ಅಪ್ರಮೇಯ | ರಾಜನ ಹಳೇ ಕತೆ ಮತ್ತು ನದಿ ದಂಡೆಯಾಚೆ ಸೂರ್ಯ ಬೆಳಗುತ್ತಿದ್ದ ಹೊಸ ಊರು (ಎಲ್ಲರ ಕನ್ನಡ*)

ರೈತರು, ಕುಂಬಾರರು, ಕೂಲಿಕಾರರು, ಮಹಿಳೆಯರು... ಅವರಿಗೆಲ್ಲ ಅವರದ್ದೇ ಸಮಸ್ಯೆ. ಒಂದ್ನಿಮಿಷ... ಸಾಮಾನ್ಯವಾಗಿ ಇಂತಾ ಕತೆಗಳಲ್ಲಿ ನಮ್ ಟ್ರಾನ್ಸ್‌ಜೆಂಡರ್ ಜನ ಮತ್ತು ಸೆಕ್ಸ್ ವರ್ಕ್ ಮಾಡೋ ಜನರ ಬಗ್ಗೆ ಮಾತೇ ಇರಲ್ಲ ಅಲ್ವಾ? ಈಗ ಸೇರಿಸೋಣ. ಸೋ, ಆ ಊರಲ್ಲಿ ಟ್ರಾನ್ಸ್‌ಜೆಂಡರ್ಸ್, ಸೆಕ್ಸ್ ವರ್ಕರ್ಸ್‌ಗೂ ಅವರದ್ದೇ ಆದ ಸಮಸ್ಯೆಗಳು. ಅವೇನೆಂದರೆ...

ಒಂದು ಕತೆ ಹೇಳ್ತೀನಿ. ಯಾವಾಗ್ಲೂ ಇದೇ… ಒಂದೂರಲ್ಲಿ ಒಬ್ಬ ರಾಜ ಇದ್ದ. ಒಬ್ಬ ರಾಆಆಆಆಆಜ... ನನಗಂತೂ ಈ ಒಬ್ಬ ರಾಜನ ಕಲ್ಪನೆ ತುಂಬಾ ಡಿಸ್ಟರ್ಬ್ ಮಾಡುತ್ತೆ. ಯಾಕಂದ್ರೆ, ನಾ ಹುಟ್ಟಿದ್ ಕಾಲದಲ್ಲಿ ಈ ರಾಜ್ರು, ಪುರೋಹಿತ್ರು ಆಟೊಮ್ಯಾಟಿಕ್ ಆಗಿ ಒಳಗಿನಿಂದ ಗೌರವ ಕೊಡ್ತಾ, ಸೈಡಲ್ಲಿ ಡೆಮಾಕ್ರಸಿ ಬಗ್ಗೆನೂ ಮಾತಾಡ್ತಾ ಇದ್ರು. ಕತೆಗಳು ಮಾತ್ರ ಯಾವಾಗ್ಲೂ ಶುರುವಾಗೋದು ರಾಜನಿಂದ್ಲೆ. ಬಾಬಾಸಾಹೇಬರು ಹೇಳಿದ ಹಾಗೆ, ಡೆಮಾಕ್ರಸಿ ನಮಗಿನ್ನೂ ಸರ್ಫೇಶಿಯಲ್ ಕಲಿಕೆಯಾಗಿದೆ. ಈ ರಾಜ, ರಾಜನ ಮನೆತನದವರು, ಊರ ಜಮೀನ್ದಾರರು... ಹೀಗೆ ಫ್ಯೂಡಲಿಸಮ್‍ ಅನ್ನು ರಕ್ತದಲ್ಲಿ ಹರಿಸ್ಕೊತಾ ಬಾಯಿ ತುಂಬಾ ಡೆಮಾಕ್ರಸಿ ಮಾತಾಡ್ತೀವಿ - ನನನ್ನೂ ಸೇರಿಸಿ. ಇದೊಂದು ದುರಬ್ಯಾಸ. ಹ್ಞಾಂ... ಏನ್ ಹೇಳ್ತಿದ್ದೆ? ರಾಜ... ಒಬ್ಬ, ಅಲ್ಲ ಒಬ್ಬನೇ ರಾಜ ಇದ್ನಂತೆ. ಅವನಿಗೆ ಮೂವರು ಮಕ್ಳು... ಸಾಕಾ, ಇನ್ನಾ ಜಾಸ್ತಿ ಬೇಕಾ? ಈ ತರ ಹಲವಾರು ಕತೆಗಳಲ್ಲಿ ಮೂವರು ಮಕ್ಳು ಯಾವಾಗ್ಲೂ ಹೆಣ್ಮಕ್ಳಾಗಿರ್ತಾರೆ. ವಂಶೋದ್ದಾರಕ ಇಲ್ಲದ್ ಕಾರಣ ಸ್ವಯಂವರ ಅರೇಂಜ್ ಮಾಡ್ಬೇಕಾಗುತ್ತೆ.

