ಪಾಟಿ ಚೀಲ | ಬುಡಕಟ್ಟು ಮಗುವು ಶಾಲೆಗೆ ಕಲಿಸಬಹುದಾದ ಪಾಠಗಳು

ಹಸಿಮರವನ್ನು ಕಡಿಯಬಾರದೆಂಬ ಕೊರಗರ ನಂಬಿಕೆ, ತೊಳೆದ ಪಾತ್ರೆಗಳನ್ನು ಬಿಸಿಲಿನಲ್ಲಿ ಒಣಗಿಸದೆ ಬಳಸದಿರುವ ರೂಢಿ, ಮುಂಜಾನೆ ಹೂವಿನಂತೆ ಅರಳುವ ಆ ಹೆಣ್ಣುಮಕ್ಕಳ ನಗು, ಹೊರಡುವ ಅರ್ಥವಲ್ಲದೆ ಇನ್ಯಾವ ಉದ್ದೇಶವನ್ನೂ ಅಡಗಿಸಿಟ್ಟುಕೊಳ್ಳದ ಮಾತು ನಮಗೂ ಸಿದ್ಧಿಸಬೇಕೆಂದರೆ ನಮ್ಮದೇ 'ಮುಖ್ಯಧಾರೆ' ಎಂಬ ಭ್ರಮೆಯಿಂದ ನಾವು ಹೊರಬರಬೇಕಿದೆ

"ಶಾಲೆ ಎಂಬ ಕೃತಕ ಪರಿಸರಕ್ಕೆ ಕೊರಗ ಮಕ್ಕಳು ಸುಲಭವಾಗಿ ಹೊಂದಿಕೊಳ್ಳುವುದಿಲ್ಲ," ಎಂದೆ ನಾನು. ನನ್ನ ಮಾತನ್ನು ಆಮೂಲಾಗ್ರ ತಿದ್ದುಪಡಿಗೊಳಿಸಿ, "ಕೊರಗ ಮಕ್ಕಳಿಗೆ ಶಾಲೆಯು ಹೊಂದಿಕೊಳ್ಳುವುದಿಲ್ಲ” ಎಂದರು ಶಿಕ್ಷಕ, ರಂಗಕರ್ಮಿ ಸತ್ಯನಾ ಕೊಡೇರಿ. ಅವರ ಮಾತು ಹದಿನಾರಾಣೆ ಸತ್ಯ.

Eedina App

ದಸರಾ ರಜೆಯಲ್ಲಿ ಕುಂದಾಪುರದ 'ಆಲೂರಿನ ಹಾಡಿಮನೆ' ಎಂಬ ಜನವಸತಿ ಪ್ರದೇಶದದಲ್ಲಿ ಕೊರಗ ಸಮುದಾಯದ ಮಕ್ಕಳಿಗಾಗಿ ರಜಾಮೇಳವನ್ನು ಆಯೋಜಿಸಿಲಾಗಿತ್ತು. ಕಳೆದ ನಲವತ್ತೈದು ವರ್ಷಗಳಿಂದ ರಂಗ ಚಟುವಟಿಕೆಗಳ ಮೂಲಕ ಸಾಂಸ್ಕೃತಿಕ ಮಾತುಕತೆಗಳಲ್ಲಿ ತೊಡಗಿರುವ ಕುಂದಾಪುರದ 'ಸಮುದಾಯ' ಸಂಘಟನೆಯ ನಾವೆಲ್ಲ ಸಂಗಾತಿಗಳು ನಮ್ಮ ರಜೆಯನ್ನು ಆ ಮಕ್ಕಳಿಗಾಗಿ ಮೀಸಲಿಟ್ಟೆವು. ರಂಗಕರ್ಮಿ ವಾಸುದೇವ ಗಂಗೇರ ಮಕ್ಕಳಿಗಾಗಿ ಒಂದು ನಾಟಕವಾಡಿಸುವ ನೆಪ ಮಾಡಿಕೊಂಡು ಅವರ ಜೊತೆ ಹಾಡಿ, ಕುಣಿದು, ನಲಿದಾಡಲು ಸಾಧ್ಯವಾಗುವಂತೆ ಮೇಳವನ್ನು ವಿನ್ಯಾಸಗೊಳಿಸಿದ್ದರು. ನಡುವೆ ಬಣ್ಣ, ಮಣ್ಣು, ಕತ್ತರಿ, ಕಾಗದಗಳ ಜೊತೆ ಆಟ. ಮಕ್ಕಳು ಖುಷಿಪಟ್ಟು ಆಟವಾಡಿದರು. ಈ ಮೇಳವನ್ನು ಆಯೋಜಿಸದೆ ಇದ್ದರೂ ಆ ಮಕ್ಕಳು ರಜೆಯಲ್ಲಿ ಆಟವಾಡುತ್ತಿದ್ದರು. ಅವರದೇ ನಿಯಂತ್ರಣದಲ್ಲಿ ನಡೆಯುವ ಅಂತಹ ಆಟಗಳು ನೀಡುವ ಅಪರಿಮಿತ ಸ್ವಾತಂತ್ಯವನ್ನು ರಜಾ ಶಿಬಿರ ನೀಡಲಾರದು ಎಂಬುದೂ ಸತ್ಯವೇ. ಸ್ವಾತಂತ್ರ್ಯ ಮತ್ತು ಸಂತಸದ ನಡುವೆ ನೇರ ಸಂಬಂಧವಿದೆ.

