ಮುಳ್ಳುಹಾದಿಗೆ ಮಣ್ಣು ಹೊತ್ತವರು | 'ಮಾ' ಆಗಲೆತ್ನಿಸಿದ ಶೀಲಾ ಅಂಬಾಲಾಲ್ ಪಟೇಲ್

Maa Anand Sheela 6

ಅಪಕ್ವ ಮತ್ತು ಸ್ವಾರ್ಥ ಚಿಂತನೆಗಳ ಕಾರಣದಿಂದ ಜೈಲುವಾಸಿಯಾದ ಮಹಿಳೆಯೊಬ್ಬರ ಕತೆ ಇದು. ಮಾಡಿದ ತಪ್ಪನ್ನೇ ಮತ್ತೆ ಮಾಡುವುದು ಮನುಷ್ಯ ಸ್ವಭಾವವೇನೋ ಎನಿಸುವಂತೆ ಆಗುವ ಇತಿಹಾಸದ ಪುನರಾವರ್ತನೆ ಕೂಡ ಹೌದು. ಹೀಗಾಗದಂತೆ ತಡೆಯಲು ಪರಿಶೀಲಿಸಬೇಕಾದ ಅಪಾಯಕರ ಮಾದರಿ ಶೀಲಾ ಅಂಬಾಲಾಲ್ ಪಟೇಲ್ ಎಂಬ ಮಹಿಳೆಯ ಬದುಕು

ಉಳ್ಳವರು, ಇಲ್ಲದವರು, ಓದಿದವರು, ಓದದಿರುವವರು ಎನ್ನದೆ, ವಿಶ್ವದ ಬಹುಪಾಲು ಜನರು ತಾವೇತಾವಾಗಿ ಬದುಕಲು ಒಲ್ಲೆ ಎನ್ನುತ್ತಾರೆ. ಧೈರ್ಯದಿಂದ ಬಾಳಲು ವಿಚಾರ, ವಿವೇಕಗಳ ದಾರಿ ಹಿಡಿಯದೆ ಅನುಯಾಯಿತ್ವದ ಸುಲಭ ಮಾರ್ಗ ಹುಡುಕುತ್ತಾರೆ. ಸಾವು ಎಂಬ ಅನಪೇಕ್ಷಿತ ಕೊನೆಯೇ ಪರಮಸತ್ಯವಾಗಿರುವ ಅನಿಶ್ಚಿತ ಬದುಕಿನಲ್ಲಿ ದೇವರು, ಧರ್ಮಗಳು ಸ್ಫೂರ್ತಿಯನ್ನು ತುಂಬದೆಹೋದಾಗ ದೇವರಿಂದ ದೇವಮಾನವ/ವಿಯ ಕಡೆಗೆ ಜಿಗಿಯುತ್ತಾರೆ. ತಮಗೆ ಗೊತ್ತಿಲ್ಲದ ಎಲ್ಲವೂ ಅವರಾರಿಗೋ ಗೊತ್ತಿದೆ, ತಮ್ಮೆಲ್ಲ ಸಮಸ್ಯೆಗಳಿಗೆ ಅವರಲ್ಲಿ ಪರಿಹಾರವಿದೆ ಎಂದು ನಂಬಿ ಬುದ್ಧಿ, ವಿಚಾರಶಕ್ತಿಗಳನ್ನೆಲ್ಲ ಮುಚ್ಚಿಟ್ಟು ಅನುಯಾಯಿತ್ವಕ್ಕೆ ಒಡ್ಡಿಕೊಳ್ಳುತ್ತಾರೆ. ಅನುಯಾಯಿಗಳಾಗುವವರಲ್ಲಿ ಸಾಮಾಜಿಕ, ಕೌಟುಂಬಿಕ, ಭಾವನಾತ್ಮಕ ಅಸುರಕ್ಷತೆ ಅನುಭವಿಸುವ, ಸದಾ ದಮನದ ಸ್ಥಿತಿಯಲ್ಲಿರುವ ಮಹಿಳೆಯರು ಹೆಚ್ಚಿರುತ್ತಾರೆ.

ಹಾಗೆ, 20ನೆಯ ಶತಮಾನದಲ್ಲಿ ದೇಶ-ವಿದೇಶಗಳ ಅನುಯಾಯಿಗಳನ್ನು ತನ್ನ ವಾಕ್ಚಾತುರ್ಯ, ವೈಭವೋಪೇತ ಆಶ್ರಮ, ಮುಕ್ತಪ್ರೇಮದ ಬೋಧನೆ, ದ್ವಂದ್ವಮಯ ಜೀವನ, ವಿಕ್ಷಿಪ್ತ ನಡವಳಿಕೆಯಿಂದ ಒಬ್ಬ ಭಗವಾನ್ ಸೆಳೆದುಹಾಕಿದ. ಆ ದೇವಮಾನವನಿಗೆ ಮಹತ್ವಾಕಾಂಕ್ಷಿ ಗೊಂದಲಗಿತ್ತಿಯು ತನ್ನನ್ನು ಸಂಪೂರ್ಣ ಅರ್ಪಿಸಿಕೊಂಡಳು. ಲೋಕಕ್ಕೇ 'ಮಾ' ಆಗಹೊರಟಳು. ಆದರೆ, ಅಪಕ್ವ, ಸ್ವಾರ್ಥ ಚಿಂತನೆಗಳ ಕಾರಣದಿಂದ ಬಲುಬೇಗ ಮುಖವಾಡ ಕಳಚಿಬಿದ್ದು ಜೈಲುವಾಸಿಯಾದಳು. ಇದು ಎಡವಿದ ದಾರಿಗಳಲ್ಲೇ ಮತ್ತೆ-ಮತ್ತೆ ಮುಗ್ಗರಿಸುವ ಮನುಷ್ಯ ದೌರ್ಬಲ್ಯ. ಮಾಡಿದ ತಪ್ಪನ್ನೇ ಮತ್ತೆ ಮಾಡುವುದು ಮನುಷ್ಯ ಸ್ವಭಾವವೇನೋ ಎನಿಸುವಂತೆ ಆಗುವ ಇತಿಹಾಸದ ಪುನರಾವರ್ತನೆ. ಹೀಗಾಗದಂತೆ ತಡೆಯಲು ಪರಿಶೀಲಿಸಬೇಕಾದ ಅಪಾಯಕರ ಮಾದರಿ ಶೀಲಾ ಅಂಬಾಲಾಲ್ ಪಟೇಲ್ ಎಂಬ ಮಹಿಳೆಯ ಬದುಕು.

