ಪಕ್ಷಿನೋಟ | ಅಂದು ರಾತ್ರಿ ಕೆರೆ ಬದಿಯ ಟಿಟ್ಟಿಣದ ಮೊಟ್ಟೆ ಕಬಳಿಸಿದ್ದು ಯಾರು?

Lapwing Bird 1

ಮನೆ ಮುಂದಿನ ಬೇಲಿಯಲ್ಲಿ ಏನೋ ಕೊಸರಾಡುತ್ತಿತ್ತು. ಸ್ವಲ್ಪ ಹೊತ್ತಿನ ನಂತರ, ಹೆಬ್ಬಾವಿನ ಗಾತ್ರದ ಕೊಳಕು ಮಂಡಲವೊಂದು ಧ್ಯಾನಸ್ಥ ರೀತಿಯಲ್ಲಿ ಕೆರೆಯತ್ತ ತೆವಳುವುದು ಕಂಡು, ಸುಮ್ಮನೆ ನೋಡತೊಡಗಿದೆವು. ಅದರ ಪಯಣ ನಾವು ಬೆಳಗ್ಗೆ ಕಂಡಿದ್ದ ಟಿಟ್ಟಿಣದ ಗುಡ್ಡೆಯ ಕಡೆಗೇ ಇದ್ದಂತೆ ನಮಗೆ ಅನ್ನಿಸಿ, ಟಿಟ್ಟಿಣಕ್ಕಿಯ ಜೋಡಿ ನೆನಪಾಗತೊಡಗಿತು

ಸಿದ್ದರಾಮ ಬೆಟ್ಟದ ಬುಡದಲ್ಲಿ ನಿಂತು ಸೂರ್ಯಾಸ್ತವನ್ನು ಕಂಡು ಹಿಂತಿರುಗುವಾಗ ಕತ್ತಲು ಆವರಿಸಿಕೊಳ್ಳುತ್ತಿತ್ತು. ಇನ್ನೇನು ಗಾಡಿಯ ಬೆಳಕು ಹೊತ್ತಿಸಬೇಕು, ಅಷ್ಟರಲ್ಲಿ ನಾಯಿ ಜಾತಿಯ ಯಾವುದೋ ಪ್ರಾಣಿ ಪೊದೆಗಳ ಹಿಂದಿನಿಂದ ರಸ್ತೆಗೆ ಅಡ್ಡ ಬಂದು ನಿಂತಂತಾಯಿತು. ಬೆಳಕು ಹೊತ್ತಿಸದೆ ಗಾಡಿ ನಿಲ್ಲಿಸಿದೆ. ಪೊದೆಯಂತಿರುವ ಬಾಲವನ್ನೂ ಸೀಳು ಮೂತಿಯನ್ನೂ ಹೊಂದಿದ ಇದು 'ಕಪ್ಪಲ್ ನರಿ' ಎಂದು ಗೊತ್ತಾಯಿತು.

Eedina App

ಈ ಕಪ್ಪಲ್ ನರಿಗಳು ಬೆಳಗಿನ ಸಮಯದಲ್ಲಿ ಎಲ್ಲಾದರೂ ಪೊದೆಗಳಲ್ಲಿ ಮಲಗಿ ವಿಶ್ರಾಂತಿ ಪಡೆದು, ಸಂಜೆಯ ನಂತರ ಸಕ್ರಿಯವಾಗುತ್ತವೆ. ಆದರೆ, ನಾವು ನಿಂತಿದ್ದು ಅದಕ್ಕೆ ಅರಿವಾದ್ದರಿಂದ, ನಮ್ಮಿಂದ ದೂರವಾಗಲು ಬಂದ ದಾರಿ ವಾಪಸು ಹಿಡಿದು ನಡೆಯತೊಡಗಿತು. ಹಾಗೆ ನೋಡಿದರೆ, ಊರುಗಳ ಹತ್ತಿರವೇ ಕಾಣಿಸುತ್ತಿದ್ದ ಈ ಕಪ್ಪಲ್ ನರಿಗಳು, ಊರಿನಿಂದ ದೂರ ಹೋಗಿ ಬೆಟ್ಟದ ಬುಡದ, ಹೊಲಗಳ ಬಳಿ ಇರುವ ಹುಲ್ಲುಗಾವಲುಗಳನ್ನು ಸೇರಿವೆ. ಹುಲ್ಲುಗಾವಲು ಎಂದೊಡನೆ ಎಲ್ಲಿಯೋ ಹೋಗಬೇಕಿಲ್ಲ; ನಮ್ಮ ಬೆಟ್ಟದ ಬುಡಗಳಲ್ಲಿ, ಗೋಮಾಳಗಳಲ್ಲಿ, ಮರಗಳು ಬೆಳೆಯದೆ ಇರುವ ಜಾಗಗಳಲ್ಲಿ ಹುಲ್ಲು ಬೆಳೆದು ವಿಶಿಷ್ಟ ಆವಾಸ ಸ್ಥಾನ ನಿರ್ಮಾಣವಾಗಿರುತ್ತದೆ.

