ಊರೇ ದ್ಯಾವ್ರು | ಕುಡಿಯುವ ನೀರಿನ ಸಂಕಷ್ಟದಿಂದ ಪಾರಾಗಲು ಮಾಲಂಗಿ ಮಾದರಿ

Malangi Story 1

ಗ್ರಾಮ ಪಂಚಾಯ್ತಿಯ ತಂಡವೊಂದು ಮನಸ್ಸು ಮಾಡಿದರೆ, ಹಳ್ಳಿಗಳಲ್ಲಿ ಏನೆಲ್ಲ ಸಕಾರಾತ್ಮಕ ಬದಲಾವಣೆ ಮಾಡಬಹುದು ಎಂಬುದಕ್ಕೆ ಇದೊಂದು ಗಟ್ಟಿ ನಿದರ್ಶನ. ಕುಡಿಯುವ ನೀರನ್ನು ಪೋಲು ಮಾಡುತ್ತಿದ್ದವರೇ, ನೀರಿನ ಸಂರಕ್ಷಣೆಗೆ ಟೊಂಕ ಕಟ್ಟಿ ನಿಂತ ಬಗೆ ಸ್ಫೂರ್ತಿದಾಯಕ. ಕುಡಿಯುವ ನೀರಿನ ಸಮಸ್ಯೆಗೆ ಸಿಲುಕಿದ ಗ್ರಾಮ ಪಂಚಾಯ್ತಿಗಳಿಗೆ ಇಲ್ಲಿದೆ ಮಾದರಿ ದಾರಿ

ಈ ಮಾಲಂಗಿ ಎಂಬೋ ಊರಿಗೆ ಬಸ್ ವ್ಯವಸ್ಥೆ ಇಲ್ಲ. ಶಾಲಾ ಮಕ್ಕಳಿಗಾಗಿ ಬೆಳಗ್ಗೆ ಮತ್ತು ಸಂಜೆ ಎರಡು ಬಾರಿ ಪಿರಿಯಾಪಟ್ಟಣದಿಂದ ಬರುವ ಬಸ್ ಬಿಟ್ಟರೆ, ಬಹುತೇಕ ಜನರು ನಂಬಿಕೊಂಡಿರೋದು ಅವರದೇ ಸ್ವಂತ ವಾಹನ ಅಥವಾ ಪಿಕಪ್ ಗಾಡಿಗಳು.

ಇಂತಿಪ್ಪ ಊರಿನಲ್ಲಿ ಕೆಲಸ ಮಾಡೋ ನಾನು, ನಿತ್ಯ ಮೈಸೂರಿನಿಂದ ಬಂದು, ಮುಖ್ಯರಸ್ತೆಯಲ್ಲಿ ಇಳಿದು, ನಮ್ಮ ಆಫೀಸ್ ಸಿಬ್ಬಂದಿ ಜೊತೆ ಬೈಕ್‌ನಲ್ಲಿ ಮೂರು ಕಿಲೋಮೀಟರ್ ಪ್ರಯಾಣ ಮಾಡಿ ಆಫೀಸ್ ಮುಟ್ಟುತ್ತಿದ್ದೆ. ಐದು ನಿಮಿಷದಲ್ಲಿ ಮುಗಿಯಬೇಕಿದ್ದ ಈ ಪ್ರಯಾಣ ಅರ್ಧ ಗಂಟೆ ತೆಗೆದುಕೊಳ್ಳುತ್ತಿತ್ತು. ಕಾರಣ, ದಾರಿಯುದ್ದಕ್ಕೂ ಬಂದ್ ಮಾಡದ ನಲ್ಲಿಗಳನ್ನು, ಸೂರ್ಯನ ಜೊತೆ ಜಿದ್ದಿಗೆ ಬಿದ್ದಂತೆ ಉರಿಯುತ್ತಲೇ ಇರುವ ಬೀದಿದೀಪಗಳನ್ನು ಆರಿಸಿ ಹೋಗುವ ಕೆಲಸ. ನನ್ನ ಈ ಕೆಲಸವನ್ನು ನಿತ್ಯ ನೋಡುತ್ತ ಇದ್ದರೂ, ಜನ ಮಾತ್ರ ತಮಗೂ ಆ ವಿಷಯಗಳಿಗೂ ಸಂಬಂಧ ಇಲ್ಲ ಎನ್ನುವ ಹಾಗೆ ಲೋಕಾಭಿರಾಮದ ಮಾತುಗಳಲ್ಲಿ ಮುಳುಗಿರುತ್ತಿದ್ದರು.

