ಜತೆಗಿರುವನೇ ಚಂದಿರ? | ಅಮ್ಮಿಯೊಂದಿಗೆ ಕಾಫಿ ಎಸ್ಟೇಟಿಗೆ ಕಾಲಿಟ್ಟ ಮೊದಲ ದಿನ

Coffee Estate 1

ಅಮ್ಮಿಯ ಜೊತೆ ಸಂತೆಗೆ ಹೋದಾಗೆಲ್ಲ ಹೀಗಾಗುತ್ತಿತ್ತು: ತರಹೇವಾರಿ ತರಕಾರಿಗಳ ಜೊತೆ ಬ್ಯಾಗು ಸೇರುತ್ತಿದ್ದ ಕರಿಮೀನು, ಒಣಮೀನುಗಳು ಮನಸ್ಸನ್ನು ಉಲ್ಲಸಿತಗೊಳಿಸುತ್ತಿದ್ದವು. ಕೊನೆಯಲ್ಲಿ ನನ್ನಿಷ್ಟದ ಖಾರಪುರಿ ಮತ್ತು ಕಜ್ಜಾಯದ ಪಾಕೇಟುಗಳು ತರಕಾರಿ ಬ್ಯಾಗಿನ ಉತ್ತುಂಗದಲ್ಲಿ ಕೂತು ಊರಿನ ಬೀದಿಯಲ್ಲಿ ಮೆರವಣಿಗೆಯೊಂದಿಗೆ ಸಾಗುತ್ತಿದ್ದವು

ಟಾಟಾ ಕಾಫಿ ವರ್ಕ್ಸ್‌ಗೆ ನಮ್ಮೂರಿನ ಅರ್ಧಕ್ಕರ್ಧದಷ್ಟು ಹೆಂಗಸರು ವಾರದ ಸಂಬಳಕ್ಕೆ ದುಡಿಯಲು ಹೋಗುತ್ತಿದ್ದರು. ವಾರವೆಲ್ಲ ದುಡಿದು ಸಿಗುತ್ತಿದ್ದ ಸಂಬಳದಲ್ಲಿ ಶನಿವಾರ ನಮ್ಮೂರಿನಲ್ಲಿ ಕಟ್ಟುತ್ತಿದ್ದ ಸಂತೆಯಲ್ಲಿ ಬ್ಯಾಗಿನ ತುಂಬಾ ಇಡೀ ವಾರಕ್ಕೆ ಬೇಕಾಗುವಷ್ಟು ತರಕಾರಿ ಸಾಮಾನುಗಳನ್ನೂ, ಮುಖದ ತುಂಬಾ ಆನಂದವನ್ನೂ ತುಂಬಿಕೊಂಡು ಮನೆಗೆ ಮರಳುತ್ತಿದ್ದರು.

ಅಮ್ಮಿಗೆ ಶನಿವಾರವೇ ಸಂಬಳದ ದಿನ. ಅದೇ ದಿನ ಊರಿನಲ್ಲಿ ಸಂತೆ ಇದ್ದಿದ್ದರಿಂದ, ಅಮ್ಮಿ ನನಗೆ ಸಂಜೆಯ ಹೊತ್ತಿಗೆ ಒಂದು ಬ್ಯಾಗಿನೊಂದಿಗೆ ಕಾಫಿ ವರ್ಕ್ಸ್‌ನ ಗೇಟಿನ ಬಳಿ ನಿಂತು ತನ್ನನ್ನು ಕಾಯಲು ಹೇಳುತ್ತಿದ್ದಳು. ನಾನು ಮಧ್ಯಾಹ್ನದವರೆಗೆ ಶಾಲೆ ಮುಗಿಸಿ, ಸಂತೆಯಲ್ಲಿ ಸಿಗುತ್ತಿದ್ದ ಖಾರಪುರಿ, ಬಜ್ಜಿ, ಬೋಂಡ, ಕಜ್ಜಾಯದ ಆಸೆಗೆ ಸಮಯಕ್ಕೆ ಮುಂಚೆಯೇ ಕಾಫಿ ವರ್ಕ್ಸ್ ಗೇಟಿನಲ್ಲಿ ಗಂಟೆಗಟ್ಟಲೆ ಕಾಯುತ್ತ ನಿಲ್ಲುತ್ತಿದ್ದೆ.

