ಕರುಣೆಯ ಕೃಷಿ | ಮರಾಠಿ ಕವಿ ವಾಹರೂ ಸೋನವಣೆ ಕವಿತೆ 'ವೇದಿಕೆ'

Vaharu Sonavane Poem

ನಾವು ವೇದಿಕೆಯ ಹತ್ತಲೇ ಇಲ್ಲ

ನಮ್ಮನ್ನು ಕರೆಯಲೂ ಇಲ್ಲ

ಬೆರಳ ಸಂಜ್ಞೆಯಲ್ಲಿ ನಮಗೆ

ನಮ್ಮ ಜಾಗ ತೋರಿಸಿದರು

ನಾವಲ್ಲಿಯೇ ಕುಳಿತೇ ಇದ್ದೆವು

ನಮಗೆ ಶಾಭಾಷ್ ಅಂದರು!

ಮತ್ತವರು ವೇದಿಕೆಯ ಮೇಲೆ ನಿಂತು

ನಮ್ಮ ತ್ರಾಸು-ತಾಪತ್ರಯ

ನಮ್ಮ ಮೇಲಾಗುವ ಅತ್ಯಾಚಾರ, ಶೋಷಣೆ

ಬಗೆಗೆ ಜೋರಾಗಿ ಒದರಿದರು:

"ಓ, ಆದಿವಾಸಿ ಬಾಂಧವರೇ

ಇನ್ನು ತ್ರಾಸು-ತಾಪತ್ರಯ ಸಹಿಸಬೇಡಿ..."

ನಮ್ಮ ತ್ರಾಸು

ನಮ್ಮದಷ್ಟೇ ಆಗಿ ಉಳಿಯಿತು

ಎಂದೂ ಆ ಅಧಿಕಾರದಲ್ಲಿ ಇರುವವರದ್ದಾಗಲಿಲ್ಲ

ನಮ್ಮ ಸಂದೇಹ ನಾವು ಬಡಬಡಿಸುತ್ತ ಉಳಿದೆವು

ಕಿವಿಯಲ್ಲಿ ಕೇಳಿ, ನಮ್ಮ ದುಃಖ ನಮಗೇ

ಕೇಳಿಸುತ್ತ-ಕೇಳಿಸುತ್ತ ಒದರುತ್ತಿದ್ದಾರೆಯೇ ವಿನಾ

ಅವರ ಭಾಷಣದಲ್ಲಿ ಸುಧಾರಣೆಯ ಸಾಧ್ಯತೆ ಇಲ್ಲ.

ಉಸಿರು ಬಿಟ್ಟರೆ ನಮ್ಮ ಕಿವಿ ಹಿಂಡಿ

ಗದರಿದರು;

"ಕ್ಷಮೆ ಯಾಚಿಸು, ಇಲ್ಲಾಂದರೆ...!

ಕಾಡಲ್ಲಿ ಯಾಕೆ ಇರ್ತೀರಿ ನೀವು?

ನಿಮ್ಮನ್ನು ದಾಖಲೆಯಿಂದ ಹೊರಗಿಡಲಾಗುವುದು

ನೀವು ಅಪರಾಧ ಮಾಡಿದ್ದೀರಿ

ಅದಕ್ಕೆ ಕಠಿಣ ಶಿಕ್ಷೆ ಕೊಡಲಾಗುವುದು..."

ಇಂಥ ಚರಿತೆಯನ್ನು ಅಧಿಕಾರದ ಜೈಲಲ್ಲಿ

ಸೆರೆಯಿದ್ದ ಸಾಕು ಗಿಳಿ ಹೇಳಿತು!

