ಕರುಣೆಯ ಕೃಷಿ | ಹಲಾ ಅಲ್ಯಾನ್ ಕವಿತೆ 'ಪರದೇಶಿತನದ ಬಾಳಿನರ್ಧ'

ನೀಲಿ ಹೂಗಳ ಜಕರಾಂಡ ಮತ್ತು ನಿಂಬೆಯ ಕಂಪನ್ನು

ಹವೆಯಲ್ಲಿ ತುಂಬಿಕೊಂಡ

ಏಪ್ರಿಲ್ ಮಾಹೆಗಳ ನಡುವಿನಲ್ಲಿ

ನಿರಂತರ ನನ್ನ ಜೀವನ.

ನಾನರಿವ ಮೊದಲೇ ಸೂರ್ಯಾಸ್ತ;

ವಿರಮಿಸಬೇಕಿತ್ತು ನಾನು, ಆದರದು ಮಕ್ಕಳ ಮಾತು...

ನಿದಿರೆಯ ಬಿಸಿ ಮಬ್ಬು. ಕನಸ ಮೇಲೆ ಕನಸು...

ಬದಲಿಗೆ, ನಾನು ಆತಂಕಪಡುವೆ

ರಸೀದಿಗಳ ಮೇಲೆ ಚಿತ್ತಾರ ಮೂಡಿಸುತ್ತ

 

ಎಲ್ಲರಿಗೂ ಇಷ್ಟ ಕವನವೆಂದರೆ.

 

ಮಿಲವಾಕೀ ಶಹರದ ತಲೆದಿಂಬಿನ ಮೇಲದನು ಕಸೂತಿ ಮಾಡಲಾಗಿದೆ.

ಪ್ಯಾಲೆಸ್ತೀನಿಗದು ಏನೇನೂ ಕೊಟ್ಟಿಲ್ಲ.

ಪಶ್ಚಿಮದಲ್ಲಿದ್ದಾವೆ ಬೆಂಕಿ ಬಿದ್ದ ಮೇಲೆಯೇ ಕುಡಿಯೊಡೆವ ಗಿಡಗಳು.

ಕಿವಿ ಇಟ್ಟಿರುತ್ತಾವೆ ಅವುಗಳು ಹೊಗೆಯ ಮೇಲೆ.

ಕಲ್ಲಿನಂತೆ ನನ್ನ ನಾ ಕದಲಿಸಿಕೊಂಡು

ವಾರಾನುವಾರಗಳ ಹತಾಶೆಯ ತರುವಾಯ ಬರೆದೆನೊಂದು ಕವಿತೆ.

 

ಎಲ್ಲರಿಗೂ ಇಷ್ಟ ಕವನವೆಂದರೆ.

 

ಆ ಗಿಡಗಳ ಹೆಸರು – ಬೆಂಕಿ ಹಿಂಬಾಲಕರು.

ಒಮ್ಮೊಮ್ಮೆ ಅವು ಮಳೆ ಬಿದ್ದ ಮೇಲೆ ಮೊಳೆಯುತ್ತವೆ.

 

ರಾತ್ರಿ ಹೊತ್ತು ಕಮೆಂಟುಗಳ ಸೇವಿಸುವ ಜೋಂಬೀ ನಾನು.

ವಿಡಿಯೊ ನೋಡುವುದು ಒಂದು ಕೆಟ್ಟ ಹಠವೇ?

ಹೆಸರುಗಳ ಕಂಠಪಾಠ ಮಾಡುವುದೊಂದು ಕೆಟ್ಟ ಹಠವೇ?

ರವೂಫ್ , ಅಮರ್ ಹಾಗೂ ಮಹಮೂದ್.

ಗೊಂಡೆ, ದಾಸವಾಳ ಹಾಗೂ ಡೇರೆ:

ಕೇಳಿಸುತ್ತಿಲ್ಲ ನನಗೆ ನಿಮ್ಮ ದನಿ

ಮಿಸೈಲುಗಳ ಅಡಿ ಕೇಳಿಸುತ್ತಿಲ್ಲ ನೀವು

 

ಬೆಂಕಿಗಾಗಿ ಕಾದಿದೆ ಗಿಡವೊಂದು ಕುಡಿಯೊಡೆಯಲು

ಮಗುವೊಂದು ಕಾದಿದೆ ಸೈರನ್ನಿಗೆ

ಅದು ಮಗುವೇ ಆಗಿರಬೇಕು

ಎಂದೂ ಗಂಡಸಲ್ಲ, ಎಂದೆಂದೂ ಮಗುವಿನೊಂದಿಗೆ ಇರದ ಗಂಡಸಲ್ಲ.

