ಹೆಣ್ಣೆಂದರೆ... | ಸುಪ್ತಲೋಕ ಸಂಚಾರಕ್ಕೆ ಕರೆದೊಯ್ಯುವ ಕಿನ್ನರಿ ಬಿಂದು ಮಾಲಿನಿ

Bindu Malini 1

ಸಿನಿಮಾ, ಸಂಗೀತ, ಚಿತ್ರಕಲೆ, ನಟನೆ ಇತ್ಯಾದಿಗಳು ಒಗ್ಗೂಡಿ ಬದುಕುವ, ಬದುಕಿನ ಸೌಂದರ್ಯ ತಿಳಿಸುವ, ಜನರ ಕಷ್ಟಕ್ಕೆ ಮರುಗುವ ಆಶಯಗಳಿಗೆ ಕಂದೀಲಾಗಿರಬೇಕು ಎನ್ನುವ ಸಂಗೀತ ನಿರ್ದೇಶಕರು ಅಪರೂಪ. 'ಹರಿಕಥಾ ಪ್ರಸಂಗ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಕಲಾವಿದೆ ಬಿಂದುಮಾಲಿನಿ ಇಂಥ ಆಶಯವುಳ್ಳವರು. ಅವರೊಂದಿಗಿನ ಮಾತುಕತೆ ಇಲ್ಲಿದೆ

ಇವರ ಮಾತು ಹಾಡಿನಂತೆ. ಇನ್ನು, ಹಾಡು ದೈವಿಕತೆಯೆಡೆ, ತಾತ್ವಿಕತೆಯ ಕಡೆ ಕೊಂಡೊಯ್ಯುವ ಮಾರ್ಗದಂತೆ. ಇವರ ಧ್ವನಿಯಲ್ಲಿ ಮೂಡುವ ಜನಪದ ಗೀತೆ, ವಚನ, ಸೂಫಿ ಸಂತರ ಹಾಡುಗಳು ನಮ್ಮನ್ನು ಸುಪ್ತ ಭಾವಲೋಕಕ್ಕೆ ಕೊಂಡೊಯ್ಯುತ್ತವೆ. ತಾತ್ವಿಕ ಪದಗಳು, ನೆಲದ ಸಂಸ್ಕೃತಿಯನ್ನು ಅವರು ವಿವಿಧ ಪ್ರಯೋಗಗಳಿಗೆ ಒಡ್ಡುವ ಪರಿ ನೋಡಿದರೆ, ಅವರು ಸಂಗೀತವನ್ನೇ ಉಸಿರಾಡುವವರಂತೆ ಕಾಣುತ್ತಾರೆ. ಅಷ್ಟಲ್ಲದೆ, ಸಂಗೀತದ ಮೂಲಕ ಸಾಂಸ್ಕೃತಿಕ ಜ್ಞಾನವನ್ನು ಹಂಚುತ್ತಿರುವುದು ವಿಶೇಷ. ಇಷ್ಟೆಲ್ಲ ಮಾತಿಗೆ ಕಾರಣವಾದವರು ಬಿಂದು ಮಾಲಿನಿ.

"ಯಾವುದೇ ಬಗೆಯ ಕಲೆಯಲ್ಲಿ ಸಾಮಾಜಿಕ ವ್ಯವಸ್ಥೆ ಮತ್ತು ಸಮಾನತೆ ಕುರಿತಂತೆ ಒಳಿತನ್ನೇ ಕಾಣುವ ದೃಷ್ಟಿಯನ್ನು ಹೊಂದಿರಬೇಕು. ಸಂಗೀತದ ಉದ್ದೇಶ ಸಹ ಮನರಂಜನೆ ಮಾತ್ರವಲ್ಲದೆ, ಎಲ್ಲರೂ ತಮ್ಮನ್ನೇ ತಾವು ಕಂಡುಕೊಳ್ಳುವ ನೂತನ ಭಾವ ಸ್ಫುರಿಸುವಂತೆ ಮಾಡುವ ಉದ್ದೇಶವಾಗಿರಬೇಕು," ಎಂಬುದು ಬಿಂದು ಮಾಲಿನಿ ಅವರ ನಿಲುವು. ಈ ನಿಟ್ಟಿನಲ್ಲಿ, ಲಿಂಗ ಸಮಾನತೆ ಕುರಿತಾದ ವಚನಕಾರ್ತಿಯರ ವಚನಗಳು ಇವರ ಧ್ವನಿಯಲ್ಲಿ ಜೀವ ಪಡೆದು ನಮ್ಮ ಆಲೋಚನೆಗಳನ್ನು ತಾಕುತ್ತವೆ. ಈ ಕಾರಣಕ್ಕೇ, ಅಗಾಧ ಓದು ಮತ್ತು ಅರಿವಿನ ಮೂಲಕ ಸಂಗೀತವನ್ನು ಹೊಸ ದಿಕ್ಕಿಗೆ ಒಯ್ಯುತ್ತಿರುವ ಗಾಯಕಿಯರಲ್ಲಿ ಬಿಂದು ಮಾಲಿನಿ ಪ್ರಮುಖರು.