* * * * *

“Every beautiful poem is an act of resistance” - Mahmoud Darwish

Image
Vaharu Sonavane

ನನ್ನ ಮಗಳು ಸಿನಿಮಾ ಮಾಡುವ ಉದ್ದೇಶಕ್ಕಾಗಿ ಎತ್ತಿಕೊಂಡಿರುವ ಒಂದು ಚಿತ್ರಕತೆಯನ್ನು ನಿರೂಪಿಸುತ್ತಿದ್ದಳು. ಶೋಷಿತ ವರ್ಗದ ಹುಡುಗಿಯೊಬ್ಬಳು ಆ ಕತೆಯ ನಾಯಕಿ. ಸಿನಿಮಾ ಮಾಡುತ್ತಿರುವ ನನ್ನ ಮಗಳಿನ ಗುಂಪಿನವರೆಲ್ಲರೂ ಪಟ್ಟಣವಾಸಿ ಮಧ್ಯಮ ವರ್ಗದ ಶೋಷಕ ಸಮುದಾಯದ ಹಿನ್ನೆಲೆಯುಳ್ಳವರು. ಅವಳು ನಿರೂಪಿಸಿದ ಕತೆ ಬಹಳ ಕಾಲದಿಂದ ನನ್ನೊಳಗೆ ಸಂಘರ್ಷವನ್ನು ಉಂಟುಮಾಡಿರುವ ವಿಷಯವನ್ನು ಮತ್ತೆ ಕೆದಕಿತ್ತು. ಕಲೆ-ಸಾಹಿತ್ಯ-ಸಿನೆಮಾಗಳಲ್ಲಿ ಪ್ರತಿನಿಧಿತ್ವದ ನೈತಿಕ ಔಚಿತ್ಯದ ಕುರಿತಾದ ಈ ಪ್ರಶ್ನೆಯೆಂದರೆ, ಶೋಷಕ ವರ್ಗದ ಹಿನ್ನೆಲೆಯುಳ್ಳವರು ಸಾಮಾಜಿಕ ಸಂಘರ್ಷದ ವಿಷಯಗಳನ್ನು ಹೇಗೆ ಪ್ರತಿನಿಧಿಸಬೇಕು ಎನ್ನುವುದು.

ಜಾತಿ ತಾರತಮ್ಯ, ಸಾಮಾಜಿಕ ಅತ್ಯಾಚಾರಗಳ ಕುರಿತಾಗಿ ವಹಿಸುವ ಜಾಣಮೌನ ಖಂಡನೀಯ, ಸರಿ. ಆದರೆ, ನನ್ನ ಕೌಟುಂಬಿಕ, ಸಾಮಾಜಿಕ ಹಿನ್ನೆಲೆ 'ಮೇಲ್ವರ್ಗ-ಮೇಲ್ಜಾತಿ'ಯದ್ದಾಗಿದ್ದರೆ, ನನ್ನ ಸಂಕಥನಗಳಲ್ಲಿ ಶೋಷಿತರ ಪ್ರತಿನಿಧೀಕರಣ ಹೇಗಿರಬೇಕು? ಶೋಷಿತರ ದನಿಯಾಗುವ ನನ್ನ ಅಧಿಕಾರಕ್ಕೆ ಇರುವ ನೈತಿಕ ಮಿತಿಗಳೇನು? ಇನ್ನೂ ನೇರವಾಗಿ ಮತ್ತು ಸರಳೀಕರಿಸಿ ಹೇಳಬೇಕೆಂದರೆ, ಯಾರು-ಯಾರನ್ನು ಯಾವ-ಯಾವ ರೀತಿಯಲ್ಲಿ ಪ್ರತಿನಿಧಿಸಬಹುದು?

ಈ ಕವಿತೆ ಓದಿದ್ದೀರಾ?: ಕರುಣೆಯ ಕೃಷಿ | ಬರ್ಟೋಲ್ಟ್ ಬ್ರೆಕ್ಟ್ ಕವಿತೆ 'ಓದು ಬಲ್ಲ ಕಾರ್ಮಿಕನ ಪ್ರಶ್ನೆಗಳು'

