ಜತೆಗಿರುವನೇ ಚಂದಿರ? | ಮಂಡ್ಯ ಜಿಲ್ಲೆಯ ಸಂತೆ ಮೊಗನಳ್ಳಿಯಲ್ಲಿ ಕುಡಿಯೊಡೆದ ಪ್ರೇಮಕತೆ

Jasmine

ನನಗೆ ಬುದ್ಧಿ ಬಂದಾಗಿನಿಂದಲೂ ಅಮ್ಮಿ ತನ್ನ ಬದುಕಿನ ಒಂದೊಂದೇ ತುಣುಕು ಹೇಳುತ್ತಲೇ ಬಂದಿದ್ದಾಳೆ‌. ನನ್ನಮ್ಮಿಯ ಬದುಕು ನನಗೆ ಇಡಿಯಾಗಿ ದಕ್ಕಿರುವುದು ಇಂತಹ ಸಣ್ಣ-ಸಣ್ಣ ತುಣುಕುಗಳು ಸೇರಿಯೇ. ಅಲ್ಲದೆ, ಅಮ್ಮಿಗೆ ತನ್ನ ಹಿಂದಿನ ಬದುಕನ್ನು ನೆನೆಯುವುದೆಂದರೆ ಎಲ್ಲಿಲ್ಲದ ಆನಂದ. ಒಮ್ಮೆ ಹೀಗೆಯೇ ಲೋಕಾಭಿರಾಮವಾಗಿ ಮಾತಿಗೆ ಕುಳಿತಾಗ...

ನಾನು ಚಿಕ್ಕವಳಿದ್ದಾಗಿನಿಂದಲೂ ನನ್ನ ಅಬ್ಬ-ಅಮ್ಮಿಯದ್ದು ಪ್ರೇಮ ವಿವಾಹ ಎಂಬುದು ಅಸ್ಪಷ್ಟವಾಗಿ ಗೊತ್ತಿತ್ತು. ಆಗ ಅಂತರ್ಜಾತಿ, ಅಂತರ್ಧರ್ಮದಂತಹ ಕ್ಲಿಷ್ಟ ಪದಗಳ ಗೋಜಲುಗಳು ಅರ್ಥವಾಗದ ವಯಸ್ಸು ನನ್ನದು. ಹಾಗಾಗಿ, ಆ ವಯಸ್ಸಿಗೆ ನನಗದು ಕೇವಲ ಕುತೂಹಲವನ್ನೂ ಕೆರಳಿಸದ ವಿಷಯವಾಗಿತ್ತು. ಆದರೆ, ಅಮ್ಮಿ ಮಾತ್ರ ತನಗೆ ನೆನಪಾದಾಗಲೆಲ್ಲ ನನ್ನ ವಯಸ್ಸು ಅನುಭವಗಳನ್ನೂ ಲೆಕ್ಕಿಸದೆ, ನನ್ನ ಮುಂದೆ ಸ್ವಲ್ಪ-ಸ್ವಲ್ಪವೇ ತನ್ನ ಪ್ರೇಮಕತೆಯ ವಿವರಗಳನ್ನು ಅನಾವರಣಗೊಳಿಸುತ್ತಿದ್ದಳು. ನಾನು ನನ್ನ ಅಮ್ಮಿಯ ಕಣ್ಣ ಮುಂದೆ ಹಾಗೆ ಬೆಳೆಯುತ್ತ ಹೋದಂತೆ, ತನ್ನ ಗೆಳತಿಯಷ್ಟೇ ಆಪ್ತವಾಗಿ ತುಂಬು ಸಲುಗೆಯಿಂದ ತನ್ನೆಲ್ಲ ಬದುಕಿನ ವಿವರಗಳನ್ನು ನನ್ನೊಡನೆ ಹಂಚಿಕೊಳ್ಳುತ್ತಿದ್ದಳು. ಹೀಗೆ, ಅಮ್ಮಿಯ ಅಂತರಂಗದೊಳಗಿನ ಎಷ್ಟೋ ಸಂಗತಿಗಳು ನನ್ನೊಳಗೂ ಸಮ್ಮಿಳಿತಗೊಂಡಿವೆ.

