ಜತೆಗಿರುವನೇ ಚಂದಿರ? | ನಿದ್ದೆಗಣ್ಣಿನಲ್ಲೇ ಕುಶಾಲನಗರ ಪೊಲೀಸ್ ಸ್ಟೇಷನ್‌ಗೆ ನಡೆದ ಆ ಮಧ್ಯರಾತ್ರಿ

ಮಧ್ಯರಾತ್ರಿ ಹೊತ್ತಿಗೆ ಎಚ್ಚರಗೊಂಡ ಅಬ್ಬ ಬಂದು ಅಮ್ಮಿಯನ್ನು ಎಬ್ಬಿಸಿದ. ಗದ್ದಲದಿಂದ ನಾವಿಬ್ಬರೂ ಎಚ್ಚರಗೊಂಡೆವು. "ನೋಡು... ನೋಡಿಲ್ಲಿ, ಹೆಂಗ್ ಹೊಡ್ದವ್ನೇ...!" ಎನ್ನುತ್ತ, ಹರಿದ ಬಟ್ಟೆ ಸರಿಸಿ, ಮೈಮೇಲಿನ ಗಾಯಗಳನ್ನು ಅಮ್ಮಿಗೆ ತೋರಿಸುತ್ತ, "ಬಾ, ನಾವು ಪೊಲೀಸ್ ಸ್ಟೇಷನ್ಗೋಗಿ ಕಂಪ್ಲೇಂಟ್ ಕೊಡನ," ಎನ್ನುತ್ತ, ಅಮ್ಮಿಯ ರಟ್ಟೆ ಹಿಡಿದು ಎಳೆದುಕೊಂಡು ಹೊರಟೇಬಿಟ್ಟ!

ನನ್ನ ಬಾಲ್ಯವೆಂಬುದು ದೂರದಲ್ಲಿ ಕಾಣುವ ಸುಂದರ, ನುಣುಪಾದ ಬೆಟ್ಟದಂತೆ; ಅದನ್ನು ಹತ್ತುತ್ತಿದಂತೆ, ಒಂದಷ್ಟು ದೂರ ಕಲ್ಲು-ಮುಳ್ಳುಗಳು ಪಾದಗಳನ್ನು ತಾಕಿ ನೋಯಿಸಿದರೆ, ಇನ್ನೊಂದಷ್ಟು ದೂರ ಚುಮುಚುಮು ಮಳೆಯಾದಂತೆ ಹಿತ. ಮರುಕ್ಷಣವೇ ಪ್ರವಾಹವೊಂದು ಕೊಚ್ಚಿ ಕೊಂಡೊಯ್ದಂತೆ. ಅಲ್ಲಲ್ಲೇ ಚಿಗುರುಬಿಸಿಲಿನ ಚುಂಬನಕ್ಕೊಳಗಾದರೆ, ಮತ್ತೆಲ್ಲೋ ಕೆಂಡದ ಮಳೆಯಾದಂತೆ. ಒಮ್ಮೊಮ್ಮೆ ಕೈಗೆಟಕುವಷ್ಟೇ ದೂರದಲ್ಲಿ ಕಾಮನಬಿಲ್ಲೊಂದು ಮೂಡಿದಂತೆ. ಬಾಲ್ಯವೆಂಬುದು ಹೀಗೆ ಹಲವು ರೂಪಾಂತರಗಳಲ್ಲಿ ಅರಳಿದ ರೂಪಕದಂತೆಯೇ ನನಗನ್ನಿಸುತ್ತದೆ.

