ವರ್ತಮಾನ | ಆಗಾಗ ನಿಜರೂಪ ತೋರುವ ಜಾತಿ ಮೇಲರಿಮೆ ಎಂಬ ಕೆಂಡದುಂಡೆ

claire kelly Photo

ಶೋಷಕ ಜಾತಿಗಳು ಒಟ್ಟುಗೂಡುವುದಕ್ಕೂ ಶೋಷಿತ ಜಾತಿಗಳು ಸಂಘಟಿತರಾಗುವುದಕ್ಕೂ ವ್ಯತ್ಯಾಸ ಅರಿಯಲಾಗದವರ ಸಾಮಾಜಿಕ ಪ್ರಜ್ಞೆ ತೀರಾ ಸಂಕುಚಿತವಾದುದಲ್ಲವೇ? ತಮ್ಮ ಸಂಕುಚಿತ ಮನೋಭಾವದ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳುವ ಗೋಜಿಗೆ ಹೋಗದೆ, ಅದನ್ನೇ ಈ ಕಾಲಕ್ಕೂ ಅಗತ್ಯ ಮೌಲ್ಯವಾಗಿ ಬಿಂಬಿಸಲು ಹೊರಡುವವರಿಗೆ ಏನೆನ್ನುವುದು?

ಜಾತಿ, ಧರ್ಮ ಹಾಗೂ ಲಿಂಗಾಧಾರಿತ ಪೂರ್ವಗ್ರಹಗಳು ನಮ್ಮ ಆಯ್ಕೆಗಳನ್ನು ಪ್ರಭಾವಿಸುತ್ತಿವೆಯೋ ಇಲ್ಲವೋ ಎಂಬುದನ್ನು ಅರಿಯುವುದು ತೀರಾ ತ್ರಾಸದಾಯಕವೇ? ಹಾಗಲ್ಲದಿದ್ದರೆ, ಏಕೆ ಜಾತಿ ಶ್ರೇಣಿಯಲ್ಲಿ ಶೋಷಕ ಜಾತಿಗಳಾಗಿ ಗುರುತಿಸಿಕೊಂಡಿರುವವರು ಪದೇಪದೆ, "ಅಯ್ಯೋ ನನಗೆ ಅವರ ಜಾತಿ ಯಾವುದೆಂದು ಇದುವರೆಗೂ ಗೊತ್ತೇ ಇರಲಿಲ್ಲ. ಕೆಲವರಿಗೆ ಎಲ್ಲದರಲ್ಲೂ ಜಾತಿ ಹುಡುಕುವ ರೋಗ,” ಎಂಬ ಮಾತಿನ ಮೂಲಕ ತಮ್ಮ ಆಯ್ಕೆಗಳನ್ನು ಪ್ರಭಾವಿಸುತ್ತಿರುವ ಜಾತಿ ಪ್ರಜ್ಞೆಯ ಇರುವನ್ನೇ ಅಲ್ಲಗಳೆಯುವ ನಾಟಕ ಆಡುತ್ತಾರೆ?

‘ನುಡಿ ಸಡಗರ' ಎಂಬ ಸಾಹಿತ್ಯಕ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಸಾರ್ವಜನಿಕಗೊಂಡ ನಂತರ ಹುಟ್ಟು ಹಾಕಿದ ಚರ್ಚೆಯ ವೇಳೆಯಲ್ಲೂ ಕೆಲವರು ಇದೇ ಅಭಿಪ್ರಾಯ ಮಂಡಿಸಿದರು. ಕೆಲವರಂತೂ, "ಸಾಹಿತ್ಯ ಕ್ಷೇತ್ರದಲ್ಲೂ ಜಾತಿ ಆಧಾರಿತ ಮೀಸಲಾತಿ ಅಳವಡಿಸಿ ಎನ್ನುವ ಮೂಲಕ ಸಾಹಿತ್ಯ ಕ್ಷೇತ್ರವನ್ನೇ ಕುಲಗೆಡಿಸಲು ಇವರು ಹೊರಟಿದ್ದಾರೆ," ಅಂತೆಲ್ಲ ‘ನುಡಿ ಸಡಗರ' ಕಾರ್ಯಕ್ರಮದ ಕುರಿತು ಅಸಮಾಧಾನ ವ್ಯಕ್ತಪಡಿಸಿದವರ ವಿರುದ್ಧವೇ ತಮ್ಮ ಆಕ್ರೋಶ ಹೊರಹಾಕಿದರು.

ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿದ್ದ ಹೆಸರುಗಳಲ್ಲಿ ಬಹುತೇಕರದ್ದು ಒಂದೇ ಜಾತಿಯಾಗಿರುವುದು ಸರಿಯೇ ಎಂಬ ಆಕ್ಷೇಪ ವ್ಯಕ್ತವಾದರೆ, ಅದು ಸಹಜವಲ್ಲವೇ? ಈ ಆಕ್ಷೇಪಕ್ಕೆ ನೇರವಾಗಿ ಉತ್ತರಿಸುವ ಸಾಧ್ಯತೆಗಳು ಇದ್ದಾಗಲೂ, ಅದಕ್ಕೆ ಬೆನ್ನು ತಿರುಗಿ ಚರ್ಚೆಯ ದಿಕ್ಕು ತಪ್ಪಿಸುವುದು ಏನನ್ನು ಸೂಚಿಸುತ್ತದೆ? ಇಂತಹ ಕಾರ್ಯಕ್ರಮಗಳ ಆಯೋಜನೆಯಲ್ಲಿ ಕೆಲಸ ಮಾಡುವ ಜಾತಿ ಪ್ರಜ್ಞೆಯ ಇರುವನ್ನು ಸ್ವತಃ ಮನಗಾಣಲು ಆಗದಿದ್ದರೆ, ಕನಿಷ್ಠಪಕ್ಷ ಬೇರೆಯವರು ಮನಗಾಣಿಸುವ ಪ್ರಯತ್ನ ಮಾಡಿದಾಗಲಾದರೂ ವಾಸ್ತವ ಒಪ್ಪಿಕೊಳ್ಳುವ ಮನಸ್ಸು ಮಾಡಬೇಕಲ್ಲವೇ? ಕನ್ನಡ ಸಾಹಿತ್ಯಲೋಕದ ಒಂದು ವಲಯವನ್ನು ಆವರಿಸಿರುವ ಜಾತಿ ಪ್ರಜ್ಞೆ, ಸಾಮಾಜಿಕ ವಾಸ್ತವವನ್ನು ಅರಿಯುವ ವಿಶಾಲ ದೃಷ್ಟಿಕೋನದ್ದಾಗದೆ, ತಮ್ಮದೇ ಸಂಕುಚಿತ ಜಾತಿ ಕೂಟ ಕಟ್ಟಿಕೊಳ್ಳುವ ಶೋಷಕರೇ ಶ್ರೇಷ್ಠವೆಂಬ ಪ್ರಜ್ಞೆಯಾಗಿ ರೂಪುಗೊಂಡು ಇಂದಿಗೂ ಹಾಗೇ ಮುಂದುವರಿಯಲು ಹಪಹಪಿಸುತ್ತಿರುವುದು ಢಾಳಾಗಿಯೇ ಕಾಣುತ್ತಿದೆ. ಒಂದೆಡೆ, ಯಾವ ಒಂದು ಜಾತಿಗೆ ಸೇರಿದವರನ್ನಷ್ಟೇ ಒಳಗೊಂಡು ಕಾರ್ಯಕ್ರಮ ರೂಪಿಸಲಾಗಿದೆ ಎಂಬ ಕಾರಣಕ್ಕೆ ‘ನುಡಿ ಸಡಗರ' ಟೀಕೆಗೆ ಗುರಿಯಾಯಿತೋ ಅದೇ ಜಾತಿಗೆ ಸೇರಿದ ಬರಹಗಾರರೊಬ್ಬರು, ಜಾತಿಯ ಕಾರಣಕ್ಕೆ ತಮ್ಮದೇ ಊರಿನಲ್ಲಿ ನಡೆಯಲಿರುವ ಬಂಡಾಯ ಸಾಹಿತ್ಯ ಸಮ್ಮೇಳನಕ್ಕೆ ತಮ್ಮನ್ನು ಆಹ್ವಾನಿಸಿಲ್ಲವೆಂಬ ಅಳಲು ತೋಡಿಕೊಂಡರು. ಅವರು ಫೇಸ್ಬುಕ್‍ನಲ್ಲಿ ಈ ಬಗ್ಗೆ ಬರೆದುಕೊಂಡು ತಮ್ಮ ಅಸಮಾಧಾನ ಹೊರಹಾಕಿದ್ದಾರೆ ಕೂಡ.