* * * * *

Image
Maa Anand Sheela 7

ಗುಜರಾತಿನ ಬರೋಡಾದಲ್ಲಿ 1949ರಲ್ಲಿ ಸಿರಿವಂತ ಉದ್ಯಮಿ ಅಂಬಾಲಾಲ್ ಪಟೇಲ್ ಮತ್ತು ಮಣಿಬೆನ್‍ರ ಆರು ಮಕ್ಕಳಲ್ಲಿ ಕಿರಿಯವಳಾಗಿ ಹುಟ್ಟಿದವಳು ಶೀಲಾ. ಅವಳಿಗೆ 16 ವರ್ಷವಾದಾಗ ತಂದೆ ಅಧ್ಯಾತ್ಮ ಗುರುವೊಬ್ಬನ ಬಳಿಗೆ ಮಗಳನ್ನು ಕರೆದೊಯ್ದರು. ದೇವತಾ ಮನುಷ್ಯನೆಂದೂ, ಲೋಕದ ಎಲ್ಲ ತತ್ತ್ವಗಳನ್ನು ಅರಗಿ ಕುಡಿದ ಬ್ರಹ್ಮಚಾರಿಯೆಂದೂ, ಯಾವುದೇ ಸಮಸ್ಯೆಗೆ ಪರಿಹಾರ ಹೇಳುವ ಕಾಲಜ್ಞಾನಿ ಸಂತನೆಂದೂ ಅವನನ್ನು ಪರಿಚಯಿಸಿದರು. ಅತಿ ಸಿರಿವಂತಿಕೆಯ, ಅತಿ ಧಾರ್ಮಿಕತೆಯ, ಸಾಂಪ್ರದಾಯಿಕ ಕೂಡುಕುಟುಂಬದಲ್ಲಿ ಸಂತೋಷವಿಲ್ಲದೆ ಪೇಲವವಾಗಿದ್ದ ತರುಣಿಯ ಮನಸ್ಸು ತನ್ನೆದುರು ತೆರೆದುಕೊಂಡ ಹೊಸದಾರಿಯ ಕಡೆಗೆ ಚುಂಬಕದಂತೆ ಚಲಿಸಿತು. ಸೆರೆಮನೆಯೊಳಗಿನಿಂದ ರೆಕ್ಕೆ ಪಡೆದು ಹೊರ ಹಾರಿ ಬಂದ ಅನುಭವವಾಯಿತು. ಮಕ್ಕಳಂತೆ ನಗುವ, ಕಣ್ಣಲ್ಲಿ ಕಣ್ಣಿಟ್ಟು ದಿಟ್ಟಿಸಿ ಕಣ್ಣೀರು ತುಂಬಿಕೊಳ್ಳುವ, ಅಪರಿಚಿತರನ್ನೂ ಅಪ್ಪಿಕೊಳ್ಳುವ ಆ ವ್ಯಕ್ತಿ ದೇವಮಾನವನಂತೆಯೇ ಕಂಡ. ಆ ಕ್ಷಣ ಮರಣ ಬಂದರೂ ತನ್ನ ಬದುಕು ಸಾರ್ಥಕವೆನಿಸುವಷ್ಟು ಆತನ ಮಾತು ಮೋಡಿ ಮಾಡಿತು. ಅವರಿಂದ ಶಕ್ತಿ ಹೊರಸೂಸುತ್ತ ತನ್ನೆಡೆಗೆ ಬಂದು ಒಳಗಿನ ಚೈತನ್ಯವನ್ನು ಬಡಿದೆಬ್ಬಿಸಿದಂತಾಯಿತು. ಭಕ್ತಿ, ಅನುಯಾಯಿತ್ವ, ಪ್ರೇಮ ಮುಂತಾಗಿ ಎಲ್ಲ ಭಾವಗಳೂ ಮೇಳೈಸಿ ಅವರ ಹಿಂದೆಯೇ ನಡೆದುಬಿಡಬೇಕೆನಿಸಿತು.

ಈ ಲೇಖನ ಓದಿದ್ದೀರಾ?: ಮುಳ್ಳುಹಾದಿಗೆ ಮಣ್ಣು ಹೊತ್ತವರು | ಹಳ್ಳಿಯತ್ತ ಚಿತ್ತ ನೆಟ್ಟ ಡಾಕ್ಟರ್ ಕಾವೇರಿ ನಂಬೀಶನ್

"ನೀನಿನ್ನೂ ಚಿಕ್ಕವಳು. ಮೊದಲು ವಿದ್ಯಾಭ್ಯಾಸ ಮುಂದುವರಿಸು," ಎಂದು ತಂದೆ ತಿಳಿ ಹೇಳಿದರು. 1967ರಲ್ಲಿ 18 ವರ್ಷದ ಶೀಲಾ, ಅಮೆರಿಕದ ನ್ಯೂಜೆರ್ಸಿಯ ಮೊಂಟ್‍ಕ್ಲೇರ್ ಸ್ಟೇಟ್ ಕಾಲೇಜು ಸೇರಿದಳು. ಅಲ್ಲಿ ಓದುತ್ತಿದ್ದರೂ ಆ ಸನ್ಯಾಸಿ, ಆತನ ಭೇಟಿ ಗುಂಗಾಗಿ ಕಾಡುತ್ತಿತ್ತು. ಆರು ವರ್ಷ ಅಮೆರಿಕದಲ್ಲಿ ಕಲಿತು ಪದವಿ ಪಡೆದು, ಗೆಳೆಯ ಮಾರ್ಕ್ ಹ್ಯಾರಿಸ್ ಸಿಲ್ವರ್‌ಮ್ಯಾನ್‍ನನ್ನು ಮದುವೆಯಾದಳು. ಅಧ್ಯಾತ್ಮಿಕ ಅಧ್ಯಯನದ ಸಲುವಾಗಿ 1972ರಲ್ಲಿ ಗಂಡನೊಡನೆ ಭಾರತಕ್ಕೆ ಬಂದಳು. ಇಬ್ಬರೂ ಗುರುವಿನ ಅನುಯಾಯಿಗಳಾಗಿ ಹೆಸರು ಬದಲಿಸಿಕೊಂಡರು. ಶೀಲಾ 'ಮಾ ಆನಂದ ಶೀಲಾ' ಆದಳು.

ಅವಳ ಗುರು ಚಂದ್ರಮೋಹನ್ ಜೈನ್. ತನ್ನನ್ನು ರಜನೀಶ್ ಎಂದು ಕರೆದುಕೊಳ್ಳುತ್ತಿದ್ದ. ಅವನ ಆಶ್ರಮದಲ್ಲಿ ಸತಿ-ಪತಿ ಇರತೊಡಗಿದರು. ಆಶ್ರಮದ ಶ್ರೇಣಿಯಲ್ಲಿ ಶೀಲಾ ಏರೇರುತ್ತ ಹೋದಳು. 1980ರಲ್ಲಿ ಇದ್ದಕ್ಕಿದ್ದಂತೆ ಪತಿ ಸಿಲ್ವರ್‌ಮ್ಯಾನ್ ತೀರಿಕೊಂಡ ಬಳಿಕ ಮಾ ಆನಂದ ಶೀಲಾ ಸಂಪೂರ್ಣ ರಜನೀಶಿಯೇ ಆಗಿಬಿಟ್ಟಳು. ಆಕೆ ತನ್ನ ವೈಯಕ್ತಿಕ ಕಾರ್ಯದರ್ಶಿ ಎಂದು ರಜನೀಶ್ ಪ್ರಕಟಣೆ ಹೊರಡಿಸುವಷ್ಟರ ಮಟ್ಟಿಗೆ ಆಪ್ತವಲಯದಲ್ಲಿ ಸೇರಿಹೋದಳು.

ಮಿಥ್ಯಾ ದೃಷ್ಟಿ

Image
Maa Anand Sheela 3

ಜನಪ್ರಿಯತೆಯ ದೃಷ್ಟಿಯಿಂದ ಏರಬಹುದಾದ ಎತ್ತರವನ್ನೇರಿ, ಪ್ರೀತಿ, ಗೌರವ, ವಿಶ್ವಾಸಗಳನ್ನು ಭರಪೂರ ಪಡೆದು, ಅದನ್ನು ಜನಹಿತಕ್ಕೆ ಬಳಸಬಹುದಾದ ಸಾಧ್ಯತೆಗಳನ್ನು ಅರಗಿಸಿಕೊಳ್ಳದೆ ಸ್ವೇಚ್ಛಾಚಾರಿಯಾದರೆ ಏನಾಗುತ್ತದೆ ಎನ್ನಲು ರಜನೀಶ್ ಉತ್ತಮ ಉದಾಹರಣೆ. ವಿಶ್ವಾದ್ಯಂತ ಅನುಯಾಯಿಗಳನ್ನು ಹೊಂದಿದ್ದ, ದಶಕಗಟ್ಟಲೆ ಪ್ರಭಾವಿ ಅಧ್ಯಾತ್ಮ ಗುರುವಾಗಿ ಗುರುತಿಸಲ್ಪಟ್ಟ ರಜನೀಶನ (1931-1990) ಜೀವನ ವಿವರಗಳು ದೇವಮಾನವರ ಅಸಲಿಯತ್ತು ತೋರಿಸುವ ಕಿಂಡಿಯಾಗಿದೆ.

