ಜನಪಠ್ಯ | ಬಡ್ಡಿ ವ್ಯವಹಾರದ ಧನದಾಹಿ ಬಸವಲಿಂಗಯ್ಯನನ್ನು ಕೊಲೆ ಮಾಡಿದ ಸಂಗ್ಯನ ಲಾವಣಿ

ಬೆಳಗಾವಿ ಮತ್ತು ಬೈಲಹೊಂಗಲ ಭಾಗದ ರೈತರು ಈ ಪದವನ್ನು ಹೆಚ್ಚು ಹಾಡುತ್ತಿದ್ದರಂತೆ. ಈ ಕೊಲೆಯ ಪದವನ್ನು ರೈತರು ಯಾಕೆ ಹಾಡುತ್ತಿದ್ದರು ಎಂಬುದು ಸ್ವಾರಸ್ಯ. ಬಹುಶಃ ಲೇವಾದೇವಿಗಾರರನ್ನು ಹೆದರಿಸುವ ತಂತ್ರವೂ ಇದ್ದಿರಬಹುದು ಅಥವಾ ಬಡ್ಡಿ ವ್ಯವಹಾರದ ಧಣಿಗಳ ವಿರುದ್ಧ ತಮ್ಮೊಳಗಿರುವ ಸಿಟ್ಟು ತೀರಿಸಿಕೊಳ್ಳುವ ದಾರಿಯೂ ಆಗಿರಬಹುದು

ಕನ್ನಡದ ಜಾನಪದ ಅಧ್ಯಯನದ ಸಂದರ್ಭದಲ್ಲಿ 'ಪ್ಲೀಟರ್’ ಸಂಗ್ರಹಿಸಿದ ಲಾವಣಿಗಳಿಗೆ ಚಾರಿತ್ರಿಕ ಮಹತ್ವವಿದೆ. ಜಾನಪದ ವಿದ್ವಾಂಸರಾದ ಕ್ಯಾತನಹಳ್ಳಿ ರಾಮಣ್ಣ ಅವರು, 'ಇಂಡಿಯನ್ ಆಂಟಿಕ್ವರಿ' ಪತ್ರಿಕೆಯಲ್ಲಿ ಜಾನ್ ಫೆಯ್ತ್‍ಫುಲ್ ಫ್ಲೀಟ್ ಪ್ಲೀಟರ್ ಪ್ರಕಟಿಸಿದ ಲಾವಣಿಗಳನ್ನು (1885-1890) ಕನ್ನಡಕ್ಕೆ ತಂದು ಉಪಕಾರ ಮಾಡಿದ್ದಾರೆ. ನಮಗೆ ಹಲಗಲಿ ಬೇಡರ ಲಾವಣಿ ಸಿಕ್ಕಿದ್ದು ಕೂಡ ಪ್ಲೀಟರ್ ಸಂಗ್ರಹದಿಂದ. ಈ ಸಂಗ್ರಹದಲ್ಲಿ ಇನ್ನಷ್ಟು ಬಂಡುಕೋರ ಲಾವಣಿಗಳಿವೆ. ಅದರಲ್ಲಿ 'ಸಂಗ್ಯನ ಅಪರಾಧ ಮತ್ತು ಸಾವು' ಎನ್ನುವ ಲಾವಣಿ ಗಮನ ಸೆಳೆಯುತ್ತದೆ.

ಈ ಬಂಡುಕೋರ ಲಾವಣಿ ಬೆಳಗಾವಿ ಜಿಲ್ಲೆಯಲ್ಲಿ ಬಹು ಜನಪ್ರಿಯ. ಹಿಂದೆ ಅನೇಕ ಬಡ ಬೇಸಾಯಗಾರರ ಮನೆಗಳಲ್ಲಿ ಈ ಪದವನ್ನು ಹಾಡುತ್ತಿದ್ದರಂತೆ. ಇದು ಬಡ ಬೇಸಾಯಗಾರ ಸಂಗ್ಯ ಲೇವಾದೇವಿಗಾರ ಬಸವಲಿಂಗಯ್ಯನನ್ನು ಕೊಲೆ ಮಾಡಿ ಮರಣದಂಡನೆಗೆ ಗುರಿಯಾದ ನೈಜ ಘಟನೆಯನ್ನು ಆಧರಿಸಿದೆ.

