ಕರುಣೆಯ ಕೃಷಿ | ಅರ್ನೆಸ್ಟೋ ಕಾರ್ಡಿನಲ್ ಕವಿತೆ 'ಮರಣಕ್ಕೀಡಾದ ನಮ್ಮವರಿಗೆ'

Ernesto Cardenal poem

ನಿನಗೆ ಪ್ರಶಸ್ತಿ ಬಂದಾಗ, ಸನ್ಮಾನ ಮಾಡಿದಾಗ, ಬಡ್ತಿ ಸಿಕ್ಕಾಗ

ಯೋಚನೆ ಮಾಡು ಮರಣಕ್ಕೀಡಾದವರ ಕುರಿತು.

ನೀನು ಔತಣ, ನಿಯೋಗ, ಆಯೋಗದಲ್ಲಿ ಇದ್ದಾಗ

ಯೋಚನೆ ಮಾಡು ಮರಣಕ್ಕೀಡಾದವರ ಕುರಿತು.

ನಿನಗೆ ವೋಟು ಸಿಕ್ಕಿ, ಜನಸಮೂಹ ಜಯಕಾರ ಕೂಗುವಾಗ

ಯೋಚನೆ ಮಾಡು ಮರಣಕ್ಕೀಡಾದವರ ಕುರಿತು.

ನೀನು ಭಾಷಣಕ್ಕೆಂದು ಚಪ್ಪಾಳೆಗಳ ನಡುವೆ ವೇದಿಕೆ ಹತ್ತುವಾಗ

ಯೋಚನೆ ಮಾಡು ಮರಣಕ್ಕೀಡಾದವರ ಕುರಿತು.

ಮಹಾಶಹರದ ಏರ್‌ಪೋರ್ಟಿನಲಿ ನಿನ್ನನ್ನು ಬರಮಾಡಿಕೊಂಡಾಗ

ಯೋಚನೆ ಮಾಡು ಮರಣಕ್ಕೀಡಾದವರ ಕುರಿತು.

ಮಾತಾಡುವ ಸರದಿ ನಿನಗೆ ಬಂದಾಗ

ಟಿವಿ ಕ್ಯಾಮೆರಾಗಳು ನಿನ್ನ ಕಡೆ ತಿರುಗಿದಾಗ

ಯೋಚನೆ ಮಾಡು ಮರಣಕ್ಕೀಡಾದವರ ಕುರಿತು.

ನೀನು ಪ್ರಮಾಣಪತ್ರ, ಆದೇಶ, ಅನುಮತಿ ನೀಡುವವನಾದಾಗ

ಯೋಚನೆ ಮಾಡು ಮರಣಕ್ಕೀಡಾದವರ ಕುರಿತು.

ಸಣ್ಣ ಮುದುಕಿಯೊಬ್ಬಳು ತನ್ನ ಸಣ್ಣ ಜಮೀನಿನ ತೊಂದರೆಯ

ನಿನ್ನ ಬಳಿ ತಂದಾಗ

ಯೋಚನೆ ಮಾಡು ಮರಣಕ್ಕೀಡಾದವರ ಕುರಿತು.

 

ನೋಡು ಅವರನ್ನು ಅಂಗಿ ಇಲ್ಲದೆ, ಎಳೆಯಲ್ಪಟ್ಟವರ

ರಕ್ತ ಸೋರುತ್ತ, ಟೋಪಿಯಡಿ ಮುಖ ಮುಚ್ಚಿದವರ, ಚೂರುಚೂರಾದವರ

ಟಬ್ಬಿನಲ್ಲಿ ಮುಳುಗಿಸಿ ವಿದ್ಯುತ್ ಶಾಕ್‌ನ ಹಿಂಸೆಗೆ ಗುರಿಯಾದವರ

ಅವರ ಕಣ್ಣು ಕಿತ್ತಿದೆ,

ಅವರ ಕತ್ತು ಕತ್ತರಿಸಿದೆ, ದೇಹಕ್ಕೆ ಗುಂಡು ತೂತು ಹೊಡೆದಿದೆ

ರಸ್ತೆ ಬದಿ ಎಸೆಯಲಾಗಿದೆ

ಅವರೇ ತೋಡಿದ್ದ ಗುಂಡಿಗಳಲ್ಲಿ

ಸಾಮೂಹಿಕ ಗೋರಿಯಲ್ಲಿ

ಅಥವಾ ನೆಲದ ಮೇಲೆ ಹಾಗೇ ಬಿಡಲಾಗಿದೆ

ಕಾಡುಗಿಡಗಳಿಗೆ ಮಣ್ಣನ್ನು ಫಲವತ್ತಾಗಿಸುವಂತೆ.