ನನಗೆ ಬುದ್ಧಿ ಬಂದಾಗಿನಿಂದಲೂ ಅಮ್ಮಿ ತನ್ನ ಬದುಕಿನ ಒಂದೊಂದೇ ತುಣುಕು ಹೇಳುತ್ತಲೇ ಬಂದಿದ್ದಾಳೆ‌. ನನ್ನಮ್ಮಿಯ ಬದುಕು ನನಗೆ ಇಡಿಯಾಗಿ ದಕ್ಕಿರುವುದು ಇಂತಹ ಸಣ್ಣ-ಸಣ್ಣ ತುಣುಕುಗಳು ಸೇರಿಯೇ. ಅಲ್ಲದೆ, ಅಮ್ಮಿಗೆ ತನ್ನ ಹಿಂದಿನ ಬದುಕನ್ನು ನೆನೆಯುವುದೆಂದರೆ ಎಲ್ಲಿಲ್ಲದ ಆನಂದ. ಒಮ್ಮೆ ಅಮ್ಮಿಯೊಡನೆ ಹೀಗೆಯೇ ಲೋಕಾಭಿರಾಮವಾಗಿ ಮಾತಿಗೆ ಕುಳಿತಾಗ, ನನಗಿನ್ನೂ ಸ್ಪಷ್ಟವಾಗದೆ ಉಳಿದಿದ್ದ, ಅಬ್ಬ-ಅಮ್ಮಿಯ ಕುಟುಂಬದ ಮತ್ತು ಅವರ ಪ್ರೇಮದ ವಿವರಗಳನ್ನು ಕೇಳಿದೆ. ಆಗ ಅಮ್ಮಿ ಬಹಳ ಸಂತೋಷದಿಂದಲೇ, "ಅಯ್ಯೋ... ಎಲ್ಲ ಮರ್ತೊಗದೆ ಕನವ್ವಾ..." ಎನ್ನುತ್ತಲೇ ಮಾತಿಗೆ ತೊಡಗಿದಳು.

Image
ravi sharma photo

"ನಮ್ಮೂರು ಮಂಡ್ಯ ಜಿಲ್ಲೆ... ಸಂತೆ ಮೊಗನಳ್ಳಿ ಕನವ್ವಾ. ನಮ್ಮಪ್ಪುನೆಸ್ರು ಕಾಳಪ್ಪ, ನಮ್ಮವ್ವ ಈರಮ್ಮ. ನಮ್ಮಪ್ಪ-ಅವ್ವಂಗೆ ಯೋಳ್ಜನ ಮಕ್ಳು. ನಾನು ನಾಕ್ನೇವ್ಳು. ನಂಗೆ ಒಬ್ಬ ಅಣ್ಣ, ಇಬ್ರು ಅಕ್ದಿರು, ಇಬ್ರು ತಂಗೇರು, ಒಬ್ಬ ತಮ್ಮ ಇದ್ದ. ನಮ್ದು ತುಂಬುದ್ ಕುಟುಂಬ್ವೇಯಾ ಕನವ್ವಾ. ನಂಗೆ ಹದ್ನಾರೋ ಹದ್ನೇಳೋ ವರ್ಸ ಇದ್ದಾಗ, ಇಬ್ರು ಅಕ್ದಿರ್ನೂ ವಳ್ಳೇ ಕಡೀಕೆ ಕೊಟ್ಟು ಮದ್ವೆ ಮಾಡುದ್ರು. ತಂಗೇರಿನ್ನೂ ಚಿಕ್ಕವ್ರಾಗಿದ್ರು. ಅದುಕ್ಕೆ ನಾನು ಮನೇಲಿ ಅಡ್ಗೆ ಮಾಡ್ಕೊಂಡು, ತಂಗೇರನ್ನ ನೋಡ್ಕೊಂಡು ಮನೇಲೆ ಇದ್ದೆ. ಆಗ್ಲೇ ನಾನು ಮೈನೆರ್ದುದ್ದು. ಆಗ ನಂಗೆ ವರಗೊಳು ಬರೋಕೆ ಸುರು ಆಗಿದ್ದೊ. ನಮ್ಮಪ್ಪ ಮಾತ್ರ ಯಾವ್ ವರ್ಗೊಳ್ನೂ ಒಪ್ತಾ ಇರ್ನಿಲ್ಲ. ನಾನು ಅಪ್ಪನಂಗೆ ಬೆಳ್ಳುಗ್ ಚನ್ನಾಗಿದ್ದೆ ಅಂತ ಅವ್ವುನ್ ಅಣ್ಣುನ್ ಮಗುಂಗೇ ನನ್ ಕೊಡ್ಬೇಕು ಅಂತ ಅಪ್ಪುನ್ ಆಸೆ. ಆಗ್ಲೇ ಅಂಗಂತ ಮಾತೂ ಆಗಿತ್ತು. ನಾವಿದ್ ಮನೆ ಚಿಕ್ದು. ಒಂದ್ನಾಕು ಕುರಿ, ಒಂದ್ನಾಕು ಆಡುಗೊಳ್ನ ಸಾಕ್ಕೊಂಡು, ನಮ್ಮಣ್ಣ ಒಂದೆಕ್ರೆ ವಲಾ- ಒಂದೆಕ್ರೆ ಗದ್ದೇಲಿ ಆರಂಭ ಮಾಡ್ಕೊಂಡಿದ್ದ. ಆಗ್ಲೇ ನಾನು ನಿಮ್ಮಪ್ಪುನ್ ನೋಡ್ದುದ್ದು..."

