ಮುಳ್ಳುಹಾದಿಗೆ ಮಣ್ಣು ಹೊತ್ತವರು | ಘನತೆ ಇಲ್ಲದ ವೃತ್ತಿ ಬೇಡವೆಂದ ಹೋಮೈ ವ್ಯಾರಾವಾಲಾ

Homai Vyarawalla 2

ರೊಬೊಟಿನಂತೆ ಫೋಟೊ ತೆಗೆದುಕೊಳ್ಳುತ್ತಿದ್ದ, ಅಷ್ಟೇ ವೇಗವಾಗಿ ಮಾಯವಾಗಿಬಿಡುತಿದ್ದ ಹೋಮೈ, ತಮ್ಮ ಫೋಟೊ ವಸ್ತುಗಳಾದ ವ್ಯಕ್ತಿಗಳನ್ನು ಎಂದೂ ಭೇಟಿಯಾಗಲಿಲ್ಲ. ಅವರ ಕ್ಯಾಮೆರಾ ಕಣ್ಣಿಗೆ ನೆಹರೂ ನೆಚ್ಚಿನ 'ವಸ್ತು'ವಾಗಿದ್ದರು. 17 ವರ್ಷ ಕಾಲ ಪ್ರಧಾನಿಯಾಗಿದ್ದ ಅವರ ನೂರಾರು ಫೋಟೊ ತೆಗೆದಿದ್ದರೂ, ಹೋಮೈ ಒಮ್ಮೆಯೂ ಭೇಟಿಯಾಗಲಿಲ್ಲ, ಮಾತನಾಡಲಿಲ್ಲ!

ಆಗಸ್ಟ್ 15, 1947. ಬೆಳಗ್ಗೆ 8.30ಕ್ಕೆ ದೆಹಲಿಯ ದರ್ಬಾರ್ ಹಾಲ್ ಎದುರು ಸ್ವತಂತ್ರ ಭಾರತದ ಮೊತ್ತಮೊದಲ ಸಾರ್ವಜನಿಕ ಧ್ವಜಾರೋಹಣ ಸಮಾರಂಭ ನೆರವೇರಲಿಕ್ಕಿತ್ತು. ಹಿಂದಿನ ರಾತ್ರಿ 12 ಗಂಟೆಗೆ ಸರಿಯಾಗಿ ವೈಸರಾಯ್ ಭವನದ ಒಳಗೆ ನಡೆದ ಸಮಾರಂಭದಲ್ಲಿ ಜವಾಹರಲಾಲ್ ನೆಹರೂ ಪ್ರಧಾನಿಯಾಗಿ, ವಲ್ಲಭಭಾಯಿ ಪಟೇಲ್ ಉಪ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಸ್ವತಂತ್ರ ಭಾರತ ಅಸ್ತಿತ್ವಕ್ಕೆ ಬರಲು ಸಕಲ ಸಿದ್ಧತೆ ಮುಗಿದಿತ್ತು. ನಡುರಾತ್ರಿಯ ಸಮಾರಂಭದ ಫೋಟೊಗಳನ್ನು ಚಕಚಕನೆ ಸೆರೆಹಿಡಿದ ಕೃಶಶರೀರಿ ಛಾಯಾಗ್ರಾಹಕಿ, ಬೆಳಗ್ಗೆಯ ಐತಿಹಾಸಿಕ ಸಮಾರಂಭವನ್ನು ಕ್ಯಾಮೆರಾ ಕಣ್ಣುಗಳಲ್ಲಿ ಹಿಡಿಯಲು ಸಿದ್ಧವಾಗಿದ್ದಳು. ನಸುಕಿಗೇ ಎದ್ದು ಸೈಕಲ್ ಮೇಲೆ ಭಾರದ ಕ್ಯಾಮೆರಾ ಪೆಟ್ಟಿಗೆಯಿಟ್ಟುಕೊಂಡು ವೇಗವಾಗಿ ಬರುತ್ತಿದ್ದಳು. ದೆಹಲಿಯ ಬೀದಿಗಳು ಅಲಂಕೃತಗೊಂಡಿದ್ದವು. ವಿಜಯದ ಸಂಭ್ರಮ, ಉನ್ಮಾದದಲ್ಲಿ ರಾಜಧಾನಿ ಮುಳುಗೇಳುತ್ತಿತ್ತು. ಅದನ್ನೆಲ್ಲ ಚಿತ್ರೀಕರಿಸುತ್ತ ಕೂತರೆ ಅತಿ ಮುಖ್ಯ ಸಭೆಯ ಚಿತ್ರಗಳ ಸೆರೆಹಿಡಿಯಲು ಆಯಕಟ್ಟಿನ ಜಾಗ ತಪ್ಪಿಹೋಗುವ ಸಾಧ್ಯತೆ ಇತ್ತು. ಹಾಗಾಗಿ, ಬೇಗ-ಬೇಗ ಪೆಡಲ್ ತುಳಿಯುತ್ತಿದ್ದಳು.