Eedina App

ವೆಲ್... ಈಗಿನ ನಮ್ ಕತೇಲಿ ಈ ಸ್ವಯಂವರ ರಾಜನಿಗೆ ಒಂದು ಎಮರ್ಜೆನ್ಸಿ, ಬಹಳ ಕ್ರೂಶಿಯಲ್. ಆದ್ರೆ ಈ ರಾಜ್ಯದ ಪ್ರಜೆಗಳಿಗೆ ಬೇರೇನೇ ಸಮಸ್ಯೆಗಳು. ಇದು ಇನ್ನೊಂದು ಕ್ಲೀಶೆ. ಅಂದ್ರೆ, ಆ ಊರಿನ ಎಲ್ಲ ಪ್ರಜೆಗಳಿಗೆ ಒಂದೇ ಸಮಸ್ಯೆ ಇರ್ತದಾ ಅನ್ನೋ ಗೊಂದಲ. ಕಡೇ ಪಕ್ಷ, ಬೇರ್ಬೇರೆ ಪ್ರಜೆಗಳಿಗೆ ಬೇರೆ-ಬೇರೆ ಸಮಸ್ಯೆಗಳಿತ್ತು ಅನ್ನೋದನ್ನ ಯಾವತ್ತೂ ಕೇಳಿಲ್ಲ. ಇನ್ ದ ಸೆನ್ಸ್ ರೈತರಿಗೆ ಸಮಸ್ಯೆ ಬೇರೆ, ಸರ್ಕಾರ ನಡೆಸೋರ ಸಮಸ್ಯೆ ಬೇರೆ; ಅಂದ್ರೆ, ರಾಜ್ಯ ಕಾರ್ಯಬಾರ. ಅದೇ ತರ ಊರಿನ ಸಫಾಯಿ ಮಾಡುವವರ ಸಮಸ್ಯೆಗಳೂ ಬೇರೆ. ಆದ್ರೆ, ಕತೆಗಳಲ್ಲಿ ಯಾವಾಗ್ಲೂ ಒಬ್ಬ ರಾಜ, ಒಂದ್ ಊರು, ಒಂದೇ ಟೈಪ್ ಜನ, ಮತ್ತೆ ಒಂದೇ ಟೈಪ್ ಸಮಸ್ಯೆ!