ಐದು ಗಂಟೆಗೆ ಸರಿಯಾಗಿ ಕೂಗುತ್ತಿದ್ದ ಕಾಫಿ ವರ್ಕ್ಸ್ ಸೈರನ್ ನನ್ನ ದೇಹ-ಮನಸ್ಸನ್ನೆಲ್ಲ ಪುಳಕಗೊಳಿಸುತ್ತಿತ್ತು. ಸಂಬಳ ಎಣಿಸುತ್ತ ಗೇಟ್ ದಾಟಿ ಹೊರಗೆ ಬರುತ್ತಿದ್ದ ಅಮ್ಮಿ, ಸಂತೆಗೆ ಬೇಕಾದಷ್ಟು ಹಣವನ್ನು ಮುದ್ದೆ ಮಾಡಿ ಸೆರಗಿನ ತುದಿಗೆ ಕಟ್ಟಿಕೊಂಡು, ಮಿಕ್ಕಿದ್ದನ್ನು ಸೆರಗು ಸರಿಸಿ ರವಿಕೆಯೊಳಗೆ ತುರುಕಿಬಿಡುತ್ತಿದ್ದಳು. ನನ್ನನ್ನು ನೇರ ಸಂತೆಯೊಳಗೆ ಕರೆದುಕೊಂಡು ಹೋಗಿ ಅಲ್ಲಿ ಅವಳು ಒಂದೊಂದೇ ತರಕಾರಿಗಳನ್ನು ಬ್ಯಾಗಿನಲ್ಲಿ ತುಂಬಿಸಿ ತರಕಾರಿಯವರಿಗೆ ದುಡ್ಡು ಕೊಟ್ಟು ಮುಂದೆ ಹೋಗುತ್ತಿದ್ದರೆ, ನಾನು ಹೊರಲಾರದ ಬ್ಯಾಗನ್ನು ಎಳೆದುಕೊಂಡು ಅವಳ ಹಿಂದೆಯೇ ಸುತ್ತುತ್ತಿದ್ದೆ. ತರಕಾರಿಗಳ ಜೊತೆಗೆ ಘಮಘಮಿಸುತ್ತ ಕರಿಮೀನು, ಒಣಮೀನುಗಳೂ ಬಂದು ಸೇರಿಕೊಂಡು ಮನಸ್ಸನ್ನು ಉಲ್ಲಸಿತಗೊಳಿಸುತ್ತಿದ್ದವು. ಕೊನೆಯಲ್ಲಿ ನನ್ನಿಷ್ಟದ ಖಾರಪುರಿ ಮತ್ತು ಕಜ್ಜಾಯದ ಪಾಕೇಟುಗಳು ತರಕಾರಿ ಬ್ಯಾಗಿನ ಉತ್ತುಂಗದಲ್ಲಿ ಕೂತು ಊರಿನ ಬೀದಿಯಲ್ಲಿ ಮೆರವಣಿಗೆಯೊಂದಿಗೆ ಸಾಗುತ್ತಿದ್ದವು.