Eedina App

ಆದರೆ, ಅವಳು ಬರುವ ವೇಳೆಗೆ ಸಾವಿರಾರು ಜನ ಆಗಲೇ ಜಮಾಯಿಸಿಬಿಟ್ಟಿದ್ದರು. ತನಗಿದ್ದ ಪ್ರೆಸ್ ಪಾಸ್ ತೋರಿಸಿ, ಸೈಕಲ್ ಅನ್ನು ಒಂದೆಡೆ ನಿಲ್ಲಿಸಿ, ಜನರ ನಡುವೆ ತೂರಿ, ನುಸುಳಿ ಐನಾತಿ ಜಾಗ ಹಿಡಿದು ನಿಂತಳು. ಆಹಾ... ಧ್ವಜಸ್ಥಂಭವೂ, ನೆರೆದಿರುವವರೂ ಸಂಪೂರ್ಣ ಕಾಣುವ ಒಳ್ಳೆಯ ಜಾಗ. ಬೇರೆ ಪತ್ರಕರ್ತರಿನ್ನೂ ಬಂದಿರಲಿಲ್ಲ. ಧ್ವಜಾರೋಹಣ ಎರಡು ತಾಸು ಮುಂದೂಡಲ್ಪಟ್ಟಿತ್ತು. ವಿಷಯ ತಿಳಿಯದೆ ಬೇಗ ಬಂದಿದ್ದು ಒಳ್ಳೆಯದೇ ಆಯಿತು ಎಂದು ಚಿತ್ರಗಳ ತೆಗೆಯುತ್ತ ಹೋದಳು. ನೆರೆಯತೊಡಗಿದ ಜನಸಾಗರ, ವೇದಿಕೆಗೆ ಒಬ್ಬೊಬ್ಬರಾಗಿ ಬಂದ ಗಣ್ಯರು, ಬಳಿಕ ಬಂದ ಪ್ರಧಾನಿ ನೆಹರೂ ಮತ್ತವರ ಸಚಿವ ಸಂಪುಟದ ಸದಸ್ಯರು, ಮೌಂಟ್ ಬ್ಯಾಟನ್ ದಂಪತಿ... ಎಷ್ಟೊಂದು ಭಂಗಿಗಳು! ಎಷ್ಟು ಸಾವಿರ ಮುಖಗಳು! ಎಷ್ಟು ಜನ! ದೇಶದ ಹಲವೆಡೆ ನಡೆಯುತ್ತಿದ್ದ ಕೋಮುಗಲಭೆಯನ್ನು ಶಮನಗೊಳಿಸುತ್ತ ಈ ಸಭೆಯಿಂದ ದೂರವುಳಿದಿದ್ದ ಗಾಂಧೀಜಿ ಅವಳ ಮನಸ್ಸನ್ನು ಕೊರೆಯುತ್ತಿದ್ದರು. ಮೋಡದ ನಡುವಿನಿಂದ ಸೂರ್ಯ ಮೇಲೇರಿ ಹತ್ತೂವರೆ ಗಂಟೆಗೆ ತ್ರಿವರ್ಣ ಧ್ವಜ ಹಾರಿತು. ಅವಳ ಕ್ಯಾಮೆರಾ ಕ್ಲಿಕ್‍...ಕ್ಲಿಕ್ ಎಂದು ಲಯಬದ್ಧವಾಗಿ ಒಂದೇ ಸಮ ಹಾಡಿತು.

1938ರಿಂದ 1970ರ ನಡುವಿನ ಭಾರತದ ಬಹು ಮುಖ್ಯ ಘಟನೆಗಳನ್ನು ಪತ್ರಿಕಾ ಛಾಯಾಗ್ರಾಹಕಳಾಗಿ ಅಪೂರ್ವ ಕಪ್ಪು-ಬಿಳುಪು ಛಾಯಾಚಿತ್ರಗಳಲ್ಲಿ ದಾಖಲಿಸಿಟ್ಟ ಆ ಪತ್ರಕರ್ತೆ ಹೋಮೈ ವ್ಯಾರಾವಾಲಾ. ಛಾಯಾಚಿತ್ರಗಳ ಮೂಲಕ ಕಾಲವನ್ನು ಘನೀಕರಿಸಿಟ್ಟ ಹೋಮೈ, ಜನಸಂದಣಿಯ ನಡುವಿದ್ದೂ ಅದೃಶ್ಯವಾಗುಳಿದ, ತಾನೆಂದೂ ಮುನ್ನೆಲೆಗೆ ಬರದೆ ಲೋಕವನ್ನು ಅದಿರುವಂತೆ ಸೆರೆಹಿಡಿದ ಅಪರೂಪದ ವ್ಯಕ್ತಿ. ಗಾಂಧಿಯವರ ಶವಯಾತ್ರೆಯ ವೇಳೆ ಸೇರಿದ್ದ ಲಕ್ಷಾಂತರ ಜನಸಾಗರ, ಜವಾಹರಲಾಲ್ ನೆಹರೂ ಪಾರಿವಾಳವನ್ನು ಹಾರಿಬಿಡುತ್ತಿರುವುದು, ನೆಹರೂ ಲೇಡಿ ಮೌಂಟ್ ಬ್ಯಾಟನ್ ಅವರಿಗೆ ಸಿಗರೇಟು ಹೊತ್ತಿಸುತ್ತಿರುವುದು, 'ಹಿಂದೀ ಚೀನೀ ಭಾಯಿ-ಭಾಯಿ' ಎಂದು 1954ರಲ್ಲಿ ನೆಹರೂ ಚೌ ಎನ್ ಲಾಯ್ ಜೊತೆ ಹೇಳಿದ್ದು, ಟಿಬೆಟಿನಿಂದ ತಮ್ಮ ಪಾರಂಪರಿಕ ವೇಷಭೂಷಣಗಳೊಡನೆ 14ನೆಯ ದಲೈಲಾಮಾ ಸಿಕ್ಕಿಂನ ನಾಥೂಲಾ ಪಾಸ್ ಮೂಲಕ 1956ರಲ್ಲಿ ಭಾರತ ಪ್ರವೇಶಿಸಿದ್ದು... ಹೀಗೆ, ಅತಿ ಅಪರೂಪದ ಛಾಯಾಚಿತ್ರಗಳನ್ನು ತೆಗೆದ ಹೋಮೈ, ಭಾರತದ ಮೊದಲ ಛಾಯಾಚಿತ್ರ ಪತ್ರಕರ್ತೆ.

AV Eye Hospital ad

* * * * *

Homai Vyarawalla 4

ಗುಜರಾತಿನ ನೌಸಾರಿಯಲ್ಲಿ ದೊಸ್ಸಾ ಬಾಯಿ ಮತ್ತು ಸೂನಾಭಾಯ್ ಹಥಿರಾಂ ಅವರ ಮಗಳಾಗಿ ಪಾರ್ಸಿ ಜೊರಾಷ್ಟ್ರಿಯನ್ ಕುಟುಂಬದಲ್ಲಿ ಹೋಮೈ ಹುಟ್ಟಿದಳು. ಅವಳ ಮನೆಯವರು ಸೂರತ್ ಬಳಿಯ ವ್ಯಾರಾ ಎಂಬ ಊರಿನ 'ವ್ಯಾರಾವಾಲಾ'ಗಳು. ತಂದೆ ರಂಗತಂಡದೊಂದಿಗೆ ಊರೂರು ತಿರುಗುವ ಪಾರ್ಸಿ-ಉರ್ದು ರಂಗಭೂಮಿಯ ಕಲಾವಿದರು. ತಾಯಿ ಶಾಲೆಯಲ್ಲಿ ಕಲಿತದ್ದು ಕಡಿಮೆಯಾದರೂ ದೇಶದ ಆಗುಹೋಗುಗಳ ಬಗೆಗೆ ಪತ್ರಿಕೆಗಳಲ್ಲಿ ಓದಿ ತಿಳಿಯುತ್ತಿದ್ದರು. ಗಾಂಧಿಯವರ ಪ್ರಾಮಾಣಿಕತೆ, ಸೇವಾ ಭಾವ, ಪರರನ್ನು ನೋಯಿಸದಂತೆ ನಡೆದುಕೊಳ್ಳುವುದು, ಸರಳ ಬದುಕು ಮುಂತಾದ ತತ್ತ್ವಗಳನ್ನು ಮೆಚ್ಚಿ ಮಕ್ಕಳಲ್ಲೂ ಬಿತ್ತಲು ಯತ್ನಿಸುತ್ತಿದ್ದರು.

