ಊರೇ ದ್ಯಾವ್ರು | 'ಇರೋರಿಗೇ ಮನೆ ಕೊಡೋದು ನೀವೆಲ್ಲ, ನಮ್ಮಂತ ಬಡವರು ಎಲ್ಲಿ ಕಾಣ್ತಾರೆ!' ಎಂಬ ತಗಾದೆಯ ನಂತರ...

Vasati Adalat

ಊರೂರು ಭೇಟಿ ಸಮಯದಲ್ಲಿ ಪಾನಕ, ಮಜ್ಜಿಗೆ, ಕೆಲವೊಮ್ಮೆ ನಾಟಿ ಕೋಳಿ ಸಮಾರಾಧನೆ ಆಗ್ತಾ ಇತ್ತು. ಕಾಡು ಹಣ್ಣುಗಳು, ಮನೆಯಂಗಳದ ಸುಂದರ ಹೂವುಗಳು ನಮಗೆ ಕಾಣಿಕೆಯಾಗಿ ಸಿಗತೊಡಗಿದವು. ಈ ಖುಷಿ ತುಂಬಾ ದಿನ ಉಳೀಲಿಲ್ಲ. ಬಲಾಢ್ಯರಿಂದ ಧಮಕಿ, ರಾತ್ರೋರಾತ್ರಿ ಎದ್ದುನಿಂತ ಅಕ್ರಮ ಗುಡಿಸಲುಗಳು ನಮ್ಮ ಕೆಲಸಕ್ಕೆ ಭಾರೀ ಸಮಸ್ಯೆ ತಂದೊಡ್ಡಿದ್ದವು

ಪ್ರತೀ ಕುಟುಂಬಕ್ಕೆ ಸೂರು, ಗುಡಿಸಲು ಮುಕ್ತ ಗ್ರಾಮ, ಈ ಆಶಯಗಳನ್ನು ಇಟ್ಟುಕೊಂಡು ಪ್ರತೀ ವರ್ಷ ಇಂತಿಷ್ಟು ಫಲಾನುಭವಿಗಳನ್ನ ಆಯ್ಕೆ ಮಾಡಿ ವಸತಿ ಯೋಜನೆಯಡಿ ಮನೆ ನೀಡುತ್ತಿದ್ದರೂ, ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಅನ್ನೋ ಹಾಗೇ ಗುಡಿಸಲು ಮುಕ್ತ ಗ್ರಾಮದ ಆಶಯ ಅಷ್ಟು ಬೇಗ ಈಡೇರುವುದಿಲ್ಲ ಎಂಬ ಸತ್ಯ ಎಂದೋ ಅರಿವಾಗಿತ್ತು.

"ಇರೋರಿಗೆ ಮನೆ ಕೊಡೋದು ನೀವೆಲ್ಲ, ನಮ್ಮಂತ ಬಡವರು ಎಲ್ಲಿ ಕಾಣ್ತಾರೆ," - ಇದು ಅನುದಿನದ ತಗಾದೆ. ಅದೆಷ್ಟೇ ಎಚ್ಚರ ವಹಿಸಿದರೂ ಸೂಕ್ತ ಫಲಾನುಭವಿ ಆಯ್ಕೆ ಆಗಿಲ್ಲ ಅಂತಲೋ ಅಥವಾ ಮಂಜೂರಾಗಿರುವ ಮನೆಗಳು ಸಾಕಾಗುವುದಿಲ್ಲ ಅಂತಲೋ ಗಲಾಟೆಗಳು ಸಾಮಾನ್ಯವಾಗಿದ್ದವು. ಗ್ರಾಮೀಣ ವಸತಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಲವು ಯೋಜನೆಗಳಿದ್ದರೂ, ಮೂಲ ಸೌಕರ್ಯ, ಜಾಗದ ತಕರಾರುಗಳು, ಅನುಷ್ಠಾನ ಹಂತದಲ್ಲಿನ ಸಮಸ್ಯೆಗಳು, ಬ್ಯಾಂಕ್ ಸಾಲ ಸೌಲಭ್ಯ ಮುಂತಾದ ಕಾರಣಗಳಿಂದ ಫಲಾನುಭವಿಗಳಿಗೆ ಸಮರ್ಪಕವಾಗಿ ಯೋಜನೆ ತಲುಪುತ್ತಿಲ್ಲ ಎಂಬುವು ಕಂಡುಬಂದ ಕಾರಣಗಳು.

