ಮೊಗೆದಷ್ಟೂ ಮಾತು | 'ಸಹಾಯಕ ನಿರ್ದೇಶಕರಂದ್ರೆ ಊಟಕ್ಕಾಗೇ ಬರೋವ್ರು' ಎಂಬ ಕುಹಕ ಮೀರುವ ಸಾಹಸ

Mogedhashtu Maathu June 7_3

ಇತ್ತೀಚೆಗೆ ಚಿತ್ರತಂಡಗಳು ಕಾರ್ಪೊರೇಟ್ ಶೈಲಿಯಲ್ಲಿ ಕೆಲಸ ಮಾಡುತ್ತಿವೆ. ತಂಡದಲ್ಲಿನ ಹುಡುಗಿಯರನ್ನು ಗೌರವಯುತವಾಗಿ ನಡೆಸಿಕೊಳ್ಳಲಾಗುತ್ತಿದೆ; ಆದ್ಯತೆ, ಅವಕಾಶಗಳಿವೆ ಎಂಬುದು ನೆಮ್ಮದಿ. ಇನ್ನಾದರೂ ಹೆಚ್ಚು-ಹೆಚ್ಚು ನಿರ್ದೇಶಕಿಯರು ಚಿತ್ರರಂಗಕ್ಕೆ ಬರುವಂತಾಗಲಿ. ಸೂಕ್ಷ್ಮ ಸಂವೇದನೆಯ ಚಿತ್ರಕತೆಗಳು ದೃಶ್ಯರೂಪಕ್ಕೆ ಬರಲೆಂಬುದು ನನ್ನ ಕನಸು

ಅಂಕಣದ ಹಿಂದಿನ ಕಂತು: ಮೊಗೆದಷ್ಟೂ ಮಾತು | ಥಿಯೇಟರ್‌ ಇಲ್ಲದ ಊರಲ್ಲಿ ನಾ ಬದುಕಲಾರೆ

ಸರ್ಟಿಫಿಕೇಟ್ ಜಗತ್ತಿನಿಂದ ವಾಸ್ತವಕ್ಕೆ ಬಂದೆ. 'ಮುಕ್ತ' ಧಾರಾವಾಹಿಗೆ ಸಹಾಯಕ ನಿರ್ದೇಶಕಿಯಾಗಿ ಮರುದಿನದಿಂದಲೇ ಕೆಲಸ ಶುರುವಾಗಿತ್ತು. ಮೊದಲ ಬಾರಿ ಸ್ಕ್ರಿಪ್ಟ್ ಹಿಡಿದ ಅನುಭವ ಇನ್ನೂ ಹಸಿರು. ಬೆಳಗ್ಗೆ ಏಳು ಗಂಟೆಗೆ ಆಫೀಸಿಗೆ ಹೋದರೆ ಮನೆಗೆ ಹಿಂತಿರುಗುತ್ತಿದ್ದುದೇ ನಡುರಾತ್ರಿಯಲ್ಲಿ. ಹಸಿವು, ನಿದ್ರೆ, ಸಮಯದ ಪರಿವೇ ಇಲ್ಲದೆ ಕೆಲಸ. ಕಲಿಯಬೇಕೆಂಬ ಉತ್ಸಾಹವಿತ್ತಲ್ಲ, ಎಲ್ಲವನ್ನೂ ಮರೆಸಿಬಿಟ್ಟಿತ್ತು. ಗುರುಗಳಾದ ಟಿ ಎನ್ ಸೀತಾರಾಮ್‍ ಅವರ ಸ್ಕ್ರಿಪ್ಟ್ ಶೈಲಿ ವಿಭಿನ್ನ. ಅದನ್ನು ಓದಿ ಅರ್ಥ ಮಾಡಿಕೊಳ್ಳುವುದು ಬಲು ಕಷ್ಟ. ಅದಕ್ಕೆ ವಿಶೇಷ ಪರಿಣತಿಯ ಅಗತ್ಯವಿತ್ತು. ಕೆಲಸಕ್ಕೆ ಸೇರಿ ಒಂದಷ್ಟು ದಿನ ಸ್ಕ್ರಿಪ್ಟ್ ಪೇಪರ್ ನನ್ನ ಕೈಗೆ ಸಿಕ್ಕಿರಲಿಲ್ಲ. ಸ್ಕ್ರಿಪ್ಟ್ ಕೈ ಸೇರಲು ಹಲವು ತಿಂಗಳುಗಳೇ ಆಗಿತ್ತು.

