ಅಪ್ರಮೇಯ | ಅಮ್ಮ ಹೇಳಿದ್ದು ನಿಜ - ಇವರೆಲ್ಲ 'ಮೊದಲೇ ತಿಪ್ಪೆ, ಅದ್ರ ಮೇಲೆ ಕೊಳೆತ ಹಲಸಿನ ಹಣ್ಣು'

People

ಒಂದ್ ಸರ್ತಿ ಅಮ್ಮನ ಫ್ರೆಂಡ್ ಒಬ್ರು - ಸ್ವಾಮಿ - ನನಗೆ ಕೇಳಿದ್ರು: "ನಿನ್ ಮನಸ್ಸಿನಲ್ಲಿರೋದು ನಾನು ಪೂರೈಸ್ತೀನಿ. ನಿಂಗೆ ಬೇಗ ಮದ್ವೆ ಆಗುವ ಹಾಗ್ ಮಾಡ್ತೀನಿ." ಅದಕ್ಕೆ ನಾನು ಹೇಳಿದೆ: "ನಂಗೆ ಮದ್ವೆ ಬೇಡ. ನೀವು ನಿಜ್ವಾಗ್ಲು ಏನಾದ್ರೂ ಹಾಗೆ ಒಳ್ಳೇದು ಮಾಡಕ್ಕಾಗೋದಾದ್ರೆ ನಮ್ ಪೌರಕಾರ್‍ಮಿಕರ ಸಂಬಳ ತಿಂಗಳಿಗೆ 40,000 ಆಗೋ ಹಾಗೆ ಮಾಡಿ." ಅವ್ರ ಮುಕ ನೋಡ್ಬೇಕಿತ್ತು!

ಸರಹದ್ದುಗಳು ಹೇಳುತ್ತಿಲ್ಲ
ಇದು ನನ್ನ ಜಾಗೀರು
ಇದು ನಿನ್ನ ಜಮೀನು
ಆದರೂ ನಿನ್ನೆಡೆಗೆ ಬರಲು
ಈ ಅಂತರಗಳು ಬಿಡುತ್ತಿಲ್ಲ

ಸರಹದ್ದುಗಳು ಹೇಳುತ್ತಿಲ್ಲ
ಇದು ನಿನ್ನ ದೇಶ
ಇದು ನನ್ನ ದೇಶ
ಜೊತೆಗೆ ಕೂತಾಗ
ತಂದೂರಿಯಲ್ಲಿ ಬೇಯುತ್ತಿರುವ ರೊಟ್ಟಿ
ನಿನಗೂನೂ ನನಗೂನು
ಮಮತೆಯಲ್ಲಿ ಬೇಯುತ್ತಿರುವ
ಸೇಮಿಯಾ ಖೀರ್
ನನಗೂನೂ, ನಿನಗೂನೂ
ದಬ್ಬಾಳಿಕೆಯ ಹೊಡೆತಕ್ಕೆ
ಮಣ್ಣಿನ ಪರಿವೇ ಇಲ್ಲ
ಹ್ರುದಯದ ನೀತಿಯೇ ಇಲ್ಲ
ರಕ್ತದ ಕೆಂಪೂ ಇಲ್ಲ,
ನಿನ್ನೆ ರಾತ್ರಿ ಉರುಳಿಸಿ
ಗೋರಿಗಳನೆಬ್ಬಿಸಿದ ದೂಳಿಗೂ
ರಕ್ತದ ಕಣ್ಣೀರು.
ಆ ರಕ್ತ ಹೇಳಿಲ್ಲ
ಇಂತ ಜನಾಂಗದ್ದು ಅಂತ.
ಅದರ ಮೌನ ಊರೆಲ್ಲ ಎದೆ ಬಡಿದುಕೊಂಡು ಚೀರಾಡಿದಾಗ
ಯೋನಿಯಿಂದ ಕಿತ್ತು ಹರಿದ ರಕ್ತ
ನಿನ್ನ ಪಾದಗಳ ಬಿರುಕುಗಳಲ್ಲಿ ಹರಿದ
ರಕ್ತದ ಜೊತೆ ಸೇರಿ
ರಸ್ತೆಗಳಲ್ಲಿ ಹೆಸರಿಲ್ಲದ ಸಾವಿರಾರು
ಹೆಜ್ಜೆಗಳ ಜೊತೆ ಸೇರಿ
ಗಟ್ಟಿ ರಂಗಿನಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿತ್ತು.
ಆ ರಕ್ತ ಹೇಳಿತು -
'ಪ್ರತಿಬಟನೆಯಲ್ಲಿ
ಹುಚ್ಚರಿದ್ದಶ್ಟೂ ಈ ಜಗತ್ತು ಬಚಾವಾಗಲು
ಸಾದ್ಯ. ಅಂತರಗಳಿಗೆ ಜಾಣ ಕಿವುಡು...'