"ನಿಮ್ಮಪ್ಪ ಮೈಸೂರಿನ ಅಗ್ರಹಾರದಲ್ಲಿ ಬಾಡ್ಗೆಗೆ ಅಂಗ್ಡಿ ತಕ್ಕೊಂಡು, ಅವ್ರಣ್ಣನೊಂದ್ಗೆ ಸೇರ್ಕೊಂಡು ಪಾತ್ರೆ ಯಾಪಾರ ಮಾಡ್ತಿತ್ತು. ಒನ್ನೊಂದಿನ ನಿಮ್ಮಪ್ಪ ಅಂಗ್ಡಿಲೇ ಯಾಪಾರ ಮಾಡ್ತಿತ್ತಂತೆ; ಒನ್ನೊಂದಿನ ಪಾತ್ರೆಗೊಳ್ನೆಲ್ಲಾ ಸೈಕೊಲ್ ಮ್ಯಾಲೆ ಏರ್ಕೊಂಡು ಹಳ್ಳಳ್ಳಿಗೆ ಹೋಗಿ ಯಾಪಾರ ಮಾಡ್ತಿತ್ತಂತೆ. ಒಂದೊಂದ್ಸತಿ ಯಾವ್ದಾದ್ರೂ ಹಳ್ಳಿಗೋಗಿ ದೊಡ್ಡ-ದೊಡ್ಡ ಟೆಂಟ್ಗೊಳಲ್ಲಿ ಪಾತ್ರೆಗೊಳ್ನ ರಾಸಿ ಹಾಕಿ ಯಾಪಾರ ಮಾಡ್ತಿತ್ತಂತೆ. ಇಂಗೆ ಒಂದ್ಸತಿ ನಮ್ಮೂರಲ್ಲೂ ಟೆಂಟ್ ಹಾಕಿ ಯಾಪಾರ ಮಾಡಕೇ ಅಂತ ಬತ್ತು.‌ ನಮ್ಮನೆ ಮುಂದುಕ್ಕೆ ಬಂದು ಟೆಂಟ್ ಹಾಕಿತ್ತು... ಆಟೋ ತುಂಬಾ ಪಾತ್ರೆ ಸಾಮಾನು ಏರ್ಕೊಂಡು ಬಂದು ಸುರ್ಸಿ, ಟೆಂಟ್ ಹತ್ರುದಲ್ಲೇ ಒಂದು ರೂಂ ತಕ್ಕೊಂಡು ಅಲ್ಲೇ ಉಳ್ಕೊಂಡಿತ್ತು. ನಮ್ಮಪ್ಪನೂ ನಮ್ಮವ್ವನೂ, 'ಒಬ್ನೇ ಇನ್ನೇನ್ ಅಡ್ಗೆ ಮಾಡ್ಕೊಂಡಾನು' ಅಂದ್ಬುಟ್ಟು ಮನೇಲ್ ಮಾಡಿದ್ದು ಅಡ್ಗೇನೇ ನನ್ನ ಕೈಲಿ ಕೊಟ್ಟು ಕಳ್ಸವ್ರು. ಇಂಗೇ ವಸಿ ದಿನ ನಡೀತು. ಇಬ್ರು ಬೆರ್ತ್ಕೊಂಡೋ. ಹಗಲೊತ್ತಲ್ಲಿ ಮನೇವ್ರೆಲ್ಲಾ ಆಡು-ಕುರಿಗೆ ಇಲ್ಲ ವಲಾ-ಗದ್ದೆಗೆ ಅಂತ ಹೋಗ್ಬುಡವ್ರು. ಆಗ ಊರಲ್ಲಿ ಯಾರೂ ಇರ್ತಿರ್ನಿಲ್ಲ. ಇಬ್ರೂ ಒಂದಾಗಿ ಮಾತಾಡ್ಕೋತಿದ್ದೋ. ಅಪ್ಪ-ಅವ್ವಂಗೆ ವಿಷ್ಯ ಗೊತ್ತಾಗೋದು ಇಬ್ರುಗೂ ಇಷ್ಟ ಇರ್ನಿಲ್ಲ. ನಮ್ಮಿಬ್ರುನೂ ದೂರ ಮಾಡ್ಬುಡ್ತಾರೆ ಅಂತ ನಿಮ್ಮಪ್ಪ ಹೆದುರ್ತಿತ್ತು‌. ಅದ್ಕೆ ಒಂದಿನ ಇಬ್ರೂ ಕೂತ್ಕೊಂಡು ಮಾತಾಡಿ ತೀರ್ಮಾನ ಮಾಡಿ, ಮನೆ ಬುಟ್ಟು ಬಂದ್ಬುಟ್ಟೋ ಕನವ್ವಾ..."

