ಮುಳ್ಳುಹಾದಿಗೆ ಮಣ್ಣು ಹೊತ್ತವರು | 'ಕಾಣೆಯಾದವಳು' - ತುಳಸಾ ಥಾಪಾ

tulasa thapa 10

ಲೈಂಗಿಕ ಕಾರ್ಯಕರ್ತೆ/ಕರ್ತರಾಗುವುದನ್ನು ವೃತ್ತಿಯೆಂದು ಪರಿಗಣಿಸಬಹುದೇ ಇಲ್ಲವೇ ಎನ್ನುವುದು ಹಲವು ಆಯಾಮಗಳ ಉತ್ತರಗಳನ್ನೊಳಗೊಂಡ ಪ್ರಶ್ನೆ. ಬಾಲ್ಯ ಮತ್ತು ಬದುಕು ಎರಡೂ ನಾಶವಾದ ತುಳಸಾಳಂತಹ ಹುಡುಗಿಯರ ಕಥನಗಳನ್ನು ನೋಡುವಾಗ, ವೇಶ್ಯಾವೃತ್ತಿಯನ್ನು 'ವೃತ್ತಿ'ಯಾಗಿ ಪರಿಗಣಿಸುವುದರ ಅಪಾಯ ಗೋಚರವಾಗುತ್ತದೆ

ಆ ಹಿಮಾಲಯದ ಊರುಗಳಲ್ಲಿ, ನಗರದ ಸೆರಗಿನ ಹಳ್ಳಿಗಳಲ್ಲಿ ಹುಡುಗಿಯರು 'ಕಾಣೆಯಾಗುವುದು' ಅಂಥ ದೊಡ್ಡ ವಿಷಯವಲ್ಲ. ಕಾಣೆಯಾಗಲೆಂದೇ, ಕಾಣೆ ಮಾಡಲೆಂದೇ, ಅಲ್ಲಿ ಪ್ರತಿ ಕುಟುಂಬವೂ ಕನಿಷ್ಠ ಮೂವರು ಹುಡುಗಿಯರು ಹುಟ್ಟಲೆಂದು ಬಯಸುತ್ತದೆ. ಹಾಗೊಂದು ದಿನ ಇದ್ದಕ್ಕಿದ್ದಂತೆ ತನ್ನ ಮನೆ, ಒಡಹುಟ್ಟಿದವರನ್ನು ಬಿಟ್ಟು ಕಾಣದ ಊರಿಗೆ, ಕಾಣದ ಜನರ ನಡುವೆ ಹೋಗಿ ಬೀಳಲು ಯಾವ ಹುಡುಗಿಗೂ ಇಷ್ಟವಿರುವುದಿಲ್ಲ. ಇಷ್ಟವೋ ಕಷ್ಟವೋ ಅಂಥದೊಂದನ್ನು ಅವರು ಊಹಿಸಿಕೊಂಡಿರುವುದೂ ಇಲ್ಲ. ಆದರೆ, ಹಿಮಕಣಿವೆಯ ಹುಡುಗಿಯರಿಗೆ ವಾಸ್ತವ ಸಿಹಿಯಾಗಿಲ್ಲ, ಸಪ್ಪೆಯಾಗೂ ಇಲ್ಲ; ಅದು ಕಠೋರ ಕಹಿವಿಷ.

...ಹಾಗೆ ಬದುಕು ವಿಷವಾದವರಲ್ಲಿ ತುಳಸಾ ಬೀರ್ ಧುಜ್ ಥಾಪಾ ಕೂಡ ಒಬ್ಬಳು.

1982. ನೇಪಾಳದ ರಾಜಧಾನಿ ಕಠ್ಮಂಡುವಿನ ಹೊರಭಾಗದ ಠಾಣಾಕೋಟ್‍ನ ಸೆರಗಿನ ಒಂದು ಹಳ್ಳಿ. ಅಂದು ಊರಿನಲ್ಲಿ ಹೋಳಿಯ ಸಂಭ್ರಮ. ಎಲ್ಲರೂ ಮುಖ-ಮೈಗೆ ಬಣ್ಣ ಎರಚಿಕೊಂಡು, ಮೆತ್ತಿಕೊಂಡು ನರ್ತಿಸುತ್ತ ಇದ್ದರು. 12 ವರ್ಷದ ಹುಡುಗಿ ತುಳಸಾ, ಹಿರಿಯ ಮಹಿಳೆಯರ ಜೊತೆ ಬೆರೆಯದೆ, ಯುವತಿಯರ ಜೊತೆಗೂ ಸೇರಲಾಗದೆ, ಸಣ್ಣ ಮಕ್ಕಳನ್ನು ನೋಡುತ್ತ ಆಗೊಮ್ಮೆ ಈಗೊಮ್ಮೆ ಹನಿ-ಹನಿ ಬೀಳುವ ಬಣ್ಣದ ನೀರಿಗೆ ಕಚಕುಳಿ ಅನುಭವಿಸುತ್ತ ನಿಂತಿದ್ದಳು.

ಆಗ, "ನಿನ್ನಮ್ಮನಿಗೆ ಹುಶಾರು ತಪ್ಪಿದೆ, ನಿನ್ನ ಕರೀತಿದ್ದಾರೆ, ಕೇಳ್ತಾ ಇಲ್ವ ಕೆಪ್ಪಿ..." ಎಂದು ಅವಳ ನೆಂಟನೇ ಆದ ಕಾಂಜಾ ಪಕ್ಕ ಬಂದು ಕೈ ಹಿಡಿದೆಳೆದ. ಅಮ್ಮ ಮನೆಯಲ್ಲಿಲ್ಲ, ಅಲ್ಲೆಲ್ಲೋ ಇದ್ದಾಳೆ ಬಾ ಎನ್ನುವುದು ಅವನ ಒತ್ತಾಯ. ಒರಟು ಹಿಡಿತ ಬಿಡಿಸಿಕೊಂಡು, ಕೈ ಕೊಸರಿಕೊಂಡು ಮನೆ ಕಡೆ ಹೊರಟವಳನ್ನು ಕಾಂಜಾ ಬೇರೊಂದು ದಿಕ್ಕಿಗೆ ಎಳೆದ. ಅವಳು ಕೊಸರಾಡುತ್ತಿದ್ದರೂ ಕೇಳದವನಂತೆ ಬಸ್ಸಿನೊಳಗೆ ದಬ್ಬಿದ. "ಅಮ್ಮ ಅಲ್ಲಿ ಸೀರಿಯಸ್ಸಾಗಿ ಬಿದ್ದಿದಾಳೆ, ಗಾಂಚಲಿನಾ ನಿಂದು? ಬಾಯ್ಮುಚ್ಕಂಡು ಸುಮ್ನೆ ಬಾ," ಎಂದು ಗದರಿದ. ಮತ್ತೆಲ್ಲೋ ಇಳಿದರು, ಅಡಗಿದರು, ಹತ್ತಿದರು. ಏನನ್ನೂ ಕೇಳುವಂತಿಲ್ಲ. ಕದ್ದುಮುಚ್ಚಿ ಲಾರಿಗಳಲ್ಲಿ ಪಯಣಿಸಿದರು. ಕುಡಿಯಲು ಒಂದು ಬಾಟಲು ನೀರು, ನಾಕು ಬನ್ನು – ಇವಿಷ್ಟೇ, ಏನನ್ನೂ ಕೊಡಲಿಲ್ಲ. ಬಾಯಲ್ಲಿ ಬಟ್ಟೆ ತುರುಕಿ, ಕೈಕಾಲು ಕಟ್ಟಿ ಹಾಕಿದ ಅವಳು, ತನಗೆ ತಾನೇ ಅಳುತ್ತ, ಕೂಗುತ್ತ, ಭೋರಿಡುತ್ತ ಎಲ್ಲೆಲ್ಲಿ ಹಾದುಬಂದಳೋ, ಅಂತೂ ಪಯಣ ನಿಂತಿತು. ಮುಂಬಯಿ ತಲುಪಿದ್ದರು.

