ಹಳ್ಳಿ ಹಾದಿ | ಅಪೌಷ್ಟಿಕತೆ ಎಂಬುದು ಗೆಲ್ಲಲಾಗದ ಭೂತವೇನಲ್ಲ

malnutrition in karnataka 2

ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿನ 'ಜಾಗೃತಿ’ ಸಂಸ್ಥೆಯು ಅಪೌಷ್ಟಿಕತೆ ಸಂಬಂಧ ಮಹತ್ವದ ಪ್ರಯೋಗವೊಂದನ್ನು ಮಾಡಿದೆ. ಖಾನಾಪುರ, ಕಿತ್ತೂರು, ಹುಕ್ಕೇರಿ ತಾಲೂಕಿನ ಆಯ್ದ ಹಳ್ಳಿಗಳ, ಐದು ವರ್ಷದೊಳಗಿನ 1,200 ಮಕ್ಕಳು ಈ ಪ್ರಯೋಗದಲ್ಲಿದ್ದರು. ಅಧ್ಯಯನ ಮುಗಿದಾಗ, ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಮಕ್ಕಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿತ್ತು

ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಸಮೀಕ್ಷೆ 5ರ ಪ್ರಕಾರ, ದೇಶದಲ್ಲಿ ಐದು ವರ್ಷದೊಳಗಿನ ಶೇಕಡ 67ರಷ್ಟು ಮಕ್ಕಳು ಅಪೌಷ್ಟಿಕ ಮತ್ತು ರಕ್ತಹೀನರಾಗಿದ್ದಾರೆ. 2015-16ರಲ್ಲಿ ಶೇಕಡ 58.6 ಇದ್ದುದು ಈಗ ಶೇಕಡ 67ಕ್ಕೆ ಏರಿದೆ. ಹೆಂಗಸರಲ್ಲಿ ಶೇಕಡ 53ರಷ್ಟು ಮಂದಿಗೆ ರಕ್ತಹೀನತೆ ಇದ್ದುದು ಈಗ ಶೇಕಡ 57ಕ್ಕೇರಿದೆ. ಗಂಡಸರ ರಕ್ತಹೀನತೆಯಲ್ಲಿಯೂ ಕೂಡ ಶೇಕಡ 23ರಷ್ಟು ಇದ್ದುದು ಶೇಕಡ 25 ಆಗಿದೆ.

ರಕ್ತದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾಗಿ ರಕ್ತಹೀನತೆ ಉಂಟಾಗುವುದಕ್ಕೆ ಒಂದು ಮುಖ್ಯ ಕಾರಣ ಊಟದಲ್ಲಿ ಕಬ್ಬಿಣಾಂಶ ಕಡಿಮೆ ಆಗುವುದು ಮತ್ತು ಎರಡನೆಯದು, ಹೊಟ್ಟೆಯಲ್ಲಿ ಜಂತುಗಳಾಗುವುದು. ಮಲೇರಿಯಾದಂಥ ರೋಗದ ಸೋಂಕಿದ್ದರೂ ಕಬ್ಬಿಣಾಂಶದ ಹೀರುವಿಕೆ ಕಡಿಮೆಯಾಗುತ್ತದೆ. ರಕ್ತಹೀನತೆಯು ವ್ಯಕ್ತಿಯ ಒಟ್ಟಾರೆ ಬೆಳವಣಿಗೆಯನ್ನೇ ಕುಂಠಿತ ಮಾಡುವುದರ ಜೊತೆಗೆ ರೋಗಗಳ ಸೋಂಕಿಗೆ ಕಾರಣವಾಗುವುದರಿಂದ ಇದು ಬಹಳ ಗಂಭೀರವಾಗಿ ಪರಿಗಣಿಸಬೇಕಾದ ಸಮಸ್ಯೆ ಎನ್ನುತ್ತಾರೆ ತಜ್ಞರು.

