ಕೂಡಲ ಸಂಗಮದ ದಿನಗಳು | ತುಂಬಿ ಹರಿಯುವ ಹೊಳೆ ತಂದ ನೆನಪುಗಳು... ಅವ್ವ, ಕಾಸು, ಮೀನು

ಹೊಳೆಗೆ ಬಟ್ಟೆ ತೊಳೆಯೋಕೆ ಹೋಗುವಾಗೆಲ್ಲ ಹತ್ತು ನಿಮಿಷದ ಹಾದಿ ಒಂದು ಗಂಟೆ ಆಗುತ್ತಿತ್ತು. ಕಾರಣ - ಓಣಿಗುಂಟ ಸಾಗುವಾಗ ಅವ್ವನಿಗೆ ಭೇಟಿಯಾಗುವ ಪರಿಚಯದವರ ಮಾತುಕತೆ. "ಯಾಕ ಬೇ ಕೆಲಸಾತಾ? ಮನಿ ಸಾರಿಸಿದ್ರೇನು? ಹೊಳಿಗೊಂಟಿಯೇನ್?" ಪ್ರಶ್ನೆಗಳಿಗೆಲ್ಲ ಸುದೀರ್ಘ ಮಾರುತ್ತರಗಳು ಮುಗಿದು ಹೊಳೆ ಮುಟ್ಟುವಷ್ಟರಲ್ಲಿ ಸೂರ್ಯ ನೆತ್ತಿ ಮೇಲೆ

ಕೂಡಲಸಂಗಮದ ಏಳನೇ ತರಗತಿಯವರೆಗೆ ನನ್ನ ಬಾಲ್ಯದ ಅನುಭವ, ನೆನಪುಗಳು ಎಂದೂ ಬತ್ತದ ನದಿಯಂತೆ ಸದಾ ತುಂಬಿ ಹರಿಯುತ್ತಿರುತ್ತವೆ. ಬಾಲ್ಯದ ಬಹುತೇಕ ಆಟಗಳನ್ನು ಆಡಿರುವುದು ದುರುಗಮ್ಮನ ದೇವಸ್ಥಾನ, ಬಸವಣ್ಣನ ಗುಡಿ ಹಾಗೂ ಕೂಡಲಸಂಗಮನ ದೇವಸ್ಥಾನದಲ್ಲಿ. ಕಪ್ಪಡಿ, ಕೂಡಲಸಂಗಮ ಎಂದೆನಿಸಿಕೊಳ್ಳುವ ನಮ್ಮೂರ ಕೃಷ್ಣ-ಮಲಪ್ರಭೆಯರ ವಿಹಂಗಮ ಸಂಗಮ  ನೋಡಲು ಎರಡು ಕಣ್ಣು ಸಾಲದು.

ನಾವು ಚಿಕ್ಕವರಿದ್ದಾಗ ರಂಜಾನ್, ಮೊಹರಮ್, ಹಿರಿಯರ ಹಬ್ಬ, ಕೂಡಲ ಸಂಗಮೇಶ್ವರ ಜಾತ್ರೆ ಬಂದಾಗ ಮನೆ ಸಾರಿಸಿ (ಸುಣ್ಣ ಬಳಿಯುವುದು), ಹಾಸಿಗೆ ತೊಳೆಯುವುದು ಊರಿನವರೆಲ್ಲರ ರೂಢಿ. ಹೀಗೆ ಮನೆಯೆಲ್ಲ ಸಾರಿಸಿದ ನಂತರ ಎಲ್ಲ ಹಾಸಿಗೆ, ಕೌದಿ, ರಗ್, ಜಮಖಾನೆ, ಬಟ್ಟೆ-ಬರೆ ಗಂಟು ಕಟ್ಟಿಕೊಂಡು ಅಪ್ಪ, ಅವ್ವ ಮತ್ತು ನನ್ನಿಬ್ಬರು ತಂಗಿಯರನ್ನು ಕರೆದುಕೊಂಡು ‘ಚಿಗೊಳ್ಳಿ’ (ಚಿಕ್ಕ ಹೊಳೆ-ಮಲಪ್ರಭೆ) ಕಡೆಗೆ ಹೋಗುತ್ತಿದ್ದೆವು.