ಮನೆಯಿಂದ ಹೊರಟು ಮೂರೇ ದಿನಗಳಲ್ಲಿ ಮುಂಬಯಿ ತಲುಪಿದ್ದರೂ ಅವಳಿಗೆ ಯುಗಯುಗಾಂತರ ಕಳೆದಂತೆನಿಸಿತ್ತು. ಬಾಲ್ಯದ ಕನಸು, ಸಂಭ್ರಮಗಳನ್ನೆಲ್ಲ ಇದ್ದಕ್ಕಿದ್ದಂತೆ ಬದಲಾದ ಪರಿಸ್ಥಿತಿ ಹೊಸಕಿಹಾಕಿತ್ತು. ಹಸಿವೆ, ನೀರಡಿಕೆ, ಉರಿಮೂತ್ರ, ಮಲಬದ್ಧತೆ, ವಾಂತಿ ಮುಂತಾಗಿ ಇದುವರೆಗೆ ಆಗದ ಸಂಕಟಗಳೆಲ್ಲ ಬಂದೆರಗಿದ್ದವು. ಸಂದಿಮೂಲೆ ಹಾಯ್ದು, ಒಂದು ಕಿರುಬಾಗಿಲ ಸರಿಸಿ, ಸಣ್ಣ ಅರೆಗತ್ತಲ ಗೂಡಿಗೆ ಅವಳನ್ನು ಎತ್ತೊಯ್ದರು. ಒಳಹೋದ ಬಳಿಕ ಕೈ, ಕಾಲು, ಬಾಯಿ ಬಿಚ್ಚಿದರು. ಆಗವಳು ಕಂಡದ್ದೇನು? ಅರೆಗತ್ತಲ, ಕಿಟಕಿ ಬಾಗಿಲುಗಳೊಂದೂ ಇರದ ನೆಲಮಾಳಿಗೆ. ಧಡಿಯರು, ಅವಳ ಅಜ್ಜಿಗಿಂತ ವಯಸ್ಸಾದ ಹೆಂಗಸರು, ಮತ್ತೊಂದಷ್ಟು ಹುಡುಗರು ಕುಳಿತಿದ್ದರು. ಅವಳು ದಿನಗಟ್ಟಲೆ ಸ್ನಾನ ಮಾಡಿರಲಿಲ್ಲ. ಸಿಟ್ಟಿಗೆ ತಲೆ ಚಚ್ಚಿಕೊಂಡು, ಮೈ-ಕೈ ಪರಚಿಕೊಂಡು ಹುಚ್ಚಿಯಂತಾಗಿದ್ದಳು.

Image
tulasa thapa 1
ಕಠ್ಮಂಡುನಲ್ಲಿ ನಡೆದ ಜಾಗೃತಿ ಜಾಥಾವೊಂದರ ದೃಶ್ಯ

ಧಾಂಡಿಗರು ಬಂದು ಕಟ್ಟುಗಳ ಕಳಚಿದಾಗ ಒಮ್ಮೆ ಗಟ್ಟಿಯಾಗಿ ಕೂಗಿದಳು. "ನಾನೆಲ್ಲಿ ಬಂದೆ? ನನ್ನ ಅವ್ವ ಹೇಗಿದ್ದಾಳೆ? ಅಪ್ಪ ಎಲ್ಲಿ? ತನ್ನ ಕರೆತಂದ ಮಾಮಾ, ಕಾಕಾ ಎಲ್ಲಿ?" ಎಂದರಚಿದಳು. ಇದು 'ಸೂಕ್ತ' ತರಬೇತಿ ಕೊಟ್ಟೇ ತಯಾರು ಮಾಡಬೇಕಾದ 'ಮಾಲು' ಎಂದು ಸುತ್ತಲಿದ್ದವರು ಗಹಗಹಿಸಿದರು. ಎಚ್ಚರ ತಪ್ಪುವಂತೆ ಒಮ್ಮೆ ಬಾರಿಸಿ, ಬಟ್ಟೆ ಬಿಚ್ಚಿ, ಅವಳ ಅಂಗಾಂಗಗಳ ಸ್ಥಿತಿ, ಆಕಾರ, ಗಾತ್ರಗಳನ್ನು ನೋಡಿ ದರ ನಿರ್ಧರಿಸಿದರು. ಸಾಕಷ್ಟು ಚೌಕಾಸಿ ನಡೆಯಿತು. ಇನ್ನೂ ಯಾರೂ ಮುಟ್ಟದ ಕನ್ಯೆ, ಮುಟ್ಟಾಗದ ಕನ್ಯೆ, ನೇಪಾಳಿ, ಬೆಳ್ಳಗಿರುವವಳು ಮುಂತಾಗಿ ಅವಳನ್ನು ಕದ್ದು ತಂದವರಿಗೆ ರೇಟು ಏರಿಸಲು ಕಾರಣಗಳಿದ್ದವು. ಆದರೆ, ಅವಳ ಹಠಮಾರಿತನ, ಗಟ್ಟಿದನಿಗಳು ರೇಟು ಇಳಿಸುವ ಕಾರಣಗಳಾದವು. ಅಂತೂ ನೇಪಾಳದಿಂದ ಮುಂಬಯಿಗೆ 1982ರಲ್ಲಿ ಬಂದ ಆ ಕೂಸು, ಕಾಮಾಟಿಪುರದ ಸಂತೆಯಲ್ಲಿ ಐದು ಸಾವಿರಕ್ಕೆ ಮಾರಾಟವಾಯಿತು. ಒಬ್ಬ ಮಾಜಿ ನೇಪಾಳಿ ವೇಶ್ಯೆ, ವೇಶ್ಯಾಗೃಹ ನಡೆಸುತ್ತಿದ್ದ ಮಹಿಳೆ ಅವಳನ್ನು ಕೊಂಡುಕೊಂಡಳು.

