ಬಿಬ್ರಿ ಹಿಲ್ಸ್ | ಸದ್ದಿಲ್ಲದೆ ಮಡಿಕೇರಿ ಲೈಬ್ರರಿಗೆ ಕಾಲಿಟ್ಟು ಕನ್ನಡ ಪುಸ್ತಕ ಸರಿಸಿ ಕುಳಿತ ಹಿಂದಿ

ಮೊನ್ನೆಯೊಂದು ದಿನ ಮಡಿಕೇರಿಯಲ್ಲಿರುವ ನಮ್ಮ ಕೊಡಗು ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಹೋಗಿದ್ದೆ. ಒಳಹೊಕ್ಕರೆ, ಇಲ್ಲಿಂದ ಅದೆಷ್ಟೋ ದೂರದಲ್ಲಿರುವ ಊರುಗಳಲ್ಲಿ ಪ್ರಮುಖವಾಗಿ ಮಾತನಾಡುವ ಹಿಂದಿ ಭಾಷೆಯ ಪುಸ್ತಕಗಳು ಕಪಾಟುಗಟ್ಟಲೆ ಪ್ರದರ್ಶನಕ್ಕಿದ್ದವು. ಹಿಂದಿ ಭಾಷೆಯ ಬಗ್ಗೆ ಹಗೆತನ ನನಗಿಲ್ಲ. ಶಾಲೆಯಲ್ಲಿ ಓದುವಾಗ ನಾನೂ ಹಿಂದಿ ಕಲಿತಿದ್ದೇನೆ. ಆದರೆ...

ಶುರುವಾಗಿ ವರುಷವೇ ಆಯಿತೋ ಎಂಬಂತಿದ್ದ ಮಳೆಗಾಲ ಒಂದೆರಡು ದಿನದ ಹಿಂದೆಯಷ್ಟೇ ತನ್ನ ಬಿಡಾರ ಬಿಡುವ ತಯಾರಿ ಕೈಗೆತ್ತಿಕೊಂಡಿತ್ತು. ನೀಲಾಕಾಶ. ಮೋಡ, ಮಳೆ, ಮಂಜಿನಡಿಗಳಲ್ಲಿ ಬಾಡಿದ್ದ ಚಹರೆ ಅರಳಲು ಬೇಕಾಗುವಷ್ಟು ಮಂದ ಬಿಸಿಲು. ಮಡಿಕೇರಿಯಲ್ಲಿ ಒಂದು ಸಾಮಾನ್ಯವಾದ ಅಕ್ಟೋಬರಿನ ದಿನ.  

