ಮೊಗೆದಷ್ಟೂ ಮಾತು | ಥಿಯೇಟರ್‌ ಇಲ್ಲದ ಊರಲ್ಲಿ ನಾ ಬದುಕಲಾರೆ

Prabhakar 2

ನಮ್ಮೂರಲ್ಲಿ ಹುಡುಗಿಯರು ಸಿನಿಮಾ ನೋಡಲು ಥಿಯೇಟರ್‌ಗೆ ಹೋಗುವುದೇ ಮಹಾಪರಾಧವಾಗಿತ್ತು. ಸಿನಿಮಾ ನೋಡಿ ಹೊರಬರುವಷ್ಟರಲ್ಲಿ ಜನರು 'ಕ್ಯಾರೆಕ್ಟರ್‍ಲೆಸ್' ಎನ್ನುವ ಮುದ್ರೆ ಒತ್ತಿಬಿಡುತ್ತಿದ್ದರು. ಆದರೆ, ಹುಡುಗರ ವಿಷಯದಲ್ಲಿ ಈ 'ಕ್ಯಾರೆಕ್ಟರ್' ಮಾತೇ ಇಲ್ಲ! ಇದೇ ಕಾರಣಕ್ಕೆ, ಅದೆಷ್ಟೋ ಸಿನಿಮಾಗಳನ್ನು ಥಿಯೇಟರ್‌ನಲ್ಲಿ ನೋಡುವ ಅನುಭವ ಕೈತಪ್ಪಿತ್ತು

ಆ ದಿನ ಶಾಲೆಗೆ ಹೋದವಳಿಗೆ ಖುಷಿಯ ಸುದ್ದಿ ಕಾದಿತ್ತು - ಕುಮಾರಧಾರೆಯ ಸುತ್ತಮುತ್ತ ಸಿನಿಮಾ ಶೂಟಿಂಗ್. ಯಾವ ಚಿತ್ರ ಇರಬಹುದು? ನಾಯಕ, ನಾಯಕಿ ಯಾರಾಗಿರಬಹುದು?  ಯೋಚನೆಯಲ್ಲಿ ಪಾಠ ತಲೆಗೆ ಹೋಗ್ಲೇ ಇಲ್ಲ. ಬರೀ ಸಿನಿಮಾ ಶೂಟಿಂಗ್‍ನ ಕಲ್ಪನೆ. ಕ್ಲಾಸ್ ಮುಗಿಯೋದನ್ನೇ ಕಾಯ್ತಾ ಇದ್ದೆ. ಶಾಲೆಯ ಬೆಲ್ ಹೊಡೆದ ಮರುಕ್ಷಣವೇ ಶೂಟಿಂಗ್ ಸ್ಪಾಟ್‍ನಲ್ಲಿದ್ದೆ.

ಕುಮಾರಧಾರೆ ನದಿ ದಡದಲ್ಲಿ ಚಿಕ್ಕ ಗುಡಿಸಲಿನ ಸೆಟ್. ಕ್ಯಾಮರಾ, ಲೈಟ್, ಒಂದೇ ಸಮನೆ ಓಡಾಡುತ್ತಿದ್ದ ಸಿನಿಮಾ ಜನ. ನಾ ನೋಡಿದ ಮೊದಲ ಹೀರೋ ಟೈಗರ್ ಪ್ರಭಾಕರ್. 'ಪುಟ್ಟ ಹೆಂಡ್ತಿ' ಚಿತ್ರ. ಬೇಬಿ ರೇಖ ಆ ಚಿತ್ರದ ನಾಯಕಿ. ಸಮಯದ ಪರಿವೇ ಇಲ್ಲದೆ ಚಿತ್ರೀಕರಣ ನೋಡ್ತಾ ನಿಂತಿದ್ದೆ. ಮಾವನ ಮಿನಿ ಥಿಯೇಟರ್‌ನಲ್ಲಿ ಟೈಗರ್ ಪ್ರಭಾಕರ್ ಅವರ ಎಷ್ಟೋ ಸಿನಿಮಾ ನೋಡಿದ್ದೆ. ಆದ್ರೆ ಅವತ್ತು ನೇರವಾಗಿ, ತುಂಬಾ ಹತ್ತಿರದಲ್ಲಿ ನೋಡುವ ಚಾನ್ಸ್.