'ಬೈಲಹೊಂಗಲ' ಎಂದು ಹೆಚ್ಚು ಬಳಕೆಯಲ್ಲಿರುವ ಹೊಂಗಲದಲ್ಲಿ, 1863ರ ಅಕ್ಟೋಬರ್ 12ರಂದು ನಡೆದ ಒಂದು ಕೊಲೆಯ ಆಧಾರದ ಮೇಲೆ ಈ ಲಾವಣಿ ಕಟ್ಟಲಾಗಿದೆ. ಕೊಲೆಯಾದವ ಬಸಲಿಂಗಣ್ಣ ಎಂಬ ಲೇವಾದೇವಿ ವ್ಯವಹಾರದವನು. ಬೈಲಹೊಂಗಲ ಶಹರದ ತುಕಾರಾಮ ಎಂಬ ವಸ್ತದಾರನ ಶಿಷ್ಯ ಅಪ್ಪು ಎಂಬ ಮರಾಠಾ ವೃತ್ತಿಲಾವಣಿಕಾರನಿಂದ ಈ ಲಾವಣಿ ರಚನೆಯಾಗಿದೆ. ಹತ್ತು ನುಡಿಗಳಲ್ಲಿರುವ ಈ ಲಾವಣಿಯನ್ನು ದೇಮಣ್ಣ ತಪ್ಪಿಲ್ಲದಂತೆ ಬರೆದಿಟ್ಟಿದ್ದಾನೆ. 'ಬಡತನ ಅಂಬುದು ಬಾಳಕೆಟ್ಟ/ ಬಡವಗ ಬಂತು ಬಹು ಶಿಟ್ಟ/ ಸಾವಕಾರ ಸಾಲಾ ಕೊಡಬೇಕಾದರ/ ಸಂಗ್ಯಾಗ ಆದಿತೊ ಸಂಕಷ್ಟ...' ಎಂಬ ಬಡವರ ಸಿಟ್ಟನ್ನು ಈ ಲಾವಣಿ ಮುನ್ನಲೆಗೆ ತಂದಿದೆ.

Image

ಮೊದಲನೆಯ ನುಡಿಯಲ್ಲಿ ಇವನ ವ್ಯಾಪಾರ ಮತ್ತು ವೈಯಕ್ತಿಕ ಅಭಿರುಚಿಗಳು ವಿವರಿಸಲ್ಪಟ್ಟಿವೆ. ಬಸಲಿಂಗಣ್ಣನ ಸಾಲಗಾರರಲ್ಲಿ ಸಂಗ್ಯನೂ ಒಬ್ಬ. ಇವನು ತನಗೆ ಹಣದ ಅವಶ್ಯಕತೆ ಉಂಟಾದಾಗ ಪಡೆದ ಸಾಲದ ಕರಾರಿನಂತೆ ಭೂಮಿಯನ್ನು ಒತ್ತೆ ಇಡುತ್ತಾನೆ. ಸಾಲಿಗೆ ಸೌಂದತ್ತಿಯ 'ಕೆಳಗಿನ ನ್ಯಾಯಾಲಯ'ದಲ್ಲಿ ವ್ಯಾಜ್ಯ ನಡೆಸಿ, ಸಂಗ್ಯನ ವಿರುದ್ಧವಾಗಿ ತೀರ್ಪು ಪಡೆದ. ಸಂಗ್ಯನು ಧಾರವಾಡದ ಜಿಲ್ಲಾ ನ್ಯಾಯಾಧೀಶರ ಬಳಿಗೆ ಅಪೀಲು ಹೋಗಲೂ ಅವಕಾಶ ಕೊಡಲಿಲ್ಲ. ಆಮೇಲೆ ಇವನ ಭೂಮಿಯನ್ನು ಹರಾಜು ಹಾಕುವುದರ ಮೂಲಕ ತೀರ್ಪನ್ನು ಕಾರ್ಯಗತಗೊಳಿಸಲು ನ್ಯಾಯಾಲಯದ ಕಾರಕೂನನನ್ನು ಕಳಿಸಲಾಯಿತು. ಸಂಗ್ಯನಿಗೆ ಹರಾಜಿನಲ್ಲಿ ಕೊಳ್ಳಲೂ ಆಗಲಿಲ್ಲ, ಸಾಲಿಗನ ಬಳಿ ಮತ್ತೆ ಗಡುವು ಪಡೆಯಲೂ ಸಾಧ್ಯವಾಗಲಿಲ್ಲ. ಭೂಮಿ ಬಸಲಿಂಗಣ್ಣನ ಪಾಲಾಯಿತು. ಇದ್ದ ತುಂಡುಭೂಮಿಯನ್ನು ಕುತಂತ್ರದಿಂದ ಕಳೆದುಕೊಂಡ ಸಂಗ್ಯ, ತನ್ನ ಸೋದರ ಪಸ್ರ್ಯನೊಂದಿಗೆ ಸೇರಿ ಸೇಡು ತೀರಿಸಿಕೊಳ್ಳಲು ಬಸಲಿಂಗಣ್ಣನನ್ನು ಕೊಲ್ಲುವ ನಿರ್ಧಾರ ಮಾಡಿದ.

