ಊರ್ಬದಿ | ಶಾಲೆ ವಿಲೀನ ಪ್ರಹಸನ ಮತ್ತು ಇಂದ್ರೋಡಿಮನೆ ಶಾಲೆಯ ಪೂರ್ಣಿಮಾ

ಆಕೆಯ ದಾರಿಯ ಆರು ಹಳ್ಳದ ಪೈಕಿ ಮೂರಕ್ಕೆ ಕಾಲುಸಂಕವಿತ್ತು. ಇನ್ನುಳಿದ ಮೂರನ್ನು ಆಕೆ ತನ್ನ ಪುಟ್ಟ ಲಂಗ ಎತ್ತಿ ಹಿಡಿದು ಪಾದದ ತುದಿಯಲ್ಲಿ ನೀರಿನಾಳದ ನೆಲ ಅಳೆಯುತ್ತ ಹೆಜ್ಜೆ ಹಾಕಿ ದಾಟಬೇಕಿತ್ತು. ಸಂಕದ ಹಳ್ಳವನ್ನೇನೋ ದಾಟಿದಳು. ಸಂಕವಿಲ್ಲದ ಹಳ್ಳ ಸೊಕ್ಕೇರಿ ಹರಿಯುತ್ತಿತ್ತು. ಆದರೆ, ಕಣ್ಣಳತೆಯಲ್ಲೇ ಅಪಾಯ ಅರಿಯುವ ವಯಸ್ಸಲ್ಲ ಆ ಹಸುಗೂಸಿನದ್ದು...

ಕಾಡಿನ ನಿಗೂಢತೆಯ ಬಗ್ಗೆ, ಅದರ ಮೌನ ಮತ್ತು ಮಾತಿನ ಬಗ್ಗೆ ಲೇಖಕ ಪೂರ್ಣಚಂದ್ರ ತೇಜಸ್ವಿ ಅವರಿಗಿಂತ ಮನೋಜ್ಞವಾಗಿ ಮತ್ತೊಬ್ಬರು ಹೇಳುವುದು ಕಷ್ಟ. ಏಕೆಂದರೆ, ತೇಜಸ್ವಿ ಕಾಡಿನ ನಡುವೆಯೇ ಬೆರೆತು, ಅದರೊಂದಿಗೇ ಒಡನಾಡಿ, ಅದರ ಭಾಷೆಯನ್ನು ಅರಿತ ಬರಹಗಾರ. ಆದರೆ, ಕಾಡಿನೊಳಗಿನ ಬದುಕಿನ ಮೌನ ಕೂಡ ಕೆಲವೊಮ್ಮೆ ಮಾತು ದಾಟಿಸಲು ಸೋತ ನೋವನ್ನು ದಾಟಿಸಿಬಿಡುತ್ತದೆ.

ಐದು ವರ್ಷದ ಹಿಂದೆ, ಶರಾವತಿ ಕಣಿವೆಯ ಕಾಡಿನೊಡಲಿನ ಜೀವಗಳ ಬದುಕ ಅರಸಿ ಹೊರಟಾಗ, ನಿಜಕ್ಕೂ ಅಂತಹದ್ದೊಂದು ಬದುಕು ಈಗಲೂ ನಮ್ಮಲ್ಲಿ ಇದೆ ಎಂದು ಅಂದುಕೊಂಡಿರಲಿಲ್ಲ. ತಾಲೂಕು ಕೇಂದ್ರದಿಂದ ಸುಮಾರು 70 ಕಿಲೋಮೀಟರ್ ಘಾಟಿ ದಾರಿಯಲ್ಲಿ ಸಾಗಿ, ಬಿಳಿಗಾರು ಎಂಬಲ್ಲಿ ಸಾಗರ-ಭಟ್ಕಳ ರಸ್ತೆಯಿಂದ ಬಲಕ್ಕೆ ಹೊರಳಿ, ಹತ್ತು ಕಿಲೋಮೀಟರ್ ಹೋದರೆ ಕಾನೂರು (ಹೌದು, ರಾಣಿ ಚೆನ್ನಾಭೈರಾದೇವಿಯ ಕಾನೂರು) ಕೋಟೆಯಿಂದ ಐದು ಕಿಲೋಮೀಟರ್ ಹಿಂದೆ ಬೆಳ್ಳೂರು ಕ್ರಾಸ್‍ನಲ್ಲಿ ಟಾರು ರಸ್ತೆಯಿಂದ ಹೊರಳಿ ಗಗನಚುಂಬಿ ಮರಗಳ ನಡುವೆ ಹಾವಿನಂತೆ ಹಾದುಹೋಗುವ ಕಾಲುದಾರಿಯಲ್ಲಿ ಹತ್ತು ಕಿಲೋಮೀಟರ್ ಏರಿದರೆ (ಅಕ್ಷರಶಃ ಟ್ರೆಕ್ಕಿಂಗ್‌ನಂತೆ) ಚೀಕನಹಳ್ಳಿ ಎಂಬ ಕುಗ್ರಾಮ ಸಿಗುತ್ತದೆ.