Image

ಹೊಳಿ ಕಡೆ ಹೋಗುದಂದ್ರ ಹಬ್ಬ, ಈಗಿನ ಪಿಕ್‌ನಿಕ್ ತರಹ. ಒಂದ ವ್ಯತ್ಯಾಸವೆಂದರೆ ಈಗಿನ ಪಿಕ್‌ನಿಕ್‌ನ್ಯಾಗ ಬರೀ ಸುತ್ತಾಡಿ ಸೆಲ್ಫಿ ಹೊಡಕೊಂಡು, ಯಾವುದೋ ಹೋಟೆಲೊಂದರಲ್ಲಿ ಊಟ ಮಾಡಿ ಬರುತ್ತೇವೆ. ನಮ್ಮ ಹೊಳಿ ಪಿಕ್‌ನಿಕ್ ಹಾಗಲ್ಲ; ಹೊಳಿ ಕಡೆ ಹೋದಾಗ ದೊಡ್ಡ-ದೊಡ್ಡ ಕರಿಕಲ್ ಕಾಣತ್ತಿದ್ದವು. ನಮಗೆ ಅವುಗಳನ್ನು ನೋಡುವುದೇ ಅಚ್ಚರಿ ಮತ್ತು ಕುತೂಹಲ. ಈ ಕಪ್ಪನೆಯ ದೊಡ್ಡ-ದೊಡ್ಡ ಕಲ್ಲುಗಳಿಂದ ‘ಕಲ್+ಪಡಿ= 'ಕಪ್ಪಡಿ ಸಂಗಮ' ಎಂಬ ಹೆಸರು ಬಂದಿದೆ ಎಂದು ಓದಿದ ನೆನಪು. ದೂರದಿಂದ ನೋಡುವಾಗ ಶಾರ್ಕ್ ಮೀನೋ ಅಥವಾ ಭಯಂಕರ ಮೊಸಳೆಯೋ ಕಾಣುವಂತೆ ಭಾಸವಾಗುತ್ತಿದ್ದವು ಆ ಕಲ್ಲುಗಳು.