1958. ಜಬಲ್‍ಪುರ ವಿಶ್ವವಿದ್ಯಾಲಯದ ತತ್ವಶಾಸ್ತ್ರ ಉಪನ್ಯಾಸಕನಾಗಿದ್ದ ಚಂದ್ರಮೋಹನ್ ಜೈನ್ ತನ್ನ ವಾಗ್ವೈಖರಿಯಿಂದ ಜನರನ್ನು ಸೆಳೆಯಲಾರಂಭಿಸಿದ. "ಪ್ರೇಮಕ್ಕೆ ಮತಧರ್ಮ, ಜಾತಿ, ದೇಶ, ಭಾಷೆ, ಕುಲ, ಪ್ರಾಂತ್ಯ, ವಯಸ್ಸು ಮುಂತಾದ ಅಡೆತಡೆ ಒಡ್ಡಲಾಗಿದೆ. ಅದೆಲ್ಲವನ್ನು ದಾಟಿ ಮನುಷ್ಯ ಪ್ರೇಮ ನೆಲೆಯಾಗಬೇಕು," ಎಂದು ಬೋಧಿಸಿದ. ಪೂರ್ವ-ಪಶ್ಚಿಮ ತತ್ವಗಳನ್ನೆಲ್ಲ ಸೇರಿಸಿ ಹೊಸ ಪ್ರತಿಪಾದನೆಗಳನ್ನು ಮುಂದಿಟ್ಟ. ವ್ಯಕ್ತಿಗತ ಸಂಬಂಧಗಳ ನಡುವೆ ಯಾವುದೂ, ಯಾವ ನಿಯಮವೂ ಅಡ್ಡ ಬರಬಾರದು; ಮದುವೆಯೂ ಒಂದು ಸಾಮಾಜಿಕ ಬಂಧನ, ಮಹಿಳೆಯರಿಗಂತೂ ಅದು ದೊಡ್ಡ ಬಂಧನ ಎಂದ ಮುಕ್ತಪ್ರೇಮವನ್ನು ಪ್ರೋತ್ಸಾಹಿಸಿದ. ವಿಜ್ಞಾನ, ತಂತ್ರಜ್ಞಾನ, ಕುಟುಂಬ ಯೋಜನೆಗಳ ಪ್ರೋತ್ಸಾಹಕನಾಗಿ ಆಧುನಿಕ ಚಿಂತಕನಂತೆ, ಉದಾತ್ತ ಯೋಚನೆಗಳಿರುವ ಅಸಾಂಪ್ರದಾಯಿಕ ಸಾಧುವಿನಂತೆ ಕಾಣುತ್ತಲಿದ್ದ ಆತನನ್ನು ಹೆಣ್ಣುಮಕ್ಕಳು ಹೆಚ್ಚೆಚ್ಚು ಹಿಂಬಾಲಿಸಿದರು. ತಮ್ಮ ಸಮಸ್ಯೆಗಳೆಲ್ಲಕ್ಕೂ ಅವನಲ್ಲಿ ಪರಿಹಾರ ಹುಡುಕಿದರು.

ಬ್ರಹ್ಮಚರ್ಯವಿಲ್ಲದ, ಕುಟುಂಬದ ಅಂಟುನಂಟು ತೊರೆದ ನವಸನ್ಯಾಸಿಗಳ ಪಂಥವನ್ನು ಕಟ್ಟಿದ ಆತ, ಹೆಸರನ್ನು ರಜನೀಶ್ ಎಂದು ಬದಲಿಸಿಕೊಂಡ. ಅನುಯಾಯಿಗಳನ್ನು ರಜನೀಶಿಗಳೆಂದು ಕರೆದ. ಆತನ ಅನುಯಾಯಿ ಆಗುವುದೆಂದರೆ ಹೊಸ ಹೆಸರು ಇಟ್ಟುಕೊಳ್ಳುವುದು, ಕೇಸರಿ ಬಟ್ಟೆ ಧರಿಸುವುದು ಹಾಗೂ ಭಗವಾನರ ಫೋಟೋ ಇರುವ ಪದಕದ ಮಣಿಸರ ಧರಿಸಿ ಎಲ್ಲಕ್ಕೂ ಮುಕ್ತವಾಗಿರುವುದು. ಮೊದಲು ಮುಂಬೈ, ಬಳಿಕ ಪುಣೆಯಲ್ಲಿ ಆಶ್ರಮ ನಡೆಸಿದ ಆತ, 'ಡೈನಮಿಕ್ ಮೆಡಿಟೇಷನ್' ಎಂಬ ಹೊಸ ಬಗೆಯ ಧ್ಯಾನ ಪದ್ಧತಿಯನ್ನು ಕಲಿಸತೊಡಗಿದ. ವೇಗದ ಉಸಿರಾಟ, ಹಾಡು, ನರ್ತನಗಳ ಮಿಶ್ರಣ ಅದು. ಮುಕ್ತಪ್ರೇಮದ ಅವಕಾಶವು ಮುಕ್ತ ಕಾಮಕ್ಕೂ ಇದೆ ಎಂದು ತಿಳಿದದ್ದೇ ಆಶ್ರಮದ ರೂಪು, ನೀತಿಗಳೆಲ್ಲ ಬದಲಾದವು. ಇತರ ಲೋಲುಪತೆಗಳು ಸರಾಗ ಒಳಬಂದವು. ಪ್ರೇಮದ ಸೆಷನ್ನುಗಳು ಮುಕ್ತ ಕಾಮಕೇಳಿಯ ಸೆಷನ್ನುಗಳೆಂಬ ಆರೋಪ ಕೇಳಿಬಂತು. ಇದು ರಜನೀಶ್ ಪಂಥಕ್ಕೆ ಅಪಾರ ಸದಸ್ಯರನ್ನು ಕೊಟ್ಟಿತು. ಅವನ ಮಾತು, ನಗೆ, ಬೋಧನೆ, ಬರವಣಿಗೆ, ಯೋಚನೆಗಳಿಗೆ ಭರಪೂರ ಮಾರುಕಟ್ಟೆ ಸೃಷ್ಟಿಸಿತು.

Image
Maa Anand Sheela 5

ಬಡತನವನ್ನು ಆವಾಹಿಸಿಕೊಂಡವರಷ್ಟೇ ಲೋಕದ ಸಂಕಷ್ಟವನ್ನು ಅರಿಯಬಲ್ಲರು, ಲೋಕಕಲ್ಯಾಣದ ಚಿಂತೆ ಮಾಡಬಲ್ಲರು. ಅಧ್ಯಾತ್ಮದ ವೇಷದಲ್ಲಿ ಆಸ್ತಿ, ಬಂಗಾರ, ಕಾರು, ಆಶ್ರಮಗಳ ಕಟ್ಟಿಕೊಂಡ ವೈಭವೋಪೇತ ಹುಸಿ ಗುರುಗಳು ಲೋಕಕಂಟಕರೇ ಆಗುವರು. ಆದರೆ, ಠಕ್ಕು ವೇಷಗಾರರನ್ನೇ ಗುರುವೆಂದು ಬಗೆದು ಜನ ಅವರ ಹಿಂದೆ ನಡೆಯುತ್ತಾರೆ. ತಾವೂ ಉಸಿರುಗಟ್ಟಿ ಮುಳುಗಿ, ಅದೇ ಬಿಡುಗಡೆಯೆಂದು ಲೋಕ ಭಾವಿಸುವಂತೆ ಮಾಡುತ್ತಾರೆ. ಇಲ್ಲೂ ಹಾಗೆಯೇ ಆಯಿತು. ಲಕ್ಷಾಂತರ ಜನ ಆತನ ಅನುಯಾಯಿಗಳಾದರು. ಆಕರ್ಷಕ ಭಾಷೆ, ಧ್ವನಿ, ಶೈಲಿಯಲ್ಲಿ ಆತ ವಿಷಯ ಮಂಡಿಸುತ್ತಿದ್ದ ರೀತಿ, ಅರೆನಿಮೀಲಿತನಾಗಿ ತೆಳುನಗೆ ಬೀರುತ್ತಿದ್ದ ಪ್ರೀತಿನಶೆಯ ಚಹರೆಗಳು ಒಮ್ಮೆ ಒಳಬಂದವರು ಮತ್ತೆ ಹೊರಹೋಗದಂತೆ ಬಂಧಿಸಿದವು. ಆತ ನಿಂತರೂ, ನಕ್ಕರೂ, ಸವರಿದರೂ, ಸಂತೈಸಿದರೂ ಎಲ್ಲವೂ ಪವಾಡವೇ. ಖುಷ್ವಂತ್ ಸಿಂಗ್, ಪೀಟರ್ ಸ್ಲೊಟರಿಕ್ ಮೊದಲಾದ ಪ್ರಮುಖ ಚಿಂತಕ, ಬರಹಗಾರರು ವಿಶ್ವದ ಧರ್ಮಗಳನ್ನೆಲ್ಲ ಮುರಿದು ಬಿಸಾಡಿ ಹೊಸ ಪ್ರೇಮಧರ್ಮ ಕಟ್ಟಿದ ಕ್ರಾಂತಿಕಾರಿ ಎಂದು ಆತನನ್ನು ಬಣ್ಣಿಸಿದರು. ಮುಕ್ತ ಚಿಂತನೆಗಳ ಆಜ್ಞೇಯವಾದಿ, ಅತ್ಯಂತ ಸ್ಪಷ್ಟ ಚಿಂತನೆಯ ಕ್ರಿಯಾಶೀಲ ಮನಸ್ಸು, ಪ್ರವಾದಿ-ದೇವರು-ಪುರಾಣ-ಆಚರಣೆಗಳನ್ನೆಲ್ಲ ಟೀಕಿಸಿ ವಿಶ್ವದ ಧರ್ಮಗಳಿಗೆ ಹೊಸ ರೂಪ ಕೊಟ್ಟವ ಎಂದೆಲ್ಲ ಹೊಗಳಿದರು. ವಿನೋದ್ ಖನ್ನಾ, ಕಬೀರ್ ಬೇಡಿ ಮೊದಲಾದ ಸಿನಿಮಾ ತಾರೆಯರು ಅನುಯಾಯಿಯಗಳಾದರು. ಆತನ ಸಿಖ್ ಶಾಸ್ತ್ರಗ್ರಂಥದ ಟೀಕನ್ನು ಮಾಜಿ ರಾಷ್ಟ್ರಪತಿ ಗ್ಯಾನಿ ಜೈಲ್‍ಸಿಂಗ್ ಮೆಚ್ಚಿದರು. ಲೆಕ್ಕವಿಲ್ಲದಷ್ಟು ವಿದೇಶೀ ಅನುಯಾಯಿಗಳು, ಸಾಗರದಂತೆ ಹರಿದುಬಂದ ಹಣ, ಅವನು ಹೇಳಿದ್ದನ್ನೆಲ್ಲ ನಂಬುವ ಗಣ್ಯ ಜನಸ್ತೋಮ – ತಾನೇ ದೇವರೆನಿಸಲು ಇನ್ನೇನು ಬೇಕು? ಆಚಾರ್ಯ, ಭಗವಾನ್, ಓಶೋ ಮುಂತಾಗಿ ತನ್ನ ಹೆಸರುಗಳ ಬದಲಿಸುತ್ತ ಹೋದ.

