ವರ್ತಮಾನ | ನಿಮಗೆ ತಿಳಿದದ್ದು ಹೇಳಿ ಪರವಾಗಿಲ್ಲ - ನಿಜಕ್ಕೂ ಯಾವುದು ಅನುಚಿತ ವರ್ತನೆ?

ಖಾಸಗಿ ವ್ಯಕ್ತಿಗಳ ನಡುವಿನ ಸರಸ-ಸಲ್ಲಾಪಕ್ಕಿಂತ ಸಮಾಜವನ್ನು ಬಾಧಿಸುವ ಸಾಕಷ್ಟು ಅನುಚಿತ ವರ್ತನೆಗಳಿದ್ದು, ನಮ್ಮ ಗಮನ ಅತ್ತ ಹರಿಯಬೇಕಿದೆ. ಜನರ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಯೋಚಿಸಬೇಕಿದ್ದ ಜನಪ್ರತಿನಿಧಿಗಳು ಧರ್ಮ-ದೇಗುಲವನ್ನೇ ಗುರಾಣಿಯಾಗಿಸಿ ಸಮಾಜ ಒಡೆಯಲು ಹೊರಟಿರುವುದು ಅನುಚಿತ ವರ್ತನೆಯಲ್ಲವೇ?

ಯಾವುದು ಅನುಚಿತ ವರ್ತನೆ? ಈ ಪ್ರಶ್ನೆಗೆ ಉತ್ತರ ನೀಡುವ ಮುನ್ನ ಸಮಾಜ ವರ್ತಮಾನದ ವಾಸ್ತವವನ್ನೂ ಅರಗಿಸಿಕೊಳ್ಳುವ ಸಂಯಮ ತೋರಬೇಕಿದೆ. ಇಲ್ಲವಾದಲ್ಲಿ ಬದಲಾದ ತಂತ್ರಜ್ಞಾನ-ಜೀವನಶೈಲಿ ಮತ್ತು ಬದಲಾಗದ ಸಮಾಜದ ಮನಸ್ಥಿತಿ ತಂದೊಡ್ಡಬಹುದಾದ ಬಿಕ್ಕಟ್ಟುಗಳು ನಮ್ಮೆಲ್ಲರ ಬದುಕನ್ನು ಮತ್ತಷ್ಟು ದುಸ್ತರಗೊಳಿಸುವ ಸಾಧ್ಯತೆ ಇದೆ.

Eedina App

ಬಹುತೇಕ ಸಂದರ್ಭಗಳಲ್ಲಿ ಅನುಚಿತ ವರ್ತನೆಯನ್ನು ವ್ಯಕ್ತಿಗಳ ನಡುವಿನ ಪ್ರೇಮ-ಪ್ರಣಯ ಮತ್ತದರ ಸಾರ್ವಜನಿಕ ಪ್ರದರ್ಶನಕ್ಕೆ ತಳುಕು ಹಾಕುವ ಸಮಾಜ, ಸಾರ್ವಜನಿಕ ಸ್ಥಳದಲ್ಲಿ ನಡೆಯುವ ಅಥವಾ ಸಾರ್ವಜನಿಕಗೊಳ್ಳುವ ಸರಸ-ಸಲ್ಲಾಪಗಳು ಸಮಾಜದ ಮೇಲೆ ಬೀರಬಹುದಾದ ವ್ಯತಿರಿಕ್ತ ಪರಿಣಾಮಗಳಾದರೂ ಎಂತಹವು ಎನ್ನುವುದನ್ನು ಮುಕ್ತ ಮನಸ್ಸಿನಿಂದ ಪರಿಶೀಲಿಸಬೇಕಿದೆ.