ಸ್ಕ್ರಿಪ್ಟ್ ಓದಿ ಕಾಪಿ ಮಾಡುವುದು ಸಹಾಯಕ ನಿರ್ದೇಶಕರ ಕೆಲಸ. ಶೂಟಿಂಗ್ ಮುಗಿಸಿ, ಆ ದಿನದ ಸ್ಕ್ರಿಪ್ಟ್ ಪೇಪರ್ ಮನೆಗೆ ತೆಗೆದುಕೊಂಡು ಹೋಗುತ್ತಿದ್ದೆ. ಎಷ್ಟೇ ರಾತ್ರಿಯಾದರೂ ಓದುತ್ತಿದ್ದೆ. ಗೊತ್ತಾಗದ ಪದವನ್ನು ಮಾರ್ಕ್ ಮಾಡಿಕೊಂಡು ಮರುದಿನ ಸಹ ನಿರ್ದೇಶಕರು ಅಥವಾ ಸಂಚಿಕೆ ನಿರ್ದೇಶಕರ ಬಳಿ ಕೇಳಿ ತಿಳಿದುಕೊಳ್ಳುತ್ತಿದ್ದೆ. ಹೀಗೆಲ್ಲ ನಡೆದು ಕೊನೆಗೆ ಅದ್ಯಾವ ಪರಿ ಸ್ಕ್ರಿಪ್ಟ್ ತಲೆಗೆ ಹೊಕ್ಕಿತ್ತು ಅಂದರೆ, ಅವರೇನು ಬರೆದಿರಬಹುದೆಂದು ಗುರುಗಳೇ ನನ್ನನ್ನು ಕೇಳುವಷ್ಟು! ಗುರುಗಳು ಕೋರ್ಟ್ ಸಂಚಿಕೆಯಿದ್ದಾಗ ಚಿಕ್ಕ ಟೇಪ್‍ನಲ್ಲಿ ಸಂಭಾಷಣೆ ರೆಕಾರ್ಡ್ ಮಾಡುತ್ತಿದ್ದರು. ರೆಕಾರ್ಡಿಂಗ್ ಕೇಳಿಸಿಕೊಂಡು ಬರೆಯಬೇಕಿತ್ತು. 15ರಿಂದ 20 ಪುಟಗಳು ಬರೆದು ಚಿತ್ರೀಕರಣಕ್ಕೆ ಹೋಗಬೇಕಾಗಿತ್ತು. ಹೀಗೆ, ಕೆಲಸದ ಎ.ಬಿ.ಸಿ.ಡಿ ಕಲಿತಿದ್ದರೆ ಅದು ಭೂಮಿಕಾ ಸಂಸ್ಥೆಯಲ್ಲಿ. ಕೆಲಸದ ಮೇಲಿನ ಶ್ರದ್ಧೆ, ಶ್ರಮ ಭೂಮಿಕಾದಲ್ಲಿ ನನ್ನ ಕೆಲಸವನ್ನು ಗಟ್ಟಿ ಮಾಡಿತ್ತು. ನನ್ನ ಇಂದಿನ ಬೆಳವಣಿಗೆಯಲ್ಲಿ ಭೂಮಿಕಾ ಸಂಸ್ಥೆಯದು ಬಹುಮುಖ್ಯ ಪಾತ್ರ. ಟಿಎನ್‌ಎಸ್ ಶಿಷ್ಯೆ ಅನ್ನೋದು ನನ್ನ ಟ್ರಂಪ್ ಕಾರ್ಡ್.