ಇತ್ತೀಚೆಗೆ ನಡೆಯುತ್ತಿರುವ ಎಲ್ಲ ಆಗುಹೋಗುಗಳನ್ನು ಓದಿದಾಗ, ಕೇಳಿದಾಗ, ನೋಡಿದಾಗ, ಬರೀ 'ಡಿಫರೆನ್ಸ್ ಆಫ್ ಒಪೀನಿಯನ್' ಅಥವಾ ಐಡಿಯಾಲಜಿ ವ್ಯತ್ಯಾಸ ಮಾತ್ರ ಅನ್ನಿಸುತ್ತಿಲ್ಲ. ನಾನು ಈ ಪಟ್ಯಪುಸ್ತಕ ಪರಿಶ್ಕರಣೆ ಬಗ್ಗೆ ಫೇಸ್ಬುಕ್‌ನಲ್ಲಿ ಶೇರ್ ಮಾಡಿದಕ್ಕೆ ನಮ್ ಸಂಬಂದಿಕರು ವೈಯಕ್ತಿಕವಾಗಿ ನನ್ನ ಜೊತೆ ಯುದ್ದ ನಡೆಸಿದರು. ಯಾಕೋ ಈ ವಾಗ್ವಾದ ಯುದ್ದದ ತರ ಅನ್ನಿಸ್ತಾ ಇದೆ.

ಸಂಬಂದಿಕರು ಮೊದಲಿನಿಂದಲೇ ನನ್ನ ದೂರ ಇಟ್ಟಿದ್ದಾರೆ. ಅದಕ್ಕೆ ಮೊದಲ ಕಾರಣ ನನ್ನ ಸಂಗೀತ; ನಾನು ತುರುಕರ ಸಂಗೀತ ಕಲಿತೆ ಅನ್ನೋದು. ಎರಡನೇದು, ನಾನು ನಾಸ್ತಿಕನಾಗಿದ್ದು. ಮೂರನೇದು, ಕನಕಾ ಮೂರ್ತಿ ಮಗಳಾಗಿ ಮಗನಾಗಿದ್ದು. ನಾಕನೇದು, ಮುಟ್ಟಿಸಿಕೊಳ್ಳಲಾಗದ ಜನರ ಜೊತೆ ಕೆಲಸ ಮಾಡುವುದು ಮತ್ತು ಐದನೇದು, ನನ್ನ ಕನಕಾ ಸರಿಯಾಗಿ ಗ್ರುಹಿಣಿಯಾಗುವಂತೆ ಬೆಳೆಸಲಿಲ್ಲ, ಬದಲಾಗಿ ಸ್ವೇಚ್ಚೆಯಿಂದ ಬೆಳೆಸಿದರು.