Image
Santhe
ಸಾಂದರ್ಭಿಕ ಚಿತ್ರ

ಅಬ್ಬ ಮಾತ್ರ ಅಮ್ಮಿಯ ಸಂಬಳದ ದಿನ ಬಂದರೆ ಸಾಕು, ಆ ದಿನ ಕೆಲಸಕ್ಕೆ ಹೋಗದೆ ನಡುರಸ್ತೆಯಲ್ಲೇ ಅಮ್ಮಿಯನ್ನು ಅಡ್ಡಗಟ್ಟಿ ಬೆದರಿಸಿ ದುಡ್ಡು ಕಿತ್ತುಕೊಳ್ಳುತ್ತಿದ್ದ. ಅಮ್ಮಿ ದಾರಿಯುದ್ದಕ್ಕೂ ಅಬ್ಬನನ್ನು ಬಯ್ದುಕೊಳ್ಳುತ್ತ ಮುಖಕ್ಕೆ ಸೆರಗು ಒತ್ತಿಕೊಂಡು ಮುಸಿಮುಸಿ ಅಳುತ್ತ ಮನೆಗೆ ಬರುತ್ತಿದ್ದಳು. ಮನೆಗೆ ಬಂದ ನಂತರ ಅಮ್ಮಿ, ನಾನು ದಿನವೂ ಕಾಫಿ ಕುಡಿಯುತ್ತಿದ್ದ ಮಿಳ್ಳೆಯಲ್ಲಿ ಕಾಫಿ ಸುರಿದು, ಅದರ ತುಂಬಾ ಖಾರಪುರಿ ತುಂಬಿಸಿ ತಿನ್ನಲು ಕೊಡುತ್ತಿದ್ದಳು. ಅಲ್ಲದೆ, ಸಂತೆಯಿಂದ ತಂದಿದ್ದ ತಿಂಡಿಗಳನ್ನು ನನಗೆ ಮತ್ತು ದಿನಣ್ಣ ಇಬ್ಬರಿಗೂ ಹಂಚಿಕೊಡುತ್ತಿದ್ದಳು. ನಾನು ಗಂಟೆಗಟ್ಟಲೆ ಅದನ್ನು ಸವಿಯುತ್ತ ಮೆಲ್ಲುತ್ತಿದ್ದರೆ, ದಿನಣ್ಣ ತನಗೆ ಹಂಚಿಕೊಟ್ಟಿದ್ದ ತಿಂಡಿಗಳನ್ನು ಕ್ಷಣಮಾತ್ರದಲ್ಲಿ ತಿಂದು ಮುಗಿಸಿ ನನ್ನ ತಿಂಡಿಗಳನ್ನೂ ಕಿತ್ತುಕೊಂಡು ಮನೆಯಿಂದ ಹೊರಗೆ ಓಡಿಬಿಡುತ್ತಿದ್ದ. ನಾನು ನೆಲಕ್ಕೆ ಕಾಲು ಉಜ್ಜುತ್ತ ಬಾಯಿ ಬಡಿದುಕೊಳ್ಳುತ್ತಿದ್ದೆ. ಈಗಲೂ ಕಾಫಿಗೆ ಖಾರಪುರಿ ತುಂಬಿಸಿ ತಿನ್ನುವುದೆಂದರೆ ನನಗೆ ಜೀವ.