ಶಾಲೆಯಿಂದ ಹೊರಗುಳಿದ ಮಕ್ಕಳಿಗಾಗಿ ಹಿಂದೊಮ್ಮೆ ಶಿಕ್ಷಣ ಇಲಾಖೆ ನಡೆಸಿದ ಚಿಣ್ಣರ ಅಂಗಳ ಎಂಬ ಸನಿವಾಸ ರಜಾ ಶಿಬಿರದಲ್ಲಿ ಭಾಗವಹಿಸಿದ್ದೆ. ಅಲ್ಲಿಯೂ ಮಕ್ಕಳಿಗೆ ಖುಷಿ ಕೊಡುವಂತೆ  ಹತ್ತಾರು ಆಟಗಳನ್ನು ಆಡಿಸುತ್ತಿದ್ದರು. ಸ್ಕೆಚ್ ಪೆನ್ನುಗಳು, ಬಣ್ಣಬಣ್ಣದ ಕಾಗದಗಳು, ಆಟಿಕೆಗಳು ಎಂತೆಲ್ಲ ಬೇಕಾದಷ್ಟು ಪರಿಕರಗಳಿದ್ದವು. ರುಚಿಯಾದ ಊಟ, ಐಸಕ್ರೀಮು, ಕಬಾಬು ಹೀಗೆ ಪಂಚೇಂದ್ರೀಯಗಳಿಗೂ ಖುಷಿಯಾಗುವಂತೆ ಶಿಬಿರವನ್ನು ಆಯೋಜಿಸಿದ್ದರು. ಇಷ್ಟಾಗಿಯೂ ಶಿಬಿರ ಆರಂಭವಾದ ನಾಲ್ಕೇ ದಿನಗಳಲ್ಲಿ ಕೊರಗ ಮಗುವೊಂದು ಶಿಬಿರದಿಂದ ತಪ್ಪಿಸಿಕೊಂಡಿತು. ಇಷ್ಟೆಲ್ಲ ಸವಲತ್ತುಗಳು, ಆಟವಾಡಲು ಗೆಳೆಯರು ಇದ್ದರೂ ಆ ಮಗು ತಪ್ಪಿಸಿಕೊಳ್ಳಲು ಕಾರಣವೇನು ಎಂಬುದು ಎಲ್ಲರ ಪ್ರಶ್ನೆ. ಮನೆಯ ನೆನಪಾಗಿರಬಹುದೇ? ಹಾಗೆ ನೆನಪಾಗಿದ್ದರೆ ಗೊತ್ತಾಗುತ್ತದೆ; ಮಕ್ಕಳು ಮಂಕಾಗುತ್ತಾರೆ, ಅಳುತ್ತಾರೆ, ಹಠ ಹಿಡಿಯುತ್ತಾರೆ... ಇದು ಹಾಗಲ್ಲ.

AV Eye Hospital ad

ಈ ಲೇಖನ ಓದಿದ್ದೀರಾ?: ಕಾಲದಾರಿ | 'ಯಾಕೋ ಸಪ್ಪಗ ಕಾಣಾಕ್ಹತ್ತೀ?' ಅಂತ ಕೇಳಿದ್ದೇ ತಡ, ಅವಳ ಕಣ್ಣಿಂದ ತಟತಟ ಕಣ್ಣೀರು!