ಮಹಿಳೆಯ ಅನುಪಸ್ಥಿತಿಯಲ್ಲಿರುವ ಗಂಡಸರ ಒಂದೇ ಒಂದು ದೃಶ್ಯವನ್ನು ಕೂಡ ಬ್ರಿಟಿಷ್ ಕಾದಂಬರಿಕಾರ್ತಿ ಜೇನ್ ಆಸ್ಟೆನ್ ತನ್ನ ಕಾದಂಬರಿಗಳಲ್ಲಿ ನಿರೂಪಿಸುವುದಿಲ್ಲ. ಪುರುಷ ಬರಹಗಾರರು ಪ್ರಸವದ ಅನುಭವದ ಕುರಿತಾಗಿ ಬರೆಯುವುದು ಸೂಕ್ತವಲ್ಲವೆಂಬ ಚರ್ಚೆಯೊಂದು ಕನ್ನಡದಲ್ಲಿಯೂ ಹಿಂದೆ ನಡೆದಿತ್ತು. ಸಾಮಾನ್ಯವಾಗಿ, ತನ್ನ ಅನುಭವದ ಜಗತ್ತಿಗೆ ಹೊರತಾದುದನ್ನು ಹೇಗೆ ಪ್ರತಿನಿಧಿಸಬೇಕು ಎನ್ನುವುದು ಸಾಮಾನ್ಯವಾಗಿ ಪ್ರತಿಯೊಬ್ಬ ಬರಹಗಾರನ ವೈಯಕ್ತಿಕ ನಿರ್ಧಾರವಾಗಿರುತ್ತದೆ. ಯಾವುದೇ ಕಲಾಕಾರ ತಾನು ನೇರವಾಗಿ ಅನುಭವಿಸಿದ್ದನ್ನು ಮಾತ್ರ ಬರೆಯಬೇಕೆಂಬ ವಾದ ಇದೆಯಾದರೂ, ಅದು ಬಹುಶಃ ಅಂತಹ ಮೌಲಿಕ ಒತ್ತಾಯವೇನೂ ಅಲ್ಲ. ಅದರಿಂದ ಕಲೆಯ ಒಳಸತ್ವವೇ ಖಾಲಿ ಆಗಿಬಿಡಬಹುದು. ಏಕೆಂದರೆ, ಕಲೆ ಎನ್ನುವುದು ಪರರ ಕುರಿತಾಗಿ ನಮ್ಮೊಳಗೆ ಉಂಟಾಗುವ ಭಾವಾನುಭೂತಿಯೂ ಹೌದು.

ಆದರೆ, ಈ ಸಂದಿಗ್ಧತೆಯನ್ನು ಅರ್ಥ ಮಾಡಿಕೊಳ್ಳಲು ನಾವು ಪ್ರಶ್ನೆಯನ್ನು ಬೇರೆ ರೀತಿಯಲ್ಲಿ ಕೇಳಬೇಕಾಗುತ್ತದೆ; ಅನ್ಯರ ಅನುಭವಕ್ಕೆ ದನಿಯಾಗುವಾಗ ಯಾವ ರೀತಿಯ ಪ್ರತಿನಿಧೀಕರಣ ಸಮರ್ಥನೀಯವಾಗಿರುತ್ತದೆ ಎನ್ನುವುದು ಆ ಪ್ರಶ್ನೆ. ಶೋಷಕ-ಶೋಷಿತ ಸಂಧರ್ಭದಲ್ಲಿ ಮೊದಲ ವರ್ಗಕ್ಕೆ ಸೇರಿರುವ ಬರಹಗಾರ ಶೋಷಿತನ ದನಿಯಾಗುವುದು ಒಂದು ಬಗೆಯಲ್ಲಿ ಅನ್ಯ ಅನುಭವವನ್ನು ಸ್ವಾಧೀನಪಡಿಸುವ ಕಾರ್ಯ. ಪಾಶ್ಚಾತ್ಯ ಚಿಂತನ ಪರಂಪರೆಯಲ್ಲಿ ಇದನ್ನು 'ಅಪ್ರಾಪ್ರಿಯೇಶನ್' ಎನ್ನುತ್ತಾರೆ ಮತ್ತು ಈ ಕುರಿತು ವಿಸ್ತಾರವಾದ ಚರ್ಚೆಗಳು ನಡೆದಿವೆ - ಲಿಂಗಭಾವ, ವರ್ಣಭಾವ, ವಸಾಹತುಶಾಹಿ ನೆಲೆಗಳಲ್ಲಿ.