ಹೊಳೆಗೆ ಬಟ್ಟೆ ತೊಳೆಯೋಕೆ ಹೋಗೊದಂದ್ರ ಹತ್ತು ನಿಮಿಷದ ಹಾದಿ ಒಂದು ಗಂಟೆಯಾಗುತ್ತಿತ್ತು. ಕಾರಣವೆಂದರೆ, ಓಣಿಗುಂಟ ಸಾಗುವಾಗ ಅವ್ವನಿಗೆ ಭೇಟಿಯಾಗುವ ಪರಿಚಯದವರ ಮಾತುಕತೆ. "ಯಾಕ ಬೇ ಕೆಲಸಾತಾ? ಮನಿ ಸಾರಿಸಿದ್ರೇನು? ಹೊಳಿಗೊಂಟಿಯೆನ್?" ಅನ್ನೋ ಪ್ರಶ್ನೆಗೆ ಉತ್ತರ - ಬದುಕಿನ ಕತೆಯನ್ನೊಳಗೊಂಡ ಸುದೀರ್ಘ ಉತ್ತರವಾಗುತ್ತಿತ್ತು. ಹೊಳಿ ಮುಟ್ಟೋವರೆಗೂ ಕನಿಷ್ಠ ಐದಾರು ಜನರ ಭೇಟಿಯೊಂದಿಗೆ ಸೂರ್ಯ ನೆತ್ತಿ ಮೇಲೆ ಬರುತ್ತಿದ್ದಂತೆ ಹೊಳಿಗೆ ಬರುತ್ತಿದ್ದೆವು. ನಾವು ತಲುಪೋ ಮುಂಚೆನೇ ಅಪ್ಪ ಹೋಗಿರುತ್ತಿದ್ದರು. ಅಪ್ಪ, ಅವ್ವ ಬಟ್ಟೆಯನ್ನು ತೊಳೆದು ಕೊಟ್ಟ ನಂತರ ನದಿ ದಂಡೆಯಲ್ಲಿ ಒಣಗಿಸಲು ಹಾಕುವ ಜವಾಬ್ದಾರಿ ತಂಗಿ ಮತ್ತು ನನ್ನದು. ಬಟ್ಟೆಯೆಲ್ಲ ತೊಳೆದ ನಂತರ ಅಪ್ಪ-ಅವ್ವ ನಮ್ಮ ಕೈ-ಕಾಲು ತಿಕ್ಕುತ್ತಿದ್ದರು. ಅಲ್ಲಿಯೇ ಸಿಗುವ ಚೂಪು ಕಲ್ಲಿನಿಂದ ಕಾಲಿನಲ್ಲಿರುವ ಮಣ್ಣನ್ನು ತಿಕ್ಕುವಾಗ, ಉರಿಯಿಂದ "ಸಾಕು... ಸಾಕು," ಎಂದರೂ, "ಚುಪ್ ಬೇ... ಕೆತ್ತಾ ಮಟ್ಟಿ ಹೈ‌ ದೇಕ್ ಪಾಂವ ಮೇ... (ಮುಚ್ಚು ಬಾಯಿ... ಕಾಲಲ್ಲಿ ಎಷ್ಟೊಂದು ಮಣ್ಣಿದೆ ನೋಡು),” ಎಂದು ಜಬರಿಸುತ್ತಿದ್ದರು. ಕೈ-ಕಾಲು ತಿಕ್ಕಿದ ನಂತರ ಅಲ್ಲಿಯೇ ಸ್ನಾನ ಮಾಡಿಸುತಿದ್ದರು. ಆ ಸ್ನಾನಕ್ಕೆ ಮೈ-ಕೈ ಹಗುರಾದಂತೆ ಭಾಸವಾಗುತ್ತಿತ್ತು. ಆ ರಾತ್ರಿ ಕುಳಿತಲ್ಲಿಯೇ ನಿದ್ದೆಗೆ ಜಾರಿಬಿಡುತ್ತಿದ್ದೆವು. ಒಂದೆರೆಡು ದಿನ ಅಪ್ಪ-ಅಮ್ಮ ತಿಕ್ಕಿದ ಕೈ-ಕಾಲು ಮಿರಮಿರ ಮಿಂಚುತ್ತಿದ್ದವು. ಒಂದು ವಾರದ ನಂತರ ಮತ್ತೆ ಯಥಾಸ್ಥಿತಿ!

ಈ ಲೇಖನ ಓದಿದ್ದೀರಾ?: ಕೂಡಲ ಸಂಗಮದ ದಿನಗಳು | 'ತಮ್ಮಾ, ಮುಂದ ಹೇಳಲೇ... ಬರೀ ಹೇಳಿದ್ದ ಹೇಳ್ತಿಯಲ್ಲಾ, ಹುಚ್ಚಪ್ಯಾಲಿ'

ಇಷ್ಟೆಲ್ಲ ಆಗೋವರೆಗೆ ಹೊಟ್ಟೆ ಚುರುಗುಟ್ಟುತ್ತಿತ್ತು. ಎಲ್ಲ ಮುಗಿದ ಮೇಲೆ ಊಟ ಮಾಡುವುದೇ ಸಂಭ್ರಮ. ಕಟಗ ರೊಟ್ಟಿ, ಹಸಿಮೆಣಸಿನಕಾಯಿ ಚಟ್ನಿ, ಉಸುಳಿಕಾಳ ಪಲ್ಲೆ, ಹಸಿಮೆಣಸಿನಕಾಯಿ ಪಲ್ಲೆ, ಮೊಸರು, ಸೆಂಗಾ ಚಟ್ನಿ ಎಲ್ಲವನ್ನೂ ಅವ್ವ ಕಟ್ಟಿಕೊಂಡ ಬಂದ ಪುಟ್ಟಿ ಹೇಳಹೆಸರಿಲ್ಲದಂತೆಯೇ ಖಾಲಿಯಾಗಿರುತ್ತಿತ್ತು. ಹೊಳಿ ದಂಡೆಯೊಳಗೆ ಮಾಡಿರುವ ಊಟ ನನ್ನ ಜೀವನದ ಶ್ರೇಷ್ಠ ಊಟ. ಅದೆಂತ ಹಸಿವು! ಇದ್ದುದೆಲ್ಲವೂ ಮೃಷ್ಟಾನ್ನ ಭೋಜನ.