ಮೊದಲ ಒಡತಿ ತುಳಸಾಗೆ 'ಸೂಕ್ತ' ತರಬೇತಿ ಕೊಡಿಸಿದಳು. ಚೂರಿ ಹಿಡಿದು ಗದರಿಸುವವರ ನಡುವೆ ಮೊದಲ ಅತ್ಯಾಚಾರ ನಡೆಯಿತು. ಬಳಿಕ ಗಿರಾಕಿಗಳು ನದಿಯಂತೆ ಹರಿದುಬಂದರು. ದಿನಕ್ಕೆ ಸರಾಸರಿ ಎಂಟು ಮಂದಿ ಗಂಡಸರಾದರೂ ಅವಳ ಬಳಿ ಬಂದುಹೋಗುತ್ತಿದ್ದರು. ಹಿಮಾಲಯದ ನಾಡಿನಿಂದ ಈಗಷ್ಟೇ ಬಂದ ತಾಜಾ ಮಾಲಿಗೆ ತಲೆಹಿಡುಕರು ಹೇಳಿದಷ್ಟೇ ರೇಟು. ತನ್ನ ಹಗಲಿನ 'ಕೆಲಸ'ದ ಜೊತೆಗೆ ಪ್ರತಿ ರಾತ್ರಿ ಕನಿಷ್ಠ ಮೂವರ ದೇಹತೃಷೆಯನ್ನವಳು ತೀರಿಸಲೇಬೇಕು. ಸರಿಯಾಗಿ ಊಟ-ನಿದ್ರೆಗೂ ಸಮಯವಿಲ್ಲ. ಒಪ್ಪದಿದ್ದರೆ ಹೊಡೆತ ನಿಶ್ಚಿತ. ಒಂದು ತಿಂಗಳ ಬಳಿಕ ಅಲ್ಲಿಂದ ರೀಟಾ ಎಂಬಾಕೆಗೆ 7,000 ರೂಪಾಯಿಗೆ ಮಾರಾಟ ಆದಳು. ಅವಳೂ ನೇಪಾಳಿ ಮೂಲದ ಲೈಂಗಿಕ ಕಾರ್ಯಕರ್ತೆಯೇ. ಅಲ್ಲಿ ಆರು ತಿಂಗಳು ಕಳೆಯಿತು. ಪ್ರತಿದಿನ ಕನಿಷ್ಠ ಹತ್ತು ಮಂದಿ ಮೈ ಹಿಸಿದು ತಿನ್ನುವವರು. ಎಲ್ಲೋ ಕೆಲವರು ಅವಳ ಕೈಗೂ ಒಂದು ಕಾಸು ತುರುಕಿ ಹೋಗುವರು. ಅಲ್ಲಿ ಅವಳೊಬ್ಬಳೇ ಅಂಥವಳಲ್ಲ. ಇನ್ನೂ ಹತ್ತು, ಹನ್ನೆರೆಡು ಎಳೆಬಾಲೆಯರಿದ್ದರು. ಒಬ್ಬರಿಗೊಬ್ಬರು ಪರಿಚಯ ಮಾಡಿಕೊಳ್ಳಲು, ಮಾತಾಡಲು ಅವಕಾಶ ಕೊಡುತ್ತಿರಲಿಲ್ಲ. ಸಮಯ ಸಿಗುತ್ತಲೂ ಇರಲಿಲ್ಲ. ಉಸ್ ಎಂದು ಉಸಿರು ಬಿಟ್ಟು ಚಣಕಾಲ ದೇಹ ವಿರಮಿಸುವುದರಲ್ಲಿ ಮತ್ತೊಬ್ಬ ಬರುತ್ತಿದ್ದ. ಮತ್ತದೇ ವಿಕೃತ, ಬಲವಂತದ ಕಾಮದಾಟ. ಪ್ರತಿ ಮಾಲಕಿಯೂ ತಮ್ಮ 'ಮಾಲು' ತಾಜಾ ಎಂದು ಒಂದಷ್ಟು ದಿನ ಘೋಷಿಸಿ, ಹೆಚ್ಚು ದುಡ್ಡಿನ ಗಿರಾಕಿಗಳಿಗೆ ಒದಗಿಸಿ, ಕೊಂಚ ಹಳತಾದದ್ದೇ ಮತ್ತೊಬ್ಬರಿಗೆ ಮಾರುತ್ತಿದ್ದರು. ಕೊಟ್ಟ ದುಡ್ಡಿನ ಹತ್ತಾರು ಪಟ್ಟು ಗಳಿಸಿ ಬಳಿಕ ಬೇರೆಡೆ ದೂಡುವರು.

ಬಳಿಕ ಖೇತವಾಡಿ ಕ್ರಾಸ್‍ರೋಡಿನ ಗೌರಿ ಎಂಬಾಕೆಯ ವೇಶ್ಯಾಗೃಹಕ್ಕೆ 7,500 ರೂಪಾಯಿಗೆ ಮಾರಾಟವಾದಳು. ಮೂರನೆಯ ತಾಣ ಸ್ವಲ್ಪ ಆಧುನಿಕ ಗೃಹವಾಗಿತ್ತು. ತಂತಮ್ಮ ಹೋಟೆಲಿಗೇ ಹುಡುಗಿಯರನ್ನು ಕರೆಸಿಕೊಳ್ಳಲು ಅರಬ್, ಯೂರೋಪಿಯನ್ ಗಿರಾಕಿಗಳು ಸಂಪರ್ಕಿಸುತ್ತಿದ್ದ ಹೈಕ್ಲಾಸ್ ವೇಶ್ಯಾಗೃಹ ಅದು. ಹುಡುಗಿಯರಿದ್ದಲ್ಲಿಗೆ ಗಿರಾಕಿಗಳು ಬಂದರೆ ತಾಸಿಗೆ 30 ರೂಪಾಯಿ. ಗಿರಾಕಿಗಳ ಹೋಟೆಲಿಗೇ ಹುಡುಗಿಯರು ಹೋದರೆ 150-180 ರೂಪಾಯಿ. ಅಲ್ಲಿ ಅವಳಂತಹ 20 ಹುಡುಗಿಯರಿದ್ದರು. ಅವರಲ್ಲಿ 19 ಹುಡುಗಿಯರು ನೇಪಾಳಿಗಳು!