Eedina App

ಮಂಜಿನ ನಗರಿ ಮಡಿಕೇರಿ, ನಾನು ಹುಟ್ಟಿ ಬೆಳೆದ ಊರು. ಇಡೀ ಊರಿಗೆ ಒಂದೇ ಒಂದು ದಿನಪತ್ರಿಕೆ ಮಾರುವ ನೀಲಕಂಠೇಶ್ವರ ಸ್ಟೋರ್ಸ್. ಅಲ್ಲಿ ಪ್ರಮುಖವಾಗಿ ದೊರೆಯುತ್ತಿದ್ದ ಪುಸ್ತಕಗಳೆಂದರೆ ಕ್ರೈಂ, ಸಿನಿಮಾ... ಇತರೆ ಟೈಂಪಾಸಿನವು. ಬಿಟ್ಟರೆ ಟಿಂಕಲ್, ಬಾಲಮಂಗಳ, ಮಕ್ಕಳಿಗಿರುವ ಇತ್ಯಾದಿ ಪುಸ್ತಕ. ಹೀಗೆ, ದಿನವಿಡೀ ಪುಸ್ತಕ, ಪದಗಳಲ್ಲಿ ಮೈಮರೆತಿರುತ್ತಿದ್ದ ನನಗೆ  ಮನೆಯಲ್ಲಿದ್ದ ಪುಸ್ತಕ ಭಂಡಾರ ಇನ್ನೇನು ಖರ್ಚಾಗುತ್ತಾ ಬಂತು ಎಂದಾಗ, ಇಕೋ ಇನ್ನೊಂದು  ಪ್ರಪಂಚವೇ ಕಾದಿದೆ ಎಂದು ಅರಿವಾಗಿದ್ದು ಗ್ರಂಥಾಲಯದ ಹಸಿರು ಬಣ್ಣ ಬಳಿದ ಬಾಗಿಲನ್ನು ದಾಟಿ ಮೊದಲು ಒಳಹೊಕ್ಕಾಗ. ಪ್ರತೀ ವರ್ಷದ ಬೇಸಿಗೆಯ ರಜೆಯ ಎರಡು ತಿಂಗಳುಗಳನ್ನು ಮಡಿಕೇರಿ ಕೋಟೆಯ - ಹದಿನೇಳನೆಯ ಶತಮಾನದಲ್ಲಿ ಮುದ್ದುರಾಜ ಕಟ್ಟಿಸಿ, ಅವನ ತಲೆಮಾರಿನವರು, ಟಿಪ್ಪು ಸುಲ್ತಾನ ಮತ್ತಿತರರು ನವೀಕರಿಸುತ್ತ ಬಂದದ್ದು - ಆವರಣದ ಒಂದು ಬದಿಯ ತೇವಮಯವಾದ ಕಟ್ಟಡದೊಳಗೆ ಮನೆ ಮಾಡಿದ್ದ ಗ್ರಂಥಾಲಯದಲ್ಲಿ ಕಳೆದಿದ್ದೇನೆ. ನನ್ನ ಎರಡನೆಯ ಮನೆ ಅದಾಗಿತ್ತು ಎನ್ನಬಹುದೇನೋ. ಮನೆಯಿಂದ ಗ್ರಂಥಾಲಯಕ್ಕೆ ಸರಿಸುಮಾರು ಅರ್ಧ ಗಂಟೆಯ ಕಾಲ್ನಡಿಗೆಯ ಮಾರ್ಗವನ್ನು ರಚಿಸಿದ್ದೆ - ಒಳೊಳಗಿನ ರಸ್ತೆಗಳು, ಶಾಂತವಾದ ದಾರಿ, ಬೆಟ್ಟದ ಸಾಲಿನ ದೃಶ್ಯಾವಳಿಗಳುಳ್ಳ ನನ್ನದೇ ಆದ ಸ್ಪೆಷಲ್ ರೂಟ್. ಕಾಲೇಜು ಮುಗಿಸಿ ಊರು ಬಿಟ್ಟು ಮಹಾನಗರ ಸೇರಿದ ಮೇಲೆಯಷ್ಟೇ ಆ ನಂಟು ಸಡಿಲಗೊಂಡದ್ದು. ಹೀಗೆಲ್ಲಾ ಹಳೆ ಕತೆಗಳು...