Image
Bindu Malini 3

ಚೆನ್ನೈ ಮೂಲದವರಾದ ಬಿಂದು ಮಾಲಿನಿ, ತಮಿಳು, ಹಿಂದಿ, ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವ ಮೂಲಕ ಆರಂಭದ ಹೆಜ್ಜೆಯಲ್ಲೇ ದೊಡ್ಡ ಛಾಪು ಮೂಡಿಸಿದ್ದಾರೆ. ಇವರ ತಾಯಿ ವಿಶಾಲಾಕ್ಷಿ, ಆಕಾಶವಾಣಿಯಲ್ಲಿ ಕರ್ನಾಟಕ ಸಂಗೀತ ಗಾಯಕಿಯಾಗಿದ್ದವರು. ಅಜ್ಜಿ ಸೀತಾ ದೊರೆಸ್ವಾಮಿ ಜಲತರಂಗ ವಾದಕಿಯಾಗಿ ಹೆಸರು ಮಾಡಿದವರು. ಸಂಗೀತದ ಹಿನ್ನೆಲೆ ಇರುವ ಕುಟುಂಬದಿಂದ ಬಂದ ಬಿಂದು ಮಾಲಿನಿ, ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಗ್ರಾಫಿಕ್ಸ್ ಡಿಸೈನ್‌ನಿಂದ ಪದವಿ ಪಡೆದಿದ್ದಾರೆ. ಸೌಂಡ್ ಎಂಜಿನಿಯರಿಂಗ್‌ನಲ್ಲಿ ಪ್ರಯೋಗಗಳನ್ನು ಮಾಡುವುದು ಅವರಿಗಿಷ್ಟದ ಕೆಲಸ.

ಸಂಗೀತವನ್ನೇ ವೃತ್ತಿಯಾಗಿ ತೆಗೆದುಕೊಳ್ಳಬೇಕೆಂಬ ನಿರ್ಧಾರವನ್ನು 2012ರಲ್ಲಿ ತೆಗೆದುಕೊಂಡ ಅವರು, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ ಹಾಗೂ ಪಾಶ್ಚಿಮಾತ್ಯ ಸಂಗೀತವನ್ನು ಅರಗಿಸಿಕೊಂಡಿದ್ದಾರೆ. ಅಡುಗೆ, ಚಿತ್ರಕಲೆಯಲ್ಲೂ ಆಸಕ್ತಿ ಉಂಟು. ಈಗ ಸಂಪೂರ್ಣವಾಗಿ ಸಂಗೀತ ಸಂಯೋಜನೆ, ಗಾಯನ, ಓದು, ಕೊಲಾಬೊರೇಷನ್, ಸೌಂಡ್ ಎಂಜಿನಿಯರಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ.