Eedina App

ದುಡಿಮೆಯ ಗಡಿಬಿಡಿಯಲ್ಲಿ ಸದಾ ದೂರವೇ ಇರುತ್ತಿದ್ದ ಅಪ್ಪ-ಅಮ್ಮನನ್ನು ವಂಚಿಸಿ, ತುಂಬಿ ಹರಿಯುತ್ತಿದ್ದ ಹೊಳೆಗೆ ಅಡ್ಡಲಾಗಿ ಕಟ್ಟಿದ್ದ ಅಣೆಕಟ್ಟೆಯ ಮೇಲೆ ಬಗ್ಗಿ ಜೀಕಿ ದೂರದಲ್ಲಿದ್ದ ಹೊಳೆ ನೀರನ್ನು ಮುಟ್ಟಲು ಪ್ರಯತ್ನಿಸುತ್ತಿದ್ದೆವು. ಆದರೆ, ಶಾಲೆಯನ್ನೆಂದೂ ವಂಚಿಸಲಿಲ್ಲ. ಯಾರಿಗೋ ಸೋಕು ನೀವಳಿಸಿ ಮೂರು ದಾರಿ ಕೂಡುವಲ್ಲಿ ಎಸೆದಿರುತ್ತಿದ್ದ ಉಪ್ಪು, ಒಣಮೆಣಸು, ಇದ್ದಿಲುಗಳ ಮಡಿಲಲ್ಲಿ ನಿಗೂಢವಾಗಿ ಬಿದ್ದಿರುತ್ತಿದ್ದ ಐದು ಅಥವಾ ಹತ್ತು ಪೈಸೆಯ ನಾಣ್ಯಗಳನ್ನು ಎತ್ತಿಕೊಂಡು ಅದನ್ನು ಕಾಲುವೆಯ ನೀರಲ್ಲಿ ಚೆನ್ನಾಗಿ ತೊಳೆದು ಗೂಡಂಗಡಿಗೆ ಕೊಟ್ಟು ಜೀರಿಗೆ ಮಿಠಾಯಿ, ಗಾರೆ ಮಿಠಾಯಿ ಅಥವಾ ಶುಂಠಿ ಮಿಠಾಯಿಯಂತಹ ಪುಟ್ಟ-ಪುಟ್ಟ ಪೆಪ್ಪರ್ಮೆಂಟ್‌ಗಳನ್ನು ಬೊಗಸೆ ತುಂಬ ಗಳಿಸುವಾಗ ಹಿಗ್ಗೆನಿಸುತ್ತಿತ್ತು. ಅಂತಹ ನಾಣ್ಯಗಳನ್ನು ದಿನನಿತ್ಯ ಹುಡುಕತೊಡಗುತ್ತಿದ್ದೆವು.

ಒಮ್ಮೆ ಶಾಲೆಗೆ ಹೋಗುವ ದಾರಿಯಲ್ಲಿ ಅಡ್ಡಲಾಗಿ ಸಿಕ್ಕ ಹಾರಂಗಿ ಹೊಳೆಯ ಅಣೆಕಟ್ಟೆಗೆ ಇಳಿಜಾರಾಗಿ ಜೋಡಿಸಿದ್ದ ಕಲ್ಲುಗಳ ಸಂದುವಿನಲ್ಲಿ ಬಿದ್ದುಕೊಂಡಿದ್ದ ಐದು ಪೈಸೆಗಾಗಿ ಕಲ್ಲುಗಳ ಸಂದುಗಳಲ್ಲಿ ಕಾಲು ಸಿಕ್ಕಿಸಿಕೊಂಡು ಇಳಿದು, ಆ ನಾಣ್ಯವನ್ನು ಎತ್ತಿ ಹಲ್ಲಿನ ಸಂದಿಗೆ ಸಿಕ್ಕಿಸಿಕೊಂಡು ಮೇಲಕ್ಕತ್ತಿ, ಅಂಗಡಿಯಲ್ಲಿ ಕೊಟ್ಟು ಮಿಠಾಯಿ ಪಡೆದಿದ್ದೆವು. ಹದಿನೈದು ದಿನಗಳಿಗೊಮ್ಮೆ ಬರುತ್ತಿದ್ದ 'ಬಾಲಮಂಗಳ'ಕ್ಕಾಗಿ ಪ್ರತೀ ದಿನ ಹಣ ಹೊಂದಿಸುತ್ತಿದ್ದೆವು. 'ಲಂಬೋದರ,' 'ಡಿಂಗ'ರಂತಹ ಹೀರೋಗಳು ಆಗಲೇ ನಮ್ಮನ್ನು ಆವರಿಸಿಬಿಟ್ಟಿದ್ದರು. ಅದರಲ್ಲಿ ಬರುತ್ತಿದ್ದ ಚಿತ್ರಗಳನ್ನು ನಕಲಿಸಿ ಹಾಳೆಗಳ ಮೇಲೆ ಚಂದಚಂದದ ಚಿತ್ರಗಳನ್ನು ಅರಳಿಸುತ್ತಿದ್ದೆವು. 'ಬಾಲಮಂಗಳ' ಮತ್ತು ಬಣ್ಣದ ಪೆನ್ಸಿಲ್‌ಗಳು ನಮ್ಮನ್ನು ನಿರಾಶೆಗೊಳಿಸದೆ ಬಂದು ಕೈ ಸೇರುತ್ತಿದ್ದವು.