ಮಾರನೆಯ ದಿನ ಬೆಳಗ್ಗೆ ಎದ್ದವನೇ ಸಂಗ್ಯ ತನ್ನ ತಾಯಿಯ ಪಾದಕ್ಕೆ ಅಡ್ಡಬಿದ್ದ. ತಮ್ಮ ಕಾರ್ಯವನ್ನು ಯಶಸ್ವಿಯಾಗಿ ನಡೆಸಿಕೊಡಲು ಸಂಗ್ಯ ಮತ್ತು ಪಸ್ರ್ಯ ಇಬ್ಬರೂ ತಮ್ಮ ಪ್ರಿಯವಾದ ದೈವ ಬಸವಣ್ಣನಿಗೆ ಪ್ರಾರ್ಥನೆ ಸಲ್ಲಿಸಿದರು. ಬಸಲಿಂಗಣ್ಣನ ಒಬ್ಬ ತಮ್ಮ ಫಕೀರಣ್ಣನನ್ನು ಮೊದಲು ಕೊಲ್ಲಲು ಯೋಜಿಸಿದರು; ಆದರೆ ಅವನು ಸಿಕ್ಕಲಿಲ್ಲ. ಅವರು ಬಸವಣ್ಣ ದೇವರನ್ನು ಪ್ರಾರ್ಥಿಸಿ, ಬಸಲಿಂಗಣ್ಣನ ಇನ್ನೊಬ್ಬ ಸೋದರ ರಾಚಪ್ಪನನ್ನು ಕೊಲ್ಲಲು ಹೋದರು. ಅದೂ ಕೈಗೂಡಲಿಲ್ಲ. ಅವರ ಪಾಲಿಗೆ ದೇವರು ದೊಡ್ಡವನೆಂದು ಬಗೆದು ನೇರವಾಗಿ ಬಸಲಿಂಗಣ್ಣನ ಮನೆಗೆ ಹೋದರು.

ಈ ಲೇಖನ ಓದಿದ್ದೀರಾ?: ಜನಪಠ್ಯ | ಇಂಡಿಯಾ-ಚೀನಾ ಯುದ್ಧದ ಬಗ್ಗೆ ಜನಪದ ಕವಿ ಲಾವಣಿ ಕಟ್ಟಿದ್ದೇಕೆ?