ನಮ್ಮ ದೇಶದಲ್ಲಿ ಆರು ತಿಂಗಳಿನಿಂದ 23 ತಿಂಗಳೊಳಗಿನ ಮಕ್ಕಳಲ್ಲಿ ಶೇಕಡ 89ರಷ್ಟು ಮಕ್ಕಳಿಗೆ ಸಾಕಷ್ಟು ಪ್ರಮಾಣದಲ್ಲಿ ಪೌಷ್ಟಿಕ ಆಹಾರ ಸಿಗುತ್ತಿಲ್ಲ. ಇದ್ದುದರಲ್ಲಿಯೇ ಒಳ್ಳೆಯ ಪೌಷ್ಟಿಕ ಆಹಾರ ಸಿಗುತ್ತಿರುವುದು ಮೇಘಾಲಯ ರಾಜ್ಯದಲ್ಲಾದರೆ, ಅತಿ ಕಡಿಮೆ ಪೌಷ್ಟಿಕ ಆಹಾರ ಸಿಗುತ್ತಿರುವುದು ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ. ನಮ್ಮ ಕರ್ನಾಟಕದ ಪರಿಸ್ಥಿತಿಯೇನೂ ಬಹಳ ಉತ್ತಮವಾಗಿಲ್ಲ.

Image
malnutrition in karnataka 4
ಸಾಂದರ್ಭಿಕ ಚಿತ್ರ

ಶಿಶುಗಳಿಗೆ, ಪುಟ್ಟ ಮಕ್ಕಳಿಗೆ ತಾಯಿ ಹಾಲು ಮತ್ತು ಪೂರಕ ಆಹಾರವನ್ನು ಎಷ್ಟು ಕೊಡುತ್ತಾರೆ, ಎಷ್ಟು ಬಾರಿ ಕೊಡುತ್ತಾರೆ ಎನ್ನುವುದರ ಜೊತೆಗೆ, ಆಹಾರದ ವೈವಿಧ್ಯತೆ ಕೂಡ ಬಹಳ ಮುಖ್ಯವಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಪ್ರಕಾರ, ದಿನಕ್ಕೆ ಕನಿಷ್ಟ ನಾಲ್ಕು ನಮೂನೆಯ ಆಹಾರಾಂಶಗಳು ಮಗುವಿಗೆ ಲಭ್ಯವಾಗಬೇಕು, ಮಗು ದಿನಕ್ಕೆ ಆರು ಬಾರಿ ಉಣ್ಣಬೇಕು. ನಮ್ಮ ದೇಶದಲ್ಲಿ ಕೇವಲ ಶೇಕಡ 25ರಷ್ಟು ಮಕ್ಕಳಿಗೆ ಈ ನಾಲ್ಕು ವಿಧದ ಆಹಾರಾಂಶಗಳು ಸಿಗುತ್ತಿದ್ದರೆ, ಶೇಕಡ 35ರಷ್ಟು ಮಕ್ಕಳಿಗೆ ಮಾತ್ರ ತಾಯಿ ಹಾಲು ಪದೇ-ಪದೆ ಸಿಗುತ್ತಿದೆ. ಮಕ್ಕಳ ವಯಸ್ಸಿಗೆ ತಕ್ಕ ಎತ್ತರ ಮತ್ತು ತೂಕಗಳಲ್ಲಿ ಇವು ಗೊತ್ತಾಗಿಬಿಡುತ್ತವೆ. ಬಡತನದ ಕಾರಣಕ್ಕಾಗಿ ಮನೆಯಲ್ಲಿ ಸಾಕಷ್ಟು ಆಹಾರದ ಕೊರತೆ, ತರಕಾರಿ, ತತ್ತಿ, ಹಣ್ಣುಗಳು ಸಿಗದಿರುವುದು ಒಂದು ಕಾರಣವಾದರೆ; ಮನೆಯವರಿಗೆ ಪೌಷ್ಟಿಕ ಆಹಾರದ ಬಗ್ಗೆ ಅರಿವಿಲ್ಲದಿರುವುದು ಇನ್ನೊಂದು ಮುಖ್ಯ ಕಾರಣ.

