ಕರುಣೆಯ ಕೃಷಿ | ಕಾರ್ಲೋಜ್ ಅಟ್ಲ್ ಕವಿತೆ 'ಸಾವನ್ನು ತರುವ ಪ್ರತಿಯೊಂದು ಪ್ರಕಾರವೂ ತರುವುದು ಹಾಡನ್ನು'

ನನ್ನ ರಕ್ತದಿಂದ ಸಾಮ್ರಾಜ್ಯ ಕಟ್ಟ ಬಯಸುವೆ ನೀನು

ತಮ್ಮದೇ ತಾಯಿಭಾಷೆಯಲ್ಲಿ ಹಾಡುವ ಜಲಪಾತಗಳಿಂದೆದ್ದ

ಇಡೀ ಕಾಡುಗಳನ್ನು ನಾಶಮಾಡ ಬಯಸುವೆ ನೀನು

ಮಹಿಳೆಯರ ಜಲಪಾತ

ಗಂಡಸರ ಜಲಪಾತ

 

ಕೈಯಲ್ಲಿ ಸಂವಿಧಾನ ಹಿಡಿದು

ನನ್ನ ಮೇಲೆ ಗುಂಡಿಡ ಬಯಸುವೆ ನೀನು

'ಪ್ರೀತಿಸುವುದು,' 'ಹುಟ್ಟಿಸುವುದು,' 'ಬೆಂಕಿ ಹಾಕುವುದು'

ಎಲ್ಲವೂ ಇತರ ಬಗೆಗಳು

 

ವಿಕಾಸದ ಹೆಸರಲ್ಲಿ ನನ್ನೊಳಗೆ ಬಾಳುವ ದೇವರನ್ನು

ಸೊರಗಿಸ ಹೊರಟಿರುವೆ ನೀನು

ಆದರೆ ನಾನು ಚಿರಂತನ

ಜೀವಮಾನದಿಂದ ಜೀವಮಾನದವರೆಗೆ ಸಾಗುವ ರಕ್ತ

ಅನ್ನವಿರದೆ, ಅತ್ಯಂತ ಕಡುಕಾರ್ಪಣ್ಯಗಳ ನಡುವೆ

ನಾನು ನನ್ನ ಭೂಮಿ

ನಾನೇ ನನ್ನ ಮಾತೃಭೂಮಿ

ನಾನು ನನ್ನದೇ ಬೀಜರೂಪ

ನಾನೇ ಗಂಡು, ನಾನೇ ಹೆಣ್ಣು

ಪ್ರೀತಿಯೂ ನನ್ನೊಳಗೆಯೇ

ಕ್ರೋಧವೂ ನನ್ನೊಳಗೆ

ಇದೇ ರಕ್ತಪಾತದ ದಾಹದಲ್ಲಿ ಜನ್ಮಿಸಿ

ಇದೇ ಉಸಿರಲ್ಲಿ ಸಾಯುವ ದೈವ

ನನ್ನ ಕಂಬನಿಯಲ್ಲಿ ಕಂಡಿದೆ

ನಾನು ನಿಶ್ವಾಸಿಸಿದ ಪಾವಿತ್ರ್ಯ

ಹಾಗೂ ಪರಮ ಶಕ್ತ

ಈ ವಿಶ್ವದೆಲ್ಲ ತಾಯಿಭಾಷೆಗಳಲ್ಲಿ

ಶಪಿಸುತ್ತೇನೆ ನಾನು ಗರ್ಭದಿಂದ ಕೊನೆಯ ಉಸಿರಿನವರೆಗೆ

ನಿನ್ನ ಕಾಯಿದೆಗಳ ಶಪಿಸುವೆ

ನಿನ್ನ ಬಾವುಟವ ಶಪಿಸುವೆ

ನಿನ್ನ ಬಾಯಿಯ ಶಪಿಸುವೆ

 

ಅತೀವ ಆತಂಕಕಾರಿ ಕತ್ತಲಕೂಪದಲ್ಲಿ ಮುಳುಗಿ

ಎತ್ತಿ ಹಿಡಿಯುತ್ತೀಯ ದ್ವೇಷದಲ್ಲಿ ಹುಟ್ಟಿದ

ನಮ್ಮನ್ನು ಹೊನ್ನಿನ ಹಲ್ಲಿನಿಂದ ಕಚ್ಚುವ

ಸರಕಾರಗಳು ಪೋಷಿಸುವ ದೇಶವನ್ನು

 

