ತೆಂಕಣ ಗಾಳಿ | ಹಿಂದಿನ ಸಾರಿ ಬಂದು ನೋಡಿ ಒಪ್ಪಿದವನೊಬ್ಬ, ಕೊನೆಯಲ್ಲಿ ಪ್ಲೇಟು ಬದಲಿಸಿದ್ದ

ಜ್ಯೂಸಿನ ಲೋಟ, ವೆಂಕಟೇಶ್ವರ ಸ್ವೀಟ್ಸ್‌ನ ಮೈಸೂರು ಪಾಕ್, ಬಾಳೆಕಾಯಿ ಚಿಪ್ಸ್ ಹಾಗೂ ಖಾರವನ್ನು ತಟ್ಟೆಗಳಲ್ಲಿ ಜೋಡಿಸಿ, ತಂದು ಬಂದವರೆದುರು ಟೇಬಲ್ ಮೇಲಿಟ್ಟೆವು. ಹುಡುಗ ಮತ್ತವನ ಫ್ರೆಂಡ್ ಬಂದಿದ್ದರು. ಅವರೆದುರು ಕೂತ ನನಗೆ ನಾಲ್ಕಾರು ಪ್ರಶ್ನೆ ಕೇಳುವಷ್ಟರಲ್ಲಿ, ಸ್ವೀಟು ತಿನ್ನಲು ಬಿಡದೇ ಬ್ರೋಕರ್ ಅವಸರ ಮಾಡಹತ್ತಿದ ಹೊರಡೋಣವೆಂದು

ನಾಳೆ ಬೆಂಗಳೂರಿಗೆ ಹೋಗಬೇಕು, ರೆಡಿಯಾಗಿರಮ್ಮ...

ಮಲಗುವ ತಯಾರಿಯಲ್ಲಿದ್ದವಳಿಗೆ ಅಪ್ಪ ಹೇಳಿದಾಗ ತಲೆಯಲ್ಲಾಡಿಸಿದೆ. ಅಮ್ಮ ಆಗಲೇ ವಿಷಯ ಹೇಳಿದ್ದಳು. ಒಂದು ಸಂಬಂಧ ಬಂದಿದೆಯಂತೆ, ನಮ್ಮೂರು ದೂರವಿರುವುದರಿಂದ ಹುಡುಗನ ಮನೆಯವರಿಗೆ ಇಲ್ಲಿಗೆ ಬರೋದು ಕಷ್ಟವಂತೆ, ನಾವೇ ಬೆಂಗಳೂರಿಗೆ ಹೋಗಬೇಕಂತೆ.

ಅವರಿಗೆ ಮಾತ್ರ ದೂರ, ನಮಗೆ ಅಲ್ಲವಾ? ನನ್ನ ಪ್ರಶ್ನೆಗೆ ಅಮ್ಮನಲ್ಲಿ ಉತ್ತರವಿರಲಿಲ್ಲ. ಹುಡುಗನ ವಯಸ್ಸು, ಓದು, ಕೆಲಸ ಇದ್ಯಾವುದೂ ಅಪ್ಪನಿಗೇ ಗೊತ್ತಿರಲಿಕ್ಕಿಲ್ಲ, ಇನ್ನು ಅಮ್ಮನನ್ನು ಕೇಳುವುದು ವ್ಯರ್ಥ.