ಈ ಲೇಖನ ಓದಿದ್ದೀರಾ?: ನುಡಿಚಿತ್ರ | ತೇಜಸ್ವಿ ಮತ್ತು ಕರ್ನಾಟಕದ ಹುಡುಗ-ಹುಡುಗಿಯರು

AV Eye Hospital ad

ಮೊನ್ನೆ ಹಿಂತಿರುಗುತ್ತ... ಕತ್ತಲು ನೆರಳುಗಳಲ್ಲಿ ಮುಳುಗಿ, ಮಡಿಕೇರಿ ನಗರಿಯ ಪ್ರಸಿದ್ಧ ಮಂಜಿನ  ಹವೆಯನೆಲ್ಲ ತಬ್ಬಿಕೊಂಡು ಚಂದವಾಗಿ ಕಂಡರೂ, ಪುಸ್ತಕದ ದೇಖ್‌ಬಾಲಿಗೆ ಅಪ್ಪಟ ವೈರಿಯಾದ ಹಳೇಕೋಟೆಯಲ್ಲಿದ್ದ ಕಟ್ಟಡದಿಂದ ಈಗ ನಗರದ ಇಂಡಸ್ಟ್ರಿಯಲ್ ಎಸ್ಟೇಟಿನ ಬೀದಿಯ ಒಂದು ತುದಿಯಲ್ಲಿ ಗಾಳಿ-ಬೆಳಕಿರುವ, ಆದರೆ ತೀರಾ ಚಿಕ್ಕದಾದ ಒಳ ಆವರಣಕ್ಕೆ ಗ್ರಂಥಾಲಯವನ್ನು ಸ್ಥಳಾಂತರಿಸಲಾಗಿದೆ. 'ಇಂಡಸ್ಟ್ರಿಯಲ್ ಎಸ್ಟೇಟ್' ಎಂಬ ಹೆಸರು ವಿಶಾಲತೆಯನ್ನು ಸೂಚಿಸುತ್ತದೆಯಾದರೂ ವಾಸ್ತವದಲ್ಲಿ ಒಂದು ರಸ್ತೆಯ ಎರಡು ಬದಿಯಲ್ಲಿರುವ ಸಣ್ಣ ಪ್ರಮಾಣದ ಕಾರ್ಖಾನೆಗಳು, ಒಂದಿಷ್ಟು ಮನೆ ಕಟ್ಟಲು ಬೇಕಾಗುವ ಸಾಮಗ್ರಿಗಳನ್ನು ಮಾರುವ ಅಂಗಡಿಗಳು, ಒಂದು ಹೆರಿಗೆ ಆಸ್ಪತ್ರೆ, ಮಿಲ್ಲು, ಸಿಗರೇಟ್, ಇತ್ಯಾದಿ ಕೊಳ್ಳಲಿರುವ ಗೂಡಂಗಡಿ. ಅಲ್ಲೊಂದು ಕ್ಯಾಂಟೀನ್, ಒಂದು ಸಲೂನ್, ಜೊತೆಗೆ ಊರಿಗೆ ಬ್ರೆಡ್ ತಯಾರಿಸಿ ವಿತರಿಸುವ ಬೆಂಗಳೂರು ಫುಡ್ ಪ್ರಾಡಕ್ಟ್ಸ್... ಹೀಗೆ ಕಲಸುಮೇಲಾರವಾದ ಸ್ಥಳೀಯ ವಾಣಿಜ್ಯ ವ್ಯವಸ್ಥೆಯ ಒಂದು ಅಭಿವ್ಯಕ್ತ ರೂಪವೇ ನಮ್ಮ 'ಇಂಡಸ್ಟ್ರಿಯಲ್ ಎಸ್ಟೇಟ್.'

ಗ್ರಂಥಾಲಯವು ಒಂದು ಚೊಕ್ಕವಾದ ಕಟ್ಟಡದಲ್ಲಿ ಮನೆ ಮಾಡಿರುವುದೇನೋ ನಿಜ. ಆದರೆ, ನನ್ನಂತಹ ಹಳೆತಲೆಗಳು, "ಮೊದಲಿನ ಒಂದು ಸೊಬಗು ಇಲ್ಲಿ ಇನ್ನಿಲ್ಲ," ಎಂದು ಹೇಳುತ್ತಾರೆ. ಇಂಡಸ್ಟ್ರಿಯಲ್ ಎಸ್ಟೇಟಿಗೆ ಸಹಜವಾದ ದಡ-ಬಡ ಶಬ್ದಗಳು, ಲಾರಿ, ಪಿಕ್-ಅಪ್‌ಗಳ ಎಡೆಬಿಡದ ಹಾರ್ನ್‌ಗಳು... ಇತ್ಯಾದಿ ಗ್ರಂಥಾಲಯದ ವಾತಾವರಣಕ್ಕೆ ಸೂಕ್ತವಲ್ಲ ಎಂಬ ಆಲೋಚನೆಯು- ಅತ್ತ ಹೋದಾಕ್ಷಣ ತಾನಾಗಿಯೇ ಥಟ್ಟನೆ ಬಂದುಬಿಡುತ್ತದೆ.