ನಾವು ಆ ಮಗುವನ್ನು ಹುಡುಕುತ್ತ ಅವರ ಮನೆಗೆ ಹೋದೆವು. ಕೊರಗರ ಮನೆಗಳು ಊರಿಂದಾಚೆ ಇರುತ್ತವೆ. ಮನೆಯಿರುವ ಜಾಗ ಅವರದ್ದಲ್ಲದ ಕಾರಣದಿಂದ ಯಾವುದೇ ಸರ್ಕಾರಿ ಸೌಕರ್ಯಗಳೂ ಸಿಕ್ಕಿರುವುದಿಲ್ಲ. ಸರ್ಕಾರ ಜಾಗ ಗೊತ್ತು ಮಾಡಿ ಕಟ್ಟಿಸಿದ ಮನೆಗಳಿಗೆ ಅವರು ಹೋಗಲು ಒಪ್ಪುವುದಿಲ್ಲ. ತುಂಬಾ ವಯಸ್ಸಾದ ಕೆಲವು ಅಜ್ಜ-ಅಜ್ಜಿಯರು ಬಿಟ್ಟರೆ ಕೊರಗ ಕೇರಿಯಲ್ಲಿ ಹೆಚ್ಚು ಜನರಿರಲಿಲ್ಲ. ಕೊರಗರ ಸಂಖ್ಯೆಯೂ ವೇಗವಾಗಿ ಕಡಿಮೆಯಾಗುತ್ತಿದೆ ಬೇರೆ. ಸ್ವಾತಂತ್ರ್ಯ ದೊರೆತ ಹೊಸ್ತಿಲಲ್ಲಿ ಎಪ್ಪತೈದು ಸಾವಿರದಷ್ಟಿದ್ದ ಕೊರಗರು ಈಗ ಹದಿನೈದು ಸಾವಿರದಷ್ಟಾಗಿದ್ದಾರೆ. ಅವರ ಮೂರು ಪಂಗಡಗಳು ಆಡುತ್ತಿದ್ದ ಮೂರು ಬೇರೆ-ಬೇರೆ ಭಾಷೆಗಳಲ್ಲಿ ಒಂದು ಭಾಷೆ ಪೂರ್ತಿಯಾಗಿ ನಶಿಸಿದೆ. ಇನ್ನೊಂದರಲ್ಲಿ ಬರೇ ಇನ್ನೂರು ಪದಗಳಷ್ಟೇ ಉಳಿದುಕೊಂಡಿವೆ ಎಂದು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಶ್ರೀಧರ ನಾಡಾ ಹೇಳುತ್ತಾರೆ. ಇಲ್ಲಿ ಜನರಿಲ್ಲದೆ ಇರಲು ಇನ್ನೊಂದು ಕಾರಣವೆಂದರೆ, ಹೊಟ್ಟೆ ಹೊರೆದುಕೊಳ್ಳಲು ಯಾವ್ಯಾವುದೋ ಕೆಲಸದ ಮೇಲೆ ದೊಡ್ಡವರು- ಚಿಕ್ಕವರು ಹೊರಗೆ ಹೋಗಿರುವುದು. ಈ ಹುಡುಗನ ಮನೆ ಹುಡುಕಿದೆವು. ಅದೂ ಖಾಲಿ. ಇನ್ನಷ್ಟು ಆತಂಕವಾಯ್ತು. ಜನರಿರುವ ಬೇರೆ ಮನೆಗಳಲ್ಲಿ ವಿಚಾರಿಸಲು ಹೋಗುವಾಗ ಹಿಂಭಾಗದಲ್ಲಿ ಒಬ್ಬ ಹುಡುಗ ತೆಂಗಿನ ಚಿಪ್ಪಿನಲ್ಲಿ ಮಣ್ಣು ತುಂಬಿಸಿ ಗುಪ್ಪೆಗಳನ್ನು ಮಾಡುತ್ತ ಆಟವಾಡುತ್ತಿದ್ದ.... ಆತ ಕಳೆದುಹೋಗಿದ್ದ ಅದೇ ಹುಡುಗ. ಆಶ್ಚರ್ಯವಾಯ್ತು... ಆಟವಾಡಲು ಅಷ್ಟೆಲ್ಲ ಸ್ನೇಹಿತರು, ಆಟದ ಸಾಮಗ್ರಿಗಳು, ಆಗಾಗ ತಿಂಡಿ-ತಿನಿಸು ಎಲ್ಲ ಇದ್ದರೂ ಈ ಮಣ್ಣು ಗರಟೆ ಆಡಲು ಇಲ್ಲಿಗೇಕೆ ಬಂದನೀತ?

ಈ ಪ್ರಶ್ನೆಗೆ ಉತ್ತರಿಸದೆ ಹೋದರೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮತ್ತೆ ಒಳತರಲು ಮಾಡುವ ಪ್ರಯತ್ನಗಳು ವ್ಯರ್ಥವಾಗುತ್ತವೆ. ಶಾಲೆಯೊಳಗೇ ಇರುವ ಮಕ್ಕಳಿಗಾಗಿಯೂ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲೇಬೇಕು. ಎಷ್ಟೋ ಕೊರಗ ಮಕ್ಕಳು ತಮ್ಮದೆನಿಸದ ಶಾಲೆಯ ನಿಯಂತ್ರಿತ ಪರಿಸರಕ್ಕೆ ಹೊಂದಿಕೊಳ್ಳಲಾಗದೆ ಹೊರಹೋಗಿದ್ದಾರೆ. ಶಾಲೆಗೆ ನಿಯಮಿತವಾಗಿ ಹಾಜರಾಗುವ ಕೊರಗ ಮಕ್ಕಳು ಶಾಲೆಯ ವಾತಾವರಣಕ್ಕೆ ಹೊಂದಿಕೊಳ್ಳುವ ಪ್ರಯತ್ನದಲ್ಲಿ ಕಳೆದುಕೊಂಡದ್ದೂ ಹೆಚ್ಚೇ. ಅವರಿಗೆ ಕೊರಗರ ಕಲೆಗಳಾದ ಡೋಲು, ಚೆಂಡೆಗಳನ್ನು ನುಡಿಸಲು ಬಾರದು. ಕೊಳಲಂತೂ ಗೊತ್ತೇ ಇಲ್ಲ. ಬುಟ್ಟಿ ಹೆಣೆಯಲಾರರು. ಅಷ್ಟೇ ಏಕೆ, ಕೊರಗರ ಭಾಷೆಯೇ ಅವರಿಗೆ ಬರುತ್ತಿಲ್ಲ. ಯಾರಿಗೆ ಇವೆಲ್ಲವೂ ಬರುತ್ತಿದೆಯೋ ಅವರು ಶಾಲೆಗೆ ಹೋಗದವರು.

ಈ ಲೇಖನ ಓದಿದ್ದೀರಾ?: ಶತಾವರಿ | ಕತ್ತಲೊಳಗೆ ಆಜಾನುಬಾಹುವೊಬ್ಬ ನನ್ನೆರಡೂ ಕೈ ಕಟ್ಟಿ, ಎತ್ತಿ ಹೆಗಲ ಮೇಲೆ ಹಾಕಿಕೊಂಡು ನಡೆಯತೊಡಗಿದ!