ತಿರುಗಾಡುವ ರಂಗತಂಡದ ತಾಯ್ತಂದೆಯರು ತಾವಿದ್ದ ಊರುಗಳ ಶಾಲೆಗೆ ಮಕ್ಕಳನ್ನು ಕಳಿಸಿದರು. ಹಾಗಾಗಿ, ಹೋಮೈ ಹಲವು ಊರುಗಳಲ್ಲಿ ತನ್ನ ಬಾಲ್ಯವನ್ನು ಕಳೆದಳು, ಅನೇಕ ಊರುಗಳಲ್ಲಿ ಆರಂಭದ ಶಿಕ್ಷಣವನ್ನು ಪಡೆದಳು. ಕೆಲವು ವರ್ಷಗಳ ಬಳಿಕ ಕುಟುಂಬ ಮುಂಬೈಗೆ ಬಂದು ನೆಲೆಯಾಯಿತು. ಗ್ರಾಂಟ್‍ ರೋಡಿನ ತಾರಾದೇವ್ ಪ್ರೌಢಶಾಲೆಗೆ ಹೋಮೈಯನ್ನು ಸೇರಿಸಿದರು. ಒಳ್ಳೆಯ ಶಾಲೆಯಾಗಿದ್ದರೂ, ಹುಡುಗಿ ಚುರುಕಿನವಳಾದರೂ ಓದು ಸುಲಭವಾಗಿರಲಿಲ್ಲ. ಕುಟುಂಬ ಪದೇ-ಪದೆ ಮನೆ ಬದಲಿಸುತ್ತಿತ್ತು. ಹೋಗಿಬರುವ ದಾರಿ ಬದಲಾಗುತ್ತಲೇ ಇರುತ್ತಿತ್ತು. ಮನೆಯಿಂದ ಶಾಲೆ ದೂರದೂರವಾಗುತ್ತಿತ್ತು. ಪುಸ್ತಕ, ಊಟದ ಗಂಟು ಹೊತ್ತು ಮೈಲುಗಟ್ಟಲೆ ಓಡುತ್ತ ನಡೆಯುವುದು ಅವಳಿಗೆ ರೂಢಿ ಆಗಿಹೋಯಿತು. ತರಗತಿಯಲ್ಲಿ ಕೇವಲ ಏಳು ಮಂದಿ ಹುಡುಗಿಯರಿದ್ದರು. ಮುಟ್ಟಾದಾಗ ಮೂರು ದಿನ ಶಾಲೆಗೆ ಹೋಗುವಂತಿಲ್ಲ. ಮೂರು ದಿನದ ಬಳಿಕ ಹೋದಾಗ ಪಾಠಗಳು ಮುಂದೋಡಿರುತ್ತಿದ್ದವು. ಹುಡುಗರ ಓರೆನೋಟ ಎದುರಿಸಬೇಕಾಗುತ್ತಿತ್ತು. ಅಷ್ಟಾದರೂ ಹೋಮೈ ಮೆಟ್ರಿಕ್ ಮುಗಿಸಿದಳು. ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾದ 36 ಜನರಲ್ಲಿ ಪರೀಕ್ಷೆ ಪಾಸಾದ ಏಕೈಕ ವಿದ್ಯಾರ್ಥಿನಿಯಾಗಿದ್ದಳು ಹೋಮೈ. ಬಳಿಕ ಸೇಂಟ್ ಕ್ಸೇವಿಯರ್ಸ್ ಕಾಲೇಜು ಸೇರಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಳು.