Image
untouchablity 1
ಸಾಂದರ್ಭಿಕ ಚಿತ್ರ

ಇವರ ಯುದ್ದ ಮಾನಸಿಕವಾಗಿ ತೀವ್ರ ಅನನುಕೂಲ ಮಾಡುತ್ತೆ. ಹೈರಾಣ್ ಆಗಿ, ಕಲೆ ಕಿತ್ಕೊಂಡು ಕೂಗ್ಬೇಕು ಅನ್ಸುತ್ತೆ. ಇವರ ಮನಸ್ಸಿನ ವಿಶ ಅಳೆಯಲು ಆಗುವುದಿಲ್ಲ. ಇವರಿಗೆ ಬೈನರಿಗಳೇ ಇರುವುದು. ಮಲಯಾಳಂನಲ್ಲಿ ಒಂದು ಸೇಯಿಂಗ್ ಇದೆ: ‘ಒನ್ನಿಲೆ ಆಶಾನ್‍ಡೆ ನೆಂಜತ್ತ ಇಲ್ಲೆಂಗಿಲ್ ಕಳರಿಕ್ಕಿ ಪೊರತ್ತು’ ಅಂತ. ಅಂದರೆ, 'ನೀನು ಕಾಂಗ್ರೆಸ್ಸು ಅಲ್ಲಾಂದ್ರೆ ಬಿಜೆಪಿ' ಅಂತರ್ತ.

ಎಶ್ಟು ಸುಲಬವಾಗಿ, "ನೀನು ಪಾಕಿಸ್ತಾನಕ್ಕೆ ಹೋಗು," ಅಂತಾರೆ ಅಂದ್ರೆ, ಅವ್ರ ತರದವರು ಮಾತ್ರ ಇಲ್ಲಿ ಇರ್ಬೇಕು, 'ಬೇರೆ’ಯವರು 'ಆಚೆ’ ಹೋಗ್ಬೇಕು. ಹೋಗ್ಲಿ... ಫಿನ್‌ಲ್ಯಾಂಡೋ, ಜಮೈಕನೋ, ಇವೆಲ್ಲ ನಮ್ ಬೂಮಿ ಮೇಲೆ ಇಲ್ವೇ ಇಲ್ಲ! ಜಗತ್ತಿನಲ್ಲಿ ಇರೋದು ಇಂಡಿಯಾ ಮತ್ತು ಪಾಕಿಸ್ತಾನ ಮಾತ್ರವಾ? ಅಲ್ಲೂ ಬೈನರಿ!

ಅವರು ಹೇಳೋದರಲ್ಲಿ ಲಾಜಿಕ್, ರ್‍ಯಾಶನಾಲಿಟಿ ಇರಲ್ಲ. ಆದ್ರೆ, ಸೈನ್ಸನ್ನೇ ನುಂಗಿಬಿಡುವಂತ ಮಾತುಗಳನ್ನು ಹೇಳ್ತಾರೆ. ಸೈನ್ಸ್ ಪ್ರೊಫೆಸರ್ ಆದ ಮತ್ತು ಅತ್ಯಂತ ಉನ್ನತ ಹುದ್ದೆಯಲ್ಲಿ ಇದ್ದಂತ ಒಬ್ಬ ವ್ಯಕ್ತಿ ಹೇಳಿದ್ದು ಇದು: "ಜನಿವಾರ ಕಿವಿಗೆ ಸುತ್ತಿ ಕಕ್ಕ ಮಾಡಿದರೆ ಒಳ್ಳೆ ಡೈಜೆಶನ್ ಆಗುತ್ತೆ." ನಾನು ಕೇಳಿದೆ, "ಎಲ್ಲರೂ ಜನಿವಾರ ಹಾಕಲ್ವಲ್ಲಾ?" ಆಗ ಅವರು, "ಮಾದ್ವ ಮತ್ತು ಸ್ಮಾರ್ತ ಬ್ರಾಮಣರಿಗೆ ಮಾತ್ರ." ಹಮ್! ನಾನು ಮತ್ತೆ ಕೇಳಿದೆ, "ಸರಿ... ಈ ಮಾದ್ವ, ಸ್ಮಾರ್ತ ಮಹಿಳೆಯರಿಗೆ ಜನಿವಾರ ಇಲ್ಲವಲ್ಲ?" ಅದಕ್ಕೆ ಅವರು, "ಅವರಿಗೆ ಗರ್ಬಕೋಶ ಹೆಲ್ಪ್ ಮಾಡುತ್ತೆ," ಅನ್ನೋದಾ? ಅಂದರೆ, ಗೈನಕಾಲಜಿಗೂ ಡೈಜೆಶನ್‍ಗೂ ಲಿಂಕ್ ಇದೆಯಾ? ಬ್ರಾಮಣ ಹೆಂಗಸರಿಗೆ ಎಲ್ಲದಕ್ಕೂ ಗರ್ಬಕೋಶ ಸಾಕು!