 

ನೀನು ಅವರ ಪ್ರತಿನಿಧಿ

ಮರಣಕ್ಕೀಡಾದವರು ನಿನ್ನ ಮೇಲೆ

ಇಟ್ಟಿದ್ದಾರೆ ಜವಾಬ್ದಾರಿ.

* * * * *

“Every beautiful poem is an act of resistance” - Mahmoud Darwish

Image
Ernesto Cardenal

ಜನಪ್ರತಿನಿಧಿಗಳ ಅನೈತಿಕ ನಡವಳಿಕೆ ಸರ್ವೇಸಾಮಾನ್ಯವಾಗಿ, ಪ್ರತಿನಿಧಿತ್ವದ ಹೊಣೆಗಾರಿಕೆ ಲವಲೇಶವೂ ಉಳಿದಿರದ ಸನ್ನಿವೇಶ ಈಗ ನಮ್ಮ ನಾಡಿನಲ್ಲಿದೆ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಯಾದವನಿಗೆ ಕಿವಿಮಾತಿನಂತಿರುವ ಈ ಕವನ, ರಾಜಕಾರಣಕ್ಕೆ ಮೌಲ್ಯದ ಅಡಿಪಾಯ ಸಂಪೂರ್ಣವಾಗಿ ಕುಸಿದುಹೋದ ಸಮಾಜದಲ್ಲಿ ಆಗುವ ಅನಾಹುತವನ್ನೂ ನೆನಪಿಸುತ್ತದೆ.

ಇದನ್ನು ರಚಿಸಿದವರು ಕಾವ್ಯ, ಧರ್ಮ, ಸಮಾಜ ಸೇವೆ ಹಾಗೂ ರಾಜಕಾರಣಗಳ ನಡುವೆ ಎಳ್ಳಷ್ಟೂ ಸಂಘರ್ಷವಿಲ್ಲವೆಂದು ನಂಬಿ, ಅದರಂತೆ ಬದುಕಿದ, ಬರೆದ ಅರ್ನೆಸ್ಟೋ ಕಾರ್ಡಿನಲ್. ಅವರು ನಿಕರಾಗುವ ದೇಶ ಮತ್ತು ಲ್ಯಾಟಿನ್ ಅಮೆರಿಕದ ಬಹುಜನಮಾನ್ಯ ಕ್ರಾಂತಿಕಾರಿ ಕವಿ ಮತ್ತು ಕ್ಯಾಥೋಲಿಕ್ ಧರ್ಮಗುರು.

ಲ್ಯಾಟಿನ್ ಅಮೆರಿಕದ ಉದ್ದಕ್ಕೂ ಹಬ್ಬಿದ್ದ ಮಾರ್ಕ್ಸಿಸಂ ಪ್ರೇರಿತ ಧಾರ್ಮಿಕ ಮಾರ್ಗವಾದ 'ಲಿಬರೇಶನ್ ಥಿಯಾಲಜಿ'ಯನ್ನು ಅನುಸರಿಸಿ ಸಾಮಾಜಿಕ ಸಮಾನತೆ, ಬಡವರ ಏಳಿಗೆಗಳಿಗಾಗಿ ಶ್ರಮಿಸಿದ ಕಾರ್ಡಿನಲ್, ಕಾವ್ಯಜಗತ್ತಿನಲ್ಲಿಯೇ ಅಪರೂಪದ ದನಿ. ಕ್ರಾಂತಿಕಾರಿಯಾಗಿದ್ದರೂ ಕಾವ್ಯವನ್ನು ಘೋಷಣೆಗೆ ಇಳಿಸದ, ರಾಜಕಾರಣಿಯಾಗಿದ್ದರೂ ತಮ್ಮ ಮೌಲ್ಯಗಳಲ್ಲಿ ರಾಜಿ ಮಾಡಿಕೊಳ್ಳದ, ಅಂತಾರಾಷ್ಟ್ರೀಯ ತರಬೇತಿ, ಖ್ಯಾತಿ ಪಡೆದಿದ್ದರೂ ನಿಕರಾಗುವ ಮತ್ತು ಲ್ಯಾಟಿನ್ ಅಮೆರಿಕದ ಇತಿಹಾಸ ಮತ್ತು ಸಾಂಸ್ಕೃತಿಕ ಪ್ರಜ್ಞೆಯನ್ನು ಮೈವೆತ್ತಿಕೊಂಡು ಬರೆಯುತ್ತಿದ್ದ ಕಾರ್ಡಿನಲ್ ಅವರ ದೃಷ್ಟಿಯಲ್ಲಿ ಕಲೆ, ಕಾವ್ಯ, ರಾಜಕಾರಣಗಳು ಒಂದಕ್ಕೊಂದು ಪೂರಕ.

