗಿಬಿಡುತ್ತೇವೆ. ಜೊತೆಗೆ ಉಸಿರಾಟದ ತೊಂದರೆಯಂತೂ ನಿಶ್ಚಿತ. ವಿಜ್ಞಾನ ಲೋಕದ ಅಚ್ಚರಿ ಇದು ಎಂದರು ಸರಿಯೇ; ಇವೆಲ್ಲ ಅಡೆತಡೆಗಳನ್ನು ಮೀರಿ ಈ ಹಕ್ಕಿಯು ತನ್ನ ಗುಂಪಿನ ಜೊತೆ ಹಿಮಾಲಯ ಶ್ರೇಣಿ ದಾಟಿ ತನ್ನ ವಲಸೆ ಕೈಗೊಳ್ಳುತ್ತದೆ.

ಈ ಲೇಖನ ಓದಿದ್ದೀರಾ?: ಪಕ್ಷಿನೋಟ | ಅಂದು ರಾತ್ರಿ ಕೆರೆ ಬದಿಯ ಟಿಟ್ಟಿಣದ ಮೊಟ್ಟೆ ಕಬಳಿಸಿದ್ದು ಯಾರು?

ಇಂತಹ ಪರ್ವತ ಸಾಹಸ ಮಾಡುವ ಹಕ್ಕಿಯ ಕುರಿತು ನೆನೆಪಿಸಿಕೊಳ್ಳಲು ಆ ಅಜ್ಜನ ಮಾತು ನಮಗೆ ನೆಪವಾಗಿತ್ತು. 'ಪಟ್ಟೆ ತಲೆ ಹೆಬ್ಬಾತು' ಎನ್ನುವುದಕ್ಕಿಂತ 'ಪರ್ವತ ಹಕ್ಕಿ' ಎಂಬ ಹೆಸರೇ ಆ ಹಕ್ಕಿಗೆ ಹೆಚ್ಚು ಸೂಕ್ತ ಅಲ್ಲವೇ ಎಂದೆನಿಸಿತ್ತು. ಮುಂದೆ 2021ರ ಫೆಬ್ರವರಿ ತಿಂಗಳಲ್ಲಿ ಮತ್ತೆ ಹದಿನಾರು ಕೆರೆಗೆ ಹೋಗಿ, ಈ ವಿಶಿಷ್ಟ ಹಕ್ಕಿಯನ್ನು ಕಣ್ಣಾರೆ ಕಂಡು ಬಂದಿದ್ದೆ. ಅಂದು ರಾತ್ರಿ ಮಲಗಿ, ಹಿಮಾಲಯ ಪರ್ವತ ಶ್ರೇಣಿಯ ಮೌಂಟ್ ಮಕಾಲುವಿನ ಮೇಲೆ ನಾನೇ ಅಡ್ಡಾಡಿಕೊಂಡು ಈ ಹೆಬ್ಬಾತುಗಳ ಗೂಸ್  ಹಾಂಕ್ ಅನ್ನು ಕೇಳಿದೆ ಎಂಬಂತೆ ಕನಸು ಕಂಡಿದ್ದೆ.

* * *

ಬೆಂಗಳೂರು
ನವೆಂಬರ್ 2022

ಈಗ ಚಳಿಗಾಲ ಶುರುವಾಗಿದೆ. ಅಂದರೆ, ದಕ್ಷಿಣ ಭಾರತದಲ್ಲಿ ಮತ್ತೆ ಈ ಪರ್ವತ ಹಕ್ಕಿಗಳು ಪರ್ವತ ದಾಟಿ ನಮ್ಮಲ್ಲಿಗೆ ಬಂದಿವೆ. ಹದಿನಾರು ಕೆರೆಯಂತಹ ಸ್ಥಳೀಯ ಜಾಗಗಳಲ್ಲಿ ನಿಂತು ಇದರ ಬಗ್ಗೆ ತಿಳಿಯುವ ನಮಗೆ, ಇವುಗಳು 'ಪರ್ವತ ಹಕ್ಕಿ' ಎಂಬ ಹೆಸರಿಗೆ ತಕ್ಕ ಸಾಕ್ಷ್ಯ ಒದಗಿಸಿದ್ದು ಅದ್ಭುತ  ಫೋಟೋಗ್ರಾಫರಳಾದ ಕಿಟ್ಟಿಯ ಪಾವ್ಲೋಸ್ಕಿ. ಅವುಗಳು ಈ ಬಾರಿ ಹಿಮಾಲಯ ದಾಟಿ ಬರುವಾಗ ಸೆರೆಹಿಡಿದು ನಮ್ಮ ಮುಂದೆ ಇಟ್ಟಿದ್ದಾರೆ.