ಈ ಲೇಖನ ಓದಿದ್ದೀರಾ?: ಅಪ್ರಮೇಯ | ಉಪ್ಪಾರ್ ಪೇಟೆ ಪೊಲೀಸ್ ಠಾಣೆಯ 'ಟು ಸ್ಟಾರ್' ಜೊತೆಗಿನ ಒಂದು ವಾಗ್ವಾದ

ನಾನು ಸ್ಕೂಲ್‍ನಲ್ಲಿ ಓದುತ್ತಿರುವಾಗ ಪೀರಿಯೆಡ್ಸ್ ಬಂದು ತುಂಬಾ ಹೊಟ್ಟೆನೋವು ಮತ್ತೆ ಬ್ಯಾಕ್ ಪೇನ್ ಬಂದಾಗ ನನ್ ಮಾವ, ಎಂಜಿನಿಯರ್ ಹೇಳಿದ್ದು, "ನೀವು ಈ ಪ್ಯಾಡ್ಸ್ ಹಾಕಿದರೆ ನೋವು ಜಾಸ್ತಿ ಆಗುತ್ತೆ. ನೀವು ಹಳೇ ಬಟ್ಟೆ ಹಾಕಿ, ಅದನ್ನು ಅರಿಶಿನದಲ್ಲಿ ಅದ್ದಿ ಹಾಕಿ." ವಾವ್! ಅರಿಶಿನದ ನೀರಲ್ಲಿ ಅದ್ದಿ, ಒದ್ದೆ ಇರುವ ಬಟ್ಟೆಯನ್ನು ಪೀರಿಯಡ್ಸ್ ಟೈಮಲ್ಲಿ ಹಾಕಿದ್ರೆ ನೋವು ಕಡಿಮೆ ಆಗುತ್ತದಾ? ಇಂತವರಿಗೆ ಎಶ್ಟು ಹೇಳಿಯೂ ಪ್ರಯೋಜನವಿಲ್ಲ. ಇಂತವರ ಹೆಣ್ಣುಮಕ್ಕಳ ಸ್ತಿತಿ ಆಲೋಚಿಸಿದಾಗ ನನಗೆ ನರಕ ಕಣ್ ಮುಂದೆ ಬಂತು. ಒಂದು ಪ್ಯಾಡ್ ಕೂಡ ಬ್ರಾಮಣ ಗಂಡಸರ ತೀರ್ಮಾನವಾ? ಥೋ!

ಇವರಿಗೆ ಕತೆ, ಪುರಾಣ, ಸಾಹಿತ್ಯ, ತತ್ವ, ಚಿಂತನೆ, ಇತಿಹಾಸವೆಲ್ಲ ಕಟ್ಟುಕತೆಗಳು. ಈ ತರದ ವಿಶಯಗಳಿಗೆ ವ್ಯತ್ಯಾಸವೇ ಗೊತ್ತಿಲ್ಲ. ಸಂಗೀತ ನಾರದನಿಂದ ಶುರುವಾಗಿದ್ದು ಅಂತಾರೆ! ಅದನ್ನು ಸರಸ್ವತಿ ಬೆಳೆಸಿದ್ದು, ಜಗತ್ತಿನಲ್ಲಿ ಮೊದಲ ಸಂಗೀತ ಓಂಕಾರದಿಂದ ಶುರು ಆಯಿತು ಅಂತೆಲ್ಲ ನನಗೆ ಬಾಶಣ! ನಾನು ಕನಕಾಳ ಮನೆಗೆ ಹೋಗೋದೇ ಅಪರೂಪ. ಅಕಸ್ಮಾತ್ ಅಲ್ಲಿ ಹೋದಾಗ ಸಿಕ್ಕಾಕಿಕೊಂಡ್ರೆ ಮುಗೀತು; ಓಂಕಾರ, ನಾರದನಿಂದ ಹಿಡಿದು ವೇದ, ಸಾಮ ವೇದ ಜೊತೆಗೆ ಅವರವರ ಇಶ್ಟದ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರ ಲಿಸ್ಟ್ ಬೇರೆ! ಇವರಿಷ್ಟದ ಸಂಗೀತಗಾರರೆಲ್ಲ ನನಗೆ ಇಶ್ಟ ಇಲ್ಲ - ಕೆಲವರು ಅಪವಾದ. ತಮಾಶೆ ಅಂದ್ರೆ, ಇವರು ಇಶ್ಟಪಡುವ ಸಂಗೀತಗಾರರಲ್ಲಿ ನೂರಕ್ಕೆ 99ರಷ್ಟು ಮಂದಿ ಬ್ರಾಮಣರು. ಆದರೂ ಇವರಿಗೆ ಎಮ್‍ ಎಸ್ ಸುಬ್ಬಲಕ್ಶ್ಮಿ, ಬಾಲ ಸರಸ್ವತಿ, ಜಾನ್ ಹಿಗ್ಗಿನ್ಸ್ ಬೇಕು; ಆದ್ರೆ, ಯೇಸುದಾಸ್, ಮಾಲಿ ಇವರೆಲ್ಲ ಊಹುಂ!