ಬೆಳಗ್ಗಿನ ಏಳು ನಲವತ್ತೈದಕ್ಕೆ ಇಡೀ ಊರಿಗೆ ಕೇಳುವಂತೆ ಕಾಫಿ ವರ್ಕ್ಸ್‌ನ ಮೊದಲ ಸೈರನ್ ಕೂಗುತ್ತಿತ್ತು. ಎಂಟು ಗಂಟೆಗೆ ಎರಡನೇ ಸೈರನ್ ಕೂಗಿಸಿ ಕಾಫಿ ವರ್ಕ್ಸ್ ಮೈನ್ ಗೇಟನ್ನು ಮುಚ್ಚಿಬಿಡುತ್ತಿದ್ದರು. ಮೊದಲ ಸೈರನ್ ಕಿವಿಗೆ ಬೀಳುತ್ತಲೇ ನಮ್ಮೂರಿನ ಹೆಂಗಸರೆಲ್ಲ ಸೀರೆಯನ್ನು ಸೊಂಟಕ್ಕೆ ಎತ್ತಿ ಸಿಕ್ಕಿಸಿ, ಬಡಿದ ಅಕ್ಕಿ ರೊಟ್ಟಿಯ ಮೇಲೆ ಕಾಯಿಚಟ್ನಿಯನ್ನೋ, ಹುಚ್ಚೆಳ್ಳು ಚಟ್ನಿಯನ್ನೋ ಅಥವಾ ಹುರಿಗಾಳು ಚಟ್ನಿಯನ್ನೋ ಸುರಿದುಕೊಂಡು ಕಂಕುಳಲ್ಲಿ ಮಧ್ಯಾಹ್ನದ ಊಟದ ಬುತ್ತಿಯನ್ನು ಇರುಕಿಕೊಂಡೋ ಅಥವಾ ಬುತ್ತಿಗೆ ಬಿಗಿದು ಕಟ್ಟಿದ ಕರ್ಚೀಫನ್ನು ಬೆರಳಿಗೆ ಸಿಕ್ಕಿಸಿಕೊಂಡೋ ರಾಶಿ-ರಾಶಿ ಸಂಖ್ಯೆಯಲ್ಲಿ ರಸ್ತೆಗಿಳಿಯುತ್ತಿದ್ದರು. ರಸ್ತೆಯುದ್ದಕ್ಕೂ ಅಂಗೈ ಮೇಲಿದ್ದ ರೊಟ್ಟಿಯನ್ನು ಮುರಿದು ತಿನ್ನುತ್ತ, ಹರಟುತ್ತ ಮೈಲುಗಟ್ಟಲೆ ಓಡುತ್ತಿದ್ದರು. ಆ ಒಂದು ಹತ್ತು-ಹದಿನೈದು ನಿಮಿಷಗಳಲ್ಲಿ ಎಷ್ಟೋ ಮನೆಗಳ ಕಷ್ಟ-ಸುಖದ ಕತೆಗಳು ಗಿಜಿಗಿಜಿ ಸದ್ದಿನೊಂದಿಗೆ ಆ ರಸ್ತೆಯಲ್ಲಿ ಜೀವ ಪಡೆದು, ನಕ್ಕು ನಲಿದು ನೊಂದು ಕರಗಿಹೋಗುತ್ತಿದ್ದವು.