Image
Bindu Malini 5

ಬಿಂದು ಮಾಲಿನಿ ಅವರು 2016ರಲ್ಲಿ ಅರುಣ್ ಪ್ರಭು ನಿರ್ದೇಶಿಸಿದ ತಮಿಳಿನ 'ಅರುವಿ' ಚಿತ್ರಕ್ಕೆ ಸಂಗೀತ ಸಂಯೋಜಿಸಿದರು. ಸಿನಿಮಾ ಗೆಲ್ಲುವ ಜೊತೆಗೆ, ಸಂಗೀತ ಸಂಯೋಜಕಿಯಾಗಿ ಬಿಂದು ಅವರೂ ಗೆಲುವಿನ ನಗೆ ಬೀರಿದರು. ಅದ್ಭುತ ಗಾಯನದ ಮೂಲಕ ಕೂಡ ಅವರು ಹೆಸರು ಗಳಿಸಿದರು. ಅನನ್ಯ ಕಾಸರವಳ್ಳಿ ನಿರ್ದೇಶನದ ಮೊದಲ ಸಿನಿಮಾ 'ಹರಿಕಥಾ ಪ್ರಸಂಗ'ಕ್ಕೆ ಸಂಗೀತ ಸಂಯೋಜನೆ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆ ನಂತರ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅವರ 'ನಾತಿಚರಾಮಿ' ಸಿನಿಮಾಗೆ ಸಂಗೀತ ಸಂಯೋಜನೆ ಜೊತೆ ಗಾಯಕಿಯಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಈ ಚಿತ್ರದ 'ಮಾಯಾವಿ ಮನವಿ’ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ ಬಂದಿದೆ. ಅದೇ ಚಿತ್ರದ 'ಭಾವಲೋಕದ ಭ್ರಮೆಯ' ಹಾಡಿನ ಗಾಯನಕ್ಕೆ ಫಿಲ್ಮ್ ಫೇರ್ ಅವಾರ್ಡ್ ಒಲಿದಿದೆ. ಇತ್ತೀಚೆಗೆ ಸಂಗೀತ ಸಂಯೋಜನೆ ಮಾಡಿರುವ ತಮಿಳು ಸಿನೆಮಾ 'ಸೇತುಮಾನ್' ಹಾಡುಗಳು ಕೂಡ ನೋಡುಗರು ಮತ್ತು ಕೇಳುಗರ ಮೆಚ್ಚುಗೆ ಗಳಿಸಿದೆ.

ಕಾಕತಾಳೀಯವೊ ಎಂಬಂತೆ, ಮಹಿಳೆಯರ ಸುತ್ತ ಹೆಣೆದ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡುವ ಅವಕಾಶ ಅವರಿಗೆ ಮತ್ತೆ-ಮತ್ತೆ ಬಂದಿದೆ. ಪಿ.ಆರ್.ಕೆ ಬ್ಯಾನರ್ ಅಡಿಯಲ್ಲಿ ಸಿಂಧುಮೂರ್ತಿ ಅವರು ಮಹಿಳೆಯರ ತಂಡವನ್ನು ಕಟ್ಟಿಕೊಂಡು ನಿರ್ದೇಶಿಸುತ್ತಿರುವ 'ಆಚಾರ್ ಅಂಡ್ ಕೋ' ಸಿನಿಮಾಗೆ ಸದ್ಯ ಸಂಗೀತ ಸಂಯೋಜಿಸುತ್ತಿದ್ದಾರೆ.

Image
Bindu Malini 8

ಮಹಿಳಾ ಸಂವೇದನೆಯನ್ನು, ಲಿಂಗ ಸಮಾನತೆಯನ್ನು ತಿಳಿಸಲು ವಚನಗಳನ್ನು, ಮಹಿಳೆಯರ ಕುರಿತಾದ ಜಾನಪದ ಹಾಡುಗಳನ್ನಿಟ್ಟುಕೊಂಡು ಹೊಸ ಪ್ರಯೋಗ ಮಾಡಿರುವುದು ಬಿಂದು ಅವರ ಹೆಗ್ಗಳಿಕೆ. ಎಂ ಡಿ ಪಲ್ಲವಿ ಮತ್ತು ಬಿಂದು ಮಾಲಿನಿ ಅವರು 'ಥ್ರೆಶೋಲ್ಡ್' ಹೆಸರಿನಡಿಯಲ್ಲಿ 'ಎಂಜಿನಿಯರ್ಸ್ ಪಿಕ್'ನಲ್ಲಿ ಮಾಡಿದ ಸಂಗೀತ ಪ್ರಯೋಗ ಅವರಿಬ್ಬರ ಬದುಕಿನ ಆಶಯದ ಜೊತೆಗೆ, ಸಂಗೀತದ ಕುರಿತ ಹೊಸ ಮುನ್ನೋಟವನ್ನು ಎತ್ತಿ ಹಿಡಿದಿದೆ.