ಯಾರಾದರೂ ಬಂದು ನಿಮ್ಮಲ್ಲಿ ಮದುವೆಗೆ ಹೆಣ್ಣುಗಳಿದ್ದಾರಾ ಎಂದು ಕೇಳಿದರೂ ಸಾಕು, ಸತ್ಕಾರ ಮಾಡಿ ಒಳಗೆ ಕರೆದು ಕೂರಿಸ್ತೀರಿ. ಅವನೆಂತವನೆಂದು ತಿಳಿದುಕೊಳ್ಳೋ ಆಸಕ್ತಿಯೇ ಇಲ್ಲ. ನಮ್ಮನ್ನು ಗೊಂಬೆಗಳ ರೀತಿ ಅವರೆದುರು ಪ್ರದರ್ಶನಕ್ಕೆ ನಿಲ್ಲಿಸ್ತೀರಿ. ಅವನು ಎಲ್ಲಿಗೋ ಹೋಗುತ್ತಿರುವ ದಾರಿಹೋಕನಾಗಿದ್ದು, ಸುಮ್ಮನೆ ಮಾತಿಗೆ ಕೇಳಿದರೂ ಮದುವೆ ಮಾಡಿಯೇ ಬಿಡ್ತೀರಿ ಅನಿಸತ್ತೆ. ಒಟ್ಟಿನಲ್ಲಿ ಹೆಣ್ಣುಮಕ್ಕಳನ್ನು ಮನೆಯಿಂದ ಕಳಿಸಿಬಿಟ್ಟರೆ ಸಾಕು ನಿಮಗೆ. ಎಷ್ಟು ಖಾರವಾಗಿ ಹೇಳಿದರೂ, ಹೆಣ್ಣು ಜನ್ಮ ಹೀಗೆ ಕಣಮ್ಮಾ ಏನೂ ಮಾಡೋಕಾಗಲ್ಲ ಎನ್ನುತ್ತಾ ಒಳನಡೆದಿದ್ದಳು ಅಮ್ಮ.

ಇದ್ದಕ್ಕಿದ್ದಂತೆ ಕೇಳಿದರೆ ರಜೆ ಸಿಗುವುದು ಕಷ್ಟವೆಂದರೆ ಅರ್ಥವಾಗೋದಿಲ್ಲ ಇವರಿಗೆಲ್ಲ. ಪಾಠ ಮಾಡುವ ಕಾಲೇಜಿನ ಪ್ರಿನ್ಸಿಪಾಲರಿಗೆ ರಜೆ ಅರ್ಜಿ ಕೊಟ್ಟರೆ, ಆವಯ್ಯ ಕೇಳುವ ನೂರಾರು ಪ್ರಶ್ನೆಗಳಲ್ಲಿ ಒಂದೆರಡಕ್ಕೂ ನನ್ನಲ್ಲಿ ಸಮಂಜಸ ಉತ್ತರವಿಲ್ಲ. ಅವರು ಕೊಡುವ ಜುಜುಬಿ ಸಂಬಳಕ್ಕೆ ರಜೆ ಯಾಕೆ ಕೇಳಬೇಕೆನ್ನೋದು ಅಪ್ಪನ ಧೋರಣೆ.

Image

ಹೇಗಾದರೂ ರಜೆ ಪಡೆದು ನಾಳೆ ಬೇಗ ಮನೆಗೆ ಬರಬೇಕು. ಒಂದೆರಡು ಚೂಡಿಯ ಜೊತೆಗೆ, ಒಂದು ಸೀರೆಯನ್ನೂ ಐರನ್ ಮಾಡಿ ಜೋಡಿಸಿಕೊಳ್ಳಬೇಕು. ವಾಚು, ಬಳೆ, ಕಿವಿಯೋಲೆ ಎಲ್ಲವನ್ನು ಹೊಂದಿಸಿಟ್ಟುಕೊಳ್ಳದಿದ್ದರೆ ಹೊರಡುವ ಹೊತ್ತಲ್ಲಿ ಗಡಿಬಿಡಿಯಾಗಬಹುದು. ಇಂತವೇ ಯೋಚನೆಗಳಲ್ಲಿ ನಿದ್ದೆಗೆ ಜಾರಿದೆ.