ಅಂದಿಗೂ ಎಂದಿಗೂ ಟೈಗರ್ ಪ್ರಭಾಕರ್ ನನ್ನ ಮೆಚ್ಚಿನ ಸಿನಿಮಾ ಹೀರೋ. ನಾಯಕ ಆಗಿರಲಿ ಅಥವಾ ಖಳನಾಯಕನ ಪಾತ್ರವಾಗಿರಲಿ, ಸಿನಿಮಾಗಳಲ್ಲಿ ಅವ್ರು ಡೈಲಾಗ್ ಹೇಳುವ ಶೈಲಿ ತುಂಬಾ ಇಷ್ಟ. ಆಗ ನಿರ್ದೇಶನ, ಸಿನಿಮಾ ಜಗತ್ತಿನ ಕಲ್ಪನೆಯೇ ಇರಲಿಲ್ಲ. ಸಿನಿಮಾ ಕೇವಲ ಮನೋರಂಜನೆ ಅಷ್ಟೇ. ಟಿ.ವಿ.ಯಲ್ಲಿನ ಚಿತ್ರಹಾರ, ಚಿತ್ರಮಂಜರಿ, ಭಾನುವಾರದ ಸಿನಿಮಾಗಳಿಗಾಗಿ ಕಾಯುತ್ತಿದ್ದ ದಿನಗಳಲ್ಲಿ ಅದೆಷ್ಟು ಸಂತೋಷವಿತ್ತು! ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಕೃಷಿ, ಗೊಬ್ಬರದ ಮಾಹಿತಿಯನ್ನು ಕೂಡ ಅದೆಷ್ಟು ಆಸಕ್ತಿಯಿಂದ ನೋಡ್ತಾ ಇದ್ದೆವು! ಈಗ ಸಾವಿರ ಚಾನೆಲ್‍ಗಳು, ಬೆರಳ ತುದಿಯಲ್ಲಿ ಕ್ಷಣಮಾತ್ರದಲ್ಲಿ ಸಿಗುವ ಮನೋರಂಜನೆ; ಆದರೆ ಬದುಕು ಯಾಂತ್ರಿಕವಾಗಿದೆ.

Image
Cinema 2
ತೃಪ್ತಿ ಅಭಿಕರ್

ಹೈಸ್ಕೂಲ್, ಕಾಲೇಜ್‍ನ ದಿನಗಳಲ್ಲಿ ಹೆಚ್ಚು ಚಿತ್ರಗಳನ್ನು ನೋಡುತ್ತಿದ್ದದ್ದು ಥಿಯೇಟರ್‌ನಲ್ಲಿ. ನಮ್ಮೂರಿನಲ್ಲಿ 'ಅರುಣಾ' ಮತ್ತು 'ಮಯೂರ' ಎಂಬ ಎರಡು ಚಿತ್ರಮಂದಿರಗಳು. ಅರುಣಾ ಥಿಯೇಟರ್ ಮನೆಗೆ ಸಮೀಪದಲ್ಲಿದ್ದರೂ, ಮಯೂರ ಥಿಯೇಟರ್ ನನ್ನ ಮೊದಲ ಆಯ್ಕೆ. ರವಿಚಂದ್ರನ್ ಅವರ ಸಿನಿಮಾಗಳು ಇಲ್ಲಿಯೇ ಹೆಚ್ಚು ಪ್ರದರ್ಶನ ಕಾಣುತ್ತಿದ್ದವು. ವೈಯಕ್ತಿಕವಾಗಿ ರವಿಚಂದ್ರನ್ ಸಿನಿಮಾಗಳಲ್ಲಿನ ಶ್ರೀಮಂತ ಮೇಕಿಂಗ್ ನನಗೆಂದಿಗೂ ಬೆರಗು.