Image
Malangi Story 2

ಕೊನೆಗೆ ಇದು ಎಲ್ಲಿಗೆ ಮುಟ್ಟಿತು ಅಂದ್ರೆ, "ಇನ್ನೇನ್ ಮೇಡಂ ಬರೋ ಹೋತ್ತಾಯ್ತು ಬಿಡ್ರೋ... ನಲ್ಲಿ ಆಫ್ ಮಾಡ್ಕಂತಾರೆ," ಅನ್ನೋ ಮಟ್ಟಿಗೆ ಜನ ನಿರಾಳ ಆಗಿರುತ್ತಿದ್ದರು. ಇದ್ಯಾಕೋ ಒಳ್ಳೆಯ ಬೆಳವಣಿಗೆ ಅಲ್ಲ ಅಂದುಕೊಂಡು, ನೀರಿನ ಮಹತ್ವ, ಬಳಕೆ, ನಿರ್ವಹಣೆ ಕುರಿತಂತೆ ಹೆಚ್ಚಿನ ಅರಿವು ಮೂಡಿಸುವ ತೀರ್ಮಾನಕ್ಕೆ ಬಂತು ನಮ್ಮ ಆಡಳಿತ ಮಂಡಳಿ. ಆದಾಗ್ಯೂ ಜನರಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ.

ಹೀಗೆ ಯರ‍್ರಾಬಿರ‍್ರಿ ನೀರು ಖರ್ಚು ಮಾಡುವ ಈ ಜನ, ಡಿಸೆಂಬರ್ ತಿಂಗಳಿನಲ್ಲಿ ಮಾತ್ರ ಹ್ಯಾಪುಮೋರೆಯೊಂದಿಗೆ ಖಾಲಿ ಕೊಡ ಹಿಡಿದು ನಲ್ಲಿ ಮುಂದೆ ನೀರಿಗಾಗಿ ಕಾಯುತ್ತ ನಿಲ್ಲುತ್ತಿದ್ದರು! ಕುಡಿಯುವ ನೀರಿಗೂ ತತ್ವಾರ ಇಲ್ಲಿ. ಸಾರ್ವಜನಿಕ ಕುಡಿಯುವ ನೀರಿನ ಸರಬರಾಜು ಡಿಸೆಂಬರ್ ಹೊತ್ತಿಗೆ ಕುಸಿಯತೊಡಗುವುದು ಸಾಮಾನ್ಯ ಎನಿಸಿಬಿಟ್ಟಿತ್ತು. ವರ್ಷದಿಂದ ವರ್ಷಕ್ಕೆ ಅಂತರ್ಜಲ ಮಟ್ಟವೂ ಕುಸಿದಿತ್ತು. ಬೇಸಿಗೆಯಲ್ಲಿ ಕುಡಿಯುವ ನೀರು ಒದಗಿಸುವುದು ಹೇಗೆ ಅಂತ ಅಧಿಕಾರಿಗಳ ಚಿಂತೆಯಾದರೆ, ಸರಿಯಾಗಿ ನೀರು ಕೊಡದಿದ್ದರೆ ಮುಂದಿನ ಚುನಾವಣೆಯಲ್ಲಿ ವೋಟು ಸಿಗುವುದಿಲ್ಲ ಅನ್ನೋ ಚಿಂತೆ ಚುನಾಯಿತ ಸದಸ್ಯರದು.

Image
Malangi Story 4

"ಏನಾದ್ರೂ ಮಾಡ್ಲೇಬೇಕು ಮೇಡಂ, ಇಲ್ಲಾಂದ್ರೆ ವೋಟು ಹಾಕಿರೋ ಜನ ನಮ್ಮನ್ನ ಮನೇಲಿ ಇರಾಕ್ ಬಿಡಾದಿಲ್ಲ," ಅನ್ನೋದು ನಮ್ಮ ಜನಪ್ರತಿನಿಧಿಗಳ ನಿತ್ಯದ ವರಾತ. ಕೊಡಗಿಗೆ ಹೊಂದಿಕೊಂಡಂತಿದ್ದ, ಸಾಕಷ್ಟು ಮಳೆಯನ್ನೂ ಕಾಣುವ ಈ ಹಳ್ಳಿಗಳಲ್ಲಿ ಬಿದ್ದ ಮಳೆನೀರು ಎಲ್ಲಿಗೆ ಹೋಗುತ್ತಿದೆ ಅನ್ನೋದೇ ಯಕ್ಷಪ್ರಶ್ನೆ ಆಗಿತ್ತು.