ಅವಳು ಅತ್ಯಾಧುನಿಕ ಉಡುಗೆ ತೊಟ್ಟು ಯೂರೋಪಿಯನ್ ಪ್ರವಾಸಿಗಳು ಬರುವ ರೆಸ್ಟೋರೆಂಟುಗಳಿಗೆ ಹೋಗಬೇಕಾಯಿತು. ಒಂದು ರಾತ್ರಿಗೆ 180 ರೂಪಾಯಿ. ಅದು ಈಗಿನ 18 ಸಾವಿರ ರೂಪಾಯಿಗೆ ಸಮ. ಅಷ್ಟಾದರೂ ಅದು ಅವಳಿಗೆ ಸಿಗುತ್ತಿರಲಿಲ್ಲ. ಬೇಕಾದ್ದನ್ನು ತಿನ್ನಲು, ಬೀರು-ವಿಸ್ಕಿ ಕುಡಿಯಲು, ಆಕರ್ಷಕ ಬಟ್ಟೆ ಧರಿಸಲು ಅವರು ಖರ್ಚು ಮಾಡುವಾಗ ಮತ್ತೇಕೆ ಅವಳಿಗೆ ದುಡ್ಡು? ಅವರು ಹೇಳಿದಷ್ಟು ಮಾಡಿದರೆ ಆಯಿತು. ಮನೆಯಲ್ಲಿ ಅವಳಿಗೆ ಸಿಗುತ್ತಿದ್ದದ್ದು ಸ್ವಾತಂತ್ರ್ಯವೊಂದೇ, ಮಿಕ್ಕಿದ್ದಕ್ಕೆಲ್ಲ ತತ್ವಾರ. ಸ್ವತಂತ್ರ ಭಾರತಕ್ಕೆ ಬಂದ ಅಸ್ವತಂತ್ರ ನೇಪಾಳಿ ಕುವರಿಗೆ ಸ್ವಾತಂತ್ರ್ಯವೊಂದನ್ನು ಬಿಟ್ಟು ಕೇಳಿದ್ದೆಲ್ಲ ಲಭ್ಯ.

Image
tulasa thapa 4
ವಿಶ್ವಸಂಸ್ಥೆ ಬಿಡುಗಡೆ ಮಾಡಿದ ಮಾನವ ಕಳ್ಳಸಾಗಣೆ ಜಾಲವೊಂದರ ಚಿತ್ರ

12ರ ಎಳೆಬಾಲೆ 10 ತಿಂಗಳಿನಲ್ಲಿ 2,800-3,000 ಪುರುಷರ ಲೈಂಗಿಕ ದಾಹಕ್ಕೆ ಬಳಕೆಯಾದಳು. ಪುಟ್ಟ ದೇಹಕ್ಕೆ ಉರಿಯೋ, ನೋವೋ, ರಕ್ತಸ್ರಾವವೋ, ಅಳುವೋ, ಬೇಸರವೋ, ಇಷ್ಟವಿದೆಯೋ, ಇಲ್ಲವೋ ಯಾರಿಗೆ ಬೇಕು? ತಾಜಾ ಕನ್ಯೆಯ ಜೊತೆಗೆ ಸಂಭೋಗ ನಡೆಸಿದರೆ ತಮ್ಮ ಗುಹ್ಯ ಕಾಯಿಲೆಗಳು ಹೋಗುವುವೆಂಬ ಅತ್ಯಂತ ಅಪಾಯಕಾರಿ ಕುರುಡು ನಂಬಿಕೆಯಿಂದ ಹೆಚ್ಚೆಚ್ಚು ಹಣ ಕೊಟ್ಟು, ನಾ ತಾ ಎಂದು ಒಬ್ಬರಾದ ಮೇಲೊಬ್ಬರು ವಿಟಪುರುಷರು ಬಂದರು. ಅವರ ಕಾಯಿಲೆಗಳು ಅವಳಿಗೂ ತಾಗಿದವು. ಹೊಡೆತ, ಬಡಿತ, ಸುಡುವುದು, ಚುಚ್ಚುವುದು, ಇರಿದು ಗಾಯಗೊಳಿಸಿ ಹೆದರಿಸುವುದು ಮುಂತಾಗಿ, ದಿನಕ್ಕೆ ಹದಿನಾರು ಹದಿನೆಂಟು ತಾಸಿನ 'ದುಡಿಮೆ'ಗೆ ಅವಳನ್ನು ಒಗ್ಗಿಸಲು ವೇಶ್ಯಾಗೃಹದ ಒಡತಿ, ಮೇಲ್ವಿಚಾರಕ ತಲೆಹಿಡುಕರು, ಅವರ ರಕ್ಷಕ ಗೂಂಡಾಗಳು, ಗಿರಾಕಿಗಳು ಸಕಲ ಉಪಾಯಗಳನ್ನು ಪ್ರಯೋಗಿಸಿದರು. ಎಳೆಯ ಜೀವ ಭಯದಿಂದ, ತನಗಾದ ಕಾಯಿಲೆಯಿಂದ, ಬಿಡುಗಡೆಯೇ ಇರದ ಭಯಾನಕ ನರಕವಾಸದಿಂದ ಜರ್ಝರಿತವಾಯಿತು.

ಇದೆಲ್ಲ ನಡೆದದ್ದು ಬರಿಯ 10 ತಿಂಗಳು... ಹತ್ತೇ ತಿಂಗಳು. ಆ ವೇಳೆಗೆ ಅವಳಿಗೆ ಕಾಯಿಲೆ ಶುರುವಾಯಿತು. ಕೆಮ್ಮು, ತಲೆನೋವು, ಜ್ವರ ಎಂದು ಮಲಗಿದರೆ ಗಿರಾಕಿಗಳನ್ನು ದೂರವಿಡಲು ನಾಟಕ ಹೂಡುತ್ತಾಳೆಂದು ಭಾವಿಸಿ ಮತ್ತಷ್ಟು ದಂಡಿಸಿದರು. ಹೊಡೆತವಿಲ್ಲದ ದಿನವೇ ಇಲ್ಲ. ಆದರೆ, ಕಾಯಿಲೆ ಹೆಚ್ಚಾಯಿತು. ಊಟ ಸೇರದಂತಾಯಿತು. ವಾಂತಿ, ಉರಿಮೂತ್ರ. ಗಿರಾಕಿ ಬಳಿ ಬಂದರೆ ಕಿರುಚಿ ಕಚ್ಚಿ ಪರಚಿ ದೂಡುತ್ತಿದ್ದಳು. ಸಹಿಸಲಾರದ ನೋವು. ಅಲ್ಲಿಂದ ಶುರುವಾಯ್ತು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ. ಕಾಯಿಲೆಗಳೇ ಅವಳನ್ನು ಸ್ವತಂತ್ರಗೊಳಿಸಿದವು.