ಆದರೆ, ಕರಾವಳಿ ಜನರಿಗೆ ಸಿನಿಮಾಗಿಂತ ಹೆಚ್ಚಾಗಿ ನಾಟಕ, ಯಕ್ಷಗಾನದಲ್ಲಿ ಒಲವು. ಆ ದಿನಗಳಲ್ಲಿ ಸಿನಿಮಾ ಆಸಕ್ತಿಯ ವಿಷ್ಯದಲ್ಲಿ ಕೆಳಕ್ಕೆ ತಳ್ಳಲ್ಪಟ್ಟಿತ್ತು. ಥಿಯೇಟರ್‌ಗೆ ಚಿತ್ರ ನೋಡಲು ಬರುತ್ತಿದ್ದವರ ಸಂಖ್ಯೆ ಕಡಿಮೆಯಾದಂತೆ, ನಿರೀಕ್ಷಿತ ಲಾಭ ಕಾಣದೆ ಮಯೂರ ಥಿಯೇಟರ್‌ನಲ್ಲಿ ಚಿತ್ರ ಪ್ರದರ್ಶನ ನಿಲ್ಲಿಸಿ, ಮದ್ವೆ ಮತ್ತಿತರ ಸಮಾರಂಭಗಳಿಗೆ ನೀಡಲಾಯ್ತು. ಅದೊಂದು ದಿನ ಮಯೂರದಲ್ಲಿನ ಸಮಾರಂಭಕ್ಕೆ ಹೋದವಳು, ಪರದೆಯ ಮುಂಭಾಗದಲ್ಲಿ ನಿಂತಿದ್ದ ವಧು-ವರನನ್ನು ನೋಡಿ,  ಮದುವೆ ಊಟವನ್ನೂ ಮಾಡದೆ ಮನೆಗೆ ಓಡೋಡಿ ಹೋಗಿ ಮರುಗುತ್ತ ಕೂತಿದ್ದೆ. ಅದೆಷ್ಟೋ ದೃಶ್ಯ ವೈಭವಕ್ಕೆ ಸಾಕ್ಷಿಯಾಗಿದ್ದ ಪರದೆ ಮೂಕವಾಗಿತ್ತು. ಈಗ ಉಳಿದಿರುವುದು ಅರುಣಾ ಥಿಯೇಟರ್ ಮಾತ್ರ. ಇತ್ತೀಚೆಗೆ ಅರುಣಾದಲ್ಲಿ ಪ್ರಾಂತೀಯ ಭಾಷಾ ಚಿತ್ರಗಳು ಹೆಚ್ಚಾಗಿ ಪ್ರದರ್ಶನ ಕಾಣುತ್ತಿವೆ.  ಇದೇ ಥಿಯೇಟರ್‌ನಲ್ಲಿ ನನ್ನ ನಿರ್ದೇಶನದ ಚಿತ್ರ ಪ್ರದರ್ಶನ ಕಾಣಬೇಕೆಂಬ ಕನಸು ಜೀವಂತ.

ಮನುಷ್ಯರಿಲ್ಲದ ದ್ವೀಪದಲ್ಲಿ ಬದುಕಬಲ್ಲೆ. ಆದರೆ...

ನಮ್ಮೂರಲ್ಲಿ ಹುಡುಗಿಯರು ಥಿಯೇಟರ್‌ಗೆ ಸಿನಿಮಾ ನೋಡಲು ಹೋಗುವುದೇ ಮಹಾಪರಾಧವಾಗಿತ್ತು. ಸಿನಿಮಾ ನೋಡಿ ಹೊರಬರುವಷ್ಟರಲ್ಲಿ ಜನರು 'ಕ್ಯಾರೆಕ್ಟರ್‍ಲೆಸ್' ಎನ್ನುವ ಮುದ್ರೆ ಒತ್ತಿಬಿಡುತ್ತಿದ್ದರು. ಆದರೆ, ಹುಡುಗರ ವಿಷಯದಲ್ಲಿ ಈ 'ಕ್ಯಾರೆಕ್ಟರ್' ಮಾತೇ ಇಲ್ಲ! ಇದೇ ಕಾರಣಕ್ಕೆ, ಅದೆಷ್ಟೋ ಸಿನಿಮಾಗಳನ್ನು ಥಿಯೇಟರ್‌ನಲ್ಲಿ ನೋಡುವ ಅನುಭವ ಕೈತಪ್ಪಿತ್ತು.

ಈ ಲೇಖನ ಓದಿದ್ದೀರಾ?: ಮೊಗೆದಷ್ಟೂ ಮಾತು | ಅವತ್ತು ಕಾಣೆಯಾಗಿದ್ದವಳು ಅಕ್ಕ ಅಲ್ಲ, ನಾನೇ!

