'ಎಲ್ಲರ ದೇಹ ನಿನ್ನ ಆಸ್ತಿ-ಜಮೀನು ಅಲ್ಲ' ಅಂತ ಕೂಗಬೇಕೆನಿಸಿತ್ತು...

alekon pictures

ನಾನು ಟ್ರಾನ್ಸ್‌ಮ್ಯಾನ್ ಅಂತ ಗುರುತಿಸಲು ಶುರುಮಾಡಿದಾಗ ನನಗೂ ಆರೋಪ ಬಂತು. ಒಂದು ಗಂಡಸಿಗೂ, ಒಂದು ಟ್ರಾನ್ಸ್‌ಮ್ಯಾನ್‌ಗೂ ವ್ಯತ್ಯಾಸ ಇಲ್ಲವಾ? ಆದ್ರೂ, ನಾನು ಶೋಶಣೆಯ ಜಾತಿಯಿಂದ ಬಂದಿರುವ ಕಾರಣಕ್ಕೆ, ನನಗಿರುವ ಪ್ರಿವಿಲೇಜಸ್‌ಗೆ, ನಾನು ಈ ಆಪಾದನೆಯನ್ನು ಇಂದಿಗೂ ನನ್ನ ಯೋನಿಯಲ್ಲಿ ತೆಗೆದುಕೊಂಡು ನರಳಾಡುತ್ತಿದ್ದೇನೆ

ಅಂತಹ ಒಂದು ಮನಸ್ಸಿನ ಕರಾಳ ಯೋಚನೆಗಳ ಬಗ್ಗೆ ನನಗೆ ತುಂಬಾ ಹೇಸಿಗೆ ಅನಿಸುತ್ತದೆ. ಅಂದ್ರೆ, ಟು ತಿಂಕ್ ದಿಸ್ ಬಾಡಿ ಅಂಡ್ ಇಟ್ಸ್ ಇನ್‌ಟೆಗ್ರಿಟಿ ಇಸ್‌ ಮೈ ಪ್ರಾಪರ‍್ಟಿ. ನಾನು ಸುಮಾರು ಏಳೆಂಟು ವರ‍್ಶದ ಹುಡುಗಿ. ನನಗೆ, ನಾನು ಹುಡುಗಿನ ಅತವಾ ಹುಡುಗನ ವ್ಯತ್ಯಾಸ ಅಶ್ಟು ಗೊತ್ತಿಲ್ಲ.

ಒಂದಿವ್ಸ ಮನೇಲಿ ಯಾರೂ ಇಲ್ಲ, ನನ್ನ ಇಬ್ಬರು ಸಂಬಂದಿಕರು. ಏನ್ ಇಬ್ರು ಹಾಕ್ಕೊಂಡು ಒಂದು ದೊಡ್ಡ ಹಲಸಿನ ಹಣ್ಣನ್ನು ಬಿಚ್ತಾ ಇದ್ರು... ಬಿಚ್ತಾ ಅಲ್ಲ ಬಗೀತಾ ಇದ್ರು. ನಾನು ಅಲ್ಲೇ ಓಡಾಡ್ಕೊಂಡು ಸಂಗೀತ ಪ್ರಾಕ್ಟೀಸ್ ಮಾಡ್ತಾ ಇದ್ದೆ. ನನ್ನ ಕರೆದು ಇಬ್ರೂ ತುಂಬಾ ಮುಟ್ಟಿ-ಮುಟ್ಟಿ ಮಾತಾಡುವಾಗ್ಲೇ ಏನೋ ಸರೀಗಿಲ್ಲ ಅನ್ಸಕ್ಕೆ ಶುರುವಾಯಿತು.