ಕಲ್ಲು ಗೊಟರು, ಬೇರು, ಇಳಿಜಾರು, ಮರಮಟ್ಟುಗಳನ್ನು ಹಾದುಹೋಗುವ ಆ ದುರ್ಗಮ ದಾರಿಯೇ ಸಾಮಾನ್ಯರಿಗೆ ಎದೆ ನಡುಗಿಸುತ್ತದೆ. ಆ ಎದೆ ನಡುಗಿಸುವ ದಾರಿ ಸವೆಸುತ್ತಲೇ ಉರುಳುಗಲ್ಲು ಗ್ರಾಮದ ಸಾಲ್ಕೋಡು, ಹೆಬ್ಬಯ್ಯನಕೆರೆ ಮತ್ತಿತರ ಕುಗ್ರಾಮಗಳನ್ನು ದಾಟಿಕೊಂಡು ಚೀಕನಹಳ್ಳಿಗೆ ತಲುಪಬೇಕು. ಆ ದಾರಿಯಲ್ಲಿ ಹಾಡಹಗಲೇ ಕರಿ ಚಿರತೆ, ಹುಲಿ ಎದುರಾದರೂ ಅಚ್ಚರಿ ಇಲ್ಲ. ಇನ್ನು, ಕಾಡುಕೋಣಗಳ ಹಿಂಡಂತೂ ಕಾಣಿಸದಿರುವ ಸಾಧ್ಯತೆಯೇ ಇಲ್ಲ! ಬೈಕ್ ಅಥವಾ ಕಾಲ್ನಡಿಗೆ ಬಿಟ್ಟರೆ ಈ ದಾರಿಯಲ್ಲಿ ಬೇರೆ ವಾಹನ ಚಲಿಸಲಾರವು. ಬೈಕ್ ಅನ್ನು ಕೂಡ ಅಲ್ಲಿನ ಆ ದಾರಿಯ ಅನುಭವಿಗಳು ಮಾತ್ರ ಚಲಾಯಿಸಬಹುದೇ ವಿನಾ ಹೊರಗಿನವರು ಓಡಿಸುವುದು ಸಾಧ್ಯವೇ ಇಲ್ಲ. ಇಷ್ಟು ಹೇಳಿದ ಮೇಲೆ ಅದು ಭಯಾನಕ ದಾರಿ ಎಂದು ಮತ್ತೆ ಹೇಳಬೇಕಿಲ್ಲ.