ಅಲ್ಲಿಂದ ಮುಂದೆ ಹೊರಟು ಊರಬಡ್ಡೆಯಲ್ಲೇ ಇರುವ ಕೆರೆ ತಲುಪಿದಾಗ ಕತ್ತಲಾಗಿತ್ತು. ಬೆಳಕು ಹೊತ್ತಿಸಿ, ಕೆರೆಯಲ್ಲಿ ಸೀಳಿದ ದಾರಿಗಳನ್ನು ಹಿಡಿದು ಹೊರಟವರಿಗೆ, ಗಾಡಿ ಬೆಳಕಿಗೆ ಟಿಟ್ಟಿಣವೊಂದು ಬದಿಯಲ್ಲಿ ಕೂತಿರುವುದು ಕಂಡಿತು. ನಿಂತು ಗಮನಿಸಿದವರಿಗೆ, ಮಬ್ಬು ಗತ್ತಲಿನಲ್ಲಿ ಇನ್ನೆಂಥದೋ ಪ್ರಾಣಿ ನಡೆಯುತ್ತಿರುವುದು ಕಾಣಿಸಿ ದಿಟ್ಟಿಸಿ ನೋಡತೊಡಗಿದೆವು. ಯಾವ ಪ್ರಾಣಿ ಎಂದು ಅರಿವಾಗಲಿಲ್ಲ. ಆದರೆ, ಇತ್ತ ಟಿಟ್ಟಿಣ ಮಾತ್ರ ಗಲಾಟೆ ಎಬ್ಬಿಸಲು ಶುರುವಾಯಿತು.

AV Eye Hospital ad
Lapwing Bird 4

ಟಿಟ್ಟಿಣಗಳು ಎಂದೊಡನೆ ಹಲವು ಕತೆಗಳು ನೆನಪಾಗುತ್ತವೆ. ಮಧುಗಿರಿಯ ಬೆಟ್ಟದ ಬುಡದಲ್ಲಿ ಇರುವ ಹಲವು ಊರುಗಳಲ್ಲಿ ಸಂಜೆಯಾದೊಡನೆ ಟಿಟ್ಟಿಣನ ಕೂಗು ಕೇಳಿತೆಂದರೆ, ಎಲ್ಲರೂ ಮನೆ ಸೇರುವ ಹೊತ್ತು ಎಂದೇ ಅರ್ಥ ಮಾಡಿಕೊಳ್ಳುತ್ತಿದ್ದರಂತೆ. ಅಂದರೆ, ಕರಡಿಗಳು ಗುಹೆಯಿಂದ ಹೊರಬಿದ್ದೊಡನೆ ಈ ಟಿಟ್ಟಿಣಗಳ ಗಲಾಟೆ ಶುರುವಾಗುತ್ತಿತ್ತಂತೆ.