AV Eye Hospital ad

ಎಷ್ಟೆಲ್ಲ ಆನಂದದ ಅವಸ್ಥೆಯನ್ನು ಅನುಭವದ ಮೂಸೆಯಲ್ಲಿ ಬೆರೆಸಿ ಸವಿಯುತ್ತಿದ್ದ ನಮಗೆ, ಸಂಜೆಯಾಗುತ್ತ ಒಂದು ರೀತಿಯ ಅವ್ಯಕ್ತ ಭಯವೊಂದು ಆವರಿಸುತ್ತಿತ್ತು. ರಾತ್ರಿಯ ಕತ್ತಲಿಗೆ ಸೀಮೆಎಣ್ಣೆ ದೀಪದ ಬೆಳಕು ಬೆರೆಯುತ್ತಿದ್ದಂತೆ ಆರರಲ್ಲಿ ಓದುತ್ತಿದ್ದ ಆ ಎಳೆಯ ಮನದೊಳಗೆ ಒಂದು ರೀತಿಯ ವಿಷಾದ ಕವಿಯುತ್ತಿತ್ತು. ಅಬ್ಬ ಮನೆಗೆ ಬರುವವರೆಗೂ ಹರಡಿದ್ದ ಪುಸ್ತಕಗಳ ಎದುರು ಅನ್ಯಮನಸ್ಕಳಂತೆ ಕುಳಿತು, ಎರಡೂ ಕೈಗಳನ್ನು ಜೋಡಿಸಿ, "ಅಬ್ಬ ಇವತ್ತು ಕುಡಿಯದಿರಲಿ..." ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದೆ. ಒಮ್ಮೊಮ್ಮೆ ಅಬ್ಬ ನಮ್ಮ ನಿರೀಕ್ಷೆಯನ್ನು ಹುಸಿಗೊಳಿಸಿ ಕುಡಿಯದೆ ಬಂದಾಗಲೆಲ್ಲ... ಅದೆಷ್ಟು ಮೌನಿ ಆತ! ಅದೆಷ್ಟು ಪ್ರೇಮಮಯಿ ಆಗಿರುತ್ತಿದ್ದ!

ಈ ಲೇಖನ ಓದಿದ್ದೀರಾ?: ಊರ್ಬದಿ | ಅಡಿಕೆ ಶ್ರೀಮಂತರ ಬೆಳೆ ಎಂಬ ಅರ್ಧ ಸತ್ಯ ಮತ್ತು ಎಲೆಚುಕ್ಕೆ ರೋಗವೆಂಬ ತುದಿಗಾಲ