ಶರಾವತಿ ಅಭಯಾರಣ್ಯದ ನಟ್ಟನಡುವೆ ಇರುವ ಆ ಕುಗ್ರಾಮಗಳಿಗೆ ರಸ್ತೆಯೊಂದೇ ಅಲ್ಲ; ಶರಾವತಿ ನದಿ ಕಣಿವೆಯ ಸರಣಿ ಜಲವಿದ್ಯುತ್ ಯೋಜನೆಗಾಗಿ ಮುಳುಗಡೆಯಾಗಿಹೋದ ಆ ಊರಿನ ನಿವಾಸಿಗಳಿಗೆ ಇವತ್ತಿಗೂ ವಿದ್ಯುತ್ ಬೆಳಕು ಕನಸಾಗೇ ಇದೆ. ಇನ್ನು, ಶಾಲೆ ಮತ್ತು ಆಸ್ಪತ್ರೆ ಎಂಬುದು ದೂರದ ಮಾತು. ಆ ಊರಿನ ಒಂದು ಮಗು ಶಾಲೆಯ ಮುಖ ನೋಡಬೇಕೆಂದರೆ ಬರೋಬ್ಬರಿ 12 ಕಿಲೋಮೀಟರ್ (ಹಳ್ಳ-ಕೊಳ್ಳದ ಒಳದಾರಿ) ದೂರದ ಕಾನೂರು ಶಾಲೆಗೆ ಹೋಗಬೇಕು. ಇಲ್ವವೇ, 18 ಕಿಲೋಮೀಟರ್ ದೂರದ ಭಾನುಕುಳಿಗೆ ಹೋಗಬೇಕು! ಇನ್ನು, ಅಂಗನವಾಡಿಯಂತೂ ಕಲ್ಪನೆಗೂ ನಿಲುಕದ ಸಂಗತಿ. ಆಸ್ಪತ್ರೆಗೆ ಹೋಗಬೇಕೆಂದರೆ ಸುಮಾರು 55 ಕಿಲೋಮೀಟರ್ ದೂರದ ಕಾರ್ಗಲ್‍ಗೆ ಹೋಗಬೇಕು. ಅಲ್ಲಿಯೂ ಸರಿಯಾಗಿ ವೈದ್ಯರು ಇರುವುದಿಲ್ಲ. ಹಾಗಾಗಿ, ತುರ್ತು ಚಿಕಿತ್ಸೆ ಬೇಕಿದ್ದರೆ 90 ಕಿಲೋಮೀಟರ್ ದೂರದ ಸಾಗರಕ್ಕೇ ಹೋಗಬೇಕು!

Image
ಚೀಕನಹಳ್ಳಿ

ಬೈಕಿನಲ್ಲಿ ಕೂರಲಾಗದ ಸ್ಥಿತಿ ಇದ್ದರಂತೂ ದಡಿಗೆ ಕಟ್ಟಿ, ಜೋಲಿಯಲ್ಲಿ ಕೂರಿಸಿಕೊಂಡು ಹೊತ್ತುಕೊಂಡೇ 18 ಕಿಲೋಮೀಟರ್ ದೂರ ಕ್ರಮಿಸಿ ಆಮೇಲೆ ಬಸ್ಸೋ, ಖಾಸಗಿ ಕಾರೋ ಹಿಡಿದು ಆಸ್ಪತ್ರೆ ತಲುಪಬೇಕು. ಇದು ನಾಡಿಗೇ ಬೆಳಕು ಕೊಡಲು ಬದುಕು ಮುಳುಗಿಸಿಕೊಂಡ ಶರಾವತಿ ಕಣಿವೆಯ ಚೀಕನಹಳ್ಳಿ, ಉರುಳುಗಲ್ಲುಗಳ ಕತೆ ಮಾತ್ರವಲ್ಲ, ಮೇಘಾನೆ, ಹೆನ್ನಿ ಮುಂತಾದ ಹತ್ತಾರು ಕುಗ್ರಾಮಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ.