ಅವಳಿಗೆ ಮೊದಲಿನಿಂದ ಚಿತ್ರಕಲೆಯಲ್ಲಿ ತುಂಬಾ ಆಸಕ್ತಿ. ಒಳ್ಳೆಯ ಪೇಂಟರ್ ಆಗಬೇಕೆಂಬ ಬಯಕೆ. ಯುದ್ಧ, ಹರತಾಳ ಮುಂತಾಗಿ ತಂದೆಯ ಆದಾಯ ದಿನದಿನಕ್ಕೆ ಕಡಿಮೆಯಾಗುತ್ತಿತ್ತು. ಉನ್ನತ ಶಿಕ್ಷಣಕ್ಕೆ ಖರ್ಚು ಮಾಡುವುದಿರಲಿ, ಅವಳೇ ದುಡಿಮೆ ಆರಂಭಿಸಿ ತಂದೆಯ ದುಡಿಮೆಗೆ ಹೆಗಲಾಗಬೇಕಿತ್ತು. ಪದವಿಯ ಬಳಿಕ ಜೆ ಜೆ ಸ್ಕೂಲ್ ಆಫ್ ಆರ್ಟ್ಸ್‌ನಲ್ಲಿ ಕಲಾ ವಿಭಾಗದ ಡಿಪ್ಲೋಮಾಗೆ ಸೇರಿದಳು. ಚಿತ್ರಕಲೆಯಲ್ಲಿ ಪರಿಣತಿ ಪಡೆಯಲು ಸೇರಿದ್ದರೂ, ಅದರಿಂದ ಹೊಟ್ಟೆ ತುಂಬುವ ದುಡಿಮೆ ಕಷ್ಟವೆಂದರಿತು ಫೋಟೊಗ್ರಫಿಯ ಕಡೆಗೆ ಗಮನ ಹರಿಸಿದಳು. 1938ರಲ್ಲಿ ವೃತ್ತಿ ಶುರು ಮಾಡಿಯೇಬಿಟ್ಟಳು. 'ಕರೆಂಟ್,' 'ಬಾಂಬೆ ಕ್ರಾನಿಕಲ್‍'ಗಳಲ್ಲಿ ಮೊದಮೊದಲ ಫೋಟೊಗಳು ಪ್ರಕಟಗೊಳ್ಳತೊಡಗಿದವು. ವ್ಯಾಪಾರಿಗಳು ವ್ಯಾಪಾರ ಶುರು ಮಾಡುವ ಮುನ್ನ ಶುಭಶಕುನಕ್ಕಾಗಿ ಹಾದಿ ನೋಡುತ್ತ ನಿಂತ ದೃಶ್ಯ, ಗೇಟ್ ವೇ ಆಫ್ ಇಂಡಿಯಾ ಎದುರು ಮಳೆ ನಿಂತ ಬಳಿಕ ಸಂಭ್ರಮಿಸುತ್ತಿರುವ ಜನರು, ಜನ ಕಿಕ್ಕಿರಿದ ರೀಗಲ್ ವಿಕ್ಟೋರಿಯಾ ಟರ್ಮಿನಸ್, ದಕ್ಷಿಣ ಮುಂಬೈನ ಜನ ಮಂಡಿಯ ತನಕ ನೀರಿನಲ್ಲಿ ಹಾದು ರಸ್ತೆ ದಾಟುತ್ತಿರುವ ಮಳೆಗಾಲದ ದೃಶ್ಯಗಳೇ ಮೊದಲಾಗಿ ಮುಂಬೈ ನಗರದ ದಿನದಿನದ ಬದುಕಿನ ಚಿತ್ರಣಗಳು ಜನರ ಮೆಚ್ಚುಗೆ ಗಳಿಸಿದವು. ಒಂದು ಫೋಟೊಗೆ ಒಂದು ರೂಪಾಯಿಯಂತೆ ಸಂಭಾವನೆಯೂ ಬಂದುಬಿಟ್ಟಿತು. ಚಿತ್ರಕಲೆ ಬಿಟ್ಟು ಸಂಪೂರ್ಣ ಫೋಟೊಗ್ರಫಿಯಲ್ಲೇ ತೊಡಗಿಕೊಂಡಳು. ಜೆ ಜೆ ಕಲಾಶಾಲೆಯಲ್ಲಿ ಫೋಟೊಗ್ರಫಿ ವಿಭಾಗದಲ್ಲಿದ್ದ, 'ವ್ಯಾರಾವಾಲಾ'ನೇ ಆಗಿದ್ದ ಮಾಣೆಕ್ ಷಾ ಅವರಿಂದ ಫೋಟೊಗ್ರಫಿಯ ಮೊದಲ ಪಾಠಗಳನ್ನು ಹೇಳಿಸಿಕೊಂಡಳು. ಜೊತೆಗೆ, ಸೆಕೆಂಡ್ ಹ್ಯಾಂಡ್ 'ಲೈಫ್' ನಿಯತಕಾಲಿಕದ ಫೋಟೊಗಳನ್ನು ನೋಡಿ ಛಾಯಾಚಿತ್ರ ಗ್ರಹಣದ ಸೂಕ್ಷ್ಮತೆ ಹೆಚ್ಚಿಸಿಕೊಂಡಳು.

Homai Vyarawalla 11
ಬಾಂಬೆಯ ಜೆಮ್‌ಶೆಡ್‌ಜಿ ಜೀಜಾಭಾಯ್ ಕಲಾಶಾಲೆ ಆವರಣದಲ್ಲಿ ಹೋಮೈ ಸೆರೆಹಿಡಿದ ಚಿತ್ರ (1930)

ಡಿಪ್ಲೊಮಾ ಮುಗಿದ ಬಳಿಕ, ಮುಂಬೈನಿಂದ ಹೊರಡುತ್ತಿದ್ದ 'ಇಲ್ಲಸ್ಟ್ರೇಟೆಡ್ ವೀಕ್ಲಿ' ಸೇರಿದ ಹೋಮೈ, ಕಪ್ಪು-ಬಿಳುಪು ಛಾಯಾಚಿತ್ರಗಳನ್ನು ಪ್ರಕಟಿಸತೊಡಗಿದಳು. ಆ ಕಾಲದಲ್ಲಿ ಪತ್ರಿಕಾ ಕಚೇರಿಗಳು ಮಹಿಳೆಯರ ಕೆಲಸಗಳನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಆದ್ದರಿಂದ ತಾನು ತೆಗೆದ ಫೋಟೊಗಳು ಪ್ರಕಟವಾಗದೆ ಇರಬಹುದೆಂದು, ಗೆಳೆಯನಂತಿದ್ದ ಗುರು ಮಾಣೆಕ್‍ ಷಾ ವ್ಯಾರಾವಾಲಾರ ಹೆಸರಿನಲ್ಲಿ ಪ್ರಕಟಿಸಿದಳು. 1941ರಲ್ಲಿ ಮಾಣೆಕ್‍ ಷಾ ಮತ್ತು ಹೋಮೈ ಬಾಳಸಂಗಾತಿಗಳಾದರು.

'ಟೈಮ್ಸ್ ಆಫ್ ಇಂಡಿಯಾ'ದಲ್ಲಿ ಅಕೌಂಟೆಂಟ್ ಮತ್ತು ಫೋಟೊಗ್ರಾಫರ್ ಎರಡೂ ಆಗಿ ಮಾಣೆಕ್‍ಷಾ ಕಾರ್ಯ ನಿರ್ವಹಿಸತೊಡಗಿದರು. ಎರಡನೆಯ ಮಹಾಯುದ್ಧ ಆರಂಭವಾಗುವುದರಲ್ಲಿತ್ತು. 1942ರಲ್ಲಿ 'ಫಾರ್ ಈಸ್ಟ್ ಬ್ರಿಟಿಷ್ ಇನ್‍ಫಾರ್ಮೇಷನ್ ಸರ್ವಿಸ್' ಸೇರಿದ ಹೋಮೈ, ಪತಿಯೊಡನೆ ದೆಹಲಿಗೆ ಹೋದರು. ಅಂದಿನ ಪ್ರಮುಖ ರಾಜಕೀಯ ಆಗುಹೋಗುಗಳನ್ನು ಛಾಯಾಚಿತ್ರಗಳಾಗಿ ಒದಗಿಸುವ ಅವಕಾಶ ಒದಗಿಬಂತು. ಫೋಟೊಗಳನ್ನು 'ಡಾಲ್ಡಾ 13' ಎಂಬ ಸಂಕೇತನಾಮದಲ್ಲಿ ಪ್ರಕಟಿಸಿದರು. ಅವರು ಹುಟ್ಟಿದ ವರ್ಷ 1913. ಅವರು ಕೊಂಡ ಮೊದಲ ಕಾರಿನ ನಂಬರ್ ಡಿಎಲ್‍ಡಿ 13. ಅದನ್ನೆಲ್ಲ ಸೇರಿಸಿ, 'ಡಾಲ್ಡಾ 13' ಎಂಬ ಹೆಸರಿಟ್ಟುಕೊಂಡಿದ್ದರು.