Image

ಒಂದು ಕ್ಷಣಕ್ಕೆ ಚಿತ್ರದಲ್ಲಿ ಹಕ್ಕಿಗಳು ಕಾಣಿಸಲೇ ಇಲ್ಲ. ಆದರೆ ಸೂಕ್ಷ್ಮವಾಗಿ ದಿಟ್ಟಿಸಿದಾಗ, ಚಿತ್ರದ ಎಡ ಮಧ್ಯಭಾಗದಲ್ಲಿ ಚುಕ್ಕೆಗಳಂತೆ ಈ ಪರ್ವತ ಹಕ್ಕಿಗಳು ಹಿಮಾಲಯದ ಶ್ರೇಣಿಯಲ್ಲಿ ಹಾರುವುದ ಕಂಡು, ಈಕೆಯ ಸಾಹಸ ಮತ್ತು ಅದೃಷ್ಟ ನೆನೆದು ಮೈ ಜುಮ್ ಎಂದಿತ್ತು. ಇವುಗಳನ್ನು ಹದಿನಾರು ಕೆರೆಯಲ್ಲಿ ಕಂಡು, ಇವುಗಳು ಹಿಮಾಲಯದಲ್ಲಿ ಹಾರುವುದನ್ನು ಮನದಲ್ಲಿ ನನ್ನ ಕಲ್ಪನೆಗೆ ತಕ್ಕಂತೆ ಚಿತ್ರಿಸಿಕೊಂಡಿದ್ದೆ. ಆದರೆ, ಅದನ್ನು ಪಾವ್ಲೋಸ್ಕಿ ಅವರ ಚಿತ್ರದಲ್ಲಿ ಕಂಡು ರೋಮಾಂಚನಗೊಂಡಿದ್ದೆ.

ಈ ಲೇಖನ ಓದಿದ್ದೀರಾ?: ಪಕ್ಷಿನೋಟ | ನೆಲಗುಬ್ಬಿಯ ಮಾಯಾಲೋಕ ಮತ್ತು ಅಮಾಯಕ ಕೇರೆಹಾವು

ಇದಕ್ಕೂ ಮುಂಚೆ ಇವರ ಪ್ರಸಿದ್ಧ ಹಿಮಚಿರತೆಯ ಚಿತ್ರಗಳು 'ಘೋಸ್ಟ್ ಆಫ್‌ ದ ಹಿಮಾಲಯಾಸ್' ಎಂಬ ಶೀರ್ಷಿಕೆಯಡಿ ಬಂದಿತ್ತು. 103 ಮೈಲುಗಳನ್ನು ಬರಿಗಾಲಿನಲ್ಲಿ ನಡೆದು, ಪ್ರಸಿದ್ಧ ನೇಪಾಳ ಭಾಗದ ಹಿಮಾಲಯ ಶ್ರೇಣಿಯ ಮಡಿಲಲ್ಲಿ ಮೂನ್ನೂರರಿಂದ ನಾನೂರು ಹಿಮಚಿರತೆಗಳಲ್ಲಿ ಒಂದನ್ನು ಚಿತ್ರಿಸಿದ್ದು, ಇಡೀ ಫೋಟೋಗ್ರಾಫರ್‌ಗಳ ಜಗತ್ತನ್ನು ರೋಮಾಂಚನಗೊಳಿಸಿತ್ತು. ನಮ್ಮಲ್ಲಿಯೂ ಕೆಲವರು ಇಂತಹ ಸಾಹಸ ಮಾಡಿ ಈ ಹಿಮಚಿರತೆಗಳನ್ನು ಸೆರೆಹಿಡಿದಿದ್ದಾರೆ ಎಂಬುದು ನಿಜವೇ ಆದರೂ, ಪಾವ್ಲೋಸ್ಕಿಯವರು ತೆಗೆದ ಚಿತ್ರಗಳು ನಮ್ಮ ಕಲ್ಪನೆಗಳನ್ನು ಮೀರಿ ಕತೆಗಳನ್ನು ಕಟ್ಟಿಕೊಡುವಂತಿದ್ದವು. ನಿಮಗೆ ಆಸಕ್ತಿ ಇದ್ದರೆ ಇಲ್ಲಿ ಭೇಟಿ ನೀಡಿ ಅವರ ರೋಚಕ ಕತೆ ಓದಬಹುದು: https://kittiyapawlowski.com/snow-leopard-series

Image

ನಿಜವಾಗಿಯೂ ಇದೆಲ್ಲ ಸಾಹಸ ಯಾಕೆ ಮಾಡಬೇಕಾಗಿದೆ ಎಂದು ನಿಮಗೆ ಅನ್ನಿಸಿದರೆ, ಅದಕ್ಕೆ ಕಾರಣ ಮಾನವನೇ. ಮೊದಲಿಗೆ ಮಾನವ ಜೀವಿಯ ಬದುಕು ಬಲು ನಿಧಾನವಾಗಿ ನಡೆದಿತ್ತು. ಕಾಲ ಕಳೆದಂತೆ ಮಾನವ ಜೀವಿಯ ನಾಗಾಲೋಟದ ಬದುಕು ಇನ್ನೆಲ್ಲ ಜೀವಿಗಳ ಬದುಕನ್ನು ಅಸ್ತವ್ಯಸ್ತಗೊಳಿಸಿದೆ. ಇಂದು ನಮ್ಮ ಸುತ್ತಮುತ್ತಲ ಜೀವಿಗಳ ಬದುಕಿನ ಬಗ್ಗೆ ಅರಿಯದೆಹೋದರೆ ಅವುಗಳ ನಶಿಸಿಹೋಗುವ ಸಂಭವ ಹೆಚ್ಚಿದೆ. ಹಾಗಾಗಿ, ಈಗ ಸುಮ್ಮನೆ ಬದುಕುವುದರಿಂದ ಲಾಭವಿಲ್ಲ; ನಮ್ಮ ಪರಿಸರವನ್ನು ಅರಿತು, ಅದರಲ್ಲಿ ನಾವೂ ಒಂದು ಭಾಗವಾಗಿ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180