ಸಾವಿರ ವಿಧಗಳಲ್ಲಿ ನನ್ನ ದೇಹದ ರಕ್ತ ಹೀರುವ

ನಿನ್ನ ರೀತಿಯೇ ಆಗಲಿದೆ

ಸಾವಿರ ವಿಧಗಳಲ್ಲಿ ನೆಲದಡಿ

ನಾನು ಪ್ರೀತಿಯಿಂದ ನನ್ನ ಹಾಡುಗಳ ಹಾಡುತ್ತಲಿರುವ ರೀತಿ

ನೀನು ನನ್ನನು ನೆಲದಡಿ ಹೂಳಿದರೂ ಕಾಡಿನಲ್ಲಿ

ನೀನು ನನ್ನನ್ನು ಕಾಣೆಯಾಗಿ ಹೋಗಲು ಒತ್ತಾಯಿಸಿದರೂ

ಸೈನಿಕರಿಂದ ನನ್ನ ರಕ್ತಸಿಕ್ತನಾಗಿಸಿದರೂ

ನನ್ನ ನಾಲಿಗೆ, ಕಣ್ಣುಗಳನ್ನು ಅವರು ಕಿತ್ತರೂ

ಜೈಲಿಗೆ ಒಗೆದರೂ

ನನ್ನ ಗರ್ಭ, ಗುದದ್ವಾರ ಒಳಹೊಕ್ಕಿಸಿದರೂ

ಚೂರು ಚೂರು ಮಾಡಿದರೂ

ಆಸಿಡ್‌ನಲ್ಲಿ ನನ್ನ ಕರಗಿಸಿಬಿಟ್ಟರೂ...

ನಾನು ಹಾಡುತ್ತೇನೆ

ಏಕೆ ಗೊತ್ತಾ?

ನಾನೊಂದು ಸ್ಫಟಿಕ

ನನ್ನ ರೂಪಿಸಲು ಜೀವಮಾನವೇ ಹಿಡಿಯುವುದು

ಪ್ರತಿ ರೂಪಕ್ಕೆ ನೀನು ಕೊಡುವ ಸಾವಿಗೆ ಒಂದು ಹಾಡು

ಇದು ಕೇಳು

ಇದು ತುಂಬಾ ಆಳವಾದ ಹಾಡು

ಪ್ರೀತಿ ಕುರಿತು ಜೀವಮಾನಗಳ ಹಾಡು

 

ಆಳುವವರ ಕೈಯಲ್ಲಿ ಸಾವಿಗೀಡಾದ ಗಂಡಸರು-ಹೆಂಗಸರು

ಎದ್ದಿದ್ದಾರೆ ನಿನ್ನ ಶಪಿಸಲು

ನನ್ನ ತುಟಿಯಿಂದ, ನನ್ನ ಚರ್ಮದಿಂದ

ಅಮೆಜಾನು, ಲ್ಯಾಟೀನಾ, ಮೊರೀನಾ, ಮೆಸ್ತೀಜಾ, ಇಂಡಿಜೆನಾ, ವಲಸೆಯ

ನೋವಿನ ಜಲಪಾತಗಳು - ಹಾಗಿರಬಾರದಿತ್ತು

ಮತ್ತು ಮುಂದೆ ಹಾಗಿರುವುದಿಲ್ಲ

ಯಾಕೆಂದರೆ, ಈ ದನಿ ಹಾಡಲಿದೆ ಆ ಹಾಡನ್ನು

ನನ್ನ ಮುತ್ತಾತ, ಮುತ್ತಜ್ಜಿಯರ ದನಿಗಳು

ಯಾವ ಚಿನ್ನಕ್ಕಾಗಿ ನೀನು ನಮ್ಮನ್ನು ಕೊಲ್ಲುತ್ತೀಯೋ

ಅದಕ್ಕಿಂತ ಹೆಚ್ಚು ಮಿರುಗುತ್ತಿವೆ

ಮತ್ತು ನೆಲದಡಿಯಿಂದ ಜಿನುಗಿ ನಮ್ಮೊಳಗೆ ಶಕ್ತಿ ತುಂಬಿವೆ

 