ನನಗೆ ನೆನಪಿದ್ದ ಹಾಗೆ ಅಮ್ಮಿಗೆ ಆಗ ದಿನಕ್ಕೆ ಇಪ್ಪತ್ತೆಂಟು ರೂಪಾಯಿ ಸಂಬಳ. ಕೆಲವೊಮ್ಮೆ ಕಾಫಿ ಲೋಡಿಂಗ್ ಹೆಚ್ಚಾಗಿ ಬಂದಾಗ ಕೆಲಸಕ್ಕೆ ಹೆಚ್ಚು-ಹೆಚ್ಚು ಜನರನ್ನು ತೆಗೆದುಕೊಳ್ಳುತ್ತಿದ್ದರು. ಆಗೆಲ್ಲ ನಮ್ಮೂರಿನ ಹೆಂಗಸರ ಮುಖದಲ್ಲಿ ಮುಕ್ಕೋಟಿ ಸೂರ್ಯರೇ ಬೆಳಗುತ್ತಿದ್ದರು. ಕಾಫಿ ಕಡಿಮೆಯಾದಂತೆ ಕಾಯಂ ಕೆಲಸದವರನ್ನು ಮಾತ್ರ ಉಳಿಸಿಕೊಂಡು ಬಾಕಿಯವರನ್ನು ಕೆಲಸದಿಂದ ತೆಗೆದುಬಿಡುತ್ತಿದ್ದರು. ಆ ಸುದ್ದಿ ಹೆಂಗಸರ ಕಿವಿಯಿಂದ ಕಿವಿಗೆ ಬಿದ್ದು ಮನೆಗೆ ಬಂದವರು ಅಕ್ಕಪಕ್ಕದ ಮನೆಯ ಹೆಂಗಸರ ಜೊತೆ, "ಅಯ್ಯೋ... ವರ್ಕ್ಸ್‌ನಲ್ಲಿ ಜನ ತಗಿತರಂತೆ. ಪುನಃ ಜನ ತಕ್ಕೊಳತನ್ಕ ಹೊಲ-ಗದ್ದೆ ಕೆಲ್ಸ ನೋಡ್ಕಬೇಕು," ಎಂದು ಒಂದು ರೀತಿಯ ಬೇಸರದ ದನಿಯಲ್ಲಿ ಮಾತಾಡಿಕೊಳ್ಳುತ್ತಿದ್ದರು. ಅಮ್ಮಿಯನ್ನು ಕೂಡ ಅದೆಷ್ಟೋ ಬಾರಿ ಕೆಲಸಕ್ಕೆ ತೆಗೆದುಕೊಂಡದ್ದೂ ಇದೆ, ಕೈ ಬಿಟ್ಟಿದ್ದೂ ಇದೆ. ಮತ್ತೆ ಕಂಪನಿಗೆ ಜನ ತೆಗೆದುಕೊಳ್ಳುವ ಸುದ್ದಿಯನ್ನು ಅಲ್ಲಿನ ಕಾಯಂ ಕೆಲಸದವರೇ ಇವರಿಗೆಲ್ಲ ತಲುಪಿಸುತ್ತಿದ್ದರು. ಹಾಗಾಗಿ, ಇವರಿಗೆಲ್ಲಾ ಕಾಯಂ ಆಗಿದ್ದವರನ್ನು ಕಂಡರೆ ಒಂಥರಾ ಗೌರವ. ಅವರೂ ಅಷ್ಟೇ, ಯಾವಾಗಲೂ ಒಂದು ರೀತಿ ಅಫೀಷಿಯಲ್ ಸೋಗಿನಲ್ಲಿಯೇ ಇರುತ್ತಿದ್ದರು.

ಈ ಲೇಖನ ಓದಿದ್ದೀರಾ?: ಊರ್ಬದಿ | ಗರುಡಪಕ್ಷಿಯ ಕೊಂದ ಬಳಿಕ ಬೇಟೆಯನ್ನೇ ಬಿಟ್ಟ ನಾರಾಯಣ

ರುದ್ರಪ್ಪಯ್ಯನ ಮಗಳು ಜಮುನಕ್ಕ ಕಾಫಿ ವರ್ಕ್ಸ್‌ನಲ್ಲಿ ಕಾಯಂ ಆಗಿದ್ದರು. ನಾವು ಫಾರಂ ಸ್ಕೂಲಿನಲ್ಲಿ ಓದುವಾಗ ಯೂನಿಫಾರಂ ಹೊಲಿಸದೆ, ದಿನವೂ ಎರಡೂ ಕೈಗಳ ಹಿಂಬದಿಯಲ್ಲಿ ಬರೆ ಬೀಳಿಸಿಕೊಂಡು ಮನೆಗೆ ಬರುತ್ತಿದ್ದೆವು. ಯೂನಿಫಾರಂ ಇಲ್ಲದವರು ಅಸೆಂಬ್ಲಿ ಮುಗಿದ ಮೇಲೆ ಹೊಡೆತ ತಿಂದು ಕ್ಲಾಸ್ ರೂಮ್‌ಗೆ ಹೋಗಬೇಕಿತ್ತು. ನಾವು ದಿನವೂ ಮನೆಗೆ ಬಂದು ಅಳುತ್ತಿದ್ದೆವು. ಆಗ ಅಮ್ಮಿ ಈ ಜಮುನಕ್ಕನನ್ನು ನಮ್ಮೂರಲ್ಲಿ ಟೈಲರ್ ಅಂಗಡಿ ಇಟ್ಟುಕೊಂಡಿದ್ದ ಜಯಂತಣ್ಣನ ಕಡೆ ಕರೆದುಕೊಂಡು ಹೋಗಿ, ಜಮುನಕ್ಕನ ಗ್ಯಾರಂಟಿಯ ಮೇಲೆ ಜಯಂತಣ್ಣ ದಿನಣ್ಣನಿಗೆ ಒಂದು ಬಿಳಿ ಶರ್ಟ್ ಮತ್ತು ಒಂದು ಖಾಕಿ ಪ್ಯಾಂಟ್ ಹೊಲಿದುಕೊಟ್ಟಿದ್ದರು. ನನಗೆ ಮಾತ್ರ, ಕಾಫಿ ವರ್ಕ್ಸ್‌ನಲ್ಲಿ ಅಮ್ಮಿಯ ಜೊತೆ ಕೆಲಸ ಮಾಡುತ್ತಿದ್ದವರ ಮಗಳ ಯೂನಿಫಾರಂ ಬಟ್ಟೆಯನ್ನು ತರಿಸಿಕೊಟ್ಟಿದ್ದಳು. ಅವು ದೊಗಳೆ ಬಟ್ಟೆಗಳಾಗಿದ್ದು, ಮಾಸಲಾಗಿ ಅಲ್ಲಲ್ಲಿ ತೇಪೆ ಹಾಕಿದ್ದು, ಅವುಗಳಿಂದ ಒಂದು ರೀತಿಯ ವಾಸನೆ ಬರುತ್ತಿತ್ತು. ನಾನು ಅವನ್ನು ಹೊಸದೆಂಬ ಭಾವದಲ್ಲೇ ಹಾಕಿಕೊಳ್ಳುತ್ತಿದ್ದೆ.

