ಮೈಕ್ರೋಸ್ಕೋಪು | ಅಂಕಿ ಪ್ರಜ್ಞೆ, ಗಣಿತ ಪ್ರಜ್ಞೆ ಹಾಗೂ ಬ್ರಹ್ಮಾಂಡ ಭ್ರಷ್ಟಾಚಾರ

ಅವರ ಊರಿನ ರಸ್ತೆ ಮಾಡಿದ ಕಂಟ್ರಾಕ್ಟರು ನೂರಕ್ಕೆ ನಲವತ್ತರಷ್ಟು ಹಣ ಲಂಚ ಕೊಟ್ಟಿದ್ದಾನೆ ಎಂದರೆ ಜನತೆಗೇಕೆ ಆ ಲಂಚದ ಹಣದ ಪ್ರಮಾಣದ ಬಗ್ಗೆ ಏನೂ ಅನ್ನಿಸುವುದಿಲ್ಲ? ದಿನವೂ ಪೆಟ್ರೋಲ್ ದರ ಒಂದು ರೂಪಾಯಿಯಷ್ಟು ಹೆಚ್ಚಾದರೆ ಸುಮ್ಮನಿದ್ದವರು ಒಮ್ಮೆಲೇ ಹತ್ತು ರೂಪಾಯಿ ಏರಿಸಿದರೆ ಹೌಹಾರುವುದೇಕೆ? ಎಂದಾದರೂ ಯೋಚಿಸಿದ್ದೀರಾ?

ಮೊನ್ನೆ ಪೆಟ್ರೋಲು ಹಾಕಿಸಲು ಸರದಿ ಸಾಲಿನಲ್ಲಿ ನಿಂತಿದ್ದೆ. ಪೆಟ್ರೋಲು ಹಾಕಿದ ಹುಡುಗನಿಗೆ ಎಷ್ಟಾಯಿತೆಂದು ಕೇಳಿದೆ. ಪ್ರತಿದಿನವೂ ಬೆಲೆ ಬದಲಾಗುತ್ತದಲ್ಲ! ಹಿಂದಿದ್ದ ಬೈಕಿನವ ಇನ್ನೇನು ನನ್ನನ್ನು ದೂಡುವಷ್ಟು ಆತುರದಲ್ಲಿ ಇದ್ದುದರಿಂದ ನಾನೂ ತರಾತುರಿಯಲ್ಲಿ ಹಣ ಕೊಟ್ಟು ಹೋಗಬೇಕೆಂದುಕೊಂಡಿದ್ದೆನೆನ್ನಿ. ಆದರೆ, ಬಂಕಿನ ಹುಡುಗ ಎಷ್ಟಾಯಿತು ಎಂದು ಹೇಳುವ ಬದಲಿಗೆ, "ಅಣ್ಣಾ. ಬಿಲ್ಲು,” ಎಂದು ವದರಿದ. "ಅಲ್ಲೇ ಬರೆದಿದೆಯಲ್ಲ, ಬಿಲ್ ತೊಗೊಂಡು ಚಿಲ್ಲರೆ ಕೊಡಬಾರದಾ?” ಎಂದು ರೇಗಿದೆ. ಅಷ್ಟರಲ್ಲಿ, ಅವನು ಅಣ್ಣ ಎಂದ ಹಿರಿಯ ಅಲ್ಲಿಗೆ ಬಂದು, “ಸರ್ ಅವನಿಗೆ ಗೊತ್ತಾಗಲ್ಲ,” ಎಂದು ಹೇಳಿ ಬಿಲ್ ಕೊಟ್ಟ. ಪೆಟ್ರೋಲು ಬೆಲೆ ಕಡಿಮೆ ಆದಷ್ಟು ಅಚ್ಚರಿಯಾಯಿತು. ಸಂಖ್ಯೆಗಳನ್ನು ಓದಲೂ ಬರುವುದಿಲ್ಲವೇ? ಭಾರತದಲ್ಲಿ ಪ್ರಾಥಮಿಕ ಶಿಕ್ಷಣ ಎನ್ನುವುದನ್ನು ಕಡ್ಡಾಯ ಮಾಡಿದ್ದಾರಲ್ಲ? ಹಾಗಿದ್ದೂ ಅಂಕೆ, ಸಂಖ್ಯೆಗಳನ್ನು ಓದಲು ತಿಳಿಯದವರು ಇದ್ದಾರೆಯೇ ಎಂದು ಅಚ್ಚರಿಪಡುತ್ತ ಹೊರಬಂದಿದ್ದೆ.