ತಡ ಮಾಡದೆ ಎಲ್ಲ ಹಳ್ಳಿಯಲ್ಲೂ ನೀರಿನ ಬಳಕೆ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಸಭೆ ಮಾಡಲು ಶುರು ಮಾಡಿದೆವು. ನಮ್ಮ ಮಹಿಳಾ ಜನಪ್ರತಿನಿಧಿಗಳೇ ಇದರ ಮುಂದಾಳತ್ವ ವಹಿಸಿಕೊಂಡರು. ವಿದ್ಯಾವಂತ, ಆಸಕ್ತಿಯುಳ್ಳ ಸದಸ್ಯರ ತಂಡ ರಚಿಸಿ, ವಿಷಯ ತಜ್ಞರೊಂದಿಗೆ ಸಮಲೋಚಿಸಿ, ಮುಂದಿನ ತುರ್ತು ನಡೆಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಯಿತು.

ಇದನ್ನು ಓದಿದ್ದೀರಾ?: ಹಳ್ಳಿ ಹಾದಿ | 26 ಎಕರೆ ಭೂಮಿ, 14 ರೈತರು, ಒಂದೇ ಬಾವಿ, ಸಮೃದ್ಧ ಫಸಲು

ಇಚ್ಛಾಶಕ್ತಿಯೊಂದಿದ್ದರೆ ದಾರಿಗಳು ತಾವಾಗಿಯೇ ತೆರೆದುಕೊಳ್ಳುತ್ತವೆ ಅನ್ನುವ ಮಾತು ಅಕ್ಷರಶಃ ದಿಟವಾಯಿತು. ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ (ಮನರೇಗಾ), ನೈಸರ್ಗಿಕ ಮೂಲಗಳ ಸಂರಕ್ಷಣೆ ಅಡಿಯಲ್ಲಿ ಮಳೆನೀರು ಕೊಯ್ಲು, ನೀರು ಮರುಪೂರಣ ಘಟಕಗಳು, ಕೆರೆ ಹೂಳೆತ್ತುವ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು ಅವಕಾಶ ನೀಡಲಾಯಿತು.

ಈಗಾಗಲೇ ನೀರಿನ ಬವಣೆ ಅನುಭವಿಸಿದ್ದ ಜನ ಎಲ್ಲ ರೀತಿಯ ಸಹಕಾರಕ್ಕೂ ಸಿದ್ಧರಾದರು. ಎಲ್ಲ ಊರಿನ ಗ್ರಾಮ ಪಂಚಾಯ್ತಿ ಸದಸ್ಯರೂ ತಮ್ಮ ಕೆಲಸಗಳನ್ನು ಬಿಟ್ಟು ನೀರು ಮರುಪೂರಣ ಘಟಕಗಳ ನಿರ್ಮಾಣಕ್ಕೆ ಟೊಂಕ ಕಟ್ಟಿ ನಿಂತರು. ಸರಿಸುಮಾರು 10-15 ಸಾರ್ವಜನಿಕ ಕುಡಿಯುವ ನೀರಿನ ಕೊಳವೆಬಾವಿಗಳಿಗೆ ಮೊದಲ ಹಂತದಲ್ಲಿ 'ರೀಚಾರ್ಜ್ ಪಿಟ್'ಗಳನ್ನು ನಿರ್ಮಿಸಲಾಯಿತು. ಮಳೆಯ ನೀರು ಪೋಲಾಗದಂತೆ, ಬಿದ್ದ ನೀರೆಲ್ಲ ಇಂಗಿ ಪೈಪುಗಳ ಮುಖಾಂತರ ಕೊಳವೆಬಾವಿ ಸೇರುವಂತೆ ಮಾಡಲಾಯಿತು. ಆದರೆ, ಫಲಿತಾಂಶ ಕಾಣಲು ಕನಿಷ್ಠ ಎರಡು ವರ್ಷಗಳಾದರೂ ಬೇಕು ಎಂದು ವಿಷಯ ತಜ್ಞರು ತಿಳಿಸಿದ್ದರಿಂದ, ಅಂತರ್ಜಲ ಹೆಚ್ಚಿಸುವ ಇನ್ನಷ್ಟು ಕೆಲಸ ಮಾಡಲು ಆಡಳಿತ ಮಂಡಳಿಯು ತೀರ್ಮಾನಿಸಿತು. ಆಗ ಹೊಳೆದದ್ದೇ ಕೆರೆ ಹೂಳೆತ್ತೆಸಿ ಅಭಿವೃದ್ದಿಪಡಿಸುವುದು.