ಸೀರೆಯುಟ್ಟು, ಬಾಬ್‍ ಕಟ್ ಮಾಡಿಕೊಂಡ ತರುಣಿ ಗ್ರಾಫಿಕ್ ಕ್ಯಾಮೆರಾದ ಮರದ ಪೆಟ್ಟಿಗೆಯನ್ನು ಹೆಗಲ ಮೇಲೆ ಹೊತ್ತು ತುದಿಗಾಲಲ್ಲಿ ಓಡಾಡುವಾಗ, ಯಾವುದೋ ಹೆಣ್ಣು ತೋರುಗಾಣಿಕೆಗೆ ನಡುನಡುವೆ ಬರುತ್ತಿದ್ದಾಳೆ ಎಂದು ಹಲವರು ಅಸಡ್ಡೆ ಮಾಡುತ್ತಿದ್ದರು. ಆದರೆ, ಎಲ್ಲರ ನಡುವೆ ನುಸುಳಿ ನಿಲ್ಲುವ ಚುರುಕುತನ ಕಣ್ಣು ಕುಕ್ಕುತ್ತಿತ್ತು. ಅವಳನ್ನೇ ನೋಡುತ್ತ ನಿಲ್ಲುವುದೂ ಇತ್ತು. ಇದನ್ನೆಲ್ಲ ತನ್ನ ಅವಕಾಶಕ್ಕಾಗಿ ಬಳಸಿಕೊಂಡ ಹೋಮೈ, ಜನರನ್ನು ಅತ್ತಿತ್ತ ಸರಿಸಿ ತನಗೆ ಬೇಕಾದಷ್ಟು ಜಾಗ ಮಾಡಿಕೊಳ್ಳುತ್ತಿದ್ದರು. ಸಮಯಪ್ರಜ್ಞೆ, ಕೆಲಸದ ಬಗೆಗಿನ ಶ್ರದ್ಧೆಯಿಂದ ಎಲ್ಲರಿಗಿಂತ ಅತ್ಯುತ್ತಮ ಸ್ಥಳವನ್ನು ಆಯ್ಕೆ ಮಾಡಿಕೊಂಡು, ಹತ್ತಿರದಿಂದ ಛಾಯಾಚಿತ್ರ ತೆಗೆಯುತ್ತಿದ್ದರು.

Homai Vyarawalla 5

ಹಾಗೆ ಅವರು ತೆಗೆದ ಛಾಯಾಚಿತ್ರಗಳಾದರೂ ಯಾರವು? ಐಸೆನ್ ಹೋವರ್, ಕ್ವೀನ್ ಎಲಿಜಬೆತ್, ಜಾನ್ ಎಫ್ ಕೆನಡಿ, ಹೊ ಚಿ ಮಿನ್, ಎಲಿನಾರ್ ರೂಸ್ವೆಲ್ಟ್, ಚೌ ಎನ್ ಲೈ, ಅಯೂಬ್ ಖಾನ್, ದಲೈ ಲಾಮಾ, ಮಾರ್ಟಿನ್ ಲೂಥರ್ ಕಿಂಗ್, ಹೆಲೆನ್ ಕೆಲರ್, ಇರಾನಿನ ಷಾ, ಉ ನು, ಸುಕರ್ನೊ, ಲಾರ್ಡ್ ಮೌಂಟ್ ಬ್ಯಾಟನ್, ಗಾಂಧೀಜಿ, ನೆಹರೂ, ಜಿನ್ನಾ, ವಲ್ಲಭಬಾಯಿ ಪಟೇಲ್, ಅಬುಲ್ ಕಲಾಂ ಆಜಾದ್, ಎಸ್ ರಾಧಾಕೃಷ್ಣನ್, ಇಂದಿರಾ ಗಾಂಧಿ ಮೊದಲಾದವರದು. ಪರಿಮಿತ ಅವಕಾಶದಲ್ಲಿ ಅತಿ ಅಪರೂಪದ ಸಾವಿರಾರು ಚಿತ್ರಗಳನ್ನು ತೆಗೆದ ಹೋಮೈ, ಪತ್ರಕರ್ತರ ಗುಂಪಿನಲ್ಲಿ ಹೆಂಗಸರೇ ಕಾಣದ ದಿನಗಳಲ್ಲಿ ಛಾಯಾಚಿತ್ರಗ್ರಹಣಕ್ಕೆ ಹೆಣ್ಣುಸ್ಪರ್ಶ ನೀಡಿದರು. ನೇತಾಗಳ ಆಚೀಚಿನ ಆಗುಹೋಗುಗಳನ್ನೂ, ಅವರ ಸಹಜ ಭಂಗಿಗಳನ್ನೂ ಸೆರೆಹಿಡಿದರು.