ಹೆಚ್ಚಾಗಿ ಜೇನು ಕುರುಬರು ವಾಸಿಸುವ ಮತ್ತು ಇನ್ನುಳಿದಂತೆ ಕೆಳ ಮಧ್ಯಮ ವರ್ಗದವರೇ ಹೆಚ್ಚಾಗಿರುವ ಮಾಲಂಗಿ ಗ್ರಾಮ ಪಂಚಾಯತ್‌ನಲ್ಲಿ, ಮನೆಗಳ ಬೇಡಿಕೆಯು ತುಸು ಹೆಚ್ಚಾಗಿಯೇ ಇತ್ತು. ಕಚ್ಚಾ ಮನೆಗಳು, ಒಂದೇ ಮನೆಯಲ್ಲಿ ಮೂರ್ನಾಲ್ಕು ಕುಟುಂಬಗಳು, ನಿರಂತರ ಸುರಿವ ಮಳೆಗೆ ಧರೆಗುರುಳಿದ ಮನೆಗಳು, ಹೀಗೆ ಬೇಡಿಕೆಯ ಪಟ್ಟಿ ದೊಡ್ಡದಿತ್ತು. ಎಷ್ಟೋ ಬಡ ಜನರಿಗೆ ಅರ್ಹತೆ ಇದ್ದಾಗಿಯೂ ಗ್ರಾಮ ಸಭೆಗೆ ಬರುವುದಾಗಲೀ, ಅಧಿಕಾರಿಗಳಿಗೆ ಅರ್ಜಿ ಸಲ್ಲಿಸುವುದಾಗಲೀ ಆಗದ ಮಾತು. ಒಂದೋ ಹಿಂಜರಿಕೆ ಅಥವಾ ಬೆಂಬಲ ಇಲ್ಲದಿರುವಿಕೆ. ಹೀಗಾಗಿ ಪ್ರತೀ ಬಾರಿ ಮನೆ ಹಂಚಿಕೆಯ ಸಮಯದಲ್ಲಿ ತುರ್ತಾಗಿ ಮನೆ ನೀಡಬೇಕಾದ ಫಲಾನುಭವಿಗಳು ಕೈ ಬಿಟ್ಟುಹೋಗುವ ಸಂಭವಗಳು ಇದ್ದವು.

Image
Malangi

ಗ್ರಾಮಗಳ ಭೇಟಿ ಸಮಯದಲ್ಲಿ ಬಿದ್ದ ಮನೆಗಳ ಮುಂದೆ ಕುಳಿತ ಮಂದಿ, ಹತ್ತನ್ನೆರಡು ಮಂದಿ ವಾಸಿಸುವ ಗೂಡಿನಂತಹ ಮನೆಗಳು, ಟಾರ್ಪಲಿನ್ ಬಿಗಿದು ಕಟ್ಟಿರೋ ಮನೆಗಳು, ಆಗಲೋ ಈಗಲೋ ಧರೆಗುರುಳುವ ಲಕ್ಷಣ ತೋರುತ್ತಿರುವ ಮನೆಗಳನ್ನು ನೋಡಿ, ಇನ್ನೆಷ್ಟು ವರ್ಷಕ್ಕೆ ನಾವು ಗುಡಿಸಲು ಮುಕ್ತ ಗ್ರಾಮ ಪಂಚಾಯಿತಿಯನ್ನಾಗಿಸುವುದು ಎಂಬ ಯೋಚನೆ ಇನ್ನಿಲ್ಲದಂತೆ ಕಾಡುತ್ತಿತ್ತು. 1,351 ಕುಟುಂಬಗಳು, 6,000 ಜನಸಂಖ್ಯೆ ಇರುವ ಗ್ರಾಮ ಪಂಚಾಯಿತಿಯಲ್ಲಿ ಸರಿಸುಮಾರು 700 ಮನೆಗಳ ಬೇಡಿಕೆ ಇದೆ ಎಂದು ಪ್ರಾಥಮಿಕ ಸರ್ವೆಯಲ್ಲಿ ಕಂಡುಕೊಂಡೆವು.