ಅಂಕೆ, ಸಂಖ್ಯೆಗಳೇನು, ಗಣಿತದ ಪ್ರಜ್ಞೆ ಇರುವವರು ಬಹಳ ಕಡಿಮೆ ಎನ್ನುವುದಕ್ಕೆ ಇನ್ನೊಂದು ಉದಾಹರಣೆ ನಮ್ಮ ಕಚೇರಿಯಲ್ಲಿಯೇ ಸಿಕ್ಕಿತು. ಸಹೋದ್ಯೋಗಿಯೊಬ್ಬರು ನನಗಿಂತ ಹಿರಿಯಳಾದರೂ ಅಕ್ಷರಸ್ಥೆಯಲ್ಲ. ಕಚೇರಿಯಲ್ಲಿದ್ದ ಎಲ್ಲರಿಗೂ ಕ್ಯಾಂಟೀನಿನಿಂದ ಕಾಫಿ ತರುವುದು ಅವಳ ವಾಡಿಕೆಯ ಕೆಲಸವೂ ಆಗಿತ್ತು. ಒಮ್ಮೆ ಹಾಗೆ ನನಗೂ ಕಾಫಿ ತರುತ್ತೇನೆಂದು ಅವಳು ಹೇಳಿದಾಗ, ನೂರು ರೂಪಾಯಿ ಹಣ ಕೊಟ್ಟು, "ಚಿಲ್ಲರೆ ನಿನ್ನ ಬಳಿಯೇ ಇರಲಿ. ಹಣ ಮುಗಿದಾಗ ಮತ್ತೆ ತೆಗೆದುಕೋ,” ಎಂದೆ. "ಸಾರ್. ಇದರಲ್ಲಿ ಎಷ್ಟು ಕಾಫಿ ಬರುತ್ತದೆ?” ಎಂದು ಕೇಳಿದಾಗ ಅಚ್ಚರಿಯಾಯಿತು. ಅದು ನೂರು ರೂಪಾಯಿ ಎಂದು ಗೊತ್ತು. ಕಪ್ ಕಾಫಿಗೆ ಹತ್ತು ರೂಪಾಯಿ ಎಂದರೆ ಹತ್ತು ಕಪ್ ಬರುತ್ತದೆ ಎನ್ನುವಷ್ಟೂ ಸರಳ ಗಣಿತ ಗೊತ್ತಿಲ್ಲವೇ ಎಂದು ಅಚ್ಚರಿಯಾಯಿತು. "ಐದೈದು ರೂಪಾಯಿಯ ನೋಟು ಕೊಟ್ಟು ಬಿಡಿ ಸಾರ್, ಗೊತ್ತಾಗುತ್ತೆ,” ಎಂದಳು. ಐದು, ಹತ್ತು, ನೂರು ಎನ್ನುವ ಸಂಖ್ಯೆಗಳ ಅರಿವಿದ್ದೂ, ಅದರ ಸರಳ ಗುಣಾಕಾರ ಗೊತ್ತಿರಲಿಕ್ಕಿಲ್ಲ ಎನ್ನುವುದು ಅವಳಿಂದ ಕಲಿತೆ. ಅಂಕಿ-ಸಂಖ್ಯೆಯ ಅರಿವು ಗಣಿತ ಪ್ರಜ್ಞೆಯಲ್ಲ. ಗಣಿತ ಎಂದರೆ ಅಂಕಿ, ಸಂಖ್ಯೆಗಳ ಜೊತೆಗೇ ಅಳತೆ, ಪರಿಮಾಣಗಳ ಪರಿವೆಯೂ ಇರಬೇಕು ಎನ್ನುವ ಜ್ಞಾನೋದಯವಾಗಿತ್ತು.