ಹಲವು ಪಕ್ಷಿಗಳು ಮರ-ಗಿಡಗಳಲ್ಲಿ ಗೂಡು ಕಟ್ಟಿ ಮರಿ ಮಾಡಿದರೆ, ಈ ಟಿಟ್ಟಿಣಗಳು ನೆಲದಲ್ಲೇ ವಿಶಿಷ್ಟ ರೀತಿಯಲ್ಲಿ ಗೂಡು ಮಾಡಿ ಮರಿ ಮಾಡುತ್ತವೆ. ಮೊದಲಿಗೆ ನೆಲದಲ್ಲಿ ಹತ್ತಾರು ಕಲ್ಲುಗಳನ್ನು ಒಂದೆಡೆ ಸೇರಿಸುತ್ತವೆ. ಅದೇ ಕಲ್ಲುಗಳ ಮಧ್ಯೆ ನಾಲ್ಕು ಮೊಟ್ಟೆ ಇಡುತ್ತವೆ. ನೀವು ಆ ಸ್ಥಳದಿಂದ ಅಡಿ ದೂರದಲ್ಲೇ ಇದ್ದರೂ ಮೊಟ್ಟೆಗಳನ್ನು ಸುಲಭಕ್ಕೆ ಗುರುತಿಸಲಾರಿರಿ. ಮೊಟ್ಟೆಗಳು ಥೇಟ್ ಕಲ್ಲಿನಂತೆ ಇದ್ದು, ಗುರುತು ಸಿಗುವುದೇ ಇಲ್ಲ.

ಮೊಟ್ಟೆ ಇಟ್ಟ ಮೇಲೆ ಅವುಗಳನ್ನು ಕಾಯಲು ನಾನಾ ರೀತಿಯ ತಂತ್ರಗಳನ್ನು ಹೆಣೆಯುವುದು ಇವುಗಳ ವಿಶೇಷಗಳಲ್ಲಿ ಒಂದು. ಒಮ್ಮೆ ಎಲ್ಲಾದರೂ ಮೊಟ್ಟೆ ಇಟ್ಟರೆ, ಒಂದು ಕಾವು ಕೊಡುತ್ತದೆ, ಮತ್ತೊಂದು ಹಕ್ಕಿ ಸದಾ ಎಚ್ಚರವಾಗಿ ಕಾವಲು ಕಾಯುತ್ತಿರುತ್ತದೆ. ನೀವು ಅವುಗಳ ಪ್ರದೇಶ ತಲುಪುತ್ತಿದ್ದಂತೆ, "ಟೀವ್... ಟೀವ್..." ಎಂದು ಬೇರೆ ಜಾಗದಲ್ಲಿ ನಿಂತು ಕೂಗಿ, ನಿಮ್ಮ ದಾರಿ ತಪ್ಪಿಸಲು ಪ್ರಯತ್ನಿಸುತ್ತವೆ. ಆಕಸ್ಮಾತ್ ತಿಳಿಯದೆ ನೀವು ಗೂಡಿನ ಹತ್ತಿರ ಹೋದರೆ, ನಿಮ್ಮ ತಲೆ ಮೇಲೆಯೇ ಬಂದು ಹೆದರಿಸಿ ಓಡಿಸಲು ಪ್ರಯತ್ನಿಸುತ್ತವೆ. ಇದೇ ಕಾರಣದಿಂದ ಇವುಗಳ ವಿಚಾರವಾಗಿ ಹಲವು ಕತೆಗಳು ಹುಟ್ಟಿಕೊಂಡಿವೆ.

Lapwing Bird 2

ಇವುಗಳ ಕೂಗನ್ನು ಈ ಕೆಳಗಿನ ರೀತಿಯಲ್ಲಿ ನಮ್ಮ ಜನರು ಅರ್ಥ ಮಾಡಿಕೊಂಡಿರುವುದು ವಿಶೇಷ. "ಮೊಟ್ಟೆ ತಿಂದೋರ್ ಹೊಟ್ಟೆ ಕುಯ್ಯ, ಮೊಟ್ಟೆ ತಿಂದೋರ್ ಹೊಟ್ಟೆ ಕುಯ್ಯ," ಎಂದು ಅವುಗಳ ಕೂಗಿನ ಜೊತೆಯೇ ಹಾಡುವುದು ಒಂದಾದರೆ, ನಮ್ಮ ಹೊಲಗಳಲ್ಲಿ ಅವುಗಳು ಮೊಟ್ಟೆ ಇಡುವುದನ್ನು ಹೀಗೆ ದಾಖಲಿಸಿದ್ದಾರೆ: "ಹಾರಕದ ಹೊಲದಲ್ಲಿ ಆರ್ ಮೊಟ್ಟೆ ಇಟ್ಟಿದ್ದೆ, ಮೊಟ್ಟೆ ತಿಂದೋರ್ ಹೊಟ್ಟೆ ಕುಯ್ಯ."