ಅರ್ಧ ರಾತ್ರಿಯಲ್ಲಿ ಎಚ್ಚರವಾಯ್ತು. ಹುಡುಗ ಹೇಗಿದ್ದಾನೋ, ಎಂತವನೋ ಎನ್ನುವ ಆತಂಕ. ಈ ಮದುವೆಗೆ ಜಾತಿಯೊಂದೇ ಮಾನದಂಡವಾಗಿರುವುದರಿಂದ ಇದನ್ಯಾವುದನ್ನೂ ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡುವುದಿಲ್ಲ ನಮ್ಮ ಮನೆಯಲ್ಲಿ. ಅವನೇನಾದರೂ ಹುಡುಗಿಯೊಂದಿಗೆ ಮಾತಾಡುವೆನೆಂದರೆ ಏನು ಮಾತಾಡೋದು? ನಾನು ಮದುವೆಯ ನಂತರವೂ ಕೆಲಸಕ್ಕೆ ಹೋಗಬೇಕೆಂದರೆ ಏನನ್ನುತ್ತಾನೋ!? ಅವನು ನಿನ್ನ ನೋಡಿ ಒಪ್ಪಿಕೊಂಡ ಮೇಲೆ ಅಲ್ಲವಾ ಇವೆಲ್ಲ ಪ್ರಶ್ನೆಗಳು! ಒಳಮನಸು ಕುಟುಕಿತು.

ಹಿಂದಿನ ಸಾರಿ ಬಂದು ನೋಡಿ ಒಪ್ಪಿದವನೊಬ್ಬ, ಕೊನೆಯಲ್ಲಿ ಪ್ಲೇಟು ಬದಲಿಸಿದ್ದ. ಉದ್ದಕ್ಕೆ, ತೆಳ್ಳಗೆ, ಬೆಳ್ಳಗಿದ್ದ ಚಂದದ ಹುಡುಗಿ ನನ್ನ ತಂಗಿ. ಅಕ್ಕನಿಗೆ ಬೇರೆ ಒಳ್ಳೆಯ ಹುಡುಗನನ್ನು ನೋಡುತ್ತೇನೆ, ತಂಗಿಯನ್ನು ನನಗೆ ಮದುವೆ ಮಾಡಿಕೊಡಿ ಎಂದವನು ಕೇಳಿದಾಗ ಅಪ್ಪನಿಗೆ ರೇಗಿತ್ತು. ದೊಡ್ಡವಳನ್ನೇ ಮದುವೆಮಾಡಿ ಕೊಡೋದಾದರೆ, ಜೊತೆಗೆ ಬೆಂಗಳೂರಲ್ಲಿ ಒಂದು ಸೈಟು ಕೊಡಿ ಎಂದು ಅವನ ಅಪ್ಪ ಹೊಸ ವರಸೆ ಶುರು ಮಾಡಿದಾಗ ನಯವಾಗಿ ತಿರಸ್ಕರಿಸಿದ್ದರು.

ಅವರ್ಯಾರೋ ವಸ್ತುಗಳಂತೆ ನಿನ್ನ ಮಕ್ಕಳ ಬಗ್ಗೆ ಹೀಗೆ ಚೌಕಾಸಿ ಮಾಡ್ತಿದ್ದಾರೆ, ಉಗಿದು ಓಡಿಸೋಕಾಗಲ್ವಾ ಎಂದಾಗ ನನ್ನನ್ನು ಸಮಾಧಾನಿಸಿದ್ದರು ಅಪ್ಪ. ಏನಾದರೂ ಮಾತನಾಡಿದರೆ ಅಪಪ್ರಚಾರವಾಗಿ ಮಕ್ಕಳ ಮದುವೆಯಾಗದಿದ್ದರೆ ಕಷ್ಟವೆಂಬುದು ಅವರ ಭಯ.

ಈ ಲೇಖನ ಓದಿದ್ದೀರಾ? : ಹೊಸಿಲ ಒಳಗೆ-ಹೊರಗೆ | ಗರ್ಭಕೋಶ ಇಲ್ಲದಿದ್ದರೆ ಹೆಣ್ಣು ಅನಿಸಿಕೊಳ್ಳುವುದು ಸಾಧ್ಯ ಇಲ್ಲವೇ?