ಬಸಲಿಂಗಣ್ಣ ವ್ಯಾಪಾರದಲ್ಲಿ ತೊಡಗಿದ್ದ. ಆತನ ಚಿತ್ತ ರೂಪಾಯಿ ಮೇಲಿತ್ತು. ದುಡ್ಡು ಎಣಿಸುವುದರಲ್ಲಿ ಮಗ್ನನಾಗಿದ್ದ. ಸಂಗ್ಯ ಕೊಂಕುಳಲ್ಲಿ ಅವಿಸಿದ್ದ ಕುಡಗೋಲನ್ನು ಅಲ್ಲಿದ್ದವರ ಗಮನಕ್ಕೆ ಬಾರದಂತೆ ತೆಗೆದು ಅವನ ಕತ್ತನ್ನು ಕತ್ತರಿಸಿಬಿಟ್ಟ. ಬಸಲಿಂಗಣ್ಣನ 'ಬಾಯಿಲಿ ಸುರಿತ ನೆತ್ತರಾ / ಹಾರಿತ ಕಬರಾ / ಬಿದ್ದನ ಜೀವ ಹೋಗಿ' ಸಂಗ್ಯ ತಪ್ಪಿಸಿಕೊಳ್ಳಲೂ ಪ್ರಯತ್ನಿಸಲಿಲ್ಲ. ಮೇಲಾಗಿ, ಸಂಗ್ಯನ ಸಿಟ್ಟು, ಆಕ್ರೋಶ ಓಡಿಹೋಗಲು ಬಿಟ್ಟುಕೊಡಲಿಲ್ಲ. ಪರ್ಸ್ಯ ಮತ್ತು ಸಂಗ್ಯ ಇಬ್ಬರನ್ನೂ ಬಂಧಿಸಿ ಗ್ರಾಮದ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.

ಐದನೇ ನುಡಿ

ಬಂದದ್ಧಾತಿ ಅಂತಾರ ಕಾಲಿ
ಶಿಟ್ಟ ಆದರ ತಮ್ಮ ಮನದಲ್ಲಿ
ಬಸಲಿಂಗಣ್ಣನ ಮನಿಗೆ ಹೋದರೋ ತಿಳಿಯಲಿಲ್ಲ ಇಬ್ಬರ ನೆಲಿ
ವೊಂಬತ್-ತಾಸ ವೇಳೆದ ಮೇಲೆ ಪೂರ್ವಲಿಖಿತ ವದಗಿತ ಅಲ್ಲಿ
ಸಂಗ್ಯಾ ಪರಿಷ್ಯಾ ಮುಜರಿ ಮಾಡಿಕ್ಯಾರ ಹೋಗಿ ನಿಂತರೊ ಅವನ ಬದಿಯಲಿ
ಬಸಲಿಂಗಣ್ಣನ ಚಿತ್ತ ರುಪಾಯಿ ಮೇಲೆ
ಮೂರು ನಾಕು ಮಂದಿ ಅವನ ಬದಿಯಲ್ಲಿ
ಕಡವಾರು ಅಂಬುದು ಅವಗ ತಿಳಿಯಲಿಲ್ಲ
ಶಿವ ತಂದ ಹಾಕಿದ ಮಾಲಿ || 23 ||

ಸಂಗ್ಯಾ ಮುಂಗೈಯಂಗಿಯ ತೇಡಿಕೊಂಡ
ಬಗಲನ್ನ ಕುಡಗೋಲ ತಕ್ಕೊಂಡ
ನಿಂತ ನೋಡಿ ಕಡದನೊ ಅವನ ಚಂಡ
ಅದರಂತ ಕುಡಗೋಲ ಯಳಕೊಂಡ
ಕಡದವನ ಹಿಂದಕ ಸರಕೊಂಡ
ವೋಡಿ ಹೋದನ ಪರಿಷ್ಯಾನ್ನ ಕರಕೊಂಡ