ಅಂಗನವಾಡಿಗಳು ಮಕ್ಕಳ ಪೌಷ್ಟಿಕತೆ ಮೇಲೆ ನಿಗಾ ಇಟ್ಟಿರುತ್ತವೆ. ಈಗ ಕರ್ನಾಟಕದ ಅಂಗನವಾಡಿಗಳಲ್ಲಿ ಮಧ್ಯಾಹ್ನದ ಊಟ ಮತ್ತು ಪ್ರತಿ ಮಗುವಿಗೆ ವಾರಕ್ಕೆ ಎರಡು ತತ್ತಿಗಳನ್ನು ಕೊಡಲಾಗುತ್ತದೆ. ಆದರೆ, ಕೋವಿಡ್ ಸಂಧರ್ಭದಲ್ಲಿ ಅಂಗನವಾಡಿಗಳು ಮುಚ್ಚಿದ್ದರಿಂದ ಅಕ್ಕಿ, ಬೇಳೆ, ಕಾಳು, ಹಾಲಿನಪುಡಿ ಮತ್ತು ಮಸಾಲೆ, ತತ್ತಿ ಇವೆಲ್ಲವೂ ಮನೆಗೇ ತಲುಪುತ್ತಿದ್ದವು. ಮನೆಗೆ ಬಂದ ರೇಶನ್‌ನಲ್ಲಿ ಮನೆಯವರೆಲ್ಲರೂ ಪಾಲುದಾರರು. ಉದ್ಯೋಗ ಕಳೆದುಕೊಂಡಿದ್ದ ಕುಟುಂಬಗಳಲ್ಲಿ ಹಸಿವು ಬಹಳವಿತ್ತು. ಎಂಟು ತತ್ತಿಗಳು ಮನೆಗೆ ಬಂದಾಗ ಮನೆಯಲ್ಲೊಂದು ತತ್ತಿ ಪಲ್ಯದ ಭೋಜನವಾಗಿದ್ದರೆ ಅದು ಸಹಜ.

ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಜನಸಮುದಾಯದೊಂದಿಗೆ ಕೆಲಸ ಮಾಡುತ್ತಿರುವ 'ಜಾಗೃತಿ’ ಸಂಸ್ಥೆ ಅಧ್ಯಯನದೊಂದಿಗೆ ಮಾಡಿದ ಪ್ರಯೋಗಕ್ಕೆ ಸಿಕ್ಕ ಪ್ರತಿಫಲ ಉಲ್ಲೇಖನೀಯ. ಖಾನಾಪುರ, ಕಿತ್ತೂರು ಹಾಗೂ ಹುಕ್ಕೇರಿ ತಾಲೂಕುಗಳ ಆಯ್ದ ಹಳ್ಳಿಗಳಲ್ಲಿ ತರಬೇತಿ ಪಡೆದ ಸ್ಥಳೀಯ ಕಾರ್ಯಕರ್ತರು ಐದು ವರ್ಷದೊಳಗಿನ 1,200 ಮಕ್ಕಳ ತೂಕ ಮತ್ತು ಎತ್ತರವನ್ನು ಅಳೆದು ನೋಡಿದರು. ಅಂಗನವಾಡಿಯ ‘ಗ್ರೋತ್ ಚಾರ್ಟ್’ ಅನ್ನೇ ಬಳಸಿ, ತಾಯಿ-ತಂದೆಯರೊಂದಿಗೆ  ಮಗುವಿನ ಬೆಳವಣಿಗೆಯ ಸ್ಥಾನ ಎಲ್ಲಿದೆ ಎಂದು ತೋರಿಸಿದರು. ಮಗು ಕೆಂಪು ಬಣ್ಣಕ್ಕೆ ಜಾರಿದ್ದರೆ ತಾಯಿಯ ಜೊತೆ ಕುಳಿತು ಹೀಗೇಕಾಯಿತು ಎಂಬುದರ ಚರ್ಚೆ. ಮನೆಯಲ್ಲಿ ಮಗುವಿಗೆ ತಿನ್ನಲು ಏನೇನು ಕೊಡುತ್ತೀರಿ, ಎಷ್ಟು ಸಲ ಕೊಡುತ್ತೀರಿ, ಯಾರು ನೋಡಿಕೊಳ್ಳುತ್ತಾರೆ, ಮಗು ತತ್ತಿ/ಮಾಂಸವನ್ನು ತಿನ್ನುತ್ತದೆಯೇ, ವಾರಕ್ಕೆ ಎಷ್ಟು ಸಲ... ಇವೆಲ್ಲ ಚರ್ಚೆ ಮಾಡಿದರು.