ಇಬ್ರೂ ಬ್ರಾಮಣರ ತೆಲುಗುವಿನಲ್ಲಿ ಕೆಟ್ಟ-ಕೆಟ್ಟದಾಗಿ ಮಾತಾಡ್ತ ನನ್ನ... ನನ್ನ ದೇಹವನ್ನ ಚಿದ್ರಗೊಳಿಸಿ, ಆಮೇಲೆ ನನಗೆ ಬೇಡ ಎಂದ್ರೂ ಸ್ನಾನ ಮಾಡ್ಸಿಬಿಟ್ರು. ಅವರು ಸ್ನಾನ ಮಾಡ್ಸೊ ಹೊತ್ಗೆ ಅಮ್ಮ ಮತ್ತೆ ಬೇರೆಯವರು ಬಂದ್ರು. ಆಗ ಅವರಿಗೆ ಸುಲಭ ಹೇಳಕ್ಕೆ, “ನಾವು ಹಲ್ಸಿನ ಹಣ್ಣು ಬಿಚ್ತಾ ಇದ್ವಿ, ಅವಳು ಮೈಗೆಲ್ಲಾ ಮಾಡ್ಕೊಂಡ್ಲು, ಅದಕ್ಕೆ ಸ್ನಾನ ಮಾಡ್ಸಿದ್ವು.'' 

ಅದೇನೂ ಅನುಮಾನನೇ ತರಲಿಲ್ಲ. ಏಕೆಂದರೆ, ಒಬ್ರು ನಾನು ಮಗುವಾಗಿದ್ದಾಗಿನಿಂದಲೂ ನನ್ನ ನೋಡ್ಕೊಂಡಿದ್ರು. ಆ ದಿವ್ಸ, ಆ ಇಬ್ರೂ (ಈಗ ಇಬ್ರೂ ಇಲ್ಲ) ಮತ್ತೆ ಹಲಸಿನ ಹಣ್ಣು ನನಗೆ ವಾಂತಿ ಬರಿಸುತ್ತೆ. ನಾನು ವರ‍್ಶಗಳ ನಂತರ ಅಮ್ಮನಿಗೆ ಹೇಳಿದೆ. ಅಮ್ಮ ಅತ್ಬಿಟ್ರು. "ಚೆ! ನನಗೂ ಅಶ್ಟೆಲ್ಲಾ ಕಹೀ ಅನುಬವ ಇದ್ರೂ, ನಿನ್ನ ಕಾಯ್ಲಿಲ್ವಲ್ಲ, ನಿನಗೆ ಹೇಳ್ಳಿಲ್ವಲ್ಲ..." ಅಂತ ಅತ್ರು. 

Image
ಸಾಂದರ್ಭಿಕ ಚಿತ್ರ

ನಮ್ ಅಮ್ಮನ ಕಡೆ ಕುಟುಂಬದವರಿಗೆ ಅವರ ತಾತನ ಬಗ್ಗೆ ಮಾತಾಡೋದು ತುಂಬಾ ಗರ‍್ವದ ವಿಶಯ. ಏನು ಗರ‍್ವದ ಮಾತು? ನಮ್ ತಾತ ಹೇಗೆ ಹಳ್ಳಿಲೆಲ್ಲಾ ಮೊದಲನೇ ರೈತ ಗ್ರಾಜುಯೆಟ್ಟು ಅಂತ, ಹೇಗೆ ಆತ ಇಂಗ್ಲೀಶ್ನಲ್ಲಿ ಕೋರ‍್ಟ್ ಪೆಟಿಶನ್ ಬರೀತಿದ್ದ ಅಂತ. ಮತ್ತೆ ಅಶ್ಟೇ ಗರ‍್ವದಿಂದ ಮನೆ ಮಹಿಳೆಯರು ಹೇಳ್ತಿದ್ರು, "ತಾತ ರಸಿಕ, ಅವನಿಗೆ ಟೋಟಲ್ 24 ಜನ ಮಕ್ಳು."