ಒಮ್ಮೆ ಹೀಗೆ ಅಮ್ಮಿಯನ್ನು ಕಾಫಿ ವರ್ಕ್ಸ್‌ನಿಂದ ತೆಗೆದುಹಾಕಿದ್ದರು. ಆಗ ನಮ್ಮೂರಿನ ಇಂಡಸ್ಟ್ರಿಯಲ್ ಏರಿಯಾದಲ್ಲಿ ಟಾಟಾ ಕಾಫಿ ವರ್ಕ್ಸ್‌ನ ಜೊತೆಗೆ ‌ಕಾವೇರಿ ಕಂಪನಿ, ಮರ್ಕರ ಕಂಪನಿ ಮತ್ತು ಟಿ.ಸಿ.ಸಿ ಕಾಫಿ ಕಂಪನಿಗಳು ತಲೆಯೆತ್ತಿದ್ದವು. ಟಾಟಾ ವರ್ಕ್ಸ್‌ನಲ್ಲಿ ಕೆಲಸವಿಲ್ಲದಿದ್ದ ಕಾರಣಕ್ಕೆ ಅಮ್ಮಿ ಕೂಡುಮಂಗಳೂರಿನ ಮರ್ಕರ ಕಾಫಿ ಕಂಪನಿಗೆ ಸೇರಿಕೊಂಡಿದ್ದಳು. ಅಲ್ಲಿ ತಾವು ಮಾಡುವ ಕೆಲಸಕ್ಕೆ ಮೂಟೆ ಲೆಕ್ಕದಲ್ಲಿ ಸಂಬಳ ನಿಗದಿ ಮಾಡಿದ್ದರು. ಅಮ್ಮಿಯ ಜೊತೆ ಕೆಲಸ ಮಾಡುತ್ತಿದ್ದ ಹೆಂಗಸರೆಲ್ಲ ಮಾರನೇ ದಿನ ಮನೆಯಿಂದ ಬರುವಾಗ, ತಮ್ಮ ವಯಸ್ಸಿಗೆ ಬಂದ ಹೆಣ್ಣುಮಕ್ಕಳನ್ನು ಕೆಲಸಕ್ಕೆ ಕರೆದುಕೊಂಡು ಬರುವುದಾಗಿ ಮಾತಾಡಿಕೊಂಡಿದ್ದರಂತೆ. ಮಾರನೆಯ ದಿನ ಅವರವರ ಮಕ್ಕಳಿಗೆ ತಮ್ಮದೇ ಸೀರೆಯೊಂದನ್ನು ಸುತ್ತಿಕೊಂಡು ಕೆಲಸಕ್ಕೆ ಕರೆದುಕೊಂಡು ಬಂದಿದ್ದರು. ನಾನಾಗ ಐದನೇ ಕ್ಲಾಸ್ ಇರಬೇಕು. ಶಾಲೆಗೆ ಬೇಸಿಗೆಯ ರಜೆ ಕೊಟ್ಟಿದ್ದರು ಅಂತ ಅನ್ನಿಸುತ್ತದೆ.