Image

ಅಳತೆ, ಪರಿಮಾಣ ಹಾಗೂ ಸಂಖ್ಯೆಗಳ ಈ ಸಂಬಂಧ ಬಹಳ ಮುಖ್ಯ. ಇದಕ್ಕೊಂದು ಉದಾಹರಣೆಯನ್ನು ಇತ್ತೀಚೆಗೆ ಕಂಡೆ. ಮೊನ್ನೆ ಅಮೆರಿಕದ ವಿಜ್ಞಾನಿಗಳು ದೈತ್ಯ ಬ್ಯಾಕ್ಟೀರಿಯಾವೊಂದನ್ನು ಪತ್ತೆ ಮಾಡಿದ್ದಾರೆ ಎನ್ನುವ ಸುದ್ದಿ ಓದಿದೆ. ಸಾಮಾನ್ಯವಾಗಿ ಅತಿ ದೊಡ್ಡದೆನ್ನುವ ಬ್ಯಾಕ್ಟೀರಿಯಾಗಿಂತಲೂ ಈ ಹೊಸ ಬ್ಯಾಕ್ಟೀರಿಯಾ ಸಾವಿರ ಪಟ್ಟು ದೊಡ್ಡದು. ಅದನ್ನು ಕಾಣಲು ಸೂಕ್ಷ್ಮದರ್ಶಕ ಬೇಕಿಲ್ಲ. ಬರಿಗಣ್ಣಿಗೇ ಅದು ಕಾಣುತ್ತದೆ ಎಂದೆಲ್ಲ ಸುದ್ದಿ ಇತ್ತು. ಇದನ್ನು ನನ್ನ ಗೆಳೆಯರೊಬ್ಬರಿಗೆ ತಿಳಿಸಿದೆ. "ಹೌದಾ. ಎಷ್ಟು ದೊಡ್ಡದಂತೆ?” ಎಂದು ಪ್ರಶ್ನಿಸಿದರು. ಆಗ ಅದರ ಉದ್ದ ಸುಮಾರು ಒಂದು ಸೆಂಟಿಮೀಟರು ಎಂದೆ. "ಅಂದರೆ...?" ಎನ್ನುವ ಅವರ ಮುಖಭಾವ ಕಂಡು, ಬೆರಳಿನಲ್ಲಿ ಒಂದು ಸೆಂಟಿಮೀಟರು ಉದ್ದವನ್ನು ಮಾಡಿ ತೋರಿಸಿದೆ. "ಓ. ಅಷ್ಟೇಯಾ? ಮತ್ತೆ ದೈತ್ಯ ಅಂತೆಲ್ಲ ಹೇಳಿದಿರಿ!” ಎಂದು ದಬಾಯಿಸಿದರು. ಒಂದು ಸೆಂಟಿಮೀಟರು ಎನ್ನುವುದು ಅಳತೆ. ದೈತ್ಯ ಎನ್ನುವುದು ಹೋಲಿಕೆ ಎನ್ನುವುದನ್ನೆಲ್ಲ ವಿವರಿಸಲು ಹೋಗಲಿಲ್ಲವೆನ್ನಿ. ಅಳತೆ, ಪರಿಮಾಣಗಳ ಪರಿವೆ ಎನ್ನುವುದು ಅಷ್ಟೊಂದು ಸಾಮಾನ್ಯವಲ್ಲವೆನ್ನುವುದು ಅರ್ಥವಾಯಿತು.