ಚೀಕನಹಳ್ಳಿಯ ಬಡ ರೈತಾಪಿ ಕುಟುಂಬದ ಮಗುವೊಂದು ಅಂತಹ ದುರ್ಗಮ ದಾರಿ ಸವೆಸಿ ಶಾಲೆಗೆ ಹೋಗುವುದನ್ನು ನೆನೆದು, ನನಗೆ ಸುಮಾರು ಹತ್ತು ವರ್ಷಗಳ ಹಿಂದೆ ಇದೇ ಶರಾವತಿ ಕಣಿವೆಯ ತಳಕಳಲೆ ಹಿನ್ನೀರು ಪ್ರದೇಶದ ಇಂದ್ರೋಡಿಮನೆ ಎಂಬ ಗ್ರಾಮದ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದ ಪೂರ್ಣಿಮಾ ಎಂಬ ಹೆಣ್ಣುಮಗುವಿನ ದಾರುಣ ಅಂತ್ಯ ಕಣ್ಣಮುಂದೆ ಹಾದುಹೋಯಿತು.

ಪೂರ್ಣಿಮಾ ತನ್ನ ಮನೆಯಿಂದ ಕೇವಲ ಅರ್ಧ ಕಿಲೋಮೀಟರ್ ದೂರದ ಬೆಂಕವಳ್ಳಿಯ ಶಾಲೆಗೆ ಹೋಗುತ್ತಿದ್ದಳು. ಓದಿನಲ್ಲಿ ಚುರುಕಿದ್ದ ಮುದ್ದು ಹುಡುಗಿ. ಹಾಗಾಗಿ, ಶಾಲೆಯ ಮಾಸ್ತರ ಮುದ್ದಿನ ಶಿಷ್ಯೆ. ಆದರೇನು ಮಾಡುವುದು? ಕಗ್ಗಾಡಿನ ನಡುವಿನ ಕುಗ್ರಾಮದ ಆ ಶಾಲೆಯಲ್ಲಿ ಕಲಿಯುವ ಮಕ್ಕಳೇ ಇಲ್ಲದೆ, ಒಬ್ಬಳಿಗಾಗಿ ಶಾಲೆ ನಡೆಸಲಾಗದು ಎಂದು ಸರ್ಕಾರ ಶಾಲೆಯನ್ನೇ ಮುಚ್ಚಿಬಿಟ್ಟಿತು!

ಸರ್ಕಾರವೇನೋ ಶಾಲೆ ಮುಚ್ಚಿ ಶಿಕ್ಷಕರನ್ನು ಬೇರೆಡೆಗೆ ವರ್ಗಾಯಿಸಿ ಮಗು ಪೂರ್ಣಿಮಾಗೆ ನಾಲ್ಕು ಕಿಲೋಮೀಟರ್ ದೂರದ ಇಂದ್ರೋಡಿಮನೆ ಶಾಲೆಗೆ ವರ್ಗಾವಣೆ ಮಾಡಿತು. ಆದರೂ ಓದಿನ ಪ್ರೀತಿಯ ಕೂಸು ಶಾಲೆ ಬಿಡಲೊಪ್ಪಲಿಲ್ಲ. ಮನೆಯಿಂದ ಹೊರಟು ಶಾಲೆಗೆ ತಲುಪಲು ಆಕೆ ಶರಾವತಿ ಕಣಿವೆಯ ಕಗ್ಗಾಡಿನ ನಡುವೆ ದುರ್ಗಮ ಕಾಲುದಾರಿಯಲ್ಲಿ ನಡೆದುಕೊಂಡೇ ಹೋಗಬೇಕಿತ್ತು. ಅಪ್ಪ-ಅಜ್ಜ ಮತ್ತಿನ್ಯಾರೋ ಮನೆಮಂದಿ ಜೊತೆಗಿದ್ದರೂ ಆಕೆಯ ಹಾದಿಯನ್ನು ಆಕೆಯೇ ಸವೆಸಬೇಕಿತ್ತು. ಸುರಿವ ಮಳೆ, ಹರಿವ ಹೊಳೆಗಳನ್ನು ದಾಟಬೇಕಿತ್ತು. ಮಳೆಗಾಲದಲ್ಲಿ ಆರು ಹೊಳೆ ದಾಟಿದ ಬಳಿಕವೇ ಆಕೆಯ ಇಂದ್ರೋಡಿಮನೆ ಶಾಲೆಯ ಹೊಸ್ತಿಲು ಸಿಗುತ್ತಿದ್ದುದು.