ಭೀಕರತೆಯನು ಎದುರುನೋಡುವಷ್ಟು ಭೀಕರವಾದುದು

ಮತ್ತೇನೂ ಇಲ್ಲ. ಶಪಥ ಮಾಡಿ ಹೇಳುವೆ.

ವೇದನೆ ಕವಿತೆಗೆ ಸೂಕ್ತ ಕಿಮ್ಮತ್ತಾಗಿತ್ತಾ? ಇಲ್ಲ.

 

ಪಾಳು ಪ್ರದೇಶದಲ್ಲಿ ಮಾಡಿದ ಲುಕ್ಸಾನಿಗಾಗಿ

ಕಳೆಯ ವಿಚಾರಣೆ ನಡೆಸುವುದಿಲ್ಲ ನೀನು;

ಮಾಡುತ್ತೀಯ ತನಿಖೆ

ಅದು ಇಲ್ಲಿಯವರೆಗೆ ತಲುಪಿದ್ದು ಹೇಗೆಂದು.

* * * * *

“Every beautiful poem is an act of resistance” - Mahmoud Darwish

Image

ಪ್ಯಾಲೆಸ್ತೀನ್ ಮೂಲದ ಅಮೆರಿಕದ ಕವಿ-ಕಾದಂಬರಿಕಾರ್ತಿ ಹಲಾ ಅಲ್ಯಾನ್ ಅವರು ಕವಿತೆಗಾಗಿ ಬಳಸಿರುವ ರೂಪಕವೊಂದು ನನ್ನನ್ನು ಅವಾಕ್ ಆಗಿಸಿತು: ಬೆಂಕಿ ಬಿದ್ದಲ್ಲಿ ಕುಡಿಯೊಡೆವ ಗಿಡ.

ಪ್ಯಾಲೆಸ್ತೀನ್ ಮೂಲದ ಅನೇಕ ಕವಿಗಳು ತಮ್ಮ ಪ್ರದೇಶ, ಸಮುದಾಯ ಎದುರಿಸುತ್ತಿರುವ ಸಂಕಟಗಳ ಕುರಿತು, ಇಸ್ರೇಲ್ ದೇಶ ನಡೆಸುತ್ತಿರುವ ಅನ್ಯಾಯ-ಹಿಂಸೆಗಳ ಕುರಿತು ತಮ್ಮ ಕವಿತೆಗಳಲ್ಲಿ /ಬರಹಗಳಲ್ಲಿ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಅಂತಹ ಕವಿತೆ/ಬರಹಗಳು ಕೆಲವು ಕವಿಗಳಿಗೆ ವಿಶಾಲ ಮನ್ನಣೆ ದೊರಕಿಸಿವೆ. ಸನ್ನಿವೇಶದ ವ್ಯಂಗ್ಯವೆಂದರೆ, ಸಂಕಟವೊಂದರ ಕುರಿತಾದ ಕಾವ್ಯ ಕವಿಗೆ ಲಾಭದಾಯಕವಾಗಿದ್ದರೂ, ಸಂಕಟಕ್ಕೆ ಪರಿಹಾರವಾಗಿರುವುದಿಲ್ಲ. ಈ ಕ್ರೂರ ವ್ಯಂಗ್ಯ ಕವಿತೆಯ ಅಥವಾ ಕಾವ್ಯದ ಮೌಲ್ಯವನ್ನು ಕಡಿಮೆಯಾಗಿಸುತ್ತದೆಯೇ? ಪರಿಸ್ಥಿತಿಯೊಂದರ ಭೀಕರತೆಯನ್ನು ಬದಲಿಸದಿದ್ದರೂ ಕವಿತೆಯನ್ನು ಯಶಸ್ವಿ ಕವಿತೆ ಎನ್ನಲಾದೀತೇ?