Image
ian schneider photo

"ನಿಮ್ಮಪ್ಪ ನನ್ನ ಕರ್ಕೊಂಡು ಹೋಗೋಕೂ ಮುಂಚೇನೇ ಅಗ್ರಹಾರದಲ್ಲಿ ಒಂದು ಮನೆ ಮಾಡಿ, ಪಾತ್ರೆ ಪಗಡೇನೆಲ್ಲ ಜೋಡ್ಸಿ, ಸಂಸಾರ ಮಾಡಕ್ಕೆ ಬೇಕಾದ್ದೆಲ್ಲನ್ನೂ ಹೊಂದ್ಸಿ ನನ್ನ ಕರ್ಕೊಂಡು ಹೋಗಿತ್ತು. ನಂಗೆ ಒಂದ್ಜೊತೆ ಕಾಲ್ಚೈನು, ವಾಲೆ, ತಾಲಿ ಎಲ್ಲಾನು ತಂದು, ರಾಮನಗರದ ರಿಜಿಸ್ಟರ್ ಆಪೀಸಲ್ಲಿ ಇಬ್ರೂ ಮದ್ವೆ ಆದೊ..."

"ನಮ್ಮನೇಲಿ ನನ್ನ ಹುಡುಕ್ಬಾರ್ದ ಕಡೆಯೆಲ್ಲ ಹುಡ್ಕಿ, ಅತ್ತೂ ಕರ್ದು ಸಾಸ್ತ್ರ ಕೇಳುದ್ರಂತೆ. ಸಾಸ್ತ್ರದಲ್ಲಿ 'ಅವ್ಳುನ್ನ ಎಲ್ಲೂ ಹುಡುಕ್ಬೇಡಿ. ಅವ್ಳು ಸುಕ್ವಾಗವ್ಳೆ' ಅಂತ ಹುಟ್ತಂತೆ. ಇಂಗಾದ್ ವಸಿ ದಿನಕ್ಕೆ ನಮ್ಮಪ್ಪ ಅಡ್ಗೆ ಸೊಪ್ಪು ಕಡಿಯಕಂತ ಮರ ಹತ್ತಿ, ಮರದಲ್ಲೇ ಪಿಡ್ಸ್ ಬಂದು ಬಿದ್ದು ಸತ್ತೋಯ್ತಂತೆ. ನಮ್ಮಪ್ಪ ಅಮಾಸೆ ದಿನ ಹುಟ್ಟಿತ್ತಂತೆ. ಅದ್ಕೆ ಅಮಾಸೆ ದಿನ ಮರ ಹತ್ಬಾರ್ದು ಅಂತ ಸಾಸ್ತ್ರದಲ್ಲಿ ಹುಟ್ಟಿತ್ತಂತೆ. ಅಮಾಸೆ ದಿನವೇ ಆಡ್ಗೆ ಸೊಪ್ಪು ಕಡಿಯೋಕಂತ ಮರ ಹತ್ತಿ ಮರದಿಂದ ಬಿದ್ದು ಸತ್ತೋಗಿತ್ತು‌. ಅಪ್ಪುನ್ ಹನ್ನೊಂದಿನದ್ ತಿಥಿಗೆ ಹೇಳಕಂತ ನಮ್ಮಣ್ಣ, ನಮ್ ದೊಡ್ಡಪ್ಪುನ್ ಮಗ ಇಬ್ರೂ ನನ್ನುನ್ನ  ಹುಡುಕ್ಬಾರ್ದ ಕಡೆಯೆಲ್ಲ ಹುಡ್ಕುದ್ರಂತೆ. ಒಂದು ವಾರ ಪೂರ್ತಿ ಮೈಸೂರಿನ್ ಗಲ್ಲಿಗಲ್ಲೀನೆಲ್ಲಾ ಹುಡ್ಕುದ್ರಂತೆ‌. ಹಗಲೆಲ್ಲ ಹುಡ್ಕೋದು, ರಾತ್ರೆ ಆದ್ಮೇಲೆ ರೈಲ್ವೆ ಟೇಸನ್ಗೋಗಿ ಮನಿಕೋದು. ಇಂಗೇ ಮಾಡುದ್ರಂತೆ. ಒಂದ್ವಾರುದ್ಮ್ಯಾಲೆ ಹುಡಿಕ್ಕೊಂಡು ನಾವಿದ್ ಬೀದಿಗೇ ಬಂದ್ರು. ಬಂದವ್ರೇ... ನಮ್ ಪಕ್ಕುದ್ ಮನೇಲೇ ಕೇಳ್ತಾವ್ರೇ...! ನಾನು ಓಡೋಗಿ ಅಂಗೇ ಬಾಕ್ಲಲ್ಲಿ ನಿಂತ್ಕೊಂಡು, ಆಚೆಗೆ ಬೊಗ್ ನೋಡ್ದೆ. ಪಕ್ಕುದ್ಮನೆ ಬಾಕ್ಲಲ್ಲಿ ನಮ್ಮಣ್ಣನೂ ನಮ್ ದೊಡ್ಡಪ್ಪುನ್ ಮಗನೂ ಕಂಡ್ರು. ಅವ್ರುನ್ನ ಮಾತಾಡ್ಸಿ ವಳಿಕ್ ಕರ್ದೆ. ನಂಜೊತೆ ಚೆನ್ನಾಗೇ ಮಾತಾಡುದ್ರು..."