ಇದು ಸನಾತನ ಪ್ರೇಮಗೀತೆ

ಐದು ನೂರು ವರ್ಷಗಳಿಂದ

ನನ್ನ ಹರಸಲು

ಮತ್ತು ನನ್ನ ಪೂರ್ಣಗೊಳಿಸಲು

ಶಕ್ತಿ ಮತ್ತು ಕ್ರೋಧಗಳೊಡನೆ ಅರಳುತ್ತಿದೆ

 

ಸಾವಿಲ್ಲ

ಕೇಳು ಗಮನವಿಟ್ಟು

ನಿನ್ನ ಯಾವ ಪಾಪವೂ ಇಲ್ಲ

ಕೇಳು ಕಿವಿಗೊಟ್ಟು

 

ನಾನು ನನ್ನ ಮಾತೃಭೂಮಿ ಪಿತೃಭೂಮಿ

ನಾನು ನನ್ನ ದೈವ ದೇವತೆ

 

ನೋವಲ್ಲ

ಪ್ರೀತಿ ಮಾತ್ರ ನನ್ನ ಹೆಸರಲ್ಲಿ

* * * * *

“Every beautiful poem is an act of resistance” - Mahmoud Darwish

Image

ಬಗಲಲ್ಲಿ ಬಂಡವಾಳಶಾಹಿಯ ಪೆಡಂಭೂತವಿದ್ದಾಗ ಬೇಡವಾದದ್ದನ್ನು ಬೇಡ ಎನ್ನುವುದೂ ಕ್ರಾಂತಿಕಾರಿಯಾಗಿಬಿಡುವ, ಪ್ರತಿಕ್ರಿಯಾತ್ಮಕ ಅಸಹಾಯಕತೆಯನ್ನು ಅನೇಕ ಅಮೆರಿಕ ಖಂಡದ ದೇಶಗಳ ಸಾಹಿತ್ಯದಲ್ಲಿ ಕಾಣಬಹುದು. ನೆಲ-ಜಲ-ಸಂಪನ್ಮೂಲಗಳನ್ನು ದೋಚಲು, ಮಾರುಕಟ್ಟೆಯಲ್ಲಿ ತನ್ನ ಸರಕು ತಂದು ತುಂಬಲು ಅರಾಜಕತೆಯನ್ನು ಹುಟ್ಟುಹಾಕಿಸಲೂ ಹೇಸದ ಯುಎಸ್‌ಎ ಎಂಬ ಈ ಪೆಡಂಭೂತದ ಬಗೆಬಗೆಯ ನೀಚ ನಾಟಕಗಳನ್ನು ಈ ದೇಶಗಳ ಕವಿಗಳು, ಚಿಂತಕರು, ಬರಹಗಾರರು ಮತ್ತೆ-ಮತ್ತೆ ಸ್ಪಷ್ಟವಾಗಿ ಅನಾವರಣಗೊಳಿಸಿದ್ದಾರೆ. ದಕ್ಷಿಣ ಅಮೆರಿಕದಲ್ಲಿ ನಡೆದ ಅನೇಕ ಜನಹಿತ ಚಳವಳಿಗಳನ್ನು ಹತ್ತಿಕ್ಕಿ ಅಲ್ಲಿನ ಹಲವಾರು ಚಿಂತನಾಕ್ರಮಗಳನ್ನು ಮರೆಮಾಚುವುದರಲ್ಲೂ ಈ ಪೆಡಂಭೂತದ ಪಾಲಿದೆ.