ಈ ಲೇಖನ ಓದಿದ್ದೀರಾ?: ಮುಳ್ಳುಹಾದಿಗೆ ಮಣ್ಣು ಹೊತ್ತವರು | ನಿಷಿದ್ಧ ಗಡಿಗಳ ದಾಟಿದ ಡಾಕ್ಟರ್ ರುಕ್ಮಾಬಾಯಿ

ಅವನ ವಿರೋಧಿಗಳಿಗೂ ಕಡಿಮೆ ಇರಲಿಲ್ಲ. ತನ್ನ ಅನನ್ಯತೆ, ವೈಭವ, ದೊಡ್ಡಸ್ತಿಕೆಯ ಬಗೆಗೆ ತಾನೇ ಮೋಹಗೊಳ್ಳುವ, ಸದಾ ಗಮನ ಸೆಳೆಯಬಯಸುವ, ಆರಾಧಿಸುವವರ ಮಧ್ಯೆ ಇರಬಯಸುವ, ಸುಳ್ಳು ಹೇಳುವ, ವ್ಯಕ್ತಿತ್ವವನ್ನು ಬೆಳಕಿಗೊಡ್ಡುವುದರ ಬಗ್ಗೆಯೇ ಸದಾ ಚಿಂತಿತನಾಗಿರುವ, ಅನುಭೂತಿಯೇ ಇಲ್ಲದ ವ್ಯಕ್ತಿತ್ವ ಅವನದೆಂದು ಮನಶ್ಶಾಸ್ತ್ರಜ್ಞರು ವಿಶ್ಲೇಷಣೆ ಮಾಡಿದರು. ಮಾರುವೇಷದಲ್ಲಿರುವ ಕ್ರೈಸ್ತ ತತ್ವಗಳ ಪ್ರತಿಪಾದಕನೆಂದು ಹಿಂದೂ ಸಂಪ್ರದಾಯವಾದಿಗಳು ವಿರೋಧಿಸಿದರು. ತಪ್ಪುತಪ್ಪಾದ ಹಿಂದೂ ಅಧ್ಯಾತ್ಮವನ್ನು ಕ್ರೈಸ್ತ ವಿಚಾರಗಳೊಂದಿಗೆ ಬೆರೆಸಿ ಬೋಧಿಸುವನೆಂದು ಕ್ರೈಸ್ತ ಸಂಪ್ರದಾಯವಾದಿಗಳು ವಿರೋಧಿಸಿದರು. ಹಿಂದೂ ವೇಷದಲ್ಲಿ ಕೊಳ್ಳುಬಾಕತನವನ್ನು ಪ್ರೋತ್ಸಾಹಿಸುವ ಪಂಥವೆಂದು ಸೋವಿಯತ್ ಯೂನಿಯನ್ ಆತನನ್ನು ನಿರ್ಬಂಧಿಸಿತು. ಪುಣೆಯ ಆಶ್ರಮದಲ್ಲಿ ಹಿಂದೂ ಮೂಲಭೂತವಾದಿಯೊಬ್ಬ ಸಿಐಎ ಏಜೆಂಟ್ ಎಂದು ಶಂಕಿಸಿ ಹತ್ಯೆಗೆ ಪ್ರಯತ್ನ ನಡೆಸಿದ. ಭಾರತ ಸರ್ಕಾರದಿಂದಲೂ ತೆರಿಗೆ ವಸೂಲಿ, ಅಕ್ರಮಗಳ ತನಿಖೆಯ ಮಾತು ಕೇಳಿಬಂತು.

ಈ ವೇಳೆಗೆ ಭಗವಾನ್ ರಜನೀಶನ ಆಪ್ತವಲಯದಲ್ಲಿದ್ದ ಮಾ ಆನಂದ ಶೀಲಾ ಆತನ ಬದುಕು, ದಿನಚರಿಯ ಮೇಲೆ ಹಿಡಿತ ಸಾಧಿಸಿದಳು. "ಕಾಲೆಳೆಯುವವರ ನಡುವೆ ಭಾರತದಲ್ಲಿ ಏಕಿರಬೇಕು? ಅಂತಾರಾಷ್ಟ್ರೀಯ ಗುರುವಾಗುವ ಯೋಗ್ಯತೆಯುಳ್ಳ ಗುರುವೇ, ನೆಲೆಯನ್ನು ಅಮೆರಿಕಕ್ಕೆ ಸ್ಥಳಾಂತರಿಸಿ," ಎಂದು ಆತನ ಮನವೊಲಿಸಿದಳು. ವಿಸ್ತೃತ ಯೋಜನೆ ಸಿದ್ಧವಾಯಿತು. ರಜನೀಶನ ಅನುಯಾಯಿಯಾಗಿದ್ದ ಅಮೆರಿಕದ ಪ್ರಜೆ ಜಾನ್ ಜೋಸೆಫ್ ಶೆಲ್ಫರ್‌ನನ್ನು ಎರಡನೆಯ ಮದುವೆಯಾದ ಶೀಲಾ, ರಜನೀಶನ ಖಾಸಗಿ ಕಾರ್ಯದರ್ಶಿಯಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ 'ರಜನೀಶ್ ಆಂದೋಲನ’ ಬೆಳೆಸುವ ವಕ್ತಾರೆಯಾಗುವ ಮಹಾತ್ವಾಕಾಂಕ್ಷೆಯಿಂದ ಅಮೆರಿಕಕ್ಕೆ ಪಯಣ ಬೆಳೆಸಿದಳು.