ಮುಂಬಯಿಯ ಗ್ರಾಂಟ್‍ ರೋಡ್ ಬಳಿ ಇರುವ, ಗಾಳಿ, ಬೆಳಕುಗಳಿಲ್ಲದ ಅತಿ ಕಿರಿದಾದ ಕೋಣೆಗಳ ಆ ಪ್ರದೇಶದಲ್ಲಿ 10 ಸಾವಿರಕ್ಕೂ ಮಿಕ್ಕಿ ವೇಶ್ಯೆಯರಿದ್ದರು. ಅವರ ಕಾಯಿಲೆ-ಕಸಾಲೆಗೆ ಅಲ್ಲಿದ್ದ ಒಂದೇ ಒಂದು ಖಾಸಗಿ ಆಸ್ಪತ್ರೆ ಗತಿಯಾಗಿತ್ತು. ತುಳಸಾಳನ್ನು ಆಸ್ಪತ್ರೆಗೊಯ್ದರು. ವೈದ್ಯರು ಅವಳ ಸ್ಥಿತಿ ಕಂಡದ್ದೇ ದಿಗ್ಭ್ರಾಂತರಾಗಿ ಜೆಜೆ ಆಸ್ಪತ್ರೆಗೆ ಕಳಿಸಿದರು. ಅಲ್ಲಿ ಒಳರೋಗಿಯಾಗಿ ದಾಖಲಾದಳು. ದೈಹಿಕವಾಗಿ ಮತ್ತು ಮಾನಸಿಕವಾಗಿ ಅತೀವ ಆಘಾತಕ್ಕೊಳಗಾಗಿದ್ದಳು. ಮೂರು ತರಹದ ಲೈಂಗಿಕ ಕಾಯಿಲೆಗಳು ಅಂಟಿದ್ದವು. ಟಿಬಿ ಅವಳ ಮಿದುಳನ್ನು ತಿಂದಿತ್ತು. ಮೂತ್ರಕೋಶದ ಸೋಂಕು ಕಿಡ್ನಿಯನ್ನು ತಿಂದಿತ್ತು. ಲೈಂಗಿಕ ರೋಗಗಳು ಅವಳನ್ನೇ ತಿಂದಿದ್ದವು. ಲೈಂಗಿಕ ಅಂಗಾಂಗಗಳ ಸುತ್ತಮುತ್ತೆಲ್ಲ ನರಗುಳ್ಳೆಗಳು ಎದ್ದಿದ್ದವು. ಕ್ಷಯವು ಮಿದುಳುಬಳ್ಳಿಗೆ ಆವರಿಸಿ ಪಾರ್ಶ್ವವಾಯು ಪೀಡಿತಳಾಗಿ ಅರೆಪ್ರಜ್ಞಾವಸ್ಥೆ ತಲುಪಿದಳು.

ಈ ಮೊದಲು ದಿನನಿತ್ಯ ಅವಳನ್ನು ಹಿಸಿದು ತಿನ್ನಲು ಜನ ಬರುತ್ತಿದ್ದರು. ಈಗ ಯಾರೂ ಇಲ್ಲ. "ನಾನಲ್ಲಿಗೆ ಹೋಗಲ್ಲ, ಹೋಗಲ್ಲ, ಮತ್ತೆ ಹೋಗಲ್ಲ," "ನನ್ನ ಸಾಯಿಸಿಬಿಡಿ," "ನಾನು ಜೀವ ತೆಕ್ಕೊಳ್ತೀನಿ," ಎಂದೆಲ್ಲ ಬಡಬಡಿಸುವ ಹುಡುಗಿ ಆಸ್ಪತ್ರೆ ಸಿಬ್ಬಂದಿಯ ಮನ ಕಲಕಿದಳು. ಪ್ರತಿ ಬಾರಿ ಚಳಿ, ನಡುಕ, ಜ್ವರ ಶುರುವಾದಾಗಲೂ ಎಳೆಯ ಮುಖ ಕಿವುಚಿಕೊಂಡು, ಮುದುರಿ ಮಲಗಿ ಕರುಣಾಜನಕವಾಗಿ ಬಿಕ್ಕಳಿಸುತ್ತ ಅಳುತ್ತಿದ್ದಳು. ಗುಬ್ಬಿಯಂತೆ ಮುದುರಿ ಮಲಗಿರುವ ಎಲುಬು ಚಕ್ಕಳದ ಮುಖದಲ್ಲಿ ಬಾಲ್ಯದ ಚಹರೆಗಳಿನ್ನೂ ಇದ್ದವು. ಇಂಡಿಯನ್ ಹೆಲ್ತ್ ಆರ್ಗನೈಸೇಷನ್ನಿನಲ್ಲಿದ್ದ ಆಸ್ಪತ್ರೆಯ ಇಬ್ಬರು ವೈದ್ಯರು ತುಳಸಾ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರು. ಹನಿ ಪ್ರೀತಿ, ಕರುಣೆ, ಕಾಳಜಿ ತೋರಿಸಿದರು. ಆಸ್ಪತ್ರೆಯವರ ಪ್ರೀತಿ, ಆರೈಕೆಗೆ ಮನಸೋತು ತುಳಸಾ ತನ್ನ ಎಲ್ಲ ಕತೆ ಹೇಳಿಬಿಟ್ಟಳು. ತಂದೆಗೆ ಅಲ್ಲಿಂದಲೇ ಒಂದು ಪತ್ರ ಬರೆದಳು. ದಿನವೂ ರೌಂಡ್ಸಿಗೆ ಬರುವ ವೈದ್ಯರು, ದಾದಿಯರ ಬಳಿ ಅವಳದು ಒಂದೇ ಪ್ರಶ್ನೆ: "ಅಪ್ಪನ ಪತ್ರ ಬಂತಾ? ಅವರು ಬಂದೇ ಬರ್ತಾರೆ. ಅಮ್ಮನಾದ್ರೂ ಬಂದೇ ಬರ್ತಾಳೆ," ಎನ್ನುವುದು. "ಅಣ್ಣ ಇದಾನೆ ನಂಗೆ, ತಂಗಿಯರು ಇದಾರೆ. ನಾ ಮನೆಗೆ ಹೋಗ್ತೀನಿ, ಹೋಗೇ ಹೋಗ್ತೀನಿ," ಎಂದು ನಿರಂತರ ಬಡಬಡಿಸಿದಳು. ಆದರೂ ತಾನೀಗ ಹೀಗೆ ಎಂದು ತಿಳಿದರೆ ಅಪ್ಪ, ಅಮ್ಮ ಏನೆಂದಾರೋ ಎಂಬ ಭಯ, ಆತಂಕ ಅವಳ ಮಾತಿನಲ್ಲಿ ನಿರಂತರ ವ್ಯಕ್ತವಾಗುತ್ತಿತ್ತು.