ಮೈಸೂರಿನಲ್ಲಿ ಓದುತ್ತಿದ್ದ ದಿನಗಳಲ್ಲಿ ಥಿಯೇಟರ್‌ನಲ್ಲಿ ವಾರಕ್ಕೊಂದು ಸಿನಿಮಾ ನೋಡಿ 'ಸೇಡು' ತೀರಿಸಿಕೊಂಡಿದ್ದೆ. ಆ ದಿನಗಳಿಂದ, ಒಬ್ಬಳೇ ಸಿನಿಮಾ ನೋಡುವುದು ಇಷ್ಟವೂ ಅಭ್ಯಾಸವೂ ಆಗಿಹೋಗಿತ್ತು. ಥಿಯೇಟರ್‌ಗೆ ಹೋದಾಗಲೆಲ್ಲ, ಟಿಕೆಟ್ ಕೌಂಟರ್ ಹುಡುಗನ ಸಹಿತ ಸಿನಿಮಾಗೆ ಬಂದವರು ವಿಚಿತ್ರವಾಗಿ ನೋಡುತ್ತಿದ್ದರು. ಮೊದಮೊದಲು ಮುಜುಗರ ಆಗುತ್ತಿತ್ತು. ಆದರೆ, ನನ್ನ ಸಿನಿಮಾ ಪ್ರೀತಿಯು ಮುಜುಗರ, ಭಯ ಎಲ್ಲವನ್ನೂ ಮೀರಿದ್ದಾಗಿತ್ತು. ಅದೇ ಅಭ್ಯಾಸ ಬೆಂಗಳೂರಿಗೆ ಬಂದ ಮೇಲೂ ಮುಂದುವರಿದಿತ್ತು.

ಬೆಂಗಳೂರಿನ ಥಿಯೇಟರ್‌ಗಳಲ್ಲದೆ, ರಾಮನಗರ, ಮದ್ದೂರು, ಮಂಡ್ಯ ಥಿಯೇಟರ್‌ಗಳ ಗಾಂಧಿ ಕ್ಲಾಸ್‍ನಲ್ಲಿ ಕೂತು ಒಬ್ಬಳೇ ಸಿನಿಮಾ ನೋಡಿದ್ದಿದೆ. ನಾಯಕ, ನಾಯಕಿಯ ಎಂಟ್ರಿಗೆ ಶಿಳ್ಳೆ ಹಾಕಿದ್ದೇನೆ. ನನ್ನನ್ನು ಕೇಳಿದರೆ, ಸಿನಿಮಾಗಳ ನಿಜವಾದ ವಿಮರ್ಶಕರೆಂದರೆ ಗಾಂಧಿ ಕ್ಲಾಸ್ ಪ್ರೇಕ್ಷಕರು. ಯಾವುದೇ ಮುಲಾಜಿಗೆ ಒಳಪಡದೆ ನೇರವಾಗಿ ಅನಿಸಿಕೆ ವ್ಯಕ್ತಪಡಿಸುತ್ತಾರೆ. ನಮ್ಮ  ತಪ್ಪುಗಳಿಗೆ ಕನ್ನಡಿ ಹಿಡಿಯುತ್ತಾರೆ. ಅವರ ಸಂತೋಷ, ಅಭಿಮಾನದ ಶಿಳ್ಳೆ ನಮಗೆ ಸದಾ ಪ್ರೇರಣೆ. ಗಾಂಧಿ ಕ್ಲಾಸ್ ಅಷ್ಟೊಂದು ಇಷ್ಟವಾದ ಕಾರಣಕ್ಕೇ, ಮಲ್ಟಿಪ್ಲೆಕ್ಸ್‌ನಲ್ಲಿ ಕೂತು ಮೌನವಾಗಿ ಸಿನಿಮಾ ನೋಡುವುದು ಉಸಿರುಗಟ್ಟುವ ಅನುಭವ. ಏಕೆಂದರೆ, ನಾನು ಸಿನಿಮಾವನ್ನು ಕೇವಲ ನೋಡುವುದಿಲ್ಲ, ಸಂಭ್ರಮಿಸುತ್ತೇನೆ.