ನಿಕರಾಗುವ ದೇಶದ ಮಂತ್ರಿ ಪದವಿಯನ್ನೂ ಅಲಂಕರಿಸಿದ್ದ ಕಾರ್ಡಿನಲ್, ಧರ್ಮಗುರುವಾಗಿ ತರಬೇತಿ ಪಡೆದು, ದೀಕ್ಷೆಯನ್ನೂ ಪಡೆದಿದ್ದರು. ಧರ್ಮಗುರುವಾಗಿದ್ದರೂ ರಾಜಕಾರಣದಲ್ಲಿ ಸಕ್ರಿಯರಾಗಿದ್ದ ಕಾರಣ, ಎರಡನೆಯ ಪೋಪ್ ಜಾನ್ ಪಾಲ್ ಸುಮಾರು ಮೂರು ದಶಕಗಳ ಕಾಲ ಕಾರ್ಡಿನಲ್ ಅವರನ್ನು ಧರ್ಮಗುರುವಿನ ಸ್ಥಾನದಿಂದ ಅಮಾನತುಗೊಳಿಸಿದ್ದರು. ನಿಕರಾಗುವ ದೇಶದಲ್ಲಿ ಸರ್ವಾಧಿಕಾರ ನಡೆಸುತ್ತಿದ್ದ ಅನಸ್ತೇಸಿಯೋ ಸೊಮೋಜಾ ಅವರ ಆಳ್ವಿಕೆಯನ್ನು ವಿರೋಧಿಸಿ, ಸೋಲೆಂಟೈನೇಮ್ ದ್ವೀಪದಲ್ಲಿ ರೈತರು, ಕವಿ-ಕಲಾವಿದರ ಸಮುದಾಯವನ್ನು ಒಟ್ಟುಸೇರಿಸುವ ಕೆಲಸ ಮಾಡಿದವರು ಕಾರ್ಡಿನಲ್.

ಅವರೆನ್ನುತ್ತಾರೆ, “ನಾನು ಏಕ ವಾಸ್ತವವನ್ನು ಚಿತ್ರಿಸಿದ್ದೇನೆ – ಅದಕ್ಕೆ ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ, ಅನುಭಾವಿಕ ಇತ್ಯಾದಿ ಆಯಾಮಗಳಿವೆ.” ತಮ್ಮ ಧರ್ಮದ ಮೂಲ ಸಂದೇಶವೇ ಸಮಾನತೆಯನ್ನಾಧರಿಸಿದ ಸಮಾಜ ನಿರ್ಮಾಣವೆಂದು ಧೃಢವಾಗಿ ನಂಬಿದ್ದ ಅವರು, ಜೀವನದುದ್ದಕ್ಕೂ ತಮ್ಮ ಸಮಾಜವನ್ನು ಆ ದಿಕ್ಕಿಗೆ ಒಯ್ಯುವ ಕಾರ್ಯಕ್ಕಾಗಿ ತಮ್ಮೆಲ್ಲ ಶ್ರಮ, ಆಸಕ್ತಿ, ಪ್ರತಿಭೆಗಳನ್ನೂ ಮುಡುಪಿಟ್ಟವರಾಗಿದ್ದರು.

ನಿಮಗೆ ಏನು ಅನ್ನಿಸ್ತು?
1 ವೋಟ್