ರಜನೀಶಪುರಂ

Image
Maa Anand Sheela 8

ಅಮೆರಿಕದ ಓರೆಗಾನ್ ಪ್ರಾಂತ್ಯದ ವಾಸ್ಕೊ ಕೌಂಟಿಯ ಆಂಟಿಲೋಪ್ ಊರಿನ ಬಳಿ 65,000 ಎಕರೆ ಹುಲ್ಲುಗಾವಲು ಭೂಮಿಯನ್ನು 1981ರಲ್ಲಿ ಶೀಲಾಳ ಅಮೆರಿಕನ್ ಪತಿ ಶೆಲ್ಫರ್ ಖರೀದಿಸಿದ. ಮಣ್ಣುಬೆಟ್ಟಗಳ ನಡುವಿನ ವಿಸ್ತಾರ ಪ್ರದೇಶವನ್ನು 'ರಜನೀಶಪುರಂ' ಎಂಬ ಕಮ್ಯೂನ್ ಆಗಿ ಅಭಿವೃದ್ಧಿಪಡಿಸಲು ಭಗವಾನರಿಗೆ ಹಸ್ತಾಂತರಿಸಿ, ಕೆಲವೇ ದಿನಗಳಲ್ಲಿ ಶೆಲ್ಫರ್ ತೀರಿಹೋದ. ತಾನು ಭಾರತದಿಂದ ಬಂದ ಶ್ರೀಮಂತ ವಿಧವೆ ಎಂದು ಅಲ್ಲಿನವರಿಗೆ ಪರಿಚಯಿಸಿಕೊಂಡ ಶೀಲಾ, ಸಾವಯವ ಕೃಷಿಯ ಪ್ರಯೋಗಗಳಿಗಾಗಿ ತಾವು ಭೂಮಿಯನ್ನು ಕೊಂಡಿದ್ದೆವು ಎಂದು ಹೇಳಿದಳು. ಬಾಬ್‍ಕಟ್ ಮಾಡಿದ, ಅತ್ಯಾಧುನಿಕ ದಿರಿಸಿನಲ್ಲಿರುತ್ತಿದ್ದ ಭಾರತದ ಸುಂದರ ಯುವತಿಯನ್ನು ಮೊದಲು ಸ್ಥಳೀಯರು ಕುತೂಹಲದಿಂದ ಗಮನಿಸಿದರು, ಬಳಿಕ ನಂಬಿದರು. ಬರಬರುತ್ತ ಬೃಹತ್ ಕಾಂಪೌಂಡು, ಅದರೊಳಗೆ ಹೋಗುವ ಸಾಲು-ಸಾಲು ಟ್ರಕ್ಕುಗಳು, ವಾಸ ಮಾಡಲು ತಂಡೋಪತಂಡ ಜನರು ಬರತೊಡಗಿದ ಮೇಲೆ ಏನು ನಡೆಯುತ್ತಿದೆಯೆಂಬ ಬಗೆಗೆ ಗಾಳಿಸುದ್ದಿಗಳು ಹಬ್ಬತೊಡಗಿದವು. ಪರಸ್ಥಳದ ಸಾವಿರಾರು ಅನುಯಾಯಿಗಳು ಗುಟ್ಟಾಗಿ, ಖಾಯಮ್ಮಾಗಿ ತಮ್ಮ ಊರಿನ ಬೆಟ್ಟದ ಬುಡದಲ್ಲಿ ಹೊಸ ಊರನ್ನೇ ಕಟ್ಟಿ ಅದನ್ನು ರಜನೀಶಪುರವೆಂದು ಕರೆದ ಮೇಲೆ ಸ್ಥಳೀಯರು ಗಾಬರಿಯಾದರು. 'ಲೈಂಗಿಕ ಪಂಥ’ (ಸೆಕ್ಸ್ ಕಲ್ಟ್) ಎಂದೇ ಅವರನ್ನು ಗುರುತಿಸಿದರು. ಕೆಲ ರಜನೀಶಿಗಳು ವೀಸಾಗಾಗಿ ಅಮೆರಿಕದ ಪ್ರಜೆಗಳನ್ನು ಹುಸಿ ಮದುವೆ ಆದ ಬಳಿಕ ಅನುಮಾನ, ಅಸಮಾಧಾನ ಹೊಗೆಯಾಡತೊಡಗಿದವು.

ಈ ಲೇಖನ ಓದಿದ್ದೀರಾ?: ಮುಳ್ಳುಹಾದಿಗೆ ಮಣ್ಣು ಹೊತ್ತವರು | ಪ್ರತ್ಯಕ್ಷವೇ ಪ್ರಮಾಣ: ಸರಸ್ವತಿ ಗೋರಾ

ಈ ವೇಳೆಗೆ 1981ರ ಮೇ 1ರಂದು ರಜನೀಶ್ ಮಾತಾಡುವುದನ್ನು ನಿಲ್ಲಿಸಿ, "ನನ್ನ ಮೌನದ ಜೊತೆಗಿರುವವರಷ್ಟೇ ಜೊತೆ ಇರಲಿ. ನನ್ನ ಪದಗಳಿಗೆ ನೇತುಬಿದ್ದವರು ದೂರವಾಗಲಿ," ಎಂದು ಘೋಷಿಸಿ, ತಾತ್ಕಾಲಿಕ ವೀಸಾ ಪಡೆದು ಅಮೆರಿಕಕ್ಕೆ ಬಂದುಬಿಟ್ಟ. 1984ರವರೆಗೆ ಮೌನ ವಹಿಸಿದ ಭಗವಾನರ ಎಲ್ಲ ಕೆಲಸಗಳನ್ನೂ ಆತನ ಪರವಾಗಿ ಮಾ ಆನಂದ ಶೀಲಾ ಮುಂದುವರಿಸಿದಳು. ಭಗವಾನ್ ತನ್ನೊಡನೆ ಮಾತ್ರ ಮಾತನಾಡುತ್ತಾರೆ ಎಂದಳು. ಪ್ರತಿದಿನ ಒಂದೊಂದು ಹೊಸ-ಹೊಸ ರೋಲ್ಸ್‌ರಾಯ್ಸ್ ಕಾರಿನಲ್ಲಿ ಕುಳಿತು ಮಣ್ಣುರಸ್ತೆಯಲ್ಲಿ ಮೆಲ್ಲನೆ ಚಲಾಯಿಸುತ್ತ ಗುರುವು ಬರುವಾಗ ಅನುಯಾಯಿಗಳು ಗುರುವನ್ನು ನೋಡುವುದು, ಮುಟ್ಟುವುದು, ಮುಟ್ಟಿಸಿಕೊಳ್ಳುವುದು ಮಾಡಬಹುದಿತ್ತು. ನಡುನಡುವೆ ಕಾರು ನಿಲ್ಲಿಸಿ ರಸ್ತೆ ಪಕ್ಕ ಸಾಲಾಗಿ ನಿಂತು ಹಾಡುವ, ಕುಣಿಯುವ ಭಕ್ತಾದಿಗಳ ಲಯಕ್ಕೆ ತಾನೂ ಕಾರಲ್ಲಿ ಕುಳಿತೇ ಚಪ್ಪಾಳೆ ತಟ್ಟಿ ಗುರು ಹುರಿದುಂಬಿಸುತ್ತಿದ್ದ. ಕಿಟಕಿಯ ಪಕ್ಕ ಇರುವವರ ಕಣ್ಣಲ್ಲಿ ಕಣ್ಣಿಟ್ಟು ರೆಪ್ಪೆ ಮಿಟುಕಿಸದೆ ನಿಮಿಷಗಟ್ಟಲೆ ನೋಡಿ ಬಳಿಕ ಕಾರು ನಿಧಾನ ಮುಂದೊಯ್ಯುತ್ತಿದ್ದ. ತಮ್ಮ ಮನೆ, ಸಂಸಾರಗಳ ಬಿಟ್ಟು, ಇದ್ದಬದ್ದ ಆಸ್ತಿ ತಂದು ಭಗವಾನರ ಪಾದಗಳಿಗೆ ಅರ್ಪಿಸಿದ್ದ ರಜನೀಶಿಗಳು, ಗುರುವಿನ ಕಣ್ಣು ತಮ್ಮ ಕಣ್ಣಿಗೆ ಕೂಡಿದ್ದೇ ಮಹಾಭಾಗ್ಯವೆಂದು ಭಾವಿಸಿದರು. ಹೀಗೆ ಬರಿಯ ದರ್ಶನ ಕೊಡುವ ಗುರುವಾಗಿ ಮೌನಿ ಭಗವಾನರು ನಾಲ್ಕು ವರ್ಷ ಕಳೆದರು. ಅವರ ಖ್ಯಾತಿ, ಸಂಸಾರ ಬೆಳೆಯುತ್ತ ಹೋಯಿತು.

ಪ್ರತಿಯೊಂದೂ ತನ್ನ ವಿನಾಶದ ಬೀಜಗಳನ್ನು ಒಡಲಲ್ಲಿಟ್ಟುಕೊಂಡೇ ಬೆಳೆಯುತ್ತದೆ. ಅದಕ್ಕೆ ರಜನೀಶಪುರ ಹೊರತಾಗಲಿಲ್ಲ.