ಈ ಪರಿವೆ ಕೇವಲ ಅನಕ್ಷರಸ್ಥರಲ್ಲಿ ಮಾತ್ರವಲ್ಲ, ಶಿಕ್ಷಿತರಲ್ಲಿಯೂ ಕಡಿಮೆ. ಕೋವಿಡ್ ಸಮಯದಲ್ಲಿ ಎಲ್ಲ ಕಡೆಯೂ ಲಸಿಕೆ ಹಾಕುತ್ತಿದ್ದರಷ್ಟೆ. ಸುದ್ದಿ ಪತ್ರಿಕೆಯೊಂದರಲ್ಲಿ ಬಂದ ಶೀರ್ಷಿಕೆ ಹೀಗಿತ್ತು. '…. ಊರಿನಲ್ಲಿ ಶೇಕಡ ೧೧೦ರಷ್ಟು ಲಸಿಕೆ ನೀಡಲಾಗಿದೆ.' ಈ ಶೇಕಡ ಅಥವಾ ಪರ್ಸೆಂಟೇಜು ಎನ್ನುವುದು ಬಹಳಷ್ಟು ಜನರು ಗೊಂದಲಗೊಳ್ಳುವ ಪರಿಮಾಣ. ಶೇಕಡ ಎನ್ನುವುದು ನೂರರ ಜೊತೆಗೆ ಹೋಲಿಸುವ ಪ್ರಮಾಣ. ದಶಮಾಂಶ ಎನ್ನುವುದು ಹತ್ತರ ಜೊತೆಗೆ ಹೋಲಿಸುವ ಪರಿಮಾಣ ಅಷ್ಟೆ. ನೂರಾ ಹತ್ತು ಎಂದರೆ ಆ ಊರಿನಲ್ಲಿ ಇದ್ದವರಿಗಿಂತಲೂ ಹೆಚ್ಚು ಮಂದಿಗೆ ಲಸಿಕೆ ಹಾಕಿದ್ದೇವೆ ಎಂದರ್ಥ. ಶೇಕಡ ಹತ್ತರಷ್ಟು ಮಂದಿಗೆ ಎರಡು ಬಾರಿ ಲಸಿಕೆ (ಎರಡು ಡೋಸಲ್ಲ) ಹಾಕಿದ್ದರೆ ಮಾತ್ರ ಇದು ಸತ್ಯ ಎನಿಸುತ್ತದೆ. ಈ ಸುದ್ದಿಯನ್ನು ಓದಿ ಆಹಾ ಎನ್ನುವವರೂ ಇರಬಹುದು. ಆದರೆ ಆಹಾ ಎನ್ನುವುದಕ್ಕಿಂತಲೂ, ಏನೋ ಎಡವಟ್ಟಾಗಿದೆ ಎಂದು ಅರ್ಥ ಮಾಡಿಕೊಳ್ಳುವವರು ಎಷ್ಟು ಮಂದಿ?

Image
ನೀರವ್ ಮೋದಿ; ಬ್ಯಾಂಕ್‌ಗೆ ಹಿಂತಿರುಗಿಸದ ಸಾಲ 10 ಸಾವಿರ ಕೋಟಿ ರೂಪಾಯಿ

ಇಂಥದ್ದನ್ನು ವಿಜ್ಞಾನಿಗಳು 'ಗಣಿತ ಮೌಢ್ಯ' ಎನ್ನುತ್ತಾರೆ. ಇದಕ್ಕೆ ನಮ್ಮ ಮನಸ್ಸು ಎಷ್ಟು ಕಾರಣವೋ, ನಮ್ಮ ಶಿಕ್ಷಣವೂ ಅಷ್ಟೇ ಕಾರಣ ಎನ್ನಬಹುದು. ಮನುಷ್ಯನ ಮಿದುಳಿಗೆ ಸಂಖ್ಯೆಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಕೆಲವು ಮಿತಿಗಳಿವೆ. ಪ್ರಾಣಿಗಳಿಗೂ ಅಷ್ಟೆ. ನಿಮ್ಮ ಪ್ರೀತಿಯ ನಾಯಿಯ ಮುಂದೆ ನಾಲ್ಕು ಮತ್ತು ಹತ್ತು ಬಿಸ್ಕತ್ತುಗಳ ಗುಡ್ಡೆ ಇತ್ತೆನ್ನಿ. ಅದು ಯಾವುದನ್ನು ಆಯ್ದುಕೊಳ್ಳಬಹುದು? ಹತ್ತು ಬಾರಿ ಈ ಪ್ರಯೋಗ ಮಾಡಿದಾಗ ಬಹಳಷ್ಟು ಬಾರಿ ಅದು ಹತ್ತರ ಗುಡ್ಡೆಯನ್ನೇ ಆಯ್ದುಕೊಂಡಿತೆನ್ನಿ, ಅದಕ್ಕೆ ಸ್ವಲ್ಪವಾದರೂ ಗಣಿತ ಪ್ರಜ್ಞೆ ಇದೆ ಎನ್ನಬಹುದು. ಕಡಿಮೆ ಯಾವುದು, ಹೆಚ್ಚು ಯಾವುದು ಎಂದು ಅದು ಗುರುತಿಸುತ್ತಿರುವುದರಿಂದ ದೊಡ್ಡ ಗುಡ್ಡೆಯನ್ನೇ ಮೆಲ್ಲುತ್ತದೆ. ಆದರೆ, ಎರಡೂ ಗುಡ್ಡೆಯಲ್ಲಿ ಐದೋ, ಹದಿನೈದೋ ಮಾಡಿದರೂ ಅದಕ್ಕೆ ವ್ಯತ್ಯಾಸ ಗೊತ್ತಾಗುವುದಿಲ್ಲ. ಇದು ಪರಿಮಾಣದ ಪರಿವೆ. ಅದೇ ಒಂದು ಗುಡ್ಡೆಯಲ್ಲಿ ಐದು ಬಿಸ್ಕತ್ತು ಇದ್ದು, ಅದಕ್ಕೆ ಇನ್ನೊಂದು ಸೇರಿಸಿದರೆ ನಾಯಿಗೆ ವ್ಯತ್ಯಾಸ ಗೊತ್ತಾಗುವುದಿಲ್ಲ. ನಮಗೆ ಗೊತ್ತಾಗುತ್ತದೆ. ಏಕೆಂದರೆ, ನಾವು ಆ ಬಿಸ್ಕತ್ತುಗಳನ್ನು ಎಣಿಸುತ್ತೇವೆ. ಇದು ಅಂಕಿಗಳ ಪರಿವೆ. ಅಂಕಿಗಳ ಪರಿವೆಯಲ್ಲಿಯೂ ನಮಗೆ ಮಿತಿ ಇದೆ ಎನ್ನುವುದು ವಿಜ್ಞಾನಿಗಳ ಪ್ರತಿಪಾದನೆ. ನಮ್ಮ ಮಿದುಳಿಗೆ ಹತ್ತು, ನೂರು, ಸಾವಿರ ತಿಳಿಯುವಷ್ಟು ಹತ್ತು ಸಾವಿರ, ಲಕ್ಷ, ಕೋಟಿಗಳ ಪರಿಜ್ಞಾನ ಇರುವುದಿಲ್ಲವಂತೆ.