ಹೆಣ್ಣು ಹೆತ್ತವರು, ಅದರಲ್ಲೂ ಹುಡುಗಿ ಕಪ್ಪು. ನಾವೇ ತಗ್ಗಿಬಗ್ಗಿ ನಡೆಯಬೇಕೆಂದು ಅಲ್ಲೇ ಕೂತಿದ್ದ ಅತ್ತೆ ಹೇಳಿದಾಗಲಂತೂ, ಏನು ಮಾತಾಡಲೂ ತೋಚದೆ ಎದ್ದು ರೂಮಿಗೆ ನಡೆದಿದ್ದೆ. ನಮ್ಮವರ ಬಗ್ಗೆ ಹೇಗೆ ಯೋಚಿಸಬೇಕು, ವರ್ತಿಸಬೇಕೆಂದು ತಿಳಿದುಕೊಳ್ಳದವರ ಜೊತೆ ಉಸಿರು ಕಟ್ಟಿದಂತೆನಿಸಿತ್ತು. ಇಷ್ಟು ವರ್ಷಗಳ ಕಾಲ ಅದೆಷ್ಟು ಓದಿದರೇನು, ಅವೆಲ್ಲ ಬರೀ ಸರ್ಟಿಫಿಕೇಟುಗಳಷ್ಟೇ. ಬದುಕಲು ಕಲಿಯಬೇಕಿದೆ ನಾನಿನ್ನೂ ಎನಿಸಿತ್ತು.

ನೋಡಲು ಬಂದ ಕೆಲ ಹುಡುಗರು, ನನ್ನನ್ನು ಕಪ್ಪು ಎಂದು ಒಪ್ಪದೇ ಹೋಗಿದ್ದರು. ಆದರೆ ಜೊತೆಯಲ್ಲಿ ಓದುತ್ತಿದ್ದ ಕಾಲೇಜಿನ ಕೆಲ ಹುಡುಗರ್ಯಾಕೆ ನನ್ನ ಮೆಚ್ಚಿಸುವ ಪ್ರಯತ್ನ ಮಾಡುತ್ತಿದ್ದರೆಂಬ ಪ್ರಶ್ನೆ ಕಾಡುತ್ತಿತ್ತು. ಆಗೆಲ್ಲ ನನ್ನನ್ನೂ ಇಷ್ಟಪಡುವವರಿದ್ದಾರೆ ಎನ್ನುವ ಸಣ್ಣ ಸಮಾಧಾನ ಒಳಗೊಳಗೆ. ಮನೆಯಲ್ಲಿ ಒಪ್ಪುವಂತಿದ್ದರೆ ಅವರಲ್ಲೇ ಯಾರನ್ನಾದರೂ ಮದುವೆಯಾಗಬಹುದಿತ್ತು ಅಂತಲೂ ಅನಿಸಿದ್ದುಂಟು. ಯೋಚನೆಯಲ್ಲಿ ಮುಳುಗಿದವಳಿಗೆ ನಿದ್ದೆ ಬರುವ ಹೊತ್ತಿಗೆ ಬೆಳಗಿನ ಜಾವವಾಗಿತ್ತು.

ಬೆಂಗಳೂರಲ್ಲಿ ಅಕ್ಕನ ಮನೆಗೆ ತಲುಪಿದವಳೇ ಮಲಗಿಬಿಟ್ಟಿದ್ದೆ. ಬೇಗ ಎದ್ದೇಳೇ, ಹುಡುಗನ ಕಡೆಯವರು ಹೊರಟಿದ್ದಾರಂತೆ, ಮಧ್ಯಾಹ್ನ ಅಕ್ಕ ಎಬ್ಬಿಸಿದಾಗ ಅಲಸ್ಯದಿಂದಲೇ ಎದ್ದು ರೆಡಿಯಾದೆ. ಚೂಡಿ ಹಾಕಿಕೊಂಡು ಆಚೆ ಬಂದವಳನ್ನು ಪ್ರಶ್ನಾರ್ಥಕವಾಗಿ ನೋಡಿದ ಅಪ್ಪ, ಸೀರೆ ತಂದಿಲ್ಲವಾ! ಎಂದು ಕೇಳಿದಾಗ ಇಲ್ಲವೆಂದು ತಲೆಯಾಡಿಸಿದೆ. ಅಷ್ಟರಲ್ಲಿ ಬ್ರೋಕರ್ ಬಂದಿದ್ದರಿಂದ ಅಪ್ಪನ ಪ್ರವಚನ ತಪ್ಪಿತು.