"ಸಿನಿಮಾ ರಂಗದಲ್ಲಿ ಕೆಲಸ ಮಾಡುವ ಎಲ್ಲ ಹೆಣ್ಣುಮಕ್ಕಳೂ ಗಟ್ಟಿಗಿತ್ತಿಯರು. ಪ್ರತಿಭೆ ಇದ್ದ ಕಾರಣಕ್ಕಾಗಿಯೇ ಅವರು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ. ಗೆಳತಿಯರೊಟ್ಟಿಗೆ ಸೇರಿ ಕೊಲಾಬೊರೇಟ್ ಮಾಡಿ, ಕಛೇರಿಗಳನ್ನು ನಡೆಸುವಾಗ, ಸಂಗೀತ ಸಂಯೋಜನೆ ಮಾಡುವಾಗ ಇಂಥ ಸಂಗತಿಗಳೆಲ್ಲ ಹೆಚ್ಚು ಅರ್ಥವಾಗುತ್ತದೆ. ನಾನು ನನ್ನ ಸ್ನೇಹಿತೆಯರನ್ನು ಅಥವಾ ಅವರು ನನ್ನನ್ನು ಕೆಲಸದ ಕಾರಣಕ್ಕೆ ಪರಿಚಯ ಮಾಡಿಕೊಡುವಾಗ, ಹೆಣ್ಣುಮಕ್ಕಳು ಮುಂದುವರಿಯಲಿ ಎಂಬ ವಿನಾಯತಿ ಮಾತ್ರವೇ ಕಾರಣವಲ್ಲ; ಜೊತೆಗೆ, ಅವರಲ್ಲಿರುವ ಪ್ರತಿಭೆ ಮತ್ತು ಸಾರ್ಮರ್ಥ್ಯವೂ ಕಾರಣ," ಎನ್ನುತ್ತಾರವರು.

ಈ ಲೇಖನ ಓದಿದ್ದೀರಾ?: ಮೈಕ್ರೋಸ್ಕೋಪು | ಹವಾಮಾನ ಬದಲಾವಣೆ - ಬಾಗಿದ ಹೆಣ್ಣಿನ ಬೆನ್ನಿಗೆ ಬೀಸುವ ಬಡಿಗೆ

"ನನ್ನ ಸಂವೇದನೆ ಸಂಗೀತ ಸಂಯೋಜಿಸುವಾಗ ಮತ್ತು ಹಾಡು ಹಾಡುವಾಗಷ್ಟೇ ಅಲ್ಲದೆ, ಹಾಡಿನ ಸಾಹಿತ್ಯದ ಕುರಿತು ಕೂಡ ಆಗಿದೆ. ಸಾಹಿತ್ಯದಲ್ಲಿ ಬದಲಾವಣೆ ಬೇಕು ಎಂದಾಗ ಖಂಡಿತ ನಾನು ಹೇಳುತ್ತೇನೆ. ಕತೆಯ ಕುರಿತು ಚರ್ಚಿಸುತ್ತೇನೆ. ಸಾಹಿತ್ಯ ಗಟ್ಟಿ ಇದ್ದರಷ್ಟೇ ಭಾವ ತುಂಬಲು ಸಾಧ್ಯ. ಅದೇ ಕಾರಣಕ್ಕೆ ನಾನು ಕೆಲಸ ಮಾಡುವ ಭಾಷೆಯನ್ನು ಕಲಿಯುತ್ತೇನೆ. ಭಾಷೆಯ ಓಘ, ಉಚ್ಚಾರಣೆ ಬಹಳ ಮುಖ್ಯ," ಎನ್ನುವ ಬಿಂದು ಮಾಲಿನಿ, ಮಾತೃಭಾಷೆಯೇನೋ ಎಂಬಷ್ಟು ಸುಲಲಿತವಾಗಿ ಕನ್ನಡ ಮಾತನಾಡುತ್ತಾರೆ.