ಈ ಲೇಖನ ಓದಿದ್ದೀರಾ?: ಜತೆಗಿರುವನೇ ಚಂದಿರ? | ಅಣ್ಣ ಮತ್ತೆ ಕಾಣಿಸುವುದಿಲ್ಲ ಅಂತ ನಿಜಕ್ಕೂ ಅಂದುಕೊಂಡಿರಲಿಲ್ಲ

"ನಿಮ್ಮಪ್ಪನೂ ನನ್ನ ಅಂಗೇ ನೋಡ್ಕಂಡಿತ್ತು. ಬಾಕ್ಲಿಂದಾಚೆಗೆ ಕಾಲನ್ನೇ ಹಾಕುಸ್ಕೊಡ್ತಿರ್ನಿಲ್ಲ. ಅಷ್ಟು ಸುಕ್ವಾಗಿ ನೋಡ್ಕೊಂಡಿತ್ತು ನನ್ನ. ನಿಮ್ಮಪ್ಪ ಆಚೆಗೋದಾಗ ನನ್ನ ಬೇಕು-ಬ್ಯಾಡ ನೋಡ್ಕೊಳ್ಳಕೆ ಅಂತ ನಮ್ ಪಕ್ಕುದ್ ಮನೇಲಿದ್ ಒಂದು ಹುಡ್ಗಿನಾ ಬುಟ್ಟಿತ್ತು. ಆ ಹುಡ್ಗಿ ನಾನ್ ಏನ್ ಕೇಳುದ್ರು ತಂದ್ ಕೊಟ್ಕಂಡಿತ್ತು. ಆ ಹುಡ್ಗಿನೇ ಓಡ್ಬಂದು ನಿಮ್ಮುನ್ಯಾರೋ ಕೇಳ್ಕೊಂಡು ಬಂದವ್ರೆ ಅಂತ ಹೇಳಿದ್ದು. ನಮ್ ಅಣ್ಣನೂ, ನಮ್ ದೊಡ್ಡಪ್ಪುನ್ ಮಗನೂ ನನ್ನ ನೋಡ್ದವ್ರೇ, ಗೊಳೋ ಅಂತ ಅಳಕ್ ಸುರು ಮಾಡುದ್ರು. 'ಅವ್ವಾ... ಸಾವತ್ರಿ... ಇವ್ನು ಇಷ್ಟು ಸುಖವಾಗಿ ಇಟ್ಕೋತಾನೆ ಅಂತ ಗೊತ್ತಿದ್ರೆ ನಾವೇ ನಿಂತು ಮದ್ವೆ ಮಾಡ್ತಿದ್ವಲ್ಲವ್ವಾ...' ಅಂತ ಏನ್ ಅಳು ನಿಲ್ಲುಸ್ನೇವಲ್ರು. ಅವ್ರುನ್ನ ಕೂರ್ಸಿ ಕಾಪಿ ಮಾಡ್ಕೊಟ್ಕೊಂಡು ಮಾತಾಡ್ತಾ ಕೂತಿದ್ದೆ. ನಿಮ್ಮಪ್ಪ ಕೈಲಿ ಮಲ್ಗೆ ಹೂವುನ್ ಪಟ್ನಾ ಹಿಡ್ಕೊಂಡು ಮನೇಗ್ ಬತ್ತು. ಕೈಲಿ ಮಲ್ಗೆ ಹೂವುನ್ ಪಟ್ನಾ ಇಲ್ದೆ ಮನೇಗ್ ಬತ್ತಿರ್ನಿಲ್ಲ. ಸೈಕೋಲ್ ತುಂಬಾ ಮನೆಗೆ ಬೇಕಾದ್ ಸಾಮಾನ್ ಬ್ಯಾಗ್ ಏರ್ಕೊಂಡೇ ಮನೇಗೆ ಬರೋದು. ಆಗ್ ವಸಿ ದಿನ ನಿಮ್ಮಪ್ಪ ಪಾತ್ರೆ ಯಾಪಾರ ಬುಟ್ಟು ಒಂದು ತಳ್ಳ ಗಾಡಿ ಇಟ್ಕೊಂಡಿತ್ತು. ಅದ್ರಲ್ಲಿ ಕಾಪಿ, ಟೀ, ಬೋಂಡಾ, ಪರೋಟ ಯಾಪಾರ ಮಾಡ್ತಿತ್ತು. ಸಂದೆಗಂಟ ತಳ್ಳಗಾಡಿಲೀ ಯಾಪಾರ ಮಾಡದು. ಸಂದೆಮ್ಯಾಲೆ ಅಲ್ಲೇ ಒಬ್ಬ ಮಾರ್ವಾಡಿ ಅಂಗ್ಡೀಲಿ ಚಿನ್ನ-ಬೆಳ್ಳಿ ಕೆಲ್ಸುಕ್ಕೋಗದು..."

"ನಿಮ್ಮಪ್ಪ ಇವ್ರುನ್ನ ಕಂಡಿದ್ದೇ ಓಡೋಗಿ ಒಂದು ಡಜನ್ ಕೋಳಿ ಮೊಟ್ಟೆ ತತ್ತು. ನಾನ್ ಪಲ್ಯ, ಚಪಾತಿ ಮಾಡಿ ಅವ್ರಿಗೆ ಊಟಕ್ಕಿಕ್ದೆ. ರಾತ್ರೆ ನಮ್ಮನೇಲೆ ಮನಿಕೊಂಡು, ವತಾರೆ ಅಷ್ಟೊತ್ಗೆ ತಿಂಡಿ ಮಾಡ್ಕೊಂಡು ತಿಂದು, ನಿಮ್ಮಪ್ಪ ನಮ್ಮುನ್ನೆಲ್ಲಾ ಅಂಗ್ಡಿಗೆ ಕರ್ಕೊಂಡೋಗಿ, ನಮ್ಮವ್ವುಂಗೊಂದು ಸೀರೆ, ಚಿನ್ನುದ್ ವಾಲೆ, ಸ್ವೀಟು, ಎಡೆ ಪದಾರ್ಥ ಎಲ್ಲಾನು ತಕ್ಕೊಟ್ಟು, ನಂಗೂ ಬುದ್ಧಿ ಹೇಳಿ ರೈಲ್ಗತ್ತುಸ್ತು. ನಾಳೆ ತಿಥಿ ಅನ್ನಂಗೆ ಇವತ್ ರಾತ್ರೆ ಇಪ್ಪತ್ತು ಕೆ.ಜಿ ಅಕ್ಕಿ, ಅಡ್ಗೆ ಸಾಮಾನು ಎಲ್ಲಾನು ತಕ್ಕೊಂಡು ತಿಥಿ ಮನೆಗೆ ಬತ್ತು. ತಿಥಿ ಕಾರ್ಯ ಎಲ್ಲಾನು ಮುಗ್ಸಿ, ಮೂರ್ ದಿನ ಮನೇಲೇ ಇದ್ದು ವಾಪಾಸ್ ಬಂದವ್ರೇ... ಯಾಕೋ ಇನ್ ಆ ಕಡಿಕೆ ಹೋಗ್ನೇ ಇಲ್ಲ..."