ಕೂಡಲ ಸಂಗಮದ ನದಿಗಳೊಡನೆ ನನಗಿರುವ ಮತ್ತೊಂದು ನಂಟಿನ ವಿಷಯ ಮೀನು ಹಿಡಿಯುವುದು. ಮೀನು ಹಿಡಿಯಲು ನಮ್ಮ ಓಣಿಯಲ್ಲಿ ಮುಸ್ತಾಕ್, ಅನಗವಾಡಿ ಸಂಗಪ್ಪ, ಮಲ್ಲಪ್ಪ ನಿಸ್ಸೀಮರು. ಮೀನು ಹಿಡಿಯುವುದು ಆಗ ಹವ್ಯಾಸ, ಮನರಂಜನೆ ಎಂದೆನಿಸದೆ, ಸಂಜೆ ಊಟಕ್ಕೆ ಒಂದು ದಾರಿಯೂ ಆಗಿತ್ತು. ಮಧ್ಯಾಹ್ನ ಮೂರರಿಂದ ಆರು ಗಂಟೆಯ ಅವಧಿಯಲ್ಲಿ ಮೀನು ಹೆಚ್ಚಾಗಿ ಗಾಳಕ್ಕೆ ಬೀಳುತ್ತವೆ ಎಂದು ನುರಿತವರು ಹೇಳುತ್ತಿದ್ದರು.

Image

ಮೀನು ಹಿಡಿಯೋ ಮುಂಚಿನ ತಯಾರಿ ವಿಶಿಷ್ಟ. ಮೊದಲು ಸಣ್ಣ, ದೊಡ್ಡ ಗಾಳ ತರುತ್ತಿದ್ದೆವು. ಅದಕ್ಕೆ ಮೀನುದಾರ ಇಲ್ಲವೇ ಜಾಳಿಗೆ ಖರೀದಿಸಿ, ಉದ್ದನೆಯ ಕಟ್ಟಿಗೆಗೆ ಕಟ್ಟಿ ತಯಾರಿ ಮಾಡಿಕೊಂಡರೆ ಮೀನು ಹಿಡಿಯುವ ಅಸ್ತ್ರ  ಮುಗಿಯಿತು. ಮೀನುಗಳನ್ನು ಗಾಳಕ್ಕೆ ಬೀಳಿಸಲು ಎರಡು ರೀತಿಯ ತಯಾರಿ ಇರುತ್ತಿತ್ತು. ಮೊದಲನೆಯದು, ಮನೆಯಲ್ಲಿ ಸಿಗುವ ಜೋಳದ ಹಿಟ್ಟಿನ ಉಂಡೆ; ಎರಡನೆಯದು, ಮಳಿಹುಳ. ಸ್ವಲ್ಪ ರಜ್ಜು ಇರುವ ಕಡೆ ಹೋಗಿ ಸ್ವಲ್ಪ ಆಳ ತೋಡಿದಾಗ ಬಹಳಷ್ಟು ಮಳಿಹುಳ ಸಿಗುತ್ತಿದ್ದವು. ಮೊದಲು ಮಳಿಹುಳಗಳನ್ನು (ಕೇಚವಾ) ಒಂದು ಪ್ಲಾಸ್ಟಿಕ್ ಬ್ಯಾಗಲ್ಲಿ ಸಂಗ್ರಹಿಸಿ ಅದರೊಂದಿಗೆ ಹಿಟ್ಟನ್ನು ಇಟ್ಟುಕೊಂಡು ಹೋಗುತ್ತಿದ್ದೆವು.