Image
Nudi Sadagara
'ನುಡಿ ಸಡಗರ' ಕಾರ್ಯಕ್ರಮದ ಆಹ್ವಾನ ಪತ್ರ

"ಎಂಬತ್ತರ ದಶಕದಲ್ಲಿ ಸಾಹಿತ್ಯದ ಚಳವಳಿಯಾಗಿ ರೂಪುಗೊಂಡ ಬಂಡಾಯ ಸಾಹಿತ್ಯ ಸಂಘಟನೆಯು, ಆಗ ಬಳ್ಳಾರಿ ಜಿಲ್ಲೆಯಲ್ಲಿ ವಾಸಿಸುತ್ತ ಸಾಮಾಜಿಕ ಅಸಮಾನತೆ ಮತ್ತು ಸ್ತ್ರೀ ಶೋಷಣೆ ವಿರುದ್ಧವಾಗಿ ಕತೆ-ಕಾದಂಬರಿ ಬರೆಯುತ್ತಿದ್ದ ನನ್ನ ತಾಯಿ ಅವರನ್ನು ಅವರ ಹುಟ್ಟಿದ (ಬ್ರಾಹ್ಮಣ) ಜಾತಿಯ ಕಾರಣಕ್ಕಾಗಿ ಉಪೇಕ್ಷಿಸಿತ್ತು! ಪ್ರಾಯಶಃ ಆಯೋಜಕ ಸಂಘಟನೆಯು ಇದೇ ಕಾರಣಕ್ಕಾಗಿ ನನ್ನನ್ನೂ ಉಪೇಕ್ಷಿಸಿರಬಹುದು," ಎಂಬ ಅನುಮಾನ ವ್ಯಕ್ತಪಡಿಸಿದ್ದರು. ಇವರ ಫೇಸ್ಬುಕ್ ಪೋಸ್ಟ್ ಓದಿದ ಮೇಲೆ ಕುತೂಹಲದಿಂದ ಬಂಡಾಯ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಗಮನಿಸಿದೆ. ಅದರಲ್ಲಿ ಇವರದೇ ಜಾತಿಗೆ ಸೇರಿದ ಕೆಲವರ ಹೆಸರುಗಳೂ ಇದ್ದವು.

ಜಾತಿಯಿಂದ ಸಾಮಾಜಿಕ ಬಂಡವಾಳ ದಕ್ಕಿಸಿಕೊಳ್ಳುವವರೇ ಹೀಗೆ ಜಾತಿಯ ಕಾರಣಕ್ಕೆ ತಾವು ಅವಕಾಶ ವಂಚಿತರಾಗುತ್ತಿದ್ದೇವೆ ಎಂದು ಅಳಲು ತೋಡಿಕೊಳ್ಳುವುದು ಕೇವಲ ಆತ್ಮವಂಚನೆ ಅಷ್ಟೇ ಅಲ್ಲ, ಅದು ಈ ಕಾಲದ ಕ್ರೌರ್ಯವೂ ಹೌದು. ಸುತ್ತಲಿನ ವಾಸ್ತವಕ್ಕೆ ಕಣ್ತೆರೆದು ನೋಡುವ ಸಂಯಮವಿರುವ ಬಹುತೇಕರಿಗೆ ಈ ಕಾಲದ ಜಾತಿ ವರ್ತುಲದ ಒಳಸಿಕ್ಕುಗಳು ಬಹುಬೇಗನೆ ಗೋಚರವಾಗುತ್ತವೆ. ಜಾತಿಯ ಕಾರಣಕ್ಕೆ ಜಾತಿ ಶ್ರೇಣಿಯಲ್ಲಿ ಕೆಳಗಿಡಲ್ಪಟ್ಟವರು ಎಂತಹ ನೋವುಗಳನ್ನೆಲ್ಲ ಅನುಭವಿಸುತ್ತಿದ್ದಾರೆ ಎನ್ನುವ ಕುರಿತು ಯೋಚಿಸಲೂ ಹೋಗದೆ, ಶೋಷಕ ಜಾತಿಗೆ ಸೇರಿದವರೇ ತಮ್ಮನ್ನು ತಾವು ಬಲಿಪಶುವಾಗಿ ಬಿಂಬಿಸಿಕೊಳ್ಳುವುದು ಜಾತಿ ಕ್ರೌರ್ಯದ ಮತ್ತೊಂದು ಮುಖದಂತೆ ತೋರುವುದಿಲ್ಲವೇ?