ಇರಲಿ ಬಿಡಿ... ನಾನು ಈ ಕತೇಲಿ ಸ್ವಲ್ಪ ಬದಲಾವಣ ಮಾಡ್ತೀನಿ. ರಾಜಂಗೆ ಸ್ವಯಂವರದ ಗುಂಗು. ರಾಜ್ಯಕಾರ್ಯಬಾರದವರಿಗೆ ಸಂಬ್ಳ ಜಾಸ್ತಿ ಮಾಡಿಲ್ಲ ಅಂತ. ಯಾಕಂದ್ರೆ, ಅಲ್ಲಿ 'ಸಮಾನ ಕೆಲಸಕ್ಕೆ ಸಮಾನ ವೇತನ' ಇಲ್ಲ. ಸೋ, ಅವರಿಗೆಲ್ಲ ಅವರವರ ಸಂಬ್ಳದ್ ಚಿಂತೆ. ಇನ್ನು ರೈತರು, ಕುಂಬಾರರು, ಕೂಲಿ ಕೆಲಸಗಾರರು, ಮಹಿಳೆಯರು... ಅವರಿಗೆಲ್ಲ ಬೇರೆ-ಬೇರೆ ಸಮಸ್ಯೆ. ಒಂದ್ನಿಮಿಷ... ಸಾಮಾನ್ಯವಾಗಿ ಇಂತಾ ಕತೆಗಳಲ್ಲಿ ನಮ್ ಟ್ರಾನ್ಸ್‌ಜೆಂಡರ್ ಜನ ಮತ್ತು ಸೆಕ್ಸ್ ವರ್ಕ್ ಮಾಡೋ ಜನರ ಬಗ್ಗೆ ಮಾತೇ ಇರಲ್ಲ ಅಲ್ವಾ? ಈಗ ಸೇರಿಸೋಣ. ಸೋ, ಆ ಊರಲ್ಲಿ ಟ್ರಾನ್ಸ್‌ಜೆಂಡರ್ ಮತ್ತು ಸೆಕ್ಸ್ ವರ್ಕ್ ಮಾಡೋ ಜನಕ್ಕೆ ಅವರದ್ದೇ ಆದ ಸಮಸ್ಯೆ, ವಿದ್ಯಾಬ್ಯಾಸ ಅನ್ನೋದು ಇಲ್ಲ. ಏಕೆಂದರೆ, ಅವರೆಲಲ ಕುಲಕಸುಬು ಮಾಡ್ಕೊಂಡೇ ಬದುಕ್ಬೇಕು; ಅದರಿಂದ ಆಚೆ ಬರೋಕೆ ಅವಕಾಶವಿಲ್ಲ. ಜೊತೆಗೆ, ಎಲ್ಲರಿಗೂ ದುಡಿಮೆಯ ಹಣ ಕಡಿಮೆ. ತಳಸ್ತರದಲ್ಲಿ ಇರುವವರಿಗೆ ತಮ್ಮ ಸ್ವಂತಕ್ಕೆ ಕುಟುಂಬವೂ ಇರುವುದಿಲ್ಲ.

AV Eye Hospital ad

"ಊರು ಅಂದ್ಮೇಲೆ... ಇರ್ಬೇಕಲ್ವ?" ಅಂತೆಲ್ಲ ಕೇಳ್ಬೇಡಿ. "ಊರೇನು, ನಮ್ಮ ಈಗಿನ ಸಿಟಿಗಳಲ್ಲಿ ಕೂಡ ಇಂತಾ ಸೆಗ್ರಿಗೇಟೆಡ್ ಕಾಲೋನಿಗಳು, ಸ್ಲಂಗಳು ಇವೆ. ಇದು ಮತ್ತದೇ ಹಳೇ ಕತೆ; ಯಾವ ಕಾಲದ್ದು? ಅಂತಾನೂ ಕೇಳ್ಬೇಡಿ. ಈಗಲೂ ಇದೆಲ್ಲ ನಮಗೆ ಅನ್ವಯಿಸುತ್ತದೆ. ಸೋ, ಈ ರಾಜ ಸ್ವಯಂವರ ಅರೇಂಜ್ ಮಾಡೋ ಗುಂಗಲ್ಲಿರುವಾಗ... ಸಂಪ್ರದಾಯ ಹೇಗಿದ್ಯೋ ಹಾಗೇ ಫಾಲೋ ಮಾಡೋಣ; ಎಲ್ಲಾ ಪ್ರಜೆಗಳಿಗೆ ‘ಒಂದೇ’ ಸಮಸ್ಯೆ - ಅವರ ಯಾವ ಜಾತಿ, ವರ್ಗ, ಲಿಂಗ, ಲೈಂಗಿಕತೆ, ದರ್ಮ, ಕೆಲಸ, ವಿದ್ಯೆ ಬಗ್ಗೆ ಮಾತಾಡ್ಬಾರದಲ್ವಾ? ಇನ್ನು, ಈ ರಾಜ್ಯದಲ್ಲಿ ಎಲ್ಲರಿಗೂ ಅಬಿವ್ರುದ್ದಿ ಸ್ಕೀಮ್‍ಗಳನ್ನು ಪಡೆಯಲು ಆಗುತ್ತಿಲ್ಲ. ಬೇರೆ-ಬೇರೆ ಕಸುಬು ಮಾಡೋವ್ರಿಗೆ ಬೇರೆ ಬೇರೆ ಅಬಿವ್ರುದ್ದಿ ಸ್ಕೀಮ್; ಮರಗೆಲಸ ಮಾಡೋವ್ರಿಗೆ ಬೇರೆ, ಕುಂಬಾರರಿಗೆ ಬೇರೆ, ಹಾಗೇ ಎಲ್ಲರಿಗೂ ಗ್ರೇಡೆಡ್ ಆಗಿ ಅವರವರ ಫೀಲ್ಡ್ ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೆಲ್ಲದರ ಜೊತೆ ಈ ಎಲ್ಲ ಶ್ರೇಣೀಕೃತ ಸಮುದಾಯ ಕರವನ್ನೂ ಕಟ್ಟಬೇಕಿತ್ತು. ಅದೂ ಎಲ್ಲರೂ ಸಮಾನವಾಗಿ ಕಟ್ಟಬೇಕಿತ್ತು.