ಅವತ್ತು ಅಬ್ಬ ಸ್ವಲ್ಪ ಹೆಚ್ಚೇ ಕುಡಿದಿದ್ದ. ದುಡಿದು ಕುಡಿದು ಮನೆಗೆ ಬಂದವನು ಬಾಗಿಲ ಮೂಲೆಯಲ್ಲಿ ನಿಂತಿದ್ದ ಕತ್ತಿಯೊಂದನ್ನು ಹಿಡಿದು, ತನ್ನಂತೆಯೇ ದಣಿದು ಬಂದು ಅಡುಗೆಕೋಣೆಯನ್ನು ಹೊಕ್ಕಿದ್ದ ಅಮ್ಮಿಯನ್ನು ಹೊಡೆಯಲು ಅಟ್ಟಾಡಿಸಿದ. ಅತ್ತ - ದಿನನಿತ್ಯದ ಕುಡಿತ, ಹೊಡೆದಾಟ, ಬೈಗುಳಗಳಿಂದ ರೋಸಿಹೋಗಿದ್ದ ಏಳುಮಲೈ ತನ್ನ ಮನೆ ಬಿಡಿಸಿಕೊಳ್ಳಲು ಒಂದು ಸಣ್ಣ ನೆವಕ್ಕಾಗಿ ಕಾದು ಕೂತಿದ್ದ. ಅಂದು ಮನೆಯಲ್ಲಿ ಗಲಾಟೆ ಪ್ರಾರಂಭವಾಗುತ್ತಿದಂತೆ, ತನ್ನ ಡೊಳ್ಳು ಹೊಟ್ಟೆ ಕುಣಿಸುತ್ತ ರಾಕ್ಷಸನಂತೆ ಮನೆಯೊಳಗೆ ನುಗ್ಗಿದ. ಹೆದರಿ ಕಿರುಚುತ್ತ ನಿಂತಿದ್ದ ನನ್ನ ಕಡೆಗೆ ಕೆಂಡದುಂಡೆಗಳಂತಹ ಕಣ್ಣುಗಳನ್ನು ತಿರುಗಿಸಿ, "ಚುಪ್..." ಎಂದ. ನಾನು ಹೆದರಿ ನಿಂತಲ್ಲೇ ಕುಸಿದು ಕುಳಿತೆ. ಅಬ್ಬನ ಕೊರಳಪಟ್ಟಿಗೆ ಕೈ ಹಾಕಿ ಬಾಗಿಲಿನಿಂದಾಚೆಗೆ ಎಳೆದೊಯ್ದ. ಅವನು ಎಳೆದೊಯ್ದ ರಭಸಕ್ಕೆ ಅಬ್ಬನ ಮೈಮೇಲಿನ ಬಟ್ಟೆಗಳೆಲ್ಲವೂ ಹರಿದವು. ಅಲ್ಲಿ ಅಬ್ಬನನ್ನು ಕೆಡವಿ ಚೆನ್ನಾಗಿ ಹೊಡೆದ. ನಂತರ ಮನೆಯೊಳಗೆ ನುಗ್ಗಿ, ಪಾತ್ರೆ-ಪಗಡೆ, ಬಟ್ಟೆ, ಚಾಪೆ, ಹೊದಿಕೆಗಳನ್ನೆಲ್ಲ ಬಾಚಿ ತಂದು ಮನೆಯ ಮುಂದಿನ ಅಂಗಳಕ್ಕೆಸೆದ. ಅಮ್ಮಿ ಬೇಯಿಸಿದ್ದ ಊಟವೂ ಅವುಗಳ ಜೊತೆಗೆ ನೆಲದ ಪಾಲಾಯಿತು. ಕೊಡಪಾನದಲ್ಲಿ ತುಂಬಿದ್ದ ತಣ್ಣನೆಯ ನೀರನ್ನು ತಂದು ಅಬ್ಬನ ಮೈಮೇಲೆ ದಬದಬನೆ ಸುರಿದು, ಬಾಗಿಲನ್ನು ಎಳೆದು ಚಿಲಕಕ್ಕೆ ಸಿಕ್ಕಿಸಿ ಬೀಗ ಜಡಿದುಕೊಂಡು ಹೊರಟುಹೋದ. ಬಿರಬಿರನೆ ಹೋಗುತ್ತಿದ್ದವನ ಕಾಲಿಗೆ ಬಿದ್ದು ಬೇಡುತ್ತಿದ್ದ ಅಮ್ಮಿಯನ್ನೂ ಲೆಕ್ಕಿಸದೆ, ಕಾಲು ಕಿತ್ತುಕೊಂಡು ಹೋಗಿ ತನ್ನ ಮನೆಯ ಒಳಹೊಕ್ಕು ದಢಾರನೆ ಬಾಗಿಲು ಮುಚ್ಚಿ ಅಗುಣಿ ಹಾಕಿಕೊಂಡ.

ಚಿತ್ರ ಕೃಪೆ: ಅನುಜ್ ನಾಯರ್

ಅಬ್ಬನ ಮುಖ ಏಳುಮಲೈ ಏಟುಗಳಿಂದ ಗಾಯಗೊಂಡು, ಒಂದೆರಡು ಕಡೆ ರಕ್ತವೂ ಒಸರತೊಡಗಿತ್ತು. ಸತ್ತವನಂತೆ ಬಿದ್ದುಕೊಂಡಿದ್ದ ಅಬ್ಬನನ್ನು ಅಮ್ಮಿ ಎಬ್ಬಿಸಲು ಪ್ರಯತ್ನಿಸಿ, ಅಲುಗಾಡಿಸಲೂ ಸಾಧ್ಯವಾಗದೆ ವಾಪಸು ಬಂದು, ಬೀಗ ಜಡಿದಿದ್ದ ಬಾಗಿಲನ್ನು ಒರಗಿ ನಮ್ಮಿಬ್ಬರಿಗೂ ಒಂದೊಂದು ತೊಡೆಗಳನ್ನು ಆಸರೆಯಂತೆ ಕೊಟ್ಟು ತಟ್ಟುತ್ತ ಮಲಗಿಸಿಕೊಂಡಳು. ಅಬ್ಬ ಎಷ್ಟೋ ಹೊತ್ತು ಆ ಕೆಸರಿನಲ್ಲೇ ಬಿದ್ದುಕೊಂಡಿದ್ದ. ಆ ಬಾಧಿಸುತ್ತಿದ್ದ ಹಸಿವಿನಲ್ಲೂ, ಕೊರೆಯುತ್ತಿದ್ದ ಚಳಿಯಲ್ಲೂ ನಿದ್ದೆ ಹೇಗೆ ಹತ್ತಿತೋ ನನಗೆ ತಿಳಿಯಲಿಲ್ಲ. ಅಮ್ಮಿ ಹಾಗೆ ಒರಗಿಯೇ ನಿದ್ದೆಹೋಗಿದ್ದಳು.