ಗಣಿತದ ಬಗ್ಗೆ ಇರುವ ಭಯಕ್ಕೂ, ನಮ್ಮ ದೈನಂದಿನ ಬದುಕಿನಲ್ಲಿ ಆಗುವ ತೊಂದರೆಗಳನ್ನು ನಾವು ಸಹಿಸಿಕೊಳ್ಳುವುದಕ್ಕೂ ಈ ದಿವ್ಯ ಅಜ್ಞಾನ ಕಾರಣ. ಪ್ರತಿದಿನವೂ ಪೆಟ್ರೋಲು ಬೆಲೆ ಒಂದೊಂದೇ ರೂಪಾಯಿ ಹೆಚ್ಚಿತು ಎಂದರೆ ನಮಗೆ ಗೊತ್ತೇ ಆಗುವುದಿಲ್ಲ. ಆದರೆ, ಥಟ್ಟನೆ ಹತ್ತು, ಹದಿನೈದು ರೂಪಾಯಿ ಹೆಚ್ಚಿದರೆ ಗಾಬರಿ ಆಗುತ್ತದೆ. ಹತ್ತು ದಿನಗಳ ಕಾಲ ಒಂದೊಂದೇ ರೂಪಾಯಿ ಹೆಚ್ಚಿಸಿದರೂ ಅಷ್ಟೇ ಎನ್ನುವುದು ನಮಗೆ ತಿಳಿಯುವುದಿಲ್ಲ. ಹಾಗೆಯೇ, ಐದುನೂರು ರೂಪಾಯಿ ಪಿಂಚಣಿ ಪಡೆಯುವವನಿಗೆ ಇನ್ನೂರು ರೂಪಾಯಿ ಎಂದರೆ ಕೇವಲ ಇನ್ನೂರು ರೂಪಾಯಿ. ಅದು ಐದುನೂರು ರೂಪಾಯಿಯ ಶೇಕಡ ನಲವತ್ತು ಎನಿಸುವುದಿಲ್ಲ. ನಮ್ಮೂರಿನ ರಸ್ತೆ ಮಾಡಿದ ಕಂಟ್ರಾಕ್ಟರು ಶೇಕಡ ನಲವತ್ತರಷ್ಟು ಹೆಚ್ಚು ಬೇಡಿದ್ದಾನೆ ಎಂದರೆ ಅದು ಕೂಡ ಏನೂ ಅನಿಸಲಾರದು. ರಸ್ತೆಗೆ ವೆಚ್ಚವಾದ ಒಂದು ಕೋಟಿಯ ನಲವತ್ತು ಪರ್ಸೆಂಟು ಎಂದರೆ ಕೂಡ ಏನೂ ಅನ್ನಿಸುವುದಿಲ್ಲ. ಏಕೆಂದರೆ, ಅದು ಕೇವಲ ಒಂದು ಸಂಖ್ಯೆ. ಕೇವಲ ನಲವತ್ತು ಲಕ್ಷ! ಭ್ರಷ್ಟತೆಯ ಪ್ರಮಾಣ, ಅಳತೆ ನಮ್ಮ ಪರಿವೆಗೆ ಬಾರದೆ ಹೋಗುವುದು ಈ ಕಾರಣಕ್ಕೇ.