ಈ ಲೇಖನ ಓದಿದ್ದೀರಾ?: ತರ್ಕ | ಕಲೆ ಪ್ರಭುತ್ವದ ದನಿಯಾದಾಗ ವಾಸ್ತವ ಅಥವಾ ಮನರಂಜನೆ ಎಂಬುದು ಕೇವಲ ಕಣ್ಕಟ್ಟು

ಮೂರ್ನಾಲ್ಕು ವರ್ಷಗಳಿಂದ ತಮ್ಮ ನೆರೆಹೊರೆಯವರೊಂದಿಗೆ ಅನ್ಯೋನ್ಯವಾಗಿದ್ದ ಕುಟುಂಬವೊಂದು ಕೊನೆಗೂ ತಮ್ಮ ಜಾತಿ ಯಾವುದೆಂದು ಬಹಿರಂಗಗೊಳಿಸಲೇಬೇಕಾದ ಅನಿವಾರ್ಯ ಸಂದರ್ಭ ಇತ್ತೀಚೆಗೆ ಸೃಷ್ಟಿಯಾಯಿತು. ಅದುವರೆಗೂ ಅವರೊಂದಿಗೆ ಆತ್ಮೀಯರಾಗಿದ್ದ, ಅವರ ಮನೆ ಅಡುಗೆ ರುಚಿ ನೋಡುತ್ತಿದ್ದ ನೆರೆಹೊರೆಯವರು ಈಗ ಸಲ್ಲದ ನೆಪ ಹೇಳಿ, ಅವರು ಕೊಟ್ಟಿದ್ದನ್ನು ತಿನ್ನಲು ನಿರಾಕರಿಸುತ್ತಿದ್ದಾರೆ. ಇದುವರೆಗೂ ಎಲ್ಲರೊಂದಿಗೂ ಕೂಡಿ ಬಾಳುತ್ತಿದ್ದವರಿಗೆ ಈಗ ಜಾತಿಯ ಕಾರಣಕ್ಕೆ ಅನ್ಯರಾಗಿ ಉಳಿಯಬೇಕಾದ ಸನ್ನಿವೇಶಗಳು ಎದುರಾಗತೊಡಗಿವೆ. ಇಂತಹ ಸನ್ನಿವೇಶಗಳನ್ನು ಶೋಷಕ ಜಾತಿಗೆ ಸೇರಿದವರು ಎಂದಾದರೂ ಎದುರಿಸುವರೇ? ಶೋಷಕರೇ, "ನೊಂದವರ ನೋವ ನೋಯದವರೆತ್ತ ಬಲ್ಲರು!" ಅಂತೆಲ್ಲ ಹೇಳಿಕೊಂಡು ತಮ್ಮನ್ನು ತಾವೇ ಬಲಿಪಶು ಎಂಬಂತೆ ಬಿಂಬಿಸಿಕೊಳ್ಳುವುದಕ್ಕೆ ಏನೆನ್ನುವುದು? ಇದು ಹೊಣೆಗೇಡಿತನದ ಪರಮಾವಧಿ ಅಲ್ಲವೇ?