ಅಲ್ಲಿನ ಜನರ ಅದೃಷ್ಟವೋ ಏನೋ ಹೊಸದಾಗಿ ಚುನಾಯಿತರಾದ ಪ್ರತಿನಿಧಿಗಳು ಹಲವು ಅಭಿವೃದ್ಧಿಯ ಕನಸುಗಳನ್ನು ಹೊತ್ತುಕೊಂಡೇ ಬಂದಿದ್ದರು. ಮತ್ತೊಮ್ಮೆ ಗುಡಿಸಲು ಮುಕ್ತ ಗ್ರಾಮದ ಕನಸು ಪುಟಿಯತೊಡಗಿತು. ಮೊದಲ ಸಭೆಯಲ್ಲಿ ಈ ಕುರಿತಂತೆ ಸುದೀರ್ಘ ಚರ್ಚೆಗಳಾದವು. ಸೌಲಭ್ಯ ಅರ್ಹರಿಗೆ ತಲುಪಲು ಮಾಡಬೇಕಾದ ಬದಲಾವಣೆಗಳು ಮತ್ತು ಅದಕ್ಕೆ ಜನಪ್ರತಿನಿಧಿಗಳ, ಅಧಿಕಾರಿಗಳ ಜವಾಬ್ದಾರಿ ಕುರಿತು ಮಾತುಕತೆಗಳಾದವು. ಯುವಕರೇ ಹೆಚ್ಚಾಗಿದ್ದ ಚುನಾಯಿತ ತಂಡದಲ್ಲಿ ಹೊಸತನ್ನು ಸಾಧಿಸುವ ಉತ್ಸಾಹ ಚಿಮ್ಮುತ್ತಿತ್ತು.

ಇದನ್ನು ಓದಿದ್ದೀರಾ?: ಜತೆಗಿರುವನೇ ಚಂದಿರ? | ಮೈಸೂರಿನ ಟಿಪ್ಪು ಸುಲ್ತಾನ ಅಬ್ಬನ 'ಟಿಪ್ಪು'ವಾದ ಸೋಜಿಗ

ಸ್ಥಳೀಯ ಆಡಳಿತ ನೀಡುವ ದಾಖಲಾತಿಗಳನ್ನೇ ಇಟ್ಟುಕೊಂಡು ಬ್ಯಾಂಕುಗಳು ಸಾಲ ನೀಡುವುದು, ಸಾಲ ಮರು ಪಾವತಿ ಅವಧಿ ವಿಸ್ತರಿಸುವುದು, ಸ್ವಹಾಯ ಸಂಘಗಳ ಮೂಲಕ ಸಾಲ ವ್ಯವಸ್ಥೆ, ಜಾಗದ ತಕರಾರುಗಳನ್ನು ಬಗೆಹರಿಸುವುದು ಚಾಲ್ತಿಗೆ ಬಂದವು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಕೆಲಸಕ್ಕೆ ಮುಂದಾಯಿತು. ಸಂಬಂಧಿಸಿದ ಇಲಾಖೆಗಳು ಮತ್ತು ಸಕ್ಷಮ ಪ್ರಾಧಿಕಾರಗಳ ಜೊತೆ ಮಾತುಕತೆಗಳಾದವು. ಅಧಿಕಾರಿಗಳು ಮತ್ತು ಆಯಾ ಗ್ರಾಮದ ಜನ ಪ್ರತಿನಿಧಿಗಳು ಪ್ರತೀ ಮನೆಯನ್ನು ಸಮೀಕ್ಷೆ ಮಾಡಿ, ʼವಸತಿ ಅದಾಲತ್ʼ ನಡೆಸಲು ತೀರ್ಮಾನಿಸಲಾಯಿತು.

2011ರಲ್ಲಿ ನಡೆದ ಸಾಮಾಜಿಕ, ಆರ್ಥಿಕ ಹಾಗೂ ಜಾತಿ ಗಣತಿಯ ಸಮೀಕ್ಷೆ ಪಟ್ಟಿ ಜೊತೆಯಲ್ಲಿ ಇಟ್ಟುಕೊಂಡು, ಪ್ರಸ್ತುತ ಸ್ಥಿತಿಗತಿಯ ಅಧ್ಯಯನಕ್ಕೆ ಮುಂದಾದೆವು. ಅರ್ಹ ಫಲಾನುಭವಿಗಳನ್ನು ಗುರುತಿಸಿ ಪಟ್ಟಿ ಮಾಡಿ, ಮುಂದಿನ ಐದು ವರ್ಷಗಳಲ್ಲಿ ಗುಡಿಸಲು ಮುಕ್ತ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ತೊಡಗಿಸಿಕೊಂಡೆವು. ಊರೂರು ಭೇಟಿ ಸಮಯದಲ್ಲಿ ಪಾನಕ, ಮಜ್ಜಿಗೆ, ಕೆಲವೊಮ್ಮೆ ನಾಟಿ ಕೋಳಿ ಸಮಾರಾಧನೆ ಆಗ್ತಾ ಇತ್ತು. ಜೊತೆಗೆ ಕಾಡು ಹಣ್ಣುಗಳು, ಮನೆಯಂಗಳದ ಸುಂದರ ಹೂವುಗಳು ಕೂಡ ನಮಗೆ ಕಾಣಿಕೆಯಾಗಿ ಸಿಗತೊಡಗಿದವು. ಈ ಖುಷಿ ತುಂಬಾ ದಿನ ಉಳಿಯಲಿಲ್ಲ. ಬಲಾಢ್ಯರಿಂದ ಧಮಕಿ, ರಾತ್ರೋರಾತ್ರಿ ಎದ್ದುನಿಂತ ಗುಡಿಸಲುಗಳು ನಮ್ಮ ಕೆಲಸಕ್ಕೆ ಭಾರೀ ಸಮಸ್ಯೆ ತಂದೊಡ್ಡಿದ್ದವು.