ಈ ಲೇಖನ ಓದಿದ್ದೀರಾ?: ತೋಳ ಬಂತು ತೋಳ- 4 | ಜನಪ್ರತಿನಿಧಿಗಳ ನೈಜ ಕಾಳಜಿ ಮಲೆನಾಡಿನ ಬದುಕೇ? ಕ್ವಾರಿ ಲಾಬಿಯೇ?

ಹೀಗೆ, ಶ್ರಾವಣದ ಕುಂಭದ್ರೋಣ ಮಳೆಗೆ ಇಡೀ ಕಾಡಿನ ತುಂಬೆಲ್ಲ ಝರಿಗಳು ಹರಿದು, ಹಳ್ಳಕೊಳ್ಳಗಳು ಭೋರ್ಗರೆಯುತ್ತಿರುವಾಗ ಕೂಡ ಪೂರ್ಣಿಮಾ ಶಾಲೆಗೆ ಒಂದು ದಿನವೂ ತಪ್ಪಿಸುತ್ತಿರಲಿಲ್ಲ. ಅಪ್ಪ-ಅಮ್ಮ, “ಇವತ್ತೊಂದಿನ ಬ್ಯಾಡ ಮಗಾ ಹ್ವಾಪದು, ಮಳೇ ಅಂದ್ರೆ ಮಳೆ ಮನೇಲಿರೇ ಕಂದ...” ಎಂದರೂ ಆಕೆ ಕೇಳುವ ಹುಡುಗಿಯಾಗಿರಲಿಲ್ಲ. ಆಕೆಯ ಅಕ್ಷರದ ಹಸಿವು ಅಷ್ಟಿತ್ತು. ಕಾಡಿನ ದುರ್ಗಮ ದಾರಿ, ಕೊಚ್ಚಿ ಒಯ್ಯುವ ರೋಷದ ಹಳ್ಳ, ಕಾಡಿನ ಹಂದಿ, ಹಾವು, ಕಿರುಬ, ಗವ್ವೆನ್ನುವ ಕಾಡಿನ ನೀರವತೆ... ಊಹ್ಞೂಂ, ಯಾವುದೂ ಆಕೆಯ ಕಲಿಯುವ ಅದಮ್ಯ ಬಯಕೆಯನ್ನು ಬತ್ತಿಸುತ್ತಿರಲಿಲ್ಲ.

ಅವತ್ತೂ ಹಾಗೆಯೇ, ಎರಡು ದಿನಗಳಿಂದ ಸುರಿದ ಶ್ರಾವಣದ ಮಳೆ ಹಳ್ಳಕೊಳ್ಳಗಳನ್ನು ಒಂದಾಗಿಸಿತ್ತು. ಅಪ್ಪ-ಅಮ್ಮ, “ಬೇಡ ಮಗ ಇವತ್ತು ಮಳೆ ನಿಲ್ತಿಲ್ಲ, ಹಳ್ಳ ತುಂಬಿ ಹರೀತಿವೆ. ಹೋಗೋದು ಬ್ಯಾಡ ಇರು, ಮಾಸ್ತರಿಗೆ ಹೇಳ್ತೆ,” ಎಂದರು. ಆದರೆ ಆಕೆ ಕೇಳಬೇಕಲ್ಲ... ರೈನ್ ಕೋಟ್ ಹಾಕಿ ಎಂದಿನಂತೆ ಸ್ಕೂಲ್ ಬ್ಯಾಗ್ ಬೆನ್ನಿಗೇರಿಸಿ ಹೊರಟೇಬಿಟ್ಟಳು.