ಅವರಿಗಿಷ್ಟವಾದ ವ್ಯಕ್ತಿತ್ವ ಗಾಂಧಿಯವರದು. ಬಾಲ್ಯದಿಂದಲೇ ಗಾಂಧೀಜಿಯ ಬಗೆಗೊಂದು ಗೌರವ ಭಾವನೆ, ಸೆಳೆತ ಹುಟ್ಟಿಕೊಂಡಿತ್ತು. 1947ನೇ ಇಸವಿ. ದೇಶ ವಿಭಜನೆಗೆ ಕಾಂಗ್ರೆಸ್ ಒಪ್ಪಿದ ಬಳಿಕ ಗಾಂಧೀಜಿ 'ಮುಳುಗಿದ ಹಡಗಿನ ನಾವಿಕ'ನಂತೆ ಹೋಮೈಗೆ ಕಂಡರು. 1948ರ ಜನವರಿ 30; ಮಗನನ್ನು ಗಂಡನ ಬಳಿ ಬಿಟ್ಟು ಸಂಜೆಯ ಪ್ರಾರ್ಥನಾ ಸಭೆಗೆ ಹೋಮೈ ಹೊರಟರು. ದೇಶ ವಿಭಜನೆಯ ಬಳಿಕ ನೊಂದ ಮಹಾತ್ಮನನ್ನು ನೋಡಬೇಕಿತ್ತು. ಅವರ ಮಾತು ಕೇಳಬೇಕಿತ್ತು. ಪ್ರಾರ್ಥನೆಯಲ್ಲಿ ಭಾಗವಹಿಸಬೇಕಿತ್ತು. ಆದರೆ, ಮಗುವಿಗಾಗಿ ಮನೆಗೆ ಬರುವಂತೆ ಪತಿಯಿಂದ ಕರೆ ಬಂತು. ಅಂದೇ ಗಾಂಧಿಯವರ ಹತ್ಯೆಯಾಯಿತು. ತನ್ನ ನೆಚ್ಚಿನ ವ್ಯಕ್ತಿಯ ಅಂತಿಮ ಗಳಿಗೆಯ ಫೋಟೊ ತೆಗೆಯಲಾಗದ್ದಕ್ಕೆ ಕೊನೆಯತನಕ ಹಳಹಳಿಸುವಂತಾಯಿತು.

Homai Vyarawalla 3

ರೊಬೊಟಿನಂತೆ ಫೋಟೊ ತೆಗೆದುಕೊಳ್ಳುತ್ತಿದ್ದ, ಅಷ್ಟೇ ವೇಗವಾಗಿ ಮಾಯವಾಗಿಬಿಡುತಿದ್ದ ಹೋಮೈ, ತಮ್ಮ ಫೋಟೊ ವಸ್ತುಗಳಾದ ವ್ಯಕ್ತಿಗಳನ್ನು ಎಂದೂ ಭೇಟಿಯಾಗಲಿಲ್ಲ. ಅವರ ಕ್ಯಾಮೆರಾ ಕಣ್ಣಿಗೆ ನೆಹರೂ ನೆಚ್ಚಿನ 'ವಸ್ತು'ವಾಗಿದ್ದರು. 17 ವರ್ಷ ಕಾಲ ಪ್ರಧಾನಿಯಾಗಿದ್ದ ನೆಹರೂ ಅವರ ನೂರಾರು ಫೋಟೊ ತೆಗೆದಿದ್ದರೂ ಅವರನ್ನು ಹೋಮೈ ಒಮ್ಮೆಯೂ ಭೇಟಿಯಾಗಲಿಲ್ಲ, ಮಾತನಾಡಲಿಲ್ಲ. ಚೀನಾ ಭಾರತದ ಮೇಲೆ ದಾಳಿ ಮಾಡಿದಾಗ ನೆಹರೂ ಮುಖದ ವಿಷಾದ, ದಣಿವುಗಳನ್ನು ಗುರುತಿಸಿದ್ದರು. ಅದು ಅವರ ಆರೋಗ್ಯದ ಮೇಲೂ ಪರಿಣಾಮ ಬೀರಿದ್ದನ್ನು ತಮ್ಮ ಫೋಟೊಗಳಲ್ಲಿ ದಾಖಲಿಸಿದರು. 1964ರ ಮೇ ತಿಂಗಳಿನಲ್ಲಿ ನೆಹರೂ ಅವರ ಅಂತಿಮ ಯಾತ್ರೆಯನ್ನು ವರದಿ ಮಾಡುವಾಗ ದುಃಖ ತಡೆಯಲಾರದೆ ಮುಖ ಮುಚ್ಚಿಕೊಂಡು ಬಿಕ್ಕಿದ್ದರು. ತನ್ನಿಷ್ಟದ ಗೊಂಬೆಯನ್ನು ಕಳೆದುಕೊಂಡ ಮಗುವಿನ ದುಃಖಕ್ಕೆ ತಮ್ಮ ದುಃಖವನ್ನು ಹೋಲಿಸಿಕೊಂಡರು.

1966ರಲ್ಲಿ ಇಂದಿರಾ ಪ್ರಧಾನಿಯಾದ ಬಳಿಕ ಪತ್ರಕರ್ತರಿಗೆ 'ಸುರಕ್ಷತಾ ಬೇಲಿ’ಯ ಹೊಸ ಸಮಸ್ಯೆ ಎದುರಾಯಿತು. ಅದುವರೆಗೂ ಎಲ್ಲ ಗಣ್ಯರನ್ನೂ ಐದಡಿ ಅಂತರದಿಂದ ಚಿತ್ರೀಕರಿಸಿದ್ದ ಹೋಮೈ, ಈಗ ಕನಿಷ್ಠ 20 ಅಡಿ ದೂರದಿಂದ ಫೋಟೊ ತೆಗೆಯಬೇಕಿತ್ತು. ಸ್ವಾತಂತ್ರ್ಯ ಹೋರಾಟ ಕಾಲದ ಕನಸುಗಾರಿಕೆಯ ಜಾಗದಲ್ಲಿ ಸಿನಿಕತೆ, ಆಡಂಬರ, ಹುಸಿಗಳು ಗೋಚರಿಸತೊಡಗಿದವು. ತಮ್ಮ 'ವಸ್ತು'ಗಳ ಹಿಂದೆ ದುಡ್ಡಿಗಾಗಿ ಮುಗಿಬೀಳುವ ಪಾಪರಾಜಿ ಸಂಸ್ಕೃತಿ ಹೆಚ್ಚುತ್ತ ಹೋದದ್ದನ್ನು ವಿಷಾದದಿಂದ ಗಮನಿಸಿದರು. ದಿಲ್ಲಿ ದರ್ಬಾರಿನ ಫೋಟೊ ತೆಗೆದಿದ್ದು ಇನ್ನು ಸಾಕೆನಿಸತೊಡಗಿತು. ಅದರ ನಡುವೆ, 1969ರಲ್ಲಿ ಮಾಣೆಕ್‍ ಷಾ ತೀರಿಕೊಂಡರು. ಒಂದು ವರ್ಷದ ಬಳಿಕ ಇದ್ದಕ್ಕಿದ್ದಂತೆ 'ಇನ್ನು ಸಾಕು' ಎಂದು ಒಂದು ದಿನ ತಮಗೆ ತಾವೇ ಹೇಳಿಕೊಂಡ ಹೋಮೈ, ಕ್ಯಾಮೆರಾ ಪೆಟ್ಟಿಗೆಗೆ ಬೀಗ ಜಡಿದು ಕಾಯಮ್ಮಾಗಿ ಮುಚ್ಚಿಬಿಟ್ಟರು. ವೃತ್ತಿ ಮತ್ತು ಜನಪ್ರಿಯತೆಯ ಉತ್ತುಂಗದಲ್ಲಿಯೇ ಸ್ವಯಂ ನಿವೃತ್ತರಾದ ಅವರು, ಮತ್ತೆಂದೂ ಫೋಟೊ ತೆಗೆಯಲಿಲ್ಲ.