Image
ಮೆಹುಲ್ ಚೋಕ್ಸಿ; ಬ್ಯಾಂಕ್‌ಗಳಿಗೆ ಇನ್ನೂ ಹಿಂತಿರುಗಿಸಬೇಕಿರುವ ಸಾಲ 22 ಸಾವಿರ ಕೋಟಿ ರೂಪಾಯಿ

ಈ ಹಿಂದೆ ನಾನು ಸಂಶೋಧನೆ ಮಾಡುತ್ತಿದ್ದ ಸಂಸ್ಥೆಯಲ್ಲಿ ಒಂದು ಹೊಸ ಉಪಕರಣವನ್ನು ಕೊಂಡಿದ್ದೆವು. ಆಗ ಅದರ ಮೌಲ್ಯ ಇಪ್ಪತ್ತು ಲಕ್ಷ ರೂಪಾಯಿ. ನಲವತ್ತು ವರ್ಷಗಳ ಹಿಂದೆ ಅದು ಬಹಳ ದುಬಾರಿ. ಉಪಕರಣವಿದ್ದ ಕೋಣೆಯನ್ನು ನಿತ್ಯ ಶುಚಿಗೊಳಿಸಲೆಂದೇ ಒಬ್ಬ ಹುಡುಗನನ್ನು ನೇಮಿಸಲಾಗಿತ್ತು. ಕಣ ಧೂಳು ಇದ್ದರೂ ಉಪಕರಣ ನೀಡುತ್ತಿದ್ದ ಫಲಿತಾಂಶಗಳು ತಪ್ಪಾಗಬಹುದಿತ್ತು. ಎಲ್ಲರಂತೆ ನಮ್ಮ ಹುಡುಗನೂ ಒಮ್ಮೊಮ್ಮೆ ಮೈಗಳ್ಳತನ ತೋರುತ್ತಿದ್ದ. ಶುಚಿಗೊಳಿಸಲಿಲ್ಲವೇಕೆ ಎಂದರೆ ಸುಳ್ಳು ಹೇಳಿಬಿಡುತ್ತಿದ್ದ. ಆ ಉಪಕರಣದ ಮೌಲ್ಯವನ್ನು ತಿಳಿಸಿದರಾದರೂ ಅದರ ಮಹತ್ವ ತಿಳಿಯಬಹುದು ಎಂದು ಅದನ್ನೂ ಹೇಳಿದ್ದಾಯಿತು. ಇಪ್ಪತ್ತು ಲಕ್ಷ ಎನ್ನುವುದು ಅವನಲ್ಲಿ ಯಾವ ಬದಲಾವಣೆಯನ್ನೂ ಮಾಡಲಿಲ್ಲ. ಕೊನೆಗೆ ಒಂದು ದಿನ, ನೀನು ಹೀಗೇ ನಿರ್ಲಕ್ಷ್ಯ ತೋರಿ ಉಪಕರಣ ಕೆಟ್ಟರೆ ನಿನ್ನ ಸಂಬಳದಿಂದ ಅದರ ವೆಚ್ಚವನ್ನು ಭರ್ತಿ ಮಾಡಬೇಕಾಗುತ್ತದೆ ಎಂದು ಬೆದರಿಸಿದೆ. "ಎಷ್ಟು ಕಟ್ ಮಾಡ್ತೀರಿ?” ಎಂದು ಮರುಪ್ರಶ್ನೆ ಹಾಕಿದ. ಅವನಿಗೆ ಆಗ ನಾಲ್ಕುನೂರು ರೂಪಾಯಿ ಸಂಬಳ. ಇಪ್ಪತ್ತು ಲಕ್ಷಕ್ಕೆ ಲೆಕ್ಕ ಹಾಕಿ, "ನೀನು, ನಿನ್ನ ಮಗ, ಮೊಮ್ಮಗ, ಮರಿಮಗ ಸಂಬಳವಿಲ್ಲದೆ ದುಡಿದರೂ ಮುಗಿಯುವುದಿಲ್ಲ. ನಾಲ್ಕು ನೂರು ವರ್ಷಗಳು ನೀವೆಲ್ಲರೂ ಸಂಬಳವಿಲ್ಲದೆ ದುಡಿಯಬೇಕಾಗುತ್ತದೆ,” ಎಂದೆ. ವರ್ಷಾನುಗಟ್ಟಲೆ ಸಂಬಳ ಕಳೆದುಕೊಳ್ಳಬೇಕಾಗುತ್ತದೆ ಎನ್ನುವ ಭಯದಿಂದಲೋ ಅಥವಾ ಇಪ್ಪತ್ತು ಲಕ್ಷದ ಮಹತ್ವ ಅರ್ಥವಾಗಿದ್ದರಿಂದಲೋ ಗೊತ್ತಿಲ್ಲ, ಮರುದಿನದಿಂದ ನಾವು ಹೇಳದಿದ್ದರೂ ಕೋಣೆ ಮೂರು-ನಾಲ್ಕು ಬಾರಿ ಶುಚಿಯಾಗತೊಡಗಿತು.