ಇನ್ನೊಂದು ಪ್ರಶ್ನೆ ಎದುರಾಗುತ್ತದೆ; ಕೊರಗ ಮಕ್ಕಳು ಡೋಲು, ಚೆಂಡೆ ನುಡಿಸುತ್ತ ಇರಬೇಕೇ? ಎಲ್ಲರಂತೆ ಆಧುನಿಕ ಶಿಕ್ಷಣ ಪಡೆದು ಹೊಸ ಕ್ಷೇತ್ರಗಳಲ್ಲಿ ತಮ್ಮ ಹೆಜ್ಜೆಗುರುತುಗಳನ್ನು ಮೂಡಿಸಬಾರದೇ? ಈ ಎರಡೂ ಪ್ರಶ್ನೆಗಳನ್ನು ಬೇರೆ-ಬೇರೆ ಎಂದು ಭಾವಿಸುವುದರಲ್ಲೇ ಸಮಸ್ಯೆ ಇದೆ. ಶ್ರೇಣಿಯ ಮೇಲಿರುವ ಸಮುದಾಯಗಳು ತಮ್ಮ ಕಲೆ, ಸಾಹಿತ್ಯ, ಸಂಸ್ಕೃತಿಯನ್ನೇ ಎಲ್ಲರೂ ಕಲಿಯಬೇಕಾದದ್ದು ಎಂದು ಹೇರಿಕೆ ಮಾಡಿರುವುದರಿಂದ ನಾವು ಅದನ್ನೇ 'ಮುಖ್ಯವಾಹಿನಿ' ಎಂದು ಕರೆಯುತ್ತಿದ್ದೇವೆ. ಕೊರಗರದೂ ಅಥವಾ ಇಂತಹ ಎಲ್ಲ ಪುಟ್ಟ-ಪುಟ್ಟ ಸಮುದಾಯಗಳ ಸಂಸ್ಕೃತಿಯೂ ಮುಖ್ಯವಾಹಿನಿಯೇ ಎಂದು ತಿಳಿದಾಗ ಮೇಲಿನ ಪ್ರಶ್ನೆಗಳ ಜಿಗುಟಾದ ಗಂಟುಗಳು ಬಿಚ್ಚಿಕೊಳ್ಳಬಹುದು. ಮಕ್ಕಳಿಗಾಗಿ ವಾಸುದೇವ ಗಂಗೇರರು ಕೊರಗರ ಮಂಡಾಳೆ, ಡೋಲು-ಕೊಳಲುಗಳನ್ನೆಲ್ಲ ಬಳಸಿ ಅವರ ರಾಜ ಹಿಬಾಶಿಕನ ನಾಟಕವಾಡಿಸಲು ಯೋಚಿಸಿದಾಗ, ಅವರದೇ ಕತೆ ಹೇಳಬೇಕೇ ಅಥವಾ ಅವರಲ್ಲಿ ಆಸೆ ಹುಟ್ಟಿಸುವ ಪಾತ್ರಗಳಿರುವ ಕತೆಗಳನ್ನು ಆಯ್ದುಕೊಳ್ಳಬೇಕೇ ಎಂಬ ಪ್ರಶ್ನೆ ಎದುರಾಯಿತು. "ನಗರದ ರಂಗುರಂಗಿನ ಆಮಿಷಗಳನ್ನು ಅವರಿಗೆ ನೀಡುವುದು ಅವಶ್ಯ, ಅದೇ ಅವರನ್ನು ಮುಂದಕ್ಕೊಯ್ಯಬಲ್ಲ ಚಾಲನಾ ಶಕ್ತಿ," ಎಂದರು ಕೆಲವರು. "ತಮಗೊಬ್ಬ ರಾಜನಿದ್ದ, ಆ ರಾಜನೂ ಎಲ್ಲ ರಾಜರಂತೆ ಧೀರೋದಾತ್ತನಾಗಿದ್ದ ಎಂಬ ಹೆಮ್ಮೆಯೂ ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಬಲ್ಲದು," ಎಂದರು ಇನ್ನು ಕೆಲವರು.