ವ್ಯಕ್ತಿಗಳ ನಡುವಿನ ಸರಸ-ಸಲ್ಲಾಪಕ್ಕಿಂತ ಈ ಸಮಾಜವನ್ನು ಅಸಲಿಗೂ ಬಾಧಿಸುವ ಸಾಕಷ್ಟು ಅನುಚಿತ ವರ್ತನೆಗಳಿವೆ. ನಿಜಕ್ಕೂ ನಮ್ಮನ್ನು ಸಂಕಷ್ಟಕ್ಕೆ ಈಡುಮಾಡುವ, ಸಮಾಜವನ್ನು ಒಡೆಯುವ ಅನುಚಿತ ವರ್ತನೆಗಳತ್ತ ನಮ್ಮೆಲ್ಲರ ಗಮನ ಹರಿಯಬೇಕಿದೆ. ಜನರ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದ್ದ, ನಮ್ಮ ಸಂಕಷ್ಟಗಳಿಗೆ ಸ್ಪಂದಿಸಬೇಕಿದ್ದ ಜನಪ್ರತಿನಿಧಿಗಳು ಧರ್ಮ-ದೇಗುಲವನ್ನೇ ಗುರಾಣಿಯಾಗಿಟ್ಟುಕೊಂಡು ಸಮಾಜ ಒಡೆಯಲು ಹೊರಟಿರುವುದು ನಮಗೆ ಅನುಚಿತ ವರ್ತನೆಯಾಗಿ ತೋರಬೇಕಲ್ಲವೇ? ಲಂಚ ಪಡೆಯದೆ ಜನರ ಕೆಲಸ ಮಾಡಿಕೊಡಲು ಸುತಾರಾಂ ಒಪ್ಪದಿರುವ ಆಡಳಿತ ಯಂತ್ರದ ಕಾಲಾಳುಗಳ ವರ್ತನೆ ಸಹಿಸಲಾರದಷ್ಟು ಅನುಚಿತವಾಗಿ ಗೋಚರಿಸಬೇಕಿತ್ತಲ್ಲವೇ? ಇವೆಲ್ಲವನ್ನೂ ಸಹಜವೆಂದೋ, ಸರಿ ಎಂದೋ, ಅನಿವಾರ್ಯವೆಂದೋ ಅನುಮೋದಿಸಿಕೊಂಡೇ ಮುನ್ನುಗ್ಗುತ್ತಿರುವ ನಮಗೆ ವ್ಯಕ್ತಿಗತ ನೆಲೆಗಟ್ಟಿನ ವಿಷಯಗಳೇ ಸಮಾಜ ಹೆಚ್ಚು ತಲೆಕೆಡಿಸಿಕೊಳ್ಳಬೇಕಿರುವ ಅಂಶಗಳಾಗಿ ಇಂದಿಗೂ ಭಾಸವಾಗುತ್ತಿರುವುದು ವಿಪರ್ಯಾಸವೇ.

AV Eye Hospital ad

ಇದೇ ವೇಳೆ, ಚರ್ಚಿಸಲೇಬೇಕಿರುವ, ನಮ್ಮನ್ನು ನಿಜಕ್ಕೂ ಬಾಧಿಸುತ್ತಿರುವ ವಿಚಾರಗಳಿಂದ ವಿಮುಖರಾಗುತ್ತಲೂ ಇದ್ದೇವೆ. ತೊಡುವ ದಿರಿಸುಗಳಲ್ಲೂ ಅಶ್ಲೀಲತೆ ಅರಸುವ ತನ್ನ ಪ್ರವೃತ್ತಿಯನ್ನು ಇಂದಿಗೂ ಹಾಗೆಯೇ ಕಾಯ್ದುಕೊಂಡಿರುವ ಸಮಾಜಕ್ಕೆ, ಮಾರುಕಟ್ಟೆ ಶಕ್ತಿಗಳು ಯುವ ಪೀಳಿಗೆ ಒಳಗೊಂಡಂತೆ ಎಲ್ಲರನ್ನೂ ಯಾವ ಪರಿ ಪ್ರಭಾವಿಸುತ್ತಿವೆ ಎಂಬುದರ ಅರಿವಾಗಬೇಕಿದೆ. ಮುಕ್ತ ಮಾರುಕಟ್ಟೆಗೆ ತೆರೆದುಕೊಂಡಿರುವ ನಮ್ಮ ಎದುರು, ಪ್ರೇಮ-ಪ್ರಣಯ-ಅಶ್ಲೀಲತೆಯನ್ನು ಮುಕ್ತವಾಗಿ ಸ್ವೀಕರಿಸುವ ದಾರಿ ಅಷ್ಟೇ ಇರುವುದು ಎನ್ನುವ ವಾಸ್ತವವನ್ನು ಜೀರ್ಣಿಸಿಕೊಳ್ಳಲು ಇಂದಿಗೂ ಸಾಧ್ಯವಾಗಿಲ್ಲ.