ಹೊಸ ಗ್ರಂಥಾಲಯ

ಸಾರ್ವಜನಿಕ ಗ್ರಂಥಾಲಯಗಳ ಮಹತ್ವ, ಒಂದು ಊರಿನ ಸಾಮಾಜಿಕ ಜೀವನದಲ್ಲಿ ಅದರ ಪಾತ್ರ,  ಇನ್ನಿತರ ವಿಷಯಗಳ ಬಗ್ಗೆ ಚರ್ಚೆ ಮಾಡುವ ಉದ್ದೇಶ ನನ್ನದಲ್ಲ. ನನ್ನದು ಒಂದೇ ಒಂದು ಆಕ್ಷೇಪ, ಅದರ ಬಗ್ಗೆ ಮಾತ್ರ ಇಲ್ಲಿ ವಿಶ್ಲೇಷಿಸುವೆ. ಗ್ರಂಥಾಲಯ ಎಂದೆನಿಸಿಕೊಂಡರೂ ನಮ್ಮ ಈ ಸಾರ್ವಜನಿಕ ಜ್ಞಾನಭಂಡಾರದ ಪುಸ್ತಕಗಳು ಗಾತ್ರದಲ್ಲಿ ಕುಗ್ಗಿಹೋದದ್ದಂತೂ ನಿಜ. ಮೊದಲಿದ್ದ ಕಪಾಟುಗಟ್ಟಲೆ ಪುಸ್ತಕಗಳು, ಕೆಲವೊಂದರಲ್ಲಿ ದಶಕಗಳ ಹಿಂದೆ ನಾನು ಎರವಲು ಪಡೆದದ್ದು ಬಿಟ್ಟರೆ ಬೇರೆ ಯಾವ ಗ್ರಂಥಾಲಯದ ಕಾರ್ಡ್ ನಂಬರ್ ಇರದೆ ಇಡೀ ಹಾಳೆ ಖಾಲಿ ಬಿದ್ದಂತವು - ಅಲ್ಲಿ ಇಲ್ಲಿ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿಗೆ, ಕಾರಾಗೃಹದ ಗ್ರಂಥಾಲಯಕ್ಕೆ, ಕೆಲವೊಂದು ಒರಳೆ ತಿಂದು, ಗೆದ್ದಲು ಹಿಡಿದು ಎಸೆಯಲ್ಪಟ್ಟು ಈಗೆಲ್ಲ ಹಳೆಯ ಸಂಗ್ರಹಗಳೆಲ್ಲ ಚದುರಿಹೋಗಿವೆ.  

ಗ್ರಂಥಾಲಯಕ್ಕೆ ನುಗ್ಗಿದಾಕ್ಷಣ ದಿನಪತ್ರಿಕೆಗಳ ಕೋಣೆಯನ್ನು ದಾಟಿದರೆ ಕಾಣಿಸುವುದು ಕನ್ನಡದ ಕೆಲ ಹೊಸ ಪುಸ್ತಕಗಳ ಸಂಗ್ರಹ ಮತ್ತು ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾಗುವ ಪಠ್ಯಪುಸ್ತಕಗಳು - ಇತ್ತೀಚಿನ ದಿನಗಳಲ್ಲಿ ಗ್ರಂಥಾಲಯದ ಬಳಕೆ ಪರೀಕ್ಷೆಗಳಿಗೆ ನೋಂದಾಯಿಸಿಕೊಂಡ ವಿದ್ಯಾರ್ಥಿಗಳಿಂದಲೇ ಪ್ರಮುಖವಾಗಿ ಆಗೋದು. ಎಡಕ್ಕೆ ತಿರುಗಿದರೆ ಸಾಲು-ಸಾಲು, ಇನ್ನೊಂದೆರಡು ಸಾಲುಗಟ್ಟಲೆ ಪುಸ್ತಕಗಳು - ಪ್ರತಿಯೊಂದೂ ಹಿಂದಿ ಭಾಷೆಯವು!