ಭೂಮಿಯ ಒಡೆತನ ಇಲ್ಲದಿರುವುದು, ಸಾಮಾಜಿಕ ಮನ್ನಣೆಗಳು ಸಿಗದಿರುವುದು, ತನ್ನ ಕಲೆ-ಸಂಸ್ಕೃತಿಯನ್ನು ತನ್ನ ಪರಿಸರದಾಚೆ ಕಾಣದಂತಹ ಅನ್ಯಭಾವ ಇವೆಲ್ಲವೂ ಅವರ ಆತ್ಮವಿಶ್ವಾಸಕ್ಕೆ ಹೊಡೆತ ನೀಡುತ್ತಿರುತ್ತದೆ. ಈ ಎಲ್ಲ ಚಿಂತನೆಗಳನ್ನಿಟ್ಟುಕೊಂಡು ಮಕ್ಕಳಿಗಾಡಿಸಿದ 'ಹಿಬಾಶಿಕ' ಎಂಬ ರಾಜನ ಕತೆ ರಂಗದ ಮೇಲೆ ಮೂಡಿಬಂತು. ಈ ನಾಟಕದ ತಾಲೀಮನ್ನು ನೋಡಲು ದೂರದೂರುಗಳಿಂದ ರಂಗನಿರ್ದೇಶಕರುಗಳಾದ ಶ್ರೀಪಾದ್ ಭಟ್, ಸಂತೋಷ ನಾಯಕ್ ಬಂದರು. ಪುರುಷೋತ್ತಮ ಬಿಳಿಮಲೆಯವಂತಹ ವಿದ್ವಾಂಸರು ಬರೆದರು. ಪ್ರದರ್ಶನ ನೋಡಲು ಬೇರೆ-ಬೇರೆ ಊರುಗಳಿಂದ ಜನರು ಬಂದರು. ತಮ್ಮ ಸುದ್ದಿಮಾಧ್ಯಮಗಳಲ್ಲಿ ವರದಿ ಮಾಡಲು ಪತ್ರಕರ್ತರು ಕ್ಯಾಮೆರಾ ಹಿಡಿದು ಕುಳಿತರು. ಇವೆಲ್ಲವೂ ಆ ಮಕ್ಕಳ ಎದೆಯೊಳಗೆ ಅಳಿಸಲಾಗದಂತಹ ಸ್ಮೃತಿಬಿಂಬವನ್ನು ಮೂಡಿಸಿರಬಹುದು. ಎಂದೂ ಹತ್ತು-ಹನ್ನೆರಡು ಜನರಿಗಾಗುವುದಕ್ಕಿಂತ ಹೆಚ್ಚು ಅಡುಗೆ ಮಾಡಿರದ ಕೊರಗ ಹೆಂಗಸರು ಆ ಶಿಬಿರದಲ್ಲಿ ಐವತ್ತು-ಅರವತ್ತು ಜನರಿಗೆ ನಿತ್ಯವೂ ಅಡುಗೆ ಮಾಡಿ ಬಡಿಸಿ ಪಡೆದ ಆತ್ಮವಿಶ್ವಾಸವೂ ದೊಡ್ಡದೇ. ಪ್ರದರ್ಶನ ನೋಡಲು ಬೇರೆ-ಬೇರೆ ಊರಿನ ಸಾಕಷ್ಟು ಜನರು ಬರುವುದು ತಿಳಿಯುತ್ತಲೇ ಕೊರಗ ಗಂಡಸರು ಆ ಪ್ರದರ್ಶನದಲ್ಲಿ ತಾವೂ ದೀಮ್ಸಾಲೆ ಕುಣಿಯುತ್ತೇವೆ ಎಂದು ಆಸೆ ವ್ಯಕ್ತಪಡಿಸಿದರು. ಹಾಗೆ ನೋಡಿದರೆ, ಅದು ಗಂಡಸರದಷ್ಟೇ ಆಸೆಯಾಗಿರಲಿಲ್ಲ. ಮಕ್ಕಳ ನಾಟಕ ಮುಗಿದ ಮೇಲೆ ಗಂಡಸರೂ, ಹೆಂಗಸರೂ, ಮಕ್ಕಳೂ ಸೇರಿ ಶಿವರಾತ್ರಿಯಂದು ಕುಣಿಯುವ ಆ ನೃತ್ಯವನ್ನು ಕುಣಿದು-ಕುಣಿದು ದಣಿದರು. ದಣಿದು ಖುಷಿಪಟ್ಟರು.

ವಾರದ ಈ ಶಿಬಿರದಲ್ಲಿ ನಾವು ಕಲಿತದ್ದೇ ಹೆಚ್ಚು. ಅವರ ಡೋಲು, ಚೆಂಡೆ, ಕೊಳಲು ಇನ್ನೂ ಕಿವಿಯೊಳಗೆ ಸದ್ದು ಮಾಡುತ್ತಿವೆ. ಹಸಿಮರವನ್ನು ಕಡಿಯಬಾರದೆಂಬ ಅವರ ನಂಬಿಕೆ, ತೊಳೆದ ಪಾತ್ರೆಗಳನ್ನು ಬಿಸಿಲಿನಲ್ಲಿ ಒಣಗಿಸದೆ ಬಳಸದಿರುವ ಅವರ ರೂಢಿ, ಮುಂಜಾನೆಯ ಹೂವಿನಂತೆ ಮೆಲ್ಲನೆ ಅರಳುವ ಕೊರಗ ಹೆಂಗಸರ ನಗು, ಹೊರಡುವ ಅರ್ಥವಲ್ಲದೆ ಇನ್ಯಾವ ಉದ್ದೇಶವನ್ನೂ ಅಡಗಿಸಿಟ್ಟುಕೊಳ್ಳದ ಮಾತು ನಮಗೂ ಸಿದ್ಧಿಸಬೇಕೆಂದರೆ ನಮ್ಮದೇ ಮುಖ್ಯಧಾರೆ ಎಂಬ ಭ್ರಮೆಯಿಂದ ನಾವು ಹೊರಬರಬೇಕು.

ನಿಮಗೆ ಏನು ಅನ್ನಿಸ್ತು?
3 ವೋಟ್
eedina app