"ಇದು ಶೋಷಕ ಜಾತಿಯ ಕೂಟದಂತಿದೆ," ಎಂದು ಯಾರಾದರೂ ಎಚ್ಚರಿಸುವ ಪ್ರಯತ್ನ ಮಾಡಿದರೆ, ಸಾಮಾಜಿಕ ವಾಸ್ತವದ ಅರಿವಿರುವವರಾದರೆ ಆತ್ಮವಿಮರ್ಶೆಗೆ ಇಳಿಯುತ್ತಾರಲ್ಲವೇ? ಅದರ ಬದಲಿಗೆ, ಎಲ್ಲವೂ ಸರಿ ಇದೆ ಎಂದು ವಾದಿಸುವವರು ಯಾವ ಮೌಲ್ಯಗಳ ರಾಯಭಾರಿಗಳೆಂದು ನಿರ್ಧರಿಸುವುದು ಕಷ್ಟವೇ?

ನಮ್ಮ ಆಯ್ಕೆಗಳಲ್ಲಿ ಪೂರ್ವಗ್ರಹಗಳು ನುಸುಳುತ್ತಿವೆಯೋ ಇಲ್ಲವೋ ಎಂಬುದನ್ನು ಅರಿಯಲು, ಮಾದರಿಗಳ (sampling) ಆಯ್ಕೆಯಲ್ಲಿ ಅನುಸರಿಸಬೇಕಿರುವ ಮೂಲಭೂತ ನಿಯಮವನ್ನು ಪರಿಗಣಿಸಿದರೆ ಸಾಕು. ಯಾವುದೇ ಸಂದಣಿಯಿಂದ (lot) ಒಂದಿಷ್ಟು ಮಾದರಿಗಳನ್ನು (sampling) ಆರಿಸುವುದಾದರೆ, ಹಾಗೆ ಆರಿಸಲ್ಪಟ್ಟ ಮಾದರಿಗಳು ಇಡೀ ಸಂದಣಿಯನ್ನು ಪ್ರತಿನಿಧಿಸುವಂತಿರಬೇಕು. ಮಾದರಿಗಳ ಆಯ್ಕೆ ವೇಳೆ ಯಾವುದೇ ರೀತಿಯ ಪೂರ್ವಗ್ರಹವೂ ಸುಳಿಯದಿದ್ದರೆ ಮಾತ್ರ ಇಡೀ ಸಂದಣಿಯನ್ನೇ ಪ್ರತಿನಿಧಿಸುವ ಮಾದರಿಗಳನ್ನು ಆರಿಸಲು ಸಾಧ್ಯವೆನ್ನುವುದು ಆ ನಿಯಮ.

Image
ಸಾಂದರ್ಭಿಕ ಚಿತ್ರ

ಇದೇ ನಿಯಮವನ್ನು ನಮ್ಮ ಬದುಕಿನ ಆಯ್ಕೆಗಳಿಗೂ ಅನ್ವಯಿಸಿ ನೋಡಿದರೆ ಸಾಕು, ನಮ್ಮಲ್ಲಿ ಯಾವೆಲ್ಲ ಪೂರ್ವಗ್ರಹಗಳು ಬೇರೂರಿವೆ ಮತ್ತು ಅವುಗಳ ತೀವ್ರತೆ ಎಷ್ಟೆಂಬುದೂ ಅರಿವಾಗಲಿದೆ. ನಮ್ಮ ಸ್ನೇಹಿತರ ಬಳಗ ಎಲ್ಲ ಜಾತಿ, ಧರ್ಮ, ಲಿಂಗ ಮತ್ತು ಸಾಮಾಜಿಕ ಹಿನ್ನೆಲೆಯವರನ್ನು ಒಳಗೊಂಡಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿದರೂ ನಮ್ಮಲ್ಲಿ ಬೇರೂರಿರುವ ಸಂಕುಚಿತತೆಯ ಅರಿವಾಗಲಿದೆ. ಇದೇ ಮಾನದಂಡವನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೂ ಅನ್ವಯಿಸಿ ನೋಡಬಾರದೇ? ಯಾರು ಯಾರೊಂದಿಗೆ ಹೆಚ್ಚು ಕಾಣಿಸಿಕೊಳ್ಳುತ್ತಾರೆ ಎಂಬುದೂ ಮುಖ್ಯವಾಗುವುದಿಲ್ಲವೇ? ಸಾಹಿತ್ಯಕ ಕಾರ್ಯಕ್ರಮಗಳನ್ನು ಆಯೋಜಿಸುವ ಗುಂಪುಗಳಲ್ಲಿ ನಿರ್ದಿಷ್ಟ ಶೋಷಕ ಜಾತಿಗೆ ಸೇರಿದವರೇ ಬಹುಸಂಖ್ಯಾತರಾಗಿದ್ದರೆ, ಅದು ಆ ಗುಂಪಿನಲ್ಲಿ ಬೇರೂರಿರಬಹುದಾದ ಜಾತಿ ಪ್ರಜ್ಞೆಗೆ ಹಿಡಿದ ಕನ್ನಡಿಯಾಗುವುದಿಲ್ಲವೇ?