Image
malnutrition in karnataka 5
ಸಾಂದರ್ಭಿಕ ಚಿತ್ರ

ಬೆಳಗ್ಗೆ ಎದ್ದು ಮುಖ ತೊಳೆದೊಡನೆ ಚಹಾ, ಬಿಸ್ಕೀಟು ಪ್ರತಿ ಮನೆಯಲ್ಲಿ. ಮಕ್ಕಳಿಗೆ ಒಂದೊಂದು ಪೊಟ್ಟಣ ಬಿಸ್ಕಿಟ್‌ನೊಂದಿಗೆ ಸಕ್ಕರೆ ನೀರಿನಂಥ ಚಹಾ. ಪರಿಣಾಮವಾಗಿ ಮಧ್ಯಾಹ್ನದವರೆಗೂ ಮಗು ಹಸಿವೆಯೆಂದು ಹೇಳುವುದಿಲ್ಲ. ಮಗು ಹಸಿವೆಯೆಂದು ಹೇಳಬಾರದಂಥ ಸುಲಭೋಪಾಯಗಳನ್ನು ನಮ್ಮ ಇಂದಿನ ತಾಯಂದಿರು ಕಂಡುಕೊಂಡಿದ್ದಾರೆ. ಬದಲಾದ ಸನ್ನಿವೇಶದಲ್ಲಿ (ಹೆಚ್ಚಿದ ಹಣದ ಅವಶ್ಯಕತೆ, ಪ್ರತಿನಿತ್ಯವೂ ಕೂಲಿಗೆ ಹೋಗಲೇಬೇಕಾದ ಅನಿವಾರ್ಯತೆ ಹಾಗೂ ಕೆಲಸದ ಒತ್ತಡ) ಮನೆಯಲ್ಲಿ ಮಕ್ಕಳಿಗಾಗಿ ತಿಂಡಿಗಳನ್ನು ಮಾಡಿಡುವ ಪರಿಪಾಠವೇ ಹೋಗಿಬಿಟ್ಟಿದೆ. ಅದನ್ನು ಈಗಿನ ತಾಯಂದಿರಿಗೆ ಮತ್ತೊಮ್ಮೆ ಕಲಿಸಬೇಕಾದ ಪ್ರಸಂಗ. ಹಳ್ಳಿಯಲ್ಲೇ ಸುಲಭವಾಗಿ ಸಿಗುವ ಶೇಂಗಾ (ಕಳ್ಳೇಕಾಯಿ) ಮತ್ತು ಬೆಲ್ಲವನ್ನು ಬಳಸಿ ಶೇಂಗಾದುಂಡೆ, ಚಿಕ್ಕಿಗಳನ್ನು ಮಾಡುವುದನ್ನು ತಾಯಂದಿರಿಗೆ ಕಲಿಸಿ, ಅಂಗಡಿ ತಿನಿಸಿನ ಬದಲು ಮನೆಯಲ್ಲೇ ತಯಾರಿಸಿದ ಚಿಕ್ಕಿ, ಉಂಡಿಗಳನ್ನು ಕೊಡಿ ಎಂದು ಕಾರ್ಯಕರ್ತೆಯರು ಮನವೊಲಿಸಿದರು.

ಈ ಸಮಯದಲ್ಲಿ ಒಂದು ಅಘಾತಕಾರಿ ಅಂಶ ಬೆಳಕಿಗೆ ಬಂತು. ಅಂಗನವಾಡಿಗಳಲ್ಲಿ ಆರು ತಿಂಗಳಿನಿಂದ ಮೂರು ವರ್ಷದವರೆಗೆ ಮಗುವಿಗೆ 'ಪುಷ್ಟಿ’ ಎಂಬ ಪೌಷ್ಟಿಕ ಪುಡಿಯನ್ನು ಕೊಡಲಾಗುತ್ತದೆ. (ಕೆಲ ವರ್ಷಗಳ ಹಿಂದೆ ಚೆನ್ನೈನ ಒಂದು ಕಂಪನಿ ತಯಾರಿಸಿಕೊಡುತ್ತಿದ್ದ ಪುಡಿಯನ್ನು ತಾಯಂದಿರು ಬಿಸಾಕುತ್ತಿದ್ದು, ಹೋರಾಟವನ್ನೇ ಮಾಡಿ ಅದನ್ನು ನಿಲ್ಲಿಸಲಾಗಿತ್ತು.) ಈಗ ಸ್ಥಳೀಯ ವಸ್ತುಗಳಿಂದ, ಸ್ಥಳೀಯವಾಗಿ ತಯಾರಿಸಲಾದುದನ್ನೇ ಕೊಡಬೇಕೆಂಬ ಆಹಾರ ಭದ್ರತಾ ಕಾನೂನಿನ ನಿಯಮದಂತೆ ಸಿಎಫ್‌ಟಿಆರ್‍ಐನಿಂದ ಪ್ರಮಾಣಿತ ಮಕ್ಕಳ ಪೂರಕ ಆಹಾರವನ್ನು ಪ್ರತಿ ತಾಲೂಕಿನಲ್ಲೂ ಸ್ಥಳೀಯ ಮಹಿಳಾ ಗುಂಪುಗಳು ತಯಾರಿಸಿಕೊಡುತ್ತವೆ.