ಈ ಲೇಖನ ಓದಿದ್ದೀರಾ?: ಹೊಸಿಲ ಒಳಗೆ-ಹೊರಗೆ | 'ಗಂಡಿನ ಕಡೆಯವರು' ಮತ್ತು 'ಹೆಣ್ಣಿನ ಕಡೆಯವರು'

ಮೊಬೈಲು ಎಲ್ಲರ ಕೈ ಸೇರಿರುವ ಈ ಹೊತ್ತಿನಲ್ಲಿ, ಅದರಲ್ಲಿರುವ ಸವಲತ್ತುಗಳ ಮೂಲಕ ನಡೆಸುವ ‘ಅನೈತಿಕ ಪೊಲೀಸ್‍ಗಿರಿ'ಗೆ ಸಮಾಜದ ಶಹಬ್ಬಾಸ್‍ಗಿರಿ ಸಲ್ಲುತ್ತ ಹೋದಲ್ಲಿ ತಪ್ಪು ಆದ್ಯತೆಗಳೇ ಮುನ್ನೆಲೆಗೆ ಬಂದು, ವ್ಯಕ್ತಿಗಳನ್ನು ವೈಯಕ್ತಿಕ ನೆಲೆಗಟ್ಟಿನಲ್ಲಿ ಹಣಿಯುವುದರಲ್ಲೇ ಸಂತೃಪ್ತಿ ಕಾಣಬೇಕಾಗುವುದೇ ಹೊರತು, ವ್ಯವಸ್ಥೆಯ ಮಟ್ಟದಲ್ಲಿ ನಡೆಯಬೇಕಿರುವ ಸುಧಾರಣೆಗಳತ್ತ ನಮ್ಮ ಗಮನವೇ ಹರಿಯದಿರಬಹುದು.

ಮಾರುಕಟ್ಟೆ ಶಕ್ತಿಗಳು ನಮ್ಮೊಳಗೆ ಬೇರೂರಿಸುವಲ್ಲಿ ಯಶಸ್ವಿಯಾಗಿರುವ - ಗುರುತಿಸಿಕೊಳ್ಳಬೇಕೆನ್ನುವ ಉಮೇದು ಮತ್ತು ಅದಕ್ಕೆ ಪೂರಕವಾಗಿ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿರುವ ತಾಂತ್ರಿಕ ಹತಾರಗಳು, ವ್ಯಕ್ತಿಗಳು ತಮಗರಿವಿಲ್ಲದಂತೆ ಸಮಾಜದ ದೃಷ್ಟಿಯಲ್ಲಿ ಅನುಚಿತವಾಗಿ ತೋರುವ ವರ್ತನೆಯನ್ನು ಪ್ರದರ್ಶಿಸಲು ಪ್ರೇರೇಪಿಸುತ್ತಿವೆ. ಎಲ್ಲವನ್ನೂ ಸೆರೆಹಿಡಿದು ಹಂಚಿಕೊಳ್ಳುವ ಉಮೇದಿಗೆ ಬಿದ್ದಿರುವ ಮಂದಿ, ತಮ್ಮ ಖಾಸಗಿ ಸಂಗತಿಗಳನ್ನೂ ಸೆರೆಹಿಡಿದು ತಮ್ಮ ಆತ್ಮೀಯರ ವಲಯದಲ್ಲಿ ಹಂಚತೊಡಗಿ, ಆನಂತರ ಅವು ಎಲ್ಲೆಡೆಯೂ ರವಾನೆಗೊಳ್ಳುವುದು ನಡೆಯುತ್ತಲೇ ಇದೆ. ಇನ್ನು, ಕೆಲವೊಮ್ಮೆ ಪರಸ್ಪರ ಸಮ್ಮತಿಯ ಮೂಲಕ ನಡೆಯುವ ಲೈಂಗಿಕ ಕ್ರಿಯೆಯನ್ನು ಒಬ್ಬರ ಗಮನಕ್ಕೆ ಬಾರದ ರೀತಿಯಲ್ಲಿ ಮತ್ತೊಬ್ಬರು ಚಿತ್ರಿಸಿಕೊಂಡು, ಆನಂತರ ಅದನ್ನು ಬಳಸಿಕೊಂಡು ಬೆದರಿಸುವುದು, ತಮಗೆ ಬೇಕಾದುದನ್ನು ದಕ್ಕಿಸಿಕೊಳ್ಳುವುದೂ ಇದೆ. ಇಂತಹ ಪ್ರಕರಣಗಳಲ್ಲಿ ಸಿಲುಕುವ ಕೆಲವರು, ತಮ್ಮ ಖಾಸಗಿ ವಿಡಿಯೊ ಬಹಿರಂಗವಾದರೆ ತಲೆ ಎತ್ತಿ ಬದುಕುವುದು ಹೇಗೆ ಎಂಬ ಚಿಂತೆಯಲ್ಲಿ ಆತ್ಮಹತ್ಯೆಯ ಮೊರೆಹೋಗುತ್ತಿರುವ ನಿದರ್ಶನಗಳಿಗೂ ಬರವಿಲ್ಲ.