ಶೋಷಕ ಜಾತಿಗಳು ಒಟ್ಟುಗೂಡುವುದಕ್ಕೂ ಶೋಷಿತ ಜಾತಿಗಳು ಸಂಘಟಿತರಾಗುವುದಕ್ಕೂ ವ್ಯತ್ಯಾಸ ಅರಿಯಲಾಗದವರ ಸಾಮಾಜಿಕ ಪ್ರಜ್ಞೆ ತೀರಾ ಸಂಕುಚಿತವಾದುದಲ್ಲವೇ? ತಮ್ಮಿಂದ ಮೀರಲಾಗದ ಸಂಕುಚಿತ ಮನೋಭಾವದ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳುವ ಗೋಜಿಗೆ ಹೋಗದೆ, ಅದನ್ನೇ ಈ ಕಾಲಕ್ಕೂ ಅಗತ್ಯವಿರುವ ಮೌಲ್ಯವಾಗಿ ಬಿಂಬಿಸಲು ಹೊರಡುವವರಿಗೆ ಏನೆನ್ನುವುದು? ವಿಶಾಲ ದೃಷ್ಟಿಕೋನದಿಂದ ಸಮಾಜವನ್ನು ಗ್ರಹಿಸಲಾಗದ ವ್ಯಕ್ತಿಗಳ ಮಿತಿ ಸಹಜವಾಗಿಯೇ ಅವರ ಬರವಣಿಗೆಯಲ್ಲೂ ಇಣುಕಲಾರದೇ? ಶೋಷಕ ಜಾತಿಗೆ ಸೇರಿದವರು, ಯಾರಾದರೂ ತಮ್ಮ ಜಾತಿಯನ್ನು ವಿಮರ್ಶಿಸಿದಾಗ ತಮ್ಮನ್ನೇ ವಿಮರ್ಶಿಸಿದಂತೆ ಪ್ರತಿಕ್ರಿಯಿಸತೊಡಗುವುದು ಸ್ವಜಾತಿಯೆಡೆಗೆ ಅವರಿಗಿರುವ ಪ್ರೀತಿಗೆ ದ್ಯೋತಕವಲ್ಲವೇ? ಜಾತಿ ಮೀರಿದ್ದೇವೆಂದು ಶೋಷಕ ಜಾತಿಗೆ ಸೇರಿದವರು ಬಿಂಬಿಸಿಕೊಳ್ಳುವಷ್ಟು ಸರಳವಾಗಿ ಮತ್ತು ಸುಲಭವಾಗಿ ಶೋಷಿತ ಜಾತಿಯವರು ಬಿಂಬಿಸಿಕೊಳ್ಳಲಾಗುವುದೇ? ಶೋಷಿತರು ಜಾತಿ ಬಿಡಲು ಸಿದ್ಧರಿದ್ದರೂ ಶೋಷಕ ಸಮಾಜದಲ್ಲಿ ಬೇರೂರಿರುವ ಜಾತಿ ಮೇಲರಿಮೆ ಎಂಬ ಕೆಂಡದುಂಡೆ ಅವರ ಮನಸ್ಸನ್ನು ಆಗಾಗ ಸವರದೆ ಇರುವುದೇ?

ನಿಮಗೆ ಏನು ಅನ್ನಿಸ್ತು?
4 ವೋಟ್