ಮಗುವಿಗೆ ಆರು ತಿಂಗಳಾದಾಗಿನಿಂದ ಮೂರು ವರ್ಷದವರೆಗೆ ತಿಂಗಳಿಗೆ ಒಂದು ಕೆ.ಜಿ.ಯಷ್ಟು ಕೊಡುವ ಇಂತಹ ಉತ್ತಮ ಆಹಾರವನ್ನು ನೂರಕ್ಕೆ 99ರಷ್ಟು ಜನರು ಎಮ್ಮೆ, ಆಕಳಿಗೆ ಹಾಕಿ ಕೈತೊಳೆದುಕೊಳ್ಳುತ್ತಾರೆ!

ಈ ಲೇಖನ ಓದಿದ್ದೀರಾ?: ಅನುದಿನ ಚರಿತೆ | ಪಠ್ಯಪುಸ್ತಕ ಎನ್ನುವುದು ರಾಜಕೀಯ ಪಕ್ಷದ ಪ್ರಣಾಳಿಕೆಯೇ?

"ಮೇಡಂ, ಆ ವಿಚಾರವನ್ನೇನೂ ನೀವು ಪಬ್ಲಿಕ್ಕಾಗಿ ಹೇಳಲು ಹೋಗಬೇಡಿ. ನಾವು ತಾಯಂದಿರ ಸಭೆಯಲ್ಲಿ ಹೇಳುತ್ತೇವೆ," - ಒಬ್ಬ ತಾಲೂಕು ಅಧಿಕಾರಿಯ ವಿನಂತಿ! ಈ ಪುಡಿಯನ್ನು ನೀರಲ್ಲಿ ಕುದಿಸಿ ತಿನ್ನಿಸಿದರೆ ಮಗುವಿಗೆ ಬೇಧಿಯಾಗುತ್ತದೆಂದು ತಾಯಂದಿರ ದೂರು. ತಾಯಂದಿರ ಈ ದೂರನ್ನು ಯಾವುದೇ ಅಧಿಕಾರಿಯೂ ಕಿವಿಯ ಮೇಲೆ ಹಾಕಿಕೊಂಡಂತಿಲ್ಲ. ಫಲವಾಗಿ, ಹಳ್ಳಿಗಳ ಎಮ್ಮೆಗಳು ಪುಷ್ಟಿಯಾಗಿ ಬೆಳೆಯುತ್ತಿವೆ.