ಟೀವ್ ಟಿಕ್ಕಾ, ಟಿಟ್ಟಿಭ, ಟಿಟ್ಟಿವ, ಟಿಟ್ಟಿಣಕ್ಕಿ, ಹುಟ್ಟುಟ್ರೆ ಹಕ್ಕಿ, ತೇನೆ ಹಕ್ಕಿ, ಥೇನೆ ಹಕ್ಕಿ, ಇಟೀರಿ (ತುಳು), ಗಲ್ಯಾಟಕ್ಕಿ, ಕೊರವನ ಕಾಗಿ, ಚೀಣಕ್ಕಿ,ತಿಥಿರಿ (ಹಿಂದಿ), Lapwing (ಇಂಗ್ಲೀಷ್) ಎಂದೆಲ್ಲ ಹಲವು ಪ್ರದೇಶಗಳಲ್ಲಿ ಹಲವು ಹೆಸರುಗಳು ಇದೆ. ಇದು, ಈ ಹಕ್ಕಿಯ ಪ್ರಾಮುಖ್ಯತೆ ಮತ್ತು ಮಾನವರ ಸಂಬಂಧದ ಆಳವನ್ನು ಎತ್ತಿಹಿಡಿಯುತ್ತದೆ.

ಈ ಲೇಖನ ಓದಿದ್ದೀರಾ?: ಪಕ್ಷಿನೋಟ | ಮಡಿವಾಳದ ಮುದ್ದು ಸಂಸಾರ ಮತ್ತು ಹುಲ್ಲುಹಾವು

ಅಲ್ಲಿಂದ ಮನೆಗೆ ಬಂದ ನಂತರವೂ ಈ ಟಿಟ್ಟಿಣಗಳ ಗಲಾಟೆ ನಡೆಯುತ್ತಿದ್ದುದು ಕೇಳಿಸುತ್ತಿತ್ತು. ಈಗ ನಮ್ಮ ಸ್ಥಳೀಯ ನೆಲಹಕ್ಕಿಗಳ ವಂಶಾಭಿವೃದ್ಧಿ ಸಮಯವಾದ್ದರಿಂದ, ಬೆಳಗ್ಗೆ ಎದ್ದವರೇ ಟಿಟ್ಟಿಣಗಳ ಗುರುತು ಹುಡುಕಿ, ಕೆರೆಯ ಮಧ್ಯದಾರಿಯಲ್ಲಿ ನಡೆದು ಸಾಗಿದೆವು. ದೂರದಲ್ಲಿ ಎರಡು ಟಿಟ್ಟಿಣ ನಿಂತಿರುವುದು ಕಂಡು, ಅಲ್ಲಿಯೇ ಗಮನಿಸುತ್ತ ನಿಂತವರಿಗೆ, ಸ್ವಲ್ಪ ಹೊತ್ತಿನ ನಂತರ ಕೆರೆಯ ನೀರಿನ ಮಧ್ಯೆ ಎತ್ತರದ ಗುಡ್ಡೆಯೊಂದರ ಮೇಲೆ ಒಂದು ಹಕ್ಕಿ ಹೋಗಿ ಕುಳಿತಿದ್ದು ಕಂಡಿತು. ಅಲ್ಲಿ ಗೂಡಿರಬಹುದು ಎಂದು ಅನುಮಾನಿಸಿ, ಅಲುಗಾಡದೆ ಪೊದೆಯೊಂದರ ಮರೆಯಲ್ಲಿ ನಾವೂ ಕುಳಿತೆವು.