Image
Maa Anand Sheela 10

1984ರ ಹೊತ್ತಿಗೆ ರಜನೀಶಪುರಂ ಸ್ಥಳೀಯರೊಂದಿಗೆ ಹೆಚ್ಚೆಚ್ಚು ಸಂಘರ್ಷಕ್ಕೊಳಗಾಯಿತು. ಸ್ಥಳೀಯ ಆಡಳಿತದಲ್ಲಿ ಹಿಡಿತ ಪಡೆದರೆ ದಾರಿ ಸುಗಮ ಆಗಬಹುದೆಂದು ಶೀಲಾ ಭಾವಿಸಿದಳು. 1984ರ ಚುನಾವಣೆಗೆ ಇಬ್ಬರು ರಜನೀಶಿಗಳನ್ನು ನಿಲ್ಲಿಸಿದಳು. ನೂರಾರು ವಸತಿಹೀನ ವಲಸಿಗರನ್ನು ರಾತ್ರೋರಾತ್ರಿ ಆಶ್ರಮದೊಳಗೆ ಸೇರಿಸಿ, ಅವರಿಗೆ ಮತದಾರರ ಗುರುತಿನ ಚೀಟಿ ಕೊಡಿಸಲು ಯತ್ನಿಸಿದಳು. ಚುನಾವಣಾ ಮಂಡಳಿ ಅವರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ನಿರಾಕರಿಸಿತು.

ಏನು ಮಾಡುವುದು... ಏನು ಮಾಡುವುದು? 1,444 ಜನಸಂಖ್ಯೆಯ ರಜನೀಶಪುರಂ ಹಸ್ತಕ್ಷೇಪವಿಲ್ಲದೆ ಸುಗಮವಾಗಿ ನಡೆಯಲು ಚುನಾವಣಾ ಗೆಲುವು ಅವಶ್ಯವಾಗಿತ್ತು. ಶೀಲಾ ಕೇಡಿಗತನದ ಒಂದು ಹೊಸ ಹಾದಿ ಕಂಡುಹಿಡಿದಳು. ಆ ಪ್ರದೇಶದ ಜನ ಮತ ಹಾಕಲು ಬರಲಿಕ್ಕೆ ಆಗದಂತೆ, ಅವರಿಗೆ ಕಾಯಿಲೆಯಾಗುವಂತೆ ಜೈವಿಕ ಭಯೋತ್ಪಾದನೆಯ ಅಸ್ತ್ರ ಬಳಸಿದಳು. ಗುಟ್ಟಾಗಿ ಟೈಫಾಯ್ಡ್ ಜ್ವರ ಬರಲು ಕಾರಣವಾದ ಸಾಲ್ಮೊನೆಲ್ಲ ಬ್ಯಾಕ್ಟೀರಿಯಾವನ್ನು ಆ ಪ್ರಾಂತ್ಯದ 10 ಹೋಟೆಲು, ಬಾರುಗಳ ತಿನಿಸುಗಳ ಮೇಲೆ ಸಿಂಪಡಿಸುವ ವ್ಯವಸ್ಥೆ ಮಾಡಿದಳು. ಇದ್ದಕ್ಕಿದ್ದಂತೆ ಓರೆಗಾನಿನ 751 ಜನ ಟೈಫಾಯ್ಡ್‌ಗೆ ತುತ್ತಾಗಿ ಮತ ಚಲಾಯಿಸಲಿಕ್ಕೇ ಆಗದಂತೆ ಮಲಗಿಬಿಟ್ಟರು. ಅಮೆರಿಕದ ಇತಿಹಾಸದಲ್ಲಿಯೇ ಇದು ಮೊದಲ ಮತ್ತು ಅತಿ ದೊಡ್ಡ ಜೈವಿಕ ಭಯೋತ್ಪಾದನಾ ಪ್ರಯತ್ನವಾಗಿತ್ತು. ಚುನಾವಣೆಗೆ ನಿಂತ ರಜನೀಶಿಗಳ ಗೆಲುವಿನ ತಂತ್ರದ ಭಾಗ ಇದಾಗಿರಬಹುದೇ ಎಂಬ ಅನುಮಾನ ಹೊಗೆಯಾಡತೊಡಗಿತು.

ಮೈ ಲೈಫ್ ವಿತ್ ಭಗವಾನ್ ರಜನೀಶ್

Image
Maa Anand Sheela 1

ತನ್ನ ಮೇಲೆ ಪೊಲೀಸರಿಗೆ ಸಂಶಯ ಹುಟ್ಟಿದೆ ಎಂಬ ಸುಳಿವು ಸಿಕ್ಕ್ಕಿದ್ದೇ ತಡ ಶೀಲಾ ಯೂರೋಪಿಗೆ ಹಾರಿಹೋದಳು. ಆಶ್ರಮದಲ್ಲಿದ್ದ ಭಗವಾನ್ ಮತ್ತು ಅವಳ ನಡುವೆ ಸಾಕಷ್ಟು ಚಕಮಕಿ ಸಂಭವಿಸಿರಲೇಬೇಕು. "ಅವಳು ಮಾಡಿದ ಯಾವ ಕೃತ್ಯದಲ್ಲೂ ನನ್ನ ಪಾಲಿಲ್ಲ,"ವೆಂದು ರಜನೀಶ್ ಹೇಳಿದರೆ, "ಅವೆಲ್ಲದರಲ್ಲಿ 'ಭಗವಾನ’ರೂ ಭಾಗಿಯಾಗಿದ್ದರು," ಎಂದು ಶೀಲಾ ಹೇಳಿಕೆ ಕೊಟ್ಟಳು. ಗಲಭೆ ಸೃಷ್ಟಿ, ಫೋನ್ ಕದ್ದಾಲಿಕೆ, ಕೊಲೆ ಯತ್ನ ಮುಂತಾದ ಆರೋಪಗಳನ್ನು ಹೊರಿಸಿ ಪೊಲೀಸರಿಗೆ ರಜನೀಶ್ ದೂರು ಸಲ್ಲಿಸಿದ. 'ರಜನೀಶಿಸಂ' ಎಂಬ ಪುಸ್ತಕ ಅವಳೇ ಬರೆದು ತನ್ನ ಹೆಸರಿನಲ್ಲಿ ಪ್ರಕಟಿಸಿದ್ದಾಗಿಯೂ, ಅದು ತನಗೆ ಸಂಬಂಧವಿಲ್ಲದ್ದೆಂದೂ ಹೇಳಿ, ಶೀಲಾಳ ಬಟ್ಟೆ, ರಜನೀಶಿಸಂ ಪುಸ್ತಕದ 5,000 ಪ್ರತಿಗಳನ್ನು ಆಶ್ರಮದಲ್ಲಿ ಬಹಿರಂಗವಾಗಿ ಸುಟ್ಟ.

ಸಾಕ್ಷ್ಯ ಸಂಗ್ರಹಕ್ಕಾಗಿ ಸೀಲ್ ಮಾಡಿದ್ದ ಅವಳ ಮನೆಯನ್ನು ಪೊಲೀಸರು ಪ್ರವೇಶಿಸಿದರೆ, ಮನೆ ತುಂಬ ಫೋನ್ ಕದ್ದಾಲಿಸಿದ ಟೇಪುಗಳು, ನೂರಾರು ಕ್ಯಾಸೆಟ್ಟುಗಳು, ಬ್ಯಾಕ್ಟೀರಿಯಾ ಬೆಳೆಸುವ ಸುಸಜ್ಜಿತ ಪ್ರಯೋಗಶಾಲೆ, ಅತ್ಯಾಧುನಿಕ ಶಸ್ತ್ರಾಸ್ತ್ರಗಳಿದ್ದವು. ಇಂಟರ್‌ಪೋಲ್ ಮೂಲಕ ಪಶ್ಚಿಮ ಜರ್ಮನಿಯಲ್ಲಿ ಅವಳನ್ನು ಬಂಧಿಸಿ ಅಮೆರಿಕಕ್ಕೆ ಕರೆತಂದು ವಿಚಾರಣೆ ನಡೆಸಿದರು. ಫೋನ್ ಕದ್ದಾಲಿಕೆ, ಕಚೇರಿಗೆ ಬೆಂಕಿ ಹಚ್ಚಲೆತ್ನಿಸಿ ಸಾಕ್ಷ್ಯನಾಶ, ಕಮಿಷನರ್ ಮತ್ತು ನ್ಯಾಯಾಧೀಶರಿಗೂ ವಿಷಪ್ರಾಶನ ಮಾಡಿದ ಆರೋಪಗಳ ವಿಚಾರಣೆ ನಡೆಯಿತು. 20 ವರ್ಷಗಳ ಮೂರು ಶಿಕ್ಷೆ ಮತ್ತು 4,70,000 ಡಾಲರ್ ದಂಡ ವಿಧಿಸಿದರು. ಓರೆಗಾನಿನ ರಜನೀಶಪುರವನ್ನು ಅಧಿಕಾರಿಗಳು ಧ್ವಂಸ ಮಾಡಿದರು. ರಜನೀಶ್‍ಗೆ ಗಡಿಪಾರಾಗುವ ಅವಕಾಶ ನೀಡಿದಾಗ, 21 ದೇಶಗಳು ಆತನಿಗೆ ಪ್ರವೇಶ ನಿರಾಕರಿಸಿದವು. ಕೊನೆಗೆ ಭಾರತಕ್ಕೆ ಅನುಯಾಯಿ ತಂಡದೊಡನೆ ತಿರುಗಿಬಂದ ರಜನೀಶ್, ಪುಣೆಯ ಆಶ್ರಮದಲ್ಲಿ ನೆಲೆಯಾದ.