Image
Malangi Story 3

ಕೆರೆ ಹೂಳೆತ್ತಿಸಲು ನಾವೇನೋ ಸಿದ್ಧರಾದೆವು. ಆದರೆ, ಮನರೇಗಾದಲ್ಲಿ ಕೆಲಸ ಮಾಡಲು ಅಷ್ಟೊಂದು ಮಂದಿ ಕೂಲಿಕಾರ್ಮಿಕರನ್ನು ಒಟ್ಟು ಮಾಡುವುದು ಹೇಗೆ ಅನ್ನೋದೇ ನಮ್ಮ ಮುಂದೆ ಬೃಹದಾಕಾರವಾಗಿ ನಿಂತಿತು. ಮಾಲಂಗಿಯ ಬಹುತೇಕ ಜನರು ಕೂಲಿಗಾಗಿ ಪಕ್ಕದ ಕಾಫಿ ತೋಟಗಳನ್ನು ಆಶ್ರಯಿಸಿದ್ದರು. ಹೆಚ್ಚು ಕೂಲಿ, ಉಚಿತ ಪ್ರಯಾಣದ ವ್ಯವಸ್ಥೆ ಪ್ರಮುಖ ಆಕರ್ಷಣೆಯಾದ್ದರಿಂದ ಮನರೇಗಾದಲ್ಲಿ ಕೆಲಸ ಮಾಡಲು ಯಾರೂ ಸಿದ್ಧರಿಲ್ಲ. ಹಲ್ಲಿದ್ದರೂ ಕಡಲೆಯ ಭಾಗ್ಯವಿರಲಿಲ್ಲ ಎಂಬಂತಾಯಿತು.

ಆದರೆ, ನಿರಾಸೆ ಹೆಚ್ಚು ಹೊತ್ತು ನಿಲ್ಲಲಿಲ್ಲ. ತಂಬಾಕು ಬೆಳೆಗಾರರ ಸಭೆಗೆ ಬಂದಿದ್ದ ಐಟಿಸಿ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರು, ಕಂಪನಿ ವತಿಯಿಂದ ಕೆರೆ ಹೂಳೆತ್ತಿಸುತ್ತೇವೆ ಎಂದಾಗ, ಎಲ್ಲರ ಮುಖದಲ್ಲಿ ಸಂಭ್ರಮ. ಮೊದಲ ಹಂತದಲ್ಲಿ ಹತ್ತು ಕೆರೆಗಳ ಹೂಳೆತ್ತುವ ನೀಲನಕ್ಷೆ ತಯಾರಾಯಿತು. ಆಗ ಧುತ್ತನೆ ಎದುರಾದ ಸಮಸ್ಯೆ ಒತ್ತುವರಿಯದು. ಅಕ್ಕಪಕ್ಕದ ರೈತರು ಪೈಪೋಟಿಗೆ ಬಿದ್ದಂತೆ ಒತ್ತುವರಿ ಮಾಡಿದ್ದರು. ಒತ್ತುವರಿ ತೆರವು ಅಂದುಕೊಂಡಷ್ಟು ಸುಲಭದ ಕೆಲಸವಲ್ಲ. ಇದ್ದಬದ್ದ ಬುದ್ಧಿ, ಅಧಿಕಾರ ಎಲ್ಲ ಬಳಸಿಕೊಂಡು, ಹಿರಿಯ ಅಧಿಕಾರಗಳ ನೇತೃತ್ವದಲ್ಲಿ ಒತ್ತುವರಿ ತೆರವುಗೊಳಿಸಲಾಯಿತು.