ಈ ಲೇಖನ ಓದಿದ್ದೀರಾ?: ಹೊಸಿಲ ಒಳಗೆ-ಹೊರಗೆ | 'ಶಾಲೆ ಬಿಟ್ಟವರಲ್ಲಿ ಹೆಣ್ಣುಮಕ್ಕಳ ಸಂಖ್ಯೆಯೇ ಹೆಚ್ಚು' ಎಂಬುದರ ನಿಜವಾದ ಅರ್ಥವೇನು?

ಹಿಂದಿ ಭಾಷೆಯ ಬಗ್ಗೆ ಹಗೆತನ ನನಗಿಲ್ಲ. ಕರ್ನಾಟಕದ ಶಾಲೆಗಳಲ್ಲಿ ಮೂರು ಭಾಷೆಗಳನ್ನು ಕಲಿಸುವ ಶಿಕ್ಷಣ ನೀತಿ ಜಾರಿಯಲ್ಲಿದ್ದಾಗ ಹಿಂದಿಯನ್ನು ಮೂರನೇ ಭಾಷೆಯೆಂದು ಕಲಿಸುತ್ತಿದ್ದರು, ನಾನು ಸಹ ಕಲಿತಿದ್ದೇನೆ. ಹಿಂದಿ ಪುಸ್ತಕಗಳು, ಇನ್ನಿತರ ಭಾಷೆಯ ಪುಸ್ತಕಗಳು ಇರಕೂಡದು ಎಂದಲ್ಲವೇ ಅಲ್ಲ. ಸಮಸ್ಯೆ ಇರುವುದು ಮೊದಲೇ ಗಾತ್ರದಲ್ಲಿ ಕುಬ್ಜವಾಗಿರುವ ಸಾರ್ವಜನಿಕ ಗ್ರಂಥಾಲಯದಲ್ಲಿ ಹೆಚ್ಚೂಕಮ್ಮಿ ಶೇಕಡ 15-20ರಷ್ಟು ಭಾಗದಲ್ಲಿ ಹಿಂದಿ ಪುಸ್ತಕಗಳು ತುಂಬಿರುವುದು. ನೋಡಿದಾಗ ಒಂದಷ್ಟು ಕೋಪ, ಮತ್ತಷ್ಟು ಕಿರಿಕಿರಿ, ಅಸಹಾಯಕತೆ, ದುಗುಡ. ಅಲ್ಲಲ್ಲಿ ಪುಸ್ತಕಗಳನ್ನು ಕೈಗೆತ್ತಿ ಪುಟ ತಿರುವಿ ನೋಡಿದರೆ ಒಂದರಲ್ಲೂ ಎರವಲು ಪಡೆದವರ ಕಾರ್ಡ್ ನಂಬರ್‌ಗಳಾಗಲೀ, ಓದಿದ ಗುರುತಾಗಲೀ ಕಂಡುಬರಲಿಲ್ಲ. ಗ್ರಂಥ ಹಿಂದಿರುಗಿಸುವ ದಿನಾಂಕ ಚೀಟಿಯಲ್ಲಿ ಒಂದೂ ಸಹ ಎಂಟ್ರಿ ಇಲ್ಲದೆ ಖಾಲಿ ಹಾಳೆಗಳು!