Image
Coffee Estate 2
ಸಾಂದರ್ಭಿಕ ಚಿತ್ರ

ಅವತ್ತು ಬೆಳಗ್ಗೆಯೇ, ಇನ್ನೂ ಮಲಗಿದ್ದ ನನ್ನನ್ನು ಅಮ್ಮಿ ಬಲವಂತವಾಗಿ ಎಬ್ಬಿಸಿ ಮುಖ ಕೈ-ಕಾಲು ತೊಳೆಸಿ, ಟ್ರಂಕ್‌ನಲ್ಲಿ ತನ್ನ ಮದುವೆಗೆಂದು ಅಬ್ಬ ಕೊಡಿಸಿದ್ದ ನೀಟಾಗಿ ಮಡಿಸಿಟ್ಟಿದ್ದ ಕನಕಾಂಬರ ಬಣ್ಣದಲ್ಲಿ ಫಳಫಳನೆ ಹೊಳೆಯುತ್ತಿದ್ದ ಸೀರೆಯನ್ನು ತೆಗೆದು ನಮ್ಮ ಓನರ್ ಭಾಗ್ಯಾಂಟಿಯ ಮಗಳು ಪುಷ್ಪಕ್ಕನ ಕಡೆ ಕೊಟ್ಟು ನನಗೆ ಉಡಿಸಲು ಹೇಳಿದಳು. ಪುಷ್ಪಕ್ಕ ಅಮ್ಮಿಯ ರವಿಕೆಗೆ ಅಲ್ಲಲ್ಲಿ ಪಿನ್ನುಗಳನ್ನು ಚುಚ್ಚಿ ಸೀರೆಯನ್ನು ಮಧ್ಯಕ್ಕೆ ಮಡಿಸಿ, ನಿರಿಗೆ ತೆಗೆದು ಚಂದವಾಗಿ ನನಗೆ ಉಡಿಸಿಕೊಟ್ಟಿದ್ದರು. ಅಮ್ಮಿ ನನಗೆ ನೀರುಜಡೆ ಹಾಕಿ, ಹೂವು ಮುಡಿಸಿ, ಚೆನ್ನಾಗಿ ರೆಡಿ ಮಾಡಿಕೊಂಡು ಕಾಫಿ ವರ್ಕ್ಸ್ ಕೆಲಸಕ್ಕೆ ಕರೆದುಕೊಂಡು ಹೋಗಿದ್ದಳು. ಆ ಕಾಫಿ ವರ್ಕ್ಸ್ ಗೇಟ್ ಒಳಗೆ ಹೋಗುತ್ತಲೂ ನನಗೆ ಯಾವುದೋ ಅನ್ಯಲೋಕಕ್ಕೆ ಬಂದ ಅನುಭವವಾದರೆ, ಅಲ್ಲಿರುವವರೆಲ್ಲರೂ ನನ್ನನ್ನೇ ಅನ್ಯಗ್ರಹ ಜೀವಿಯಂತೆ ನೋಡಲು ತೊಡಗಿದರು.