ಈ ಲೇಖನ ಓದಿದ್ದೀರಾ?: ಮುಳ್ಳುಹಾದಿಗೆ ಮಣ್ಣು ಹೊತ್ತವರು | ಧೈರ್ಯವೇ ಮೈವೆತ್ತ ದಾರಿದೀಪ - ಶಾಂತಮ್ಮ

ಡೊಂಗ್ರಿ ರಿಮ್ಯಾಂಡ್ ಹೋಂನಲ್ಲಿ ಅವಳ ಆರೈಕೆ ಮುಂದುವರಿಯಿತು. ವೇಶ್ಯಾವಾಟಿಕೆಯ ಜಾಲದವರಿಂದ ಆಕ್ರಮಣವಾಗುವ ಸಾಧ್ಯತೆ ಇದ್ದುದರಿಂದ ಪೊಲೀಸ್ ರಕ್ಷಣೆ ಒದಗಿಸಿದರು. ಜೆಜೆ ಆಸ್ಪತ್ರೆಯ ಟಿಬಿ ವಾರ್ಡಿನ ತುಳಸಾ ಬೀರ್ ಧುಜ್ ಥಾಪಾ ಎಂಬ ಹುಡುಗಿಯ 'ಸ್ಟೋರಿ’ ಕೇಳಿ ಮಾಧ್ಯಮದವರ ಕರುಳು ಕಿತ್ತುಬಂತು. ತುಳಸಾ ಪ್ರಕರಣ ಮಾಧ್ಯಮದಲ್ಲಿ ವಿಸ್ತೃತ ವರದಿಯಾಯಿತು. ದೇಶದ ಗಮನ ಸೆಳೆಯಲು ಜನಾರೋಗ್ಯ ಸಂಸ್ಥೆ ಮಧ್ಯಪ್ರವೇಶಿಸಿತು. ದೇಶಾದ್ಯಂತ 'ತುಳಸಾಳನ್ನು ಉಳಿಸಿ’ ಅಭಿಯಾನ ನಡೆಯಿತು. ಬಲವಂತದ ವೇಶ್ಯಾವಾಟಿಕೆ, ಬಾಲವೇಶ್ಯಾವಾಟಿಕೆ, ಮಾನವ ಕಳ್ಳಸಾಗಾಟ ಮೊದಲಾದುದರ ವಿರುದ್ಧ ಸಾರ್ವಜನಿಕ ಚರ್ಚೆ ಆರಂಭವಾಯಿತು. ಮುಂಬಯಿಯ ವೇಶ್ಯಾಗೃಹಗಳಲ್ಲಿರುವ ಬಾಲವೇಶ್ಯೆಯರಲ್ಲಿ 40% ನೇಪಾಳಿ ಹುಡುಗಿಯರೇ ಆಗಿದ್ದಾರೆ ಎಂಬ ಅಂಶ ಬೆಳಕಿಗೆ ಬಂತು. ಎಲ್ಲ ದಿಕ್ಕಿನಿಂದ ಬಂದ ಒತ್ತಡದ ಕಾರಣವಾಗಿ 1985ರಲ್ಲಿ ಭಾರತ-ನೇಪಾಳ ದೇಶಗಳು, ಕಳ್ಳಸಾಗಣೆಗೊಳಗಾದ ನೇಪಾಳಿ ಹುಡುಗಿಯರನ್ನು ರಕ್ಷಿಸಿ ನೇಪಾಳಕ್ಕೆ ಮರಳಿಸುವ ಒಪ್ಪಂದಕ್ಕೆ ಸಹಿ ಹಾಕಿದವು.

ಗಾಲಿ ಕುರ್ಚಿಯಲ್ಲಿ ಓಡಾಡುವಷ್ಟು ಆರೋಗ್ಯ ಚೇತರಿಕೆ ಕಂಡ ಬಳಿಕ ಭಾರತ ಸರ್ಕಾರ ಅವಳನ್ನು ನೇಪಾಳಕ್ಕೆ ಕಳಿಸಿತು. ಜೋರ್ಪಾಟಿದಲ್ಲಿರುವ (ನೇಪಾಳ) 'ಚೆಶೈರ್ ಹೋಂ ಫಾರ್ ಡಿಸೇಬಲ್ಡ್’ಗೆ ಸೇರಿಸಿದರು. ಮನೆಯ ವಿಳಾಸ ಪತ್ತೆ ಮಾಡಿ ತಂದೆಯನ್ನು ಸಂಪರ್ಕಿಸಿದರು. ತುಳಸಾಳ ತಾಯಿ, ಮಗಳ ಅಪಹರಣವಾದ ಕೂಡಲೇ ತೀರಿಹೋಗಿದ್ದರೆ, ತಂದೆ ಬೀರ್ ದೋಜ್ ಥಾಪಾ ಎರಡನೆಯ ಮದುವೆಯಾಗಿದ್ದ. ಎರಡನೆಯ ಹೆಂಡತಿ ತುಳಸಾಳನ್ನು ಮನೆಗೆ ಸೇರಿಸಲು ಒಪ್ಪಲಿಲ್ಲ. ಅಷ್ಟೇ ಅಲ್ಲ, ವಿಶೇಷಚೇತನರ ಹಾಸ್ಟೆಲಿನಲ್ಲಿದ್ದ ಅವಳನ್ನು ನೋಡಲೂ ಯಾರೂ ಬರುತ್ತಿರಲಿಲ್ಲ. ಹತಾಶೆ, ನಿರಾಸೆ, ಕೋಪ, ಅನಾರೋಗ್ಯಗಳಿಂದ ಬಸವಳಿದು ಮಾನಸಿಕ ಸ್ಥಿಮಿತ ತಪ್ಪಿತು. ಅರ್ಥವಾಗದಂತೆ ಏನೇನನ್ನೋ ಮಾತನಾಡುತ್ತ, ಕೂಗುತ್ತ ತಾನಿರುವ ಜಾಗ, ಕಾಲ ಗುರುತಿಸದಂತಾದಳು. ಸದಾ ಹೊಟ್ಟೆನೋವು-ಹೊಟ್ಟೆನೋವು ಎಂದು ಹೇಳುತ್ತ, ಕೂತಲ್ಲೇ ಮಲ-ಮೂತ್ರ ವಿಸರ್ಜನೆ ಮಾಡತೊಡಗಿದಳು.

ಎಲ್ಲಕ್ಕೂ ಚಿಕಿತ್ಸೆ ನಡೆಯಿತು. 1994. "ಅಪ್ಪ ಬರ್ತಾನೆ, ಬರ್ತಾನೆ, ನನ್ನನ್ನು ಕರೆದೊಯ್ಯುತ್ತಾನೆ," ಎಂದು ಒಂದೇ ಸಮ ಬಡಬಡಿಸುತ್ತಿದ್ದ ತುಳಸಾ, ಯಾರೂ ಬಾರದೇ ಹೋದಾಗ ಆತ್ಮಹತ್ಯೆಯ ಪ್ರಯತ್ನ ಮಾಡಿದಳು. ಮೇಲಿನಿಂದ ಹಾರಿ ಕಾಲು ಮುರಿದುಹೋಯಿತು. ಅದಕ್ಕೆ ಚಿಕಿತ್ಸೆ ನೀಡಿ ವಿಶೇಷ ಚೇತನರ ಹಾಸ್ಟೆಲಿನಿಂದ ಬಿಡುಗಡೆ ಮಾಡುವ ಹೊತ್ತಿಗೆ, ಮತ್ತೆ ಕ್ಷಯ ರೋಗ ಅಮರಿಕೊಂಡಿತು. ಕ್ಷಯದ ಎರಡನೆಯ ಆಘಾತದಿಂದ ಹೊರಬರಲಾಗದೆ 1995ರಲ್ಲಿ ತೀರಿಕೊಂಡಳು.