ನಮ್ಮ ಮಿದುಳಿನ ಗಣನ ಸಾಮರ್ಥ್ಯವನ್ನು ಹೆಚ್ಚಿಸಬಹುದು ನಿಜ. ಅದಕ್ಕೆ ತರಬೇತಿ ಬೇಕು. ಆ ತರಬೇತಿಯನ್ನೇ ನಾವು ಗಣಿತ ಕಲಿಕೆ ಎನ್ನುತ್ತೇವಷ್ಟೆ. ನಮ್ಮ ಬದುಕಿಗೆ ಬೇಕಾಗಿದ್ದು ಬಹುಶಃ ಅತ್ಯಲ್ಪ ಗಣಿತ - ಒಂದಿಷ್ಟು ಅಂಕಿಗಳ ಜ್ಞಾನ. ಸಾವಿರದಷ್ಟು ಅಂಕಿಗಳನ್ನು ಕೂಡಿಸಿ, ಕಳೆಯುವಷ್ಟಾದರೆ ಸಾಕು. ಎರಡನೆಯದು ಅಳತೆ; ಉದ್ದ, ಅಗಲ, ಗಾತ್ರದ ಅರಿವು. ಒಂದು ಅಡಿ ಉದ್ದ, ಅಗಲ, ಆಳವಿರುವ ತೊಟ್ಟಿಯಲ್ಲಿ ಒಂದು ಘನ ಅಡಿ ನೀರಿರುತ್ತದೆ. ಆದರೆ, ಅದೇ ಮೂರು ಅಡಿ ಉದ್ದ, ಅಗಲ, ಆಳ ಇರುವ ತೊಟ್ಟಿಯಲ್ಲಿ ಮೂರು ಪಟ್ಟು ಹೆಚ್ಚಲ್ಲ, ಇಪ್ಪತ್ತೇಳು ಪಟ್ಟು ಹೆಚ್ಚು ನೀರಿರುತ್ತದೆ. ಇದರ ಅರಿವು ಇಲ್ಲದಾಗ, ಒಂದಡಿ ಆಳದ ತೊಟ್ಟಿ ಮತ್ತು ಮೂರಡಿ ಆಳದ ತೊಟ್ಟಿಯ ನಡುವಿನ ವ್ಯತ್ಯಾಸ ನಮಗೆ ಅರ್ಥವಾಗುವುದಿಲ್ಲ. ಸಂಪಿನಲ್ಲಿ ಮುಳುಗಿ ಸಾಯುವುದು ಸಾಧ್ಯವೇ ಎಂದೋ, ಸ್ನಾನದ ತೊಟ್ಟಿಯಲ್ಲಿ ಮುಳುಗಿ ಸಾಯಲಾಗದು ಎಂದೋ ಯೋಚಿಸುತ್ತೇವೆ.