ಈ ಕವಿತೆ ಓದಿದ್ದೀರಾ?: ಕರುಣೆಯ ಕೃಷಿ | ಇರಾನ್ ಕವಿ ಸಬೀರ್ ಹಕಾ ಅವರ 'ಕಾರ್ಮಿಕರ ಕಾವ್ಯ'

ಹಲಾ ಅಲ್ಯಾನ್ ಅವರ 'ಪರದೇಶಿತನದ ಬಾಳಿನರ್ಧ' ಒಂದು ದೃಷ್ಟಿಯಲ್ಲಿ ಕಾವ್ಯದ ಕುರಿತಾಗಿ ಉತ್ತರ ಕಷ್ಟಸಾಧ್ಯವಾದ ಇಂತಹ ಪ್ರಶ್ನೆಗಳನ್ನು ಎತ್ತುವ ಕವನ. ಎಲ್ಲರಿಗೂ ಇಷ್ಟವಾದ ಕವನವೊಂದನ್ನು ರಚಿಸಿರುವ ಕವಿಯೊಬ್ಬಳು, ಪ್ಯಾಲೆಸ್ತೀನ್ ಕುರಿತಾಗಿರುವ ಆ ಕವನ ಪ್ಯಾಲೆಸ್ತೀನ್‌ಗೆ ಏನನ್ನೂ ಕೊಟ್ಟಿಲ್ಲವೆಂಬ ಹತಾಶೆಯನ್ನು ಅನುಭವಿಸುತ್ತಿದ್ದಾಳೆ. ಕೇಡುಗಾಲದಲ್ಲಿ ಹಾಡು ಕೇಡುಗಾಲದ ಕುರಿತಾಗಿಯೇ ಇರಬೇಕು ಎನ್ನುವ ಇಂಗಿತ ಬರ್ಟಾಲ್ಟ ಬ್ರೆಕ್ಟನದು. ಅದಕ್ಕೂ ಮುಂದಿನ ಒಂದು ನೈತಿಕ ಪ್ರಶ್ನೆ ಎಂದರೆ – ಭೀಕರತೆಯನ್ನು ಬದಲಿಸಲಾಗದ ಕವಿತೆ ಆ ಭೀಕರತೆಯನ್ನು ತನ್ನ ವಿಷಯವಾಗಿಸಿಕೊಳ್ಳುವುದರ ಕುರಿತಾದದ್ದು; ವೇದನೆಗೆ ಸೂಕ್ತ ಕಿಮ್ಮತ್ತು ಕವಿತೆಯಾ?

ಹಲಾ ಅಲ್ಯಾನ್ ಅವರ 'ಪರದೇಶಿತನದ ಬಾಳಿನರ್ಧ' ಒಂದು ನೈತಿಕ ಎಚ್ಚರವುಳ್ಳ ಕವಿತೆ. ಅದು ಪರಿಸ್ಥಿತಿಯ ಭೀಕರತೆಯನ್ನು ಬಳಸಿಕೊಂಡು ಬರೆದ ಕವಿತೆ ಆಗಿದ್ದರೂ, ಅಂತಹ ವಿಷಯಗಳ ಕುರಿತಾಗಿ ಕವಿತೆ ಬರೆಯುವ ಮತ್ತು ಓದುವ ಸಂದರ್ಭ ನಮ್ಮಲ್ಲಿ ಜಾಗೃತಗೊಳಿಸಬೇಕಾದ ನೈತಿಕ ಇರುಸುಮುರುಸು ಏನು ಎಂಬ ಎಚ್ಚರ ಅದಕ್ಕಿದೆ.

ಬರವಣಿಗೆಯ ಮೂಲಕವೇ ಸಾಮಾಜಿಕ ಬದಲಾವಣೆ ತರಲು ಪ್ರಯತ್ನಿಸುವಾಗ ಅದು ‘ಬರವಣಿಗೆಯ ಮೂಲಕ ಮಾತ್ರ’ ಆಗಬಾರದು ಎಂಬ ಎಚ್ಚರಿಕೆಯನ್ನು ಧ್ವನಿಸುತ್ತಿರುವ ಕಾರಣಕ್ಕಾಗಿ ಈ ಕವನ ಮಹತ್ವದ್ದು ಎಂದು ನನ್ನ ಎಣಿಕೆ.

ನಿಮಗೆ ಏನು ಅನ್ನಿಸ್ತು?
0 ವೋಟ್