Image
Malangi

ಮೊದಲೇ ತೀರ್ಮಾನಿಸಿದಂತೆ ಬಡವರ ಮನೆಯ ಒಲೆ ಬೆಚ್ಚಗಿರಿಸಲು ನಮ್ಮ ಆಡಳಿತ ಮಂಡಳಿ ಶ್ರಮಿಸತೊಡಗಿತು. ನಾವೆಲ್ಲರೂ ಒಂದೆಡೆ ಕಲೆತು ಅದೆಷ್ಟೇ ಒತ್ತಡ ಬಂದರೂ ಪಾರದರ್ಶಕತೆ ಕಾಯ್ದುಕೊಳ್ಳುವ ಕುರಿತು ಪ್ರಮಾಣ ಮಾಡಿದೆವು. ಸಮೀಕ್ಷೆಯಲ್ಲಿ ಸರಿಸುಮಾರು 750 ಫಲಾನುಭವಿಗಳನ್ನು ಗುರುತಿಸಲಾಯಿತು. ಹೆಚ್ಚು ಸಮಸ್ಯೆಗೆ ಸಿಲುಕಿರುವವರನ್ನು ಆದ್ಯತೆಯಾಗಿ ಪರಿಗಣಿಸಿ ಪಟ್ಟಿ ಮಾಡಿ ಹಂತಹಂತವಾಗಿ ಮನೆ ನೀಡಲು ತೀರ್ಮಾನಿಸಿದೆವು. ಅಷ್ಟೂ ಜನರ ದಾಖಲಾತಿಗಳನ್ನು ಸರಿಪಡಿಸಲಾಯಿತು.

ಮನೆಗೆ ಸಹಾಯಧನ ನೀಡಿದರೂ ಆರ್ಥಿಕ ಸಮಸ್ಯೆಯಿಂದಾಗಿ ಮನೆ ನಿರ್ಮಾಣ ಮಾಡಿಕೊಳ್ಳಲು ಆಗದಂತಹ ಅದೆಷ್ಟೋ ಕುಟುಂಬಗಳು ನಮ್ಮ ಕಣ್ಣ ಮುಂದೆ ಇದ್ದವು. ಸ್ವಸಹಾಯ ಸಂಘ, ಬ್ಯಾಂಕುಗಳಿಂದ ಸಾಲದ ವ್ಯವಸ್ಥೆ ಮಾಡಲಾಯಿತು. ಕಟ್ಟಡ ನಿರ್ಮಾಣ ಸಾಮಗ್ರಿಗಳ ಪೂರೈಕೆದಾರರಿಂದ ಮುಂಗಡವಾಗಿ ಮರಳು, ಇಟ್ಟಿಗೆ, ಸಿಮೆಂಟ್‌ಗಳನ್ನು ಕೊಡಿಸಲಾಯಿತು. ಕೆಲವರು ಸಿರಿವಂತರು ಸಹಾಯ ಮಾಡಲು ಮುಂದೆ ಬಂದರು. ಇಲ್ಲಿಯವರೆಗೆ ವಿವಿಧ ಸಮುದಾಯಗಳ 651 ಮಹಿಳೆಯರಿಗೆ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಸಹಾಯಧನ ನೀಡಲಾಯಿತು. ಪುಟ್ಟದಾದರೂ ಒಂದು ಭದ್ರ ಮನೆಯ ಕನಸು ಹಲವರಿಗೆ ನನಸಾಯಿತು. ಅರ್ಹರಿಗೆ ಸೌಲಭ್ಯ ತಲುಪಿಸಿದ ತೃಪ್ತಿ ಆಡಳಿತ ಮಂಡಳಿಗೆ ದೊರಕಿತು.

ನಿಮಗೆ ಏನು ಅನ್ನಿಸ್ತು?
1 ವೋಟ್