ಕಿವಿಯಲ್ಲಿ ಪಿಸುಗುಟ್ಟಿದ ಮಾತು: 2015ರ ಅಂದಾಜಿಗೆ - ಕ್ರೋನಾಲಜಿ ಗಮನಿಸಿ - ಈ ಎಲ್ಲ ಹಿಂದಿ ಪುಸ್ತಕಗಳು ಗ್ರಂಥಾಲಯಕ್ಕೆ ಬಂದು ಬಿದ್ದವಂತೆ. ಯಾರೂ ಓದುವವರಿಲ್ಲ, ಕಳೆದ ಏಳು ವರುಷಗಳಲ್ಲಿ ಕೈಗೆತ್ತಿಕೊಂಡವರೂ ಅಪರೂಪ. ಇಷ್ಟೊಂದು ಸಾಲುಗಟ್ಟಲೆ ಹಿಂದಿ ಪುಸ್ತಕಗಳನ್ನು ಪ್ರದರ್ಶಿಸಬೇಕಾದದ್ದರಿಂದ ಕನ್ನಡ ಪುಸ್ತಕಗಳನ್ನು ಕಪಾಟುಗಳ ಮೇಲಿಡಲು ಜಾಗವಿಲ್ಲ ಎಂಬ ದೂರು. ಮೂಲೆಯ ಒಂದು ಬೀರುವಿನಲ್ಲಿ ಜ್ಞಾನಪೀಠ ಪುರಸ್ಕೃತರು ಮತ್ತಿತರೆ ಹೆಸರಾಂತ ಕನ್ನಡ ಲೇಖಕರ ಬೆರಳೆಣಿಕೆಯಷ್ಟು ಕಾದಂಬರಿಗಳು, ಎರಡೂವರೆ ಶೆಲ್ಫ್ ತುಂಬುವಷ್ಟು. ಅದರ ಎದುರಿಗೆ ಮುಖಪುಟವಾಗಲೀ, ಹೊತ್ತಿಗೆಯ ಬೆನ್ನಾಗಲೀ ಕಾಣಿಸದ ಹಾಗೆ ಕಟ್ಟಿಟ್ಟ ಪುಸ್ತಕದ ರಾಶಿಗಳು - ಗಂಟು ಬಿಚ್ಚುವಂತಿಲ್ಲ, ಯಾವ ಕಾಲದ ಯಾವ ಭಾಷೆಯವು ಎಂದು ನೋಡುವಂತಿಲ್ಲ.

ಹೊಸ ಗ್ರಂಥಾಲಯದ ಒಳಾಂಗಣ

ಮಡಿಕೇರಿ-ಕೊಡಗು ಒಂದಿಷ್ಟು ಲೇಖಕರು, ವಿದ್ವಾಂಸರನ್ನು ಹುಟ್ಟುಹಾಕಿದ್ದರೂ ಸಾಹಿತ್ಯಾಭಿಮಾನಕ್ಕೆ ಹೆಸರಾಂತ ಪ್ರದೇಶ ನಮ್ಮದಲ್ಲ. ಮೊದಲೇ ಹವ್ಯಾಸಕ್ಕೆಂದು, ಜ್ಞಾನಕ್ಕೆಂದು ಓದುವವರ ಸಂಖ್ಯೆ ಕಡಿಮೆ ಇರುವಲ್ಲಿ ಒಂದಿಷ್ಟು ಓದಬಹುದಾದ ಪುಸ್ತಕಗಳಲ್ಲಿ, ಓದಬಹುದಾದ ಭಾಷೆಯಲ್ಲಿ ಒಂದಿಷ್ಟು ವೈವಿಧ್ಯತೆಯನ್ನು ಪರಿಚಯಿಸುವ ಬದಲು, ಹಿಂದಿ ಹೇರಿಕೆಯನ್ನು ಈ ರೀತಿ ಹಿಂದಿನ ಬಾಗಿಲಿನಿಂದ ಕರೆತಂದಂತೆ ಮಾಡಿದರೆ, ಇರುವ 5-10 ಓದುಗರು ಸಹ ನಿರಾಶರಾಗಬಹುದೆಂಬ ಅರಿವು ಬರಲಾರದೇಕೆ?

ಇತಿಹಾಸವನ್ನು ಇಣುಕಿ ನೋಡಿದರೆ, ಅಧಿಕಾರಶಾಹಿ ವ್ಯವಸ್ಥೆಯಲ್ಲಿ ಓದುಗರನ್ನು, ತಮ್ಮದೇ ಆದ ಆಲೋಚನೆ, ಅಭಿಪ್ರಾಯಗಳನ್ನು ಹೇಳಬಹುದಾದ ಜನರನ್ನು ಮೊಟ್ಟಮೊದಲಿಗೆ ದೇಶದ್ರೋಹಿ, ಇನ್ನಿತರೆ ಹೆಸರು ಹಿಡಿದು ಹೀಯಾಳಿಸುವ, ಗೇಲಿ ಮಾಡುವ, ಶಿಕ್ಷಿಸುವ ಅಭ್ಯಾಸ ಬಹಳ ಹಳೆಯ ಕ್ರಮಗಳೆಂದು ತಿಳಿದುಬರುತ್ತದೆ.