Image
Mogedhashtu Maathu June 7_2

ಶೂಟಿಂಗ್ ಇರದ ದಿನ ಎಡಿಟಿಂಗ್‍ನಲ್ಲಿ ಸಹಾಯಕ ಕೆಲಸ. ರಜೆ ಇದ್ದಾಗ ಸಮಯ ವ್ಯರ್ಥ ಮಾಡುತ್ತಿರಲಿಲ್ಲ. ಬೇರೆ-ಬೇರೆ ಸಂಸ್ಥೆಗಳ ಸೀರಿಯಲ್ ಶೂಟಿಂಗ್‍ಗೆ ಹೋಗುತ್ತಿದ್ದೆ. ಇತರ ನಿರ್ದೇಶಕರ ಕೆಲಸವನ್ನು ಗಮನಿಸುತ್ತಿದ್ದೆ. ಅವರಿಂದಲೂ ಕೆಲಸ ಕಲಿಯುತ್ತಿದ್ದೆ. ವರ್ಷ ಸಾಗಿತ್ತು. ಕೆಲಸದ ಒತ್ತಡ ಜಾಸ್ತಿಯಾದಂತೆಲ್ಲ ಎಷ್ಟೋ ಸಲ, ಈ ಕೆಲಸ ಬಿಟ್ಟು ಬೇರೆ ಕೆಲಸಕ್ಕೆ ಮನಸ್ಸು ಸೇರಬಯಸುತ್ತಿತ್ತು. ಹಾಗೆ ಅನ್ನಿಸಿದಾಗೆಲ್ಲ ನನ್ನನ್ನು ಇದೇ ಕ್ಷೇತ್ರದಲ್ಲಿ ಉಳಿಯುವಂತೆ ಮಾತಾಡುತ್ತಿದ್ದವರು ಡ್ರೈವರ್ ಆಗಿದ್ದ ರವಿ. ಸೋತಾಗೆಲ್ಲ ಧೈರ್ಯ ತುಂಬಿ ತಮಾಷೆಗೆ ಆತ ಹೇಳುತ್ತಿದ್ದ: "ಮೇಡಂ, ನೀವೇನಾದ್ರೂ ಸೋತು ಕೆಲ್ಸ ಬಿಟ್ರೆ ನಿಮ್ಗೆ ಹನ್ನೆರಡು ಗಂಡುಮಕ್ಕಳು ಹುಟ್ತಾರೆ; ಅವ್ರೆಲ್ಲಾ ನನ್ನ ಥರ ಡ್ರೈವರ್‌ಗಳಾಗ್ತಾರೆ. ಏನೇ ಪರಿಸ್ಥಿತಿ ಬಂದ್ರೂ ಧೈರ್ಯದಿಂದ ಹೀಗೇ ಕೆಲ್ಸ ಮಾಡಿದ್ರೆ, ನಿಮ್ಗೆ ಹನ್ನೆರಡು ಹೆಣ್ಣುಮಕ್ಕಳು ಹುಟ್ತಾರೆ. ಅವ್ರೆಲ್ಲಾ ನಿಮ್ಮ ಥರಾನೇ ಡೈರೆಕ್ಟರ್‌ಗಳಾಗ್ತಾರೆ.” ಮಾತಿನಲ್ಲಿ ತಮಾಷೆ ಇದ್ದರೂ ಸತ್ಯವಿತ್ತು. 'ಮುಕ್ತ' ಧಾರಾವಾಹಿಯಲ್ಲಿ ತಾಯಿ ಹೃದಯದ ನಟ ನಟಿಯರಿದ್ದರು, ತಂತ್ರಜ್ಞರ ಮಾರ್ಗದರ್ಶನವಿತ್ತು. ಅದೊಂದು ಅದ್ಭುತ ತಂಡ. ನನ್ನ ಬೆಳವಣಿಗೆಯಲ್ಲಿ ಅವರೆಲ್ಲರ ಪಾತ್ರ ಪ್ರಮುಖವಾದುದು. ಸುತ್ತಲಿನ ವ್ಯಕ್ತಿಗಳ ಪ್ರೋತ್ಸಾಹದ ಮಾತುಗಳೇ ನಮಗೆ ಬದುಕಿನಲ್ಲಿ ಭರವಸೆ ಮೂಡಿಸೋದು, ಸಾಧಿಸುವ ಛಲ ಕೊಡೋದು.

ಈ ಲೇಖನ ಓದಿದ್ದೀರಾ?: ಮೊಗೆದಷ್ಟೂ ಮಾತು | ಅವತ್ತು ಕಾಣೆಯಾಗಿದ್ದವಳು ಅಕ್ಕ ಅಲ್ಲ, ನಾನೇ!