ಜಾತಿಯ ಕಸುಬು ಮಾಡುವವರು (ಅಂದ್ರೆ ಕುಂಬಾರರು, ಬಡಗಿ, ಚಮ್ಮಾರ) ಮತ್ತು ಮುಟ್ಟಿಸಿಕೊಳ್ಳಲಾಗದವರು, ಈ ವ್ಯವಸ್ತೆಗೆ ಎಲ್ಲಿಯೂ ಸಲ್ಲದವರು, ದಂದ ಮಡೋವ್ರು ಎಲ್ಲಾ ಸೇರಿ ಚರ್ಚಿಸಿ ಯೋಚನೆ ಮಾಡಿದರು. ತಮ್ಮ ಕೆಲಸಕ್ಕೆ ತಮ್ಮ ಸ್ವಂತ ಅಬಿವ್ರುದ್ದಿಗೆ, ಜೊತೆಗೆ ಓದು-ಬರಹ ಬರದವರು ಅದನ್ನು ಕಲಿಯಕ್ಕೆ ಬೇರೆ-ಬೇರೆ ಯೋಜನೆಗಳನ್ನು ಮಾಡಿ, ತಮ್ಮ ಕಸುಬುಗಳನ್ನೂ ಎಲ್ಲರೂ ಕಲಿಯಲಿಕ್ಕೆ ಈ ಪುರೋಹಿತರ ಗುರುಕುಲದಂತೆ ಮಾಡಿಕೊಡಲು ರಾಜನ ಹತ್ರ ಬಂದು ಕೇಳಲು ತೀರ್ಮಾನಿಸಿದರು. ಈ ವಿಶಯವನ್ನು ಕೇಳಿದ ಮೇಲ್ವರ್ಗದವರು ಮೇಲ್ಜಾತಿಯವರು ಈ ಗ್ರೇಡೆಡ್ ಸಂಸ್ಕ್ರುತಿ ಮತ್ತು ವ್ಯವಸ್ತೆ ಎಲ್ಲಿ ಕಳೆದುಬಿಡುತ್ತೋ ಅಂತ ಈ ಜನರನ್ನು ರಾಜನ ಹತ್ರ ಹೋಗದಂತೆ ನೋಡಿಕೊಳ್ತಾರೆ. ಈ ಜನರು ಯಾವಾಗೆಲ್ಲ ರಾಜನನ್ನು ಭೇಟಿ ಮಾಡಲು ಮನವಿ ಕೊಟ್ಟರೋ ಆಗೆಲ್ಲಾ ರಾಜನ ಹತ್ರನೇ ಹೋಗ್ತಿರ್ಲಿಲ್ಲ ಇವರ ಮನವಿ. ರಾಜ್ಯಕಾರ್ಯಬಾರದವರು ಸ್ವಲ್ಪ ದಿನಗಳ ನಂತರ ಇವರು ಮನವಿ ಕೊಡಲೂ ನಿರಾಕರಿಸಿದರು. ರಾಜ ಸ್ವಯಮ್ವರದಲ್ಲಿ ಬಿಸಿ ಇದ್ದ. ರಾಜನ ಮಂತ್ರಿಗಳೆಲ್ಲ ತಮ್ಮ-ತಮ್ಮ ಲಕ್ಜೂರಿಯಲ್ಲಿ ಓಲಾಡುತ್ತಿದ್ದರು.