Image
irina iriser photo

"ಈ ಕಡೆ ನಿಮ್ಮಪ್ಪನ್ ತಂದೆ ಮನೆಯವ್ರು 'ಅವ್ಳುನ್ನ ಕರ್ಕೊಂಡ್ಬಾ. ಮನೇಲಿಟ್ಕೊಂಡು, ಬಾಸೆ ಕಲ್ಸಿ, ನಮ್ ಜಾತಿಗೆ ಸೇರುಸ್ಕೊಳ್ಳನ' ಅಂದ್ರಂತೆ. ಅವ್ರು ಮಾತು ಇವ್ಳುಗ್ ತಿಳಿಯಾಕಿಲ್ಲ... ಇವ್ಳು ಮಾತು ಅವ್ರುಗ್ ತಿಳಿಯಾಕಿಲ್ಲ... ಅಂದ್ಬುಟ್ಟು ನಿಮ್ಮಪ್ಪ ಅವ್ರು ಮನೆಗೆ ಕರ್ಕೊಂಡು ಹೋಗಕೆ ಒಪ್ನಿಲ್ಲ. ನಾವ್ ಸುಕ್ವಾಗೇ ಇದ್ದೊ. ನಿಮ್ಮಪ್ಪ ಮನೆಗೆ ಒಂದೆರಡು ಆಡ್ಗೊಳ್ನೂ ತಂದ್ ಕಟ್ಟಿತ್ತು. ಅವುಕ್ಕೆ ಹುಲ್ಲುನ್ನೂ ನಿಮ್ಮಪ್ಪ್ನೇ ತಂದ್ ಹಾಕದು. ನಿಮ್ಮಪ್ಪ ಕೆಲ್ಸುಕ್ ಓದ್ಮ್ಯಾಲೆ ನಾನೇ ಆಡ್ಗೊಳ್ಗೆ ಹುಲ್ ಹಾಕ್ಕೊಂಡು, ನೀರ್ ಕುಡುಸ್ಕೊಂಡು ಚೆನ್ನಾಗಿ ನೋಡ್ಕೊಳ್ಳುವ್ನಿ. ಆಗ ವಸಿ ದಿನ ನಿಮ್ಮಪ್ಪುನ್ ಕಾಲ್ಗೆ ನವ್ವಾಗಿ ಮನೆಲೇ ಇತ್ತು. ತಳ್ಳ ಗಾಡಿಲಿ ಪರೋಟ ಮಾರೋವಾಗ ದೊಡ್ಡ್ ನೀರಿನ್ ಡ್ರಮ್ಮು ಕಾಲ್ ಮ್ಯಾಲೆ ಬಿದ್ದು, ಕಾಲ್ದು ಒಂದು ಬೆರಳು ಕತ್ತುರ್ಸೋಗಿತ್ತು. ನಡ್ಯಕೇ ಆಯ್ತಿರ್ನಿಲ್ಲ. ಇಂಗೇ ಒಂದಿನ ವತ್ತಾರೆನೆ ನಿಮ್ಮಪ್ಪನ್ ಫ್ರೆಂಡು ನಿಮ್ಮಪ್ಪನ್ನ ನಡ್ಯಕಾಯ್ತಿರ್ನಿಲ್ಲ ಅಂತ ಕೈ ಹಿಡ್ಕೊಂಡು ಕೆರೆ ಕಡಿಕೆ ಕರ್ಕೊಂಡು ಹೋಗಿದ್ರು. ಮನೆಲಿ ನಾನೊಬ್ಬಳೇ ಇದ್ದೆ. ನಮ್ಮನೆ ಮುಂದುಕ್ ಒಂದು ಬಿಳಿ ಕಾರ್ ಬಂದು ನಿಂತ್ಕೊತು. ನಾನು ಇದ್ಯಾರು ಅಂತ ಅಂಗೇ ಬಾಕ್ಲಲ್ ನಿಂತ್ಕೊಂಡು ಬೊಗ್ಗ್ ನೋಡ್ದೆ. ಕಾರಿಂದ ಇವರಪ್ಪನೂ, ಇವರಣ್ಣನೂ ಇಳುದ್ರು. ಬಿಳಿ ಜುಬ್ಬಾ, ಪೈಜಾಮ ಹಾಕ್ಕೊಂಡು ಏನ್ ಎಲ್ಲಾ ಬೆಳ್ಗೊಳ್ಗು ಒನ್ನೊಂದ್ ಉಂಗ್ರ... ಕತ್ತಲ್ಲಿ ಏನ್ ಈ ಬೆಳ್ನಷ್ಟು ದಪ್ಪುದ್ ಚೈನ್ ಹಾಕ್ಕೊಂಡವ್ರೆ..."