ಮಧ್ಯರಾತ್ರಿ ಆಗುವಷ್ಟರಲ್ಲಿ ಎಚ್ಚರಗೊಂಡ ಅಬ್ಬ ಬಂದು ಅಮ್ಮಿಯನ್ನು ಎಬ್ಬಿಸಿದ. ಅವನು ಎಬ್ಬಿಸಿದ ರಭಸಕ್ಕೆ ಗಾಢ ನಿದ್ರೆಯಲ್ಲಿದ್ದ ನಾವಿಬ್ಬರೂ ಎಚ್ಚರಗೊಂಡೆವು. "ನೋಡು... ನೋಡಿಲ್ಲಿ, ಹೆಂಗ್ ಹೊಡ್ದವ್ನೇ...!" ಎಂದು ತನ್ನ ಹರಿದ ಬಟ್ಟೆಯನ್ನು ಸರಿಸಿ, ಮೈಮೇಲಿನ ಗಾಯಗಳನ್ನು ಅಮ್ಮಿಗೆ ತೋರಿಸುತ್ತ, "ಬಾ, ನಾವು ಪೊಲೀಸ್ ಸ್ಟೇಷನ್ಗೋಗಿ ಕಂಪ್ಲೇಂಟ್ ಕೊಡನ," ಎನ್ನುತ್ತ, ಅಮ್ಮಿಯ ರಟ್ಟೆಯನ್ನು ಹಿಡಿದು ಎಳೆದುಕೊಂಡು ಹೊರಟೇಬಿಟ್ಟ.

ಈ ಲೇಖನ ಓದಿದ್ದೀರಾ?: ಗ್ರಾಹಕಾಯಣ | ಬೆಂಗಳೂರು ಜಲಮಂಡಳಿ ಅಧಿಕಾರಿಗಳಿಗೆ ಪಾಠ ಕಲಿಸಿದ ಸದಾಶಿವಮ್ಮ ಪ್ರಕರಣ

ಅಲ್ಲಿಂದ ಐದಾರು ಕಿಲೋಮೀಟರ್ ದೂರದಲ್ಲಿದ್ದ ಕುಶಾಲನಗರದ ಪೊಲೀಸ್ ಸ್ಟೇಷನ್‌ಗೆ ಆ ನಡುರಾತ್ರಿಯಲ್ಲಿ ಯಾವುದೇ ವಾಹನಗಳಿರಲಿಲ್ಲ. ಅಮ್ಮಿ ಬೇಡವೆಂದು ಅಂಗಲಾಚುತ್ತಿದ್ದಳು. ಅಬ್ಬ ದಾಪುಗಾಲುಗಳಲ್ಲಿ ನಡೆಯುತ್ತಿದ್ದರೆ, ಅಮ್ಮಿ ಏದುಸಿರಿನಲ್ಲಿ ಓಡುತ್ತಿದ್ದಳು. ನಾವಿಬ್ಬರೂ ಅವರಿಂದ ಸ್ವಲ್ಪ ದೂರದಲ್ಲಿ ಅಳುತ್ತ, ನಡುಗುತ್ತ, ನಡೆಯುತ್ತ, ಓಡುತ್ತ ಹೋಗುತ್ತಿದ್ದೆವು. ದಾರಿಯುದ್ದಕ್ಕೂ ಅಬ್ಬ ಅಲ್ಲಲ್ಲೇ ಓಡಾಡುತ್ತಿದ್ದ; ನಿಲ್ಲಿಸದ ಕಾರು, ಲಾರಿಗಳಿಗೆ ಕೈತೋರಿಸಿ ನಿಲ್ಲಿಸಲು ಪ್ರಯತ್ನಿಸುತ್ತಿದ್ದ. ಅಲ್ಲಲ್ಲೇ ನಾಯಿಗಳು ಕರ್ಕಶವಾಗಿ ಬೊಗಳುತ್ತಾ ಮೈಮೇಲೆ ಏರಿ ಬರುತ್ತಿದ್ದವು. ಸದಾ ನಿಗೂಢವೆನ್ನಿಸುತ್ತಿದ್ದ ಕತ್ತಲ ರಾತ್ರಿ ಅಂದು ಮತ್ತೂ ನಿಗೂಢವೆನ್ನಿಸಿ ಇನ್ನಿಲ್ಲದಂತೆ ನನ್ನ ಬೆಚ್ಚಿಸಿತ್ತು. ಎಷ್ಟು ನಡೆದರೂ ಸವೆಯದಿದ್ದ ಆ ದಾರಿಯನ್ನು ನೆನೆದರೆ ಪಾದಗಳು ಇಂದಿಗೂ ನೋಯುತ್ತವೆ.