ಕಡೆಗೊಂದು ದಿನ ಈ ಜನರೆಲ್ಲ ಸೇರಿ ರಾಜನ ಗಮನ ಸೆಳೆಯಲು ತೀರ್ಮಾನ ಮಾಡಿದರು. ದುರದೃಷ್ಟವೆಂದರೆ, ಆವತ್ತು ಈ ಸ್ವಯಂವರ ಕೂಡ ಆಯೋಜಿಸಿದ್ದರು. ಇಂತಾ ಸಮಯದಲ್ಲಿ ರಾಜನ ಗಮನ ಸೆಳೆಯುವುದು ಬಹಳ ಕಶ್ಟ ಅಂತ ಇವರೆಲ್ಲ ಏನ್ ಮಾಡಿದರು ಅಂದ್ರೆ, ಆ ಸ್ವಯಂವರಕ್ಕೆ ಬಂದವರನ್ನು ಮನರಂಜಿಸಲು ಹಾಡು ಹಾಡ್ತೀವಿ, ಡಾನ್ಸು ಮಾಡ್ತೀವಿ ಅಂತ ರಾಜ್ಯಕಾರ್ಯಬಾರದವರನ್ನು ಒಪ್ಪಿಸಿದರು.

ಸ್ವಯಂವರ ಶುರು ಆಯ್ತು. ಆ ಕಡೆ ಯುವರಾಣಿಯರು ತಮ್ಮ-ತಮ್ಮ ಲವರ್ಸ್ ಜೊತೆ ಓಡಿಹೋಗಕ್ಕೆ ಪ್ಲಾನ್ಮಾಡಿದ್ರು. ಅದರಲ್ಲಿ, ಚಮ್ಮಾರ ಮುಕ್ಯಸ್ತನ ಮಗನ ಜೊತೆ ಲವ್ ಇದ್ದ ಒಬ್ಬ ಯುವರಾಣಿ ತನ್ನ ಜೋಡಿಯೊಟ್ಟಿಗೆ ಬೇರೆನೇ ಪ್ಲಾನ್ ಮಾಡಿದ್ರು. ಸ್ವಯಂವರ ಶುರುವಾದಾಗ ಈ ಎಲ್ಲ ಜನರು ಹಾಡು, ಡಾನ್ಸ್ ಮಾಡುವ ಜನಾಂಗದ ಜೊತೆ ಸೇರಿ ತಮ್ಮ ಸಮಸ್ಯೆಗಳನ್ನು ಹಾಡಿನ ಮೂಲಕ ಹಂಚಿಕೊಂಡರು. ರಾಜ ಸಿಕ್ಕಾಪಟ್ಟೆ ಗೊಂದಲಕ್ಕೆ ಸಿಕ್ಕ. ಏನಾದ್ರೂ ಮಾಡ್ಬೇಕಲ್ಲಾ ಅಂತ ಒಂದು ಗೋಶಣೆ ಮಾಡಿದ: "ಎಲ್ಲಾ ಬಡವರಿಗೆ ಬೇಕಾದ ಅರ್ದ ವಸ್ತುಗಳನ್ನು ನಾನು ಕಡಿಮೆ ದರದಲ್ಲಿ ಕರೀದಿಸಿ ಕೊಡುತ್ತೇನೆ ಮತ್ತು ಎಲ್ಲಾ ಬಡವರಿಗೂ ಕರ ಕಡಿಮೆ ಮಾಡುತ್ತೇನೆ, ಎಲ್ಲಾ ಬಡವರು ಈ ಕಡೆ ಬಂದು ನಿಲ್ಲಿ, ನಿಮ್ಮ ಹೆಸರು ನೊಂದಾಯಿಸಲು...". ಆಗ ಅರ್ದಕ್ಕಿಂತ ಜಾಸ್ತಿ ದೇವಸ್ತಾನಗಳಲ್ಲಿ ಪೂಜೆ ಮಾಡೋವ್ರು ಬಂದು ನಿಂತರು. ಅವರ ಜೊತೆ ಈ ಎಲ್ಲಾ ಜನರು ನಿಂತಾಗ, ಈ ಜನರು ದಂಗಾದರು. ಇವರು ಬಡವರಾದರೆ ಮತ್ತೆ ನಾವೇನು ಅಂತ ಕಂಗಾಲಾಗಿ ಯೋಚಿಸುತ್ತಿದ್ದರು. ಈ ಜನರನ್ನು ಊರೊಳಗೆ ಬರಲು ಬಿಡಲ್ಲ, ಬಂದ್ರೂ ಕೇವಲ ಕೆಲಸಕ್ಕಾಗಿ ಮಾತ್ರ. ಅವರನ್ನು ಮುಟ್ಟಿಸಿಕೊಳ್ಳಲ್ಲ, ಅವ್ರಿಗೆ ವೇದ-ಮಂತ್ರಗಳ ಓದು-ಬರಹ ಹೇಳಿಕೊಡದೆ, ಈ ಜನರನ್ನೂ ದೇವರ ಹೆಸರಲ್ಲಿ ಲೂಟಿ ಮಾಡುವವರು, ಈ ಜನರ ದೇವರುಗಳ ಪೂಜೆಯನ್ನೂ ಚೀ ತೂ ಅಂತ ನೋಡುವವರು. ಆದರೂ ಸಮಾಜದ ಎಲ್ಲಾ ವಿಶಯಗಳನ್ನು ಇವರೇ ತೀರ್ಮಾನಿಸುತ್ತಾರೆ. ನಮ್ಮ ಸಂಸ್ಕ್ರುತಿ ಅಂದ್ರೆ ಇವರದ್ದೇ... ಆದರೂ ಇವರಿಗೆ ನಾವು ಮಾಡುವ ಕಸುಬು ಹಿಡಿಸೋಲ್ಲ... ಉಫ್  – ಮತ್ತೆ ಇವರು ಬಡವರು?