ಈ ಕವಿತೆ ಓದಿದ್ದೀರಾ?: ಕರುಣೆಯ ಕೃಷಿ | ಇರಾನ್ ಕವಿ ಸಬೀರ್ ಹಕಾ ಅವರ 'ಕಾರ್ಮಿಕರ ಕಾವ್ಯ'

ಮೆಕ್ಸಿಕೋ ದೇಶದ ಕವಿ ಕಾರ್ಲೊಜ್ ಅಟ್ಲ್ ಅವರ ನುಡಿ-ಕಾವ್ಯವು ('ಸ್ಪೋಕನ್ ಪೋಯೆಟ್ರಿ' ಎಂದು ಇತ್ತೀಚೆಗೆ ಪ್ರಸಿದ್ಧವಾಗಿರುವ ಪ್ರಕಾರ) ಮಾತು, ಲಯ, ಅಭಿನಯ, ನೃತ್ಯ, ಮಾಂತ್ರಿಕತೆಗಳನ್ನೆಲ್ಲ ಒಟ್ಟಾಗಿ ಬಳಸಿಕೊಂಡು ತೀವ್ರ ಭಾವಾವೇಶದಲ್ಲಿ ಕೇಳುಗ/ನೋಡುಗ/ಓದುಗರನ್ನು ತಟ್ಟುವ ಕಾವ್ಯವಾಗಿದೆ. ದುರ್ಬಲ ಸಮುದಾಯಗಳ ದೃಷ್ಟಿಕೋನದಿಂದ ಸುತ್ತಲಿನ ಸಂಧರ್ಭವನ್ನು, ಅದರ ಹಿಂದಿನ ಶಕ್ತಿಗಳನ್ನು ಪ್ರತಿರೋಧದ ಕಣ್ಣಿನಿಂದ ಕಂಡು, ಸಿಡಿಗುಂಡಿನಂತಹ ಪದ-ಪ್ರತೀಕ-ಸಂಕೇತಗಳ ಮೂಲಕ ಅಭಿವ್ಯಕ್ತಿಸುವ ಕಾರ್ಲೋಜ್ ಅಟ್ಲ್ ಅವರ ಕಾವ್ಯ ರಾಜಕೀಯ ಪ್ರಜ್ನೆಯನ್ನು ಮೂಡಿಸುವಂತಹ ರಚನೆ ಎನ್ನುವುದರಲ್ಲಿ ಸಂಶಯವಿಲ್ಲ.

ಪ್ರತಿರೋಧದ ಉತ್ಕೃಷ್ಟ ಅಭಿವ್ಯಕ್ತಿ ಪ್ರೀತಿಯೇ ಎನ್ನುವ ನೋಟವನ್ನು ಒತ್ತಿ ಹೇಳುವ ಈ ನುಡಿ-ಕಾವ್ಯ ಮತ್ತೆ-ಮತ್ತೆ ಓದಬೇಕಾದದ್ದು. ದಮನಕಾರಿ ಬಂಡವಾಳಶಾಹಿ ಶಕ್ತಿಗಳು ಬಳಸುವ ಹಿಂಸೆಗೆ ಪ್ರತ್ಯುತ್ತರ ಹಿಂಸಾತ್ಮಕ ಕೃತಿಯಾಗಲೀ, ಮಾತುಗಳಲ್ಲಾಗಲೀ ಇರುವ ಬದಲು, ತನ್ನಿಡೀ ಸಮುದಾಯದ ಇತಿಹಾಸ, ಸಂಪ್ರದಾಯಗಳ ಶಕ್ತಿಯನ್ನು ಆವಾಹಿಸಿಕೊಂಡು ತನ್ನ ನೆಲಮೂಲದ ಸಮುದಾಯವನ್ನು ಪ್ರೀತಿ-ಕರುಣೆಗಳಿಂದ ಉಳಿಸಿಕೊಳ್ಳುವ ಛಲವನ್ನು ಈ ಕವನ ದರ್ಶಿಸುತ್ತದೆ. ಇದು ದಬ್ಬಾಳಿಕೆಯನ್ನು ತಡೆಯುವಲ್ಲಿ ಯಶಸ್ವಿಯಾದೀತೇ ಎನ್ನುವುದೊಂದು ತಪ್ಪು ಪ್ರಶ್ನೆ. ಇದು ನೈತಿಕ ಮೌಲ್ಯವನ್ನು ಎತ್ತಿ ಹಿಡಿಯುತ್ತದೆ, ನೈತಿಕ ಧೈರ್ಯವನ್ನು, ರಾಜಕೀಯ ಪ್ರಜ್ಞೆಯನ್ನು ಪ್ರಚೋದಿಸುತ್ತದೆ ಎನ್ನುವುದು ಗಮನಾರ್ಹವಾಗಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್