ಅಲ್ಲಲ್ಲೇ ಅಮ್ಮಿಗೆ ಹೊಡೆಯುತ್ತ, ಬೈಯುತ್ತ ಕೊನೆಗೂ ಕುಶಾಲನಗರ ಪೊಲೀಸ್ ಸ್ಟೇಷನ್ ತಲುಪಿಸಿದ್ದನು ಅಬ್ಬ. ನಮ್ಮಿಬ್ಬರನ್ನೂ ಪೊಲೀಸ್ ಸ್ಟೇಷನ್ ಗೇಟಿನಲ್ಲಿಯೇ ನಿಲ್ಲಿಸಿ ಅವರಿಬ್ಬರೇ ಒಳನಡೆದರು. ಅಬ್ಬ ತನ್ನ ಹರಿದಿದ್ದ ಬಟ್ಟೆಗಳನ್ನು ಸರಿಸಿ ಪೊಲೀಸರೆದುರಿನಲ್ಲಿ ತನ್ನ ಮೈಮೇಗಳ ಗಾಯಗಳನ್ನು ಪ್ರದರ್ಶಿಸುತ್ತಿದ್ದ. ಅಮ್ಮಿಯೂ ಅಬ್ಬನ ಪರವಾಗಿಯೇ ವಾದ ಮಂಡಿಸುತ್ತಿದ್ದಳು. ಸ್ವಲ್ಪ ಹೊತ್ತಿನ ನಂತರ ಹೊರಬಂದವರು, ಪೊಲೀಸರು ಕೇಳಿದ ಮೆಡಿಕಲ್ ಸರ್ಟಿಫಿಕೆಟ್ ಅನ್ನು ಪಡೆಯುವುದಕ್ಕೋಸ್ಕರ ಎದುರಿಗೇ ಇದ್ದ ಜನರಲ್ ಆಸ್ಪತ್ರೆಯ ಕಡೆಗೆ ಧಾವಿಸಿದರು. ನಾವು ಮತ್ತೆ ಅವರ ಬಾಲಗಳಂತೆ ಹಿಂದೆಯೇ ಓಡಿದೆವು. ನಮ್ಮನ್ನು ಆಸ್ಪತ್ರೆಯ ಕಲ್ಲು ಬೆಂಚಿನ ಮೇಲೆ ಕೂರಿಸಿ ಅಬ್ಬ-ಅಮ್ಮಿ ಇಬ್ಬರೂ ಒಳಹೋದವರು ಎಷ್ಟು ಹೊತ್ತಾದರೂ ಬರಲೇ ಇಲ್ಲ.

ಅವರು ಹೋದ ಕಡೆಯೇ ‌ನಾವು ಕುತೂಹಲದಿಂದ ಹೆಜ್ಜೆ ಇಟ್ಟು ನಡೆದಾಗ, 'ಹೆರಿಗೆ ವಾರ್ಡ್' ಎಂದು ಬರೆದಿದ್ದ ಒಂದು ಕೋಣೆಯ ಬಾಗಿಲ ಎದುರು ಕುರ್ಚಿಯೊಂದರ ಮೇಲೆ ಮೈ ತುಂಬಾ ಸೆರಗು ಮುಚ್ಚಿಕೊಂಡು ಮಂಡಿಗೆ ಮುಖವೊತ್ತಿ ಅಮ್ಮಿ ಕೂತಿದ್ದಳು. ಆ ಸ್ಥಳದಲ್ಲಿ ಒಂದು ರೀತಿಯ ಕಡುಮೌನವೊಂದು ಆವರಿಸಿತ್ತು. ಯಾರೋ ಒಂದಿಬ್ಬರು ಅತ್ತು ಬಾಡಿದ ಮುಖ ಹೊತ್ತು ಮುಸಿ-ಮುಸಿ ಎನ್ನುತ್ತಿದ್ದರು. ಆ ಕೋಣೆಯ ಬಾಗಿಲು ಅರ್ಧ ತೆರೆದಿದ್ದು, ಒಳಗೆ ನರ್ಸೊಬ್ಬಳು ಎತ್ತರದ ದನಿಯಲ್ಲಿ ಅಬ್ಬನನ್ನು ಏನೇನೋ ವಿಚಾರಿಸುತ್ತಿದ್ದಳು. ನಾವು ಅಲ್ಲಿ ಇಣುಕುತ್ತಿದ್ದುದ್ದನ್ನು ಕಂಡೊಡನೆ ಅಮ್ಮಿ ಓಡಿ ಬಂದು, ನಮ್ಮನ್ನು ಹಾಗೆಯೇ ಹಿಂದಕ್ಕೆ ತಳ್ಳಿದಳು. ಅಲ್ಲಿ ಒಂದು ತಳ್ಳುಮಂಚದ ಮೇಲೆ ಬಿಳಿವಸ್ತ್ರದಲ್ಲಿ ಹೆಣದಂತೆ ಸುತ್ತಿದ್ದ ಏನೋ ಒಂದನ್ನು ಮಲಗಿಸಿದ್ದರು. ನನಗೆ ಭಯದಿಂದ ಎದೆ ಝಲ್ ಎಂದಿತು.