"ಸಂಗೀತ ಮದ್ದಾಗಬಲ್ಲದು. ಹುಚ್ಚೆಬ್ಬಿಸಬಲ್ಲದು. ಸಂತೈಸಬಲ್ಲದು. ಶಾಂತಚಿತ್ತರಾಗಿಸಬಲ್ಲದು. ಸಂಗೀತ ಮೆದುಳು ತಟ್ಟುವ ಬದಲು ಹೃದಯ ತಟ್ಟಬೇಕು. ಸಂಗೀತ ಮದ್ದಾಗಬೇಕು ಎಂಬತ್ತ ನನ್ನ ಚಿತ್ತ ಮತ್ತು ಕಾರ್ಯ. ಸಂಗೀತವು ಹಾಯಿದೋಣಿಯಲ್ಲಿ ತೇಲಿಸುವಂತಿರಬೇಕು. ಕೆಲವೊಮ್ಮೆ ಮನಕ್ಕೆ ನಾಟುವಂತಿರಬೇಕು. ನೆಲದ ಧ್ವನಿಯನ್ನು ಜನಮನಕ್ಕೆ ಇಳಿಸಬೇಕು. ಜನಮನದ ಬದುಕನ್ನು ಹಾಡಾಗಿಸುವ ಶಕ್ತಿ ಹೆಣ್ಣುಮಕ್ಕಳಲ್ಲಿದೆ. ಆ ಕಾರಣದಿಂದ ಹೆಣ್ಣುಮಕ್ಕಳು ಸಂಗೀತ ಸಂಯೋಜಕರಾಗಬೇಕು," ಎಂಬುದು ಅವರ ಮನದಾಳದ ಮಾತು.

Image
Bindu Malini 4

"ಅವಕಾಶವನ್ನು ಅರಸುವ ಹೆಣ್ಣುಮಕ್ಕಳು ಸಹಾಯ ಕೇಳುವ ದಿಟ್ಟತನ ಬೆಳೆಸಿಕೊಳ್ಳಬೇಕು. ತಮ್ಮ ಸಾಮರ್ಥ್ಯ ಮತ್ತು ಮಿತಿಯನ್ನು ತಿಳಿದು ಹೊಸತಾಗಿ ಯೋಚಿಸಬೇಕು. ಸಾಧ್ಯವಿಲ್ಲದ್ದು ಎಂಬುದು ಯಾವುದೂ ಇಲ್ಲ; ಅಂಥದ್ದನ್ನು ಸಾಧ್ಯವಾಗಿಸುವತ್ತ ನಮ್ಮ ಗುರಿ ಇರಬೇಕು," ಎಂಬುದು ಹೆಣ್ಣುಮಕ್ಕಳಿಗೆ ಅವರ ಕಿವಿಮಾತು.

"ಸಿನಿಮಾಗಳು ಲಿಂಗಬೇಧವನ್ನು ಮೀರಬೇಕು. ಕ್ರೌರ್ಯ, ದ್ವೇಷ, ಅಸಮಾನತೆಯ ರುಚಿಯನ್ನು ಮನುಷ್ಯರಿಗೆ ಹತ್ತಿಸಬಾರದು. ಸಿನಿಮಾ, ಸಂಗೀತ, ಕಲೆ, ನಟನೆ, ಯಾವುದೇ ಆಗಲಿ, ಒಗ್ಗೂಡಿ ಬದುಕುವ, ಬದುಕಿನ ಸೌಂದರ್ಯ ತಿಳಿಸುವ, ಜನರ ಕಷ್ಟಕ್ಕೆ ಮರುಗುವ ಬದುಕಿನ ಆಶಯಗಳಿಗೆ ಕಂದೀಲಾಗಿರಬೇಕು," ಎಂಬುದು ಅವರ ಆಶಯ. ಸೂಕ್ಷ್ಮ ಮನದ ಇಂಥ ವ್ಯಕ್ತಿತ್ವಕ್ಕೆ ಎಲ್ಲ ಬಗೆಯ ಯಶಸ್ಸು ಸಿಗಲಿ.

ನಿಮಗೆ ಏನು ಅನ್ನಿಸ್ತು?
11 ವೋಟ್