ಆಕೆಯ ದಾರಿಯ ಆರು ಹಳ್ಳದ ಪೈಕಿ ಮೂರಕ್ಕೆ ಕಾಲುಸಂಕವಿತ್ತು. ಇನ್ನುಳಿದ ಮೂರನ್ನು ಆಕೆ ತನ್ನ ಪುಟ್ಟ ಲಂಗವನ್ನು ಎತ್ತಿ ಹಿಡಿದುಕೊಂಡು ಪಾದದ ತುದಿಯಲ್ಲಿ ನೀರಿನಾಳದ ನೆಲ ಅಳೆಯುತ್ತ ಹೆಜ್ಜೆ ಹಾಕಿ ದಾಟಬೇಕಿತ್ತು. ಕಾಲುಸಂಕದ ಹಳ್ಳವನ್ನೇನೋ ದಾಟಿದಳು. ಸಂಕವಿಲ್ಲದ ಹಳ್ಳ ಸೊಕ್ಕೇರಿ ಹರಿಯುತ್ತಿತ್ತು. ಸೊಕ್ಕಿದ ಹಳ್ಳ ಉಕ್ಕೇರಿದ್ದನ್ನು ಊಹಿಸುವ, ಕಣ್ಣ ಅಳತೆಯಲ್ಲೇ ಅಪಾಯ ಅರಿಯುವ ವಯಸ್ಸಲ್ಲ ಆ ಹಸುಗೂಸಿನದ್ದು.

ಹಳ್ಳ ಕಂಡು ಭಯವಾಯ್ತು. ಆದರೆ, ಶಾಲೆಯ ಹಂಬಲ ಹೆಚ್ಚಿತ್ತು. ಮುಗ್ಧ ಮನಸ್ಸಿಗೆ ತಾನು ಇಳಿಯುತ್ತಿರುವ ಹಳ್ಳ ತನ್ನನ್ನು ಕೊಚ್ಚಿ ಒಯ್ಯಬಹುದು ಎಂಬ ಅರಿವಾಗಲಿಲ್ಲ. ಎರಡೂ ಕೈಯಲ್ಲಿ ಲಂಗ ಎತ್ತಿಹಿಡಿದುಕೊಂಡು ರೊಚ್ಚಿನ ಹಳ್ಳಕ್ಕೆ ಇಳಿದಳು ಹುಡುಗಿ. ಎರಡೇ ಹೆಜ್ಜೆಯಲ್ಲಿ ನೀರಿನ ಸೆಳವಿಗೆ ಸಿಕ್ಕಳು. ಶಾಲೆಯ ಕನಸು ಕಣ್ಣಲ್ಲಿತ್ತು. ಕಾಲು ತಪ್ಪಿ ನೀರಿನ ಸೆಳವಿಗೆ ಕೊಚ್ಚಿಹೋಗುವ ಭೀತಿ ಎದೆಯಲ್ಲಿ… ಹುಚ್ಚು ಹೊಳೆಗೆ ಕಿಂಚಿತ್ತೂ ಕರುಣೆ ಬರಲಿಲ್ಲ. ಕೊಚ್ಚಿಹೋಯಿತು ಕನಸೊಂದು. ಕಲಿಯುವ ಅದಮ್ಯ ಬಯಕೆಯ ಆ ಕನಸು ಹುಚ್ಚುಹೊಳೆಯ ಪಾಲಾಯಿತು.

Image
ಶಿಕ್ಷಣ ಸಚಿವ ಬಿ ಸಿ ನಾಗೇಶ್

ಬೆಂಕವಳ್ಳಿಯ ಶಾಲೆ ಮುಚ್ಚಿದ ಸರ್ಕಾರ ಮತ್ತು ಜಲಾಶಯ ಕಟ್ಟಿ, ಅಭಯಾರಣ್ಯ ಘೋಷಿಸಿ ಶರಾವತಿ ಕಣಿವೆಯ ಜನರನ್ನು ಸಕಲ ಸೌಕರ್ಯವಂಚಿತರನ್ನಾಗಿ ಕೂಡಿಹಾಕಿರುವ ವ್ಯವಸ್ಥೆ ಆ ಕಗ್ಗೊಲೆಯ ಸಮಾನ ಪಾಲುದಾರರು.