ಮಗುವಿಗೆ ತಿನ್ನಲು ಮನೆಯಲ್ಲಿ ಏನೇನು ಕೊಡುತ್ತೀರಿ ಎನ್ನುವುದರ ಜೊತೆಗೆ, ಹೊರಗಿನ ತಿಂಡಿಗಾಗಿ ಎಷ್ಟು ಹಣ ಕೊಡುತ್ತೀರಿ ಎಂಬ ವಿಚಾರವೂ ಬಹಳ ಮುಖ್ಯವಾದುದು. ಯಾಕೆಂದರೆ, ಇಂದು ಹಳ್ಳಿ-ಹಳ್ಳಿಗಳಲ್ಲಿ, ಓಣಿ-ಓಣಿಗಳಲ್ಲಿ ಡಬ್ಬಾ ಅಂಗಡಿಗಳು ತಲೆ ಎತ್ತಿವೆ. ಯಾವುದೇ ರೀತಿಯ ನಿಯಂತ್ರಣಕ್ಕೊಳಪಡದ ಈ ಡಬ್ಬಾ ಅಂಗಡಿಗಳು ನಡೆಯುವುದೇ ಅನಾರೋಗ್ಯವನ್ನು ಮಾರಿ. ಬಣ್ಣಬಣ್ಣದ ಪಾಕೀಟುಗಳ ಕುರುಕಲು ತಿಂಡಿಗಳೇ ಈ ಅಂಗಡಿಗಳ ಅತಿ ದೊಡ್ಡ ಆಕರ್ಷಣೆ ಮತ್ತು ಮಾರಾಟ. ಬೆಳಗ್ಗೆ ಅಡಿಗೆ ಮಾಡಿಟ್ಟು ಕೆಲಸಕ್ಕೆ ಓಡುವ ತಾಯಿ, ಮಗು ಅಳುತ್ತಿದ್ದರೆ ಅದರ ಕೈಯಲ್ಲಿ ಹತ್ತು ರೂಪಾಯಿ ತುರುಕಿ ಓಡುತ್ತಾಳೆ. ಅಂಗನವಾಡಿಗೆ ಕಳಿಸಲು ಎರಡು ರೂಪಾಯಿಗಳ ಲಂಚ ಬೇಕು. ಅಪ್ಪ ಅಂಗಡಿಯಿಂದ ಏನಾದರೂ ತರಿಸಿಕೊಂಡರೆಂದರೆ, ಉಳಿದ ಚಿಲ್ಲರೆ ಮಗುವಿಗೆ. ಊರಿನಿಂದ ಅಜ್ಜ ಬಂದರೆ ತಿನ್ನಲು ಚಾಕೊಲೆಟ್ ಮತ್ತು ಕೈಲೊಂದಿಷ್ಟು ರೊಕ್ಕ. ಇವೆಲ್ಲವೂ ಹೋಗುವುದು ಸೀದಾ ಡಬ್ಬಿಯಂಗಡಿಗೇ. ಬಿಸ್ಕೀಟು, ಕುರ್ ಕುರೆ, ಬಾಂಬೂ, ಚಾಕೊಲೆಟ್, ಐಸ್... ಏನುಂಟು, ಏನಿಲ್ಲ?

ಅನಾರೋಗ್ಯಕರ ಆಹಾರ ತಯಾರಕ ಉದ್ದಿಮೆ ನಿಂತಿರುವುದೇ ಡಬ್ಬಾ ಅಂಗಡಿಗಳ ಮೇಲೆ, ಡಬ್ಬಾ ಅಂಗಡಿಗಳು ನಿಂತಿರುವುದು ಅಪೌಷ್ಟಿಕ ಮಕ್ಕಳ ನಾಜೂಕು ಪುಟ್ಟ ಪಾದಗಳ ಮೇಲೆ!

Image
malnutrition in karnataka 3
ಸಾಂದರ್ಭಿಕ ಚಿತ್ರ

ಮೂರನೆಯ ಮುಖ್ಯ ವಿಚಾರ - ತಂದೆ ಮತ್ತು ತಾಯಿ ಮಗುವಿನೊಂದಿಗೆ ಎಷ್ಟು ಸಮಯ ಕಳೆಯುತ್ತಾರೆ ಎನ್ನುವುದು. "ಇಡೀ ದಿನ ನನ್ನೊಂದಿಗೇ ಇರ್ತದಲ್ರೀ ಮಗು?" ತಾಯಿಯ ಉತ್ತರ. "ನಿಮ್ಮೊಂದಿಗೆ ಮಗು ಇರುತ್ತದೆ. ಆದರೆ ನೀವು ಅದರೊಂದಿಗೆ ಇರುತ್ತೀರಾ?" ಎಂದು, ಮಗುವಿನೊಂದಿಗೆ ಸಮಯ ಕಳೆಯುವುದರ ಮಹತ್ವ ಹೇಳಿದಾಗ ತಾಯಿಗೆ ಇಕ್ಕಟ್ಟು.