ಅಮ್ಮಿ  ಬರೀ ಹೆಂಗಸರೇ ತುಂಬಿದ್ದ ಆ ದೊಡ್ಡ ಗೋಡೌನ್ನೊಳಗೆ ನನ್ನನ್ನು ಕರೆದುಕೊಂಡುಹೋದಳು. ನನಗೆ ನಾಲ್ಕೈದು ತರದ ಕಾಫಿ ಬೇಳೆಗಳನ್ನು ತೋರಿಸಿ, ಅದನ್ನೆಲ್ಲ ಬೇರೆ-ಬೇರೆ ಮಾಡಲು ಹೇಳಿಕೊಟ್ಟಳು. ನಾನು ಬೇಳೆಗಳನ್ನು ಒಂದಷ್ಟು ಹೊತ್ತು ಆರಿಸಿ ಬೇರ್ಪಡಿಸಿ ನಂತರ ಅವುಗಳೊಡನೆಯೇ ಆಟವಾಡಲು ತೊಡಗುತ್ತಿದ್ದೆ. ನಂತರ ಅಮ್ಮಿ ಬೇರ್ಪಡಿಸಿದ ಬೇಳೆಗಳನ್ನು ಕುಕ್ಕೆಗಳಲ್ಲಿ ತುಂಬಿ ಸುರಿಯಲು ಹೇಳುತ್ತಿದ್ದಳು. ನಾನು ಆ ಕುಕ್ಕೆಯನ್ನು ಎಳೆಯಲಾಗದಿದ್ದರೂ ಕಷ್ಟಪಟ್ಟು ಎಳೆದುಕೊಂಡು ಹೋಗಿ ಸುರಿಯುತ್ತಿದ್ದೆ. ನನ್ನನ್ನು ನೋಡಿ ಅಲ್ಲಿ ಕೆಲಸ ಮಾಡುತ್ತಿದ್ದ ಹೆಂಗಸರಿಗೆಲ್ಲ ಒಂದು ರೀತಿಯ ಕನಿಕರದ ಭಾವ ಬಂದು, ಅವರೆಲ್ಲ, "ಇಷ್ಟು ಸಣ್ಣ್ ಮಗವ ಕೆಲ್ಸುಕ್ಕೆ ಕರ್ಕೊಂಡು ಬಂದಿದ್ದೀಯಲ್ಲ..." ಅನ್ನುತ್ತ, ಬಾಯಿಯ ಮೇಲೆ ಕೈಯಿಟ್ಟುಕೊಳ್ಳುತ್ತ ನನ್ನೆದುರಿಗೆ ಅಮ್ಮಿಯನ್ನು ಬಯ್ಯಲು ಶುರು ಮಾಡಿದರು.

ಯಾರೋ ಒಬ್ಬ ಹಿರಿಯ ಹೆಂಗಸು ಬಂದು, "ನಾಳೆಯಿಂದ ಈ ಮಗುವನ್ನು ಕೆಲಸಕ್ಕೆ ಕರೆದುಕೊಂಡು ಬರಬೇಡ ಕಣಮ್ಮಾ..." ಅಂತ ಹೇಳಿಯೇಬಿಟ್ಟರು. ಆದರೆ, ಎಲ್ಲರ ಸಮನಾಗಿ ಸೀರೆ ಉಟ್ಟು ಕೆಲಸ ಮಾಡಿದ್ದ ನನಗೆ ಮಾತ್ರ ಮುಜುಗರವಾಗಲಿಲ್ಲ ಬದಲಿಗೆ, ಆ ಒಂದು ದಿನದ ದುಡಿಮೆಗೆ ಸಂಬಳ ಪಡೆದ ಆನಂದದ ಭಾವವನ್ನು ಹೊತ್ತು ಮನೆಗೆ ಬಂದಿದ್ದೆ. ಮತ್ತೆ ಮಾರನೆಯ ದಿನ ಅಮ್ಮಿ ನನ್ನನ್ನು ಕೆಲಸಕ್ಕೆ ಕರೆದುಕೊಂಡು ಹೋಗಲಿಲ್ಲ.

ಮುಂದುವರಿಯುವುದು
ನಿಮಗೆ ಏನು ಅನ್ನಿಸ್ತು?
4 ವೋಟ್