ಯಾವುದೇ ತಂತ್ರಜ್ಞಾನದ ಒಳಿತು-ಕೆಡುಕಿನ ಕುರಿತು ಸಮಾಜದಲ್ಲಿ ಸ್ಪಷ್ಟತೆ ಮೂಡುವ ಮುನ್ನವೇ ಅದರ ಬಳಕೆ ವ್ಯಾಪಕಗೊಳ್ಳುವ ಕಾಲಘಟ್ಟದಲ್ಲಿ, ತಿಳಿವಳಿಕೆ ಮೂಡಿಸುವುದರಲ್ಲಿ ತನಗೆ ಯಾವುದೇ ಲಾಭವಿಲ್ಲವೆಂದು ಮಾರುಕಟ್ಟೆ ಶಕ್ತಿಗಳೂ ಭಾವಿಸಿರುವಂತಿದೆ. ವ್ಯಕ್ತಿಗಳು ತೊಡುವ ಉಡುಗೆ-ತೊಡುಗೆಗಳು, ಹೆಣ್ಣು-ಗಂಡಿನ ನಡುವಿನ ಸಂಬಂಧಗಳ ಕುರಿತು ಸಮಾಜ ತಾಳಿಕೊಂಡೇ ಬಂದಿರುವ ಧೋರಣೆ ಬದಲಾಗದೆ ಹೋದಲ್ಲಿ ತಂತ್ರಜ್ಞಾನಗಳು ಬಿತ್ತಿದ ಮನೋಪ್ರವೃತ್ತಿಗಳಿಂದಾಗಿ ಜನರು ಸಂಕಷ್ಟಕ್ಕೆ ಈಡಾಗಬೇಕಾಗುವುದು.

ವ್ಯಕ್ತಿಯ ನಗ್ನಚಿತ್ರ ಮತ್ತು ದೃಶ್ಯಾವಳಿಗಳ ಕುರಿತು ತಟಸ್ಥ ಧೋರಣೆ ಹೊಂದುವ ಪ್ರಬುದ್ಧತೆ ಸಮಾಜದಲ್ಲಿ ಮೈಗೂಡದೆ ಹೋದಲ್ಲಿ, ಈಗಾಗಲೇ ಪ್ರವರ್ಧಮಾನಕ್ಕೆ ಬಂದಿರುವ ತಾಂತ್ರಿಕ ಹತಾರಗಳ ದುರ್ಬಳಕೆ ಮಾಡಿಕೊಂಡು ಅಮಾಯಕರ ಬದುಕು ದುರ್ಬರಗೊಳಿಸುವ ಪ್ರಸಂಗಗಳು ಜರುಗುತ್ತಲೇ ಇರಲಿವೆ. ಕೆಲವೊಮ್ಮೆ ಫೋಟೊ ಹಾಗೂ ವಿಡಿಯೊ ಎಡಿಟಿಂಗ್ ಮೂಲಕ ನಡೆದಿಲ್ಲದಿರುವುದನ್ನು ನಡೆದಿದೆ ಎಂದು ಬಿಂಬಿಸಿ ಬೆದರಿಸುವುದೂ ನಡೆಯುತ್ತಲೇ ಇದೆ. ವಾಸ್ತವ ಹೀಗಿದ್ದರೂ, ನಮ್ಮ ಸಮಾಜವು ಲೈಂಗಿಕತೆ ಮತ್ತು ನಗ್ನ ದೇಹದ ಕುರಿತು ಈಗಿನ ಕಾಲಘಟ್ಟಕ್ಕೆ ಸೂಕ್ತವೆನಿಸುವ ಧೋರಣೆ ಹೊಂದಲು ತಯಾರಿರುವಂತೆ ತೋರುತ್ತಿಲ್ಲ.