ಅವ್ರು ಹೇಳೋದು, ಅವನಿಗೆ ತನ್ನ ಹೆಂಡ್ತೀರ ಜೊತೆ ಮಗು ಆದಾಗ್ಲೆಲ್ಲಾ, ಒಂದೊಂದು ಮಗು ಊರ ಶೋಶಿತ ಜಾತಿ ಮಹಿಳೆಯರನ್ನ ಬಲಾತ್ಕಾರ ಮಾಡಿ ಆಗ್ತಿತ್ತು ಅಂತ. ಇದನ್ನ ಕೇಳಿಸಿಕೊಂಡಾಗ ನನ್ ಕಸಿನ್ಸ್ ನಕ್ಕು ಸುಮ್ಮನಾಗೋರು. ನನಗೆ ಮೊದಲನೆ ಬಾರಿ ಇದನ್ನ ಕೇಳಿದಾಗ, ಸುತ್ತಿಗೆ ತಗೊಂಡು ಆ ಸತ್ತ ತಾತನ ತಲೆಗೆ ಬಡಿದು-ಬಡಿದು ಸತ್ತ ಮೇಲೂ, ಬಡಿದು-ಬಡಿದು, "ಎಲ್ಲರ ದೇಹ ನಿನ್ನ ಆಸ್ತಿ-ಜಮೀನು ಅಲ್ಲ,” ಅಂತ ಕೂಗಬೇಕನಿಸಿತು. ಆ ತಾತನ್ನ ಸಾಯಿಸೋ ಕನಸು, ನನಗೆ ಇವತ್ತಿನವರೆಗೂ ಹಲವಾರು ಬಾರಿ ಮರುಕಳಿಸಿ ಬರುತ್ತೆ. 

ಮನಸ್ಸಿನಲ್ಲಿ ಯಾವಾಗಲೂ ಯೋಚನೆ ಮಾಡ್ತಾ ಇದ್ದೀನಿ, ಈ ಶೋಶಣೆ ಮಾಡುವ ಜಾತಿ ಗಂಡಸರಿಗೆ ಎಲ್ಲಿಂದ ಬರುತ್ತೆ. ಈ ಅನಿಸಿಕೆ, ಅಂದರೆ - “ನಾನು ಏನರ ಮೇಲಾದ್ರೂ ಎಲ್ಲಾದ್ರೂ, ಯಾವಾಗಲಾದ್ರೂ, ಕೈ, ಮೈಯಿ ಮತ್ತೊಂದು ಎಲ್ಲ ಹಾಕಕ್ಕೆ ಅದಿಕಾರ ಇದೆ.'' ಅಫ್ ಕೋರ‍್ಸ್ ನಾನು ಗರ‍್ಬಕೋಶ, ಅದರ ಮೇಲೆ ಹಕ್ಕು ಈ ತರದ ಬಕ್ವಾಸ್ ನನಗೆ ಯವತ್ತೋ ಸುಳ್ಳು ಅನಿಸಿದೆ.

ಸುಮಾರು 2002 ಅನ್ಸುತ್ತೆ... ನಾನು ಆಗ ನಾನು ಲೆಸ್ಬಿಯನ್ ಅಂತ ಸ್ವಲ್ಪ ದೈರ‍್ಯದಿಂದ ಹೇಳಲು ಶುರುಮಾಡಿದ್ದೆ. ಆಗ ಒಂದಿವ್ಸ ನಾವು 'ನರ‍್ಮದಾ ಸಾಲಿಡಾರಿಟಿ ಫೋರಮ್' ಮೂಲಕ ಒಂದು ಪತ್ರಿಕಾಗೋಶ್ಟಿ ಮಾಡಲು ಬರೀತಾ ಇದ್ವಿ. ಕ್ಲಿಫ್‌ಟನ್ ಕಡೆಗೆ ಎಲ್ಲರನ್ನು ಕರೆದುಕೊಂಡು ಹೋಗಿ ದೀವರ‍್ಸ್ ಬಾರಿನಲ್ಲಿ ಕುಡಿಯಲು ಕೂತಿದ್ದಾಗ, ನನ್ನ ಪಕ್ಕ ಕೂತ ಒಬ್ಬ ಆಕ್ಟಿವಿಸ್ಟು, ಕ್ರೈನಲ್ಲಿ ಕೆಲಸ ಮಾಡುವವನು. ಹಾಗೇ ನನ್ನೆರಡು ಕಾಲುಗಳ ಮದ್ಯೆ ಕೈ ಹಾಕಲು ಶುರು ಮಾಡಿದ. ಮೊದಲ ಬಾರಿಗೆ ನಾನು ಶಾಕ್ ಆದೆ. ಕೈ ಮೇಲೆ ಹೊಡೆದು, "ಸ್ಟಾಪ್..." ಅಂತ ಹೇಳಿದೆ. "ಸಾರಿ...ಸಾರಿ..." ಅಂತ ಹೇಳಿ ಸುಮ್ಮನಾದ. ಕುಡಿದಿದ್ದ ಅನ್ನೋ ಡಿಸ್‌ಕೌಂಟ್ ಬೇರೆ!