ಈ ಲೇಖನ ಓದಿದ್ದೀರಾ?: ಮುಳ್ಳುಹಾದಿಗೆ ಮಣ್ಣು ಹೊತ್ತವರು | ಮರೆವಿಗೆ ಸಲ್ಲಬಾರದ ಚೇತನ - ಉಮಾಬಾಯಿ ಕುಂದಾಪುರ

"ಎಲ್ಲವೂ ಎಷ್ಟೇ ಚೆನ್ನಾಗಿದ್ದರೂ, ಯಾವಾಗ ಕೊನೆಗೊಳಿಸಬೇಕೆಂದು ನಮಗೆ ಗೊತ್ತಿರಬೇಕು. ನನ್ನ ಕಾಲದ ವೃತ್ತಿನಿರತರಲ್ಲಿ ಕಂಡ ಆ ಘನತೆ, ಆ ಗಾಂಭೀರ್ಯವನ್ನು ಮತ್ತೆ ಕಾಣುತ್ತಿಲ್ಲ. ಆಗ ನಮಗೆ ನಾವೇ ನಿಯಮಗಳನ್ನು ವಿಧಿಸಿಕೊಂಡಿದ್ದೆವು. ವಸ್ತ್ರಸಂಹಿತೆ ಹೊಂದಿದ್ದೆವು. ಒಬ್ಬರನ್ನೊಬ್ಬರು ಗೌರವದಿಂದ ಸಹವರ್ತಿಗಳಂತೆ ನಡೆಸಿಕೊಳ್ಳುತ್ತಿದ್ದೆವು. ಎಲ್ಲವೂ ಬದಲಾಯಿತು. ಎಲ್ಲರಿಗೂ ಹೇಗಾದರೂ ತಕ್ಷಣಕ್ಕೆ ಒಂದಷ್ಟು ದುಡ್ಡು ಮಾಡಬೇಕು. 'ವಸ್ತು'ವಿನ ಘನತೆ, ಗೌರವ ಲೆಕ್ಕಿಸದೆ ಒಂದಷ್ಟು ಖಾಸಗಿ ಫೋಟೊ ತೆಗೆಯಬೇಕು ಎನ್ನುವಂತಹ ಕಾಲ ಬಂತು. ಇಂತಹವರ ನಡುವೆ ಅವರ ಭಾಗವಾಗಿ ಇರಲು ಮನಸ್ಸಾಗಲಿಲ್ಲ. ವೃತ್ತಿಘನತೆ ಇಲ್ಲದ ವೃತ್ತಿ ಮತ್ತೇಕೆ ಎಂದು ಛಾಯಾಚಿತ್ರಗ್ರಹಣವನ್ನೇ ಬಿಟ್ಟುಬಿಟ್ಟೆ," ಎಂದು 1970ರಲ್ಲಿ ನಿವೃತ್ತಿ ಹೊಂದುವ ಮುನ್ನ ಹೇಳಿದರು.

"ನಾನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ. ಹೋರಾಟಗಾರರ ಫೋಟೊ ತೆಗೆದೆ ಮತ್ತು ಮುಖ್ಯ ಕ್ಷಣಗಳನ್ನು ಸೆರೆಹಿಡಿದೆ ಅಷ್ಟೇ. ನನಗೆ ಹೋರಾಟದಲ್ಲಿ ಭಾಗವಹಿಸುವ ಇಚ್ಛೆ ಇತ್ತು. ಆದರೆ, ನನಗೆ ಕೆಲಸ ಕೊಟ್ಟ ಮಾಲೀಕರ ಅಪೇಕ್ಷೆ ಬೇರೆ ಇತ್ತು ಮತ್ತು ನನಗೆ ಕುಟುಂಬವನ್ನು ನೋಡಿಕೊಳ್ಳಬೇಕಿತ್ತು. ಅದಕ್ಕೇ ಹೋರಾಟಕ್ಕಿಳಿಯದೆ ವೃತ್ತಿಯಲ್ಲಿ ಮುಂದುವರಿದೆ. ನನಗದು ದುಡಿಮೆಯ ಒಂದು ದಾರಿಯಾಗಿತ್ತು. ಅದನ್ನು ಶ್ರದ್ಧೆಯಿಂದ ಮಾಡಿದೆ," ಎನ್ನುತ್ತಿದ್ದ ಹೋಮೈ, ತನ್ನ ಪ್ರಾಮುಖ್ಯತೆಯನ್ನು ಹೆಚ್ಚಿಸಿಕೊಳ್ಳುವ ಒಂದು ಮಾತನ್ನೂ ಆಡುತ್ತಿರಲಿಲ್ಲ.