Image
Malangi Story 5

ಜೆಸಿಬಿಗಳು, ಟ್ರಾಕ್ಟರ್‌ಗಳು ಕೆರೆಯಂಗಳಕ್ಕೆ ಇಳಿದವು. ಊರ ತುಂಬಾ ಹಬ್ಬದ ವಾತಾವರಣ. ಜನರೇ ಮುಂದೆ ನಿಂತು ಅವರಿಗೆ ತೋಚಿದ ಕೆಲಸ ಮಾಡತೊಡಗಿದರು. ಫಲವತ್ತಾದ ಹೂಳನ್ನು ಜನರ ಹೊಲ-ಗದ್ದೆಗಳಿಗೆ ನೀಡಲಾಯಿತು. ಒಂದು ಟ್ರಾಕ್ಟರ್ ಹೂಳಿಗೆ ಇಂತಿಷ್ಟು ಹಣವೆಂದು ರೈತರಿಂದ ಸಂಗ್ರಹ ಮಾಡಿ, ಕೆರೆ ಅಭಿವೃದ್ಧಿ ಸಮಿತಿಗಳನ್ನು ರಚಿಸಲಾಯಿತು. ಮುಂದಿನ ದಿನಗಳಲ್ಲಿ ಕೆರೆ ಕಾಪಾಡಿಕೊಳ್ಳುವ ಹೊಣೆಗಾರಿಕೆಯನ್ನು ಸಮಿತಿಗೆ ವಹಿಸಲಾಯಿತು. ಈ ಹೊಸ ಅಧಿಕಾರ ಮತ್ತು ಹೊಣೆಗಾರಿಕೆಯಿಂದ ಸಮಿತಿ ಸದಸ್ಯರು ಸಂಭ್ರಮಿಸಿದರು. ಸರಿಸುಮಾರು ಹತ್ತು ಕೆರೆಗಳು ಹೊಸ ರೂಪ ತಳೆದು ನಿಂತವು. ಅಂತೂ ಇಂತೂ ಗ್ರಾಮ ಪಂಚಾಯ್ತಿಯ ನಯಾಪೈಸೆ ಖರ್ಚಿಲ್ಲದೆ, ಐಟಿಸಿ ಸಂಸ್ಥೆಯ ಸಹಯೋಗದೊಂದಿಗೆ ಒಂದು ಅದ್ಬುತ ಕೆಲಸ ನೆರವೇರಿತು.

ಈ ಯಶಸ್ಸನ್ನು ಇಮ್ಮಡಿಗೊಳಿಸುವಂತೆ, ಆ ವರ್ಷ ವಾಡಿಕೆಗಿಂತ ಹೆಚ್ಚು ಮಳೆ ಸುರಿದು ಕೆರೆ ಕೋಡಿಯಲ್ಲಿ ನೀರು ಹರಿಯಿತು. ಮತ್ತೊಮ್ಮೆ ಊರಲ್ಲಿ ಹಬ್ಬದ ಸಂಭ್ರಮ. ಊರಿನ ಜನರೇ ಸೇರಿ ಕೆರೆಗೆ ಬಾಗಿನ ಅರ್ಪಿಸಿದರು. ದುಡ್ಡು ಖರ್ಚು ಮಾಡಿ ಕೆಲಸ ಮಾಡಿದ್ದು ಐಟಿಸಿ ಕಂಪನಿಯಾದರೆ, ಬರೀ ಮೇಲುಸ್ತುವಾರಿ ವಹಿಸಿದ್ದ ನಮ್ಮ ತಂಡಕ್ಕೆ ತಿಂಗಳುಗಟ್ಟಲೆ ಸನ್ಮಾನ, ಊಟೋಪಚಾರ. ಆ ವರ್ಷ ಜನರು ಡಿಸೆಂಬರ್‌ನಿಂದ ಹಿಡಿದು ಏಪ್ರಿಲ್‌ವರೆಗೂ ನೆಮ್ಮದಿಯ ನಿದ್ದೆ ಮಾಡಿದರು.

ನಿಮಗೆ ಏನು ಅನ್ನಿಸ್ತು?
14 ವೋಟ್