ಇತ್ತ ಊರಿನ ಬೀದಿ ನಾಯಿಯೊಂದು ಕೆರೆಯಲ್ಲಿ ಗಸ್ತು ತಿರುಗುತ್ತಿರುವುದು ಕಾಣಿಸಿತು. ಅಂದರೆ, ಈ ನಾಯಿಗಳು ನೆಲದಲ್ಲಿ ಮೊಟ್ಟೆ ಇಡುವ ಅನೇಕ ಹಕ್ಕಿಗಳ ಗೂಡುಗಳನ್ನು ಹುಡುಕಿ, ಮೊಟ್ಟೆ ಕದಿಯುವ ಸಾಹಸದಲ್ಲಿ ದಿನವಿಡೀ ಊರು, ಕೆರೆ ಸುತ್ತುತ್ತಿರುತ್ತವೆ. ಈ ಅಪಾಯವನ್ನು ನಮಗಿಂತ ಮುಂಚೆಯೇ ಈ ಟಿಟ್ಟಿಣಕ್ಕಿಗಳು ಗಮನಿಸಿದ್ದವು. ಈ ನಾಯಿ ಟಿಟ್ಟಿಣದ ಮೊಟ್ಟೆಯಿದ್ದ ಗುಡ್ಡೆಯ ಆಸುಪಾಸಿಗೆ ಮೂಸುತ್ತ ಹೋಗುತ್ತಿದ್ದಂತೆ, ಎರಡೂ ಹಕ್ಕಿಗಳು ನಾಯಿಯ ಮೇಲೆ ಆಕ್ರಮಣ ಮಾಡಿ ಹೆದರಿಸಲು ಶುರು ಮಾಡಿದವು. ಆ ಕೂಗಾಟ ಅದೆಷ್ಟು ತೀವ್ರವಾಗಿತ್ತೆಂದರೆ, ಅಲ್ಲೊಂದು ಜೋರು ಜಗಳವೇ ನಡೆದಂತಿತ್ತು. ಆ ನಾಯಿ ಇನ್ನೇನು ಆ ಗುಡ್ಡೆ ಹತ್ತಬೇಕು, ಆಗ ಒಂದು ಟಿಟ್ಟಿಣಕ್ಕೆ ಪಿತ್ತ ನೆತ್ತಿಗೇರಿರಬೇಕು, ಹಾರಿದ್ದೇ ಆ ನಾಯಿಯ ತಲೆಗೆ ರಪ್ಪನೆ ಬಡಿಯಿತು. ಈ ದಾಳಿಗೆ ನಾಯಿಯ ಜಂಘಾಬಲವೇ ಉಡುಗಿದಂತಾಗಿ, ಬಾಲ ಮುದುರಿ ಬಂದ ದಾರಿ ಹಿಡಿದು ವಾಪಾಸಾಗುತ್ತಿದ್ದರೆ, ಇತ್ತ ನಮ್ಮ ಎದೆ ಬಡಿದುಕೊಳ್ಳುತ್ತಿತ್ತು. ಹಕ್ಕಿಗಳು ತಮ್ಮ ಮೊಟ್ಟೆ-ಮರಿಗಳ ರಕ್ಷಣೆ ಬಂದರೆ ಎಂತಹ ತ್ಯಾಗಕ್ಕೂ, ಯುದ್ಧಕ್ಕೂ ಸಿದ್ಧವಾಗಿಬಿಡುತ್ತವೆ ಎಂಬುದನ್ನು ಕಣ್ಣಾರೆ ಕಂಡಿದ್ದೆವು.