ಆ ದೇಹ ಕೊನೆಯುಸಿರೆಳೆದಾಗ ಅದಕ್ಕೆ ಬರಿಯ 25 ವರುಷ. ಕಂಡ ಸುಖ ಎಷ್ಟು? ಅನುಭವಿಸಿದ ನೋವು, ನರಕ ಎಷ್ಟು? ಓ ಭಾರತೀ...

* * *

Image
tulasa thapa 2
ಮಾನವ ಕಳ್ಳಸಾಗಾಣಿಕೆಯ ಜಾಲವೊಂದರಿಂದ ಪಾರಾದ ನೇಪಾಳಿ ಮಹಿಳೆಯರು

ತುಳಸಾ ಸತ್ತ ಐದು ವರ್ಷದ ಬಳಿಕ ಅವಳ ಪ್ರಕರಣದ ತೀರ್ಪು ಹೊರಬಂತು. ಮೊದಲ ಹೇಳಿಕೆಯಲ್ಲಿ ತುಳಸಾ 1982ರಲ್ಲಿ ತನ್ನನ್ನು ಮನೆಯಿಂದ ಅಪಹರಿಸಿ, ಬೇರೆ-ಬೇರೆ ವೇಶ್ಯಾಗೃಹಗಳಿಗೆ ಮಾರಿದ 32 ಜನರನ್ನು ಹೆಸರಿಸಿದ್ದಳು, ಗುರುತಿಸಿದ್ದಳು. ಅವರಲ್ಲಿ ನೇಪಾಳದ ಅಪಹರಣಕಾರರು, ವೇಶ್ಯಾಗೃಹದ ಮಾಲೀಕರು, ಟ್ಯಾಕ್ಸಿ ಚಾಲಕರೆಲ್ಲ ಸೇರಿದ್ದರು. ಮುಂಬೈ ಪೊಲೀಸರು ಬಂಧಿಸಿದ್ದ 32 ಜನರಲ್ಲಿ ಏಳು ಜನ ಸಾಕ್ಷ್ಯಾಧಾರವಿಲ್ಲವೆಂದು ಬಿಡುಗಡೆಯಾದರು. ಒಂಬತ್ತರಲ್ಲಿ ಒಬ್ಬ ಶಂಕಿತ ವ್ಯಕ್ತಿ ಮಾತ್ರ ವಿಚಾರಣೆಯನ್ನೆದುರಿಸಿದ. ಉಳಿದವರು ತಲೆಮರೆಸಿಕೊಂಡರು. ಅವಳು ಹೆಸರಿಸಿದ ಮೂವರು ನೇಪಾಳಿ ವ್ಯಕ್ತಿಗಳನ್ನು ಅಲ್ಲಿನ ಸರ್ಕಾರ ಗುರುತಿಸಿ, ಬಂಧಿಸಿ ವಿಚಾರಣೆ ನಡೆಸಿತು. ಅವರಿಗೆ 20 ವರ್ಷ ಸೆರೆವಾಸದ ಶಿಕ್ಷೆಯಾಯಿತು. ಒಬ್ಬನೇ ಭಾರತೀಯ ಬಂಧನಕ್ಕೊಳಗಾಗಿದ್ದರೂ ನ್ಯಾಯಾಧೀಶರು ಸಾಕ್ಷ್ಯಾಧಾರವಿಲ್ಲವೆಂದು ಬಿಡುಗಡೆ ಮಾಡಿದರು.

ನೇಪಾಳದಲ್ಲಿ ವೇಶ್ಯಾವೃತ್ತಿ ಕಾನೂನು ವಿರೋಧಿ, ಅಕ್ರಮ. ನಡೆಸುವಂತೆಯೇ ಇಲ್ಲ. ಆದರಿದು ಕಾಗದದ ಮೇಲೆ ಮಾತ್ರ. ಅಲ್ಲಿನ ಲಕ್ಷಾಂತರ ಮಹಿಳೆಯರ ಜೀವನಾಧಾರ ವೇಶ್ಯಾವೃತ್ತಿಯೇ ಆಗಿದೆ! ದಕ್ಷಿಣ ಏಷ್ಯಾ ದೇಶಗಳಲ್ಲೇ ಅತಿ ಬಡತನ ಹೊಂದಿರುವ ನೇಪಾಳದಲ್ಲಿ ಲೈಂಗಿಕ ಕಾರ್ಯಕರ್ತೆಯರಾಗುವುದು ಒಂದು ಉದ್ಯೋಗವೆಂದೇ ಪರಿಗಣಿಸಲ್ಪಟ್ಟಿದೆ. ನೇಪಾಳದ 38% ಜನ ದಿನಕ್ಕೆ ಒಂದು ಡಾಲರ್‌ಗಿಂತ ಕಡಿಮೆ ಆದಾಯದಲ್ಲಿ ಬದುಕುತ್ತಿದ್ದಾರೆ. 82% ಜನ ದಿನಕ್ಕೆ ಎರಡು ಡಾಲರ್ ಆದಾಯದೊಳಗೆ ಬದುಕುತ್ತಿದ್ದಾರೆ. ಅದರಲ್ಲೂ ಗ್ರಾಮೀಣ ಭಾಗದ, ದೊಡ್ಡ ನೇಪಾಳಿ ಕುಟುಂಬಗಳು ಭೂಹೀನರೂ ಆಗಿರುವುದರಿಂದ ದುಡಿಮೆಗೆ ಸುಲಭವಾಗಿ ಒದಗುವ ಮಾರ್ಗ ವೇಶ್ಯಾವೃತ್ತಿಯೇ ಆಗಿದೆ. ಹೆಂಗಸರಷ್ಟೇ ಅಲ್ಲ, ಗಂಡುಹುಡುಗರೂ ಲೈಂಗಿಕ ಕಾರ್ಯಕರ್ತರಾಗುತ್ತಾರೆ. ಹೆಚ್ಚಿನವರು ಅನಿವಾರ್ಯವಾಗಿ ಬಂದಿರುತ್ತಾರೆ. ಬೇರೆ ದೇಶಗಳಿಗೆ ಹೋಗಿ ನೇಪಾಳಕ್ಕೆ ಹಿಂದಿರುಗಿ ಬಳಿಕ ಅದನ್ನೇ ಮಾಡುತ್ತಾರೆ. ಮತ್ತಷ್ಟು ಹುಡುಗಿಯರನ್ನು ಆ ಜಾಲಕ್ಕೆ ಎಳೆಯುತ್ತಾರೆ. ಯಾಕೆಂದರೆ, ಅವರಿಗೆ ಗೊತ್ತಿರುವುದು, ಸಾಧ್ಯವಿರುವುದು ಅದು ಮಾತ್ರವೇ ಆಗಿದೆ. ಕೆಳ ವರ್ಗದ ಮತ್ತು ನೇಪಾಳಿ ಸಮಾಜದ ತಳ ಸಮುದಾಯಗಳಿಂದಲೇ ಅವರು ಹೆಚ್ಚಾಗಿ ಬಂದಿರುತ್ತಾರೆ. ಭಾಡಿ ಎಂಬ ಜಾತಿಯ ಮಹಿಳೆಯರು ಪಾರಂಪರಿಕವಾಗಿ ವೇಶ್ಯಾವೃತ್ತಿಯನ್ನೇ ನಡೆಸಿಕೊಂಡು ಬಂದಿದ್ದಾರೆ. ಅವರಿಗೆ ಸಾಂಸ್ಥಿಕ ಸಹಾಯ ಇಲ್ಲದಿರುವುದು, ಸಮಾಜ ಕಲ್ಯಾಣ ಕಾರ್ಯಕ್ರಮಗಳು ಇಲ್ಲದಿರುವುದೂ ಇದಕ್ಕೆಲ್ಲ ಒಂದು ಕಾರಣವಾಗಿದೆ.