ಈ ಲೇಖನ ಓದಿದ್ದೀರಾ?: ನುಡಿಚಿತ್ರ | ತೇಜಸ್ವಿ ಮತ್ತು ಕರ್ನಾಟಕದ ಹುಡುಗ-ಹುಡುಗಿಯರು

ಚಮ್ಮಾರನ ಮಗನ ಜೊತೆ ಓಡಿಹೋದ ಮಗಳು ಇವರ ಗುಂಪಿನಿಂದ ಮುಂದೆ ಬಂದು ನಿಂತು ಜೋರಾಗಿ ಹೇಳುತ್ತಾಳೆ, "ಅಯ್ಯ, ನೀವು ನಿಮ್ಮ ರಾಜ್ಯಕಾರ್ಯಬಾರದವರು ಒಮ್ಮೆ ಬಳೆ ತೊಟ್ಟುಕೊಳ್ಳಿ. ಬಳೆ ತೊಡುವುದರಿಂದ ನಿಮ್ಮ ಗಂಡಸುತನ ಕಡಿಮೆ ಆಗುವುದಿಲ್ಲ. ಇನ್ನು ನಮ್ಮ ಹೆಂಗಸರಂತೆ ಹೊಣೆಗಾರಿಕೆ ಹೊತ್ತು ತಕ್ಕದಾಗಿ ನಡೆಸುವುದು ಬರುತ್ತೆ... ನಾವು ಹೋಗ್ತೀವಿ, ಬೇರೆ ರಾಜ್ಯ ಕಟ್ಟಲಿಕ್ಕೆ, ನಿಮ್ಮ ಹಂಗೇ ಬೇಡ...” ಅವರೆಲ್ಲರನ್ನೂ ಕರೆದುಕೊಂಡು ಹೊಸದೊಂದು ಸಮತೆ, ನ್ಯಾಯ, ಬಂದುತ್ವ, ಪ್ರೇಮದ ಜೀವನ, ಬದುಕು ಮತ್ತು ರಾಜ್ಯ ಕಟ್ಟಲು ಹೊರಟರು ಅವರಿಬ್ಬರು. ನದೀ ದಂಡೆಯ ಆಚೆ ಸೂರ್ಯ ಹದವಾಗಿ ಬೆಳಗುತ್ತಿತ್ತು.

* * *

ಕಲಾಕೃತಿಗಳು: ಲೇಖಕರವು

ನಿಮಗೆ ಏನು ಅನ್ನಿಸ್ತು?
1 ವೋಟ್
eedina app