ಪಟ್ಯಪುಸ್ತಕ ಪರಿಶ್ಕರಣೆಯಲ್ಲಿ ಶಂಕರಾಚಾರ್ಯರ ವಿಶಯ ಸುದ್ದಿಯಾಗೋ ತನಕ ಆಹಾ ಓಹೋ ಅಂದವರೆಲ್ಲ, ಶಂಕರಾಚಾರ್ಯರ ವಿಷಯ ಮೇಲೆ ಬಂದ ತಕ್ಶಣ ಮಾತೇ ಬೇರೆ! ಅಲ್ಲಿಯ ತನಕ ನನ್ನ ಜೊತೆಗೆ ಯುದ್ದದಲ್ಲಿ ಭಗತ್‍ ಸಿಂಗ್, ಅಂಬೇಡ್ಕರ್, ಕುವೆಂಪು, ನಾರಾಯಣ ಗುರು ಇವರನ್ನೆಲ್ಲ ತೆಗೆದು ಅತವಾ ತಿರುಚಿದಾಗ ಎಶ್ಟೊಂದು ಸಮರ್‍ತನೆ; ಸಮಿತಿ ಸರಿಯಾಗಿ ಕೆಲಸ ಮಾಡಿತು ಅಂತ. ಆಮೇಲೆ ಆಗಿದ್ದೇ ಬೇರೆ. "ಎಲ್ಲಾ ಮಾದ್ವರನ್ನೇ ಸೇರಿಸಿಬಿಟಿದ್ದಾರೆ..." ಅಂತ ವರಾತ. ನೋಡಿ, ಈ ಶ್ರೇಣೀಕರಣದಲ್ಲಿ ಅತೀ ಸೂಕ್ಶ್ಮ ವಿವರ ಕೂಡ ತೀರ್‍ಮಾನ ಮಾಡುತ್ತೆ - ಯಾರು ಯಾರಿಗಿಂತ ಶ್ರೇಶ್ಟ ಅಂತ.