ನಾನು ಗಮನಿಸಿದಂತೆ, ಮಳಿಹುಳಗಳನ್ನು ಗಾಳಕ್ಕೆ ಸೇರಿಸಿ ನೀರಿನಲ್ಲಿ ಎಸೆದಾಗ ಅದನ್ನು ತಿನ್ನುವಾಸೆಗೆ ಜಾಸ್ತಿ ಮೀನುಗಳು ಗಾಳಕ್ಕೆ ಬಿದ್ದುದುಂಟು. ಒಮ್ಮೆ ಹೀಗಾಯಿತು... ‘ಮುಸ್ತಾಕ್ ಮತ್ತು ಮಲ್ಲಪ್ಪ ಮೀನು ಹಿಡಿಯುತ್ತ 'ಕೂಡಲಮುಖಿ' (ಕೂಡಲಸಂಗಮ - ಬಸವಣ್ಣನವರ ಐಕ್ಯಸ್ಥಾನದ ಕಟ್ಟಡ) ಬಳಿ ಕುಳಿತಾಗ ಗಾಳ ಹಿಂದೆ-ಮುಂದೆ ಸರಿಯತೊಡಗಿ, ಮೀನು ಬೀಳುವ ಮುನ್ಸೂಚನೆ ಸಿಕ್ಕಿತ್ತು. ಸಡಿಲ ಬಿಟ್ಟು ಗಾಳ ಎಳೆದು ದಡಕ್ಕೆ ಹಾಕಿದಾಗ ನಾವೆಲ್ಲ ಗಾಬರಿಯಾದೆವು. ಸಿಕ್ಕಿದ್ದು ಮೀನೆಂದುಕೊಂಡರೆ, ದೊಡ್ಡದಾದ ಕೆರೆ ಹಾವು! ಗಾಳಕ್ಕೆ ಸಿಲುಕಿತ್ತು. ಯಪ್ಪೋ... ಎಲ್ಲರೂ ದಿಕ್ಕಾಪಾಲು! ಕೊನೆಗೆ ಮುಸ್ತಾಕ ಬಯ್ಯಾ ಅದನ್ನು ತೆಗೆದು ಹೊಳೆಯಲ್ಲಿಯೇ ಬಿಟ್ಟ. ಹೀಗೆ, ಮೀನು ಹಿಡಿಯುವಾಗ ಅದೆಷ್ಟೋ ಹಾಸ್ಯ ಪ್ರಸಂಗಗಳು. ಈಗ ನೆನಪಾದರೆ ಖುಷಿಯ ಕಟ್ಟೆಯೊಡೆಯುತ್ತದೆ.

Image

ಬೇಸಿಗೆ ಕಾಲದಲ್ಲಿ ನದಿಯ ನೀರು ಇಳಿದಾಗ ಬರೀ ರಜ್ಜು ಇರುತ್ತಿತ್ತು (ಈಗಲೂ ಇರುತ್ತದೆ). ಆ ಸಮಯದಲ್ಲಂತೂ ನನ್ನೂರಿನ, ನನ್ನೋರಿಗೆಯ ವಿದ್ಯಾರ್ಥಿಗಳು, ಶಾಲೆ ಬಿಟ್ಟವರು ಅಲ್ಲಿ ರೊಕ್ಕ ಹುಡುಕುತ್ತಿದ್ದರು! ಏನಿದು ರೊಕ್ಕಾ ಹುಡುಕೋದು ಅಂದ್ರಾ? ಹೇಳ್ತೀನಿ ಕೇಳಿ...