ಆ ತನಿಖೆಯ ವೇಳೆ ಎಲ್ಲರೂ ಅನುಮಾನಿಸುತ್ತಿದ್ದ, ಬಚ್ಚಿಡಲ್ಪಟ್ಟ ಕೆಲವು ಸತ್ಯಗಳು ಹೊರಬಂದಿದ್ದವು. ತನ್ನ ಮೊದಲ ಗಂಡನಿಗೆ ಏನೋ ಇಂಜೆಕ್ಷನ್ ಕೊಟ್ಟು ಕೂಡಲೇ ಅವ ಸತ್ತ ಎಂದು ತನ್ನ ಗೆಳೆಯ ಡೇವಿಡ್ ಬೆರ್ರಿ ನ್ಯಾಪ್ ಅಥವಾ ಸ್ವಾಮಿ ಕೃಷ್ಣದೇವ ಎಂಬುವನಿಗೆ ಶೀಲಾ ಹೇಳಿದ್ದಳು. ಇದನ್ನು ಪೊಲೀಸರೆದುರು ಆತ ನೀಡಿದ ಹೇಳಿಕೆಯಲ್ಲಿ ತಿಳಿಸಿದ. ಆಕೆಯ ಮೇಲಿನ ಆರೋಪಗಳ ಗಹನತೆಯನ್ನು ಇವೆಲ್ಲ ಹೆಚ್ಚಿಸಿದ್ದವು.

Image
Maa Anand Sheela 4

ಭಗವಾನ್ ರಜನೀಶನ ದೈವತ್ವದ ಆಳ-ಅಗಲಗಳು ತನಿಖೆಯ ವೇಳೆ ಬಯಲಾದವು. ನಿರಂತರ ಜನರಿಗೆ ಸಾಂತ್ವನ ಹೇಳುವ, ಹಸನ್ಮುಖಿಯಾಗಿ ಆಶೀರ್ವದಿಸುತ್ತ ಇರುವ ಮನೋಭಾವ ಕಾಯ್ದುಕೊಳ್ಳಲು ಆತ ಮಾದಕ ವಸ್ತುಗಳನ್ನು ಸೇವಿಸುತ್ತಿದ್ದ. ಬರುಬರುತ್ತ ಅನುಯಾಯಿಗಳ ಸಂದಣಿ ಹೆಚ್ಚುತ್ತ ಹೋಗಿ ತನ್ನ ಹುಸಿಗಳ ಭಾರಕ್ಕೆ ತಾನೇ ಕುಸಿದ. ಆತಂಕ, ಉದ್ವೇಗ, ನಿದ್ರಾಹೀನತೆ ಹೆಚ್ಚಿದಂತೆ ಮಾದಕವಸ್ತು ವ್ಯಸನಿಯಾದ. ಅಸ್ತಮಾ, ಡಯಾಬಿಟಿಸ್, ಅದರಿಂದ ಬರುವ ಬೇರೆ-ಬೇರೆ ಕಾಂಪ್ಲಿಕೇಷನ್ನುಗಳು ಬಂದಿದ್ದವು. ಆರೋಗ್ಯ, ಆತಂಕ ಸುಧಾರಿಸಬೇಕೆಂದರೆ ಅಮೆರಿಕಕ್ಕೆ ಬಂದು ಮಾತು ನಿಲ್ಲಿಸಿ, ಮೌನಕ್ಕೆ ಶರಣಾಗಿ ತನ್ನ ಮಡಿಲಲ್ಲಿರು ಎಂದು ಮಾ ಆನಂದ ಶೀಲಾ ಆತನನ್ನು ಅಮೆರಿಕಕ್ಕೆ ಕರೆಸಿಕೊಂಡದ್ದಾಗಿ ಹೇಳಿದಳು. ಆದರೆ, ಇಲ್ಲಿ ಬಂದಮೇಲೂ ಆತನಿಗೆ ಪ್ರತಿದಿನ 5 ಮಿ.ಗ್ರಾಮಿನ 12 ವೇಲಿಯಮ್ ಮಾತ್ರೆ (ಡಯಜಿಪಾಮ್ ಎಂಬ ಅಮಲುಕಾರಕ, ನಿದ್ರೆ ಮಾತ್ರೆ 60 ಮಿ.ಗ್ರಾಂ!) ಮತ್ತು ನೈಟ್ರಸ್ ಆಕ್ಸೈಡ್ ಎಂಬ 'ನಗಿಸುವ’ ಮಾದಕವಸ್ತು ಬೇಕೇಬೇಕಿತ್ತು. ಅದನ್ನು ಪೂರೈಸದ ಶೀಲಾಳನ್ನೇ ನೆಚ್ಚಿಕೊಂಡು ಅವಳು ಹೇಳಿದಂತೆ ಕೇಳಲು ಭಗವಾನ್ ತಯಾರಿರಲಿಲ್ಲ. ಮಾ ಯೋಗ ಲಕ್ಷ್ಮಿ, ಮಾ ಯೋಗ ಮುಕ್ತಾ, ಮಾ ಆನಂದ ಶೀಲಾ, ಮಾ ಯೋಗ ವಿವೇಕ, ಮಾ ಪ್ರೇಮ ಸಂಗೀತ್ – ಅದೆಷ್ಟೋ ಮಾಗಳ ನಡುವೆ ಅವಳೊಬ್ಬಳಾಗಿದ್ದಳು! ಭಗವಾನರಿಗೆ ತನ್ನನ್ನು ಬಿಟ್ಟು ಬೇರಾರೂ ಇರಬಾರದೆನ್ನುವುದು ಮಾ ಆನಂದ ಶೀಲಾಳ ಹುನ್ನಾರವಾಗಿತ್ತು. ಅದಕ್ಕಾಗಿ ಭಗವಾನರ ಆಪ್ತ ಅನುಯಾಯಿಗಳ ತಂಡವನ್ನು ಮೂಲೋತ್ಪಾಟನೆ ಮಾಡಹೊರಟು ಸಿನಿಮೀಯವಾಗಿ ತನ್ನ ಬಲೆಯಲ್ಲಿ ತಾನೇ ಬಂಧಿತಳಾದಳು. ಸ್ವಾತಂತ್ರ್ಯದಿಂದ ಅಸ್ವಾತಂತ್ರ್ಯದ ಕಡೆಗೆ ನಡೆದಳು.