Image
daphne richard photo

"ಅವ್ರು ಬಂದು ಕಾರ್ ಇಳ್ದಿದ್ಕೂ ನಿಮ್ಮಪ್ಪ ಕೆರೆ ಕಡೆಯಿಂದ ಬಂದುದ್ಕೂ ಒಂದೇ ಆಯ್ತು ಕನವ್ವಾ... ಆ ಕಾಲ್ ನವ್ವಲ್ಲೇ ಕುಂಟ್ಕಂದ್ ಕುಂಟ್ಕಂದೇ ಮನೆ ವಳಿಕ್ ನುಗ್ಗಿ ಕತ್ತಿ ತಕ್ಕೊಂಡು, '.........ಮಕ್ಳ ಇಲ್ಲಿಗೂ ಬಂದ್ರೇನ್ರೋ' ಅನ್ಕೊತಾ ಅಟ್ಟುಸ್ಕೊಂಡು ಓಗ್ಬುಡ್ತು. ಪಾಪ ಅವ್ರು ಓಡೋಗಿ ಕಾರ್ ಅತ್ಕಂಡು ಓಗೇ ಬುಟ್ರು ಕನವ್ವಾ... ಅದೇ ಮೊದ್ಲು, ಅದೇ ಕಡೆ ನಾನ್ ಅವ್ರ ಮಕ ನೋಡಿದ್ದು. ಆಮ್ಯಾಲೆ ನಾವ್ ಕೂಡ್ಗೆಗೆ ಬಂದ್ಮ್ಯಾಲೆ ನಿಮ್ ತಾತ ಸತ್ತೋಯ್ತಂತೆ. 'ಆಸ್ತಿನೆಲ್ಲಾ ಪಾಲ್ ಮಾಡಿದ್ದೀವಿ, ನಿನ್ ಪಾಲ್ ಬಂದು ತಕ್ಕೊಂಡೋಗ್ಬೇಕಂತೆ' ಅಂತ ನಿಮ್ಮಪ್ಪುನ್ ಪ್ರೆಂಡ್ ಹತ್ರ ಹೇಳ್ ಕಳ್ಸುದ್ರು. ಆಗ ಹೋಗಿತ್ತು ಅವ್ರ್ ಮನೆಗೆ. ಅಲ್ ಅದೇನಾಯ್ತೋ ಏನ್ ಕಥ್ಯೋ ಗೊತ್ತಿಲ್ಲಾ. ಮನೇಗ್ ಬಂದು 'ಅಲ್ ಜಗ್ಳಾ ಆಯ್ತು. ತೋಟ ಮನೇನೆಲ್ಲಾ ತಮ್ಮೆಸ್ರುಗ್ ಮಾಡ್ಕೊಂಡು ಬರೀ ಮೂವತ್ತೈದು ಸಾವಿರ ದುಡ್ ಕೊಡಕ್ ಬಂದ್ರು. ಆ ದುಡ್ಡುನ್ನ ಅವ್ರ ಮುಖದ್ ಮ್ಯಾಲೆ ಎಸ್ದು ಬಂದೆ' ಅಂದಿತ್ತು..."

ಇಷ್ಟು ಹೇಳಿ ಅಮ್ಮಿ ತನ್ನ ಸ್ಮೃತಿಲೋಕಕ್ಕೆ ಬೆನ್ನು ಹಾಕುವಷ್ಟರಲ್ಲಿ, ಅಬ್ಬನನ್ನೂ ಸೇರಿ ತಾನು ಕಳೆದುಕೊಂಡ ನೋವು ಮತ್ತು ನಮ್ಮನ್ನೂ ಸೇರಿ ತಾನು ಪಡೆದುಕೊಂಡ ಸಂಭ್ರಮವೆಲ್ಲವೂ ಸಮ್ಮಿಳಿತಗೊಂಡ ಭಾವ ಅವಳ ಕಣ್ಣಲ್ಲಿ ಇಣುಕಿದ್ದು ಕಾಣಿಸಿತು.

ಮುಂದುವರಿಯುವುದು...
ನಿಮಗೆ ಏನು ಅನ್ನಿಸ್ತು?
3 ವೋಟ್