ಹಾಡು, ಹಸೆಗಳ ತವರಾಗಿದ್ದ ನಮ್ಮ ಹಳ್ಳಿಗಳು ಟಿ.ವಿ.ಯ ಪ್ರಭಾವದಿಂದಾಗಿ ತಮ್ಮೆಲ್ಲ ಕಲೆಗಳನ್ನೂ ಕಳೆದುಕೊಂಡು ಬರಡಾಗಿವೆ. ಹಳ್ಳಿಯ ಹಾಡುಗಳು ಬಾಯಿಂದ ಬಾಯಿಗೆ ಪ್ರಸಾರವಾಗುತ್ತಿಲ್ಲ. ಯಾವ ತಾಯಿಯೂ ಹಾಡುವುದಿಲ್ಲ, ಮಕ್ಕಳಿಗೆ ಹಾಡು ಕಲಿಸುವುದಿಲ್ಲ. ಯಾವ ತಂದೆಯೂ ಮಗುವಿಗೆ ಕತೆ ಹೇಳುವುದಿಲ್ಲ. ಮಗುವಿಗೆ ಕತೆ ಹೇಳಲು ಬರುವುದಿಲ್ಲ. ಇದು ಬಹುದೊಡ್ಡ ಸಾಂಸ್ಕೃತಿಕ ಬಡತನ. ಟಿ.ವಿ ಧಾರಾವಾಹಿಗಳು ಮಕ್ಕಳಿಂದ ಸಂಜೆಗಳನ್ನು ಕಸಿದುಕೊಂಡುಬಿಟ್ಟಿವೆ. ತಾಯಿ-ತಂದೆಯರು ತಮ್ಮ ಟಿ.ವಿ, ಮೊಬೈಲ್‌ಗಳನ್ನು ಸುಮ್ಮನಿರಿಸಿ, ಸಂಜೆ ಕನಿಷ್ಟ ಅರ್ಧ ತಾಸನ್ನು ಮಕ್ಕಳೊಂದಿಗೆ ಹಾಡು, ಕತೆ, ಹರಟೆಗಳೊಂದಿಗೆ ಕಳೆದರೆ ಹಳ್ಳಿಗಳ ಚಿತ್ರವೇ ಬದಲಾಗಬಹುದು.

ಹೆಗಲಿಗೆ ನೊಗ ಹೊತ್ತು, ಬೆನ್ನಿಗೆ ಚಾಟಿಯಲ್ಲಿ ಹೊಡೆಸಿಕೊಳ್ಳುತ್ತಿರುವ ಎತ್ತಿನಂತೆ, ತಾಯಂದಿರು ಸದಾ ಓಡುತ್ತಿರುವ ಹಳ್ಳಿಯ ಚಿತ್ರದಲ್ಲಿ ಮಕ್ಕಳ, ಮನೆಯವರ, ಸ್ವತಃ ಪೌಷ್ಟಿಕತೆ ಆದ್ಯತೆಯ ವಿಷಯವಾಗಿ ಉಳಿದಿಲ್ಲ. ಇದರ ಫಲವೇ ವರ್ಷದಿಂದ ವರ್ಷಕ್ಕೆ ಎಲ್ಲ ಸರ್ವೆಗಳಲ್ಲೂ ಎದ್ದುಕಾಣುವ ಮಕ್ಕಳ ಮತ್ತು ತಾಯಂದಿರ ಅಪೌಷ್ಟಿಕತೆ. ದುಡಿಯಲು ಓಡುತ್ತಿರುವ ಆ ತಾಯಿಯನ್ನು ತಡೆದು ನಿಲ್ಲಿಸಬೇಕಾಗಿದೆ. ಅವಳ ಕಷ್ಟ-ಸಂಕಷ್ಟವನ್ನು ಕುಳಿತು ಕೇಳಬೇಕಾಗಿದೆ. ಪೌಷ್ಟಿಕತೆಯ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಅಂಗನವಾಡಿಯ ಅಕ್ಕಂದಿರು ಅತ್ಯವಶ್ಯವಾಗಿ ಮಾಡಬೇಕಾದ ಕೆಲಸವಿದು. ಆದರೆ, ಅವರನ್ನೂ ಹತ್ತು-ಹದಿನೆಂಟು ವರದಿ ತುಂಬಿಸುವ ಕೆಲಸದಲ್ಲಿ ಕಟ್ಟಿಹಾಕಲಾಗಿದೆ. ಹಾಗಾದರೆ, ಯಾರು ಮಾಡಬೇಕು?

Image
malnutrition in karnataka 1
ಖಾನಾಪುರದ ಪ್ರಯೋಗದ ದೃಶ್ಯ

ಯಾರಾದರೂ ಮಾಡಿ! ಹಳ್ಳಿ-ಹಳ್ಳಿಗಳಲ್ಲಿ ತಾಯಿ-ತಾಯಿಯ ಜೊತೆ ಕುಳಿತು, ಈ ಅರಿವು ಮೂಡಿಸದ ಹೊರತು ದೇಶದ ಪೌಷ್ಟಿಕತೆಯ ಚಿತ್ರ, ಹಸಿವಿನ ಚಿತ್ರ ಬದಲಾಗಲು ಸಾಧ್ಯವಿಲ್ಲ. ಸರಕಾರ ಒಪ್ಪಲಿ, ಬಿಡಲಿ, ಹಸಿವಿನ ಸೂಚ್ಯಂಕದಲ್ಲಿ ದೇಶ ಇನ್ನೂ ಕೆಳಗಿಳಿಯುತ್ತಲೇ ಹೋಗುತ್ತದೆ.