ಇಂತಹ ಪೂರ್ಣಿಮರು ಶರಾವತಿ ಕಣಿವೆಯಲ್ಲಿ ಹತ್ತಾರು ಮಂದಿ. ಕಾಡಿನ ಜನರ ಮೌನಕ್ಕೆ ಕಿವಿಯಾದರೆ ಅಂತಹ ಹತ್ತಾರು ದಾರುಣ ಕತೆಗಳ ಬಿಚ್ಚಿಕೊಳ್ಳದೆ ಇರವು. "ಒಂದು ಮಗುವಿಗೇಕೆ ಶಾಲೆ?" ಎಂದು ಕೇಳುವ ಅಮಾನುಷ ಸರ್ಕಾರ ಮತ್ತು ಇಲಾಖೆಗಳ ಸಂವೇದನಾಹೀನ ನಡೆಗೆ ಬಲಿಯಾಗುವ ಪೂರ್ಣಿಮರು ನಾಡಿನುದ್ದಗಲಕ್ಕೆ ಸಾವಿರಾರು!

ಇದೀಗ ಮತ್ತೆ ನಮ್ಮ ಘನ ಸರ್ಕಾರ ಮಕ್ಕಳ ಕೊರತೆಯ ನೆಪವೊಡ್ಡಿ ರಾಜ್ಯಾದ್ಯಂತ ಬರೋಬ್ಬರಿ 13,800 ಶಾಲೆಗಳನ್ನು ಮುಚ್ಚಲು (ಮುಚ್ಚುವುದು ಎಂಬ ಪದ ಬಳಸದೆ ನಾಜೂಕಾಗಿ ವಿಲೀನ ಎನ್ನಲಾಗಿದೆ) ಸಜ್ಜಾಗಿದೆ. ಆದರೆ, ಬೈಕ್, ಸೈಕಲ್ ಕೂಡ ಹೋಗಲಾಗದ ದುರ್ಗಮ ದಾರಿಗಳಲ್ಲಿ ಶಿಕ್ಷಣ ಸಚಿವರು ಹೇಳಿರುವ ಸರ್ಕಾರಿ ಬಸ್‌ಗಳು ಹೇಗೆ ಹೋಗುತ್ತವೆ? ಕಾಡು-ಕಣಿವೆಯ ಮಕ್ಕಳನ್ನು ಅವರ ಹೋಬಳಿ ಮಾದರಿ ಶಾಲೆಗೆ ಹೇಗೆ ಕರೆತರುತ್ತವೆ?

ಶಿಕ್ಷಣ ಮತ್ತು ಭವಿಷ್ಯದ ತಲೆಮಾರನ್ನು ಖರ್ಚು-ವೆಚ್ಚದ ಲೆಕ್ಕದಲ್ಲಿ ತಾಳೆ ನೋಡುವ ಇಂತಹ ಸರ್ಕಾರ- ಸಚಿವರ ದೂರದೃಷ್ಟಿಗೆ ಇನ್ನೆಷ್ಟು ಪೂರ್ಣಿಮಾರ ಬದುಕು ಬಲಿಯಾಗಲಿದೆಯೋ? ಇಂತಹ ಸಂವೇದನಾಹೀನ ಸರ್ಕಾರಗಳನ್ನು ಆರಿಸಿದ ನಮ್ಮ ಕೈಗೂ ಇನ್ನೆಷ್ಟು ಕನಸುಗಳನ್ನು ಚಿವುಟಿದ ಹಸಿರಕ್ತ ಅಂಟಲಿದೆಯೋ!

ಮುಖ್ಯ ಚಿತ್ರ: ಉರುಳುಗಲ್ಲು ಬಳಿಯ ಹಳ್ಳ
ನಿಮಗೆ ಏನು ಅನ್ನಿಸ್ತು?
2 ವೋಟ್