Image

ಇಬ್ಬರನ್ನೂ ಎದುರುಬದುರಿಗೆ ಕಂಬಕ್ಕೆ ಕಟ್ಟಿ ಅಪರಾಧದ ಬಗ್ಗೆ ವಿಚಾರಣೆ ಮಾಡಿದರು. ಇಬ್ಬರೂ ಹೂವಿನ ರಾಮ ಎಂಬ ಯುವಕನನ್ನು ಸಿಕ್ಕಿಸಲು ಪ್ರಯತ್ನಿಸಿದರು. ವಿಚಾರಣೆಯ ನಂತರ ಹೂವಿನ ರಾಮ ನಿರ್ದೋಷಿಯೆಂದು ಬಿಡುಗಡೆಯಾದ. ಪರ್ಸನನ್ನು ಗಡೀಪಾರು ಮಾಡಿ, ಸಂಗ್ಯನಿಗೆ ಮರಣದಂಡನೆ ವಿಧಿಸಿದರು. ಎರಡು ಜಿಲ್ಲೆಗಳಿಗೆ ಮುಖ್ಯ ಕಾರಾಗೃಹವಾಗಿದ್ದ ಧಾರವಾಡದ ಕಾರಾಗೃಹಕ್ಕೆ ಮೊದಲು ಸಂಗ್ಯನನ್ನು ಒಯ್ಯಲಾಯಿತು. ಆಮೇಲೆ ಹೊಂಗಲದಲ್ಲೇ ದಂಡನೆ ನೀಡಲು ನಿರ್ಧರಿಸಲಾಯಿತು. ಧಾರವಾಡದಿಂದ ಹೊಂಗಲದ ತನಕದ ಪ್ರಯಾಣ, ಸಂಗ್ಯ ತನ್ನ ತಾಯಿ-ತಂದೆಯರನ್ನು ಬೀಳ್ಕೊಡುವುದು, ತನ್ನ ನತದೃಷ್ಟಕ್ಕಾಗಿ ದುಃಖಿಸುವುದು, ಕಾರ್ಯಾಚರಣೆಯ ವಿವರಣೆ - ಇವುಗಳಿಂದಲೇ ಲಾವಣಿಯ ಇತರ ಭಾಗಗಳೆಲ್ಲ ತುಂಬಿಹೋಗಿವೆ. ಇಲ್ಲಿ ಅನೇಕ ಹೃದಯಸ್ಪರ್ಶಿ ವಾಕ್ಯಗಳಿವೆ. ಇಡೀ ಹಾಡು ಪರಿಣಾಮಕಾರಿ ವರ್ಣನೆಗಳಿಂದ ಕೂಡಿದೆ.

ಹತ್ತನೇ ನುಡಿ

ಸಂತಿ ಶುಕ್ರವಾರಾ ಅದ ದಿನ ಸುತ್ತಿನ ಮಂದಿ ಕೂಡಿತ ಜನಾ
ಹವ್ವ ಹಾರಿ ಕಬರಿಲ್ಲದ ಮಾತಾಡತಾನ ವೂರ ಹೊರಗ ತಂದಾರೋ ಅವನಾ
ಸಾಹೇಬಗ ಹೇಳಿಕೊಂಡ ಯೇನೇನ ಕೈಮುಗದ ಮಾಡಿದ ಶರಣ
ಐದ ರೂಪಾಯಿ ಖರ್ಚು ಮಾಡಿಕ್ಯಾರ ಮಠದ ವೊಳಗ ಕೊಡಸರಿ ಮಣ್ಣ
ಮಾರಿ ಬಾಡಿ ಆದಿತ ಸಣ್ಣ ಕಳೆ ಗುಂದಿ ಹಾರಿತ ಬಣ್ಣಾ
ಹರಹರಾ ಅಂತ ಹಾದಿ ಹಿಡದನೊ ಹತ್ತಿ ನಿಂತ ತನ್ನ ಟಿಕಾಣ |ಬಡತನ|

ಗಲ್ಲಿಗೆ ಹಾಕ್ಯಾರ ಕೊರಳಿಗೆ ಸರಕಾ
ಸ್ವರ್ಗದ ದಾರಿ ಹಿಡಿದಾನೊ ಕೈಲಾಸಕಾ
ಅಕ್ಕತಂಗೆರ ಅಣ್ಣತಮ್ಮರ ತಾಯಿ ದುಕ್ಖ
ಸುತ್ತಗಟ್ಟಿ ನಿಂತಿತ ಜನಲೋಕಾ
ನಾಕ ತಿಂಗಳ ಹನ್ನೆರಡ ದಿನಕ
ಅವರಾತ್ರಿ ಅಮಾಸಿ ತಾರೀಖಾ||