ಗುರುಗಳ ಬಲವಂತಕ್ಕೆ ಮಣಿದು, 'ಮುಕ್ತ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದೆ. ಆದರೆ, ನಟನೆ ನನ್ನಿಷ್ಟದ ಕೆಲಸ ಆಗಿರಲಿಲ್ಲ. ಮೊದಲು ನಟನೆಯ ಆಫರ್ ಕೊಟ್ಟವರು 'ಯಾವ ಜನ್ಮದ ಮೈತ್ರಿಯೋ' ಧಾರಾವಾಹಿಯ ನಿರ್ದೇಶಕರಾಗಿದ್ದ ಸುನಿಲ್ ಕುಮಾರ್ ಸಿಂಗ್. ಅಂದು ಅವಕಾಶ ನಿರಾಕರಿಸಿದ್ದೆ. ನಂತರದ ದಿನಗಳಲ್ಲಿ 'ಪ್ರೀತಿಯೆಂಬ ಮಾಯೆ' ಹೆಸರಿನ ಧಾರಾವಾಹಿಯಲ್ಲಿ ನಟಿಸಿದ್ದೆ. ಆದರೂ, ನನ್ನ ಗಮನವೆಲ್ಲ ನಿರ್ದೇಶಕಿ ಆಗುವುದರ ಮೇಲಿತ್ತು. 'ಮುಕ್ತ' ಧಾರಾವಾಹಿ ಮುಕ್ತಾಯ ಆದ ಮೇಲೆ ಇತರ ಸಂಸ್ಥೆಗಳಿಗೆ ಚಿತ್ರಕತೆ, ಸಂಭಾಷಣೆ ಬರೆಯಲಾರಂಭಿಸಿದೆ. ಹಲವು ವರ್ಷಗಳಿಂದ ಕಿರುತೆರೆಯಲ್ಲಿ ಕೆಲಸ ಮಾಡುತ್ತಿದ್ದರಿಂದಲೋ ಏನೋ ಮನಸ್ಸಿಗೆ ಯಾಂತ್ರಿಕ ಅನ್ನಿಸತೊಡಗಿತ್ತು. ಆಗ ಸುನಿಲ್ ಕುಮಾರ್ ಸಿಂಗ್‍ ಅವರು, ಗಣೇಶ್ ಅಭಿನಯದ 'ಮದುವೆ ಮನೆ' ಚಿತ್ರದ ತಯಾರಿಯಲ್ಲಿದ್ದರು. ನಾ ಕತೆ, ಚಿತ್ರಕತೆ ವಿಸ್ತರಣಾ ತಂಡಕ್ಕೆ ಸೇರ್ಪಡೆಯಾದೆ. ಹೀಗೆ ಪಯಣ ಕಿರುತೆರೆಯಿಂದ ಹಿರಿತೆರೆಗೆ ಸಾಗಿತ್ತು.

ನಂತರದ ದಿನಗಳಲ್ಲಿ ಹಲವು ಚಿತ್ರಗಳಿಗೆ ಸಹ ನಿರ್ದೇಶಕಿಯಾಗಿದೆ. ಕೆಲವು ಚಿತ್ರತಂಡದ ಜೊತೆ ಒಳ್ಳೆಯ, ಇನ್ನೊಂದಷ್ಟು ಚಿತ್ರತಂಡದ ಜೊತೆ ಕಹಿಯಾದ ಅನುಭವ ದಕ್ಕಿದ್ದಿದೆ. ಒಳ್ಳೆಯ-ಕೆಟ್ಟ ಅನುಭವಗಳೆರಡೂ ಪಾಠ ಕಲಿಸುತ್ತವೆ. ಚಿತ್ರೀಕರಣದ ಜಾಗದಲ್ಲಿ ನಿರ್ದೇಶನ ತಂಡದಲ್ಲಿ ಹುಡುಗಿಯರಿರುವುದೇ ಗ್ಲಾಮರ್‌ಗಾಗಿ ಅನ್ನೋ ಮನಸ್ಥಿತಿಯವರಿಂದ, "ಇಲ್ಲಿ ಟ್ಯಾಲೆಂಟ್‍ಗೆ ಬೆಲೆಯಿಲ್ಲ, ಸೆಟ್‍ನಲ್ಲಿ ಹುಡುಗಿಯರಿದ್ದರೆ ಕಣ್ಣಿಗೆ ಹಬ್ಬ," ಅನ್ನೋ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗಿತ್ತು. ಚಿತ್ರವೊಂದಕ್ಕೆ 47 ದಿನ ಕೆಲಸ ಮಾಡಿದ್ದಕ್ಕೆ ಸಿಕ್ಕ ಸಂಭಾವನೆ ಎರಡೂವರೆ ಸಾವಿರ. ತಂತ್ರಜ್ಞರ, ಕತೆಗಾರರ ಶ್ರಮಕ್ಕೆ ಬೆಲೆ ಇಲ್ಲವೇ ಅನ್ನಿಸಿತು. "ಸಹಾಯಕ ನಿರ್ದೇಶಕರೆಂದರೆ ಊಟಕ್ಕಾಗಿಯೇ ಬರುವವರು. ಕೆಲಸ ಕೊಟ್ಟಿರುವುದಲ್ಲದೆ ಸಂಬಳವನ್ನೂ ಕೊಡಬೇಕಾ?" ಎಂಬಂತಹ ಮನೋಭಾವ.