Lapwing Bird 8

ಇದೆಲ್ಲವನ್ನೂ ಗಮನಿಸುವಾಗ, ದೂರದಿಂದಲೇ ನಮ್ಮ ಟೆಲಿಸ್ಕೋಪ್ ಲೆನ್ಸಿನ ಸಹಾಯದಿಂದ ನಾಲ್ಕು ಮೊಟ್ಟೆ ಇರುವುದು ಗುರುತಿಸಿ, ಹತ್ತಿರ ಹೋದರೆ ನಮಗೂ ನಾಯಿಯ ಗತಿಯಾಗಬಹುದು ಎಂಬುದನ್ನು ಅರಿತು ಮನೆ ಕಡೆ ವಾಪಾಸಾದೆವು. ಅಂದು ಸಂಜೆ ಮನೆಯ ಮುಂದೆ ಕುಳಿತಾಗ, ಕೆರೆಯ ಮಧ್ಯದಿಂದ ವಿಚಿತ್ರವಾಗಿ ಗಾಳಿ ಬೀಸುತ್ತ, ಸುಯ್ಯೆಂಬ ಸದ್ದು ಕೇಳಿಸುತ್ತಿತ್ತು. ಮಳೆ ಬರುವ ಮುನ್ಸೂಚನೆಗಳು ಕಾಣುತ್ತಿದ್ದವು. ಇದ್ದಕಿದ್ದಂತೆ ಕೆರೆಯಿಂದ ನಾಲ್ಕೈದು ನರಿಗಳು ಮಕ್ಕಳಂತೆ ಅಳಲು ಶುರು ಮಾಡಿಕೊಂಡವು. ಇನ್ನು ನರಿಗಳಿಗೆ ಟಿಟ್ಟಿಣದ ಮೊಟ್ಟೆ ಸಿಕ್ಕರೆ ಅಂದು ಅವುಗಳು ಸಂತೃಪ್ತ. 

ಇತ್ತ, ಮನೆ ಮುಂದಿನ ಬೇಲಿಯಲ್ಲಿ ಏನೋ ಕೊಸರಾಡುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ಅದೇ ಬೇಲಿಯಿಂದ ಮೆಲ್ಲನೆ ಹೆಬ್ಬಾವಿನ ಗಾತ್ರದ ಕೊಳಕು ಮಂಡಲವೊಂದು ಧ್ಯಾನಸ್ಥ ರೀತಿಯಲ್ಲಿ ಕೆರೆಯತ್ತ ತೆವಳುವುದು ಕಂಡು, ಸುಮ್ಮನೆ ನೋಡತೊಡಗಿದೆವು. ಅದರ ಪಯಣ ನಾವು ಬೆಳಗ್ಗೆ ಕಂಡಿದ್ದ ಟಿಟ್ಟಿಣದ ಗುಡ್ಡೆಯ ಕಡೆಗೇ ಇದ್ದಂತೆ ನಮಗೆ ಅನಿಸುತ್ತಿತ್ತು. ಇಂದು ಕೆರೆಯಲ್ಲಿ ಒಂದು ಬೇಟೆ ನಡೆಯಲಿದೆ ಎಂದೆನಿಸಿ, ಟಿಟ್ಟಿಣಕ್ಕಿಯ ಜೋಡಿ ಪದೇ-ಪದೆ ನೆನಪಾಗತೊಡಗಿತು. ಅಷ್ಟರಲ್ಲಿ ಕೆರೆಯಿಂದ, "ಟೀವ್... ಟೀವ್..." ಸದ್ದಿನ ಎಚ್ಚರಿಕೆ ಗಂಟೆ ಜೋರಾಗಿ ಕೇಳಿಸತೊಡಗಿತು. ಅಂದರೆ, ಈಗ ಟಿಟ್ಟಿಣಕ್ಕಿಗಳು ಗಾಬರಿಯಾಗಿವೆ ಎಂದಾಯ್ತು.