ಈ ಲೇಖನ ಓದಿದ್ದೀರಾ?: ಮುಳ್ಳುಹಾದಿಗೆ ಮಣ್ಣು ಹೊತ್ತವರು | ಘನತೆ ಇಲ್ಲದ ವೃತ್ತಿ ಬೇಡವೆಂದ ಹೋಮೈ ವ್ಯಾರಾವಾಲಾ

ಡಬ್ಲಿನ್ನಿನ ಮಹಿಳಾ ಕಾರಾಗೃಹ ಸೇರಿದ ಶೀಲಾ, 39 ತಿಂಗಳ ಬಳಿಕ ಸನ್ನಡತೆಯ ಆಧಾರದ ಮೇಲೆ ಪೆರೋಲ್ ದೊರೆತು ಬಿಡುಗಡೆಯಾದಳು! 1988ರಲ್ಲಿ ಸ್ವಿಸ್ ನಾಗರಿಕನಾದ, ರಜನೀಶಿಯಾದ ಉರ್ಸ್ ಬರ್ನ್‍ಸ್ಟೀಲ್‍ನನ್ನು ಮದುವೆಯಾಗಿ ಸ್ವಿಜರ್‍ಲ್ಯಾಂಡಿನ ಬಾಸೆಲ್ ಹತ್ತಿರದ ಮೈಸ್‍ಪ್ರಾಕ್ ಹಳ್ಳಿಗೆ ಹೋದಳು. ಮೂರನೆಯ ಪತಿ ಮದುವೆಯಾದ ಕೆಲವು ದಿನಗಳಲ್ಲೇ ಏಡ್ಸ್‌ನಿಂದ ಸತ್ತರೂ ಅಲ್ಲಿಯೇ ಉಳಿದಳು. ತನ್ನ ತಾಯ್ತಂದೆಯರ ಹೆಸರಿನಲ್ಲಿ ವಯಸ್ಸಾದ, ಮಾನಸಿಕ ಅಸ್ವಸ್ಥರಾದ ವೃದ್ಧರನ್ನು ನೋಡಿಕೊಳ್ಳಲು 'ಮಾತೃಸದನ,' 'ಬಾಪು ಸದನ’ ಎಂಬೆರಡು ಆರೈಕೆಯ ಕೇಂದ್ರಗಳನ್ನು ನಡೆಸತೊಡಗಿದಳು. ಕೆಲವು ಅಪರಾಧಗಳ ವಿಚಾರಣೆ ಅಲ್ಲಿಯೇ ಮುಂದುವರಿದು ಶಿಕ್ಷೆ ಪೂರೈಸಿದಳು.

ಈಗ ಸ್ವಿಸ್ ಪ್ರಜೆಯಾಗಿ ಶೀಲಾ ಸ್ವಿಜರ್‍ಲ್ಯಾಂಡಿನಲ್ಲಿಯೇ ಇದ್ದಾಳೆ. 'ಡೋಂಟ್ ಕಿಲ್ ಹಿಮ್ – ದ ಸ್ಟೋರಿ ಆಫ್ ಮೈ ಲೈಫ್ ವಿತ್ ಭಗವಾನ್ ರಜನೀಶ್’ ಎಂಬ ಹೆಸರಿನಲ್ಲಿ, ಮೂಲ ಜರ್ಮನ್‍ನಲ್ಲಿ ತನ್ನ ಗುರುವಿಗೆ ಹೇಳಿ ಬರೆಸಿದ ಪುಸ್ತಕ ಪ್ರಕಟಿಸಿದ್ದಾಳೆ. ಅದು ಬಳಿಕ ಇಂಗ್ಲಿಷ್‍ಗೆ ಅನುವಾದಗೊಂಡಿದೆ. 2018ರಲ್ಲಿ 'ವೈಲ್ಡ್ ವೈಲ್ಡ್ ಕಂಟ್ರಿ' ಎಂಬ ಸಾಕ್ಷ್ಯಚಿತ್ರ ಬಿಡುಗಡೆಯಾಗಿದೆ. ಅದರಲ್ಲಿ ಅವಳ ಸಂದರ್ಶನವಿದೆ. 'ಶೀಲಾ' ಹೆಸರಿನ ಚಿತ್ರ ಪ್ರಿಯಾಂಕಾ ಚೋಪ್ರಾ ನಟನೆಯಲ್ಲಿ ಸೆಟ್ಟೇರಿದರೂ ಅದಕ್ಕೆ ತಡೆಯಾಜ್ಞೆ ತಂದು ನಿಲ್ಲಿಸಿದ್ದಾಳೆ. 2021ರಲ್ಲಿ 'ಸರ್ಚಿಂಗ್ ಫಾರ್ ಶೀಲಾ’ ನೆಟ್‍ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದಾಗ, 35 ವರ್ಷಗಳ ಬಳಿಕ ಭಾರತಕ್ಕೆ ಬಂದುಹೋಗಿದ್ದಾಳೆ.

Image
Maa Anand Sheela 9

ಕೌಟುಂಬಿಕ ಪ್ರೀತಿ, ಸುರಕ್ಷೆ, ಸಿರಿತನ, ಶಿಕ್ಷಣ, ಮದುವೆ, ಸ್ಥಾನಮಾನ, ಮನ್ನಣೆ, ಬುದ್ಧಿಮತ್ತೆ ಮೊದಲಾಗಿ ಶೀಲಾಗೆ ಸಿಗದೆ ಇದ್ದದ್ದು ಯಾವುದು? ಆದರೂ ಯಾಕೆ ಬಿದ್ದಳು? ಕೊನೆಗೂ ನಾವು ಅರಸಿಕೊಂಡು ಹೊರಟಿರುವುದು ಏನನ್ನು? ಯಾವುದು ನಿಜವಾದ ಬಿಡುಗಡೆ? ಸ್ವಾತಂತ್ರ್ಯ ಎನ್ನುವುದು ಅನುಭವಜನ್ಯ ಸ್ಥಿತಿಯೋ ಅಥವಾ ನಿರಂತರ ವ್ಯಾಖ್ಯಾನಿಸಲ್ಪಡುವ ಕನಸೋ? ಶೀಲಾಳ ಬದುಕಿನ ಪಯಣವು ಇವೆಲ್ಲ ಪ್ರಶ್ನೆಗಳನ್ನು ಎತ್ತುತ್ತದೆ.

ಪಡೆವವರ ಮನಸ್ಸಿನಲ್ಲಿ ಸ್ವಾತಂತ್ರ್ಯ ಸದಾ ಸತ್ಪರಿಣಾಮಗಳನ್ನೇ ಹುಟ್ಟಿಸುತ್ತದೆ ಎಂದು ಹೇಳಲು ಬರುವುದಿಲ್ಲ. ಹೊಸದಾಗಿ ದೊರೆತ ಸ್ವಾತಂತ್ರ್ಯ ಒಂದೋ ಭಯ ಹುಟ್ಟಿಸುವ ಅಥವಾ ಸ್ವೇಚ್ಛೆಯಲ್ಲಿ ಕೊನೆಗೊಳ್ಳುವ ಸಾಧ್ಯತೆಯಿರುತ್ತದೆ. ಇವೆರೆಡೂ ಆಗಬಾರದೆಂದರೆ, ನಡೆಯೊಳಗೆ ಲೋಕಹಿತ ಅಡಕವಾಗಿರಬೇಕು. ನಮ್ಮನ್ನು ಮೀರಿ ಬೆಳೆವ ಅಹಮನ್ನು ಕ್ಷಣಕ್ಷಣಕ್ಕೂ ತುಂಡರಿಸಿಕೊಳ್ಳಬೇಕು. ಹಾಗಲ್ಲದಿದ್ದರೆ, ಸಾರ್ವಜನಿಕ ಮನ್ನಣೆ, ಅನುಯಾಯಿತ್ವ ಪಡೆದ ವ್ಯಕ್ತಿಗಳ ಲೋಕದೃಷ್ಟಿಯು ಬುದ್ಧ ಹೇಳುವ ಸಮ್ಯಕ್ ದೃಷ್ಟಿಯಾಗಿರದೆ ಮಿಥ್ಯಾ ದೃಷ್ಟಿಯಲ್ಲಿ ಕೊನೆಯಾಗುತ್ತದೆ. ತಮ್ಮ ಅವಸಾನಕ್ಕೆ ತಾವೇ ಕಾರಣರಾಗುವಂತೆ, ಜನಸಾಮಾನ್ಯರೂ ಅದಕ್ಕೆ ಬಲಿಯಾಗುವಂತೆ ಮಾಡುತ್ತದೆ.

ಹಾಗಾಗಿ, ಸ್ವಾತಂತ್ರ್ಯದ ಜೊತೆಗೇ ವಿಚಾರ, ವಿವೇಕಗಳನ್ನು ಮೈಗೂಡಿಸಿಕೊಳ್ಳಲು ಮಹಿಳೆಯರು ಸಾಮೂಹಿಕತೆಯಲ್ಲಿ ನಂಬಿಕೆ ಇಡಬೇಕು. ವ್ಯಕ್ತಿ ಲೋಲುಪತೆಯಲ್ಲಿ ಮುಳುಗಿಹೋಗದೆ ಸಮಾಜದ, ಲೋಕದ ಭಾಗ ತಾನೆಂದು ತಿಳಿಯಬೇಕು. ಆಗ ಮಾತ್ರ ಸಮತಾ ಭಾವ, ಮೈತ್ರಿಭಾವ, ವಿಶ್ವಪ್ರೇಮ ಮೂಡಬಹುದು.

ನಿಮಗೆ ಏನು ಅನ್ನಿಸ್ತು?
5 ವೋಟ್