ವೈಯಕ್ತಿಕವಾಗಿ ಶೋಷಣೆಯ ಮಾರ್ಗಗಳಿಂದ ದೂರವಿದ್ದರೂ, ಶೋಷಕ ಸಮುದಾಯದ ಹಿನ್ನೆಲೆಯ ಬರಹಗಾರನು ಶೋಷಿತರ ದನಿಯಾಗಿ, ಅವರ ಅನುಭವಗಳನ್ನು ಅಭಿವ್ಯಕ್ತಿಸಲು ಹೊರಡುವುದು ನನ್ನ ದೃಷ್ಟಿಯಲ್ಲಿ ಅನೈತಿಕ. ಭಾರತದಲ್ಲಿ ಹಲವಾರು ದಶಕಗಳ ಕಮ್ಯುನಿಸ್ಟ್ ಮತ್ತು ಸಮಾಜವಾದಿ ಚಳವಳಿಗಳ ಒಳವ್ಯಂಗ್ಯವೇ ಇದಾಗಿತ್ತು ಎಂದರೆ ತಪ್ಪಾಗಲಾರದು. ರಾಜಕಾರಣ ಮತ್ತು ಸಾಮಾಜಿಕ ಚಳವಳಿಗಳಲ್ಲಿ ಕೂಡ ಗಣ್ಯ ನಾಯಕತ್ವ ಮುಂದಿರಿಸುವ ಇರುಸುಮುರಿಸಿನ ಪ್ರಶ್ನೆಯೂ ಇದಾಗಿದೆ.

ವಾಹರೂ ಸೋನವಣೆ ಅವರ 'ವೇದಿಕೆ' ಎನ್ನುವ ಕವನ ತುಂಬ ಕಟುವಾಗಿ ಇದನ್ನು ಟೀಕಿಸುತ್ತದೆ ಮತ್ತು ಶೋಷಕರೇ ಶೋಷಿತರ ದನಿಯಾಗುವುದರ ಕ್ರೂರತೆಯನ್ನು ಈ ಕವನ ಎತ್ತಿ ತೋರುತ್ತದೆ. ವಾಹರೂ ಅವರು ಮಹಾರಾಷ್ಟ್ರದ ಆದಿವಾಸಿ ಕವಿ. ಆದಿವಾಸಿಗಳ ಹೆಸರಿನಲ್ಲಿ ಶೋಷಕರೇ ಮೇಲೆ ಮೇಲಕ್ಕೆ ಏರುತ್ತ, ಆದಿವಾಸಿಗಳನ್ನು ಗಾಳದ ಹುಳವಾಗಿಸುವ ಕುಕೃತ್ಯ ತುಂಬಾ ಹಿಂದಿನಿಂದ ನಡೆದು ಬಂದಿದೆ. 'ಪ್ರತಿನಿಧಿತ್ವ ರಾಜಕಾರಣ' ಎಂಬುದು ಪ್ರತಿನಿಧಿಸಲ್ಪಟ್ಟವರ ಹೆಸರಲ್ಲಿ ಪ್ರತಿನಿಧಿಗಳು ನಡೆಸುವ ಸ್ವಾರ್ಥಕಾರ್ಯ ಆಗಿಬಿಟ್ಟಿದೆ. ಇದನ್ನು ಬದಲಿಸುವಂತಹ ಪ್ರತಿನಿಧೀಕರಣದ (ಅಂದರೆ, ಶೋಷಿತರ ದನಿಯಾಗದೆಯೇ ಶೋಷಣೆಯ ಕುರಿತಾಗಿ ಬರೆಯುವ) ಮಾರ್ಗಗಳನ್ನು ಕಂಡುಕೊಳ್ಳುವ ಅವಶ್ಯಕತೆ ಇದೆ. ಇದು, ಶೋಷಿತರ ಸ್ವಯಂ ಪ್ರಾತಿನಿಧ್ಯಕ್ಕೆ ಹೆಚ್ಚಿನ ಅವಕಾಶವನ್ನು ಸಹ ಕಲ್ಪಿಸಬಹುದು.

ನಿಮಗೆ ಏನು ಅನ್ನಿಸ್ತು?
1 ವೋಟ್