ಅದ್ಯಾಕೋ ಗೊತ್ತಿಲ್ಲ, ಚಿಕ್ಕಂದಿನಲ್ಲಿ ಅಬ್ಬ-ಅಮ್ಮಿ ಇಬ್ಬರೂ ನಮಗೆ ಹೆಣವನ್ನು ಮಾತ್ರ ತೋರಿಸುತ್ತಿರಲಿಲ್ಲ. ಹಾದಿಯ ಮೇಲೆ ಮೆರವಣಿಗೆಯಲ್ಲಿ ಹೋಗುವ ಹೆಣಗಳನ್ನೂ ನಾವು ನೋಡುವಂತಿರಲಿಲ್ಲ. ಮೆರವಣಿಗೆಯ ಸದ್ದು ಮನೆಯ ಬೀದಿ ಸಮೀಪಿಸುತ್ತಿದ್ದಂತೆ ನಮ್ಮನ್ನು ಮನೆಯೊಳಗೆ ಕೂಡಿ ಒಳಗಿನಿಂದ ಚಿಲಕ ಹಾಕುತ್ತಿದ್ದರು. ಹಾಗಾಗಿ, ಅಂದು ಆಸ್ಪತ್ರೆಯಲ್ಲಿ ಕೂಡ ನಮ್ಮನ್ನು ಅಲ್ಲಿಂದಲ್ಲೇ ಬೇಗಬೇಗನೆ ಸಾಗಹಾಕಿದಳು. ನಾವು ಹೆದರುತ್ತಲೇ ಮತ್ತೆ ಬಂದು ಆ ಕಲ್ಲು ಬೆಂಚಿನ ಮೇಲೆಯೇ ಮಲಗಿ ನಿದ್ದೆಹೋದೆವು. ತಣ್ಣನೆಯ ಕಲ್ಲು ಬೆಂಚು ಸಹ ನನಗೆ ಬೆಚ್ಚನೆಯ ಹಾಸಿಗೆಯಂತೆನಿಸಿದ್ದು ಆ ದಿನವೇ. ಅರೆಕ್ಷಣದಲ್ಲಿ ಗಾಢ ನಿದ್ರೆ ಅಡರಿಕೊಂಡಿತು. ಎಷ್ಟೋ ಹೊತ್ತಿನ ನಂತರ ಅಮ್ಮಿ ಬಂದು ನನ್ನನ್ನು ಗಟ್ಟಿಯಾಗಿ ಅಲುಗಾಡಿಸುತ್ತ ಎಬ್ಬಿಸುತ್ತಿದ್ದಾಳೆ. ನಾನು ಬಿಡಲಾರದ ಕಣ್ಣುಗಳನ್ನು ರೆಪ್ಪೆಗಳಿಂದ ಬಲವಂತವಾಗಿ ಕಿತ್ತು ಕಣ್ಣಗಲಿಸಿ ಕೈಯಿಂದ ಉಜ್ಜಿಕೊಳ್ಳುತ್ತ, ನಿದ್ದೆಗಣ್ಣಿನಲ್ಲೇ ಪುನಃ ಅಮ್ಮಿಯ ಹಿಂದೆಯೇ ನಡೆಯಲು ಅನುವಾದೆ.