ಈ ಲೇಖನ ಓದಿದ್ದೀರಾ?: ಎಲ್ಲರನ್ನೂ ಸುಡುತ್ತಿರುವ ಸಾವು ನನ್ನನ್ನಾದರೂ ಸುಡದಿರಲಿ

ಮೊದಲಿಗೆ ಯಾರೂ ಗಮನಿಸಲಿಲ್ಲ. ಅವನು ಸ್ವಲ್ಪ ಹೊತ್ತಿನ ನಂತರ ಮತ್ತೆ ಕೈ ಹಾಕತೊಡಗಿದ. ಈ ಬಾರಿ ಬಲವಾದ ಹಿಡಿತ. ನಾನು ರಪ್ ಅಂತ ಬಾರಿಸಿ ಕ್ಲಿಫ್‌ಟನ್ ಪಕ್ಕ ಹೋಗಿ ಕೂತೆ. ಎಲ್ಲರೂ ಶಾಕ್ ಆದಾಗ, ಅವನು ತುಂಬಾ ಕುಡಿದವನ ತರ ತಲೆ ಸ್ತಿರವಿಲ್ಲದೆ ಕೂತ. ಕ್ಲಿಫ್‌ಟನ್ ಅವನ್ನ ಮನೆಗೆ ಕಳಿಸಿದ. ಅವನು ಆಮೇಲೆ ಬಂದು ಸಾರಿ ಕೇಳಿದ. ಅದು ಬೇರೆ ಮಾತು. ಅವನೂ ಬ್ರಾಮಣ ಅತವಾ ಶೋಶಣೆ ಮಾಡುವ ಜಾತಿಯವನು.

ನನ್ನ ಪ್ರಶ್ನೆ ಇನ್ನೂ ಅದೇ... ಕೈಯಿ, ಕಾಲು, ದೇಹ ಮತ್ತೊಂದು ಹಾಕಲು ಅಶ್ಟು ಸುಲಭ ಹೇಗೆ? ನನಗನಿಸುವ, ನಾನು ನೋಡಿರುವ ಬ್ರಾಮಣ್ಯ, ಅದಿಕಾರ ಗಂಡುದೇಹಗಳಿಗೆ ಕೊಡುವ ಸ್ವೇಚ್ಚೆಯ ಹಕ್ಕು ಅಂತ ಹೇಳಕ್ಕೆ ಆಗಲ್ಲ. ಏಕೆಂದರೆ, ಹಕ್ಕು ಒಳ್ಳೆಯ ವಾರ‍್ತೆ. ಸ್ವೇಚ್ಚೆ ದುರಾದಿಕಾರ. ಇದಕ್ಕೆ ಶಾಸ್ತ್ರಗಳು, ಮಂತ್ರಗಳು ಕಡೆಗೆ ದೇವರನಾಮಗಳೂ ಸೇರಿ ಈ ದುರಾದಿಕಾರವನ್ನು ಶೋಶಣೆ ಮಾಡುವ ಜಾತಿಯ ಗಂಡಸರಿಗೆ ಬೆಂಬಲ ಕೊಡ್ತವೆ.

ಇದಾದ ನಂತರವೂ ನಾನು ಲೆಸ್ಬಿಯನ್, ನಾನು ಕ್ವಿಯರ್, ನಾನು ಟ್ರಾನ್ಸ್ ಅನ್ನೋ ಕಾರಣಕ್ಕೆ ಹಲವಾರು ಬಾರಿ ಲೈಂಗಿಕ ಚಿದ್ರತೆಗೆ ಒಳಗಾಗಿದ್ದೇನೆ. ಸರ‍್ಜರಿಗೆ ಹೋಗುವ ಮೂರು ತಿಂಗಳ ಮುಂದೆ ಒಂದು ದಿವಸ, ನನ್ನ ಮನೆಗೆ ಮೂರು ಜನ ಗಂಡಸರು ಬಂದಿದ್ದರು. ನಾವು ಅಶ್ಟೂ ಜನ ಕುಡಿದಿದ್ದೆವು. ಮಾರನೆ ದಿನ ಬೆಳಗ್ಗೆ ಏಳುವಾಗ ಗೊತ್ತಾಗಿತ್ತು ಅತ್ಯಾಚಾರ ನಡೆದಿತ್ತೆಂದು. ಯಾರು ಎಂದು ಹೇಳಲು ನನಗೆ ಪ್ರಜ್ನೆ ಇರಲಿಲ್ಲ!