ಒಂದು ಆವಾಸಸ್ಥಾನ ಎಂದ ಮೇಲೆ ಹಲವು ಜೀವಿಗಳು ಬದುಕುತ್ತವೆ. ಸದಾ ಎಚ್ಚರದಿಂದ ಬದುಕುವ ಈ ಟಿಟ್ಟಿಣಕ್ಕಿಗಳ ಕೂಗನ್ನು ಹಲವು ಜೀವಿಗಳು ಎಚ್ಚರಿಕೆ ಎಂದೇ ಪರಿಗಣಿಸಿ, ತಾವು ಹುಷಾರಾಗುತ್ತವೆ. ಇವುಗಳ ಇಂದಿನ ಕಲರವಕ್ಕೆ ಈ ಊರ ನಾಯಿಗಳೋ, ಆಗಲೇ ಕೂಗಿದ ನರಿಗಳೋ, ಇಲ್ಲವೆಂದರೆ ಮೆಲ್ಲನೆ ತೆವಳಿ ಕೆರೆ ಸೇರಿದ ಕೊಳಕುಮಂಡಲವೋ ತಿಳಿಯದು.

Lapwing Bird 7

ಎಲ್ಲವನ್ನೂ ಸುಮ್ಮನೆ ಗಮನಿಸಬೇಕಷ್ಟೇ ವಿನಾ, ನಾವು ಮಾನವರ ಬುದ್ಧಿ ಓಡಿಸಿ, ಮೊಟ್ಟೆ ಕಾಪಾಡಲು ಹಾವು ಓಡಿಸಲೋ ಅಥವಾ ನರಿ ಹೆದರಿಸಲೋ ಹೋಗಕೂಡದು. ಹೋದರೆ, ಹಾವಿಗೆ ಅಥವಾ ನರಿಗಳಿಗೆ ಊಟವಿಲ್ಲದೆ ಸಾಯುತ್ತವೆ. ಭಕ್ಷಕ - ಬೇಟೆ (Prey - Predator relationship) ಎಂಬುದು ಬಿಡಿಸಬಾರದ ನಂಟು. ಇಲ್ಲಿ ಯಾವುದೂ ಪಾಪ-ಪುಣ್ಯದ ಕತೆ ಇಲ್ಲ, ಇದು ಪ್ರಕೃತಿಯ ಕತೆ. ಜೊತೆಗೆ, ಮನುಷ್ಯರ ಸಾಮಾಜಿಕ ಶ್ರೇಣೀಕರಣಕ್ಕೂ ಪ್ರಕೃತಿಯ ಜೀವವ್ಯವಸ್ಥೆಗೂ ಯಾವುದೇ ಸಂಬಂಧವಿಲ್ಲ.

ತನ್ನ ಮೊಟ್ಟೆಗಳನ್ನು ಉಳಿಸಿಕೊಳ್ಳಲು ಪ್ರಕೃತಿ ಟಿಟ್ಟಿಣಗಳಿಗೆ ವಿಶೇಷ ಶಕ್ತಿ ನೀಡಿರುತ್ತದೆ. ಅದೇ ಶಕ್ತಿಯನ್ನು ಮೀರಿ ತಮ್ಮ ಊಟ ಸಂಪಾದಿಸಿಕೊಳ್ಳಲು ಇದೇ ಪ್ರಕೃತಿ ಹಾವು, ನರಿಗಳಿಗೆ ಯುಕ್ತಿ ನೀಡಿರುತ್ತದೆ. ಕೊನೆಗೆ ಯಾರು ಉಳಿದುಕೊಳ್ಳಬೇಕು ಎಂಬುದು ಪ್ರಕೃತಿ ನಿಯಮವಷ್ಟೆ. ಇಂದೂ ಕೂಡ ಬಹಳ ಹೊತ್ತಿನವರೆಗೂ ಟಿಟ್ಟಿಣಕ್ಕಿಗಳ ಕೂಗು ಕೇಳಿಸುತ್ತಿತ್ತು - ಹೊತ್ತು ಕಳೆದಿದ್ದರಿಂದ ನಿದ್ರೆಗೆ ಜಾರಿದೆ.