ತಾಯಂದಿರ ಜೊತೆ ಕುಳಿತು, ಇವೆಲ್ಲವನ್ನೂ ಚರ್ಚಿಸಿ, ಸಮಸ್ಯೆ ಅರಿತುಕೊಂಡು ಅವರೊಂದಿಗೆ ಪರಿಹಾರ ಹುಡುಕಿಕೊಳ್ಳುವ ಕೆಲಸವನ್ನು ‘ಜಾಗೃತಿ’ ಸಂಸ್ಥೆಯ ಅಧ್ಯಯನದಲ್ಲಿ ಮಾಡಲಾಯಿತು. ಮಗುವಿಗೆ ಏನೇನು ಮಾಡಿ ತಿನ್ನಿಸಬಹುದು, ಪುಷ್ಟಿಯನ್ನು ಹೇಗೆ ಬಳಸಬಹುದು, ಮಕ್ಕಳೊಂದಿಗೆ ಸಮಯ ಕಳೆಯುವುದು, ಹೊರಗಿನ ತಿನಿಸು ತಿನ್ನದಂತೆ ತಡೆಯುವುದು ಇವೆಲ್ಲವನ್ನೂ ತಾಯಂದಿರಿಗೆ ಹೇಳಿಕೊಟ್ಟಾಗ, ಮೂರೇ ತಿಂಗಳಲ್ಲಿ ಮಕ್ಕಳ ಬೆಳವಣಿಗೆಯಲ್ಲಿ ಅತ್ಯುತ್ತಮ ಫಲಿತಾಂಶ ಕಂಡುಬಂದಿತು.

ಖಾನಾಪುರ ತಾಲೂಕಿನಲ್ಲಿ ನಡೆದ ಮೊದಲ ಸಮೀಕ್ಷೆಯಲ್ಲಿ, 410 ಮಕ್ಕಳಲ್ಲಿ 102 ತೀವ್ರ ಅಪೌಷ್ಟಿಕ ಮಕ್ಕಳು ಕಂಡುಬಂದರೆ, ಎರಡನೇ ಸಮೀಕ್ಷೆ ಮಾಡಿ ಮೂರನೇ ಸಮೀಕ್ಷೆಗೆ ಬರುವಷ್ಟರಲ್ಲಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಮಕ್ಕಳ ಸಂಖ್ಯೆ 57ಕ್ಕೆ ಇಳಿದಿತ್ತು. ಕಿತ್ತೂರು ತಾಲೂಕಿನಲ್ಲಿ 360 ಮಕ್ಕಳಲ್ಲಿ 62 ತೀವ್ರ ಅಪೌಷ್ಟಿಕ ಮಕ್ಕಳು ಕಂಡುಬಂದರೆ, ಮೂರನೆಯ ಸಮೀಕ್ಷೆ ಹೊತ್ತಿಗೆ ಅಪೌಷ್ಟಿಕ ಮಕ್ಕಳ ಸಂಖ್ಯೆ 20ಕ್ಕಿಳಿದಿತ್ತು. ಕೆಲವು ಹಳ್ಳಿಗಳಲ್ಲಂತೂ ಮೂರು ತಿಂಗಳಲ್ಲಿ ಅಪೌಷ್ಟಿಕತೆಯು ಮಾಯವಾಗಿತ್ತು. ಬಡತನ, ಬಾಲ್ಯ ವಿವಾಹ, ವಲಸೆ ತೀವ್ರವಾಗಿರುವ ಹುಕ್ಕೇರಿಯಲ್ಲಿ ಮಾತ್ರ ಕೆಲಸ ಬಹಳವಿದೆ. ಅಪೌಷ್ಟಿಕತೆ ಎಂಬುದು ಗೆಲ್ಲಲಾಗದ ಭೂತವೇನಲ್ಲ.

ನಿಮಗೆ ಏನು ಅನ್ನಿಸ್ತು?
2 ವೋಟ್