ಜ್ಯೂಸಿನ ಲೋಟಗಳು, ವೆಂಕಟೇಶ್ವರ ಸ್ವೀಟ್ಸ್‌ನಿಂದ ತಂದ ಮೈಸೂರು ಪಾಕ್, ಬಾಳೆಕಾಯಿ ಚಿಪ್ಸ್ ಮತ್ತು ಖಾರವನ್ನು ನಾಲ್ಕು ತಟ್ಟೆಗಳಲ್ಲಿ ಜೋಡಿಸಿ, ಒಂದೊಂದನ್ನೇ ತಂದು ಬಂದವರೆದುರು ಟೇಬಲ್ ಮೇಲಿಟ್ಟೆವು. ಹುಡುಗ ಮತ್ತವನ ಫ್ರೆಂಡ್ ಇಬ್ಬರೇ ಬಂದಿದ್ದರು. ಅವರೆದುರು ಕೂತ ನನಗೆ ನಾಲ್ಕಾರು ಪ್ರಶ್ನೆಗಳನ್ನು ಕೇಳುವಷ್ಟರಲ್ಲಿ, ಸ್ವೀಟು ತಿನ್ನಲು ಬಿಡದೇ ಬ್ರೋಕರ್ ಅವಸರ ಮಾಡಹತ್ತಿದ ಹೊರಡೋಣವೆಂದು. ಒಪ್ಪಿಗೆಯಾಯಿತೋ ಇಲ್ಲವೋ ಎಂದು ನಾಳೆ ತಿಳಿಸುತ್ತೇವೆನ್ನುತ್ತಾ, ತಂದಿದ್ದ ಹಣ್ಣಿನ ಕವರ್ ಕೈಗಿತ್ತು ಹೊರಟರವರು.

Image

ಅವರು ಅತ್ತ ಹೋಗುತ್ತಿದ್ದಂತೆ ತಟ್ಟೆಗಳನ್ನು ತಂದು ಒಳಗಿಟ್ಟವಳೇ ಮೈಸೂರು ಪಾಕ್ ತಿನ್ನಲು ಕೈಗೆತ್ತಿಕೊಂಡೆ. ಅದೆಂತ ಬೇಸರದ ಪರಿಸ್ಥಿತಿಯಲ್ಲಿದ್ದರೂ, ಸಿಹಿ ತಿನ್ನಲು ಸಿಕ್ಕರೆ ಎಲ್ಲವನ್ನು ಮರೆಯುವವಳು ನಾನು. ಅಷ್ಟರಲ್ಲಿ ಅವರನ್ನು ಗೇಟಿನವರೆಗೆ ಬಿಡಲು ಹೋಗಿದ್ದ ಅಪ್ಪ ಓಡುತ್ತಾ ಬಂದವರೇ, ಇನ್ನೊಂದು ಹುಡುಗನ ಕಡೆಯವರು ಇನ್ನು ಹತ್ತು ನಿಮಿಷದಲ್ಲಿ ಬರುತ್ತಾರಂತೆ, ಅದಕ್ಕೆ ಬ್ರೋಕರ್ ಆಗ ಬಂದವರನ್ನು ಗಡಿಬಿಡಿಯಲ್ಲಿ ಕರೆದುಕೊಂಡು ಹೋಗಿದ್ದೆಂದರು. ಜ್ಯೂಸಿನ ಲೋಟಗಳಷ್ಟೇ ಖಾಲಿಯಾಗಿದ್ದುದು. ಸಿಟ್ಟಿನಿಂದ ಅಪ್ಪನನ್ನು ನೋಡಿದವಳು, ಕೈಲಿದ್ದ ಸ್ವೀಟನ್ನು ವಾಪಸ್ ತಟ್ಟೆಗಿಟ್ಟು ರೂಮಿಗೆ ಹೋಗಿ ಕೂತೆ.