ಇಲ್ಲಿ ಸ್ವಲ್ಪ ವ್ಯತ್ಯಾಸವೂ ಇದೆ. ಶೋಶಣೆ ಮಾಡುವ ಜಾತಿಯಲ್ಲಿ ಹೆಂಗಸರಿಗೆ, ಅದೂ ಮೇಲ್ವರ್ಗದ ಹೆಂಗಸರಿಗೆ ಕೆಲವೊಮ್ಮೆ ಬೇರೆ ತರದ ದೇಹಗಳು. ಅವರಿಗೂ ಅಬ್ಯೂಸಿವ್ ಆಗಿ ಎಕ್ಸ್‌ಪ್ಲೋರ್ ಮಾಡುವ ದುರಾದಿಕಾರ ಕೊಡುತ್ತೆ. ಪುಣೆಯಲ್ಲಿ ನಾನು, ಸುನಿಲ ಹಾಗೂ ನಮ್ ಸ್ನೇಹಿತೆಯೊಬ್ಬಳು ಹಿಜ್ರ, ಒಂದು ಪಾರ‍್ಟಿಗೆ ಹೋಗಿದ್ವಿ. ಆಗಲೂ ಕುಡಿದಿರುವ ಅಮಲು ಒಂದು ಎಕ್ಸ್‌ಕ್ಯೂಸ್‌ ಆಯ್ತು - ಆ ಮಹಿಳೆಗೆ ತನ್ನ ಕೈ ಹಾಕಿ ಆ ಹಿಜ್ರಳ ಪ್ರೈವೇಟ್‌ ಪಾರ್‌ಟ್ಸ್‌ ಚೆಕ್‌ ಮಾಡುವುದಕ್ಕೆ. ಇದನ್ನ ನಾವು ಹೇಗೆ ನೋಡಬಹುದು? ಅಂದ್ರೆ, ಹೆಂಗಸರು ಸೆಕ್ಶುವಲ್ ಅಬ್ಯೂಸ್ (ಲೈಂಗಿಕ ಕಿರುಕುಳ) ಮಾಡಲು ಸಾದ್ಯವಿಲ್ಲವೇ? ಯಾವ ಹೆಂಗಸು ಅಂತ ಮ್ಯಾಟರ್ ಆಗುತ್ತೆ. 

Image
camila quintero franco photo
ಸಾಂದರ್ಭಿಕ ಚಿತ್ರ

ಇತ್ತೀಚೆಗೆ ನಾನು ಟ್ರಾನ್ಸ್‌ಮ್ಯಾನ್ ಅಂತ ಗುರುತಿಸಲು ಶುರುಮಾಡಿದ ಮೇಲೆ ನನಗೂ ಬಂತು ಆರೋಪ. ನಾನು ಲೈಂಗಿಕ ಕಿರುಕುಳ ಕೊಟ್ಟೆ ಅಂತ. ಹಾಗೆ ಹೇಳಿದ ಮಹಿಳೆ, ನಾನು ಕೊಟ್ಟ ಲೈಂಗಿಕ ಕಿರುಕುಳ ಏನು ಎಂದು ಹೇಳಿದ್ದು ಕೇಳಿ, ಒಂದು ವರ‍್ಶ ಅತ್ತಿದ್ದೇನೆ. ಆ ಹೆಂಗಸು ನನ್ನ ಮನೆಯಿಂದ ಹೋಗುವಾಗ ಟ್ಯಾಕ್ಸಿಯಲ್ಲಿ ಕೂರುವ ಮುನ್ನ, ನಾನು ಬೈ ಹೇಳಿ ಹಗ್ ಮಾಡಲು ಹೋದೆ, ಅವಳು ನನ್ನ ದೂಡಿದಳು. ಆಗ ನಾನು ಕುಡಿದಿದ್ದೆ.