ಪ್ರಶ್ನೆ ಕೇಳಿದ್ದಕ್ಕೆ ಕೆಲಸ ಸಿಕ್ಕಿತು

Image
T N Seetharam
ಟಿ ಎನ್ ಸೀತಾರಾಮ್

ಬೆಂಗಳೂರಿಗೆ ಕೆಲಸ ಅರಸಿ ಬಂದಾಗ, ಸಿನಿಮಾ ಅಥವಾ ಧಾರಾವಾಹಿ ಆಯ್ಕೆ ನನ್ನ ಮುಂದಿತ್ತು. ಒಂದಷ್ಟು ದಿನ ಧಾರಾವಾಹಿಯಲ್ಲಿ ಅನುಭವ ಪಡೆದು ಆಮೇಲೆ ಸಿನಿಮಾ ಕೆಲಸ ಎಂದುಕೊಂಡೆ. ಆದರೆ, ಯಾವ ನಿರ್ದೇಶಕರ ಬಳಿ ಕೆಲಸ ಕಲಿಯುವುದು ನಿರ್ಧರಿಸಿರಲಿಲ್ಲ. ವಾಸವಿದ್ದ ಮನೆಗೆ ಸಮೀಪದಲ್ಲೇ ಟಿ ಎನ್ ಸೀತಾರಾಮ್ ಅವರ ಕಚೇರಿ 'ಭೂಮಿಕಾ.' ಅವರ 'ಮಾಯಾಮೃಗ' ನನ್ನ ಮೆಚ್ಚಿನ ಧಾರಾವಾಹಿ. ಇಲ್ಲಿಂದಲೇ ಶುರು ಅಂದುಕೊಂಡು, ಮರುದಿನವೇ, ಸರ್ಟಿಫಿಕೆಟ್‍ಗಳಿಂದ ತುಂಬಿದ್ದ ದೊಡ್ಡ ಫೈಲ್‍ನೊಂದಿಗೆ ಹಾಜರಾಗಿದ್ದೆ.

ಅದಾಗಲೇ ನಾಲ್ಕು ಜನ ಸಹಾಯಕ ನಿರ್ದೇಶಕರು ಇದ್ದುದರಿಂದ ಭೂಮಿಕಾ ಸಂಸ್ಥೆಗೆ ನನ್ನ ಅವಶ್ಯಕತೆ ಇರಲಿಲ್ಲ. ಆದರೆ, ಆಲದಮರದಂಥ ಆ ಸಂಸ್ಥೆಯ ನೆರಳಿನ ಅವಶ್ಯಕತೆ ನನಗಿತ್ತು. ಆದರೆ, ಕೆಲಸ ನಿರಾಕರಿಸಲಾಯ್ತು. ನಾನು ಯಾವತ್ತೂ 'ಮುಕ್ತ' ಧಾರಾವಾಹಿ ನೋಡದವಳು, ಹಿಂದಿನ ಎರಡು ದಿನಗಳ ಎಪಿಸೋಡು ಮಾತ್ರ ನೋಡಿದ್ದೆ. ಅದರಲ್ಲಿ ಪ್ರಮುಖ ಪಾತ್ರಧಾರಿ ಹೆಣ್ಣುಮಗಳು ಕೆಲಸಕ್ಕಾಗಿ ಪಡುವ ಕಷ್ಟ ಪ್ರಸಾರವಾಗಿತ್ತು. ಕೆಲಸ ಸಿಗದ ಸಿಟ್ಟು, ಅಸಹನೆಯಲ್ಲಿ, "ಧಾರಾವಾಹಿಯಲ್ಲಿ ಕಷ್ಟ ತೋರಿಸ್ತೀರಿ, ಹುಡುಗಿಯರು ಕೆಲ್ಸ ಕೇಳ್ಕೊಂಡು ಬಂದ್ರೆ ಇಲ್ಲ ಅಂತೀರಾ?" ಅಂದೆ ಅಷ್ಟೇ. ಆ ಕ್ಷಣ ಏನು ಯೋಚಿಸಿದರೋ ಗೊತ್ತಿಲ್ಲ; 'ಮುಕ್ತ'ದ ಸಹ ನಿರ್ದೇಶಕರಾಗಿದ್ದ ರಘು ಸಮರ್ಥ, "ನಾಳೆಯಿಂದ ಕೆಲಸಕ್ಕೆ ಬನ್ನಿ," ಅಂದ್ರು. ಧೈರ್ಯದಿಂದ ಪ್ರಶ್ನೆ ಕೇಳಿದ್ದಕ್ಕೆ ಕೆಲಸವೇನೋ ಸಿಕ್ಕಿತ್ತು. ಆದರೆ, ಮರುದಿನದಿಂದ ಅಗ್ನಿಪರೀಕ್ಷೆ ಶುರುವಾಗಲಿತ್ತು.

ನಿಮಗೆ ಏನು ಅನ್ನಿಸ್ತು?
2 ವೋಟ್