ಈ ಸಾರಿ ಬಂದವರು ಹುಡುಗ ಮತ್ತವನ ಅಮ್ಮ. ಕಿವಿಯಲ್ಲಿ ಪುಟಾಣಿ ಓಲೆ ತೊಟ್ಟಿದ್ದ, ಕಾಲೇಜು ಹೋಗುವವನಂತಿದ್ದ ಹುಡುಗನನ್ನು ನೋಡಿ ಅಕ್ಕ ಮತ್ತವಳ ಅತ್ತೆ ಸಣ್ಣಗೆ ನಕ್ಕಾಗ, ನನಗೂ ನಗು ಬಂದಿತ್ತು. ಅಂತೂ, ಅವರೂ ಜ್ಯೂಸನ್ನಷ್ಟೇ ಕುಡಿದು ಹೊರಡುವ ಮುಂಚೆ ಮಲ್ಲಿಗೆ ಹೂವಿನ ಜೊತೆ ಹಣ್ಣು ಮತ್ತು ಸ್ವೀಟ್ ಬಾಕ್ಸ್ ಕೊಟ್ಟರು. ಈ ಬಾರಿಯೂ ಬ್ರೋಕರ್ ಯಾರನ್ನಾದರೂ ಕರ್ಕೊಂಡು ಬರೋದಕ್ಕಾಗಿ ಅರ್ಜೆಂಟ್ ಹೊರಟಿರಬಹುದೆಂದು ತಮಾಷೆ ಮಾಡಿ ನಗುವಾಗ ಅಪ್ಪನಿಗೆ ಕರೆ ಬಂತು.

ಅಪ್ಪ ಸ್ವಲ್ಪ ಭಯದಲ್ಲಿ ನನ್ನೆಡೆ ನೋಡಿದಾಗ ನನಗೆ ವಿಷಯ ಖಾತ್ರಿಯಾಯ್ತು. ತಟ್ಟೆಗಳನ್ನೆಲ್ಲ ಇನ್ನೊಮ್ಮೆ ಒಳಗಿಟ್ಟು ಕಾಯುತ್ತಾ ನಿಂತೆ. ಬಂದವರು ಜ್ಯೂಸ್ ಮಾತ್ರ ಕುಡಿದು ಹೊರಟರು. ಕೊನೆಯದಾಗಿ, ನಾಲ್ಕನೇ ಹುಡುಗ ಬರುವಷ್ಟರಲ್ಲಿ ಜೀವನದ ಬಗ್ಗೆಯೇ ಜಿಗುಪ್ಸೆ ಬಂದಂತೆನಿಸಿತ್ತು. ಸ್ವೀಟಿನ ತಟ್ಟೆಯನ್ನು ನಾಲ್ಕನೇ ಬಾರಿ ಒಳಗಿಟ್ಟವಳು ತಿರುಗದೇ ಆಚೆ ಬಂದೆ.

ಅವರೆಲ್ಲ ತಂದುಕೊಟ್ಟ ಹಣ್ಣು ವಾರಕ್ಕಾಗುವಷ್ಟಿದೆ. ಖಾಲಿಯಾಗುವ ದಿನ ಇನ್ನೊಂದು ಸುತ್ತಿನ ವರಾನ್ವೇಷಣೆ ಮಾಡೋಣ. ನಾನೇ ತಮಾಷೆ ಮಾಡುತ್ತಿದ್ದರೂ ಒಳಗೆಲ್ಲ ಸಂಕಟ‌. ರಾತ್ರಿ ಬ್ರೋಕರ್ ಕಾಲ್ ಮಾಡಿ, ಇವರ್ಯಾರಿಗೂ ಇಷ್ಟವಾದ ಹಾಗಿಲ್ಲ, ನಾಳೆ ಬೇರೊಬ್ಬರನ್ನು ಕರೆದುಕೊಂಡು ಬರುತ್ತೇನೆಂದಾಗ ಯಾರನ್ನು ದೂರುವುದೋ ತಿಳಿಯದೇ ಸುಮ್ಮನೇಕೂತೆ.

ನಿಮಗೆ ಏನು ಅನ್ನಿಸ್ತು?
4 ವೋಟ್