ನನ್ನ ತಾಯಿ ತೀರಿಕೊಂಡ ಮೇಲೆ ನಾನು ನಿದ್ದೆ ಮಾತ್ರೆ ತೆಗೆದುಕೊಂಡು ಕುಡೀತಿದ್ದೆ. ಹೀಗಾಗಿ ಅವಳು ಮೂರು ದಿನದ ಹಿಂದೆ, ನಾನು ಮಲಗಲು ಹೋದಾಗ ನನ್ನ ಕಿಸ್ ಮಾಡಿದಳು. ಆಗ ಅವಳು ನನ್ನ ಕನ್‌ಸೆಂಟ್ ತೆಗೆದುಕೊಂಡಿಲ್ಲ. ಏಕೆಂದರೆ, ನನಗೆ ಕನ್‌ಸೆಂಟ್ ಕೊಡುವ ಪರಿಸ್ತಿತಿಯಲ್ಲಿರಲಿಲ್ಲ. ಏಕೆಂದರೆ, ನಾನು ಕುಡಿದಿರುವುದು ಮಾತ್ರವಲ್ಲ, ನಿದ್ದೆ ಮಾತ್ರೆಯೂ ತೆಗೆದುಕೊಂಡಿದ್ದೆ. ಹೀಗೆ ನಮ್ಮ ಕೆಲವು ಸ್ನೇಹಿತರು ನನ್ನ ಸಫಾಯಿಯೂ ಕೇಳದೆ ನನ್ನ ದೂರವಿಟ್ಟರು.

ಒಂದು ಗಂಡಸಿಗೂ, ಒಂದು ಟ್ರಾನ್ಸ್‌ಮ್ಯಾನ್‌ಗೂ ವ್ಯತ್ಯಾಸ ಇಲ್ಲವಾ? ಆದ್ರೂ, ನಾನು ಶೋಶಣೆಯ ಜಾತಿಯಿಂದ ಬಂದಿರುವ ಕಾರಣಕ್ಕೆ, ನನಗಿರುವ ಪ್ರಿವಿಲೇಜಸ್‌ಗೆ, ನಾನು ಈ ಆಪಾದನೆಯನ್ನು ಇಂದಿಗೂ ನನ್ನ ಯೋನಿಯಲ್ಲಿ ತೆಗೆದುಕೊಂಡು ನರಳಾಡುತ್ತಿದ್ದೇನೆ. 

ನಾನು ಹೆಂಗಸಿನ ಜೀವನದಲ್ಲಿದ್ದು ಅನುಬವಿಸಿರುವ ಲೈಂಗಿಕ ಹಲ್ಲೆ, ಕಿರುಕುಳ, ಅಬ್ಯೂಸ್, ಎಲ್ಲವನ್ನೂ ತೆಗೆದುಕೊಂಡೆ. ನಾನು ಟ್ರಾನ್ಸ್‌ಮ್ಯಾನ್ ಅಂತ ಗುರುತಿಸಿಕೊಂಡಾಗ, ನಾನೇ ಆರೋಪಿ ಆಗುವುದು ಕೂಡ ಒಂದು ಅತೀ ಖಿನ್ನತೆಯ ಮಾತು. ನನ್ನಲ್ಲಿ ಈಗ ಉತ್ತರವಿಲ್ಲ. ಆದರೆ ಒಂದು ಖಚಿತ, ನಾನು ಅಬ್ಯೂಸರ್ ಆಗಲು ಸಾದ್ಯವಾ - ಅದೂ ನಾನು ಟ್ರಾನ್ಸ್‌ಮ್ಯಾನ್ ಎಂಬ ಕಾರಣಕ್ಕೆ?

'ಎಲ್ಲರ ಕನ್ನಡ' ಎಂದು ಹೇಳಲಾಗುವ, ಮಹಾಪ್ರಾಣ ಬಳಕೆ ಇಲ್ಲದ ಬರಹ ರೂಪವಿದು
ನಿಮಗೆ ಏನು ಅನ್ನಿಸ್ತು?
3 ವೋಟ್