ಪವಿತ್ರ ನದಿಗಳ ಸಂಗಮ ಕೂಡಲಸಂಗಮ. ಇಲ್ಲಿಗೆ ಭೇಟಿ ನೀಡುವ ಜನರು ಭಕ್ತಿಪೂರ್ವಕವಾಗಿ ಕಾಸನ್ನು ನದಿಯಲ್ಲಿ ಬಿಸಾಕುತ್ತಿದ್ದರು. ವರ್ಷಪೂರ್ತಿ ಎಸೆದಿರುವ ನಾಣ್ಯಗಳು ಕಲ್ಲಿನ ಪಡಿಯಲ್ಲಿ, ನದಿಯ ಮೆಟ್ಟಿಲು ಸಂದಿಯಲ್ಲಿ ಸಿಲುಕಿರುತ್ತಿದ್ದವು. ನದಿ ಇಳಿದಾಗ ಕಲ್ಲುಪಡಿಯಲ್ಲಿ ಕೈ ಬೆರಳುಗಳನ್ನು ಹಾಕಿ ಒಂದು ರೂಪಾಯಿ, ಎಂಟಾಣೆ, ನಾಲ್ಕಾಣೆ, ಇಪ್ಪತ್ತು ಪೈಸೆ ನಾಣ್ಯಗಳನ್ನು ಹುಡುಕುತ್ತಿದ್ದೆವು. ಒಬ್ಬೊಬ್ಬರಂತೂ ದಿನಪೂರ್ತಿ ರೊಕ್ಕ ಹುಡುಕಿ ಸಂಜೆಗೆ ತಿಂಡಿಗೆ ಆಗುವಷ್ಟು ಅನುಕೂಲ ಮಾಡಿಕೊಳ್ಳುತ್ತಿದ್ದರು. ಒಮ್ಮೊಮ್ಮೆ ಹೀಗೆ ಕಲ್ಲುಗಳ ಸಂದಿಯಲ್ಲಿ ರೊಕ್ಕ ಹುಡುಕುವಾಗ ಏಡಿ, ಚೇಳು ಕಡಿಸಿಕೊಂಡು ಒದ್ದಾಡಿದ್ದೂ ಉಂಟು. ಏಡಿ ಹಿಡಿದಾಗ ಬಿಡಿಸೋಕೆ ಏಳೂರಿನ ಗೌಡರೇ ಬರಬೇಕೆಂದು ನಂಬಿದ್ದೂ ಉಂಟು. ಮನೆಗೆ ಕೆಲವೊಮ್ಮೆ ಲೇಟಾಗಿ ಬಂದಾಗ, "ಹೊಳಿಗೆ ರೊಕ್ಕಾ ಹುಡುಕಾಕ್ ಉಡಾಳ್ ಹುಡ್ರ ಜೊತೆ ಹೋಗಿಯೇನು? ಏನರ ಕಡದ್ರ ಏನ್ ಗತಿ!" ಅಂತ ಅವ್ವ ಕೆನ್ನೆಗೆ ಬಾರಿಸಿದ್ದೂ ಉಂಟು.

ಈ ಲೇಖನ ಓದಿದ್ದೀರಾ?: ಕೂಡಲ ಸಂಗಮದ ದಿನಗಳು | ನಮ್ಮೂರಿಗೆ ಲಾಡಪ್ಪನ ಹೋಟೆಲ್ಲೇ ಸ್ಟಾರ್ ಹೋಟೆಲ್ಲು

ಕೂಡಲ ಸಂಗಮದ ಬಾಲ್ಯದ ದಿನಗಳಲ್ಲಿ ನದಿಯ ಪ್ರಭಾವ, ಅದರೊಂದಿಗಿನ ಒಡನಾಟ ಎಂದಿಗೂ ಮರೆಯುವಂಥದ್ದಲ್ಲ. ಇಂದಿಗೂ ನನ್ನೂರಿನ ಹೊಳೆ ತುಂಬಿ ಹರಿಯುತ್ತದೆ, ಉಕ್ಕುತ್ತದೆ. ಏನೇ ಆದರೂ ಅದು ನಮ್ಮ ಜೀವನಾಡಿ, ನಮ್ಮ ಸಂಸ್ಕೃತಿಯ ಪ್ರತೀಕ. ಬಾಲ್ಯದ ದಿನಗಳಲ್ಲಿ ಬೇಸಿಗೆಯಲ್ಲಿ ಹೊಳೆಯಲ್ಲಿ ಈಜಾಡುವುದು, ದಿನಕ್ಕೆ ನಾಲ್ಕೈದು ಬಾರಿ ಸ್ನಾನ ಮಾಡುತ್ತಿದ್ದುದು ಮಾಮೂಲಿ. ಹೊಳೆ ಎಂಬುದು ನಮಗೆ ಹುಡುಗಾಟವಾಗಿತ್ತು. ಆದರೆ, ಹಲವರಿಗೆ ಬದುಕಿನ ಹುಡುಕಾಟದ ನೆಲೆಯಾಗಿತ್ತು.

ನಿಮಗೆ ಏನು ಅನ್ನಿಸ್ತು?
5 ವೋಟ್