ಅವರ 97ನೆಯ ವಯಸ್ಸಿನಲ್ಲಿ, "ಈಗಿರುವ ಜನನಾಯಕರಲ್ಲಿ ಯಾರು ಫೋಟೊಜೆನಿಕ್?" ಎಂದು ಕೇಳಿದರೆ, "ಇವರ್ಯಾರೂ ನೋಡಲಿಕ್ಕೂ ಅರ್ಹರಲ್ಲ," ಎಂದುಬಿಟ್ಟರು. "ನಿಮ್ಮ ಛಾಯಾಚಿತ್ರಗಳಿಂದಾಗಿ ಎಂದೆಂದಿಗೂ ನೆನಪಿನಲ್ಲುಳಿಯುವಿರಿ," ಎಂದು ಸಂದರ್ಶಕರೊಬ್ಬರು ಹೇಳಿದರೆ, "ಮಹಾತ್ಮ ಗಾಂಧಿಯಂತಹವರನ್ನೇ ಮರೆತ ದೇಶಕ್ಕೆ ನಾನೆಲ್ಲಿ ನೆನಪಿರುತ್ತೇನೆ?" ಎಂದು ತಿರುಗಿ ಕೇಳಿದರು. ಗಾಂಧೀಮಾರ್ಗವನ್ನು ಅನುಸರಿಸುತ್ತಿದ ಹೋಮೈ, ತನ್ನ ಎಲ್ಲ ಕೆಲಸಗಳನ್ನು ತಾನೇ ಮಾಡಿಕೊಳ್ಳುತ್ತಿದ್ದರು. ತನ್ನ ಚಪ್ಪಲಿಯನ್ನು ತಾವೇ ಹೊಲಿದುಕೊಳ್ಳುತ್ತಿದ್ದರು. ತಮ್ಮ ಮಿತಾಹಾರವನ್ನು ತಮ್ಮ ಕೈದೋಟದಲ್ಲಿ ತಾವೇ ಬೆಳೆದುಕೊಳ್ಳುತ್ತಿದ್ದರು. "ನಮ್ಮ ಕೆಲಸ ನಾವೇ ಮಾಡಿಕೊಂಡರೆ ಸಿಗುವ ತೃಪ್ತಿಯೇ ನಿಜವಾದ ಸಂತೋಷ," ಎಂದು ಭಾವಿಸಿದ್ದರು.

Homai Vyarawalla 8

ಅವರ ಒಬ್ಬನೇ ಮಗ ಫಾರೂಕ್, ರಾಜಸ್ಥಾನದ ಬಿಟ್ಸ್ ಪಿಲಾನಿಯಲ್ಲಿ ಬೋಧಕರಾಗಿದ್ದರು. 1982ರಲ್ಲಿ ಮಗನಿಗೆ ಕ್ಯಾನ್ಸರ್ ಉಲ್ಬಣಗೊಂಡ ಬಳಿಕ ಇಬ್ಬರೂ ಬರೋಡಾಗೆ ಬಂದರು. 1989ರಲ್ಲಿ ಮಗ ತೀರಿಹೋದ ಮೇಲೆ ಏಕಾಂಗಿಯಾದ ಹೋಮೈ, ತನ್ನ ಕೆಲಸ ತಾನು ಮಾಡಿಕೊಳ್ಳುತ್ತ ಅದೃಶ್ಯರಾಗುಳಿದರೂ ಮನ್ನಣೆಗಳು ಅರಸಿ ಬಂದವು. ಮಾಹಿತಿ ಮತ್ತು ಪ್ರಸಾರ ಮಂತ್ರಾಲಯದ ಪ್ರಶಸ್ತಿ 2010ರಲ್ಲಿ ಬಂತು. 2011ರಲ್ಲಿ ಪದ್ಮವಿಭೂಷಣ ಬಂತು. ದುಬಾರಿ ಬೆಲೆಗೆ ಫೋಟೊಗಳನ್ನು ಕೇಳಿದಾಗಲೂ ಮಾರದೆ, ಅವನ್ನು ಅಲ್ಕಾಜಿ ಆರ್ಟ್ ಫೌಂಡೇಷನ್‌ಗೆ ಕೊಟ್ಟರು.

2012ರಲ್ಲಿ ಹಾಸಿಗೆಯಿಂದ ಬಿದ್ದು ಕಾಲು ಮುರಿದುಕೊಂಡ ಹೋಮೈ, 99ನೇ ವಯಸ್ಸಿನಲ್ಲಿ ನಿಧನ ಹೊಂದಿದರು. ಮರಣಾನಂತರ, ಅವರು ಸೆರೆಹಿಡಿದ ಫೋಟೊಗಳ ಪ್ರದರ್ಶನವನ್ನು ಅಲ್ಕಾಜಿ ಫೌಂಡೇಷನ್ ನ್ಯೂಯಾರ್ಕಿನಲ್ಲಿ ಏರ್ಪಡಿಸಿತು. 2012ರ ಜುಲೈನಿಂದ 2013ರ ಜನವರಿವರೆಗೆ ಅವರ ಕ್ಯಾಮೆರಾಗಳು, ಬರೆದ ಪತ್ರಗಳು, ಫೋಟೊಗಳು, ಪ್ರೆಸ್‍ ಪಾಸ್‍ಗಳು ಪ್ರದರ್ಶನಗೊಂಡವು. ಅವರ ಮೇಲೊಂದು ಸಾಕ್ಷ್ಯಚಿತ್ರ ತಯಾರಾಯಿತು.

ವೃತ್ತಿಜೀವನದಲ್ಲಿ ಖ್ಯಾತಿಯಲ್ಲಿ ಮೇಲೇರುತ್ತ ಎಲ್ಲರಿಂದ ಗುರುತಿಸಲ್ಪಡುತ್ತಿರುವಾಗಲೇ ತನ್ನನ್ನೆಂದೂ ಉತ್ತುಂಗದಲ್ಲಿ ಕಲ್ಪಿಸಿಕೊಳ್ಳದೆ ನೆಲಕ್ಕಿಳಿಸಿಕೊಂಡ, ಕೊನೆಯತನಕ ಹೆಮ್ಮೆ ಎಂಬುದು ಲೇಶವೂ ಇರದಿದ್ದ, ದಿಟ್ಟತನದ ಸರಳೆ ಹೋಮೈ ವ್ಯಾರಾವಾಲಾ, ಮಾಧ್ಯಮ ಕ್ಷೇತ್ರ ನೈತಿಕ ಅಧೋಗತಿ ತಲುಪಿರುವ ಇಂದಿನ ದಿನಗಳಲ್ಲಿ ಅನುಕರಣೀಯ ಮಾದರಿ. ಕಾಸಿಗಾಗಿಯೇ ದುಡಿದರೂ ಬದ್ಧತೆಯಿಂದ, ನ್ಯಾಯದ ಪರವಾಗಿ ದುಡಿಯಬೇಕೆಂಬ ಪಾಠವನ್ನು ವಿಪುಲವಾಗಿ ಬರುತ್ತಿರುವ ಹೊಸ ತಲೆಮಾರಿನ ಮಾಧ್ಯಮ ಸಂಗಾತಿಗಳಿಗೆ ಅವರ ಬದುಕೇ ಸಾರಿ ಹೇಳುವಂತಿದೆ.

ನಿಮಗೆ ಏನು ಅನ್ನಿಸ್ತು?
3 ವೋಟ್
eedina app