ಒಂದು ಅಂದಾಜಿನಂತೆ ಎರಡು ಲಕ್ಷ ನೇಪಾಳಿ ಹುಡುಗಿಯರು ಭಾರತದ ವೇಶ್ಯಾಗೃಹಗಳಿಗೆ ಮಾರಾಟವಾಗಿದ್ದಾರೆ. ಪ್ರತೀ ವರ್ಷ 7,000 ನೇಪಾಳಿ ಹುಡುಗಿಯರನ್ನು ಭಾರತದೊಳಗೆ ಕಳ್ಳಸಾಗಣೆ ಮಾಡಲಾಗುತ್ತದೆ. ಅವರಲ್ಲಿ ಹೆಚ್ಚಿನವರು 11 ವರ್ಷದ ಒಳಗಿನವರು. 'ಹಿಂದೂ' ದೇಶವಾಗಹೊರಟ ಸ್ವತಂತ್ರ ಭಾರತ, ಜಗತ್ತಿನ ಏಕೈಕ 'ಹಿಂದೂ’ ದೇಶ ನೇಪಾಳದ ಬಡ ಕುವರಿಯರನ್ನು ನಡೆಸಿಕೊಳ್ಳುತ್ತಿರುವ ಪರಿ ಇದು.

Image
tulasa thapa 3
ಮಾನವ ಕಳ್ಳಸಾಗಾಣಿಕೆಯ ಜಾಲದಿಂದ ಪಾರಾದ ನೇಪಾಳಿ ಮಹಿಳೆಯರ ಪುನರ್ವಸತಿ ಕೇಂದ್ರದಲ್ಲಿನ ನೆಮ್ಮದಿಯ ದೃಶ್ಯ

ಇದು ಒಬ್ಬ ತುಳಸಾಳ ಕತೆಯಲ್ಲ. ಸ್ವತಂತ್ರ ಭಾರತದಲ್ಲಿ 18 ವರ್ಷದೊಳಗಿನ 12 ಲಕ್ಷ ಬಾಲವೇಶ್ಯೆಯರಿದ್ದಾರೆ. ಪ್ರತಿ ದಿನ 40 ಅಪ್ರಾಪ್ತ ಹುಡುಗಿಯರನ್ನು ಅವರಿಚ್ಚೆಗೆ ವಿರುದ್ಧವಾಗಿ ಈ ದಂಧೆಗೆ ನೂಕುತ್ತಾರೆ. ಲೋಕವೇ ಸುಖನಿದ್ರೆಯಲ್ಲಿರುವಾಗ ಊರು-ಮನೆ ತೊರೆದುಬಂದ ಎಳೆಬಾಲೆಯರು ರಸ್ತೆ ಪಕ್ಕದಲ್ಲಿ ನಿಂತು ಗಿರಾಕಿಗಳಿಗೆ ಕಾಯುತ್ತಾರೆ, ತಮ್ಮ ದೇಹವೊಪ್ಪಿಸಿಕೊಳ್ಳುತ್ತಾರೆ. ಪ್ರತಿದಿನ ನಿಗದಿಪಡಿಸಿದ ಸಂಖ್ಯೆಯ ಗಂಡಸರೊಟ್ಟಿಗೆ ಸಮಯ ಕಳೆಯಲೇಬೇಕು. ಇಲ್ಲದಿದ್ದರೆ ಮರುದಿನ ಆ ಕಮ್ಮಿಯನ್ನು ತುಂಬಿಕೊಡಬೇಕು!

ಲೈಂಗಿಕ ಕಾರ್ಯಕರ್ತೆ/ಕರ್ತರಾಗುವುದನ್ನು ವೃತ್ತಿಯೆಂದು ಪರಿಗಣಿಸಬಹುದೇ ಇಲ್ಲವೇ ಎನ್ನುವುದು ಹಲವು ಆಯಾಮಗಳ ಉತ್ತರಗಳನ್ನೊಳಗೊಂಡ ಪ್ರಶ್ನೆ. ಬಾಲ್ಯ ಮತ್ತು ಬದುಕು ಎರಡೂ ನಾಶವಾದ ತುಳಸಾಳಂತಹ ಹುಡುಗಿಯರ ಕಥನಗಳನ್ನು ನೋಡುವಾಗ, ವೇಶ್ಯಾವೃತ್ತಿಯನ್ನು 'ವೃತ್ತಿ'ಯಾಗಿ ಪರಿಗಣಿಸುವುದರ ಅಪಾಯ ಗೋಚರವಾಗುತ್ತದೆ.

ನಮ್ಮ ಸ್ವಾತಂತ್ರ್ಯಕ್ಕೆ ಬೆಲೆ ಬರುವುದು ಅದನ್ನು ಹಂಚಿದಾಗ ಮಾತ್ರ. ಭಾರತ ಮತ್ತು ಭಾರತೀಯರಾದ ನಾವು ನಮ್ಮ ಸ್ವಾತಂತ್ರ್ಯವನ್ನು ಹಂಚಿಕೊಳ್ಳಬೇಕು. ಭಾರತವು ತನ್ನ ಮತ್ತು ನೆರೆಯ ದೇಶದ ಅಮಾಯಕ ಹೆಣ್ಣುಗಳಿಗೆ ಅಸ್ವತಂತ್ರ ಹೇರುವ ನಾಡೇ ಆಗಿ ಉಳಿದರೆ, ನಮ್ಮ ಸ್ವಾತಂತ್ರ್ಯದ ವ್ಯಾಪ್ತಿ ಕುಬ್ಜವೆನಿಸುತ್ತದೆ, ಸಂಭ್ರಮ ಮೊಟಕುಗೊಳ್ಳುತ್ತದೆ.

ಅಲ್ಲವೇ?

ಮುಖ್ಯ ಚಿತ್ರ - ಸಾಂದರ್ಭಿಕ
ನಿಮಗೆ ಏನು ಅನ್ನಿಸ್ತು?
8 ವೋಟ್