ಈ ಲೇಖನ ಓದಿದ್ದೀರಾ?: ಗಾಯ ಗಾರುಡಿ | ದೊಡ್ಡಬಳ್ಳಾಪುರದ ಟೌನ್‍ಹಾಲ್‌ನಲ್ಲಿ ಮೇಧಾ ಪಾಟ್ಕರ್ ಎಬ್ಬಿಸಿದ 'ಲಗಾನ್' ಹಾಡಿನ ಹವಾ

ಗ್ರಂಥಾಲಯಕ್ಕೆ ಎಂತಹ ಪುಸ್ತಕಗಳು ಬರಬೇಕು, ಅವುಗಳನ್ನು ಕೊಂಡುಕೊಳ್ಳಲು ಬಿಡುಗಡೆ ಮಾಡುವ ಬಜೆಟ್ - ಇವುಗಳ ಹಿಂದಿರುವ ರಾಜಕೀಯದಿಂದ ಅಖೈರಿನಲ್ಲಿ ನಷ್ಟವಾಗುವುದು ಸ್ಥಳೀಯ ಭಾಷೆಗೆ, ಸ್ಥಳೀಯ ಓದುಗರಿಗೆ. #ಹಿಂದಿಹೇರಿಕೆಬೇಡ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಷ್‌ಟ್ಯಾಗ್ ಬಳಸುವಾಗ ನಮ್ಮೆಲ್ಲರ ಮನಸ್ಸಿಗೆ ಬರುವುದು ಒಬ್ಬ ರಾಜಕಾರಣಿಯ ಹೇಳಿಕೆ, ಎಲ್ಲೋ ಅನವಶ್ಯ ಘೋಷಿಸಿದ ಹಿಂದಿ ಪರ ಕಾರ್ಯಕ್ರಮ... ಹೀಗೆ. ಆದರೆ, ನಮ್ಮ-ನಮ್ಮ ಊರುಗಳಲ್ಲಿ ನಮಗೇ ತಿಳಿಯದಂತೆ, ಜಾಣ್ಮೆಯಿಂದ ಕೇಂದ್ರದ ಅನವಶ್ಯ ನೀತಿಗಳು ಬಂದು ಸೇರಿಕೊಳ್ಳುತ್ತಿರುವುದು ಆಶ್ಚರ್ಯವೂ ಹೌದು, ಅಪಾಯಕಾರಿಯೂ ಹೌದು. ಸದ್ಯಕ್ಕೆ ಜಾಲತಾಣಗಳಲ್ಲಿ, ಪತ್ರಿಕೆಗಳ ಅಂಕಣಗಳಲ್ಲಿ ನಮಗೆ ವಸಾಹತುಶಾಹಿಯ ಕಾರ್ಯನೀತಿ ಎಂದೆನಿಸುತ್ತಿರುವ ಹಿಂದಿ ಹೇರಿಕೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವಾಗ, ನಮ್ಮ ಹಿತ್ತಿಲಿನಲ್ಲಿಯೇ ಇಂತಹ ಕೃತ್ಯಗಳು ಹಲವು ವರ್ಷಗಳ ಹಿಂದೆಯೇ ನಡೆದು ಮುಂದುವರಿಯುತ್ತಿರುವುದರ ಅರಿವು ನಮಗಿಲ್ಲದಿರಬಹುದು.