Image
Mogedhashtu Maathu June 7_1

ಹೊರಾಂಗಣ ಚಿತ್ರೀಕರಣದ ವೇಳೆ, "ಹುಡುಗರಾದರೆ ಒಂದೇ ರೂಮ್‌ನಲ್ಲಿ ಅಡ್ಜೆಸ್ಟ್ ಮಾಡಿಕೊಳ್ಳುತ್ತಾರೆ, ಹುಡುಗಿಯರಿಗಾದರೆ ಪ್ರತ್ಯೇಕ ರೂಮ್‍ಗೆ ಖರ್ಚು ಮಾಡಬೇಕಾಗುತ್ತದೆ, ಬಜೆಟ್ ಜಾಸ್ತಿಯಾಗುತ್ತದೆ," ಎಂಬ ಮಾತುಗಳು. ಒಪ್ಪಿಕೊಂಡ ಪೇಮೆಂಟ್ ಕಡಿಮೆಯೇ ಇರುತ್ತದೆ; ಅದರಲ್ಲೂ ಕಡಿತ ಮಾಡಲಾಗುತ್ತದೆ! ನಿರ್ದೇಶಕರ ವಿಭಾಗ ಎಂಬುದೊಂದು ಶಾಪಗ್ರಸ್ತ ವಿಭಾಗ. ಎಲ್ಲವನ್ನೂ ಮೀರಿ ಬೆಳೆಯಬೇಕಾಗಿತ್ತು. ಅಸ್ತಿತ್ವವನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆ ಇತ್ತು. ಹಾಗಾಗಿ ಇವೆಲ್ಲವನ್ನೂ ಸಹಿಸಿಕೊಳ್ಳಲೇಬೇಕಿತ್ತು.

ಇತ್ತೀಚಿನ ದಿನಗಳಲ್ಲಿ ಚಿತ್ರತಂಡಗಳು ಕಾರ್ಪೊರೇಟ್ ಶೈಲಿಯಲ್ಲಿ ಕೆಲಸ ಮಾಡುತ್ತಿವೆ. ತಂಡದಲ್ಲಿನ ಹುಡುಗಿಯರನ್ನು ಗೌರವಯುತವಾಗಿ ನಡೆಸಿಕೊಳ್ಳಲಾಗುತ್ತಿದೆ. ಆದ್ಯತೆ, ಅವಕಾಶಗಳಿವೆ ಎಂಬುದು ಸಂತೋಷದ ವಿಚಾರ. ಇನ್ನಾದರೂ ಹೆಚ್ಚು-ಹೆಚ್ಚು ನಿರ್ದೇಶಕಿಯರು ಚಿತ್ರರಂಗಕ್ಕೆ ಬರುವಂತಾಗಲಿ. ಸೂಕ್ಷ್ಮ ಸಂವೇದನೆಯ ಚಿತ್ರಕತೆಗಳು ದೃಶ್ಯರೂಪಕ್ಕೆ ಬರಲೆಂಬುದು ನನ್ನ ಕನಸು.

ನಿಮಗೆ ಏನು ಅನ್ನಿಸ್ತು?
4 ವೋಟ್