Image
untouchablity 2
ಸಾಂದರ್ಭಿಕ ಚಿತ್ರ

ನನಗೆ ಈ ಯುದ್ದದಲ್ಲಿ ಸೇರಲು ಅಸಹ್ಯ, ಅವಮಾನ, ಮತ್ತೆ ಲಾಜಿಕ್ ಇಲ್ಲದೆ ಮಾತಾಡುವ ವಾಕರಿಕೆ. ಜಾತಿ ದೌರ್‍ಜನ್ಯದ ಅಸೀಮ ಆಲೋಚನೆಗಳು ಅವರ ಮಾತಿನಲ್ಲಿ ಪುಂಕಾನುಪುಂಕವಾಗಿ ಬರ್ತಿದ್ದಾಗ, ಆ ನಿಮಿಶದ ಅವಮಾನದಲ್ಲಿ ಅಲ್ಲೇ ಆತ್ಮಹತ್ಯೆ ಮಾಡಿಕೊಂಡರೆ ಸಾಕು ಎನಿಸಿಬಿಟ್ಟಿತ್ತು. ನಮ್ಮ ಸಂಬಂದಿಕರು ಅಂತ ಹೇಳ್ಕೊಳಕ್ಕೆ ನಂಗೆ ಅವಮಾನ ಅಂತ ಹೇಳಕ್ಕೂ ಆಗಲ್ಲ; ಯಾಕಂದ್ರೆ, ಅವರು ಈಗಾಗ್ಲೆ ನನ್ ಸಂಬಂದ ಕಡಿದುಕೊಂಡುಬಿಟ್ಟಿದ್ದಾರೆ.

ಅಸಲಿಗೆ ವಾಸ್ತವದಲ್ಲಿ ಯಾವುದೇ ದೇವ್ರು, ಮಟ ಯಾವ್ದೂ ಜನಸಮೂಹದ ಒಳಿತಿನ ಬಗ್ಗೆ ಯೋಚಿಸ್ತಾನೇ ಇಲ್ಲ. ಒಂದ್ ಸರ್ತಿ ಅಮ್ಮನ ಫ್ರೆಂಡ್ ಒಬ್ರು - ಸ್ವಾಮಿ - ನನಗೆ ಕೇಳಿದ್ರು: "ನಿನ್ ಮನಸ್ಸಿನಲ್ಲಿರೋದು ನಾನು ಪೂರೈಸ್ತೀನಿ. ನಿಂಗೆ ಬೇಗ ಮದ್ವೆ ಆಗುವ ಹಾಗ್ ಮಾಡ್ತೀನಿ." ಅದಕ್ಕೆ ನಾನು ಹೇಳಿದೆ, "ನಂಗೆ ಮದ್ವೆ ಬೇಡ. ನೀವು ನಿಜ್ವಾಗ್ಲು ಏನಾದ್ರೂ ಹಾಗೆ ಒಳ್ಳೇದು ಮಾಡಕ್ಕಾಗೋದಾದ್ರೆ ನಮ್ ಪೌರಕಾರ್‍ಮಿಕರ ಸಂಬಳ ತಿಂಗಳಿಗೆ 40,000 ಅತವಾ ಅದಕ್ಕಿಂತ ಜಾಸ್ತಿ ಆಗೋ ಹಾಗೇ ಮಾಡಿ." ಅವ್ರ ಮುಕ ನೋಡ್ಬೇಕಿತ್ತು! ನಮ್ಮಮ್ಮ ಹೇಳ್ತಿದ್ದ ಹಾಗೆ, 'ಮೊದಲೇ ತಿಪ್ಪೆ, ಅದ್ರ ಮೇಲೆ ಕೊಳೆತ ಹಲ್ಸನಣ್ಣು' ತರ ಅವರ ಮುಕ ತಿರುಗಿತು.

ಇಂತಹ ಅಂತರಗಳನ್ನು ದಾಟುವುದು ತುಂಬಾ ಕಶ್ಟ. ಯಾಕಂದ್ರೆ ಬಂಡತನ, ಮೌಡ್ಯದ ಜೊತೆಗೆ ಮೂರ್ಕತನ ಮತ್ತು ಜಾತಿ ಕೊಬ್ಬು ಸೇರಿದಾಗ, 'ಮೊದಲೇ ತಿಪ್ಪೆ - ಅದ್ರ ಮೇಲೆ ಕೊಳೆತ ಹಲ್ಸನಣ್ಣು' ಅಂತಾಗಿಬಿಡುತ್ತೆ.

'ಎಲ್ಲರ ಕನ್ನಡ' ಎಂದು ಹೇಳಲಾಗುವ, ಮಹಾಪ್ರಾಣ ಬಳಕೆ ಇಲ್ಲದ ಆಡುಮಾತಿನ ಬರಹ ರೂಪವಿದು
ನಿಮಗೆ ಏನು ಅನ್ನಿಸ್ತು?
3 ವೋಟ್