ಇತಿಹಾಸದ ಪುಟಗಳನ್ನೂ ನೋಡುವ. ದೈನಂದಿನದ ನಮ್ಮ ನುಡಿ, ನಮಗೆ ತಾಯಿನುಡಿಯಾಗಿ, ತಂದೆನುಡಿಯಾಗಿ, ನಾವಿರುವ ಊರಿನಿಂದ, ಹಿಂದೆಂದೋ ವಸಾಹತುವನ್ನಾಗಿಸಿದ್ದವರಿಂದಲೋ, ಹೇಗೆಯೇ ಬಂದಿರಲಿ... ಆ ನುಡಿ, ಅದರ ಬಗ್ಗೆಯಿರುವ ನಮ್ಮ ಭಾವನೆಗಳು, ಅವೆಲ್ಲ ನಮ್ಮಲ್ಲಿ ಗಾಢವಾಗಿ ಮನೆಮಾಡಿರುವ ವೈಯಕ್ತಿಕ ಅಂಶಗಳು. ಹಿಂದೆ ತಿರುಗಿ ನೋಡಿದರೆ, ಭಾಷಾ ಹೇರಿಕೆಯಿಂದಾದ ಗಲಭೆಗಳು, ದೇಶಗಳ ವಿಭಜನೆ, ಯುದ್ಧಗಳು, ದೌರ್ಜನ್ಯಗಳು ಕಂಡುಬರುತ್ತವೆ. ಯಾವುದೇ ಭಾಷೆಯನ್ನು ಬಲವಂತವಾಗಿ ಹೇರುವುದರಿಂದ ಅಲ್ಪಾವಧಿಯ ರಾಜಕೀಯ ಉಪಯೋಗವಾಗಬಹುದೇ ವಿನಾ ಬೇರೇನೂ ಪ್ರಯೋಜನವಿಲ್ಲ. ಬದಲಿಗೆ, ಇದರಿಂದ ಸಮಾಜಕ್ಕೆ, ಸಾಂಸ್ಕೃತಿಕ ಬೆಳವಣಿಗೆಗೆ, ದೇಶದ ನೈತಿಕ ಆರೋಗ್ಯಕ್ಕೆ ಧಕ್ಕೆಯಾಗುವುದಂತೂ ತಪ್ಪಿದ್ದಲ್ಲ.

ಸಾಂದರ್ಭಿಕ ಚಿತ್ರ

ಹಿಂದಿ ಹೇರಿಕೆ ಬೇಡ. ಎಲ್ಲ ಭಾಷೆಗಳೂ ಸಮಾನ ಪ್ರಾಮುಖ್ಯತೆ ಪಡೆಯಬೇಕೆಂಬುದು ನಿಜ.  ಅದರಲ್ಲೂ, ನಮ್ಮ-ನಮ್ಮ ಅಟ್ಟದ, ಬೀದಿಯ, ಕೆಲಸಗಳಲ್ಲಿ ಬಳಸುವ ಭಾಷೆಗಳಿಗೆ ಮೊದಲ ಆದ್ಯತೆ ದೊರೆಯಬೇಕು - ನಮ್ಮಿಂದ, ಪ್ರಜಾಪ್ರಭುತ್ವದ ಹೆಸರಿನಲ್ಲಿ ಆಯ್ಕೆಯಾಗಿ ಬಂದ ಸರಕಾರಗಳಿಂದ -  ಎಂಬುದರಲ್ಲಿ ಯಾವುದೇ ಚರ್ಚೆ, ಚೌಕಾಶಿ ಇರಕೂಡದು. ನಮ್ಮೂರಿನ ಗ್ರಂಥಾಲಯಗಳಲ್ಲಿ ಒಳ್ಳೆಯ, ಸೂಕ್ತ, ಜನರಿಗೆ ಓದಬಹುದಾದ ಪುಸ್ತಕಗಳು, ಓದಬಹುದಾದ ನುಡಿಯಲ್ಲಿ ಕಪಾಟಿನುದ್ದಕ್ಕೂ ನೋಡುವ ಆಶಯದೊಂದಿಗೆ...

ನಿಮಗೆ ಏನು ಅನ್ನಿಸ್ತು?
2 ವೋಟ್
eedina app