ಈ ಲೇಖನ ಓದಿದ್ದಿರಾ?: ಜತೆಗಿರುವನೇ ಚಂದಿರ? | ಹಾರಂಗಿ ಹೊಳೆ ಬದಿಯಲ್ಲಿ ಸಿಕ್ಕ ಬಾಡಿಗೆ ಮನೆಗಳು

ಮನುಷ್ಯರ ವ್ಯಕ್ತಿತ್ವವನ್ನು ಅವರ ದೇಹ ಮತ್ತು ಲೈಂಗಿಕತೆಗಷ್ಟೇ ಅನ್ವಯಿಸದೆ, ಅವರ ಆಲೋಚನೆಗಳಿಗೆ ಮನ್ನಣೆ ನೀಡುವ ಪ್ರವೃತ್ತಿ ಹೊಂದಬೇಕಿರುವುದು ವರ್ತಮಾನದ ಅಗತ್ಯವೂ ಹೌದು. ವ್ಯಕ್ತಿಯೊಬ್ಬ ತನಗೆ ಅರಿವಿದ್ದೋ ಇಲ್ಲದೆಯೋ ಸೆರೆಹಿಡಿದುಕೊಂಡ ತನ್ನದೇ ನಗ್ನ ಚಿತ್ರಗಳು ಸಮಾಜದ ಕಣ್ಣಿಗೆ ಬಿದ್ದವೆಂಬ ಏಕಮಾತ್ರ ಕಾರಣಕ್ಕೆ ಆತ/ಕೆ ಈ ಸಮಾಜದಲ್ಲಿ ಬದುಕಲೇ ಮುಜುಗರಪಟ್ಟುಕೊಳ್ಳುವಂತಹ ವಾತಾವರಣ ಇನ್ನು ಮುಂದೆಯೂ ಹಾಗೆಯೇ ಉಳಿದುಬಿಡಬೇಕೇ?

ತಾಂತ್ರಿಕ ಆವಿಷ್ಕಾರಗಳನ್ನು ಜನಹಿತಕ್ಕಿಂತ ತನ್ನ ಅನುಕೂಲಕ್ಕೆ ತಕ್ಕಂತೆ ಬಳಸುವ ಮಾರುಕಟ್ಟೆ ಶಕ್ತಿಗಳ ಹಿನ್ನೆಲೆ ಅರಿತು ಸಮಾಜ ತನ್ನ ಧೋರಣೆ ಬದಲಿಸಿಕೊಳ್ಳಬೇಕಿದೆ. ನಮ್ಮ ಆಲೋಚನಾಕ್ರಮದ ಮೇಲೆ ಮಾರುಕಟ್ಟೆ ಶಕ್ತಿ ಸಾಧಿಸಿರುವ ಹಿಡಿತದ ಅರಿವಿಲ್ಲದವರು ಸಂಸ್ಕೃತಿ-ಸಂಪ್ರದಾಯದ ನೆಪದಲ್ಲಿ ಬಿತ್ತುವ ಸಂಕುಚಿತ ಧೋರಣೆ ಸಮಾಜವನ್ನು ಬಿಕ್ಕಟ್ಟಿನೆಡೆಗೆ ಮಾತ್ರ ಕೊಂಡೊಯ್ಯಲು ಸಾಧ್ಯವೆನ್ನುವ ಅರಿವು ನಮ್ಮದಾಗಬೇಕಲ್ಲವೇ?

ಕಲಾಕೃತಿಗಳ ಕೃಪೆ: unsplash ಜಾಲತಾಣ
ನಿಮಗೆ ಏನು ಅನ್ನಿಸ್ತು?
0 ವೋಟ್
eedina app