ಈ ಲೇಖನ ಓದಿದ್ದೀರಾ?: ಜನಪಠ್ಯ | ಅತ್ಯಾಚಾರಕ್ಕೆ ಮುಂದಾದ ಮಠದ ಸ್ವಾಮಿಯನ್ನು ಒನಕೆಯಿಂದ ಕೊಂದ ದಿಟ್ಟ ಮಹಿಳೆ - ಅಯ್ಯನ ಪದ

ಈ ಪದ ಬೆಳಗಾವಿ ಮತ್ತು ಬೈಲಹೊಂಗಲ ಭಾಗದಲ್ಲಿ ರೈತರು ಹೆಚ್ಚು ಹಾಡುತ್ತಿದ್ದರಂತೆ. ಯಾಕೆ ರೈತರು ಈ ಕೊಲೆಯ ಪದವನ್ನು ಹಾಡುತ್ತಿದ್ದರು ಎನ್ನುವುದು ಬಹಳ ಮುಖ್ಯವಾದ ಸಂಗತಿ. ಈ ಲಾವಣಿ ಹಾಡುವ ಮೂಲಕ ಲೇವಾದೇವಿಗಾರರನ್ನು ಭಯಪಡಿಸುವ ತಂತ್ರವೂ ಇದ್ದಿರಬಹುದು. ಅಥವಾ ಬಡ್ಡಿ ವ್ಯವಹಾರದ ಧಣಿಗಳ ವಿರುದ್ಧ ಜನರೊಳಗಿರುವ ಸಿಟ್ಟಿನ ಪ್ರತೀಕವಾಗಿಯೂ ಈ ಲಾವಣಿ ಹಾಡುತ್ತಿದ್ದರು. ಸಂಗ್ಯನ ಸಿಟ್ಟು ಅದು ಕೇವಲ ಸಂಗ್ಯನದಾಗಿರದೆ, ಬಡ್ಡಿ ವ್ಯಾಪಾರಸ್ಥರಿಂದ ನೊಂದ ಎಲ್ಲ ರೈತರದೂ ಆಗಿತ್ತು. ಅಂತೆಯೇ, ಹೇಗೆ ದಲಿತ ದಮನಿತ ಸಮುದಾಯಗಳ ಭೂಮಿಯನ್ನು ಪ್ರಬಲ ಜಾತಿಯ ಮಂದಿ ವಶಪಡಿಸಿಕೊಳ್ಳುತ್ತಿದ್ದರು ಎನ್ನುವುದನ್ನು ಈ ಲಾವಣಿ ಸಾಕ್ಷೀಕರಿಸುತ್ತದೆ. ಇಂತಹ ಲಾವಣಿಗಳು ನಾಡಿನ ಸ್ಥಳೀಯ ಸಂಘರ್ಷದ ಚರಿತ್ರೆಯನ್ನು ಕಟ್ಟಿಕೊಡುತ್ತವೆ. ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ ಇಂತಹ ಬಂಡುಕೋರ ಜನಪದ ಹಾಡುಗಳನ್ನು ಸಂಗ್ರಹಿಸಿ ಹೋರಾಟಕ್ಕೆ ಬೇಕಾದ ಸ್ಫೂರ್ತಿ ಪಡೆದರು. ಹಾಗಾಗಿಯೇ, ಕರ್ನಾಟಕದ ಜಾನಪದ ಕ್ಷೇತ್ರದಲ್ಲಿ ಇಂತಹ ಬಂಡುಕೋರ ಪದಗಳನ್ನು ಮುನ್ನಲೆಗೆ ತಂದು ಅಧ್ಯಯನ ಮಾಡುವ ಅಗತ್ಯವಿದೆ.

ಕಲಾಕೃತಿಗಳ ಕೃಪೆ: unsplash ಜಾಲತಾಣ
ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180