ಈ ಲೇಖನ ಓದಿದ್ದೀರಾ?: ನುಡಿಚಿತ್ರ | ನೆಲಕ್ಕುರುಳಿದ ಮನೆಯ ನೀಲಿಬಾಗಿಲಿನಲ್ಲಿ ಕಂಡ ಸೂರ್ಯ-ಚಂದ್ರ

ಅಷ್ಟರಲ್ಲಿ ನಸುಕು ಸೂರ್ಯನೂ ಕಣ್ತೆರೆದು ತಲೆ ನೇವರಿಸತೊಡಗಿದ್ದ. ಕಳೆದ ರಾತ್ರಿಯಿಂದ ಊಟವಿಲ್ಲದ ಹೊಟ್ಟೆಗೆ ಹಸಿವಿನ ಬೆಂಕಿಯೇ ಬಿದ್ದಿತ್ತು. ಆಸ್ಪತ್ರೆಯಲ್ಲಿ ಪಡೆದುಕೊಂಡ ಆ ಚೀಟಿಯನ್ನು ಕೊಂಡೊಯ್ದು ಪೊಲೀಸ್ ಸ್ಟೇಷನ್‌ನಲ್ಲಿ ಕೊಟ್ಟ ಅಬ್ಬ, ಮಹತ್ಕಾರ್ಯ ಸಾಧಿಸಿದವನಂತೆ ರಾತ್ರಿ ಬಂದ ದಾರಿಯಲ್ಲೇ ಬಿರಬಿರನೆ ನಡೆಯತೊಡಗಿದ. ನನಗೆ ಮತ್ತೆ ಅಷ್ಟು ದೂರ ನಡೆಯುವ ತ್ರಾಣವಿಲ್ಲದೆ ದಾರಿಯುದ್ದಕ್ಕೂ ಅಳುವಿಗೆ ರಾಗ ಬೆರೆಸಿ ದಾರಿ ಸವೆಸಿದೆ.

ಮನೆ ಬಾಗಿಲ ಮುಂದೆ ಏಳುಮಲೈ ಎಸೆದಿದ್ದ ಪಾತ್ರೆ, ಬಟ್ಟೆಗಳೆಲ್ಲವೂ ಕೆಸರಲ್ಲಿ ಕೆಸರಾಗಿ ಬಿದ್ದಿದ್ದವು. ಅವನ್ನೆಲ್ಲ ಗಂಟು ಕಟ್ಟಿಕೊಂಡು ಅಲ್ಲೇ ಸ್ವಲ್ಪ ದೂರದಲ್ಲಿದ್ದ ಶಂಕರಾಚಾರಿ ಎಂಬುವರ ತೆಂಗಿನ ತೋಟಕ್ಕೆ ಕರೆದೊಯ್ದನು ಅಬ್ಬ. ನಮ್ಮನ್ನು ಒಂದು ತೆಂಗಿನಮರದ ನೆರಳಲ್ಲಿ ಕುಳ್ಳಿರಿಸಿದನು. ಹಸಿವನ್ನು ಮನಸ್ಸಿನಿಂದ ಕಿತ್ತುಹಾಕಿ, ಮನಸ್ಸನ್ನು ಕಲ್ಲಿಗಿಂತಲೂ ನಿಶ್ಚಲ ಮಾಡಿಕೊಂಡು ಆ ಮರದ ನೆರಳಿನಲ್ಲಿ ನಿರುಮ್ಮಳವಾಗಿ ಅನ್ನುವುದಕ್ಕಿಂತಲೂ ಸತ್ತಂತೆ ನಿದ್ರಿಸಿದೆವು. ಸಂಜೆಯ ಹೊತ್ತಿಗೆ ಅಬ್ಬ ಒಂದೊಂದು ಪೊಟ್ಟಣದಲ್ಲಿ ಇಡ್ಲಿ ಕಟ್ಟಿಸಿ ತಂದುಕೊಟ್ಟು ಹೋದವನು, ಸೇತುವೆ ಆಚೆಯಿದ್ದ ಮಣ್ಣಪ್ಪಣ್ಣ ಎಂಬುವರ ವಠಾರವೊಂದರಲ್ಲಿ ಒಂದು ಪುಟ್ಟ ಗೂಡನ್ನು ನಿಗದಿ ಮಾಡಿಕೊಂಡು ರಾತ್ರಿಯ ಹೊತ್ತಿಗೆ ಮರಳಿದನು. ಕತ್ತಲಿಗೂ ಮುಂಚೆಯೇ ನಮ್ಮನ್ನು ಆ ಪುಟ್ಟ ಮನೆಗೆ ಕರೆದೊಯ್ದು, ಮತ್ತೊಂದು ಹೊಸ ಬದುಕಿನ ಅಧ್ಯಾಯಕ್ಕೆ ನಾಂದಿ ಬರೆದನು.

ಮುಂದುವರಿಯುವುದು...

ಕಲಾಕೃತಿಗಳ ಕೃಪೆ: unsplash ಜಾಲತಾಣ
ನಿಮಗೆ ಏನು ಅನ್ನಿಸ್ತು?
2 ವೋಟ್
eedina app