Image
ಗೌತಮ್ ಅದಾಣಿ; ಬ್ಯಾಂಕ್‌ಗಳಿಗೆ ಪಾವತಿಸಬೇಕಿರುವ ಒಟ್ಟು ಸಾಲ 72 ಸಾವಿರ ಕೋಟಿ ರೂಪಾಯಿ

ಮಿದುಳಿಗೆ ಲಕ್ಷ, ಕೋಟಿಯ ಗಣನೆ ಕಷ್ಟವಾಗಿರುವುದರಿಂದಲೇ, ಸೆಂಟಿಮೀಟರಿನ ಲಕ್ಷದಲ್ಲೊಂದಂಶ ಎಂದರೆ ಅದು ನಿರ್ಭಾವುಕವಾಗಿರುತ್ತದೆ. ಇಪ್ಪತ್ತು ನ್ಯಾನೋಮೀಟರು ಎಂದರೂ ಸುಮ್ಮನಿರುತ್ತದೆ. ಅದೊಂದು ಅನೂಹ್ಯ ಪ್ರಮಾಣ ಎಂದು ತಿಳಿಯುವುದಿಲ್ಲ. ಇಪ್ಪತ್ತು ಲಕ್ಷ ಎಂದರೂ ನಿರ್ಭಾವುಕವಾಗಿರುತ್ತದೆ. ಆದರೆ, ಅದನ್ನೇ ನಮ್ಮ ಬದುಕಿನ ಅಂಶವೆನ್ನಿಸಿದ ಸಂಬಳದಲ್ಲಿ ಹೋಲಿಸಿದರೆ, ಆಗ ಅದರ ಪ್ರಮಾಣವೆಷ್ಟು ಎನ್ನುವುದು ತಿಳಿಯುತ್ತದೆ. ಬಹುಶಃ ಅದಕ್ಕೇ ಇರಬೇಕು. ಎಷ್ಟೋ ಲಕ್ಷ ಕೋಟಿ ರೂಪಾಯಿಗಳ ಸಾಲ ಎಂದರೆ ನಮಗೆ ಏನೂ ಅನ್ನಿಸುವುದಿಲ್ಲ. ಗಣಿತವೇ ಹಾಗೆ. ಅತ್ಯಲ್ಪವೂ ನಮ್ಮ ಪರಿವಿಗೆ ನಿಲುಕದ್ದು. ಅತಿ ಬೃಹತ್ತೆನ್ನಿಸುವುದೂ ನಮ್ಮ ಅಳವಿಗೆ ಸಿಗದು. ಅದೇ ಅಷ್ಟು ಲಕ್ಷ ಕೋಟಿ ರೂಪಾಯಿಗಳನ್ನು ಎಷ್ಟು ಕೂಲಿಯಾಳುಗಳಿಗೆ ಎಷ್ಟು ತಿಂಗಳುಗಳಿಗೆ ಸಂಬಳವಾಗಿ ನೀಡಬಹುದು ಎಂದಾಗ ತಕ್ಷಣವೇ ಅದರ ಬೃಹತ್ ಪ್ರಮಾಣ ಅರ್ಥವಾಗುತ್ತದೆ. ಈ ಗಣಿತಪ್ರಜ್ಞೆ ಬರುವವರೆಗೂ ಶೇಕಡ 18ರಷ್ಟು ತೆರಿಗೆ, ಶೇಕಡ ನಲವತ್ತರಷ್ಟು ಕಡಿತ, ಒಂದು ಪರ್ಸೆಂಟ್ ಸೆಸ್, ಲಕ್ಷ ಕೋಟಿ ರೂಪಾಯಿ ಸಾಲ ಕೇವಲ ಅಂಕಿಗಳಾಗಿಯಷ್ಟೆ ಉಳಿದುಹೋಗುತ್ತವೆ; ಅದೇ ಕಾರಣಕ್ಕೆ ಅಂತಹ ವಿಷಯಗಳನ್ನು ಹೇಳುವ ಸುದ್ದಿಗಳು ನಗಣ್ಯವೆನ್ನಿಸುತ್ತವೆ.

ಮುಖ್ಯ ಚಿತ್ರ: ವಿಜಯ್ ಮಲ್ಯ; ಬ್ಯಾಂಕ್‌ಗಳಿಂದ ಒಂಬತ್ತು ಸಾವಿರ ಕೋಟಿ ಸಾಲ ಪಡೆದು ಪರಾರಿಯಾದವರು
ನಿಮಗೆ ಏನು ಅನ್ನಿಸ್ತು?
2 ವೋಟ್