Lapwing Bird 9

ಮರುದಿನ ಬೆಳಗ್ಗೆ ಎದ್ದವರೇ, ಆ ಗುಡ್ಡೆಯ ಹಿಂದಿನ ಪೊದೆ ತಲುಪಿದೆವು. ನಾವು ಅಂದುಕೊಂಡಂತೆ ಆ ರಾತ್ರಿ ಬೇಟೆಯೊಂದು ನಡೆದಿತ್ತು. ಟಿಟ್ಟಿಣಕ್ಕಿಗಳ ಮೊಟ್ಟೆ ಕಾಣದಾಗಿದ್ದವು. ಅಲ್ಲಿಂದ ಸುತ್ತಲೂ ಯಾವುದೇ ಹಕ್ಕಿ ಕಾಣಸಿಗಲಿಲ್ಲ. ನಿನ್ನೆ ರಾತ್ರಿಯೇ ಇಲ್ಲೊಂದು ಸಂಘರ್ಷ ನಡೆದು, ಹೆಚ್ಚಿನ ಸಾಮರ್ಥ್ಯ ಇರುವ ಜೀವಿ ಗೆದ್ದಿರುವುದು ನಿಶ್ಚಿತವಾಯಿತು. ನಾವು ಇಲ್ಲಿ ಮೂಕ ಪ್ರೇಕ್ಷಕರಷ್ಟೇ. ಟಿಟ್ಟಿಣಗಳಿಗೆ ಮರುಗಿ, ಹಾವು-ನರಿಗಳಿಗೆ ಖುಷಿ ಪಟ್ಟು ಮುಂದೆ ನಡೆಯುತ್ತಿದ್ದರೆ, ದೂರದಲ್ಲಿ ಮತ್ತೊಂದು ಟಿಟ್ಟಿಣಕ್ಕಿ ನೆಲದ ಮೇಲೆ ಕುಳಿತಿದ್ದು ಕಂಡೆವು. ಓಹ್... ಅಂದರೆ, ಇಲ್ಲೊಂದು ಜೋಡಿ ಮೊಟ್ಟೆ ಇಟ್ಟು ಕಾಯುತ್ತಿವೆ ಎಂದಾಯಿತು. ಹೀಗೆ, ಪ್ರಕೃತಿಯಲ್ಲಿ ನಿರಂತರವಾಗಿ ತಮ್ಮ ಉಳಿವಿಗೆ, ವಂಶಾಭಿವೃದ್ಧಿಗೆ ಸಂಘರ್ಷ ನಡೆಯುತ್ತಲೇ ಇರುತ್ತವೆ. ಇನ್ನೊಂದು ವಿಷಯ ಎಂದರೆ, ಈ ಬಾರಿ ಟಿಟ್ಟಿಣಗಳು ಎತ್ತರದ ಜಾಗದಲ್ಲಿ ಮೊಟ್ಟೆ ಇಡುತ್ತಿವೆ; ಅಂದರೆ, ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದಿರಬಹುದು. ಆಗಿನ ಕಾಲದಲ್ಲಿ ಇವುಗಳ ಗೂಡು ಇಡುವ ಎತ್ತರದ ಮೇಲೆ ಮಳೆಗಾಲವನ್ನು ಅಳತೆ ಮಾಡುತ್ತಿದ್ದರಂತೆ.

ಹ್ಞಾಂ... ಹಲವು ಹಕ್ಕಿಗಳು ನೆಲದಲ್ಲಿ, ಹೊಲಗಳಲ್ಲಿ ಮೊಟ್ಟೆ ಇಟ್ಟು ಮರಿ ಮಾಡುವ ಕಾಲವಿದು. ಹಾಗಾಗಿ, ಕೆರೆಯಿಂದ ಮಣ್ಣು ತೆಗೆಯುವಾಗ, ಹೊಲಗಳಲ್ಲಿ ಕೆಲಸ ಮಾಡುವಾಗ ಎಚ್ಚರಿಕೆಯಿಂದ ಗಮನಿಸಿ. ಹುಲ್ಲುಗಾವಲುಗಳನ್ನೂ ಅವುಗಳ ಪಾಡಿಗೆ ಬಿಟ್ಟುಬಿಡುವುದು ಒಳಿತು. ಏಕೆಂದರೆ, ನಮ್ಮ ಹಸ್ತಕ್ಷೇಪ ಕಡಿಮೆ ಇದ್ದಷ್ಟೂ ಪ್ರಕೃತಿಗೆ ಲಾಭ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app